ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್ಲ ರೀತಿಯ ಭಕ್ತಿ ದೇವರಿಗೆ ಪ್ರಿಯವೋ?

ಎಲ್ಲ ರೀತಿಯ ಭಕ್ತಿ ದೇವರಿಗೆ ಪ್ರಿಯವೋ?

ಎಲ್ಲ ರೀತಿಯ ಭಕ್ತಿ ದೇವರಿಗೆ ಪ್ರಿಯವೋ?

ಸಾಮಾನ್ಯ ಉತ್ತರಗಳು:

“ಎಲ್ಲ ಧರ್ಮಗಳು ದೇವರ ಬಳಿಗೆ ನಡೆಸುವ ವಿವಿಧ ದಾರಿಗಳಷ್ಟೆ.”

▪ “ನೀವು ಪ್ರಾಮಾಣಿಕರಾಗಿದ್ದರೆ ಸಾಕು, ನಂಬಿಕೆ ಏನಾಗಿದ್ದರೂ ಪರವಾಗಿಲ್ಲ.”

ಯೇಸು ಏನು ಹೇಳಿದನು?

“ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:​13, 14) ಎಲ್ಲಾ ದಾರಿಗಳು ದೇವರ ಬಳಿಗೆ ನಡೆಸುತ್ತವೆ ಎಂದು ಯೇಸು ನಂಬಲಿಲ್ಲ.

▪ “ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ​—⁠ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.” (ಮತ್ತಾಯ 7:​22, 23) ಯೇಸುವನ್ನು ಹಿಂಬಾಲಿಸುತ್ತೇವೆಂದು ಹೇಳಿಕೊಳ್ಳುವ ಎಲ್ಲರನ್ನೂ ಆತನು ಮೆಚ್ಚುವುದಿಲ್ಲ ಎಂಬುದು ಇದರಿಂದ ಸ್ಪಷ್ಟ.

ಹೆಚ್ಚಿನ ಧಾರ್ಮಿಕ ಜನರಿಗೆ ತಮ್ಮ ನಂಬಿಕೆ ಮತ್ತು ಸಂಪ್ರದಾಯಗಳೇ ಅಚ್ಚುಮೆಚ್ಚು. ಆದರೆ ಈ ಬೋಧನೆಗಳು ದೇವರ ವಾಕ್ಯವಾದ ಬೈಬಲಿಗೆ ಹೊಂದಿಕೆಯಲ್ಲಿಲ್ಲದಾಗ ಏನಾಗುತ್ತದೆ? ಮಾನವ-ನಿರ್ಮಿತ ಸಂಪ್ರದಾಯಗಳನ್ನು ಅನುಸರಿಸುವುದರಿಂದ ಬರುವ ಅಪಾಯಗಳ ಬಗ್ಗೆ ತನ್ನ ದಿನಗಳ ಧಾರ್ಮಿಕ ಮುಖಂಡರಿಗೆ ಯೇಸು ಹೀಗಂದನು: “ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.” ಅನಂತರ ದೇವರ ಈ ಮಾತುಗಳನ್ನು ಆತನು ಉಲ್ಲೇಖಿಸಿದನು: “ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ.”​—⁠ಮತ್ತಾಯ 15:​1-9; ಯೆಶಾಯ 29:⁠13.

ನಂಬಿಕೆಗಳು ಮಾತ್ರವೇ ಅಲ್ಲ ನಡತೆ ಕೂಡ ಪ್ರಾಮುಖ್ಯ. ದೇವರನ್ನು ಆರಾಧಿಸುತ್ತೇವೆಂದು ಹೇಳುವ ಕೆಲವರ ಕುರಿತು ಬೈಬಲ್‌ ಹೇಳುವುದು: “ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ . . . ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ” ತೋರಿಸುತ್ತಾರೆ. (ತೀತ 1:16) ನಮ್ಮ ದಿನಗಳಲ್ಲಿ ಜೀವಿಸುತ್ತಿರುವ ಜನರ ಕುರಿತು ಬೈಬಲ್‌ ಅನ್ನುವುದು: “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು.”​—⁠2 ತಿಮೊಥೆಯ 3:​4, 5.

ಪ್ರಾಮಾಣಿಕತೆ ಬೇಕು ನಿಜ, ಆದರೆ ಅದಕ್ಕಿಂತಲೂ ಹೆಚ್ಚಿನದ್ದು ಆವಶ್ಯ. ಏಕೆ? ಏಕೆಂದರೆ ವ್ಯಕ್ತಿಯೊಬ್ಬನು ಪ್ರಾಮಾಣಿಕತೆಯಿಂದ ಮಾಡುವ ವಿಷಯಗಳೂ ತಪ್ಪಾಗಿರಬಹುದು. ಆದುದರಿಂದ ದೇವರ ಕುರಿತಾದ ನಿಷ್ಕೃಷ್ಟ ಜ್ಞಾನ ಅತ್ಯಾವಶ್ಯಕ. (ರೋಮಾಪುರ 10:​2, 3) ಈ ಜ್ಞಾನಾರ್ಜನೆ ಮತ್ತು ಬೈಬಲಿನ ಆಜ್ಞೆಗಳಿಗೆ ವಿಧೇಯರಾಗಿ ನಡೆಯುವಂಥಾದ್ದು ದೇವರ ಮೆಚ್ಚಿಗೆಗೆ ನಡೆಸುತ್ತದೆ. (ಮತ್ತಾಯ 7:21) ಹಾಗಾದರೆ ಸತ್ಯ ಧರ್ಮದಲ್ಲಿ ನಿಜ ಉದ್ದೇಶ, ನಿಜ ನಂಬಿಕೆ ಮತ್ತು ನೈಜ ಕ್ರಿಯೆಗಳು ಇರಬೇಕು. ನೈಜ ಕ್ರಿಯೆಗಳೆಂದರೆ ದೇವರ ಇಚ್ಚೆಯಂತೆ ನಡೆಯುವುದೇ ಆಗಿದೆ!​—⁠1 ಯೋಹಾನ 2:⁠17.

ದೇವರ ಕುರಿತು ಬೈಬಲ್‌ ಏನು ಹೇಳುತ್ತದೆಂಬುದರ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಲ್ಲಿ, ಮನೆಯಲ್ಲಿ ಉಚಿತವಾಗಿ ಅದನ್ನು ಅಧ್ಯಯನಮಾಡಲು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ. (w09 2/1)

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸತ್ಯ ಧರ್ಮದಲ್ಲಿ ನಿಜ ಉದ್ದೇಶ, ನಿಜ ನಂಬಿಕೆ ಮತ್ತು ನೈಜ ಕ್ರಿಯೆಗಳು ಇರಬೇಕು