ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ಯೇಸು ಒಬ್ಬ ಐತಿಹಾಸಿಕ ವ್ಯಕ್ತಿ ಎಂಬದಕ್ಕೆ ಬೈಬಲ್‌ ಅಲ್ಲದೆ ಬೇರೆ ಸಾಕ್ಷ್ಯವೇನಾದರೂ ಇದೆಯೇ?

ಯೇಸುವಿನ ಜೀವಿತಾವಧಿಯ ಸ್ವಲ್ಪ ಸಮಯಾನಂತರ ಬದುಕಿದ್ದ ಐಹಿಕ ಬರಹಗಾರರಲ್ಲಿ ಅನೇಕರು ನಿರ್ದಿಷ್ಟವಾಗಿ ಆತನ ಬಗ್ಗೆ ಉಲ್ಲೇಖಿಸಿದ್ದಾರೆ. ಅವರಲ್ಲೊಬ್ಬನು ಕೊರ್ನೇಲ್ಯಸ್‌ ಟ್ಯಾಸಿಟಸ್‌. ಈತನು ಚಕ್ರವರ್ತಿಗಳ ಆಳ್ವಿಕೆಯಡಿಯಿದ್ದ ರೋಮ್‌ನ ಇತಿಹಾಸವನ್ನು ದಾಖಲಿಸಿದನು. ಕ್ರಿ.ಶ. 64ರಲ್ಲಿ ರೋಮ್‌ ಅನ್ನು ನೆಲಸಮಗೊಳಿಸಿದ ಬೆಂಕಿಯ ಬಗ್ಗೆ ಟ್ಯಾಸಿಟಸ್‌ ಬರೆಯುತ್ತಾ, ಆ ದುರಂತಕ್ಕೆ ಸಾಮ್ರಾಟ ನೀರೊ ಕಾರಣ ಎಂಬ ವದಂತಿ ಇತ್ತೆಂದೂ ನೀರೊ ಈ ಆರೋಪವನ್ನು ಕ್ರೈಸ್ತರೆಂದು ಕರೆಯಲಾಗುತ್ತಿದ್ದ ಗುಂಪಿನ ಮೇಲೆ ಹೊರಿಸಿದನೆಂದೂ ಹೇಳಿದನು. ಅವನು ಬರೆದದ್ದು: “ಕ್ರೈಸ್ತರು ಎಂಬ ಹೆಸರು ಯಾರಿಂದ ಬಂತೊ ಆ ಕ್ರಿಸ್ಟಸ್‌ ಎಂಬವನು ತಿಬೇರಿಯನ ಆಳ್ವಿಕೆಯ ಕಾಲದಲ್ಲಿ ಪೊಂತ್ಯ ಪಿಲಾತನೆಂಬ ಆಡಳಿತಾಧಿಕಾರಿಯ ಅಪ್ಪಣೆಯ ಮೇರೆಗೆ ಹತಿಸಲ್ಪಟ್ಟನು.”—ಆ್ಯನಲ್ಸ್‌ XV, 44.

ಯೆಹೂದಿ ಇತಿಹಾಸಗಾರ ಫ್ಲೇವಿಯಸ್‌ ಜೋಸೀಫಸ್‌ ಸಹ ಯೇಸುವಿನ ಬಗ್ಗೆ ಉಲ್ಲೇಖಿಸಿದನು. ಕ್ರಿ.ಶ. 62ರಷ್ಟಕ್ಕೆ ಯೂದಾಯದ ರೋಮನ್‌ ಗವರ್ನರ್‌ ಆಗಿದ್ದ ಫೆಸ್ಟಸ್‌ನ ಮರಣ ಮತ್ತು ಅವನ ಉತ್ತರಾಧಿಕಾರಿ ಆಲ್ಬಿನಸ್‌ ಅಧಿಕಾರಕ್ಕೆ ಬಂದ ನಡುವಿನ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಜೋಸೀಫಸ್‌ ತಿಳಿಸಿದನು. ಆ ಸಮಯದಲ್ಲಿ ಮಹಾ ಯಾಜಕ ಅನಾನಸ್‌ (ಅನ್ನನು) “ಸನ್ಹೇದ್ರಿನ್‌ನ ನ್ಯಾಯಾಧಿಪತಿಗಳನ್ನು ಒಟ್ಟುಸೇರಿಸಿ, ಅವರ ಮುಂದೆ ಯಾಕೋಬ ಎಂಬ ಹೆಸರಿನ ವ್ಯಕ್ತಿಯನ್ನೂ ಇನ್ನಿತರರನ್ನೂ ತಂದು ನಿಲ್ಲಿಸಿದನು. ಈ ಯಾಕೋಬನು ಕ್ರಿಸ್ತನೆಂದು ಕರೆಯಲಾದ ಯೇಸುವಿನ ತಮ್ಮ” ಎಂದು ಜೋಸೀಫಸ್‌ ಹೇಳುತ್ತಾನೆ.—ಜ್ಯೂವಿಷ್‌ ಆ್ಯಂಟಿಕ್ವಿಟಿಸ್‌, XX, 200 (ix, 1). (w10-E 04/01)

ಯೇಸುವನ್ನು ಕ್ರಿಸ್ತ ಎಂದು ಏಕೆ ಕರೆಯಲಾಯಿತು?

ಮರಿಯಳು ಗರ್ಭಿಣಿಯಾಗುವಳೆಂದು ತಿಳಿಸಲು ಬಂದ ಗಬ್ರಿಯೇಲ ದೇವದೂತನು, ಹುಟ್ಟಲಿರುವ ಗಂಡುಮಗುವಿಗೆ ಯೇಸು ಎಂಬ ಹೆಸರಿಡಬೇಕೆಂದು ಹೇಳಿದ್ದರ ಬಗ್ಗೆ ಸುವಾರ್ತಾ ವೃತ್ತಾಂತಗಳು ತಿಳಿಸುತ್ತವೆ. (ಲೂಕ 1:31) ಬೈಬಲ್‌ ಸಮಯಗಳಲ್ಲಿ ಯೆಹೂದ್ಯರ ಮಧ್ಯೆ ಅನೇಕರಿಗೆ ಆ ಹೆಸರಿತ್ತು. ಯೆಹೂದಿ ಇತಿಹಾಸಗಾರ ಜೋಸೀಫಸನು ಬೈಬಲ್‌ನಲ್ಲಿ ದಾಖಲಾಗಿರುವ ‘ಯೇಸು’ ಎಂಬ ಹೆಸರುಳ್ಳ ವ್ಯಕ್ತಿಗಳ ಕುರಿತಲ್ಲದೆ ಅದೇ ಹೆಸರಿನ ಬೇರೆ 12 ವ್ಯಕ್ತಿಗಳ ಕುರಿತೂ ಬರೆದನು. ಮರಿಯಳ ಮಗನನ್ನು “ನಜರೇತಿನ ಯೇಸು” ಎಂದು ಕರೆಯಲಾಯಿತು. ಇದರಿಂದ ಯೇಸುವನ್ನು ನಜರೇತ್‌ ಊರಿನವನೆಂದು ಗುರುತಿಸಲಿಕ್ಕಾಯಿತು. (ಮಾರ್ಕ 10:47) ಆತನು “ಕ್ರಿಸ್ತ” ಅಥವಾ ಯೇಸು ಕ್ರಿಸ್ತ ಎಂದು ಕೂಡ ಖ್ಯಾತನಾದನು. (ಮತ್ತಾಯ 16:16) ಈ ಪದದ ಅರ್ಥವೇನು?

“ಕ್ರಿಸ್ತ” ಎಂಬ ಪದದ ಮೂಲರೂಪ ಕ್ರಿಸ್ಟೋಸ್‌ ಎಂಬ ಗ್ರೀಕ್‌ ಪದವಾಗಿದೆ. ಇದು ಮತ್ತು ಮಶಿಅಕ್‌ (ಮೆಸ್ಸೀಯ) ಎಂಬ ಹೀಬ್ರು ಪದ ಎರಡೂ ಒಂದೇ. ಇವೆರಡರ ಅರ್ಥ “ಅಭಿಷಿಕ್ತನು.” ಯೇಸುವಿಗೆ ಮುಂಚೆ ಈ ಪದವನ್ನು ಇತರರಿಗೂ ಯೋಗ್ಯವಾಗಿ ಅನ್ವಯಿಸಲಾಗಿತ್ತು. ಉದಾಹರಣೆಗೆ ಮೋಶೆ, ಆರೋನ, ಅರಸ ದಾವೀದ ಇವರೆಲ್ಲರನ್ನೂ ಅಭಿಷಿಕ್ತರೆಂದು ಹೇಳಲಾಗಿತ್ತು. ಅಂದರೆ ದೇವರು ಕೊಟ್ಟಿದ್ದ ಜವಾಬ್ದಾರಿಯುತ ಮತ್ತು ಅಧಿಕಾರಯುತ ಸ್ಥಾನಕ್ಕೆ ಅವರನ್ನು ನೇಮಿಸಲಾಗಿತ್ತು. (ಯಾಜಕಕಾಂಡ 4:3; 8:12; 2 ಸಮುವೇಲ 22:51; ಇಬ್ರಿಯ 11:24-26) ಮುಂತಿಳಿಸಲಾಗಿದ್ದ ಮೆಸ್ಸೀಯನಾದ ಯೇಸು ಯೆಹೋವನ ಸರ್ವೋಚ್ಚ ಪ್ರತಿನಿಧಿಯಾಗಿದ್ದನು. ಆದ್ದರಿಂದ ಯೇಸು ಸೂಕ್ತವಾಗಿಯೇ “ಕ್ರಿಸ್ತನು, ಜೀವವುಳ್ಳ ದೇವರ ಮಗನು” ಎಂಬ ಬಿರುದನ್ನು ಪಡೆದನು.—ಮತ್ತಾಯ 16:16; ದಾನಿಯೇಲ 9:25. (w10-E 04/01)

[ಪುಟ 15ರಲ್ಲಿರುವ ಚಿತ್ರ]

ಕಲಾಕಾರನ ಚಿತ್ರಣಕ್ಕನುಸಾರ ಫ್ಲೇವಿಯಸ್‌ ಜೋಸೀಫಸ್‌