ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ಮಿತ್ರರನ್ನು ಆರಿಸಿಕೊಳ್ಳುವುದು ಹೇಗೆ?

ಒಳ್ಳೇ ಮಿತ್ರರನ್ನು ಆರಿಸಿಕೊಳ್ಳುವುದು ಹೇಗೆ?

ದೇವರ ವಾಕ್ಯದಿಂದ ಕಲಿಯಿರಿ

ಒಳ್ಳೇ ಮಿತ್ರರನ್ನು ಆರಿಸಿಕೊಳ್ಳುವುದು ಹೇಗೆ?

ನಿಮ್ಮ ಮನಸ್ಸಿಗೆ ಬಂದಿರಬಹುದಾದ ಕೆಲವು ಪ್ರಶ್ನೆಗಳು ಈ ಲೇಖನದಲ್ಲಿವೆ. ಅವುಗಳ ಉತ್ತರಗಳು ದೇವರ ವಾಕ್ಯವಾದ ಬೈಬಲಿನಲ್ಲಿ ಎಲ್ಲಿವೆಯೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಉತ್ಸುಕರಾಗಿದ್ದಾರೆ.

1. ಮಿತ್ರರನ್ನು ಆರಿಸುವಾಗ ನಾವೇಕೆ ಜಾಗ್ರತೆ ವಹಿಸಬೇಕು?

ಇತರರು ನಮ್ಮನ್ನು ಇಷ್ಟಪಡಬೇಕೆಂಬುದು ನಮ್ಮಲ್ಲಿ ಹೆಚ್ಚಿನವರ ಆಸೆ. ಹಾಗಾಗಿ ಅವರು ಮಾಡಿದಂತೆಯೇ ಮಾಡಲು ಯತ್ನಿಸುತ್ತೇವೆ. ಇದು ತಾನೇ ತೋರಿಸುತ್ತದೆ ನಮ್ಮ ಮಿತ್ರರು ನಮ್ಮ ಮನೋಭಾವಗಳ ಮೇಲೆ ಗಾಢ ಪ್ರಭಾವಬೀರಬಲ್ಲರು. ನಮ್ಮ ಮಿತ್ರರು ಎಂಥವರಾಗಿದ್ದಾರೊ ಅದೇ ರೀತಿಯ ವ್ಯಕ್ತಿಗಳು ನಾವಾಗುತ್ತೇವೆ.—ಜ್ಞಾನೋಕ್ತಿ 4:23; 13:20 ಓದಿ.

ಮಿತ್ರರನ್ನು ಆಯ್ಕೆಮಾಡುವಾಗ ಬೈಬಲ್‌ ಬರಹಗಾರರಲ್ಲಿ ಒಬ್ಬನಾದ ದಾವೀದ ಜಾಗ್ರತೆ ವಹಿಸಿದನು. ದೇವರಿಗೆ ನಿಷ್ಠನಾಗಿ ಉಳಿಯಲು ತನಗೆ ಸಹಾಯಮಾಡುವವರ ಜೊತೆಗೇ ಸಹವಾಸ ಮಾಡಿದನು. (ಕೀರ್ತನೆ 26:4, 5, 11, 12) ಉದಾಹರಣೆಗೆ ಯೋನಾತಾನನ ಸ್ನೇಹ ಅವನಿಗೆ ಸಂತೋಷ ತಂದಿತು. ಏಕೆಂದರೆ ಯೋನಾತಾನನು ಅವನಿಗೆ ಯೆಹೋವ ದೇವರಲ್ಲಿ ಭರವಸೆಯಿಡುವಂತೆ ಪ್ರೋತ್ಸಾಹಿಸಿದನು.1 ಸಮುವೇಲ 23:16-18 ಓದಿ.

2. ನೀವು ಹೇಗೆ ದೇವರ ಮಿತ್ರರಾಗಬಲ್ಲಿರಿ?

ಯೆಹೋವ ದೇವರು ಸರ್ವಶಕ್ತನು. ಆದರೂ ನಾವಾತನ ಮಿತ್ರರಾಗಬಲ್ಲೆವು. ಉದಾಹರಣೆಗೆ ಅಬ್ರಹಾಮ ಎಂಬಾತ ದೇವರ ಮಿತ್ರನಾದ. ಅಬ್ರಹಾಮನು ಯೆಹೋವನಲ್ಲಿ ಭರವಸೆಯಿಟ್ಟ. ಆತನು ಹೇಳಿದಂತೆ ಮಾಡಿದ. ಆದ್ದರಿಂದಲೇ ಯೆಹೋವನು ಆತನನ್ನು ತನ್ನ ಸ್ನೇಹಿತ ಎಂದು ಕರೆದನು. (ಆದಿಕಾಂಡ 22:2, 9-12; ಯಾಕೋಬ 2:21-23) ನಾವೂ ಯೆಹೋವನಲ್ಲಿ ಭರವಸೆಯಿಟ್ಟು, ಆತನು ಹೇಳಿದಂತೆ ಮಾಡಿದರೆ ಆತನ ಮಿತ್ರರಾಗಬಲ್ಲೆವು.ಕೀರ್ತನೆ 15:1, 2 ಓದಿ.

3. ಒಳ್ಳೇ ಮಿತ್ರರಿರುವುದರ ಪ್ರಯೋಜನಗಳು?

ನಿಜ ಮಿತ್ರರು ನಿಮಗೆ ನಿಷ್ಠರಾಗಿರುತ್ತಾರೆ. ಸರಿಯಾದದ್ದನ್ನೇ ಮಾಡಲು ಸಹಾಯಮಾಡುತ್ತಾರೆ. (ಜ್ಞಾನೋಕ್ತಿ 17:17; 18:24) ಯೋನಾತಾನ-ದಾವೀದರ ಸ್ನೇಹ ತೆಗೆದುಕೊಳ್ಳಿ. ಯೋನಾತಾನ ದಾವೀದನಿಗಿಂತ ಹೆಚ್ಚುಕಡಿಮೆ 30 ವರ್ಷ ದೊಡ್ಡವನಾಗಿದ್ದ. ಅವನೇ ಇಸ್ರೇಲ್‌ ರಾಜ್ಯದ ಮುಂದಿನ ರಾಜನಾಗಬೇಕಿತ್ತು. ಆದರೂ ದೇವರು ಆ ಸ್ಥಾನಕ್ಕೆ ದಾವೀದನನ್ನು ಆಯ್ಕೆಮಾಡಿದ್ದಾನೆಂದು ತಿಳಿದಾಗ ಸಂತೋಷದಿಂದ ದಾವೀದನನ್ನು ಬೆಂಬಲಿಸಿದ. ನಿಜ ಮಿತ್ರರಿಂದ ಇನ್ನೊಂದು ಸಹಾಯವೂ ಇದೆ. ನೀವೇನಾದರೂ ಮೂರ್ಖ ಕೆಲಸಕ್ಕೆ ಕೈಹಾಕುತ್ತಿದ್ದೀರೆಂದು ತಿಳಿದಾಗ ತಿದ್ದುತ್ತಾರೆ. ಆ ಧೈರ್ಯ ಅವರಿಗಿರುತ್ತದೆ. (ಕೀರ್ತನೆ 141:5) ನಿಮ್ಮ ಮಿತ್ರರು ದೇವರನ್ನು ಪ್ರೀತಿಸುವವರಾಗಿದ್ದರಂತೂ ಒಳ್ಳೇ ರೂಢಿಗಳನ್ನು ಬೆಳೆಸಿಕೊಳ್ಳಲೂ ನೆರವಾಗುತ್ತಾರೆ.1 ಕೊರಿಂಥ 15:33 ಓದಿ.

ನಿಮ್ಮಂತೆಯೇ ಸರಿಯಾದದ್ದನ್ನು ಮಾಡುವ ಅಪೇಕ್ಷೆಯುಳ್ಳ ಜನರನ್ನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಕಂಡುಕೊಳ್ಳುವಿರಿ. ದೇವರನ್ನು ಸಂತೋಷಪಡಿಸಲು ನೀವು ಪ್ರಯತ್ನಿಸುತ್ತಿರುವಾಗ ಪ್ರೋತ್ಸಾಹಿಸುವ ಮಿತ್ರರು ಅಲ್ಲಿ ಸಿಗುವರು.ಇಬ್ರಿಯ 10:24, 25 ಓದಿ.

ಆದರೆ ದೇವರನ್ನು ಪ್ರೀತಿಸುವ ಮಿತ್ರರೂ ಒಮ್ಮೊಮ್ಮೆ ನಮ್ಮ ಮನನೋಯಿಸಾರು. ನೊಂದುಕೊಳ್ಳಬೇಡಿ, ಸಿಟ್ಟುಗೊಳ್ಳಬೇಡಿ. (ಪ್ರಸಂಗಿ 7:9, 20-22) ನೆನಪಿಡಿ, ಯಾವ ಮಿತ್ರನೂ ಪರಿಪೂರ್ಣನಲ್ಲ. ಆದರೆ ದೇವರನ್ನು ಪ್ರೀತಿಸುವ ಮಿತ್ರರು ನಮಗೆ ತುಂಬ ಅಮೂಲ್ಯರು. ಹಾಗಾಗಿ ಅವರ ಲೋಪದೋಷಗಳನ್ನು ಅಲಕ್ಷಿಸುವಂತೆ ದೇವರ ವಾಕ್ಯ ನಮ್ಮನ್ನು ಉತ್ತೇಜಿಸುತ್ತದೆ.ಕೊಲೊಸ್ಸೆ 3:13 ಓದಿ.

4. ‘ಮಿತ್ರರು’ ನಿಮ್ಮನ್ನು ವಿರೋಧಿಸಿದರೆ ಆಗೇನು?

ದೇವರ ವಾಕ್ಯವನ್ನು ಕಲಿಯುವಾಗ ಅನೇಕರಿಗೆ ಮಿತ್ರರಿಂದ ವಿರೋಧ ಎದುರಾಗಿದೆ. ನಿಮಗೂ ಹಾಗೆ ಆಗಬಹುದು. ಬೈಬಲಿನಲ್ಲಿರುವ ಪ್ರಾಯೋಗಿಕ ಸಲಹೆಯ ಮೌಲ್ಯ ಇಲ್ಲವೆ ಬೈಬಲ್‌ ಕೊಡುವ ನಿರೀಕ್ಷೆ ಅವರಿಗೆ ಗೊತ್ತಿಲ್ಲದ ಕಾರಣ ಅವರು ಹಾಗೆ ಮಾಡಬಹುದು. ಬಹುಶಃ ನೀವು ಆ ವಿಷಯಗಳನ್ನು ಅವರಿಗೆ ವಿವರಿಸಬಹುದು.ಕೊಲೊಸ್ಸೆ 4:6 ಓದಿ.

ಕೆಲ ‘ಮಿತ್ರರು’ ದೇವರ ವಾಕ್ಯದಲ್ಲಿರುವ ಶುಭ ಸಂದೇಶದ ಬಗ್ಗೆ ಕುಚೋದ್ಯ ಮಾಡಬಹುದು. (2 ಪೇತ್ರ 3:3, 4) ಇನ್ನೂ ಕೆಲವರು, ನೀವು ಸರಿಯಾದದ್ದನ್ನು ಮಾಡಲು ಪ್ರಯತ್ನಿಸುವಾಗ ಅಪಹಾಸ್ಯ ಮಾಡಬಹುದು. (1 ಪೇತ್ರ 4:4) ಆಗ ನಿಮ್ಮ ಮುಂದಿರುವ ಆಯ್ಕೆ: ಒಂದೇ ಅವರ ಮಿತ್ರರಾಗಿ ಉಳಿಯುವುದು ಇಲ್ಲವೆ ದೇವರ ಮಿತ್ರರಾಗುವುದು. ಒಂದು ವಿಷಯವಂತೂ ಖಂಡಿತ ದೇವರಷ್ಟು ಒಳ್ಳೇ ಮಿತ್ರ ನಿಮಗೆ ಎಲ್ಲೂ ಸಿಗುವುದಿಲ್ಲ.ಯಾಕೋಬ 4:4, 8 ಓದಿ. (w11-E 12/01)

ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 12 ಮತ್ತು 19ನ್ನು ಅಧ್ಯಾಯ ನೋಡಿ.