ಐಶ್ವರ್ಯ ಕೊಡುವುದಾಗಿ ದೇವರು ಮಾತುಕೊಟ್ಟಿದ್ದಾನೋ?
ಐಶ್ವರ್ಯ ಕೊಡುವುದಾಗಿ ದೇವರು ಮಾತುಕೊಟ್ಟಿದ್ದಾನೋ?
‘ಶ್ರೀಮಂತಿಕೆ, ಸಾಲುಗಟ್ಟಲೆ ಕಾರು, ನೋಟುಗಳ ಮಳೆಗೆರೆಯುವ ವ್ಯಾಪಾರ—ಎಲ್ಲ ದೇವರು ಕೊಡುತ್ತಾನೆ. ದೇವರಲ್ಲಿ ನಂಬಿಕೆಯಿಟ್ಟು ನಿಮ್ಮ ಕಿಸೆಯಲ್ಲಿರುವುದೆಲ್ಲವನ್ನೂ ಆತನಿಗೆ ಕೊಟ್ಟುಬಿಡಿ.’
ಇಂಥ ಸಂದೇಶವನ್ನು ಬ್ರಸಿಲ್ನಲ್ಲಿ ಕೆಲವು ಧಾರ್ಮಿಕ ಪಂಗಡಗಳು ಪ್ರವರ್ಧಿಸುತ್ತವೆ ಎಂದು ಅಲ್ಲಿನ ವಾರ್ತಾಪತ್ರಿಕೆಯೊಂದು ವರದಿಸಿತು. ಈ ಸಂದೇಶವನ್ನು ನಂಬುವವರು ಅನೇಕರು. ಕ್ರೈಸ್ತರೆಂದು ಹೇಳಿಕೊಳ್ಳುವ ಜನರ ಮಧ್ಯೆ ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯ ಕುರಿತು ಟೈಮ್ ಪತ್ರಿಕೆ ವರದಿಸಿದ್ದು: “61% ಜನರು ಸಿರಿಸಂಪತ್ತು ದೇವರ ವರದಾನ ಎಂದು ನಂಬಿದ್ದರು. 31% ಜನರು . . . ನಾವು ದೇವರಿಗೆ ಕಾಣಿಕೆಕೊಟ್ಟರೆ ಆತನು ಧನೈಶ್ವರ್ಯ ಕೊಟ್ಟು ಆಶೀರ್ವದಿಸುತ್ತಾನೆ ಎಂದು ನಂಬಿದ್ದರು.”
‘ಸಂಪತ್ಸಮೃದ್ಧಿಯ ಸಿದ್ಧಾಂತ’ ಎಂದೇ ಜನಜನಿತವಾಗಿರುವ ಈ ರೀತಿಯ ನಂಬಿಕೆಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿವೆ. ಅಂಥ ನಂಬಿಕೆಗಳನ್ನು ಬೋಧಿಸುವ ಚರ್ಚುಗಳಿಗೆ ಜನರು ಹಿಂಡುಹಿಂಡಾಗಿ ಹೋಗುತ್ತಾರೆ. ಇದು ವಿಶೇಷವಾಗಿ ಬ್ರಸಿಲ್ನಂಥ ಲ್ಯಾಟಿನ್-ಅಮೆರಿಕನ್ ದೇಶಗಳಲ್ಲಿ ಸತ್ಯ. ಆದರೆ ದೇವರು ತನ್ನ ಭಕ್ತರಿಗೆ ಸಿರಿಸಂಪತ್ತು ಕೊಡುವೆನೆಂದು ಮಾತುಕೊಟ್ಟಿರುವುದು ನಿಜವೋ? ಪ್ರಾಚೀನಕಾಲದಲ್ಲಿದ್ದ ದೇವಭಕ್ತರೆಲ್ಲರೂ ಶ್ರೀಮಂತರಾಗಿದ್ದರೋ?
ಬೈಬಲಿನ ಹೀಬ್ರು ಶಾಸ್ತ್ರಗ್ರಂಥ ಎಂಬ ಭಾಗವು ದೇವರ ಆಶೀರ್ವಾದದಿಂದ ಶ್ರೀಮಂತರಾದ ಅನೇಕರ ಕುರಿತು ತಿಳಿಸುತ್ತದೇನೋ ನಿಜ. ಉದಾಹರಣೆಗೆ, “ನಿಮ್ಮ ದೇವರಾದ ಯೆಹೋವನನ್ನು ಜ್ಞಾಪಕಮಾಡಿಕೊಳ್ಳಬೇಕು. . . . ಆಸ್ತಿಯನ್ನು ಸಂಪಾದಿಸುವ ಬಲವನ್ನು ನಿಮಗೆ ಕೊಡುವಾತನು ಆತನೇ” ಎನ್ನುತ್ತದೆ ಧರ್ಮೋಪದೇಶಕಾಂಡ 8:18 (NIBV). ಇದು, ಇಸ್ರಾಯೇಲ್ ಜನಾಂಗವು ದೇವರಿಗೆ ವಿಧೇಯರಾದರೆ ಆತನು ಅವರನ್ನು ಒಂದು ಸಂಪದ್ಭರಿತ ಜನಾಂಗವನ್ನಾಗಿ ಮಾಡುವನೆಂದು ಅವರಿಗೆ ಕೊಡಲಾದ ಆಶ್ವಾಸನೆಯಾಗಿತ್ತು.
ಹಾಗಾದರೆ ವೈಯಕ್ತಿಕವಾಗಿ ಒಬ್ಬೊಬ್ಬರ ಕುರಿತೇನು? ಯೋಬ ಎಂಬ ದೇವಭಕ್ತ ಮನುಷ್ಯ ತುಂಬ ಶ್ರೀಮಂತನಾಗಿದ್ದ. ಆದರೆ ಸೈತಾನನು ಅವನ ಆಸ್ತಿಪಾಸ್ತಿಯನ್ನೆಲ್ಲಾ ನಷ್ಟಪಡಿಸಿ ಬಡತನಕ್ಕೆ ನೂಕಿದ ಬಳಿಕ ಯೆಹೋವ ದೇವರು ಅವನಿಗೆ ಆ ಆಸ್ತಿಯ ‘ಎರಡರಷ್ಟನ್ನು’ ಕೊಟ್ಟನು. (ಯೋಬ 1:3; 42:10) ಇನ್ನೊಬ್ಬ ದೇವಭಕ್ತ ಮನುಷ್ಯನಾದ ಅಬ್ರಹಾಮ ಸಹ “ಬಹು ಐಶ್ವರ್ಯವಂತನಾಗಿದ್ದನು; ಅವನಿಗೆ ಪಶುಗಳೂ ಬೆಳ್ಳಿಬಂಗಾರವು ಇದ್ದವು” ಎಂದು ಆದಿಕಾಂಡ 13:2 ಹೇಳುತ್ತದೆ. ಒಮ್ಮೆ ಪೂರ್ವದ ನಾಲ್ಕು ಮಂದಿ ಅರಸರ ಸೈನ್ಯಗಳು ಅಬ್ರಹಾಮನ ಸೋದರಳಿಯ ಲೋಟನನ್ನು ಸೆರೆಹಿಡಿದವು. ಆಗ ಅಬ್ರಹಾಮ, ‘ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡನು.’ (ಆದಿಕಾಂಡ 14:14) ಶಸ್ತ್ರಾಸ್ತ್ರಗಳನ್ನು ಬಳಸಲು ಸಮರ್ಥರಾಗಿದ್ದ 318 ಮಂದಿ ‘ಶಿಕ್ಷಿತ ಆಳುಗಳಿದ್ದ’ ಅಬ್ರಹಾಮನ ಪರಿವಾರ ತುಂಬ ದೊಡ್ಡದಾಗಿದ್ದಿರಬೇಕು. ಇಷ್ಟೊಂದು ದೊಡ್ಡ ಪರಿವಾರವನ್ನು ನೋಡಿಕೊಂಡನು ಎಂಬ ವಾಸ್ತವಾಂಶವು ಅವನ ಬಳಿ ಕುರಿದನ ಮೊದಲಾದ ಪಶುಗಳು ಬಹಳವಾಗಿದ್ದು ಅವನು ತುಂಬ ಶ್ರೀಮಂತನಾಗಿದ್ದನೆಂದು ಸೂಚಿಸುತ್ತದೆ.
ಹೌದು, ದೇವರ ಪ್ರಾಚೀನಕಾಲದ ನಂಬಿಗಸ್ತ ಸೇವಕರಲ್ಲಿ ಅನೇಕರು ಶ್ರೀಮಂತರಾಗಿದ್ದರು. ಅಬ್ರಹಾಮ, ಇಸಾಕ, ಯಾಕೋಬ, ದಾವೀದ, ಸೊಲೊಮೋನರು ಅವರಲ್ಲಿ ಕೆಲವರು. ಹಾಗಾದರೆ ದೇವರು ತನ್ನ ಪ್ರತಿಯೊಬ್ಬ ಸೇವಕನಿಗೆ ಶ್ರೀಮಂತಿಕೆ ಕೊಡುತ್ತಾನೆಂದು ಇದರರ್ಥವೋ? ಬಡಜನರ ಮೇಲೆ ದೇವರ ಆಶೀರ್ವಾದವಿಲ್ಲವೆಂದೋ? ಈ ಪ್ರಶ್ನೆಗಳನ್ನು ಮುಂದಿನ ಲೇಖನ ಚರ್ಚಿಸುತ್ತದೆ. (w09 09/01)