ದೇವರ ಸಮೀಪಕ್ಕೆ ಬನ್ನಿರಿ
ಯೆಹೋವ “ದೇವರು ಪಕ್ಷಪಾತಿಯಲ್ಲ”
ನಿಮಗೆ ಯಾರಾದರೂ ಭೇದಭಾವ ತೋರಿಸಿದ್ದಾರಾ? ಮನೆಯೊಳಗೆ ಸೇರಿಸದೆ ಅಥವಾ ಕೆಲಸ ಕೊಡದೆ ತಾರತಮ್ಯ ಮಾಡಿದ್ದಾರಾ? ನಿಮ್ಮ ಮೈಬಣ್ಣ, ಜಾತಿ-ಧರ್ಮ, ಸಾಮಾಜಿಕ ಸ್ಥಾನಮಾನ ನೋಡಿ ನಿಮ್ಮನ್ನು ಕೀಳಾಗಿ ಕಂಡಿದ್ದಾರಾ? ಜೀವನದಲ್ಲಿ ಇಂಥ ಕಹಿ ಅನುಭವ ಅನೇಕರಿಗಾಗಿದೆ. ಆದರೆ ನೆಮ್ಮದಿಯ ವಿಷಯ ಏನೆಂದರೆ, ಇಂಥ ತಾರತಮ್ಯ ಪ್ರಪಂಚದಲ್ಲೆಲ್ಲ ಹರಡಿಕೊಂಡಿದ್ದರೂ ದೇವರು ಮಾತ್ರ ನಮಗೆ ಯಾವತ್ತೂ ತಾರತಮ್ಯ ತೋರಿಸಲ್ಲ. ಬೈಬಲನ್ನು ಬರೆದವರಲ್ಲಿ ಒಬ್ಬನಾದ ಪೇತ್ರ ಸಂಶಯವಿಲ್ಲದೆ ಹೇಳಿದ್ದು: “ದೇವರು ಪಕ್ಷಪಾತಿಯಲ್ಲ.”—ಅಪೊಸ್ತಲರ ಕಾರ್ಯಗಳು 10:34, 35 ಓದಿ.
ಪೇತ್ರ ಈ ಮಾತುಗಳನ್ನು ಹೇಳಿದ್ದು ಕೊರ್ನೇಲ್ಯ ಅನ್ನೋ ವ್ಯಕ್ತಿ ಮನೆಯಲ್ಲಿ. ಅವನು ಬೇರೆ ಜನಾಂಗಕ್ಕೆ ಸೇರಿದವನು. ಆದರೆ ಪೇತ್ರ ಹುಟ್ಟಿದ್ದು ಯೆಹೂದಿ ಜನಾಂಗದಲ್ಲಿ. ಆ ಕಾಲದಲ್ಲಿ ಯೆಹೂದಿಗಳು ಬೇರೆ ಜನಾಂಗದ ಜನರನ್ನು ಅಶುದ್ಧರು ಅಂತ ವೀಕ್ಷಿಸುತ್ತಿದ್ದರು. ಅವರ ಜತೆ ಯಾವ ರೀತಿಯ ಸಹವಾಸವನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ಹೀಗಿರುವಾಗ ಪೇತ್ರ ಹೇಗೆ ಕೊರ್ನೇಲ್ಯನ ಮನೆಗೆ ಹೋದ? ಒಂದೇ ಮಾತಲ್ಲಿ ಹೇಳುವುದಾದರೆ ಅಲ್ಲಿಗೆ ಹೋಗಬೇಕೆಂಬ ನಿರ್ದೇಶನ ಅವನಿಗೆ ಯೆಹೋವ ದೇವರಿಂದಲೇ ಸಿಕ್ಕಿತು. ದೇವರಿಂದ ಬಂದ ಒಂದು ದರ್ಶನದಲ್ಲಿ “ದೇವರು ಶುದ್ಧೀಕರಿಸಿರುವುದನ್ನು ನೀನು ಹೊಲೆಯಾದದ್ದೆಂದು ಹೇಳುವುದನ್ನು ನಿಲ್ಲಿಸು” ಅಂತ ಒಂದು ವಾಣಿ ಪೇತ್ರನಿಗೆ ಕೇಳಿಸಿತು. (ಅಪೊಸ್ತಲರ ಕಾರ್ಯಗಳು 10:1-15) ಅದರ ಹಿಂದಿನ ದಿನ ಇದೇ ರೀತಿ ಕೊರ್ನೇಲ್ಯನಿಗೂ ಒಂದು ದರ್ಶನ ಕೊಡಲಾಯಿತು. ದೇವದೂತನೊಬ್ಬ ಪ್ರತ್ಯಕ್ಷನಾಗಿ, ಪೇತ್ರನನ್ನು ಕರೆಸಿಕೊಳ್ಳುವಂತೆ ಕೊರ್ನೇಲ್ಯನಿಗೆ ಹೇಳಿದ. ಇದ್ಯಾವುದೂ ಪೇತ್ರನಿಗೆ ಗೊತ್ತಿರಲಿಲ್ಲ. (ಅಪೊಸ್ತಲರ ಕಾರ್ಯಗಳು 10:1-15) ಆದರೆ ಕೊರ್ನೇಲ್ಯನ ಮನೆಗೆ ಹೋಗುವಂತೆ ಮಾರ್ಗದರ್ಶಿಸುತ್ತಿರುವುದು ಯೆಹೋವ ದೇವರು ಅಂತ ಅರ್ಥವಾದಾಗ ಪೇತ್ರ ಅವನ ಮನೆಗೆ ಹೋದನು.
“ದೇವರು ಪಕ್ಷಪಾತಿಯಲ್ಲ ಎಂಬುದು ನನಗೆ ನಿಶ್ಚಯವಾಗಿ ತಿಳಿದದೆ” ಅಂತ ಪೇತ್ರ ಹೇಳಿದನು. (ಅಪೊಸ್ತಲರ ಕಾರ್ಯಗಳು 10:34) “ಪಕ್ಷಪಾತಿ” ಅನ್ನೋ ಪದಕ್ಕೆ ಬಳಸಲಾಗಿರುವ ಗ್ರೀಕ್ ಪದದ ಬಗ್ಗೆ ಪಂಡಿತರೊಬ್ಬರು ಕೊಟ್ಟ ವಿವರಣೆ ಹೀಗಿದೆ: “ಒಬ್ಬ ವ್ಯಕ್ತಿಯ ಮುಖನೋಡಿ ತೀರ್ಪು ಕೊಡುವ ನ್ಯಾಯಾಧೀಶನಿಗೆ ಬಳಸುವ ಪದ ಇದು. ಆ ನ್ಯಾಯಾಧೀಶ ಸರಿ ಯಾವುದು ತಪ್ಪು ಯಾವುದು ಅಂತ ನೋಡಿ ತೀರ್ಪು ಮಾಡುವುದಿಲ್ಲ. ಆ ವ್ಯಕ್ತಿ ನೋಡಲು ಹೇಗಿದ್ದಾನೆ ಅಂತ ಗಮನಿಸಿ ತೀರ್ಪು ಮಾಡುತ್ತಾನೆ.” ಆದರೆ ದೇವರು ಹಾಗಲ್ಲ. ಜನರ ಕುಲ, ದೇಶ, ಸಾಮಾಜಿಕ ಸ್ಥಾನಮಾನ ಅಥವಾ ಹೊರತೋರಿಕೆ ನೋಡಿ ತೀರ್ಪು ಮಾಡಲ್ಲ.
ಯೆಹೋವ ದೇವರು ಮನುಷ್ಯರ ಹೃದಯವನ್ನು ನೋಡುತ್ತಾನೆ. (1 ಸಮುವೇಲ 16:7; ಜ್ಞಾನೋಕ್ತಿ 21:2) “ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ” ಅಂತ ಪೇತ್ರ ಹೇಳಿದನು. (ಅಪೊಸ್ತಲರ ಕಾರ್ಯಗಳು 10:35) ದೇವರಿಗೆ ಭಯಪಡುವುದು ಅಂದರೆ ದೇವರ ಮೇಲೆ ಗೌರವ, ಭರವಸೆ ಇಡುವುದು ಮತ್ತು ಆತನಿಗೆ ಇಷ್ಟವಾಗದ ವಿಷಯಗಳನ್ನು ಮಾಡದಿರುವುದು. ನೀತಿಯನ್ನು ನಡಿಸುವುದು ಅಂದರೆ ದೇವರ ದೃಷ್ಟಿಯಲ್ಲಿ ಸರಿಯಾದ ವಿಷಯಗಳನ್ನು ಮನಸಾರೆ ಮಾಡುವುದು. ದೇವರ ಮೇಲಿನ ಭಯಭಕ್ತಿಯಿಂದ ಒಳ್ಳೇ ಕಾರ್ಯಗಳನ್ನು ಮಾಡುವ ವ್ಯಕ್ತಿಯನ್ನು ನೋಡಿದಾಗ ಯೆಹೋವ ದೇವರಿಗೆ ತುಂಬ ಸಂತೋಷವಾಗುತ್ತದೆ.—ಧರ್ಮೋಪದೇಶಕಾಂಡ 10:12, 13.
ಸ್ವರ್ಗದಿಂದ ನೋಡುವಾಗ ಆತನಿಗೆ ಕಾಣಿಸೋದು ಒಂದೇ ಒಂದು ಕುಲ—ಅದು ಮಾನವಕುಲ
ನಿಮಗೆ ಯಾರಾದರೂ ತಾರತಮ್ಯ ಮಾಡಿದ್ದರೆ ಬೇಸರಪಟ್ಟುಕೊಳ್ಳಬೇಡಿ. ದೇವರ ಬಗ್ಗೆ ಪೇತ್ರ ಹೇಳಿದ ಮಾತನ್ನು ನೆನಪಿಸಿಕೊಳ್ಳಿ. ಯೆಹೋವ ದೇವರು ತನ್ನನ್ನು ಆರಾಧಿಸುವಂತೆ ಎಲ್ಲ ಜನಾಂಗದ ಜನರನ್ನೂ ಸೆಳೆಯುತ್ತಿದ್ದಾನೆ. (ಯೋಹಾನ 6:44; ಅಪೊಸ್ತಲರ ಕಾರ್ಯಗಳು 17:26, 27) ಜನರ ಕುಲ, ದೇಶ, ಸಾಮಾಜಿಕ ಸ್ಥಾನಮಾನ ಏನೇ ಇರಲಿ ಪ್ರಾರ್ಥನೆ ಮಾಡಿದರೆ ಕೇಳುತ್ತಾನೆ ಮತ್ತು ಸ್ಪಂದಿಸುತ್ತಾನೆ. (1 ಅರಸುಗಳು 8:41-43) ಸ್ವರ್ಗದಿಂದ ನೋಡುವಾಗ ಆತನಿಗೆ ಕಾಣಿಸೋದು ಒಂದೇ ಒಂದು ಕುಲ—ಅದು ಮಾನವಕುಲ. ಪಕ್ಷಪಾತ ತೋರಿಸದ ಇಂಥ ದೇವರ ಬಗ್ಗೆ ಇನ್ನೂ ಜಾಸ್ತಿ ತಿಳಿದುಕೊಳ್ಳಬೇಕು ಅಂತ ನಿಮ್ಮ ಮನಸ್ಸು ತವಕಿಸುತ್ತಿಲ್ಲವೇ? ▪ (w13-E 06/01)
ಶಿಫಾರಸು ಮಾಡಲಾಗಿರುವ ಬೈಬಲ್ ವಾಚನ ಭಾಗ