ಕಡು ಬಡತನ ಅಂದರೆ...
ಕಡು ಬಡತನ ಅಂದರೆ...
ಕಡು ಬಡತನವೆಂದರೆ ಆಹಾರ-ನೀರು, ಸೌದೆ-ಇಂಧನದ ಕೊರತೆ ಹಾಗೂ ಸರಿಯಾದ ಮನೆ, ಆರೋಗ್ಯಾರೈಕೆ, ಶಿಕ್ಷಣ ಇಲ್ಲದಿರುವುದೇ. ಅದು ಜೀವಕ್ಕೆ ಮಾರಕ. ಲೋಕದಾದ್ಯಂತ ದಟ್ಟ ದಾರಿದ್ರ್ಯದಲ್ಲಿರುವ ಜನರ ಸಂಖ್ಯೆ 100 ಕೋಟಿ. ಇದು ಭಾರತದ ಜನಸಂಖ್ಯೆಗೆ ಸರಿಸಮ! ಹಾಗಿದ್ದರೂ, ಪಶ್ಚಿಮ ಯೂರೋಪ್ ಹಾಗೂ ಉತ್ತರ ಅಮೆರಿಕದಂಥ ದೇಶಗಳಲ್ಲಿರುವ ಅನೇಕರಿಗೆ ಕಡು ಬಡತನದ ಜೀವನ ಹೇಗಿರುತ್ತದೆಂದು ಗೊತ್ತೇ ಇಲ್ಲ. ಆದ್ದರಿಂದ ಬಡ ಜನರಲ್ಲಿ ಕೆಲವರ ಬಗ್ಗೆ ಈಗ ತಿಳಿಯೋಣ.
ಎಂಬಾರುಶೀಮಾ ತಮ್ಮ ಪತ್ನಿ ಹಾಗೂ ಐದು ಮಕ್ಕಳೊಂದಿಗೆ ಆಫ್ರಿಕದ ರುಆಂಡದಲ್ಲಿ ವಾಸಿಸುತ್ತಾರೆ. ಅವರ ಆರನೇ ಮಗ ಮಲೇರಿಯದಿಂದ ಸತ್ತುಹೋದ. ಎಂಬಾರುಶೀಮಾ ಹೇಳುವುದು: “ತಂದೆಯ ಆಸ್ತಿ ಆರು ಮಂದಿ ಮಕ್ಕಳಾದ ನಮಗೆ ಪಾಲಾಗಿ ಸಿಕ್ಕಿತು. ನನಗೆ ಸಿಕ್ಕಿದ ಪಾಲು ತುಂಬ ಚಿಕ್ಕದ್ದು. ಆದ್ದರಿಂದ ಕುಟುಂಬ ಸಮೇತ ಪಟ್ಟಣಕ್ಕೆ ಬಂದೆ. ನಾನೂ ನನ್ನ ಹೆಂಡತಿ ಕಲ್ಲು-ಮಣ್ಣು ಹೊರುವ ಕೂಲಿ ಕೆಲಸ ಮಾಡುತ್ತೇವೆ. ನಮ್ಮದು ಚಿಕ್ಕ ಗುಡಿಸಲು, ಕಿಟಕಿಗಳೂ ಇಲ್ಲ. ನೀರು ತರುವುದು ಪೊಲೀಸ್ ಠಾಣೆಯ ಬಾವಿಯಿಂದ. ದಿನಕ್ಕೆ ಒಂದೇ ಊಟ. ಕೆಲಸ ಇಲ್ಲದಿದ್ದರೆ ಅದೂ ಇಲ್ಲ. ಹಸಿವೆಯಿಂದ ಮಕ್ಕಳು ಅಳುತ್ತಿರುತ್ತಾರೆ. ಅದನ್ನೆಲ್ಲ ನೋಡಲಾಗದೆ ಎದ್ದು ಹೊರಗೆ ಹೋಗಿಬಿಡುತ್ತೇನೆ.”
ಬಿಕ್ಟರ್ ಮತ್ತು ಕಾರ್ಮೆನ್ ಇರುವುದು ಐದು ಮಂದಿ ಮಕ್ಕಳೊಂದಿಗೆ ದಕ್ಷಿಣ ಅಮೆರಿಕದ ಬೊಲಿವಿಯದ ದೂರದ ಪಟ್ಟಣವೊಂದರಲ್ಲಿ. ಅವರಿಬ್ಬರೂ ಚಪ್ಪಲಿ ರಿಪೇರಿ ಕೆಲಸಮಾಡುತ್ತಾರೆ. ಹಾಳುಬಿದ್ದಿರುವ ಕಟ್ಟಡದಲ್ಲಿನ ಒಂದು ಬಾಡಿಗೆ ಕೋಣೆಯಲ್ಲಿ ವಾಸ. ಅದರ ತಗಡಿನ ಛಾವಣಿ ಸೋರುತ್ತಿರುತ್ತದೆ. ವಿದ್ಯುಚ್ಛಕ್ತಿ ಇಲ್ಲ. ಅಲ್ಲಿನ ಶಾಲೆಯಲ್ಲಂತೂ ವಿದ್ಯಾರ್ಥಿಗಳು ಎಷ್ಟು ಕಿಕ್ಕಿರಿದಿದ್ದರೆಂದರೆ ಸಾಕಷ್ಟು ಡೆಸ್ಕ್ಗಳಿರಲಿಲ್ಲ. ತನ್ನ ಮಗಳನ್ನು ಅಲ್ಲಿ ಸೇರಿಸಲಿಕ್ಕಾಗಿ ಬಿಕ್ಟರ್ ಒಂದು ಡೆಸ್ಕ್ ಅನ್ನೇ ಮಾಡಿ ಕೊಡಬೇಕಾಯಿತು. ಅಡುಗೆಗಾಗಿ, ಕುಡಿಯುವ ನೀರು ಕುದಿಸಲಿಕ್ಕಾಗಿ ಸೌದೆ ಕಡಿದು ತರಲು ಈ ಗಂಡಹೆಂಡತಿ 10 ಕಿ.ಮೀ. ದೂರ ನಡೆಯಬೇಕು. ಕಾರ್ಮೆನ್ ಹೇಳುವುದು: “ನಮಗೆ ಶೌಚಾಲಯ ಇಲ್ಲ, ನದಿಗೇ ಹೋಗಬೇಕು. ಜನರು ಸ್ನಾನ ಮಾಡುವುದೂ ಅಲ್ಲೇ, ಕಸ ಎಸೆಯುವುದೂ ಅಲ್ಲೇ. ಹಾಗಾಗಿ ನಮ್ಮ ಮಕ್ಕಳು ಕಾಯಿಲೆಬೀಳುತ್ತಿರುತ್ತಾರೆ.”
ಫ್ರಾನ್ಸಿಸ್ಕು ಮತ್ತು ಇಲಿಡ್ಯಾ ಆಫ್ರಿಕದ ಮೊಸಾಂಬೀಕ್ನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. ಅವರ ಪುಟ್ಟ ಮಕ್ಕಳಲ್ಲಿ ಒಬ್ಬನಿಗೆ ಮಲೇರಿಯ ಬಂದು ತೀರಿಹೋದ. ಏಕೆಂದರೆ ಅವನನ್ನು ಆಸ್ಪತ್ರೆಗೆ ಕೊಂಡೊಯ್ದಾಗ ಅವರು ಅವನನ್ನು ಸೇರಿಸಿಕೊಂಡಿರಲಿಲ್ಲ. ಈಗ ಉಳಿದಿರುವುದು ನಾಲ್ಕು ಮಂದಿ ಮಕ್ಕಳು. ಈ ದಂಪತಿ ಅವರ ಚಿಕ್ಕ ಜಮೀನಿನಲ್ಲಿ ಅಕ್ಕಿ, ಗೆಣಸನ್ನು ಬೆಳೆಸುತ್ತಾರೆ. ಇದು ಬರೇ 3 ತಿಂಗಳ ಊಟಕ್ಕಷ್ಟೇ ಸಾಕು. “ಒಮ್ಮೊಮ್ಮೆ ಮಳೆ ಬರುವುದಿಲ್ಲ ಅಥವಾ ಕಳ್ಳರು ಫಸಲನ್ನು ಕದಿಯುತ್ತಾರೆ. ಆದ್ದರಿಂದ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುವ ಬಿದಿರಿನ ಹಲಗೆಗಳನ್ನು ಮಾಡಿ ಮಾರಿ ಅಷ್ಟೋ ಇಷ್ಟೋ ಸಂಪಾದಿಸುತ್ತೇನೆ. ಎರಡು ತಾಸು ನಡೆದು ಪೊದೆಗಾಡಿನಿಂದ ನಾನೂ ನನ್ನ ಹೆಂಡತಿ ಸೌದೆಯ ಒಂದೊಂದು
ಕಟ್ಟನ್ನು ಹೊತ್ತು ತರುತ್ತೇವೆ. ಒಂದನ್ನು ನಮ್ಮ ಇಡೀ ವಾರದ ಅಡುಗೆಗೆ ಬಳಸುತ್ತೇವೆ, ಇನ್ನೊಂದನ್ನು ಮಾರುತ್ತೇವೆ” ಅನ್ನುತ್ತಾನೆ ಫ್ರಾನ್ಸಿಸ್ಕು.ಎಂಬಾರುಶೀಮಾ, ಬಿಕ್ಟರ್, ಫ್ರಾನ್ಸಿಸ್ಕುನಂತೆ ಜಗತ್ತಿನ ಶೇ. 15ರಷ್ಟು ಜನರು ಕಡು ಬಡತನದ ಬೇಗೆಯಲ್ಲಿ ಬೇಯುತ್ತಿರುವಾಗ ಕೋಟಿಗಟ್ಟಲೆ ಜನರು ಐಷಾರಾಮದಿಂದ ಬದುಕುತ್ತಿದ್ದಾರೆ. ಇದು ಘೋರ ಅನ್ಯಾಯ ಎಂಬುದು ಅನೇಕರ ಅಭಿಪ್ರಾಯ. ಇದನ್ನು ಬಗೆಹರಿಸಲು ಕೆಲವರು ಯತ್ನಿಸಿದ್ದಾರೆ. ಇಂಥ ಯತ್ನಗಳ, ನಿರೀಕ್ಷೆಗಳ ಕುರಿತೇ ಮುಂದಿನ ಲೇಖನ ಚರ್ಚಿಸುತ್ತದೆ. (w11-E 06/01)
[ಪುಟ 2, 3ರಲ್ಲಿರುವ ಚಿತ್ರ]
ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ನದಿಯಿಂದ ನೀರು ತಕ್ಕೊಳ್ಳುತ್ತಿರುವ ಕಾರ್ಮೆನ್