ನಿಮಗೆ ತಿಳಿದಿತ್ತೋ?
ನಿಮಗೆ ತಿಳಿದಿತ್ತೋ?
ಬೈಬಲಿನಲ್ಲಿ ತಿಳಿಸಲಾದ ಮತ್ತು ಇಂದಿರುವ ಕುಷ್ಠರೋಗ ಒಂದೆಯೋ?
ಇಂದು “ಕುಷ್ಠ” ಎಂದು ಕರೆಯಲ್ಪಡುವ ವೈದ್ಯಕೀಯ ಪದವು ಮಾನವ ಬ್ಯಾಕ್ಟೀರಿಯಗಳಿಂದ ಉಂಟಾಗುವ ರೋಗಕ್ಕೆ ಸೂಚಿಸುತ್ತದೆ. ಈ ಬ್ಯಾಕ್ಟೀರಿಯವು (ಮೈಕೋಬ್ಯಾಕ್ಟೀರಿಯಮ್ ಲೆಪ್ರೆ) ಮೊದಲಾಗಿ 1873ರಲ್ಲಿ ಡಾಕ್ಟರ್ ಜಿ. ಎ. ಹ್ಯಾನ್ಸನ್ರವರಿಂದ ಗುರುತಿಸಲ್ಪಟ್ಟಿತು. ದೇಹದ ಹೊರಗೆ ಮೂಗಿನ ಸ್ರವಿಕೆಗಳಲ್ಲಿ ಈ ಬ್ಯಾಕ್ಟೀರಿಯವು ಒಂಬತ್ತು ದಿನಗಳ ವರೆಗೆ ಬದುಕಿ ಉಳಿಯಬಲ್ಲದೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಕುಷ್ಠರೋಗಿಗಳೊಂದಿಗೆ ನಿಕಟ ಸಹವಾಸದಲ್ಲಿರುವ ಜನರು ಈ ರೋಗದ ಸೋಂಕಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ ಎಂದೂ ಅವರು ಕಂಡುಕೊಂಡರು. ಈ ರೋಗದಿಂದ ಕಲುಷಿತವಾದ ಬಟ್ಟೆಗಳು ಸೋಂಕಿನ ಮೂಲಕ್ಕೆ ಸಂಭಾವ್ಯ ಕಾರಣವೆಂದು ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಗನುಸಾರ 2007ರಲ್ಲಿಯೇ 2,20,000ಕ್ಕಿಂತ ಹೆಚ್ಚು ಮಂದಿ ಕುಷ್ಠರೋಗ ಪೀಡಿತರಾದರು ಎಂಬ ವರದಿಯಿದೆ.
ಬೈಬಲ್ ಸಮಯಗಳಲ್ಲೂ ಮಧ್ಯಪೂರ್ವದಲ್ಲಿ ಕುಷ್ಠರೋಗದಿಂದ ಬಾಧಿತರಾದ ಜನರಿದ್ದರು ಎಂಬುದಕ್ಕೆ ಸಂಶಯವಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಕುಷ್ಠರೋಗಿಗಳನ್ನು ಅವರು ಯಾರ ಸಂಪರ್ಕಕ್ಕೂ ಬರದಂತೆ ಪ್ರತ್ಯೇಕವಾಗಿ ಇಡಬೇಕೆಂಬ ನಿಯಮವಿತ್ತು. (ಯಾಜಕಕಾಂಡ 13:4, 5) ಆದರೂ “ಕುಷ್ಠ” ಎಂದು ಭಾಷಾಂತರಿಸಲ್ಪಟ್ಟ ಹೀಬ್ರು ಪದ ಸಾ-ರ-ಅತ್ ಮನುಷ್ಯರಿಗೆ ಮಾತ್ರ ತಗಲುವ ರೋಗವಲ್ಲ. ಸಾ-ರ-ಅತ್ ಬಟ್ಟೆಗಳಿಗೆ ಮತ್ತು ಮನೆಗಳಿಗೂ ತಗಲುತ್ತಿತ್ತು. ಈ ರೀತಿಯ ಕುಷ್ಠವು ಉಣ್ಣೆ ಅಥವಾ ನಾರುಬಟ್ಟೆಗಳು ಅಥವಾ ಚರ್ಮದ ಯಾವುದೇ ವಸ್ತುಗಳಲ್ಲಿ ತೋರಿಬರುವ ಸಾಧ್ಯತೆಯೂ ಇತ್ತು. ಕೆಲವು ಸಂದರ್ಭಗಳಲ್ಲಿ ಚೆನ್ನಾಗಿ ತೊಳೆಯುವ ಮೂಲಕ ಅದನ್ನು ತೊಲಗಿಸ ಸಾಧ್ಯವಿತ್ತು. ಆದರೆ ಬಟ್ಟೆಯಲ್ಲೋ ಚರ್ಮದಲ್ಲೋ ಹಳದಿ-ಹಸುರಿನ ಇಲ್ಲವೆ ‘ಕೆಂಪಾದ ಮಚ್ಚೆ’ ಹೋಗದಿದ್ದಲ್ಲಿ ಅವನ್ನು ಸುಟ್ಟುಹಾಕಬೇಕಿತ್ತು. (ಯಾಜಕಕಾಂಡ 13:47-52) ಮನೆಗಳಲ್ಲಿ ಈ ವ್ಯಾಧಿಯು ಹಸುರು-ಹಳದಿ ಅಥವಾ ‘ಕೆಂಪಾದ’ ಗುರುತಿನ ರೂಪದಲ್ಲಿ ಗೋಡೆಗಳಲ್ಲಿ ತೋರಿಬರುತ್ತಿತ್ತು. ಹಾಗಿರುವಲ್ಲಿ ಆ ಗುರುತಿರುವ ಕಲ್ಲು, ಮಣ್ಣುಗಳನ್ನು ತೆಗೆಸಿಬಿಟ್ಟು ಊರಿನ ಹೊರಗೆ ಹಾಕಬೇಕಿತ್ತು. ಕುಷ್ಠವು ಮತ್ತೆ ಬರುವಲ್ಲಿ ಆ ಕಟ್ಟಡವನ್ನು ಕೆಡವಿಹಾಕಿ ಅದರ ಎಲ್ಲ ಇಟ್ಟಿಗೆ, ಕಲ್ಲು, ಮಣ್ಣುಗಳನ್ನು ನಾಶಮಾಡಬೇಕಿತ್ತು. (ಯಾಜಕಕಾಂಡ 14:33-45) ಬಟ್ಟೆಗಳಲ್ಲಿ ಅಥವಾ ಮನೆಗಳಲ್ಲಿ ತೋರಿಬರುತ್ತಿದ್ದ ಈ ಕುಷ್ಠವು, ನಾವಿಂದು ಯಾವುದನ್ನು ಬೂಷ್ಟ್ ಅಥವಾ ಹುಳುಕು ಎಂದು ಕರೆಯುತ್ತೇವೋ ಅದೇ ಆಗಿದ್ದಿರಬೇಕು ಎಂದು ಕೆಲವರು ಸೂಚಿಸುತ್ತಾರೆ. ಆದರೆ ಇದನ್ನು ಖಂಡಿತವಾಗಿ ಹೇಳಸಾಧ್ಯವಿಲ್ಲ. (w09 2/1)