ಯೆಹೋವನು ನನ್ನ ಕಣ್ತೆರೆದನು!
ಯೆಹೋವನು ನನ್ನ ಕಣ್ತೆರೆದನು!
ಪ್ಯಾಟ್ರಿಸ್ ಓಯೆಕಾ ಹೇಳಿದಂತೆ
ಸಾಯಂಕಾಲದ ಕತ್ತಲು ಆವರಿಸಲಿತ್ತು. ಇಂಥದ್ದೇ ಕತ್ತಲು ತುಂಬಿದ ನನ್ನ ಬದುಕಿನ ಮತ್ತೊಂದು ದಿನ ಕಳೆಯಿತು. ಕುರುಡನಾಗಿದ್ದ ನಾನು ಒಬ್ಬನೇ ಕುಳಿತು, ರೇಡಿಯೋದಲ್ಲಿ ಬಂದದ್ದೆಲ್ಲವನ್ನು ಸುಮ್ಮನೆ ಆಲಿಸುತ್ತಾ ಆ ದಿನ ಕಳೆದಿದ್ದೆ. ಛೇ, ಇದೂ ಒಂದು ಜೀವನವೇ!? ಇದಕ್ಕೊಂದು ಅಂತ್ಯ ಕಾಣಿಸಬೇಕು ಎಂದು ನಿರ್ಣಯಿಸಿದೆ. ಒಂದು ಕಪ್ ನೀರಿನಲ್ಲಿ ವಿಷ ಬೆರೆಸಿ ನನ್ನ ಮುಂದಿದ್ದ ಮೇಜಿನ ಮೇಲಿಟ್ಟೆ. ಕೊನೆ ಬಾರಿ ಸ್ನಾನ ಮಾಡಿ, ನೀಟಾಗಿ ಉಡುಪು ಧರಿಸಿ ಆಮೇಲೆ ಅದನ್ನು ಕುಡಿಯಬೇಕೆಂದಿದ್ದೆ. ನಾನೇಕೆ ಆತ್ಮಹತ್ಯೆಗೆ ಪ್ರಯತ್ನಿಸಿದೆ? ಹಾಗಿದ್ದಲ್ಲಿ ನಾನೀಗಲೂ ಬದುಕಿರುವುದು ಹೇಗೆ? ನನ್ನ ಕಥೆ ಕೇಳಿ.
ನಾನು ಹುಟ್ಟಿದ್ದು 1958ರ ಫೆಬ್ರವರಿ 2ರಂದು. ಕಾಂಗೊ ಗಣರಾಜ್ಯದಲ್ಲಿನ ಕಸಾಯ್ ಓರಿಯೆಂಟಲ್ ಎಂಬ ಪ್ರಾಂತದಲ್ಲಿ. ಒಂಬತ್ತು ವರ್ಷದವನಾಗಿದ್ದಾಗ ಅಪ್ಪ ತೀರಿಕೊಂಡರು. ಅಣ್ಣ ನನ್ನನ್ನು ನೋಡಿಕೊಂಡ.
ಶಾಲಾ ಶಿಕ್ಷಣ ಮುಗಿಸಿದ ಬಳಿಕ ನನಗೆ ರಬ್ಬರ್ ತೋಟವೊಂದರ ಆಫೀಸಿನಲ್ಲಿ ಕೆಲಸ ಸಿಕ್ಕಿತು. 1989ರ ಒಂದು ಬೆಳಗ್ಗೆ ಆಫೀಸಿನಲ್ಲಿ ಕೂತು ವರದಿ ತಯಾರಿಸುತ್ತಾ ಇದ್ದೆ. ಇದ್ದಕ್ಕಿದ್ದ ಹಾಗೆ ಎಲ್ಲೆಡೆ ಕತ್ತಲಾಯಿತು. ಪವರ್ ಕಟ್ ಆಗಿದೆ ಅಂತ ಮೊದಲು ನೆನಸಿದೆ. ಆದರೆ ಜನರೇಟರ್ ಓಡುತ್ತಿದ್ದ ಸದ್ದು ನನಗೆ ಕೇಳಿಸುತ್ತಿತ್ತು. ಅಲ್ಲದೆ ಅದು ಬೆಳಗ್ಗಿನ ಹೊತ್ತು! ಆದರೆ ನನಗೆ ನನ್ನ ಮುಂದಿದ್ದ ಪುಟಗಳೂ ಕಾಣುತ್ತಿರಲಿಲ್ಲ, ಏನೂ ಕಾಣುತ್ತಿರಲಿಲ್ಲ!! ಗಾಬರಿಯಿಂದ ಕಂಗಾಲಾದೆ.
ನನ್ನ ಕೈಕೆಳಗೆ ಕೆಲಸಮಾಡುತ್ತಿದ್ದ ಒಬ್ಬನನ್ನು ತಕ್ಷಣ ಕರೆದು ಅಲ್ಲಿದ್ದ ಚಿಕಿತ್ಸಾಲಯದ ವೈದ್ಯರ ಬಳಿ ಕೊಂಡೊಯ್ಯುವಂತೆ ಹೇಳಿದೆ. ನನ್ನ ಅಕ್ಷಿಪಟಲ ಹರಿದುಹೋಗಿ ನನ್ನ ಸ್ಥಿತಿ ಚಿಂತಾಜನಕ ಆಗಿರುವುದು ಆ ವೈದ್ಯರಿಗೆ ತಿಳಿದುಬಂತು. ಆದ್ದರಿಂದ ನನಗೆ ರಾಜಧಾನಿಯಾದ ಕಿನ್ಶಾಸದಲ್ಲಿರುವ ಅನುಭವೀ ವೈದ್ಯರ ಬಳಿ ಹೋಗಲು ಶಿಫಾರಸ್ಸು ಮಾಡಿದರು.
ಕಿನ್ಶಾಸದಲ್ಲಿ ಬದುಕು
ಕಿನ್ಶಾಸದಲ್ಲಿ ಅನೇಕ ನೇತ್ರತಜ್ಞರನ್ನು ಕಂಡೆ. 43 ದಿನ ಆಸ್ಪತ್ರೆಯಲ್ಲೂ ಕಳೆದೆ. ಕೊನೆಯಲ್ಲಿ ಡಾಕ್ಟರರು, ನಾನು ಜೀವನಪೂರ್ತಿ ಕುರುಡನಾಗಿರುವೆ ಎಂದು ಕೈಚೆಲ್ಲಿ ಬಿಟ್ಟರು! ಪವಾಡದಿಂದ ವಾಸಿಯಾಗಲು ನನ್ನ ಕುಟುಂಬದವರು ನನ್ನನ್ನು ಎಲ್ಲ ಚರ್ಚುಗಳಿಗೆ ಕೊಂಡೊಯ್ದರು, ಒಂದನ್ನೂ ಬಿಡಲಿಲ್ಲ. ಅದೆಲ್ಲ ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ವ್ಯರ್ಥವಾಗಿತ್ತು.
ಕೊನೆಗೆ, ನನ್ನ ದೃಷ್ಟಿಯನ್ನು ಮರಳಿಪಡೆಯುವ ಆಸೆಯನ್ನೇ ಕೈಬಿಟ್ಟೆ. ನನ್ನ ಬದುಕು ಅಂಧಕಾರವಾಯಿತು. ನನ್ನ ದೃಷ್ಟಿ ಹೋಯಿತು, ಕೆಲಸ ಕಳಕೊಂಡೆ, ಹೆಂಡತಿಯೂ ಬಿಟ್ಟುಹೋದಳು. ಹೋಗುವಾಗ ಮನೆಯಲ್ಲಿದ್ದದ್ದೆಲ್ಲವನ್ನೂ ತಕ್ಕೊಂಡು ಹೋದಳು. ನನಗೆ ಮನೆಯಿಂದ ಹೊರಹೋಗಲು, ಬೇರೆ ಜನರೊಂದಿಗೆ ಬೆರೆಯಲು ಸಂಕೋಚ ಆಗುತ್ತಿತ್ತು. ಒಂದು ಚಿಪ್ಪಿನೊಳಗೆ ಸೇರಿದವನಂತೆ ಮನೆಯೊಳಗೇ ದಿನದೂಡುತ್ತಿದ್ದೆ. ಯಾರೊಟ್ಟಿಗೂ ಬೆರೆಯದ ನನ್ನನ್ನು, ಯಾವ ಪ್ರಯೋಜನಕ್ಕೂ ಬಾರದವ ಎಂಬ ಭಾವನೆ ಕಿತ್ತುತಿನ್ನುತ್ತಿತ್ತು.
ಎರಡು ಸಲ ನನ್ನ ಜೀವ ತಕ್ಕೊಳ್ಳಲು ಯತ್ನಿಸಿದೆ. ಎರಡನೇ ಸಲ ಮಾಡಿದ ಯತ್ನವನ್ನೇ ಕಥೆಯ ಆರಂಭದಲ್ಲಿ ವರ್ಣಿಸಿದ್ದೇನೆ. ನನ್ನ ಸಂಬಂಧಿಕರ ಒಂದು ಚಿಕ್ಕ ಮಗುವಿನಿಂದಾಗಿ ನನ್ನ ಜೀವ ಉಳಿಯಿತು. ನಾನು ಸ್ನಾನ ಮಾಡಲೆಂದು ಹೋಗಿದ್ದಾಗ ಕೋಣೆಗೆ ಬಂದ ಮಗು, ತಿಳಿಯದೆ ಆ ಕಪ್ ಅನ್ನು ತೆಗೆದು ಅದರಲ್ಲಿದ್ದದ್ದೆಲ್ಲವನ್ನೂ ನೆಲಕ್ಕೆ ಚೆಲ್ಲಿತ್ತು. ಸದ್ಯ, ಆ ಕಪ್ನಲ್ಲಿದದ್ದನ್ನು ಅದು ಕುಡಿಯಲಿಲ್ಲ!! ಸ್ನಾನ ಮಾಡಿ ಬಂದ ನಾನು ಅದನ್ನು ಕುಡಿಯಬೇಕೆಂದಿದ್ದಾಗ ಕಪ್ ಕೈಗೆ ಸಿಗಲಿಲ್ಲ. ತುಂಬ ನಿರಾಶೆ ಆಗಿತ್ತು. ಎಲ್ಲ ಕಡೆ ತಡಕಾಡಿದೆ. ನಾನ್ಯಾಕೆ ಅದಕ್ಕಾಗಿ ಹುಡುಕುತ್ತಾ ಇದ್ದೆ, ಏನು ಮಾಡಬೇಕೆಂದಿದ್ದೆ ಎಂದು ಕೊನೆಗೆ ನನ್ನ ಕುಟುಂಬದವರಿಗೆ ಬಾಯಿಬಿಟ್ಟೆ.
ಆತ್ಮಹತ್ಯೆ ಮಾಡುವ ನನ್ನ ಯೋಜನೆ ನೆಲಕಚ್ಚಿತು. ಯೆಹೋವ ದೇವರು ಮತ್ತು ನನ್ನ ಕುಟುಂಬದವರು ನನ್ನ ಮೇಲೆ ಕಣ್ಣಿಟ್ಟದ್ದಕ್ಕಾಗಿ ನಾನೀಗ ತುಂಬ ಆಭಾರಿ.
ಬದುಕಿನಲ್ಲಿ ಮತ್ತೆ ಆನಂದ!
1992ರ ಒಂದು ಭಾನುವಾರ, ಮನೆಯಲ್ಲಿ ಕೂತು ಸಿಗರೇಟ್ ಸೇದುತ್ತಾ ಇದ್ದೆ. ಮನೆಯಿಂದ ಮನೆ ಸುವಾರ್ತೆ ಸಾರುತ್ತಾ ಇಬ್ಬರು ಯೆಹೋವನ ಸಾಕ್ಷಿಗಳು ನನ್ನ ಮನೆಗೆ ಬಂದರು. ನಾನು ಕುರುಡನಾಗಿರುವುದನ್ನು ನೋಡಿ, ಯೆಶಾಯ 35:5ನ್ನು ಓದಿಹೇಳಿದರು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು.” ಈ ಮಾತುಗಳನ್ನು ಕೇಳಿದಾಗ ನನಗಾದ ಆನಂದ ಹೇಳತೀರದು! ನಾನು ಈವರೆಗೆ ಭೇಟಿಯಾಗಿದ್ದ ಚರ್ಚುಗಳಲ್ಲೆಲ್ಲಾ ನನಗೆ ಪವಾಡದಿಂದ ಗುಣವಾಗುತ್ತದೆಂದು ಹೇಳಲಾಗುತ್ತಿತ್ತು. ಆದರೆ ಈ ಸಾಕ್ಷಿಗಳು ಅಂಥದ್ದೇನೂ ಭರವಸೆ ಕೊಡಲಿಲ್ಲ. ಬದಲಾಗಿ ನಾನು ದೇವರ ಬಗ್ಗೆ ಕಲಿತರೆ, ಆತನು ವಾಗ್ದಾನಿಸಿರುವ ಹೊಸ ಲೋಕದಲ್ಲಿ ಮುಂದೆ ನನಗೆ ಪುನಃ ದೃಷ್ಟಿ ಕೊಡುವನೆಂದು ಹೇಳಿದರು. (ಯೋಹಾನ 17:3) ನಾನು ತಕ್ಷಣವೇ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ನೆರವಿನಿಂದ ಸಾಕ್ಷಿಗಳು ನನಗೆ ಬೈಬಲನ್ನು ಕಲಿಸಿದರು. ಸ್ಥಳೀಯ ರಾಜ್ಯ ಸಭಾಗೃಹದಲ್ಲಿ ನಡೆಯುವ ಯೆಹೋವನ ಸಾಕ್ಷಿಗಳ ಎಲ್ಲ ಕೂಟಗಳಿಗೂ ಹಾಜರಾಗಲಾರಂಭಿಸಿದೆ. ನನ್ನ ಜೀವನದಲ್ಲಿ ಬದಲಾವಣೆಗಳನ್ನು ಮಾಡಿದೆ. ಧೂಮಪಾನ ನಿಲ್ಲಿಸಿಬಿಟ್ಟೆ.
ಆದರೆ ನನ್ನ ಅಂಧತ್ವ ನನ್ನ ಆಧ್ಯಾತ್ಮಿಕ ಪ್ರಗತಿಗೆ ತಡೆಯಾಗಿತ್ತು. ಹಾಗಾಗಿ ನಾನು ಅಂಧರ ಸಂಸ್ಥೆಗೆ ಹೋಗಿ ಬ್ರೇಲ್ ಲಿಪಿ ಓದಲು ಬರೆಯಲು ಕಲಿತೆ. ಇದರಿಂದಾಗಿ ಸಭಾಗೃಹದಲ್ಲಿ ಕೊಡಲಾಗುವ ದೇವರ ಸೇವೆಗೆ ಸಂಬಂಧಪಟ್ಟ ತರಬೇತಿನಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಾಯಿತು. ಬೇಗನೆ ನನ್ನ ನೆರೆಹೊರೆಯಲ್ಲಿ ಸುವಾರ್ತೆ ಸಾರಲು ತೊಡಗಿದೆ. ನನ್ನ ಬದುಕಿನಲ್ಲಿ ಆನಂದ ಮತ್ತೆ ಮರಳಿಬಂತು. ಪ್ರಗತಿಮಾಡುತ್ತಾ ನನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿದೆ. 1994ರ ಮೇ 7ರಂದು ದೀಕ್ಷಾಸ್ನಾನ ಪಡೆದೆ.
ಯೆಹೋವನ ಹಾಗೂ ಜನರ ಮೇಲೆ ಪ್ರೀತಿ ಹೆಚ್ಚುತ್ತಾ ಹೋದಂತೆ, ಪೂರ್ಣ ಸಮಯದ ಸೇವೆಯಲ್ಲಿ ತೊಡಗಬೇಕೆಂಬ ಆಸೆ ನನ್ನಲ್ಲಿ ಚಿಗುರಿತು. ಹಾಗಾಗಿ 1995ರ ಡಿಸೆಂಬರ್ 1ರಿಂದ ನಾನು ರೆಗ್ಯುಲರ್ ಪಯನೀಯರ್ ಅಂದರೆ ಪೂರ್ಣ ಸಮಯ ಸುವಾರ್ತೆ ಸಾರುವವನಾಗಿ ಸೇವೆಮಾಡಲಾರಂಭಿಸಿದೆ. 2004ರ ಫೆಬ್ರವರಿಯಿಂದ ನನ್ನ ಸಭೆಯಲ್ಲಿ ಹಿರಿಯನಾಗಿ ಸೇವೆಸಲ್ಲಿಸುವ ಸದವಕಾಶವೂ ನನಗೆ ಸಿಕ್ಕಿದೆ. ಒಮ್ಮೊಮ್ಮೆ ಇತರ ಸಭೆಗಳಲ್ಲೂ ಬೈಬಲ್ ಭಾಷಣಗಳನ್ನು ಕೊಡುವಂತೆ ನನ್ನನ್ನು ಆಮಂತ್ರಿಸಲಾಗುತ್ತದೆ. ಈ ಎಲ್ಲ ಆಶೀರ್ವಾದಗಳು ನನಗೆ ಮಹದಾನಂದ ತಂದಿವೆ ಮತ್ತು ಯೆಹೋವ ದೇವರ ಸೇವೆಮಾಡಲು ನಮಗೆ ಆಸೆಯಿದ್ದಲ್ಲಿ ಯಾವ ಅಂಗವೈಕಲ್ಯವೂ ನಮ್ಮನ್ನು ತಡೆಯಲಾರದು ಎಂಬದನ್ನು ಗ್ರಹಿಸಲು ಸಾಧ್ಯಗೊಳಿಸಿವೆ.
ಯೆಹೋವನು ನನಗೆ ‘ಕಣ್ಣು’ ಕೊಟ್ಟಿದ್ದಾನೆ
ಈಗಾಗಲೇ ತಿಳಿಸಿದಂತೆ ನಾನು ಅಂಧನಾದ ಕಾರಣ ನನ್ನನ್ನು ಹೆಂಡತಿ ಬಿಟ್ಟುಹೋದಳು. ಆದರೆ ಯೆಹೋವನು ನನಗೆ ಇನ್ನೊಂದು ಆಶೀರ್ವಾದಕೊಟ್ಟನು. ನನಗೆ ‘ಕಣ್ಣು’ ಕೊಟ್ಟನು. ಆ್ಯನಿ ಮವಾಂಬು ಎಂಬಾಕೆ ನನ್ನ ಕಣ್ಣು. ನಾನು ಅಂಧನಾಗಿದ್ದರೂ ನನ್ನನ್ನು ಪತಿಯಾಗಿ ಸ್ವೀಕರಿಸಿದವಳು ಈಕೆ. ಆಕೆಯೂ ಪೂರ್ಣ ಸಮಯ ಸುವಾರ್ತೆ ಸಾರುವವಳು. ಹಾಗಾಗಿ ಯಾವಾಗಲೂ ನನಗೆ ಜೊತೆ ಆಗಿರುತ್ತಾಳೆ. ನನ್ನ ಭಾಷಣಗಳಿಗೆ ಬೇಕಾದ ಮಾಹಿತಿಯನ್ನು ಓದಿಹೇಳುತ್ತಾಳೆ. ಅದನ್ನು ಬ್ರೇಲ್ ಲಿಪಿಯಲ್ಲಿ ಬರೆದುಕೊಳ್ಳುತ್ತೇನೆ. ಆಕೆ ನನಗೆ ಸಿಕ್ಕಿರುವ ಅತಿವಿಶೇಷ ಆಶೀರ್ವಾದ. ಆಕೆಯಿಂದಾಗಿ ನಾನು ಜ್ಞಾನೋಕ್ತಿ 19:14ರ ಈ ಮಾತುಗಳ ಸತ್ಯವನ್ನು ಅರಿಯಲು ಶಕ್ತನಾಗಿದ್ದೇನೆ: “ಮನೆಮಾರೂ ಆಸ್ತಿಪಾಸ್ತಿಯೂ ಪಿತೃಗಳಿಂದ ದೊರಕುವವು; ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.”
ಯೆಹೋವನು ನನಗೂ ಆ್ಯನಿಗೂ ಒಂದು ಗಂಡು, ಒಂದು ಹೆಣ್ಣು ಹೀಗೆ ಇಬ್ಬರು ಮಕ್ಕಳನ್ನು ಕೊಟ್ಟು ಆಶೀರ್ವದಿಸಿದ್ದಾನೆ. ಹೊಸ ಲೋಕದಲ್ಲಿ ಅವರ ಮುಖಗಳನ್ನು ನೋಡಲು ಹಾತೊರೆಯುತ್ತಿದ್ದೇನೆ! ತನ್ನ ಜಮೀನಿನಲ್ಲಿ ನಮಗೆ ಇರಲು ದಯೆಯಿಂದ ಅವಕಾಶ ಕೊಟ್ಟಿರುವ ನನ್ನ ಅಣ್ಣನೂ ಬೈಬಲ್ ಸತ್ಯ ಸ್ವೀಕರಿಸಿ ದೀಕ್ಷಾಸ್ನಾನ ಪಡೆದದ್ದು ನನಗೆ ಸಿಕ್ಕಿರುವ ಇನ್ನೊಂದು ಆಶೀರ್ವಾದ. ನಾವೆಲ್ಲರೂ ಒಂದೇ ಸಭೆಯಲ್ಲಿದ್ದೇವೆ.
ದೇವರು ನನಗೆ ಎಷ್ಟೊಂದು ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಹಾಗಾಗಿ ನನಗೆ ಅಂಗವೈಕಲ್ಯವಿದ್ದರೂ ಆತನ ಸೇವೆಯನ್ನು ಇನ್ನಷ್ಟು ಮಾಡುವುದೇ ನನ್ನ ಮನದಾಳದ ಆಸೆ. (ಮಲಾಕಿಯ 3:10) ಆತನ ರಾಜ್ಯ ಬರಲಿ, ಭೂಮಿಯಿಂದ ಎಲ್ಲ ಕಷ್ಟಕಾರ್ಪಣ್ಯಗಳನ್ನು ತೊಲಗಿಸಲಿ ಎಂದು ದಿನಾಲೂ ಪ್ರಾರ್ಥಿಸುತ್ತೇನೆ. ಯೆಹೋವನ ಕುರಿತು ನಾನು ಕಲಿತಂದಿನಿಂದ ಮನಃಪೂರ್ವಕವಾಗಿ ಹೀಗನ್ನಬಲ್ಲೆ: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.”—ಜ್ಞಾನೋಕ್ತಿ 10:22. (w12-E 06/01)
[ಪುಟ 30ರಲ್ಲಿರುವ ಚಿತ್ರ]
ಬೈಬಲ್ ಭಾಷಣ ಕೊಡುತ್ತಿರುವಾಗ; ನನ್ನ ಕುಟುಂಬ ಮತ್ತು ಅಣ್ಣನೊಂದಿಗೆ