ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಕಾರಾತ್ಮಕ ಭಾವನೆಗಳ ವಿರುದ್ಧ ಹೇಗೆ ಹೋರಾಡಬಲ್ಲಿರಿ?

ನಕಾರಾತ್ಮಕ ಭಾವನೆಗಳ ವಿರುದ್ಧ ಹೇಗೆ ಹೋರಾಡಬಲ್ಲಿರಿ?

ನಕಾರಾತ್ಮಕ ಭಾವನೆಗಳ ವಿರುದ್ಧ ಹೇಗೆ ಹೋರಾಡಬಲ್ಲಿರಿ?

ನಕಾರಾತ್ಮಕ ಭಾವನೆಗಳು ನಿಮ್ಮನ್ನು ಎಂದಾದರೂ ಕಾಡಿವೆಯೋ? ಯಾರನ್ನು ತಾನೇ ಕಾಡಿರುವುದಿಲ್ಲ ಹೇಳಿ? ನಮ್ಮೀ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು, ಹಿಂಸಾಕೃತ್ಯ, ಅನ್ಯಾಯ ಹೆಚ್ಚೆಚ್ಚಾಗುತ್ತಿದೆ. ಹೀಗಿರಲಾಗಿ ವಿಪರೀತ ದುಃಖ, ದೋಷಿಭಾವನೆ ಹಾಗೂ ‘ತಾನು ಯಾವುದಕ್ಕೂ ಪ್ರಯೋಜನವಿಲ್ಲ’ ಎಂಬ ಭಾವನೆಗಳು ಎಣಿಸಲಾಗದಷ್ಟು ಜನರನ್ನು ಬಾಧಿಸುತ್ತಿರುವುದು ಅಚ್ಚರಿಯ ಸಂಗತಿಯಲ್ಲ.

ಇಂಥ ಭಾವನೆಗಳು ಅಪಾಯಕಾರಿ. ಅವು ನಮ್ಮ ಆತ್ಮವಿಶ್ವಾಸವನ್ನು ಕೊರೆದುಹಾಕುತ್ತವೆ, ಯೋಚನಾ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ ಹಾಗೂ ಸಂತೋಷವನ್ನು ಕಸಿದುಕೊಳ್ಳುತ್ತವೆ. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ” ಅಂದರೆ ನಿರುತ್ತೇಜಿತನಾದರೆ “ನಿನ್ನ ಬಲವೂ ಇಕ್ಕಟ್ಟೇ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 24:10) ಈ ತೊಂದರೆಗ್ರಸ್ತ ಲೋಕದಲ್ಲಿ ಜೀವಿಸಬೇಕಾದರೆ ನಮಗೆ ಬಲ ಅಥವಾ ಶಕ್ತಿ ಬೇಕೇಬೇಕು. ಹಾಗಾಗಿ ನಕಾರಾತ್ಮಕ ಭಾವನೆಗಳನ್ನು ಅಂಕೆಯಲ್ಲಿಡುವುದು ಪ್ರಾಮುಖ್ಯ. *

ಈ ನಕಾರಾತ್ಮಕ ಭಾವನೆಗಳ ವಿರುದ್ಧ ಹೋರಾಡಲು ಬೇಕಾದ ರಕ್ಷಣಾ ಸಾಧನಗಳನ್ನು ಬೈಬಲ್‌ ಒದಗಿಸುತ್ತದೆ. ಹತಾಶೆ ಅಥವಾ ನಿರೀಕ್ಷಾಹೀನತೆಯಿಂದಾಗಿ ನೀವು ಸೋಲೊಪ್ಪಿಕೊಳ್ಳಬಾರದು ಎಂಬುದು ಸೃಷ್ಟಿಕರ್ತನೂ ಜೀವದ ಬುಗ್ಗೆಯೂ ಆದ ಯೆಹೋವ ದೇವರ ಇಚ್ಛೆ. (ಕೀರ್ತನೆ 36:9) ನಕಾರಾತ್ಮಕ ಭಾವನೆಗಳನ್ನು ಜಯಿಸಲು ದೇವರ ವಾಕ್ಯವಾದ ಬೈಬಲ್‌ ಮೂರು ವಿಧಗಳಲ್ಲಿ ಸಹಾಯಮಾಡುತ್ತದೆ. ಅವನ್ನು ಈಗ ಪರಿಗಣಿಸೋಣ.

ನೆನಪಿಡಿ ದೇವರಿಗೆ ನಿಮ್ಮಲ್ಲಿ ಆಸಕ್ತಿಯಿದೆ

‘ದೇವರಿಗೆ ಬೇಕಾದಷ್ಟು ಕೆಲಸಗಳಿವೆ; ನಮ್ಮ ಭಾವನೆಗಳಿಗೆ ಗಮನಕೊಡಲು ಅವನಿಗೆ ಸಮಯವೆಲ್ಲಿರುತ್ತೆ’ ಎಂದು ಕೆಲವರು ನೆನಸುತ್ತಾರೆ. ನಿಮಗೂ ಹಾಗೇ ಅನಿಸುತ್ತದೋ? ನಿಜವೇನೆಂದರೆ, ಬೈಬಲ್‌ ಆಶ್ವಾಸನೆ ಕೊಡುವಂತೆ ಸೃಷ್ಟಿಕರ್ತನು ನಮ್ಮ ಭಾವನೆಗಳಿಗೆ ಗಮನಕೊಡುತ್ತಾನೆ. “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂದನು ಕೀರ್ತನೆಗಾರ. (ಕೀರ್ತನೆ 34:18) ನಾವು ದುಃಖದಲ್ಲಿರುವಾಗ ಸರ್ವಶಕ್ತನಾದ ವಿಶ್ವದ ಪರಮಾಧಿಕಾರಿ ನೆರವಾಗುತ್ತಾನೆ ಎಂಬುದು ಎಷ್ಟೊಂದು ಸಾಂತ್ವನದಾಯಕವಲ್ಲವೇ!

ದೇವರು ಭಾವನೆಗಳಿಲ್ಲದವನಲ್ಲ ಅಥವಾ ಮಾನವರ ಬಗ್ಗೆ ಆಸಕ್ತಿಯಿಲ್ಲದವನಲ್ಲ. “ದೇವರು ಪ್ರೀತಿಯಾಗಿದ್ದಾನೆ” ಎನ್ನುತ್ತದೆ ಬೈಬಲ್‌. (1 ಯೋಹಾನ 4:8) ಆತನು ಜನರನ್ನು ಪ್ರೀತಿಸುತ್ತಾನೆ ಹಾಗೂ ಕಷ್ಟಪಡುವವರಿಗಾಗಿ ಆತನ ಮನಮಿಡಿಯುತ್ತದೆ. ಉದಾಹರಣೆಗೆ, ಸುಮಾರು 3,500 ವರ್ಷಗಳ ಹಿಂದೆ ಇಸ್ರಾಯೇಲ್‌ ಜನರು ಈಜಿಪ್ಟ್‌ನಲ್ಲಿ (ಐಗುಪ್ತದಲ್ಲಿ) ದಾಸರಾಗಿದ್ದಾಗ ದೇವರು “ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು. ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ತಪ್ಪಿಸುವದಕ್ಕೂ . . . ಇಳಿದುಬಂದಿದ್ದೇನೆ” ಎಂದನು.—ವಿಮೋಚನಕಾಂಡ 3:7, 8.

ದೇವರು ನಮ್ಮ ಭಾವನೆಗಳನ್ನು ಚೆನ್ನಾಗಿ ಬಲ್ಲನು. ಎಷ್ಟೆಂದರೂ “ನಮ್ಮನ್ನು ಉಂಟುಮಾಡಿದವನು ಆತನೇ” ಅಲ್ಲವೆ? (ಕೀರ್ತನೆ 100:3) ಹೀಗಿರುವುದರಿಂದ ಮನುಷ್ಯರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಅನಿಸುವಾಗಲೂ ದೇವರು ಅರ್ಥಮಾಡಿಕೊಳ್ಳುತ್ತಾನೆ ಎಂಬ ಖಾತ್ರಿ ನಮಗಿರಬಲ್ಲದು. ದೇವರ ವಾಕ್ಯ ತಿಳಿಸುವಂತೆ “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ನಮ್ಮ ಅಂತರಾಳದ ಭಾವನೆಗಳೂ ದೇವರ ದೃಷ್ಟಿಗೆ ಮರೆಯಾಗಿಲ್ಲ.

ಯೆಹೋವನಿಗೆ ನಮ್ಮ ತಪ್ಪುಗಳು, ಕುಂದುಕೊರತೆಗಳು ಸಹ ಗೊತ್ತಿವೆ. ಹಾಗಿದ್ದರೂ ಪ್ರೀತಿಪರ ಸೃಷ್ಟಿಕರ್ತನಾದ ಆತನು ನಮ್ಮನ್ನು ಕ್ಷಮಿಸುತ್ತಾನೆ. ಇದಕ್ಕಾಗಿ ನಾವಾತನಿಗೆ ಆಭಾರಿಗಳಾಗಿರಬೇಕು. ಬೈಬಲಿನ ಒಬ್ಬ ಬರಹಗಾರನಾದ ದಾವೀದನು ದೇವಪ್ರೇರಣೆಯಿಂದ ಹೀಗಂದನು: “ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:13, 14) ನಾವು ನಮ್ಮಲ್ಲಿರುವ ಕೆಟ್ಟ ವಿಷಯಗಳನ್ನು ಮಾತ್ರ ನೋಡುತ್ತೇವೆ ಆದರೆ ದೇವರು ಹಾಗಲ್ಲ. ಆತನು ನಮ್ಮಲ್ಲಿರುವ ಒಳ್ಳೇ ವಿಷಯಗಳಿಗಾಗಿ ಹುಡುಕುತ್ತಿರುತ್ತಾನೆ. ನಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರೆ ಕ್ಷಮಿಸುತ್ತಾನೆ.—ಕೀರ್ತನೆ 139:1-3, 23, 24.

ಆದುದರಿಂದ ‘ನಾನು ಯಾವುದಕ್ಕೂ ಪ್ರಯೋಜನವಿಲ್ಲ’ ಎಂಬ ಭಾವನೆಗಳು ನಮ್ಮನ್ನು ಕಾಡುವಾಗ ಅದರ ವಿರುದ್ಧ ಹೋರಾಡಲು ದೃಢನಿಶ್ಚಯದಿಂದಿರೋಣ. ದೇವರು ನಮ್ಮನ್ನು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ನಾವು ಸದಾ ನೆನಪಿನಲ್ಲಿಡಬೇಕು.—1 ಯೋಹಾನ 3:20.

ದೇವರೊಂದಿಗೆ ಅತ್ಯಾಪ್ತ ಸ್ನೇಹ ಬೆಳೆಸಿಕೊಳ್ಳಿ

ದೇವರು ನಮ್ಮನ್ನು ವೀಕ್ಷಿಸುವ ರೀತಿಯಲ್ಲೇ ನಾವು ನಮ್ಮನ್ನು ವೀಕ್ಷಿಸುವುದರಿಂದ ಯಾವ ಪ್ರಯೋಜನವಿದೆ? ನಕಾರಾತ್ಮಕ ಭಾವನೆಗಳನ್ನು ಜಯಿಸಲು ನೆರವಾಗುವ ಎರಡನೇ ಹೆಜ್ಜೆಯನ್ನು ತೆಗೆದುಕೊಳ್ಳಲು ಅಂದರೆ ದೇವರೊಂದಿಗೆ ಅತ್ಯಾಪ್ತ ಸ್ನೇಹವನ್ನು ಬೆಳೆಸಿಕೊಳ್ಳಲು ನಮಗೆ ಸುಲಭವಾಗುತ್ತದೆ. ಇದು ನಿಜವಾಗಿಯೂ ಸಾಧ್ಯವೇ?

ಪ್ರೀತಿಪರ ತಂದೆಯಾದ ಯೆಹೋವನು ನಾವು ಆತನೊಂದಿಗೆ ಅತ್ಯಾಪ್ತ ಸ್ನೇಹವನ್ನು ಬೆಳೆಸಿಕೊಳ್ಳಲಿಕ್ಕಾಗಿ ಬೇಕಾದ ಸಹಾಯಕೊಡಲು ಹಾತೊರೆಯುತ್ತಾನೆ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಯಾಕೋಬ 4:8) ಈ ಅತ್ಯಾಶ್ಚರ್ಯಕರ ಸಂಗತಿ ಬಗ್ಗೆ ಯೋಚಿಸಿ: ಬಲಹೀನರೂ ಪಾಪಿಗಳೂ ಆದ ನಾವು ಇಡೀ ವಿಶ್ವದ ಪರಮಾಧಿಕಾರಿಯೊಂದಿಗೆ ವೈಯಕ್ತಿಕ ಅತ್ಯಾಪ್ತ ಸ್ನೇಹ ಬೆಳೆಸಿಕೊಳ್ಳಬಲ್ಲೆವು!

ನಾವು ಆತನ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತೆ ದೇವರು ತನ್ನ ಬಗ್ಗೆ ಬೈಬಲಿನಲ್ಲಿ ತಿಳಿಸಿದ್ದಾನೆ. ದಿನಾಲೂ ಬೈಬಲ್‌ ಓದುವ ಮೂಲಕ ನಾವು ದೇವರ ಅತ್ಯಾಕರ್ಷಕ ಗುಣಗಳ ಕುರಿತು ತಿಳಿದುಕೊಳ್ಳಬಹುದು. * ಇಂಥ ಜ್ಞಾನದ ಕುರಿತು ಧ್ಯಾನಿಸುವ ಮೂಲಕ ಯೆಹೋವನಿಗೆ ಹೆಚ್ಚೆಚ್ಚು ಆಪ್ತರಾಗುವೆವು. ಅಲ್ಲದೆ ಆತನು ಪ್ರೀತಿಪರ, ಕರುಣಾಮಯಿ ತಂದೆಯಾಗಿದ್ದಾನೆ ಎಂಬುದನ್ನು ನಾವು ಇನ್ನಷ್ಟು ಸ್ಪಷ್ಟವಾಗಿ ಗ್ರಹಿಸುವೆವು.

ನಾವು ಬೈಬಲಿನಲ್ಲಿ ಓದಿದಂಥ ವಿಷಯಗಳ ಕುರಿತು ಆಳವಾಗಿ ಯೋಚಿಸುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ನಾವು ನಮ್ಮ ಹೃದಮನದಲ್ಲಿ ದೇವರ ಆಲೋಚನೆಗಳನ್ನು ತುಂಬಿಸಿಕೊಳ್ಳುತ್ತಾ ದೇವರಿಗೆ ಹೆಚ್ಚೆಚ್ಚು ಆಪ್ತರಾಗುತ್ತಾ ಹೋದಂತೆ ಆತನ ಆಲೋಚನೆಗಳು ನಮ್ಮನ್ನು ತಿದ್ದುವಂತೆ, ಸಂತೈಸುವಂತೆ, ಮಾರ್ಗದರ್ಶಿಸುವಂತೆ ಬಿಡುತ್ತೇವೆ. ಮುಖ್ಯವಾಗಿ ಇದನ್ನು ನೆಮ್ಮದಿಗೆಡಿಸುವ ಯೋಚನೆಗಳೊಂದಿಗೆ, ಭಾವನೆಗಳೊಂದಿಗೆ ನಾವು ಹೋರಾಡುತ್ತಿರುವಾಗ ಮಾಡಬೇಕು. ಕೀರ್ತನೆಗಾರನು ಇದನ್ನು ಹೀಗೆ ತಿಳಿಸಿದನು: “ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” (ಕೀರ್ತನೆ 94:19) ದೇವರ ವಾಕ್ಯವಾದ ಬೈಬಲ್‌ ನಮಗೆ ಬಹಳಷ್ಟು ಸಾಂತ್ವನ ನೀಡುತ್ತದೆ. ಅದರಲ್ಲಿ ಆತನು ಕೊಟ್ಟಿರುವ ಸತ್ಯವನ್ನು ನಾವು ದೀನತೆಯಿಂದ ಒಪ್ಪಿಕೊಳ್ಳುವಲ್ಲಿ ದೇವರು ಮಾತ್ರ ನೀಡಬಲ್ಲ ಸಾಂತ್ವನ, ಶಾಂತಿಯು ನಕಾರಾತ್ಮಕ ಭಾವನೆಗಳ ಜಾಗದಲ್ಲಿ ತುಂಬಿಕೊಳ್ಳುವುದು. ಹೀಗೆ ಯೆಹೋವನು ನಮ್ಮನ್ನು ಸಂತೈಸುತ್ತಾನೆ. ಒಬ್ಬ ಪ್ರೀತಿಪರ ತಂದೆ ಮುಖ ಬಾಡಿದ ತನ್ನ ಮಗುವನ್ನು ಹೇಗೆ ಸಮಾಧಾನ ಪಡಿಸುತ್ತಾನೊ ಹಾಗೆಯೇ.

ದೇವರ ಸ್ನೇಹಿತರಾಗಲು ಸಹಾಯಕರವಾಗಿರುವ ಮತ್ತೊಂದು ಅಂಶವು ಆತನೊಂದಿಗೆ ದಿನಾಲೂ ಮಾತಾಡುವುದೇ ಆಗಿದೆ. “ನಾವು [ದೇವರ] ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆ” ಎಂಬ ಆಶ್ವಾಸನೆಯನ್ನು ಬೈಬಲ್‌ ಕೊಡುತ್ತದೆ. (1 ಯೋಹಾನ 5:14) ಯಾವುದೇ ಭಯ, ಚಿಂತೆಯಿರಲಿ ದೇವರಿಗೆ ಪ್ರಾರ್ಥಿಸಿ ಸಹಾಯ ಕೋರಬಹುದು. ದೇವರೊಂದಿಗೆ ಹೃದಯಬಿಚ್ಚಿ ಮಾತಾಡುವುದಾದರೆ ಮನಃಶಾಂತಿ ಸಿಗುತ್ತದೆ. ಅಪೊಸ್ತಲ ಪೌಲನು ಬರೆದದ್ದು: “ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.”ಫಿಲಿಪ್ಪಿ 4:6, 7.

ಬೈಬಲನ್ನು ಓದುವ, ಓದಿದ್ದನ್ನು ಧ್ಯಾನಿಸುವ, ವೈಯಕ್ತಿಕ ಪ್ರಾರ್ಥನೆ ಮಾಡುವ ರೂಢಿಗಳಿಗೆ ನೀವು ಅಂಟಿಕೊಳ್ಳುವಾಗ ಸ್ವರ್ಗದಲ್ಲಿರುವ ತಂದೆಯಾದ ದೇವರೊಂದಿಗೆ ಅತ್ಯಾಪ್ತ ಬಂಧವನ್ನು ಬೆಳೆಸಿಕೊಳ್ಳುತ್ತೀರಿ. ಈ ಬಂಧ ನಕಾರಾತ್ಮಕ ಭಾವನೆಗಳ ವಿರುದ್ಧ ಹೋರಾಡಲು ನಮಗಿರುವ ಬಲವಾದ ಅಸ್ತ್ರವಾಗಿದೆ. ನಮಗೆ ಇನ್ಯಾವ ಸಹಾಯಕವಿದೆ?

ಭವಿಷ್ಯಕ್ಕಾಗಿರುವ ನಿಶ್ಚಿತ ನಿರೀಕ್ಷೆಯ ಮೇಲೆ ಮನಸ್ಸಿಡಿ

ನಮ್ಮ ಸನ್ನಿವೇಶ ತುಂಬ ಕಷ್ಟಕರವಾಗಿದ್ದರೂ ನಮ್ಮ ಮನಸ್ಸನ್ನು ಒಳ್ಳೇ ವಿಷಯಗಳ ಮೇಲೆ ಕೇಂದ್ರೀಕರಿಸಬಹುದು. ಹೇಗೆ? ಭವಿಷ್ಯಕ್ಕಾಗಿ ದೇವರು ನಮಗೆ ನಿಶ್ಚಿತ ನಿರೀಕ್ಷೆಯನ್ನು ನೀಡಿದ್ದಾನೆ. ಆ ಅದ್ಭುತಕರ ನಿರೀಕ್ಷೆಯ ಬಗ್ಗೆ ಅಪೊಸ್ತಲ ಪೌಲನು ಚುಟುಕಾಗಿ ಹೀಗೆ ತಿಳಿಸುತ್ತಾನೆ: “[ದೇವರ] ವಾಗ್ದಾನಕ್ಕನುಸಾರ ನಾವು ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಿದ್ದೇವೆ ಮತ್ತು ಇವುಗಳಲ್ಲಿ ನೀತಿಯು ವಾಸವಾಗಿರುವುದು.” (2 ಪೇತ್ರ 3:13) ಇದರ ಅರ್ಥವೇನು?

“ನೂತನ ಆಕಾಶ” ಎಂಬ ಅಭಿವ್ಯಕ್ತಿ ಒಂದು ಸರ್ಕಾರಕ್ಕೆ ಸೂಚಿಸುತ್ತದೆ. ಇದು ಸ್ವರ್ಗದಲ್ಲಿ ದೇವರು ಸ್ಥಾಪಿಸಿರುವ ರಾಜ್ಯ. ಇದರ ಅರಸ ಯೇಸು ಕ್ರಿಸ್ತ. “ನೂತನ ಭೂಮಿ” ಎಂಬ ಅಭಿವ್ಯಕ್ತಿ ಭೂಮಿಯ ಮೇಲಿನ ಒಂದು ಹೊಸ ಮಾನವ ಸಮಾಜಕ್ಕೆ ಸೂಚಿಸುತ್ತದೆ. ಅದರಲ್ಲಿರುವವರು ದೇವರ ಅಂಗೀಕಾರ ಪಡೆದವರಾಗಿರುತ್ತಾರೆ. ಈ ಹೊಸ ಸಮಾಜವನ್ನು “ನೂತನ ಆಕಾಶ” ಆಳುವಾಗ ನಕಾರಾತ್ಮಕ ಭಾವನೆಗಳನ್ನು ಉಂಟುಮಾಡುವ ವಿಷಯಗಳು ಇರುವುದಿಲ್ಲ. ಆಗ ಜೀವಿಸುವ ನಂಬಿಗಸ್ತ ವ್ಯಕ್ತಿಗಳಿಗೆ ಬೈಬಲ್‌ ಈ ಆಶ್ವಾಸನೆ ನೀಡುತ್ತದೆ: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”—ಪ್ರಕಟನೆ 21:4.

ಇವು ಹರ್ಷಕರ, ಉತ್ತೇಜನದಾಯಕ ವಿಚಾರಗಳಲ್ಲವೇ? ಹಾಗಾಗಿ, ನಿಜ ಕ್ರೈಸ್ತರಿಗೆ ದೇವರು ನೀಡಿರುವ ಭವಿಷ್ಯದ ನಿರೀಕ್ಷೆಯನ್ನು “ಸಂತೋಷಕರವಾದ ನಿರೀಕ್ಷೆ” ಎಂದು ಬೈಬಲ್‌ ಸರಿಯಾಗಿಯೇ ತಿಳಿಸಿದೆ. (ತೀತ 2:13) ಮಾನವಕುಲದ ಭವಿಷ್ಯದ ಕುರಿತ ದೇವರ ವಾಗ್ದಾನಗಳ ಮೇಲೆ ಹಾಗೂ ಅವು ನಂಬಲರ್ಹವೂ ನಿಜವೂ ಆಗಿದೆ ಎಂಬುದಕ್ಕಿರುವ ಕಾರಣಗಳ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸುವಲ್ಲಿ ನಕಾರಾತ್ಮಕ ಭಾವನೆಗಳನ್ನು ಹೊಡೆದೋಡಿಸಬಲ್ಲೆವು.—ಫಿಲಿಪ್ಪಿ 4:8.

ರಕ್ಷಣೆಯ ನಿರೀಕ್ಷೆಯನ್ನು ಬೈಬಲು ಶಿರಸ್ತ್ರಾಣಕ್ಕೆ ಹೋಲಿಸುತ್ತದೆ. (1 ಥೆಸಲೊನೀಕ 5:8) ಹಿಂದಿನ ಕಾಲದಲ್ಲಿ ಶಿರಸ್ತ್ರಾಣವನ್ನು ಹಾಕಿಕೊಳ್ಳದೆ ಯಾವ ಸಿಪಾಯಿಯೂ ಯುದ್ಧರಂಗಕ್ಕೆ ಕಾಲಿಡುತ್ತಿರಲಿಲ್ಲ. ಶಿರಸ್ತ್ರಾಣವು ಶತ್ರುವಿನ ಏಟುಗಳಿಂದ ಮತ್ತು ಅಸ್ತ್ರಗಳಿಂದ ಹಾನಿಯಾಗದಂತೆ ತನ್ನನ್ನು ಕಾಪಾಡುತ್ತದೆ ಎಂಬುದು ಅವನಿಗೆ ತಿಳಿದಿತ್ತು. ಶಿರಸ್ತ್ರಾಣ ತಲೆಯನ್ನು ಹೇಗೆ ಕಾಪಾಡುತ್ತದೋ ಹಾಗೇ ನಿರೀಕ್ಷೆ ಮನಸ್ಸನ್ನು ಕಾಪಾಡುತ್ತದೆ. ನಮ್ಮಲ್ಲಿ ನಿರೀಕ್ಷೆ ತುಂಬಿಸುವ ವಿಚಾರಗಳ ಕುರಿತ ಮನನವು ನಕಾರಾತ್ಮಕವಾದ, ಭಯಹುಟ್ಟಿಸುವ ಹಾಗೂ ನಿರಾಶಾವಾದಿ ಯೋಚನೆಗಳನ್ನು ನಮ್ಮ ಮನಸ್ಸಿನಿಂದ ದೂರವಿಡುತ್ತದೆ.

ಹಾಗಾದರೆ ನಕಾರಾತ್ಮಕ ಭಾವನೆಗಳ ವಿರುದ್ಧ ಹೋರಾಡಲು ಸಾಧ್ಯವಿದೆ. ನಿಮ್ಮಿಂದ ಖಂಡಿತ ಸಾಧ್ಯ! ದೇವರು ನಿಮ್ಮನ್ನು ಹೇಗೆ ವೀಕ್ಷಿಸುತ್ತಾನೆ ಎಂಬುದರ ಬಗ್ಗೆ ಯೋಚಿಸಿರಿ, ಆತನಿಗೆ ಇನ್ನಷ್ಟು ಆಪ್ತರಾಗಿರಿ, ಭವಿಷ್ಯತ್ತಿಗಾಗಿರುವ ನಿರೀಕ್ಷೆಯ ಮೇಲೆ ಮನಸ್ಸಿಡಿ. ಆಗ ನಕಾರಾತ್ಮಕ ಭಾವನೆಗಳು ಇನ್ನೆಂದಿಗೂ ಕಾಡದ ದಿನವನ್ನು ನೋಡುವಿರೆಂಬ ನಿಶ್ಚಯ ನಿಮಗಿರಬಲ್ಲದು!—ಕೀರ್ತನೆ 37:29.

(w10-E 10/01)

[ಪಾದಟಿಪ್ಪಣಿಗಳು]

^ ಪ್ಯಾರ. 3 ದೀರ್ಘಕಾಲೀನ ಅಥವಾ ತೀವ್ರ ಖಿನ್ನತೆಯಿಂದ ಬಳಲುತ್ತಿರುವವರು ಒಬ್ಬ ಅರ್ಹ ವೈದ್ಯನನ್ನು ಸಂಪರ್ಕಿಸಬೇಕು.—ಮತ್ತಾಯ 9:12.

^ ಪ್ಯಾರ. 14 ಬೈಬಲ್‌ ವಾಚನಕ್ಕಾಗಿ ಪ್ರಾಯೋಗಿಕ ಶೆಡ್ಯೂಲೊಂದು ಕಾವಲಿನಬುರುಜುವಿನ 2010ರ ಜನವರಿ-ಮಾರ್ಚ್‌ ಸಂಚಿಕೆಯಲ್ಲಿದೆ.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” ವಿಮೋಚನಕಾಂಡ 3:7, 8

[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” ಕೀರ್ತನೆ 94:19

[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ . . . ಕಾಯುವುದು.” ಫಿಲಿಪ್ಪಿ 4:7

[ಪುಟ 10, 11ರಲ್ಲಿರುವ ಚೌಕ/ಚಿತ್ರ]

ಯೆಹೋವ ದೇವರ ಕುರಿತ ಸಾಂತ್ವನದಾಯಕ ವಚನಗಳು

“ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.”—ವಿಮೋಚನಕಾಂಡ 34:6.

“ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”—2 ಪೂರ್ವಕಾಲವೃತ್ತಾಂತ 16:9.

“ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತನೆ 34:18.

“ಯೆಹೋವನೇ, ನೀನು ಒಳ್ಳೆಯವನೂ ಕ್ಷಮಿಸುವುದಕ್ಕೆ ಸಿದ್ಧನೂ ಆಗಿದ್ದೀ.”—ಕೀರ್ತನೆ 86:5, NIBV.

“ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.” —ಕೀರ್ತನೆ 145:9.

“ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.”—ಯೆಶಾಯ 41:13.

“ಆತನು ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ ಆಗಿದ್ದಾನೆ.”—2 ಕೊರಿಂಥ 1:3.

“ನಾವು ಆತನ ಮುಂದೆ ನಮ್ಮ ಹೃದಯಗಳಿಗೆ ಭರವಸೆ ಕೊಡುವೆವು. ನಮ್ಮ ಹೃದಯಗಳು ನಮ್ಮನ್ನು ಯಾವುದೇ ಸಂಬಂಧದಲ್ಲಿ ಖಂಡಿಸಬಹುದಾದರೂ ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ.”—1 ಯೋಹಾನ 3:19, 20.

[ಪುಟ 12ರಲ್ಲಿರುವ ಚೌಕ/ಚಿತ್ರಗಳು]

ಇವರು ನಕಾರಾತ್ಮಕ ಭಾವನೆಗಳನ್ನು ನಿಭಾಯಿಸುತ್ತಿದ್ದಾರೆ

“ನನ್ನ ತಂದೆ ಮದ್ಯವ್ಯಸನಿ. ಅವರು ನನಗೆ ತುಂಬ ಕಷ್ಟ ಕೊಟ್ಟಿದ್ದಾರೆ. ಈ ಕಾರಣದಿಂದ ನಾನು ನಾಲಾಯಕ್ಕು ಎಂಬ ಭಾವನೆ ಬುದ್ಧಿಬಂದಂದಿನಿಂದ ನನ್ನನ್ನು ಕಾಡುತ್ತಲೇ ಬಂದಿದೆ. ಆದರೆ ಯೆಹೋವನ ಸಾಕ್ಷಿಗಳು ನನ್ನೊಂದಿಗೆ ಬೈಬಲ್‌ ಅಧ್ಯಯನ ನಡೆಸಲಾರಂಭಿಸಿದಾಗ ಭೂಮಿ ಮೇಲೆ ಶಾಶ್ವತವಾಗಿ ಬದುಕುವ ಕುರಿತ ವಾಗ್ದಾನದ ಬಗ್ಗೆ ಕಲಿತೆ. ಈ ನಿರೀಕ್ಷೆಯು ನನ್ನ ಹೃದಮನಕ್ಕೆ ಹರ್ಷೋಲ್ಲಾಸ ತಂದಿತು. ಬೈಬಲನ್ನು ಓದುವುದು ನನ್ನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿತ್ತು. ಯಾವಾಗಲೂ ನನ್ನ ಪಕ್ಕದಲ್ಲೇ ಬೈಬಲನ್ನು ಇಟ್ಟಿರುತ್ತೇನೆ. ನಕಾರಾತ್ಮಕ ಭಾವನೆಗಳು ತುಂಬ ಕಾಡುವಾಗ ಅದನ್ನು ತೆರೆದು ಸಾಂತ್ವನದಾಯಕ ವಚನಗಳನ್ನು ಓದುತ್ತೇನೆ. ದೇವರ ಸೊಗಸಾದ ಗುಣಗಳ ಕುರಿತು ಓದುವಾಗ ನಾನು ದೇವರ ದೃಷ್ಟಿಯಲ್ಲಿ ತುಂಬ ಅಮೂಲ್ಯಳು ಎಂಬ ಆಶ್ವಾಸನೆ ಸಿಗುತ್ತದೆ.”—ಕ್ಯಾಟಿಯಾ, 33 ವರ್ಷ. *

“ಗಾಂಜಾ, ಕೊಕೇನ್‌, ಕ್ರಾಕ್‌ ಕೊಕೇನ್‌, ನಶೆಯೇರಿಸುವಂಥ ಅಪಾಯಕಾರಿ ಹೊಗೆ ಸೇವಿಸುವ ಮತ್ತು ಕುಡಿತದ ಚಟ ನನಗಿತ್ತು. ಎಲ್ಲವನ್ನೂ ಕಳೆದುಕೊಂಡು ಭಿಕ್ಷುಕನಾದೆ. ಆದರೆ ಯೆಹೋವನ ಸಾಕ್ಷಿಗಳು ನನ್ನೊಂದಿಗೆ ಬೈಬಲ್‌ ಅಧ್ಯಯನ ಆರಂಭಿಸಿದ ನಂತರ ನನ್ನ ಜೀವನವನ್ನು ಸಂಪೂರ್ಣ ಬದಲಿಸಿಕೊಂಡೆ. ದೇವರೊಂದಿಗೆ ಅತ್ಯಾಪ್ತ ಸಂಬಂಧ ಬೆಳೆಸಿಕೊಂಡೆ. ಇವತ್ತಿಗೂ ದೋಷಿಭಾವನೆ ಹಾಗೂ ಯಾವುದಕ್ಕೂ ಪ್ರಯೋಜನವಿಲ್ಲದವನು ಎಂಬ ಭಾವನೆಗಳ ವಿರುದ್ಧ ನಾನು ಹೋರಾಡುತ್ತಾ ಇರುವುದಾದರೂ ದೇವರ ಕರುಣೆ ಹಾಗೂ ಪ್ರೀತಿಪೂರ್ವಕ ದಯೆಯ ಮೇಲೆ ಭರವಸೆಯಿಡಲು ಕಲಿತಿದ್ದೇನೆ. ನನ್ನಲ್ಲಿರುವ ನಕಾರಾತ್ಮಕ ಭಾವನೆಗಳನ್ನು ಜಯಿಸಲು ಬೇಕಾದ ಶಕ್ತಿಯನ್ನು ಯೆಹೋವನು ಒದಗಿಸುತ್ತಾ ಇರುವನು ಎಂಬ ನಂಬಿಕೆ ನನಗಿದೆ. ನನ್ನ ಜೀವನದಲ್ಲಿ ನಡೆದ ಅತ್ಯುತ್ತಮ ವಿಷಯವೆಂದರೆ ಬೈಬಲಿನಲ್ಲಿರುವ ಸತ್ಯವನ್ನು ತಿಳಿದುಕೊಳ್ಳಲು ದೊರೆತ ಅವಕಾಶವೇ.”—ರೆನಾಟೊ, 37 ವರ್ಷ.

“ಚಿಕ್ಕಂದಿನಿಂದಲೂ ನನ್ನ ಅಣ್ಣನೊಂದಿಗೆ ನನ್ನನ್ನು ಹೋಲಿಸಿ ನೋಡುವ ಅಭ್ಯಾಸವಿತ್ತು. ಅವನ ಮುಂದೆ ನಾನು ಏನೂ ಅಲ್ಲ ಎಂಬ ಕೀಳರಿಮೆ ನನ್ನಲ್ಲಿ ಮನೆಮಾಡಿತ್ತು. ನನಗೆ ಇಂದಿಗೂ ಅಭದ್ರ ಅನಿಸಿಕೆಯಿದೆ. ನನ್ನಲ್ಲಿರುವ ಸಾಮರ್ಥ್ಯಗಳ ಬಗ್ಗೆ ಸಂಶಯಪಡುತ್ತೇನೆ. ಆದರೆ ಈ ಹೋರಾಟದಲ್ಲಿ ಗೆಲ್ಲಲೇಬೇಕೆಂಬ ಪಣತೊಟ್ಟಿದ್ದೇನೆ. ಎಡೆಬಿಡದೆ ಯೆಹೋವನಿಗೆ ಪ್ರಾರ್ಥಿಸಿದ್ದೇನೆ. ‘ನಾನು ಅಸಮರ್ಥಳು’ ಎಂಬ ಭಾವನೆಗಳನ್ನು ಜಯಿಸಲು ಆತನು ಸಹಾಯಮಾಡಿದ್ದಾನೆ. ದೇವರು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಹಾಗೂ ನನ್ನ ಬಗ್ಗೆ ಕಾಳಜಿವಹಿಸುತ್ತಾನೆ ಎಂಬುದನ್ನು ನೆನಸಿಕೊಂಡಾಗೆಲ್ಲ ಹೃದಯತುಂಬಿ ಬರುತ್ತದೆ.”—ರಾಬರ್ಟಾ, 45 ವರ್ಷ.

[ಪಾದಟಿಪ್ಪಣಿ]

^ ಪ್ಯಾರ. 46 ಕೆಲವು ಹೆಸರುಗಳನ್ನು ಬದಲಿಸಲಾಗಿದೆ.