ಮನಮುರಿದವರಿಗೆ ಸಾಂತ್ವನ
ದೇವರ ಸಮೀಪಕ್ಕೆ ಬನ್ನಿರಿ
ಮನಮುರಿದವರಿಗೆ ಸಾಂತ್ವನ
‘ಯೆಹೋವನು ಖಂಡಿತ ನನ್ನನ್ನು ಪ್ರೀತಿಸಿರಲಾರ.’ ಹೀಗೆಂದವಳು ಜೀವನದ ಹೆಚ್ಚಿನಾಂಶವನ್ನು ಖಿನ್ನತೆಯಲ್ಲಿ ಕಳೆದಿದ್ದ ಒಬ್ಬಾಕೆ ಕ್ರೈಸ್ತ ಮಹಿಳೆ. ಯೆಹೋವ ದೇವರಿಗೆ ತನ್ನ ಬಗ್ಗೆ ಚಿಂತೆಯಿಲ್ಲವೆಂದು ಅವಳು ತನಗೇ ಮನದಟ್ಟುಮಾಡಿಕೊಂಡಿದ್ದಳು. ತನ್ನ ಆರಾಧಕರಲ್ಲಿ ಖಿನ್ನರಾಗಿರುವ ಕೆಲವರ ಬಗ್ಗೆ ಯೆಹೋವನಿಗೆ ನಿಜವಾಗಿ ಕಾಳಜಿಯಿಲ್ಲವೊ? ಕೀರ್ತನೆಗಾರನಾದ ದಾವೀದನು ದೇವಪ್ರೇರಣೆಯಿಂದ ಬರೆದ ಮಾತುಗಳಲ್ಲಿ ಇದಕ್ಕೆ ಸಾಂತ್ವನದಾಯಕ ಉತ್ತರವಿದೆ. ಆ ಮಾತುಗಳು ಕೀರ್ತನೆ 34:18 ರಲ್ಲಿವೆ.
ವಿಪರೀತ ಸಂಕಟವು ಯೆಹೋವನ ನಂಬಿಗಸ್ತ ಆರಾಧಕನೊಬ್ಬನ ಮೇಲೆ ಯಾವ ಪರಿಣಾಮ ಬೀರಬಲ್ಲದೆಂದು ದಾವೀದನಿಗೆ ಚೆನ್ನಾಗಿ ತಿಳಿದಿತ್ತು. ಹೊಟ್ಟೆಕಿಚ್ಚಿನಿಂದ ಉರಿಯುತ್ತಿದ್ದ ರಾಜ ಸೌಲನು ಅವನನ್ನು ಕೊಲ್ಲಲು ಪಣತೊಟ್ಟಿದ್ದನು. ಸೌಲನು ಅವನನ್ನು ಎಡೆಬಿಡದೆ ಬೆನ್ನಟ್ಟುತ್ತಿದ್ದದರಿಂದ ದಾವೀದನು ಯುವಪ್ರಾಯದಲ್ಲಿ ಅವನಿಂದ ತಪ್ಪಿಸಿಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಿಹೋಗುತ್ತಿದ್ದನು. ಕೊನೆಗೆ ಅವನು ಫಿಲಿಷ್ಟಿಯರ ಪಟ್ಟಣವಾದ ಗತ್ನಲ್ಲಿ ಆಶ್ರಯ ಪಡೆದುಕೊಂಡನು. ಶತ್ರು ಕ್ಷೇತ್ರವಾಗಿದ್ದ ಅಲ್ಲಿಗೆ ಸೌಲನು ಹುಡುಕಿಕೊಂಡು ಬರಲಿಕ್ಕಿಲ್ಲವೆಂದು ಅವನು ನೆನಸಿದನು. ಆದರೆ ಅಲ್ಲೂ ಜನರು ಅವನ ಗುರುತುಹಿಡಿದಾಗ ದಾವೀದನು ಹುಚ್ಚನಂತೆ ನಟಿಸಿ, ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡನು. ತನ್ನನ್ನು ಈ ಕಷ್ಟದಿಂದ ಪಾರುಮಾಡಿದ್ದರ ಶ್ರೇಯವನ್ನು ಅವನು ದೇವರಿಗೆ ಸಲ್ಲಿಸಿದನು. ಅವನು 34ನೇ ಕೀರ್ತನೆಯನ್ನು ಬರೆದದ್ದು ಈ ಅನುಭವದ ಆಧಾರದ ಮೇಲೆಯೇ.
ಸಂಕಷ್ಟದಲ್ಲಿರುವಾಗ ಹತಾಶರಾಗುವ ಇಲ್ಲವೆ ತಾವು ದೇವರ ಕೃಪೆಗೆ ಯೋಗ್ಯರಲ್ಲ ಎಂದನಿಸುವ ಜನರ ಬಗ್ಗೆ ದೇವರು ಚಿಂತಿಸುವುದಿಲ್ಲವೆಂದು ದಾವೀದನು ಎಣಿಸಿದ್ದನೊ? ಅವನು ಬರೆದದ್ದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ವಚನ 18) ಈ ಮಾತುಗಳು ಹೇಗೆ ಸಾಂತ್ವನ ಹಾಗೂ ನಿರೀಕ್ಷೆ ಕೊಡುತ್ತವೆ ಎಂಬುದನ್ನು ನೋಡೋಣ.
“ಯೆಹೋವನು ನೆರವಾಗುತ್ತಾನೆ.” ಈ ವಾಕ್ಸರಣಿಯು ‘ಕರ್ತನು ಗಮನಕೊಡುತ್ತಾನೆ, ಕಾಯುತ್ತಾನೆ, ತನ್ನ ಜನರಿಗೆ ಸಹಾಯಮಾಡಲು ಮತ್ತು ಅವರನ್ನು ರಕ್ಷಿಸಲು ಯಾವಾಗಲೂ ಸಿದ್ಧನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ’ ಎಂದು ಒಂದು ಪರಾಮರ್ಶೆ ಪುಸ್ತಕ ಹೇಳುತ್ತದೆ. ಯೆಹೋವನು ತನ್ನ ಜನರನ್ನು ಕಾಯುತ್ತಾನೆಂಬ ಮಾತು ಭರವಸದಾಯಕ. ಈ ಕಠಿನಕಾಲಗಳಲ್ಲಿ ಅವರು ಯಾವ್ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಆತನು ನೋಡುತ್ತಿದ್ದಾನೆ. ಅವರ ಅಂತರಂಗದ ಭಾವನೆಗಳು ಆತನಿಗೆ ತಿಳಿದಿವೆ.—2 ತಿಮೊಥೆಯ 3:1; ಅ. ಕಾರ್ಯಗಳು 17:27.
‘ಮುರಿದ ಮನಸ್ಸುಳ್ಳವರು.’ ಕೀರ್ತನೆಗಾರನ ಈ ಮಾತುಗಳು “ಸಹಜವಾದ ಬೇಸರ ಮತ್ತು ದುಃಖಕ್ಕೆ” ಸೂಚಿಸುತ್ತವೆಂದು ಹೇಳುತ್ತಾನೆ ಒಬ್ಬ ವಿದ್ವಾಂಸ. ಹೌದು, ದೇವರ ನಂಬಿಗಸ್ತ ಆರಾಧಕರು ಸಹ ಒಮ್ಮೊಮ್ಮೆ ಮನಮುರಿದುಹೋಗುವಂಥ ಅತೀವ ಸಂಕಷ್ಟಗಳಿಗೆ ಒಳಗಾಗುತ್ತಾರೆ.
‘ಕುಗ್ಗಿಹೋದವರು.’ ನಿರುತ್ತೇಜಿತರಾದವರು ತಮ್ಮ ಸ್ವಂತ ದೃಷ್ಟಿಯಲ್ಲಿ ಎಷ್ಟು ಗೌಣರಾಗುತ್ತಾರೆಂದರೆ ಸ್ವಲ್ಪ ಸಮಯಕ್ಕೆ ಅವರು ಎಲ್ಲ ನಿರೀಕ್ಷೆಯನ್ನು ಕಳೆದುಕೊಳ್ಳುತ್ತಾರೆ. ‘ಕುಗ್ಗಿಹೋದವರು’ ಎಂಬ ಅಭಿವ್ಯಕ್ತಿಯನ್ನು, “ಭವಿಷ್ಯದಲ್ಲಿ ಮುನ್ನೋಡಲಿಕ್ಕೆ ಒಳ್ಳೇದೇನೂ ಇಲ್ಲದವರು” ಎಂದು ಅನುವಾದಿಸಬಹುದು ಎನ್ನುತ್ತದೆ ಬೈಬಲ್ ಭಾಷಾಂತರಕಾರರ ಒಂದು ಕೈಪಿಡಿ.
ಮುರಿದ ಮನಸ್ಸುಳ್ಳವರಿಗೆ ಮತ್ತು ಕುಗ್ಗಿಹೋದವರಿಗೆ ಯೆಹೋವನು ಹೇಗೆ ಸ್ಪಂದಿಸುತ್ತಾನೆ? ಆತನಿಗೆ ಅವರ ಬಗ್ಗೆ ಚಿಂತೆಯಿಲ್ಲವೊ? ಅಂಥವರು ತನ್ನ ಪ್ರೀತಿ ಹಾಗೂ ಗಮನಕ್ಕೆ ಯೋಗ್ಯರಲ್ಲವೆಂದು ಎಣಿಸುತ್ತಾನೊ? ಖಂಡಿತವಾಗಿ ಇಲ್ಲ! ಅದಕ್ಕೆ ಬದಲಾಗಿ, ದುಃಖದಲ್ಲಿರುವ ತನ್ನ ಮಗುವನ್ನು ಅಪ್ಪಿಹಿಡಿದು ಸಂತೈಸುವ ಪ್ರೀತಿಪರ ತಂದೆಯಂತೆ ಯೆಹೋವನು ಸಹಾಯಕ್ಕಾಗಿ ಮೊರೆಯಿಡುವ ತನ್ನ ಆರಾಧಕರಿಗೆ ನೆರವಾಗುತ್ತಾನೆ. ಮುರಿದ ಮನಸ್ಸಿನವರನ್ನೂ ಕುಗ್ಗಿಹೋದವರನ್ನೂ ಸಂತೈಸಲು, ಸಮಾಧಾನಪಡಿಸಲು ಆತನು ಕಾತುರದಿಂದಿದ್ದಾನೆ. ಅವರು ಎದುರಿಸಬಹುದಾದ ಯಾವುದೇ ರೀತಿಯ ಕಷ್ಟಗಳನ್ನು ನಿಭಾಯಿಸಲು ಬೇಕಾದ ವಿವೇಕ ಹಾಗೂ ಶಕ್ತಿಯನ್ನು ಆತನು ಕೊಡಬಲ್ಲನು.—2 ಕೊರಿಂಥ 4:7; ಯಾಕೋಬ 1:5.
ನೀವು ಯೆಹೋವನಿಗೆ ಇನ್ನಷ್ಟು ಸಮೀಪವಾಗುವುದು ಹೇಗೆಂದು ತಿಳಿದುಕೊಳ್ಳಬಾರದೇಕೆ? ಈ ಕರುಣಾಭರಿತ ದೇವರು ಹೀಗೆ ಮಾತುಕೊಡುತ್ತಾನೆ: “ನಾನು ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ.”—ಯೆಶಾಯ 57:15. (w11-E 06/01)