ಯೇಸು ನರಕದ ಕುರಿತು ಏನು ಕಲಿಸಿದನು?
ಯೇಸು ನರಕದ ಕುರಿತು ಏನು ಕಲಿಸಿದನು?
ಯೇಸು ಅಂದದ್ದು: “ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತುಬಿಸಾಡು; ಎರಡು ಕಣ್ಣುಳ್ಳವನಾಗಿದ್ದು ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ದೇವರ ರಾಜ್ಯದಲ್ಲಿ ಸೇರುವದು ನಿನಗೆ ಉತ್ತಮ. ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯುವದಿಲ್ಲ, ಬೆಂಕಿ ಆರುವದಿಲ್ಲ.”—ಮಾರ್ಕ 9:47, 48.
ಇನ್ನೊಂದು ಸಂದರ್ಭದಲ್ಲಿ ಯೇಸು, ತೀರ್ಪಿನ ಅವಧಿಯಲ್ಲಿ ತಾನು ದುಷ್ಟರಿಗೆ ಹೀಗನ್ನುವನೆಂದು ಹೇಳಿದನು: “ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.” ಅವರು “ನಿತ್ಯಶಿಕ್ಷೆಗೂ . . . ಹೋಗುವರು” ಎಂದು ಸಹ ಆತನಂದನು.—ಮತ್ತಾಯ 25:41, 46.
ಯೇಸು ನುಡಿದ ಮೇಲಿನ ಮಾತುಗಳು ಆತನು ನರಕಾಗ್ನಿಯ ಕುರಿತು ಬೋಧಿಸುತ್ತಿದ್ದನೋ ಎಂಬಂತೆ ಹೊರನೋಟಕ್ಕೆ ಕಾಣಬಹುದು. ಆದರೆ “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂಬ ದೇವರ ವಾಕ್ಯವನ್ನು ಪ್ರತಿರೋಧಿಸಲು ಯೇಸು ಬಯಸಿರಲಿಲ್ಲ ಎಂಬುದು ಸ್ಪಟಿಕ ಸ್ಪಷ್ಟ.—ಪ್ರಸಂಗಿ 9:5.
ಹಾಗಾದರೆ, ಒಬ್ಬನು ‘ನರಕಕ್ಕೆ ಹಾಕಲ್ಪಡುವ’ ಕುರಿತು ಯೇಸು ಹೇಳಿದಾಗ ಯಾವುದಕ್ಕೆ ಸೂಚಿಸುತ್ತಿದ್ದನು? ಯೇಸು ಎಚ್ಚರಿಕೆಯನ್ನಿತ್ತ ಆ “ನಿತ್ಯ ಬೆಂಕಿ” ಅಕ್ಷರಾರ್ಥವೋ ಸಾಂಕೇತಿಕವೋ? ದುಷ್ಟರು ‘ನಿತ್ಯಶಿಕ್ಷೆಗೆ ಹೋಗುವುದು’ ಯಾವ ಅರ್ಥದಲ್ಲಿ? ನಾವು ಈ ಪ್ರಶ್ನೆಗಳನ್ನು ಒಂದೊಂದಾಗಿ ಪರೀಕ್ಷಿಸೋಣ.
‘ನರಕಕ್ಕೆ ಹಾಕಲ್ಪಡುವ’ ಕುರಿತು ಯೇಸು ಹೇಳಿದಾಗ ಅವನು ಯಾವುದಕ್ಕೆ ಸೂಚಿಸುತ್ತಿದ್ದನು? ಮಾರ್ಕ 9:47ರಲ್ಲಿ “ನರಕ” ಎಂದು ಭಾಷಾಂತರವಾಗಿರುವ ಮೂಲ ಗ್ರೀಕ್ ಪದವು ಗೆಹೆನ್ನ ಎಂದಾಗಿದೆ. ಈ ಪದವು ಗೇ-ಹೀ-ನೋಮ್ ಎಂಬ ಹೀಬ್ರು ಶಬ್ದದಿಂದ ಬಂದಿದೆ. ಅದಕ್ಕೆ, ಹಿನ್ನೋಮ್ ಕಣಿವೆ ಎಂಬ ಅರ್ಥವಿದೆ. ಈ ಹಿನ್ನೋಮ್ ಕಣಿವೆಯು ಪುರಾತನ ಯೆರೂಸಲೇಮ್ ನಗರದ ಹೊರಗಿತ್ತು. ಅದನ್ನು ಇಸ್ರಾಯೇಲ್ಯರ ಅರಸರ ಸಮಯದಲ್ಲಿ ಮಕ್ಕಳ ಆಹುತಿಗಾಗಿ ಬಳಸಲಾಗುತ್ತಿತ್ತು. ದೇವರು ಹೇಸಿದ ಹೇಯವಾದ ಪದ್ಧತಿ ಅದಾಗಿತ್ತು. ಮಿಥ್ಯಾರಾಧನೆಯ ಅಂಥ ಹೇಯ ಕೃತ್ಯ ನಡಿಸಿದವರನ್ನು ತಾನು ನಾಶಮಾಡುವೆನೆಂದು ಆತನು ತಿಳಿಸಿದನು. ಆಗ ಹಿನ್ನೋಮ್ ಕಣಿವೆಯು “ಸಂಹಾರದ ತಗ್ಗು” ಎಂದು ಕರೆಯಲ್ಪಡುವುದು ಮತ್ತು ಅಲ್ಲಿ “ಜನರ ಹೆಣಗಳು” ಹೂಣಲ್ಪಡದೆ ಬಿದ್ದಿರುವವು ಎಂದು ಯೆಹೋವನು ತಿಳಿಸಿದನು. (ಯೆರೆಮೀಯ 7:30-34) ಆದುದರಿಂದ ಹಿನ್ನೋಮ್ ಕಣಿವೆಯು ಜೀವಂತ ವ್ಯಕ್ತಿಗಳ ಯಾತನೆಯ ಸ್ಥಳವಾಗಿ ಅಲ್ಲ ಬದಲಾಗಿ ಶವಗಳ ಸಾಮೂಹಿಕ ತೊಲಗಿಸುವಿಕೆಯ ಸ್ಥಳವಾಗಿ ಇರಲಿಕ್ಕಿತ್ತು.
ಯೇಸುವಿನ ದಿನಗಳಲ್ಲಿ ಯೆರೂಸಲೇಮಿನ ನಿವಾಸಿಗಳು ಹಿನ್ನೋಮ್ ಕಣಿವೆಯನ್ನು ಕಸಕಡ್ಡಿ ಎಸೆಯುವ ತಿಪ್ಪೆಯಾಗಿ ಬಳಸುತ್ತಿದ್ದರು. ಕೆಲವು ಘೋರ ದುಷ್ಕರ್ಮಿಗಳ ಶವಗಳನ್ನು ಸಹ ಈ ಹೊಲಸು ಕೊಂಪೆಗೆ ಎಸೆಯಲಾಗುತ್ತಿತ್ತು. ಈ ಕಸಕಡ್ಡಿ ಮತ್ತು ಮೃತದೇಹಗಳನ್ನು ಸುಟ್ಟುಬಿಡಲು ಅಲ್ಲಿ ಬೆಂಕಿಯು ಸದಾ ಉರಿಯುತ್ತಿತ್ತು.
ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯುವದಿಲ್ಲ, ಬೆಂಕಿ ಆರುವದಿಲ್ಲ ಎಂದು ಯೇಸು ಹೇಳಿದಾಗ ಆತನು ಯೆಶಾಯ 66:24ಕ್ಕೆ ಸೂಚಿಸುತ್ತಿದ್ದಂತೆ ಕಾಣುತ್ತದೆ. “[ದೇವರಿಗೆ] ದ್ರೋಹಮಾಡಿದವರ ಹೆಣಗಳ” ಕುರಿತು ಹೇಳುವಾಗ “ಅವುಗಳನ್ನು ಕಡಿಯುವ ಹುಳವು ಸಾಯುವದಿಲ್ಲ, ಸುಡುವ ಬೆಂಕಿಯು ಆರುವದಿಲ್ಲ” ಎಂದು ಯೆಶಾಯನು ಹೇಳುತ್ತಾನೆ. ಹೂಣಿಡಲು ಅಯೋಗ್ಯರಾದವರ ಶವಗಳ ತೊಲಗಿಸುವಿಕೆಗೆ ಯೆಶಾಯನ ಈ ಮಾತುಗಳು ಸೂಚಿಸುತ್ತಿದ್ದವೆಂದು ಯೇಸುವಿಗೂ ಅವನ ಕೇಳುಗರಿಗೂ ತಿಳಿದಿತ್ತು.
ಆದುದರಿಂದ, ಪುನರುತ್ಥಾನದ ನಿರೀಕ್ಷೆಯಿಲ್ಲದ ಮರಣಕ್ಕೆ ಸೂಕ್ತ ಸೂಚಕವಾಗಿ ಹಿನ್ನೋಮ್ ಕಣಿವೆ ಅಥವಾ ಗೆಹೆನ್ನವನ್ನು ಯೇಸು ಉಪಯೋಗಿಸಿದನು. ದೇವರು ‘ಆತ್ಮ ದೇಹ ಎರಡನ್ನೂ ಕೂಡ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನು’ ಎಂದು ಯೇಸು ಎಚ್ಚರಿಕೆ ಕೊಟ್ಟಾಗ ಗೆಹೆನ್ನದಂಥ ಸಂಪೂರ್ಣ ನಾಶನವನ್ನು ಸೂಚಿಸಿದ್ದನು. (ಮತ್ತಾಯ 10:28) ಹೀಗಿರಲಾಗಿ ಗೆಹೆನ್ನವು ನಿತ್ಯ ಯಾತನೆಯ ಸ್ಥಳವಲ್ಲ, ಶಾಶ್ವತ ಮರಣದ ಸಂಕೇತ.
ಯೇಸು ಎಚ್ಚರಿಕೆಯನ್ನಿತ್ತ “ನಿತ್ಯ ಬೆಂಕಿ” ಅಕ್ಷರಾರ್ಥವೋ ಸಾಂಕೇತಿಕವೋ? ಮತ್ತಾಯ 25:41ರಲ್ಲಿ ದಾಖಲಾದ ಹಾಗೂ ಯೇಸು ತಿಳಿಸಿದ “ನಿತ್ಯ ಬೆಂಕಿ” “ಪಿಶಾಚನಿಗೂ ಅವನ ದೂತರಿಗೂ” ಸಿದ್ಧಮಾಡಿರುವ ಬೆಂಕಿ ಎಂಬುದನ್ನು ಗಮನಿಸಿ. ನಿಜವಾದ ಬೆಂಕಿ ಆತ್ಮ ಜೀವಿಗಳನ್ನು ಸುಟ್ಟುಹಾಕುತ್ತದೆ ಎಂದು ನೀವು ನೆನಸುತ್ತೀರೋ? ಅಥವಾ “ಬೆಂಕಿ” ಎಂಬ ಶಬ್ದವನ್ನು ಯೇಸು ಸಾಂಕೇತಿಕ ಅರ್ಥದಲ್ಲಿ ಬಳಸಿದನೋ? ಅದೇ ಚರ್ಚೆಯಲ್ಲಿ ಯೇಸು ತಿಳಿಸಿದ “ಕುರಿ” ಮತ್ತು ‘ಆಡುಗಳು’ ನಿಜವಾದ ಆಡು-ಕುರಿಗಳಲ್ಲ. ಅವು ಎರಡು ರೀತಿಯ ಜನರನ್ನು ಪ್ರತಿನಿಧಿಸುವ ನುಡಿಚಿತ್ರಗಳಾಗಿವೆ. (ಮತ್ತಾಯ 25:32, 33) ತದ್ರೀತಿ ಯೇಸು ತಿಳಿಸಿದ ನಿತ್ಯ ಬೆಂಕಿಯು, ದುಷ್ಟರನ್ನು ಒಂದು ಸಾಂಕೇತಿಕ ಅರ್ಥದಲ್ಲಿ ಸಂಪೂರ್ಣವಾಗಿ ಸುಟ್ಟು ಬೂದಿಮಾಡುತ್ತದೆ.
ದುಷ್ಟರು ‘ನಿತ್ಯಶಿಕ್ಷೆಗೆ ಹೋಗುವುದು’ ಯಾವ ಅರ್ಥದಲ್ಲಿ? ಹೆಚ್ಚಿನ ಭಾಷಾಂತರಗಳು ಮತ್ತಾಯ 25:46ರಲ್ಲಿ “ಶಿಕ್ಷೆ” ಎಂಬ ಪದವನ್ನು ಉಪಯೋಗಿಸಿವೆ. ಆದರೆ ಇಲ್ಲಿ ಶಿಕ್ಷೆ ಎಂಬುದಕ್ಕೆ ಗ್ರೀಕ್ನಲ್ಲಿ ಬಳಸಿರುವ ಕೊಲಾ-ಸಿನ್ ಎಂಬ ಪದದ ಮೂಲಾರ್ಥವು “ಮರಗಳ ಬೆಳವಣಿಗೆಯನ್ನು ನಿಲ್ಲಿಸುವುದು” ಅಥವಾ ಬೇಡವಾದ ಕೊಂಬೆಗಳನ್ನು ಕಡಿದುಹಾಕುವುದಕ್ಕೆ ಅಥವಾ ಸಮರಿಹಾಕುವುದಕ್ಕೆ ಸೂಚಿಸುತ್ತದೆ. ಹೀಗೆ ಕುರಿಗಳಂತಿರುವವರಿಗೆ ನಿತ್ಯಜೀವವು ದೊರಕುವಾಗ, ಪಶ್ಚಾತ್ತಾಪಪಡದ ಆಡುಗಳಂಥ ಜನರಿಗಾದರೋ ‘ನಿತ್ಯಶಿಕ್ಷೆಯು’ ದೊರೆಯುತ್ತದೆ ಅಂದರೆ ಅವರ ಜೀವವು ಶಾಶ್ವತವಾಗಿ ಕಡಿದುಹಾಕಲ್ಪಡುತ್ತದೆ.
ನಿಮ್ಮ ಅಭಿಪ್ರಾಯವೇನು?
ಮನುಷ್ಯರಿಗೆ ಅಮರ ಆತ್ಮವಿದೆಯೆಂದು ಯೇಸು ಎಂದೂ ಕಲಿಸಲಿಲ್ಲ. ಸತ್ತವರ ಪುನರುತ್ಥಾನದ ಕುರಿತಾದರೋ ಅವನು ಅನೇಕ ಬಾರಿ ಕಲಿಸಿದನು. (ಲೂಕ 14:13, 14; ಯೋಹಾನ 5:25-29; 11:25) ಸತ್ತವರಿಗೆ ಪುನರುತ್ಥಾನವಾಗುವುದು ಎಂದು ಯೇಸು ಹೇಳಿದ್ದಾನೆ. ಒಂದುವೇಳೆ ಸತ್ತವರ ಆತ್ಮಗಳು ಸಾಯುವುದಿಲ್ಲ ಎಂದು ಅವನು ನಂಬಿರುತ್ತಿದ್ದರೆ ಸತ್ತವರಿಗೆ ಪುನರುತ್ಥಾನವಾಗುವುದೆಂದು ಯೇಸು ಏಕೆ ಹೇಳುತ್ತಿದ್ದನು?
ದೇವರು ದುಷ್ಟರನ್ನು ಪೀಡಿಸಲಿಚ್ಛಿಸುತ್ತಾ ಸದಾ ಯಾತನೆಕೊಡುತ್ತಾನೆಂದು ಯೇಸು ಕಲಿಸಲಿಲ್ಲ. ಬದಲಾಗಿ ಯೇಸು ಅಂದದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ಯೋಹಾನ 3:16) ತನ್ನನ್ನು ನಂಬುವವರು ನಾಶವಾಗುವುದಿಲ್ಲ ಎಂದಾದರೆ ನಂಬಿಕೆಯಿಡದವರು ‘ನಾಶವಾಗುವರು’ ಎಂದು ಯೇಸು ಸೂಚಿಸಿದ್ದು ಏಕೆ? ಒಂದುವೇಳೆ ಅವರು ನರಕಾಗ್ನಿಯಲ್ಲಿ ಚಿತ್ರಹಿಂಸೆ ಅನುಭವಿಸುತ್ತಾ ಸದಾ ಬದುಕಿರುತ್ತಿದ್ದಲ್ಲಿ ಅವನು ಅದನ್ನೇ ಹೇಳುತ್ತಿದ್ದನಲ್ಲವೇ?
ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ನರಕವು ಯಾತನಾ ಸ್ಥಳವಾಗಿದೆ ಎಂಬ ಬೋಧನೆಯು ಬೈಬಲಿನಲ್ಲಿ ಇಲ್ಲ. ಅದು ಕ್ರೈಸ್ತ ಬೋಧನೆಯ ಮೊಗವಾಡವನ್ನು ಧರಿಸಿರುವ ವಿಧರ್ಮಿ ನಂಬಿಕೆ. (ಪುಟ 6ರಲ್ಲಿರುವ “ನರಕದ ಸಂಕ್ಷಿಪ್ತ ಚರಿತ್ರೆ” ಚೌಕ ನೋಡಿ.) ದೇವರು ಜನರನ್ನು ನರಕಕ್ಕೆ ಹಾಕಿ ನಿತ್ಯ ಯಾತನೆ ಕೊಡುವುದಿಲ್ಲ ಎಂಬುದಂತೂ ಸತ್ಯ. ಹೀಗಿರಲಾಗಿ, ನರಕದ ಕುರಿತ ಸತ್ಯವನ್ನು ಕಲಿಯುವುದು ದೇವರ ಕುರಿತ ನಿಮ್ಮ ಭಾವನೆಯನ್ನು ಹೇಗೆ ಪ್ರಭಾವಿಸುತ್ತದೆ? (w08 11/1)
[ಪುಟ 6ರಲ್ಲಿರುವ ಚೌಕ]
ನರಕದ ಸಂಕ್ಷಿಪ್ತ ಚರಿತ್ರೆ
ಮೂಲ—ವಿಧರ್ಮಿ ನಂಬಿಕೆಗಳಲ್ಲಿ: ಪುರಾತನ ಈಜಿಪ್ಟ್ನ ಜನರು ಅಗ್ನಿಮಯ ನರಕವನ್ನು ನಂಬುತ್ತಿದ್ದರು. ಕ್ರಿ.ಪೂ. 1375ರ ದ ಬುಕ್ ಆಮ್-ಟುವಾಟ್ ಪುಸ್ತಕದಲ್ಲಿ, “ಬೆಂಕೀ ಕುಂಡದೊಳಗೆ ತಲೆ ಕೆಳಗಾಗಿ ದೊಬ್ಬಲ್ಪಡುವ . . . ಅಲ್ಲಿಂದ ಹೇಗೂ ತಪ್ಪಿಸಿಕೊಳ್ಳಲಾರದ . . . ಹಾಗೂ ಬೆಂಕಿ ಜ್ವಾಲೆಗಳಿಂದ ಬಿಡಿಸಿಕೊಳ್ಳಲಾರದ” ಜನರ ಕುರಿತು ತಿಳಿಸಿದೆ. ಗ್ರೀಕ್ ತತ್ವಜ್ಞಾನಿ ಪ್ಲೂಟಾರ್ಕ್ (ಸುಮಾರು ಕ್ರಿ.ಶ. 46-120) ಅಧೋಲೋಕದಲ್ಲಿರುವವರ ಕುರಿತು ಹೇಳಿದ್ದು: “[ಅವರು] ಭಯಂಕರ ಯಾತನೆಗಳನ್ನು ಮತ್ತು ಸಹಿಸಲಸಾಧ್ಯವಾದ ಅಪಮಾನಕರ ಶಿಕ್ಷೆಗಳನ್ನು ಅನುಭವಿಸಿದಾಗ ಗೋಳುಗರೆಯತ್ತಾ ಕೂಗಾಡುತ್ತಿದ್ದರು.”
ಯೆಹೂದಿ ಮತಗಳಿಗೆ ಹರಡಿದ್ದು: ಎಸ್ಸೆನಸ್ ಎಂಬ ಯೆಹೂದಿ ಪಂಥದವರು “ಆತ್ಮವು ಅಮರ, ಅದಕ್ಕೆ ಸಾವೇ ಇಲ್ಲ” ಎಂದು ನಂಬುತ್ತಿದ್ದರೆಂದು ಇತಿಹಾಸಕಾರ ಜೊಸೀಫಸನು (ಕ್ರಿ.ಶ. 37-ಸುಮಾರು 100) ವರದಿಸಿದನು. ಅವನು ಮತ್ತೂ ಹೇಳಿದ್ದು: “ಇದು ಗ್ರೀಕರ ನಂಬಿಕೆಯಂತೆ ಇದೆ . . . ಯಾತನೆ ಎಂದೂ ಕೊನೆಗೊಳ್ಳದ ಒಂದು ಕಾರ್ಗತ್ತಲೆಯ ಭಯಾನಕ ಬಿರುಹುಯ್ಲಿನ ಗುಂಡಿಯಲ್ಲಿ ಕೆಟ್ಟ ಆತ್ಮಗಳು ಹಾಕಲ್ಪಡುತ್ತಿದ್ದವೆಂದು ಗ್ರೀಕರ ಕಲ್ಪನೆಯೂ ಆಗಿತ್ತು.”
ಕ್ರೈಸ್ತಮತದೊಳಗೆ ನುಸುಳಿದ್ದು: ಕ್ರಿ.ಶ. ಎರಡನೆಯ ಶತಮಾನದ ಅಪಾಕಲಿಪ್ಸ್ ಆಫ್ ಪೀಟರ್ ಎಂಬ ಅಪ್ರಾಮಾಣಿಕ ಪುಸ್ತಕವು ದುಷ್ಟರ ಕುರಿತು ಹೇಳಿದ್ದು: “ಅವರಿಗಾಗಿ ಆರಿಸಲಾಗದ ಬೆಂಕಿಯು ಸಿದ್ಧವಾಗಿದೆ.” ಅದು ಮತ್ತೂ ಅಂದದ್ದು: “ಎಜ್ರೇಲ ಎಂಬ ಕ್ರೋಧ ದೂತನು ಅರ್ಧ ಸುಡುತ್ತಾ ಇರುವ ಸ್ತ್ರೀಪುರುಷರ ದೇಹಗಳನ್ನು ನರಕವೆಂಬ ಕಾರ್ಗತ್ತಲೆಯ ಗುಂಡಿಗೆ ಎಸೆಯುತ್ತಾನೆ. ಕ್ರೋಧದ ಆತ್ಮಜೀವಿಯು ಅವರನ್ನು ಹೀಗೆ ದಂಡಿಸುತ್ತಾನೆ.” ಅದೇ ಕಾಲಾವಧಿಯಲ್ಲಿ ಅಂತಿಯೋಕ್ಯದ ಲೇಖಕನಾದ ಥಿಯೋಫಿಲಸನು ಗ್ರೀಕ್ ಪ್ರವಾದಿನಿಯಾದ ಸಿಬ್ಲ್ ಹೇಳಿದ್ದನ್ನು ಉಲ್ಲೇಖಿಸುತ್ತಾನೆ. ದುಷ್ಟರಿಗಾಗುವ ಶಿಕ್ಷೆಗಳನ್ನು ಅವಳು ಹೀಗೆ ಮುಂತಿಳಿಸಿದಳಂತೆ: “ನಿಮ್ಮ ಮೇಲೆ ಉರಿಯುವ ಬೆಂಕಿಯು ಬೀಳುವುದು. ನೀವು ದಿನದಿನವೂ ಸದಾಕಾಲಕ್ಕೂ ಬೆಂಕಿಯಲ್ಲಿ ದಹಿಸಲ್ಪಡುವಿರಿ.” ಥಿಯೋಫಿಲಸ್ “ಸತ್ಯ, ಉಪಯುಕ್ತ, ನ್ಯಾಯ ಮತ್ತು ಎಲ್ಲಾ ಮನುಷ್ಯರಿಗೆ ಪ್ರಯೋಜನಕರ” ಎಂದು ಹೇಳುವ ಮಾತುಗಳಲ್ಲಿ ಇವು ಕೆಲವು.
ಮಧ್ಯಯುಗದಲ್ಲಿ ಹಿಂಸಾಚಾರವನ್ನು ಸಮರ್ಥಿಸಲು ನರಕಾಗ್ನಿಯ ಬಳಕೆ: ಸುಮಾರು 300 ಪ್ರಾಟೆಸ್ಟಂಟರನ್ನು ಸುಡುಗಂಬಕ್ಕೆ ಕಟ್ಟಿ ದಹಿಸಿದ್ದಕ್ಕಾಗಿ “ಬ್ಲಡಿಮೇರಿ” ಎಂದು ಕುಖ್ಯಾತಳಾದ ಇಂಗ್ಲೆಂಡ್ ರಾಣಿ ಒಂದನೇ ಮೇರಿ (1553-1558) ಹೀಗಂದಳೆಂದು ವರದಿ: “ಪಾಷಂಡಿಗಳ ಆತ್ಮಗಳು ಮುಂದೆ ಹೇಗೂ ನರಕದಲ್ಲಿ ಸದಾ ದಹಿಸಲ್ಪಡುತ್ತವೆ. ಆದುದರಿಂದ ಅವರನ್ನು ಭೂಮಿಯಲ್ಲಿ ದಹಿಸುವ ಮೂಲಕ ದೈವಿಕ ಸೇಡನ್ನು ನಾನೇ ತೀರಿಸಿದೆ. ಇದಕ್ಕಿಂತ ಸೂಕ್ತವಾದದ್ದು ಇನ್ನೊಂದಿಲ್ಲ.”
ಹೊಸ ಅರ್ಥವಿವರ: ಇತ್ತೀಚಿನ ವರ್ಷಗಳಲ್ಲಿ ಕೆಲವು ಧರ್ಮ ಪಂಗಡಗಳು ನರಕ ಬೋಧನೆಯನ್ನು ತುಸು ಪರಿಷ್ಕರಿಸಿವೆ. ಉದಾಹರಣೆಗೆ, ಡಾಕ್ಟ್ರಿನ್ ಕಮಿಷನ್ ಆಫ್ ದ ಚರ್ಚ್ ಆಫ್ ಇಂಗ್ಲೆಂಡ್ 1995ರಲ್ಲಿ ಹೀಗೆಂದು ಹೇಳಿತು: “ನರಕವು ನಿತ್ಯಯಾತನೆಯ ಸ್ಥಳವಲ್ಲ. ಅದು ದೇವರಿಗೆ ವಿರುದ್ಧವಾದ ಮಾರ್ಗದಲ್ಲಿ ಹೋಗುವವರು ಮಾಡುವ ಆಯ್ಕೆ. ಅದು ದೇವರಿಗೆ ಎಷ್ಟು ಹೇಯವಾಗಿದೆಯೆಂದರೆ ಅದರ ಅಂತ್ಯಫಲವು ಸಂಪೂರ್ಣ ನಾಶನ.”
[ಪುಟ 7ರಲ್ಲಿರುವ ಚೌಕ/ಚಿತ್ರ]
‘ಬೆಂಕಿಯ ಕೆರೆ’ ಅಂದರೇನು?
ಪಿಶಾಚನು ‘ಬೆಂಕಿಯ ಕೆರೆಗೆ’ ದೊಬ್ಬಲ್ಪಡುವನು ಮತ್ತು ಅಲ್ಲಿ ಅವನು ‘ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುವನು’ ಎಂದು ಪ್ರಕಟನೆ 20:10 ತಿಳಿಸುತ್ತದೆ. ಸೈತಾನನು ಯುಗಯುಗಾಂತರಗಳಲ್ಲಿಯೂ ಯಾತನೆಪಡಬೇಕಾಗಿರುವಲ್ಲಿ ದೇವರು ಅವನನ್ನು ಜೀವಂತವಾಗಿ ಇಡಬೇಕಾಗಿರುವುದು. ಆದರೆ ಯೇಸು ಅವನನ್ನು ‘ನಾಶಮಾಡುವನು’ ಎಂದು ಬೈಬಲ್ ತಿಳಿಸುತ್ತದೆ. (ಇಬ್ರಿಯ 2:14, NIBV) ಆದ್ದರಿಂದ ಸಾಂಕೇತಿಕ ಬೆಂಕಿಯ ಕೆರೆಯು ‘ಎರಡನೆಯ ಮರಣವನ್ನು’ ಸೂಚಿಸುತ್ತದೆ. (ಪ್ರಕಟನೆ 21:8) ಬೈಬಲಿನಲ್ಲಿ ಆರಂಭದಲ್ಲಿ ತಿಳಿಸಲ್ಪಟ್ಟಂತೆ, ಆದಾಮನ ಪಾಪದಿಂದಾಗಿ ಬಂದ ಮರಣ ಇದಲ್ಲ. ಆ ಮರಣದಿಂದ, ಪುನರುತ್ಥಾನದ ಮೂಲಕ ಬಿಡುಗಡೆ ಹೊಂದಸಾಧ್ಯವಿದೆ. (1 ಕೊರಿಂಥ 15:21, 22) ಆದರೆ ‘ಬೆಂಕಿಯ ಕೆರೆಯು’ ತನ್ನೊಳಗಿದ್ದವರನ್ನು ಬಿಟ್ಟುಕೊಡುವುದು ಎಂದು ಬೈಬಲ್ ತಿಳಿಸುವುದಿಲ್ಲ. ಆದ್ದರಿಂದ ‘ಎರಡನೆಯ ಮರಣವು’ ಇನ್ನೊಂದು ರೀತಿಯ ಮರಣವಾಗಿರಲೇಬೇಕು. ಅದೇ ಪುನರುತ್ಥಾನವಿಲ್ಲದ ಶಾಶ್ವತ ಮರಣವಾಗಿದೆ.
ಹಾಗಾದರೆ ಆ ‘ಬೆಂಕಿಯ ಕೆರೆಯಲ್ಲಿರುವವರು’ ಯುಗಯುಗಾಂತರಗಳಲ್ಲಿ ಯಾತನೆಪಡುವುದು ಯಾವ ಅರ್ಥದಲ್ಲಿ? ಕೆಲವೊಮ್ಮೆ ‘ಯಾತನೆಪಡಿಸು’ ಎಂಬುದಕ್ಕೆ ‘ನಿರ್ಬಂಧಿಸು’ ಎಂಬ ಅರ್ಥವಿದೆ. ಯೇಸು ಒಮ್ಮೆ ದೆವ್ವಗಳಿಗೆ ಎದುರಾದಾಗ ಅವು ಕೂಗಿ ಹೇಳಿದ್ದು: “ಕಾಲ ಬರುವದಕ್ಕಿಂತ ಮುಂಚೆ ನಮ್ಮನ್ನು ಕಾಡುವದಕ್ಕೆ [ಅಧೋಲೋಕದಲ್ಲಿ ನಿರ್ಬಂಧಿಸುವುದಕ್ಕೆ] ಇಲ್ಲಿಗೆ ಬಂದಿಯಾ.” (ಮತ್ತಾಯ 8:29; ಲೂಕ 8:30, 31) ಆದ್ದರಿಂದ ‘ಬೆಂಕಿಯ ಕೆರೆ’ಯಲ್ಲಿರುವ ಎಲ್ಲರೂ ಶಾಶ್ವತ ನಿರ್ಬಂಧ ಅಥವಾ ‘ಎರಡನೆಯ ಮರಣವನ್ನು’ ಅನುಭವಿಸುವರು.