ಜನರು ಕೆಟ್ಟ ಕೆಲಸಗಳನ್ನು ಮಾಡುವುದೇಕೆ?
ಜನರು ಕೆಟ್ಟ ಕೆಲಸಗಳನ್ನು ಮಾಡುವುದೇಕೆ?
ನಾವ್ಯಾರೂ ಪರಿಪೂರ್ಣರಲ್ಲ. ಹಾಗಾಗಿ ತಪ್ಪುಗಳನ್ನು ಮಾಡುತ್ತೇವೆ ಅಥವಾ ಏನಾದರೂ ಮಾಡಿ ಆಮೇಲೆ ವಿಷಾದಿಸುತ್ತೇವೆ. ಹೆಚ್ಚಿನವರು ಈ ಮಾತಿಗೆ ತಲೆದೂಗುತ್ತಾರೆ. ಹಾಗಿದ್ದರೂ ದಿನಂಪ್ರತಿ ನಾವು ನೇರವಾಗಿ ಇಲ್ಲವೆ ವಾರ್ತಾಮಾಧ್ಯಮದಲ್ಲಿ ನೋಡುವ, ಕೇಳುವ ಚಿಕ್ಕದೊಡ್ಡ ಅಪರಾಧಗಳಿಗೆ ಅದೊಂದೇ ಕಾರಣವೆಂದು ಹೇಳಬಹುದೋ?
ಜನರು ಇದನ್ನೂ ಒಪ್ಪಿಕೊಳ್ಳುತ್ತಾರೆ: ಮನುಷ್ಯನಲ್ಲಿ ಕುಂದುಕೊರತೆಗಳಿದ್ದರೂ ಅವನೆಂದೂ ಮೀರಿಹೋಗಬಾರದ ನೈತಿಕ ಎಲ್ಲೆಗಳಿವೆ ಮತ್ತು ಕೆಟ್ಟ ಕೆಲಸಗಳನ್ನು ಮಾಡದೇ ಇರುವ ಸಾಮರ್ಥ್ಯವೂ ಅವನಲ್ಲಿದೆ. ಯೋಚಿಸದೆ ಒಬ್ಬರ ಬಗ್ಗೆ ತಪ್ಪುವಿಷಯ ಹೇಳುವುದಕ್ಕೂ ಹೆಸರನ್ನು ಕೆಡಿಸುವ ಉದ್ದೇಶದಿಂದ ಚಾಡಿಹೇಳುವುದಕ್ಕೂ ವ್ಯತ್ಯಾಸವಿದೆ ಮತ್ತು ಗೊತ್ತಿಲ್ಲದೆ ಮಾಡುವ ಹಾನಿಗೂ ಪೂರ್ವಯೋಜಿತ ಕೊಲೆಗೂ ವ್ಯತ್ಯಾಸವಿದೆ ಎಂದು ಅನೇಕರು ಒಪ್ಪಿಕೊಳ್ಳುವರು. ಹಾಗಿದ್ದರೂ, ಎಷ್ಟೋ ಸಲ ಸಾಮಾನ್ಯ ಜನರೇ ಭೀಕರ ಕೃತ್ಯಗಳನ್ನು ನಡೆಸುತ್ತಾರೆ. ಏಕೆ? ಇಂಥವರು ಕೆಟ್ಟ ಕೆಲಸಗಳನ್ನು ಮಾಡುವುದಾದರೂ ಏಕೆ?
ಈ ವಿಷಯದ ಮೇಲೆ ಬೈಬಲ್ ಬೆಳಕು ಚೆಲ್ಲುತ್ತದೆ. ಕೆಟ್ಟ ಕೆಲಸವೆಂದು ತಿಳಿದರೂ ಜನರು ಅದನ್ನು ಮಾಡಲು ಮುಖ್ಯ ಕಾರಣಗಳೇನೆಂದು ಅದು ನಿಖರವಾಗಿ ತಿಳಿಸುತ್ತದೆ. ಆ ಕಾರಣಗಳನ್ನು ನೋಡೋಣ.
▪ “ಬಲಾತ್ಕಾರವೂ ಜ್ಞಾನಿಯನ್ನು ಹುಚ್ಚನನ್ನಾಗಿ ಮಾಡುತ್ತದೆ.”—ಪ್ರಸಂಗಿ 7:7, NIBV.
ಕೆಲವೊಮ್ಮೆ ಸನ್ನಿವೇಶಗಳ ಒತ್ತಡಕ್ಕೆ ಒಳಗಾಗಿ ತಾವೆಂದೂ ನೆನಸಿರದಂಥ ಕೆಲಸಗಳನ್ನು ಜನರು ಮಾಡುತ್ತಾರೆಂದು ಬೈಬಲ್ ಹೇಳುತ್ತದೆ. ಕೆಲವರು ಕಷ್ಟಗಳಿಗೆ, ಅನ್ಯಾಯಗಳಿಗೆ ಕೊನೆತರಬೇಕೆಂಬ ಉದ್ದೇಶದಿಂದಲೂ ಅಪರಾಧಗಳನ್ನು ಮಾಡುತ್ತಾರೆ. “ಹೆಚ್ಚಿನ ಸಂದರ್ಭಗಳಲ್ಲಿ ಜನರು ಭಯೋತ್ಪಾದಕರಾಗುವುದು ರಾಜಕೀಯ, ಸಾಮಾಜಿಕ, ಆರ್ಥಿಕ ಶಕ್ತಿಗಳ ದೌರ್ಜನ್ಯವನ್ನು ನಿಲ್ಲಿಸಲಾಗದೆ ರೊಚ್ಚಿಗೇಳುವ ಕಾರಣವೇ” ಎಂದು ನಾಗರೀಕ ಭಯೋತ್ಪಾದಕತೆ ಎಂಬ ಇಂಗ್ಲಿಷ್ ಪುಸ್ತಕ ಹೇಳುತ್ತದೆ.
▪ “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.”—1 ತಿಮೊಥೆಯ 6:10, ಸತ್ಯವೇದವು.
ಹಣದಾಸೆ ತೋರಿಸಿದರೆ ಒಳ್ಳೇ ಜನರು ಕೂಡ ಸಭ್ಯತೆ, ನೈತಿಕತೆ ಇವೆಲ್ಲವನ್ನು ಗಾಳಿಗೆ ತೂರುತ್ತಾರೆ ಎಂದು ಕೆಲವರು ಹೇಳುತ್ತಾರೆ. ಹಣದ ವಿಷಯ ಬಂದಾಗ ಸಾಮಾನ್ಯ ಸನ್ನಿವೇಶಗಳಲ್ಲಿ ತುಂಬ ಸಾಧುವೂ ದಯಾಪರರೂ ಆಗಿ ತೋರುವ ಕೆಲವರ ಮುಖವಾಡ ಕಳಚಿಬಿದ್ದು ಅವರ ವ್ಯಾಘ್ರ ರೂಪ ತೋರಿಬರುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳು ಅಂದರೆ ಬೆದರಿಕೆ ಹಾಕಿ ಸುಲಿಗೆ ಮಾಡುವುದು, ಮೋಸ, ಅಪಹರಣ, ಕೊಲೆ ಇವುಗಳಿಗೆ ಕಾರಣ ಹಣದಾಸೆಯೇ.
▪ “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು.”—ಪ್ರಸಂಗಿ 8:11.
ಅಧಿಕಾರಿಗಳು ಗಮನಿಸದಿರುವಾಗ ಏನೇ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂಬುದು ಮಾನವ ಪ್ರವೃತ್ತಿ ಎಂದು ಈ ವಚನ ತಿಳಿಸುತ್ತದೆ. ಇದನ್ನು ಅತಿವೇಗವಾಗಿ ವಾಹನ ಚಲಾಯಿಸುವವರ, ಪರೀಕ್ಷೆಗಳಲ್ಲಿ ಮೋಸಮಾಡುವವರ, ಸಾರ್ವಜನಿಕರ ಹಣ ನುಂಗಿಹಾಕುವವರ ಮತ್ತು ಇದಕ್ಕಿಂತಲೂ ಕೆಟ್ಟ ಕೆಲಸಗಳನ್ನು ಮಾಡುವವರಲ್ಲಿ ನೋಡಬಹುದು. ಸಾಮಾನ್ಯವಾಗಿ ನಿಯಮ ಪಾಲಕರಾಗಿರುವವರು ಸಹ ಕಾನೂನು ಕಟ್ಟುನಿಟ್ಟಾಗಿ ಜಾರಿಯಲ್ಲಿ ಇಲ್ಲದಿದ್ದಾಗ ಅಥವಾ ಸಿಕ್ಕಿಬೀಳುವ ಅಪಾಯವಿಲ್ಲದಿರುವಾಗ ತಪ್ಪು ಕೆಲಸಗಳನ್ನು ಮಾಡಲು ಎಲ್ಲಿಲ್ಲದ ಧೈರ್ಯ ತೋರಿಸುತ್ತಾರೆ. ವಾದಗಳು ಮತ್ತು ವಾಸ್ತವಗಳು ಎಂಬ ಇಂಗ್ಲಿಷ್ ಪತ್ರಿಕೆ ತಿಳಿಸುವಂತೆ “ಪಾತಕಿಗಳೇ ಸುಲಭವಾಗಿ ತಪ್ಪಿಸಿಕೊಳ್ಳುವುದನ್ನು ನೋಡಿ ಸಾಮಾನ್ಯ ಪ್ರಜೆಗಳಿಗೆ ಅತಿ ಘೋರ ದುಷ್ಕೃತ್ಯಗಳನ್ನು ನಡೆಸಲು ಕುಮ್ಮಕ್ಕು ಸಿಗುತ್ತದೆಂದು ತೋರುತ್ತದೆ.”
▪ “ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ.”—ಯಾಕೋಬ 1:14, 15.
ಮನುಷ್ಯನೆಂದ ಮೇಲೆ ತಪ್ಪು ಆಲೋಚನೆಗಳು ಬರುವುದು ಸಹಜ. ತಪ್ಪಾದದ್ದನ್ನು ಮಾಡಲು ದಿನೇದಿನೇ ನಮ್ಮ ಮೇಲೆ ಬಾಹ್ಯ ಪ್ರಚೋದನೆಗಳ, ಪ್ರಲೋಭನೆಗಳ ದಾಳಿ ನಡೆಯುತ್ತಿರುತ್ತದೆ. “ಮನುಷ್ಯರಿಗೆ ಸಹಜವಾಗಿರುವ ಪ್ರಲೋಭನೆಯೇ ಹೊರತು ಬೇರಾವುದೂ ನಿಮಗೆ ಸಂಭವಿಸಲಿಲ್ಲ” ಎಂದು ಪ್ರಾಚೀನ ಕಾಲದ ಕ್ರೈಸ್ತರಿಗೆ ಹೇಳಲಾಗಿತ್ತು. (1 ಕೊರಿಂಥ 10:13) ಆದರೆ ಆ ಆಲೋಚನೆಗಳು ದುಷ್ಕೃತ್ಯಗಳಿಗೆ ನಡೆಸುವವೋ ಇಲ್ಲವೋ ಎನ್ನುವುದು ವ್ಯಕ್ತಿಯು ಅವನ್ನು ಕೂಡಲೇ ಮನಸ್ಸಿನಿಂದ ಕಿತ್ತೆಸೆಯುವನೋ ಇಲ್ಲವೆ ಅವು ಮನಸ್ಸಿನಲ್ಲೇ ಬೆಳೆದು ಹೆಮ್ಮರವಾಗುವಂತೆ ಬಿಡುವನೋ ಎಂಬದರ ಮೇಲೆ ಹೊಂದಿಕೊಂಡಿದೆ. ಯಾಕೋಬನು ಮೇಲೆ ಎಚ್ಚರಿಸಿದಂತೆ ಕೆಟ್ಟ ಆಶೆಯು ‘ಬಸುರಾಗುವಂತೆ’ ಅಂದರೆ ಹಾಗೇ ಬೆಳೆಯುವಂತೆ ಬಿಟ್ಟರೆ ಅದು ಖಂಡಿತ ಕೆಟ್ಟ ಕೃತ್ಯದಲ್ಲೇ ಕೊನೆಗೊಳ್ಳುತ್ತದೆ.
▪ “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಒಡನಾಡಿಗಳು ನಮ್ಮ ಮೇಲೆ ಒಳ್ಳೇ ಇಲ್ಲವೆ ಕೆಟ್ಟ ಪ್ರಭಾವವನ್ನು ಬೀರುತ್ತಾರೆ ಖಂಡಿತ. ಹೆಚ್ಚಾಗಿ ಜನರು ಸಮವಯಸ್ಕರ ಒತ್ತಡದಿಂದ ಅಥವಾ ಕೆಲವರು ಹೇಳುವಂತೆ ಸಹವಾಸ ದೋಷದಿಂದ ತಾವು ಉದ್ದೇಶಿಸಿರದ ಕೆಲಸಗಳನ್ನು ಮಾಡಿ ಕೆಟ್ಟ ಫಲಿತಾಂಶಗಳನ್ನು ಕೊಯ್ಯುತ್ತಾರೆ. ಬೈಬಲ್ “ಜ್ಞಾನಹೀನ” ಎಂಬ ಪದವನ್ನು ಜ್ಞಾನವಿಲ್ಲದ ಅಥವಾ ದಡ್ಡ ವ್ಯಕ್ತಿಗೆ ಸೂಚಿಸಲಿಕ್ಕಲ್ಲ, ಬದಲಾಗಿ ದೇವರ ವಾಕ್ಯದಲ್ಲಿರುವ ವಿವೇಕಯುತ ಸಲಹೆಯನ್ನು ಅಲಕ್ಷಿಸುವ ವ್ಯಕ್ತಿಗೆ ಸೂಚಿಸಲು ಬಳಸುತ್ತದೆ. ನಾವು ಚಿಕ್ಕವರಿರಲಿ ದೊಡ್ಡವರಿರಲಿ ನಮ್ಮ ಒಡನಾಡಿಗಳನ್ನು ವಿವೇಕದಿಂದ ಅಂದರೆ ದೇವರ ವಾಕ್ಯವಾದ ಬೈಬಲಿನ ಮಟ್ಟಕ್ಕನುಸಾರ ಆರಿಸದಿದ್ದಲ್ಲಿ ಮುಂದೆ ‘ಸಂಕಟಪಡುವೆವು.’
ಜನರು ಅದರಲ್ಲೂ ಸಾಮಾನ್ಯ ಜನರು ಬೆಚ್ಚಿಬೀಳಿಸುವಂಥ ಕುಕೃತ್ಯಗಳನ್ನು ಏಕೆ ನಡೆಸುತ್ತಿದ್ದಾರೆಂದು ಈ ಲೇಖನದಲ್ಲಿ ಕೊಡಲಾದ ವಚನಗಳಲ್ಲದೆ ಇನ್ನಿತರ ಬೈಬಲ್ ವಚನಗಳು ಸಂಕ್ಷಿಪ್ತವಾಗಿ ವಿವರಿಸುತ್ತವೆ. ಕೆಟ್ಟ ಕೆಲಸಗಳ ಹಿಂದಿರುವ ಈ ಕಾರಣಗಳನ್ನು ತಿಳಿದುಕೊಳ್ಳುವುದು ಸಹಾಯಕಾರಿ ಏನೋ ನಿಜ. ಆದರೆ ಈ ಕೆಟ್ಟ ಪರಿಸ್ಥಿತಿ ಬದಲಾಗುವುದೆಂಬ ಆಶಾಕಿರಣ ಇದೆಯೋ? ಹೌದು ಇದೆ. ಜನರು ಕೆಟ್ಟ ಕೆಲಸಗಳನ್ನು ಏಕೆ ನಡೆಸುತ್ತಾರೆಂದು ಬೈಬಲ್ ತಿಳಿಸುತ್ತದೆ ಮಾತ್ರವಲ್ಲ ಅದಕ್ಕೆಲ್ಲ ಕೊನೆಯೂ ಇದೆ ಎಂದು ಮಾತು ಕೊಡುತ್ತದೆ. ಯಾವೆಲ್ಲ ವಿಷಯಗಳ ಬಗ್ಗೆ ಅದು ಮಾತು ಕೊಡುತ್ತದೆ? ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ಕೆಟ್ಟ ಕೆಲಸಗಳು ನಿಜವಾಗಿ ಅಂತ್ಯವಾಗುವವೋ? ಇವುಗಳ ಉತ್ತರ ಮುಂದಿನ ಲೇಖನದಲ್ಲಿದೆ.
(w10-E 09/01)