ದೇವರ ಸಮೀಪಕ್ಕೆ ಬನ್ನಿರಿ
“Keep On Asking, and It Will Be Given You”
‘ಕರ್ತನೇ, ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು’ ಅಂತ ಯೇಸುವಿನ ಮುಂದೆ ಶಿಷ್ಯನೊಬ್ಬ ತನ್ನ ಕೋರಿಕೆಯನ್ನಿಟ್ಟ. (ಲೂಕ 11:1) ಆಗ ಯೇಸು ಎರಡು ದೃಷ್ಟಾಂತಗಳನ್ನು ಹೇಳಿದನು. ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಬೇಕೆಂದರೆ ನಾವು ಹೇಗೆ ಪ್ರಾರ್ಥಿಸಬೇಕು ಎನ್ನುವುದನ್ನು ಆ ದೃಷ್ಟಾಂತಗಳು ಕಲಿಸುತ್ತವೆ. ನಿಮಗೆ ಯಾವತ್ತಾದರೂ ‘ದೇವರು ನನ್ನ ಪ್ರಾರ್ಥನೆಯನ್ನು ಕೇಳ್ತಾನಾ’ ಅಂತ ಸಂಶಯ ಬಂದಿದ್ಯಾ? ಹಾಗಾದರೆ ಯೇಸು ಹೇಳಿದ ಆ ದೃಷ್ಟಾಂತಗಳ ಅರ್ಥವನ್ನು ನೀವು ತಿಳಿದುಕೊಳ್ಳಲೇಬೇಕು.—ಲೂಕ 11:5-13 ಓದಿ.
ಒಂದು ದೃಷ್ಟಾಂತ ನಾವು ಹೇಗೆ ಪ್ರಾರ್ಥಿಸಬೇಕು ಅಂತ ಕಲಿಸುತ್ತೆ. (ಲೂಕ 11:5-8) ಆ ದೃಷ್ಟಾಂತದಲ್ಲಿ ಒಬ್ಬನ ಮನೆಗೆ ಅತಿಥಿಯೊಬ್ಬ ಮಧ್ಯರಾತ್ರಿಯಲ್ಲಿ ಬರುತ್ತಾನೆ. ಅವನಿಗೆ ಕೊಡಲು ಆಹಾರ ಏನೂ ಉಳಿದಿರಲ್ಲ. ಎಲ್ಲಿಂದಾದರೂ ಆಹಾರ ತರಬೇಕಿತ್ತು. ಹಾಗಾಗಿ ಅಷ್ಟು ಕತ್ತಲೆ ಆಗಿದ್ದರೂ ಅವನು ತನ್ನ ಮಿತ್ರನೊಬ್ಬನ ಮನೆಗೆ ಹೋಗುತ್ತಾನೆ. ಆಹಾರ ಕೇಳುತ್ತಾನೆ. ಆದರೆ ಆ ಮಿತ್ರ ಎದ್ದು ಬರಲು ನನ್ನಿಂದ ಆಗೋದೇ ಇಲ್ಲ ಅಂದುಬಿಡುತ್ತಾನೆ. ಯಾಕಂದರೆ ಅವನು ಎದ್ದರೆ ಮನೆಮಂದಿಯ ನಿದ್ದೆ ಹಾಳಾಗುತ್ತೆ ಅನ್ನೋ ಭಯ. ಆದರೆ ನಾಚಿಕೆ ಬಿಟ್ಟು ಅಲ್ಲೇ ನಿಂತು ಆಹಾರ ಕೊಡು ಅಂತ ಕೇಳುತ್ತಾ ಇದ್ದದರಿಂದ ಕೊನೆಗೂ ಎದ್ದು ಬಂದು ಆ ಮಿತ್ರ ಆಹಾರ ಕೊಟ್ಟು ಕಳುಹಿಸುತ್ತಾನೆ. *
ಈ ಕಥೆಯಿಂದ ನಾವು ಪ್ರಾರ್ಥನೆ ಬಗ್ಗೆ ಏನು ಕಲೀಬಹುದು? ಕೇಳುತ್ತಾ ಇರಿ, ಹುಡುಕುತ್ತಾ ಇರಿ, ತಟ್ಟುತ್ತಾ ಇರಿ ಅಂತ ಯೇಸು ಹೇಳುತ್ತಾನೆ. ಅದರರ್ಥ ನಾವು ಒಂದೆರಡು ಸಲವಲ್ಲ ಬಿಡದೆ ಪ್ರಾರ್ಥಿಸಬೇಕು. (ಲೂಕ 11:9, 10) ಯಾಕೆ? ಒಂದೆರಡು ಸಲ ಬೇಡಿಕೊಂಡರೆ ದೇವರು ಕೇಳಲ್ಲ ಅಂತನಾ? ಹಾಗಲ್ಲ. ದೇವರು ಆ ಕಥೆಯಲ್ಲಿದ್ದ ಒಲ್ಲದ ಮನಸ್ಸಿನ ಮಿತ್ರನ ಹಾಗೆ ಅಲ್ಲ. ದೇವರ ಮೇಲೆ ನಂಬಿಕೆಯಿಟ್ಟು ಯೋಗ್ಯವಾದ ಯಾವುದೇ ಬಿನ್ನಹ ಮಾಡಿದರೂ ದೇವರು ಕೇಳುತ್ತಾನೆ ಅನ್ನೋದು ಯೇಸುವಿನ ಮಾತಿನ ಅರ್ಥ. ಹಾಗಾಗಿ ಒಂದು ವಿಷಯದ ಬಗ್ಗೆ ದೇವರ ಹತ್ತಿರ ತುಂಬ ಸಲ ಬೇಡಿಕೊಳ್ಳುವ ಮೂಲಕ ನಮಗೆ ದೇವರ ಮೇಲೆ ನಂಬಿಕೆ ಇದೆ ಅಂತ ತೋರಿಸಿಕೊಡುತ್ತೇವೆ. ನಾವು ಬೇಡಿಕೊಳ್ಳುತ್ತಿರೋ ವಿಷಯ ನಮಗೆ ಅಗತ್ಯವಾಗಿ ಬೇಕು ಮತ್ತು ಆ ವಿಷಯ ದೇವರ ಇಷ್ಟಕ್ಕನ್ನುಸಾರ ಇರೋದಾದರೆ ದೇವರದನ್ನು ಖಂಡಿತ ಕೊಟ್ಟೇ ಕೊಡುತ್ತಾನೆ ಅನ್ನೋ ಬಲವಾದ ನಂಬಿಕೆ ನಮಗಿದೆ ಅಂತ ಸಹ ತೋರಿಸಿಕೊಡುತ್ತೇವೆ.—ಮಾರ್ಕ 11:24; 1 ಯೋಹಾನ 5:14.
ಇನ್ನೊಂದು ದೃಷ್ಟಾಂತ “ಪ್ರಾರ್ಥನೆಯನ್ನು ಕೇಳುವ” ಯೆಹೋವ ದೇವರ ಬಗ್ಗೆ ನಮಗೆ ಕಲಿಸುತ್ತೆ. (ಕೀರ್ತನೆ 65:2) ಆ ದೃಷ್ಟಾಂತದಲ್ಲಿ ಯೇಸು “ನಿಮ್ಮಲ್ಲಿ ಯಾವ ತಂದೆಯು ತನ್ನ ಮಗನು ಮೀನು ಕೇಳಿದರೆ ಮೀನಿಗೆ ಬದಲಾಗಿ ಹಾವನ್ನು ಕೊಡುವನು? ಅಥವಾ ಅವನು ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುವನು?” ಅಂತ ಕೇಳುತ್ತಾನೆ. ಅಕ್ಕರೆಯುಳ್ಳ ಯಾವ ತಂದೆ ತಾನೇ ಅಪಾಯಕಾರಿಯಾದ ವಸ್ತುವನ್ನು ಮಕ್ಕಳಿಗೆ ಕೊಡ್ತಾರೆ? ಈ ದೃಷ್ಟಾಂತದ ಅರ್ಥ ವಿವರಿಸುತ್ತಾ ಯೇಸು ಹೇಳುತ್ತಾನೆ: ಕುಂದುಕೊರತೆಗಳಿರುವ ಮನುಷ್ಯರು ತಮ್ಮ ಮಕ್ಕಳಿಗೆ “ಒಳ್ಳೆಯ ಉಡುಗೊರೆಗಳನ್ನು” ಕೊಡುವಾಗ “ಸ್ವರ್ಗದಲ್ಲಿರುವ ತಂದೆಯು [ದೇವರು] ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನು [ಉತ್ತಮ ಉಡುಗೊರೆಗಳನ್ನು] ಕೊಡುವನಲ್ಲವೆ?”—ಲೂಕ 11:11-13; ಮತ್ತಾಯ 7:11.
ದೇವರ ಮೇಲೆ ನಂಬಿಕೆಯಿಟ್ಟು ಯೋಗ್ಯವಾದ ಯಾವುದೇ ಬಿನ್ನಹ ಮಾಡಿದರೂ ದೇವರು ಕೇಳುತ್ತಾನೆ
“ಪ್ರಾರ್ಥನೆಯನ್ನು ಕೇಳುವ” ದೇವರಾದ ಯೆಹೋವನ ಬಗ್ಗೆ ಯೇಸು ಹೇಳಿದ ಈ ದೃಷ್ಟಾಂತ ನಮಗೆ ಏನು ಕಲಿಸುತ್ತೆ? ನಮ್ಮನ್ನು ಸೃಷ್ಟಿಸಿರುವ ಯೆಹೋವ ದೇವರು ನಮ್ಮ ತಂದೆ. ಮಕ್ಕಳಾದ ನಮ್ಮ ಮೇಲೆ ತುಂಬ ಅಕ್ಕರೆ ಇಟ್ಟು ನಾವು ಕೇಳಿದ್ದನ್ನು ಈಡೇರಿಸಲು ತುದಿಗಾಲಲ್ಲಿ ನಿಂತಿರುತ್ತಾನೆ. ಹಾಗಾಗಿ ಯೆಹೋವ ದೇವರ ಭಕ್ತರು ತಮ್ಮ ಮನದ ಕೋರಿಕೆಯನ್ನು ಅಳುಕಿಲ್ಲದೆ ಕೇಳಿಕೊಳ್ಳಬಹುದು. ದೇವರು ಬಯಸುವುದು ನಮ್ಮ ಒಳಿತನ್ನೇ. ಇದನ್ನು ಮನಸ್ಸಲ್ಲಿ ಇಟ್ಟರೆ ದೇವರು ನಮ್ಮ ಪ್ರಾರ್ಥನೆಗೆ ನೀಡುವ ಉತ್ತರ ಅದು ನಮಗೆ ಬೇಕಾದ ರೀತಿಯಲ್ಲಿ ಇಲ್ಲದಿದ್ದರೂ ಮನಸಾರೆ ಒಪ್ಪಿಕೊಳ್ಳುತ್ತೇವೆ. *▪ (w13-E 04/01)
ಶಿಫಾರಸು ಮಾಡಲಾಗಿರುವ ಬೈಬಲ್ ವಾಚನ ಭಾಗ
^ ಪ್ಯಾರ. 4 ಯೇಸುವಿನ ದೃಷ್ಟಾಂತಗಳು ಬದುಕಿನ ರೀತಿರಿವಾಜುಗಳನ್ನು, ಪದ್ಧತಿಗಳನ್ನು ಆಧರಿಸಿ ಇರುತ್ತಿತ್ತು. ಯೆಹೂದಿಗಳ ದೃಷ್ಟಿಯಲ್ಲಿ ಅತಿಥಿಸತ್ಕಾರ ಮಾಡೋದು ಒಂದು ಪವಿತ್ರ ಕರ್ತವ್ಯವಾಗಿತ್ತು. ಪ್ರತಿ ದಿನ ತಮ್ಮತಮ್ಮ ಕುಟುಂಬಕ್ಕೆ ಆಗುವಷ್ಟು ರೊಟ್ಟಿ ಸಿದ್ಧಪಡಿಸಿ ಇಡುತ್ತಿದ್ದರು. ಒಂದುವೇಳೆ ರೊಟ್ಟಿ ಕಮ್ಮಿಯಾಗಿ ಸಾಲದೆ ಹೋದರೆ ಪಕ್ಕದ ಮನೆಯಿಂದ ತರುವುದು ವಾಡಿಕೆಯಾಗಿತ್ತು. ಇನ್ನೊಂದೇನೆಂದರೆ, ಬಡವರು ಒಂದೇ ಕೋಣೆಯಲ್ಲಿ ನೆಲದ ಮೇಲೆಯೇ ಒಟ್ಟಿಗೆ ಮಲಗುತ್ತಿದ್ದರು.
^ ಪ್ಯಾರ. 7 ದೇವರು ನಮ್ಮ ಪ್ರಾರ್ಥನೆಯನ್ನು ಕೇಳಬೇಕಾದರೆ ಆತನಿಗೆ ಇಷ್ಟವಾಗುವ ರೀತಿಯಲ್ಲೇ ಪ್ರಾರ್ಥಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅನ್ನೋ ಪುಸ್ತಕದ 17ನೇ ಅಧ್ಯಾಯ ಓದಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.