ವ್ಯಾಪಕವಾಗಿ ಹರಡಿರುವ ನಂಬಿಕೆ
ವ್ಯಾಪಕವಾಗಿ ಹರಡಿರುವ ನಂಬಿಕೆ
“ನರಕದಲ್ಲಿ ಉರಿಯುತ್ತಾ ಇರುವ ಘೋರ ಸ್ವಪ್ನಗಳು ನನಗೆ ಬೀಳುತ್ತಿದ್ದವು! ಯಾರೋ ನನ್ನನ್ನು ಧಗಧಗನೆ ಉರಿಯುವ ಬೆಂಕಿ ಕುಂಡದೊಳಗೆ ಎಸೆಯುತ್ತಿದ್ದ ಕನಸು ಕಾಣುತ್ತಿದ್ದೆ. ಹೆದರಿ ಗಟ್ಟಿಯಾಗಿ ಚೀರುತ್ತಾ ನಾನು ಎಚ್ಚರಗೊಳ್ಳುತ್ತಿದ್ದೆ. ಪಾಪಮಾಡದಿರಲು ದೃಢಸಂಕಲ್ಪ ಮಾಡಿದ್ದೆ ಎಂದು ಹೇಳಬೇಕಾಗಿಲ್ಲ.”—ಆರ್ಲಿನ್.
ನರಕವು ಬೆಂಕಿ ಉರಿಯುತ್ತಿರುವ ಯಾತನೆಯ ಸ್ಥಳವೋ? ಪಾಪಿಗಳನ್ನು ಅದರೊಳಗೆ ಎಸೆದು ಚಿತ್ರಹಿಂಸೆ ಕೊಡುತ್ತಾರೆಂದು ನೀವು ನಂಬುತ್ತೀರೋ? ಅನೇಕರು ಹಾಗೆ ನಂಬುತ್ತಾರೆ. ಉದಾಹರಣೆಗಾಗಿ 2005ರಲ್ಲಿ ನಡೆಸಲ್ಪಟ್ಟ ಸಮೀಕ್ಷೆಯಲ್ಲಿ, ಸ್ಕಾಟ್ಲೆಂಡ್ನ 750 ಪಾದ್ರಿಗಳಲ್ಲಿ ತೃತೀಯಾಂಶ, ನರಕದಲ್ಲಿ ಪಾಪಿಗಳು “ನಿರಂತರ ಮಾನಸಿಕ ಯಾತನೆಯನ್ನು” ಅನುಭವಿಸುತ್ತಾರೆಂದು ಮತ್ತು ಐದರಲ್ಲೊಂದು ಅಂಶ, ನರಕದಲ್ಲಿ ಪಾಪಿಗಳು ದೈಹಿಕ ಯಾತನೆಯನ್ನು ಅನುಭವಿಸುತ್ತಾರೆಂದೂ ನಂಬುತ್ತಾರೆ ಎಂಬುದಾಗಿ ಸ್ಕಾಟ್ಲೆಂಡ್ನ ಸೆಂಟ್ ಆ್ಯಂಡ್ರೂಸ್ ಯೂನಿವರ್ಸಿಟಿಯ ವಿದ್ವಾಂಸರೊಬ್ಬರು ಹೇಳಿದರು.
ಅನೇಕ ದೇಶಗಳಲ್ಲಿ ಜನರು ನರಕವನ್ನು ಸರ್ವಸಾಮಾನ್ಯವಾಗಿ ನಂಬುತ್ತಾರೆ. ಅಮೆರಿಕದಲ್ಲಿ ನಡೆಸಲ್ಪಟ್ಟ ಜನಾಭಿಪ್ರಾಯ ಸರ್ವೆಯಲ್ಲಿ ಸುಮಾರು 70 ಪ್ರತಿಶತ ಜನರು ನರಕವನ್ನು ನಂಬಿದ್ದರು. ಧರ್ಮದಲ್ಲಿ ಹೆಚ್ಚು ಒಲವಿಲ್ಲದ ದೇಶಗಳಲ್ಲೂ ಅನೇಕ ಜನರು ನರಕವನ್ನು ನಂಬುತ್ತಾರೆ. 2004ರಲ್ಲಿ ಕೆನಡದಲ್ಲಿ ನಡೆಸಲಾದ ಸರ್ವೆಯಲ್ಲಿ 42 ಪ್ರತಿಶತ ಜನರು ನರಕವನ್ನು ನಂಬಿದ್ದರೆಂದು ತಿಳಿದುಬಂತು. ಬ್ರಿಟನ್ನಲ್ಲಿ ಕೂಡ 32 ಪ್ರತಿಶತ ಜನರು ನರಕ ಇದೆ ಎಂದು ದೃಢವಾಗಿ ನಂಬಿದ್ದರು.
ಪಾದ್ರಿಗಳು ಕಲಿಸುವುದೇನು?
ನರಕವು ನಿಜವಾಗಿ ದಹಿಸುವ ಬೆಂಕಿಯಿರುವ ಯಾತನಾಸ್ಥಳವೆಂದು ಕಲಿಸುವುದನ್ನು ಈಗ ಹೆಚ್ಚಿನ ಪಾದ್ರಿಗಳು ನಿಲ್ಲಿಸಿದ್ದಾರೆ. ಬದಲಾಗಿ ಅವರು 1994ರಲ್ಲಿ ಪ್ರಕಟಿಸಲಾದ ಕ್ಯಾಥಲಿಕ್ ಚರ್ಚ್ನ ಕ್ಯಾಟಿಕಿಸಮ್ ಪುಸ್ತಕದಲ್ಲಿರುವ ತದ್ರೀತಿಯ ಒಂದು ಅರ್ಥನಿರೂಪಣೆಯನ್ನು ಬಳಸುತ್ತಾರೆ. “ನರಕ ಶಿಕ್ಷೆ ಎಂದರೆ ನಿತ್ಯಕ್ಕೂ ದೇವರಿಂದ ಅಗಲಿರುವುದು” ಎಂಬುದೇ ಆ ಅರ್ಥನಿರೂಪಣೆ.
ಹಾಗಿದ್ದರೂ ನರಕವು ಮಾನಸಿಕ ಮತ್ತು ದೈಹಿಕ ಯಾತನೆಯ ಸ್ಥಳ ಎಂಬ ನಂಬಿಕೆಯು ಇನ್ನೂ ಪ್ರಚಲಿತ. ಅದನ್ನು ನಂಬುವ ಅನೇಕರು ಅದು ಬೈಬಲಿನದೇ ಬೋಧನೆ ಎಂದು ಹೇಳುತ್ತಾರೆ. ಸದರ್ನ್ ಬ್ಯಾಪ್ಟಿಸ್ಟ್ ಥಿಯೋಲಾಜಿಕಲ್ ಸೆಮಿನೆರಿಯ ಅಧ್ಯಕ್ಷರಾದ ಆರ್. ಆಲ್ಬರ್ಟ್ ಮೊಹ್ಲರ್ ನರಕದ ಕುರಿತು ಕಂಠೋಕ್ತವಾಗಿ ಹೇಳಿದ್ದು: “ಬೈಬಲೇ ಅದನ್ನು ಕಲಿಸುತ್ತದೆ.”
ನಿಮ್ಮ ನಂಬಿಕೆ ಪ್ರಾಮುಖ್ಯವೇಕೆ?
ನರಕವು ನಿಜವಾಗಿ ಯಾತನೆಯ ಸ್ಥಳವಾಗಿದ್ದಲ್ಲಿ ನೀವು ಅದಕ್ಕೆ ಭಯಪಡಬೇಕು ನಿಶ್ಚಯ. ಆದರೆ ಆ ಬೋಧನೆಯು ತಪ್ಪಾಗಿರುವಲ್ಲಿ, ಅದನ್ನು ನಂಬುವ ಜನರಲ್ಲಿ ಧಾರ್ಮಿಕ ಗುರುಗಳು ಅನಾವಶ್ಯಕ ಮಾನಸಿಕ ಬೇಗುದಿ ಮತ್ತು ಗಲಿಬಿಲಿಯನ್ನು ಉಂಟುಮಾಡುತ್ತಾರೆ. ಅವರು ದೇವರನ್ನೂ ನಿಂದೆಗೆ ಗುರಿಮಾಡುತ್ತಾರೆ.
ಈ ಕುರಿತು ದೇವರ ವಾಕ್ಯವಾದ ಬೈಬಲ್ ಏನು ಹೇಳುತ್ತದೆ? ಮುಂದಿನ ಲೇಖನಗಳು ಕ್ಯಾಥಲಿಕ್ ಮತ್ತು ಪ್ರಾಟೆಸ್ಟೆಂಟ್ ಬೈಬಲ್ಗಳನ್ನು ಉಪಯೋಗಿಸುತ್ತಾ ಕೆಳಗಿನ ಮೂರು ಪ್ರಶ್ನೆಗಳಿಗೆ ಉತ್ತರ ಕೊಡುತ್ತವೆ: (1) ವ್ಯಕ್ತಿಯು ಸತ್ತಾಗ ನಿಜವಾಗಿ ಏನು ಸಂಭವಿಸುತ್ತದೆ? (2) ನರಕದ ಕುರಿತು ಯೇಸು ಏನು ಕಲಿಸಿದನು? (3) ನರಕದ ಕುರಿತು ಸತ್ಯವನ್ನು ಕಲಿಯುವುದು ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ? (w08 11/1)