ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರೀತಿಯ ಮಹಾನ್‌ ಪುರಾವೆ

ದೇವರ ಪ್ರೀತಿಯ ಮಹಾನ್‌ ಪುರಾವೆ

ದೇವರ ಸಮೀಪಕ್ಕೆ ಬನ್ನಿರಿ

ದೇವರ ಪ್ರೀತಿಯ ಮಹಾನ್‌ ಪುರಾವೆ

ಆದಿಕಾಂಡ 22:​1-18

ಅಬ್ರಹಾಮನು ದೇವರನ್ನು ಪ್ರೀತಿಸಿದನು. ಆ ನಂಬಿಗಸ್ತ ಮೂಲಪಿತೃ ತನ್ನ ವೃದ್ಧಾಪ್ಯದಲ್ಲಿ ಹುಟ್ಟಿದ ಮಗನಾದ ಇಸಾಕನನ್ನು ಸಹ ಅತಿಯಾಗಿ ಪ್ರೀತಿಸಿದನು. ಆದರೆ ಇಸಾಕನು ಸುಮಾರು 25 ವಯಸ್ಸಿನವನಾದಾಗ ಅಬ್ರಹಾಮನು ಒಂದು ಪರೀಕ್ಷೆಯನ್ನು ಎದುರಿಸಿದನು. ಅದು ತಂದೆಯೊಬ್ಬನ ಸಹಜ ಪ್ರೀತಿಯನ್ನು ಪರೀಕ್ಷಿಸಿತು. ಇಸಾಕನನ್ನು ಬಲಿಯಾಗಿ ಅರ್ಪಿಸುವಂತೆ ದೇವರು ಅಬ್ರಹಾಮನಿಗೆ ಆಜ್ಞಾಪಿಸಿದನು. ಆದರೂ ಆ ವೃತ್ತಾಂತವು ಇಸಾಕನ ಮರಣದಲ್ಲಿ ದುಃಖಾಂತ್ಯಗೊಳ್ಳಲಿಲ್ಲ. ಅಬ್ರಹಾಮನು ತನ್ನ ಮಗನನ್ನು ಬಲಿಯಾಗಿ ಅರ್ಪಿಸಲು ಸಿದ್ಧನಾದಾಗ ದೇವದೂತನು ಅವನನ್ನು ತಡೆದನು. ಆದಿಕಾಂಡ 22:​1-18ರ ಈ ಬೈಬಲ್‌ ವೃತ್ತಾಂತವು ದೇವರಿಗೆ ನಮ್ಮಲ್ಲಿರುವ ಮಹಾನ್‌ ಪ್ರೀತಿಯ ಪ್ರವಾದನಾ ಕಿರುನೋಟವನ್ನು ಕೊಡುತ್ತದೆ.

“ದೇವರು ಅಬ್ರಹಾಮನನ್ನು ಪರಿಶೋಧಿಸಿದನು” ಎನ್ನುತ್ತದೆ ಒಂದನೇ ವಚನ. ಅಬ್ರಹಾಮನು ದೇವರಲ್ಲಿ ನಂಬಿಕೆಯಿಟ್ಟ ಪುರುಷ. ಆದರೆ ಈಗ ಅವನ ನಂಬಿಕೆಯು ಹಿಂದೆಂದಿಗಿಂತಲೂ ಹೆಚ್ಚಾಗಿ ಪರಿಶೋಧಿಸಲ್ಪಡಲಿತ್ತು. ದೇವರು ಅಂದದ್ದು: “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು . . . ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು.” (ವಚನ 2) ದೇವರು ತನ್ನ ಸೇವಕರನ್ನು ಅವರ ಶಕ್ತಿಗೆ ಮೀರುವ ಶೋಧನೆಯನ್ನು ಅನುಮತಿಸುವ ಮೂಲಕ ಪರೀಕ್ಷಿಸುವುದಿಲ್ಲ ಎಂಬದನ್ನು ನೆನಪಿಡಿರಿ. ಈ ಪರೀಕ್ಷೆಯು ಯೆಹೋವನಿಗೆ ಅಬ್ರಹಾಮನಲ್ಲಿದ್ದ ಭರವಸೆಯು ಎಷ್ಟೆಂದು ತೋರಿಸಿ ಕೊಟ್ಟಿತು.​—⁠1 ಕೊರಿಂಥ 10:⁠13.

ಅಬ್ರಹಾಮನು ಆ ಕೂಡಲೇ ವಿಧೇಯನಾದನು. ನಾವು ಓದುವುದು: “ಬೆಳಿಗ್ಗೆ ಅಬ್ರಹಾಮನು ಎದ್ದು ಕತ್ತೆಗೆ ತಡಿಹಾಕಿಸಿ ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ಒಡಿಸಿ ತನ್ನ ಸೇವಕರಲ್ಲಿ ಇಬ್ಬರನ್ನೂ ತನ್ನ ಮಗನಾದ ಇಸಾಕನನ್ನೂ ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು.” (ವಚನ 3) ಆ ಪರೀಕ್ಷೆಯ ಬಗ್ಗೆ ಅಬ್ರಹಾಮನು ಯಾರಿಗೂ ಸವಿವರವಾಗಿ ಹೇಳಲಿಲ್ಲವೆಂಬುದು ವ್ಯಕ್ತ.

ಅವರು ಆ ಬೆಟ್ಟಕ್ಕೆ ಮೂರು ದಿನ ಪ್ರಯಾಣ ಮಾಡುತ್ತಾರೆ. ಆಗ ಪರೀಕ್ಷೆಯ ಕುರಿತು ಗಂಭೀರವಾಗಿ ಧ್ಯಾನಿಸಲು ಅವನಿಗೆ ಅವಕಾಶವಿತ್ತು. ಆದರೂ ಅಬ್ರಹಾಮನು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಅವನ ಮಾತುಗಳು ಅವನ ನಂಬಿಕೆಯನ್ನು ಪ್ರಕಟಪಡಿಸಿದವು. ದೇವರು ಹೇಳಿದ ಬೆಟ್ಟವು ದೂರದಲ್ಲಿ ಕಾಣಿಸಲು ಅಬ್ರಹಾಮನು ತನ್ನ ಸೇವಕರಿಗೆ ಹೀಗಂದನು: “ನೀವು ಇಲ್ಲೇ ಕತ್ತೆಯ ಬಳಿಯಲ್ಲಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆಮಾಡಿಕೊಂಡು ನಿಮ್ಮ ಬಳಿಗೆ ತಿರಿಗಿ ಬರುತ್ತೇವೆ.” ಇಸಾಕನು ಹೋಮಕ್ಕೆ ಬೇಕಾದ ಕುರಿ ಎಲ್ಲಿ ಎಂದು ಅಬ್ರಹಾಮನನ್ನು ಕೇಳಲು ಅವನಂದದ್ದು: “ಮಗನೇ, ಹೋಮಕ್ಕೆ ಬೇಕಾದ ಕುರಿಯನ್ನು ದೇವರೇ ಒದಗಿಸುವನು.” (ವಚನಗಳು 5, 8) ಅಬ್ರಹಾಮನು ತಾನು ತನ್ನ ಮಗನೊಂದಿಗೆ ಹಿಂತಿರುಗುವೆನೆಂದು ನಿರೀಕ್ಷಿಸಿದ್ದನು. ಏಕೆ? ಏಕೆಂದರೆ “ತನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸ ಸಮರ್ಥನಾಗಿದ್ದಾನೆಂದು ತಿಳುಕೊಂಡನು.”​—⁠ಇಬ್ರಿಯ 11:⁠19.

ಅವರಿಬ್ಬರೂ ಬೆಟ್ಟದ ಮೇಲೆ ಹೋದ ಬಳಿಕ, “ತನ್ನ ಮಗನನ್ನು ವಧಿಸುವುದಕ್ಕೆ [ಅಬ್ರಹಾಮನು] ಕೈಚಾಚಿ ಕತ್ತಿಯನ್ನು ಹಿಡಿದುಕೊಳ್ಳಲು” ದೇವದೂತನೊಬ್ಬನು ಅವನನ್ನು ತಡೆದನು. ತದನಂತರ ‘ಅವನ ಮಗನಿಗೆ ಬದಲಾಗಿ’ ಪೊದೆಯಲ್ಲಿ ಸಿಕ್ಕಿಕೊಂಡಿದ್ದ ಟಗರನ್ನು ಹೋಮಕ್ಕಾಗಿ ದೇವರು ಒದಗಿಸಿದನು. (ವಚನಗಳು 10-13) ದೇವರ ದೃಷ್ಟಿಯಲ್ಲಿ ಅದು ಇಸಾಕನೇ ನಿಜವಾಗಿ ಅರ್ಪಿಸಲ್ಪಟ್ಟನೋ ಎಂಬಂತಿತ್ತು. (ಇಬ್ರಿಯ 11:17) ಒಬ್ಬ ವಿದ್ವಾಂಸನು ವಿವರಿಸುವುದು: “ದೇವರ ದೃಷ್ಟಿಯಲ್ಲಿ ಅಬ್ರಹಾಮನ ಸಿದ್ಧಮನಸ್ಸು ಅವನು ತನ್ನ ಮಗನನ್ನು ಕಾರ್ಯತಃ ಅರ್ಪಿಸಿಬಿಟ್ಟನೋ ಎಂಬುದಕ್ಕೆ ಸಮಾನವಾಗಿ ಪರಿಗಣಿಸಲ್ಪಟ್ಟಿತ್ತು.”

ಹೀಗೆ ಯೆಹೋವನಿಗೆ ಅಬ್ರಹಾಮನಲ್ಲಿದ್ದ ನಂಬಿಕೆಯು ಸಮರ್ಥಿಸಲ್ಪಟ್ಟಿತು. ಮಾತ್ರವಲ್ಲ ಅಬ್ರಹಾಮನಿಗೆ ಯೆಹೋವನಲ್ಲಿದ್ದ ಭರವಸೆಗೆ ಪ್ರತಿಫಲ ಸಿಕ್ಕಿತು. ಹೇಗಂದರೆ ಅಬ್ರಹಾಮನೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ದೇವರು ಪುನರುಚ್ಚರಿಸಿದನು. ಮತ್ತು ಅದನ್ನು ವಿಸ್ತರಿಸುತ್ತಾ ಭೂಮಿಯ ಎಲ್ಲಾ ಜನಾಂಗಗಳ ಜನರೂ ಆ ಮೂಲಕವಾಗಿ ಆಶೀರ್ವದಿಸಲ್ಪಡುವರು ಎಂಬ ವಾಗ್ದಾನವನ್ನಿತ್ತನು.​—⁠ವಚನಗಳು 15-18.

ಹೀಗೆ ಅಬ್ರಹಾಮನು ತನ್ನ ಮಗನನ್ನು ಯಜ್ಞವಾಗಿ ಅರ್ಪಿಸುವಂತೆ ದೇವರು ಬಿಡಲಿಲ್ಲವಾದರೂ ತನ್ನ ಸ್ವಂತ ಮಗನಾದ ಯೇಸುವನ್ನಾದರೋ ಯಜ್ಞವಾಗಿ ಅರ್ಪಿಸಲಿದ್ದನು. ಇಸಾಕನನ್ನು ಯಜ್ಞಾರ್ಪಿಸಲು ಅಬ್ರಹಾಮನಿಗಿದ್ದ ಸಿದ್ಧಮನಸ್ಸು, ದೇವರು ತನ್ನ ಒಬ್ಬನೇ ಮಗನಾದ ಯೇಸುಕ್ರಿಸ್ತನನ್ನು ನಮ್ಮ ಪಾಪಗಳಿಗೆ ಯಜ್ಞವಾಗಿ ನೀಡುವುದನ್ನು ಮುನ್‌ಚಿತ್ರಿಸಿತ್ತು. (ಯೋಹಾನ 3:16) ಕ್ರಿಸ್ತನ ಯಜ್ಞಾರ್ಪಣೆಯು ನಮ್ಮ ಮೇಲೆ ದೇವರಿಗಿರುವ ಪ್ರೀತಿಯ ಮಹಾನ್‌ ಪುರಾವೆಯಾಗಿದೆ. ದೇವರು ನಮಗಾಗಿ ಇಷ್ಚು ದೊಡ್ಡ ತ್ಯಾಗ ಮಾಡಿರುವುದರಿಂದ ನಾವು ಹೀಗೆ ಕೇಳಿಕೊಳ್ಳಬೇಕು: ‘ದೇವರ ಮೆಚ್ಚಿಗೆಯನ್ನು ಪಡೆಯಲು ನಾನು ಯಾವ ತ್ಯಾಗಗಳನ್ನು ಮಾಡಲು ಸಿದ್ಧನಿದ್ದೇನೆ?’ (w09 2/1)