ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಪದ ಕುರಿತ ಸತ್ಯ

ಪಾಪದ ಕುರಿತ ಸತ್ಯ

ಪಾಪದ ಕುರಿತ ಸತ್ಯ

ಜ್ವರವಿರುವ ಒಬ್ಬ ರೋಗಿ ಉಷ್ಣತಾಮಾಪಕವನ್ನು ಮುರಿದುಹಾಕಿದ ಮಾತ್ರಕ್ಕೆ ತನಗೆ ಜ್ವರವಿಲ್ಲ ಎಂದು ಅವನು ರುಜುಪಡಿಸಲು ಸಾಧ್ಯವಾ? ಖಂಡಿತ ಇಲ್ಲ! ಅದೇ ರೀತಿಯಲ್ಲಿ, ಪಾಪದ ಕುರಿತ ದೇವರ ದೃಷ್ಟಿಕೋನವನ್ನು ಅನೇಕರು ತಿರಸ್ಕರಿಸುತ್ತಾರೆಂಬ ಮಾತ್ರಕ್ಕೆ ಪಾಪ ಎಂಬುದೇ ಇಲ್ಲ ಎಂದು ಹೇಳಸಾಧ್ಯವಿಲ್ಲ. ದೇವರ ವಾಕ್ಯವಾದ ಬೈಬಲ್‌ ಪಾಪದ ಕುರಿತು ಬಹಳಷ್ಟನ್ನು ತಿಳಿಸುತ್ತದೆ. ಅದೇನನ್ನುತ್ತದೆ?

ಎಲ್ಲರೂ ತಪ್ಪಿಬೀಳುತ್ತಾರೆ

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಅಪೊಸ್ತಲ ಪೌಲನು, “ನಾನು ಬಯಸುವ ಒಳ್ಳೇದನ್ನು ಮಾಡದೆ ಬಯಸದಿರುವ ಕೆಟ್ಟದ್ದನ್ನೇ ಮಾಡುತ್ತಿದ್ದೇನೆ” ಎಂದು ಹತಾಶೆ ವ್ಯಕ್ತಪಡಿಸಿದನು. (ರೋಮನ್ನರಿಗೆ 7:19) ನಮ್ಮಲ್ಲಿ ಪ್ರತಿಯೊಬ್ಬರ ಪರಿಸ್ಥಿತಿಯೂ ಅದೇ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಬಹುಶಃ ನಾವು ಬೈಬಲಿನಲ್ಲಿರುವ ದಶಾಜ್ಞೆಗಳಿಗನುಸಾರ ಅಥವಾ ಉತ್ತಮ ನಡತೆಯ ಬೇರಾವುದೇ ಮಟ್ಟಗಳಿಗನುಸಾರ ಜೀವಿಸಲು ಇಚ್ಛಿಸಬಹುದು. ಹಾಗಿದ್ದರೂ ನಾವೆಲ್ಲರೂ ತಪ್ಪಿಬೀಳುತ್ತೇವೆ. ನಾವು ಬೇಕು ಬೇಕೆಂದು ಹಾಗೆ ಮಾಡುವುದಿಲ್ಲ. ನಾವು ದುರ್ಬಲರಾಗಿರುವುದೇ ಅದಕ್ಕೆ ಕಾರಣ. ಈ ದುರ್ಬಲತೆಗೆ ಕಾರಣವೇನು? ಪೌಲನೇ ವಿವರಿಸುವುದು: “ನಾನು ಬಯಸದಿರುವುದನ್ನೇ ಮಾಡುತ್ತೇನಾದರೆ ಅದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಆಗಿದೆ.”—ರೋಮನ್ನರಿಗೆ 7:20.

ಪೌಲನಂತೆ ಎಲ್ಲ ಮಾನವರಲ್ಲೂ ಹುಟ್ಟಿನಿಂದಲೇ ಬಂದಿರುವ ದೌರ್ಬಲ್ಯಗಳಿವೆ. ಇವು ಬಾಧ್ಯತೆಯಾಗಿ ಬಂದಿರುವ ಪಾಪ ಮತ್ತು ಅಪರಿಪೂರ್ಣತೆ ಎಲ್ಲರಲ್ಲೂ ಇದೆ ಎಂಬುದಕ್ಕೆ ಪುರಾವೆ. ಪೌಲನು ಹೇಳಿದ್ದು: “ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ.” ಈ ಸ್ಥಿತಿಗೆ ಕಾರಣವೇನು? ಪೌಲನು ಮುಂದುವರಿಸಿ ಹೀಗೆ ಹೇಳಿದನು: “ಒಬ್ಬ ಮನುಷ್ಯನಿಂದ [ಆದಾಮನಿಂದ] ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮನ್ನರಿಗೆ 3:23; 5:12.

ನಮ್ಮ ಮೊದಲ ಹೆತ್ತವರು ಮಾಡಿದ ತಪ್ಪಿನ ಕಾರಣ ನಾವು ದೇವರಿಂದ ದೂರವಾದೆವು ಹಾಗೂ ಆರಂಭದಲ್ಲಿ ಮಾನವರಿಗಿದ್ದ ಪರಿಪೂರ್ಣತೆಯನ್ನು ಕಳೆದುಕೊಂಡೆವು ಎಂದು ಬೈಬಲ್‌ ಬೋಧಿಸುತ್ತದೆ. ಆದರೆ ಈ ವಿಚಾರವನ್ನು ಅನೇಕರು ಒಪ್ಪಿಕೊಳ್ಳುವುದಿಲ್ಲ. ಯೇಸುವಾದರೋ ಆದಿಕಾಂಡ ಪುಸ್ತಕದ ಆರಂಭದ ಅಧ್ಯಾಯಗಳಿಂದ ಉಲ್ಲೇಖಿಸುವ ಮೂಲಕ, ತಾನು ಆದಾಮಹವ್ವರ ಕುರಿತ ವೃತ್ತಾಂತವನ್ನು ನಂಬುತ್ತೇನೆ ಎಂದು ತೋರಿಸಿದನು.—ಆದಿಕಾಂಡ 1:27; 2:24; 5:2; ಮತ್ತಾಯ 19:1-5.

ಯೇಸು ಭೂಮಿಗೆ ಬಂದದ್ದು ತನ್ನಲ್ಲಿ ನಂಬಿಕೆಯಿಡುವವರನ್ನು ಅವರ ಪಾಪಭರಿತ ಸ್ಥಿತಿಯಿಂದ ವಿಮೋಚಿಸಲಿಕ್ಕಾಗಿ ಎಂಬುದು ಬೈಬಲ್‌ ಸಂದೇಶದ ಒಂದು ಆಧಾರಸ್ತಂಭವಾಗಿದೆ. (ಯೋಹಾನ 3:16) ಮಾನವರ ಹಿಡಿತದಲ್ಲಿಲ್ಲದ ಪಾಪಮಯ ಸ್ಥಿತಿಯಿಂದ ಅವರನ್ನು ರಕ್ಷಿಸಲು ದೇವರು ಮಾಡಿರುವ ಏರ್ಪಾಡಿನಲ್ಲಿ ನಂಬಿಕೆಯಿಟ್ಟರೆ ಮಾತ್ರ ಭವಿಷ್ಯದಲ್ಲಿ ನಮಗೆ ಅನಂತ ಜೀವನ ಸಿಗುವುದು. ಆದರೆ ನಮ್ಮನ್ನು ಪಾಪದಿಂದ ರಕ್ಷಿಸಲು ದೇವರು ಮಾಡಿರುವ ಏರ್ಪಾಡಿನಲ್ಲಿ ನಂಬಿಕೆ ಇಡಬೇಕಾದರೆ ಮೊದಲಾಗಿ ಆತನ ದೃಷ್ಟಿಯಲ್ಲಿ ಪಾಪವೆಂದರೆ ಏನೆಂಬುದನ್ನು ನಾವು ಸ್ಪಷ್ಟವಾಗಿ ಗ್ರಹಿಸಬೇಕು.

ಯೇಸುವಿನ ಯಜ್ಞ ಅಗತ್ಯವಾಗಿತ್ತು ಏಕೆ?

ಯೆಹೋವನು ಮೊದಲ ಮನುಷ್ಯನಾದ ಆದಾಮನಿಗೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಕೊಟ್ಟನು. ಆದರೆ ಅವನು ದೇವರ ವಿರುದ್ಧ ತಿರುಗಿಬಿದ್ದಲ್ಲಿ ಅಮೋಘವಾದ ಆ ಪ್ರತೀಕ್ಷೆಯನ್ನು ಕಳೆದುಕೊಳ್ಳಲಿದ್ದನು. ಆದಾಮನು ತಿರುಗಿಬಿದ್ದು ಪಾಪಿಯಾದನು. (ಆದಿಕಾಂಡ 2:15-17; 3:6) ಅವನು ದೇವರ ಉದ್ದೇಶಕ್ಕೆ ವಿರುದ್ಧವಾಗಿ ನಡೆದುಕೊಂಡನು. ಇದರಿಂದ ಅವನು ಪರಿಪೂರ್ಣ ಸ್ಥಿತಿಯಲ್ಲಿ ಉಳಿಯಲಿಲ್ಲ. ಅಲ್ಲದೆ ದೇವರೊಂದಿಗಿನ ತನ್ನ ಸಂಬಂಧವನ್ನೂ ಹಾಳುಮಾಡಿಕೊಂಡನು. ದೇವರ ನಿಯಮವನ್ನು ಮುರಿಯುವ ಮೂಲಕ ಪಾಪಮಾಡಿದ ಆದಾಮನು ವೃದ್ಧನಾಗತೊಡಗಿದನು; ಕೊನೆಗೆ ಸತ್ತೇ ಹೋದನು. ದುಃಖಕರವಾಗಿ, ಆದಾಮನ ಸಂತತಿಯವರಾದ ಎಲ್ಲರೂ ಅಂದರೆ ನಾವೆಲ್ಲರೂ ಪಾಪಿಗಳಾಗಿಯೇ ಜನಿಸಿದ್ದೇವೆ ಮತ್ತು ಈ ಕಾರಣ ಸಾಯುತ್ತೇವೆ. ಹಾಗೇಕೆ?

ಉತ್ತರ ತೀರ ಸರಳ: ಅಪರಿಪೂರ್ಣ ಹೆತ್ತವರಿಂದ ಪರಿಪೂರ್ಣ ಮಕ್ಕಳು ಹುಟ್ಟಲಾರರು. ಆದಾಮನ ಸಂತತಿಯವರೆಲ್ಲರೂ ಹುಟ್ಟಿನಿಂದಲೇ ಪಾಪಿಗಳು. ಈ “ಪಾಪವು ಕೊಡುವ ಸಂಬಳ ಮರಣ” ಎಂದು ಅಪೊಸ್ತಲ ಪೌಲನು ಹೇಳಿದನು. (ರೋಮನ್ನರಿಗೆ 6:23) ಹಾಗಿದ್ದರೂ ಆ ವಚನದ ಎರಡನೇ ಭಾಗವು ನಮಗೆ ಈ ನಿರೀಕ್ಷೆಯನ್ನು ಕೊಡುತ್ತದೆ: “ಆದರೆ ದೇವರು ಕೊಡುವ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕವಾಗಿರುವ ನಿತ್ಯಜೀವ.” ಅದರರ್ಥ ವಿಧೇಯತೆ ಹಾಗೂ ಗಣ್ಯತೆಯನ್ನು ತೋರಿಸುವ ಮಾನವಕುಲವು ಯೇಸುವಿನ ಯಜ್ಞಾರ್ಪಿತ ಮರಣದ ಮುಖಾಂತರ ಆದಾಮನ ಪಾಪದ ಪರಿಣಾಮಗಳಿಂದ ವಿಮುಕ್ತಗೊಳ್ಳಸಾಧ್ಯವಿದೆ. * (ಮತ್ತಾಯ 20:28; 1 ಪೇತ್ರ 1:18, 19) ಈ ಸಂಗತಿ ಏನು ಮಾಡುವಂತೆ ನಿಮ್ಮನ್ನು ಪ್ರೇರಿಸಬೇಕು?

ಕ್ರಿಸ್ತನ ಪ್ರೀತಿಯು “ನಮ್ಮನ್ನು ಒತ್ತಾಯಮಾಡುತ್ತದೆ”

ಆ ಪ್ರಶ್ನೆಗೆ ಉತ್ತರವನ್ನು ಅಪೊಸ್ತಲ ಪೌಲನು ದೇವಪ್ರೇರಣೆಯಿಂದ ಬರೆದನು: “ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಏಕೆಂದರೆ ಒಬ್ಬ ಮನುಷ್ಯನು ಎಲ್ಲರಿಗೋಸ್ಕರ ಸತ್ತನೆಂದು ನಾವು ತೀರ್ಮಾನಿಸಿದ್ದೇವೆ . . . ಜೀವಿಸುವವರು ಇನ್ನು ಮುಂದೆ ಸ್ವತಃ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎಬ್ಬಿಸಲ್ಪಟ್ಟವನಿಗಾಗಿ ಜೀವಿಸುವಂತೆ ಅವನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:14, 15) ಯೇಸುವಿನ ಯಜ್ಞ ಪಾಪದ ಪರಿಣಾಮಗಳಿಂದ ತನ್ನನ್ನು ಬಿಡುಗಡೆಮಾಡಬಲ್ಲದು ಎಂದು ನಂಬಿ ಮಾನ್ಯಮಾಡುವ ವ್ಯಕ್ತಿಯು ತನ್ನ ಕೃತಜ್ಞತೆಯನ್ನು ಹೇಗೆ ತೋರಿಸಬಹುದು? ದೇವರು ಇಷ್ಟಪಡುವಂಥ ವಿಧದಲ್ಲಿ ತನ್ನ ಜೀವನವನ್ನು ನಡೆಸಲು ಪ್ರಯತ್ನಿಸುವ ಮೂಲಕವೇ. ಇದರಲ್ಲಿ, ದೇವರು ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದೂ ಬೈಬಲ್‌ ಮಟ್ಟಗಳಿಗನುಸಾರ ತನ್ನ ಮನಸ್ಸಾಕ್ಷಿಯನ್ನು ತರಬೇತುಗೊಳಿಸಿ ಅವಕ್ಕನುಗುಣವಾಗಿ ಜೀವಿಸುವುದೂ ಸೇರಿದೆ.—ಯೋಹಾನ 17:3, 17.

ಪಾಪ ಮಾಡಿದರೆ ಯೆಹೋವ ದೇವರೊಂದಿಗಿನ ನಮ್ಮ ಸಂಬಂಧವು ಹಾಳಾಗುತ್ತದೆ. ಉದಾಹರಣೆಗೆ, ರಾಜ ದಾವೀದನು ಬತ್ಷೆಬೆಯೊಂದಿಗೆ ವ್ಯಭಿಚಾರಮಾಡಿ ಅವಳ ಗಂಡನ ಕೊಲೆಮಾಡಿಸಿದ ಬಳಿಕ ತನ್ನ ಪಾಪದ ಗಂಭೀರತೆಯನ್ನು ಅರಿತುಕೊಂಡನು. ಆಗ ಅವನು ತುಂಬ ಅವಮಾನದಿಂದ ತಲೆತಗ್ಗಿಸಿದನು. ಆದರೆ ತನಗಾದ ಅವಮಾನಕ್ಕಿಂತಲೂ ದೇವರಿಗೆ ಇದು ನೋವನ್ನುಂಟುಮಾಡಿತಲ್ಲ ಎಂದು ಅವನು ಹೆಚ್ಚು ನೊಂದುಕೊಂಡನು. ಅವನು ನೊಂದುಕೊಂಡದ್ದು ಸರಿಯಾಗಿತ್ತು. ಯೆಹೋವನ ಮುಂದೆ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾ ಅವನು, “ನಿನಗೇ ಕೇವಲ ನಿನಗೇ ತಪ್ಪುಮಾಡಿದ್ದೇನೆ; ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವದನ್ನೇ ಮಾಡಿದ್ದೇನೆ” ಎಂದನು. (ಕೀರ್ತನೆ 51:4) ಅದೇ ರೀತಿಯಲ್ಲಿ, ಯೋಸೇಫನು ವ್ಯಭಿಚಾರವನ್ನು ಮಾಡುವ ಪ್ರಲೋಭನೆಗೊಳಗಾದಾಗ, “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಕೇಳುವಂತೆ ಅವನ ಮನಸ್ಸಾಕ್ಷಿ ಪ್ರಚೋದಿಸಿತು.—ಆದಿಕಾಂಡ 39:9.

ಪಾಪ ಮಾಡಿ ಸಿಕ್ಕಿಬಿದ್ದಾಗ ನಮಗೆ ಅವಮಾನವಾಗಬಹುದು ಅಥವಾ ಕೆಲವು ಆದರ್ಶಗಳನ್ನು ಪಾಲಿಸದಿದ್ದಾಗ ನಾವು ಸಮಾಜಕ್ಕೆ ಉತ್ತರಕೊಡಬೇಕಾಗಿ ಬರಬಹುದು ನಿಜ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಲೈಂಗಿಕತೆ, ಪ್ರಾಮಾಣಿಕತೆ, ಗೌರವ, ಆರಾಧನೆ ಮುಂತಾದ ವಿಷಯಗಳಲ್ಲಿನ ದೇವರ ನಿಯಮಗಳನ್ನು ಮುರಿದಾಗ ಆತನೊಂದಿಗಿನ ನಮ್ಮ ವೈಯಕ್ತಿಕ ಸಂಬಂಧ ಹಾಳಾಗುತ್ತದೆ. ನಾವು ಬೇಕುಬೇಕೆಂದೇ ಪಾಪಮಾಡುತ್ತಾ ಇರುವಲ್ಲಿ ನಮ್ಮನ್ನೇ ದೇವರ ವೈರಿಗಳನ್ನಾಗಿ ಮಾಡಿಕೊಳ್ಳುವೆವು. ಈ ಸತ್ಯವು, ನಾವು ಪಾಪದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಬೇಕು.—1 ಯೋಹಾನ 3:4, 8.

ಹಾಗಾದರೆ ಮನುಷ್ಯರಿಗಿದ್ದ ಪಾಪದ ಪ್ರಜ್ಞೆ ಎಲ್ಲಿ ಹೋಯಿತು? ಎಲ್ಲೂ ಹೋಗಿಲ್ಲ. ಜನರು ಪಾಪದ ಗಂಭೀರತೆಯನ್ನು ಕಡಿಮೆಮಾಡಲಿಕ್ಕೋಸ್ಕರ ಅದನ್ನು ಬೇರೆ ಬೇರೆ ಹೆಸರಿನಿಂದ ಕರೆಯಲು ಆರಂಭಿಸಿದ್ದಾರೆ ಅಷ್ಟೇ. ಅನೇಕರು ತಮ್ಮ ಮನಸ್ಸಾಕ್ಷಿಗಳನ್ನು ಒಂದೋ ಜಡಗೊಳಿಸಿದ್ದಾರೆ ಇಲ್ಲವೆ ಅಲಕ್ಷಿಸಿದ್ದಾರೆ. ಆದರೆ ದೇವರ ಅನುಗ್ರಹವನ್ನು ಪಡೆಯಲಿಚ್ಛಿಸುವ ಎಲ್ಲರೂ ಇಂಥ ಮನೋಭಾವವನ್ನು ಪ್ರತಿರೋಧಿಸಬೇಕು. ನಾವು ಈಗಾಗಲೇ ಗಮನಿಸಿದಂತೆ, ಪಾಪದ ಸಂಬಳ ಮರಣವೇ ಹೊರತು ಕೇವಲ ಘನತೆಗೆ ಧಕ್ಕೆ ಅಥವಾ ಅವಮಾನವಲ್ಲ. ಹಾಗಾಗಿ ಪಾಪವು ಜೀವ-ಮರಣದ ವಿಷಯವಾಗಿದೆ.

ಸಂತೋಷದ ಸುದ್ದಿಯೇನೆಂದರೆ, ನಾವು ನಮ್ಮ ಪಾಪಗಳಿಗಾಗಿ ನಿಜವಾಗಿ ಪಶ್ಚಾತ್ತಾಪಪಟ್ಟು ಅವನ್ನು ಬಿಟ್ಟುಬಿಡುವಲ್ಲಿ ಯೇಸುವಿನ ಯಜ್ಞದ ವಿಮೋಚನಾ ಮೌಲ್ಯದ ಮುಖಾಂತರ ನಮಗೆ ಕ್ಷಮಾಪಣೆ ಲಭಿಸಸಾಧ್ಯವಿದೆ. ಪೌಲನು ಈ ವಿಷಯದಲ್ಲಿ ಹೇಳಿದ್ದು: “ಯಾರ ಅಧರ್ಮದ ಕೃತ್ಯಗಳು ಮನ್ನಿಸಲ್ಪಟ್ಟಿವೆಯೋ ಮತ್ತು ಯಾರ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಅವರು ಸಂತೋಷಿತರು; ಯಾವನ ಪಾಪವನ್ನು ಯೆಹೋವನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲವೋ ಆ ಮನುಷ್ಯನು ಸಂತೋಷಿತನು.”—ರೋಮನ್ನರಿಗೆ 4:7, 8. (w10-E 06/01)

[ಪಾದಟಿಪ್ಪಣಿ]

^ ಪ್ಯಾರ. 10 ಯೇಸುವಿನ ಯಜ್ಞಾರ್ಪಿತ ಮರಣವು ವಿಧೇಯ ಮಾನವಕುಲವನ್ನು ಹೇಗೆ ರಕ್ಷಿಸಸಾಧ್ಯವಿದೆ ಎಂಬುದರ ಪೂರ್ಣ ವಿವರಣೆಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಪುಟ 47-54 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 16ರಲ್ಲಿರುವ ಚೌಕ/ ಚಿತ್ರ]

ಚರ್ಚ್‌ ಬೋಧನೆಯೊಂದು ರದ್ದಾಯಿತು

ಚರ್ಚಿಗೆ ಹೋಗುವ ಅಧಿಕಾಂಶ ಜನರಿಗೆ ಲಿಂಬೋ ಬೋಧನೆಯು ಯಾವಾಗಲೂ ಅಸ್ಪಷ್ಟವಾಗಿಯೇ ಉಳಿದಿದೆ. ಇತ್ತೀಚೆಗಿನ ದಶಕಗಳಲ್ಲಿ ಈ ಬೋಧನೆಯು ನಿಧಾನವಾಗಿ ಮಾಸಿಹೋಗುತ್ತಿದೆ; ಎಷ್ಟರ ಮಟ್ಟಿಗೆಯೆಂದರೆ ಅದನ್ನು ಕ್ಯಾಟಕಿಸಮ್‌ ಕ್ಲಾಸ್‌ಗಳಲ್ಲಿ ಬೋಧಿಸಲಾಗುತ್ತಿಲ್ಲ. ಕ್ಯಾಥೋಲಿಕ್‌ ಚರ್ಚ್‌ 2007ರಲ್ಲಿ ಲಿಂಬೋ ಬೋಧನೆಯನ್ನು ಅಧೀಕೃತವಾಗಿ ರದ್ದುಗೊಳಿಸಿತು. ಏಕೆ? ಏಕೆಂದರೆ “ದೀಕ್ಷಾಸ್ನಾನವಾಗದೇ ಸತ್ತುಹೋಗುವ ಶಿಶುಗಳು ರಕ್ಷಿಸಲ್ಪಡುವವು ಹಾಗೂ ಶಾಶ್ವತವಾದ ಸಂತೋಷವನ್ನು ಪಡೆಯುವವು ಎಂದು ನಂಬಲು ಮತೀಯ ಕಾರಣಗಳಿವೆ.”—ಅಂತಾರಾಷ್ಟ್ರೀಯ ಚರ್ಚ್‌ ಬೋಧನೆಗಳ ಸಮಿತಿ.

ಚರ್ಚ್‌ ಇದನ್ನು ಏಕೆ ರದ್ದುಗೊಳಿಸಿತು? ಫ್ರೆಂಚ್‌ ಪತ್ರಕರ್ತ ಎನ್ರಿ ಟಿಂಕ್‌ ಈ ಬೋಧನೆಯ ಬಗ್ಗೆ ಹೀಗೆ ಹೇಳಿದ್ದಾರೆ: “ಹೆತ್ತವರು ತಮ್ಮ ಮಕ್ಕಳಿಗೆ ಎಷ್ಟು ಸಾಧ್ಯವೊ ಅಷ್ಟು ಬೇಗ ದೀಕ್ಷಾಸ್ನಾನ ಕೊಡಿಸುವಂತೆ ಒತ್ತಡ ಹೇರಲು ಚರ್ಚ್‌ ಮಧ್ಯಯುಗದಿಂದ 20ನೇ ಶತಮಾನದವರೆಗೆ ಆಸ್ತಿಯಂತೆ ಕಾಪಾಡಿಕೊಂಡು ಬಂದಿರುವ ಲಿಂಬೋ ಬೋಧನೆಯು ಒಂದು ಹೊರೆಯಾಗಿದೆ.” ಈ ಹೊರೆಯಿಂದ ಮುಕ್ತವಾಗಲು ಚರ್ಚ್‌ ಅದನ್ನು ರದ್ದುಗೊಳಿಸಿತು. ಆದರೆ ಈ ರದ್ದುಗೊಳಿಸುವಿಕೆ ಇನ್ನಿತರ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ.

ಸಂಪ್ರದಾಯವೋ ಬೈಬಲಾಧಾರಿತವೋ? ಇತಿಹಾಸದ ಪ್ರಕಾರ ಲಿಂಬೋ ಬೋಧನೆಯು 12ನೇ ಶತಮಾನದಲ್ಲಿ ನಡೆದ ಪರ್ಗೆಟರಿಗೆ ಸಂಬಂಧಪಟ್ಟ ಚರ್ಚೆಗಳಿಂದ ಹುಟ್ಟಿಕೊಂಡಿತು. ಮರಣದ ನಂತರ ಆತ್ಮವು ಬದುಕಿ ಉಳಿಯುತ್ತದೆ ಎಂದು ಕ್ಯಾಥೋಲಿಕ್‌ ಚರ್ಚ್‌ ಬೋಧಿಸಿತು. ದೀಕ್ಷಾಸ್ನಾನ ಪಡೆಯದೇ ಸತ್ತುಹೋದ ಮಕ್ಕಳ ಆತ್ಮಗಳು ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ; ಹಾಗಂತ ಅವು ನರಕಕ್ಕೂ ಅರ್ಹವಲ್ಲ ಎಂದು ಅದು ಕಲಿಸಿತು. ಆದುದರಿಂದ ಇಂಥ ಆತ್ಮಗಳಿಗಾಗಿ ಚರ್ಚ್‌ ಬೇರೆ ಸ್ಥಳವನ್ನು ಕಲ್ಪಿಸಿಕೊಳ್ಳಬೇಕಾಯಿತು. ಲಿಂಬೋ ಎಂಬ ಹೊಸ ಸ್ಥಳ ಜನ್ಮತಾಳಿದ್ದು ಹೀಗೆ.

ಆದರೆ, ಮರಣದ ನಂತರ ಬದುಕಿ ಉಳಿಯುವಂಥದ್ದೇನೊ ಮಾನವನಲ್ಲಿದೆ ಎಂದು ಬೈಬಲ್‌ ಬೋಧಿಸುವುದಿಲ್ಲ. ಮರಣವೆಂದರೆ ನಿದ್ರೆಯ ಹಾಗಿರುವ ಪ್ರಜ್ಞಾಹೀನ ಸ್ಥಿತಿ ಎಂದು ಅದು ತಿಳಿಸುತ್ತದೆ. (ಪ್ರಸಂಗಿ 9:5, 10; ಯೋಹಾನ 11:11-14) ಮರಣದ ನಂತರ ಬದುಕಿ ಉಳಿಯುವಂಥದ್ದೇನೂ ಮಾನವನಲ್ಲಿಲ್ಲದ ಕಾರಣ ಲಿಂಬೋ ಎಂಬ ಸ್ಥಳವು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ.

ಹೆತ್ತವರು ಕ್ರೈಸ್ತರಾಗಿರುವಾಗ ಅವರ ಮಕ್ಕಳನ್ನು ದೇವರು ಪವಿತ್ರರನ್ನಾಗಿ ಪರಿಗಣಿಸುತ್ತಾನೆ ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 7:14) ರಕ್ಷಣೆ ಹೊಂದಲು ಶಿಶುಗಳಿಗೆ ದೀಕ್ಷಾಸ್ನಾನದ ಅಗತ್ಯವಿದ್ದರೆ ಆ ಹೇಳಿಕೆಗೆ ಯಾವುದೇ ಅರ್ಥವಿರುತ್ತಿರಲಿಲ್ಲ.

ಲಿಂಬೋ ಬೋಧನೆಯು ದೇವರನ್ನು ನಿಜವಾಗಿಯೂ ಅವಮಾನಿಸುತ್ತದೆ. ಏಕೆಂದರೆ ದೇವರು ಒಬ್ಬ ನ್ಯಾಯವಂತ ಹಾಗೂ ಪ್ರೀತಿಯ ತಂದೆಯಾಗಿದ್ದಾನೆ ಎಂಬ ಚಿತ್ರಣವನ್ನು ಅದು ಕೊಡದೆ, ಕ್ರೂರ ವ್ಯಕ್ತಿಯಾಗಿದ್ದಾನೆ ಎಂಬ ಚಿತ್ರಣವನ್ನು ಕೊಡುತ್ತದೆ. (ಧರ್ಮೋಪದೇಶಕಾಂಡ 32:4; ಮತ್ತಾಯ 5:45; 1 ಯೋಹಾನ 4:8) ಆದುದರಿಂದಲೇ ಬೈಬಲಾಧಾರವಿಲ್ಲದ ಈ ಬೋಧನೆಯನ್ನು ಚರ್ಚು ರದ್ದುಗೊಳಿಸುವ ಎಷ್ಟೋ ಮುಂಚೆಯೇ ಯಥಾರ್ಥ ಮನಸ್ಸಿನ ಕ್ರೈಸ್ತರಿಗೆ ಅದು ಸರಿ ಕಂಡಿರಲಿಲ್ಲ!

[ಪುಟ 15ರಲ್ಲಿರುವ ಚಿತ್ರಗಳು]

ದೇವರ ವಾಕ್ಯಕ್ಕನುಸಾರ ಜೀವಿಸಿದರೆ ದೇವರೊಂದಿಗಿನ ಹಾಗೂ ಮಾನವರೊಂದಿಗಿನ ಸಂಬಂಧ ಉತ್ತಮಗೊಳ್ಳುತ್ತದೆ