ಮುಖಪುಟ ಲೇಖನ
ದೇವರು ಕ್ರೂರಿ ಅಂತ ಜನರು ಹೇಳುತ್ತಾರೆ ಯಾಕೆ?
ಈ ಪತ್ರಿಕೆಯ ಮುಖಪುಟದಲ್ಲಿರೋ ಪ್ರಶ್ನೆ ಓದಿದಾಗ ‘ಎಂಥ ಪ್ರಶ್ನೆ ಇದು’ ಅಂತ ಆಶ್ಚರ್ಯವಾಯ್ತಾ? ತುಂಬ ಜನರಿಗೆ ಹೀಗೆ ಅನಿಸಿದೆ. ಆದರೆ ದೇವರು ನಿಜವಾಗಲೂ ಕ್ರೂರಿ ಅನ್ನೋದು ಬಹುತೇಕ ಜನರ ಭಾವನೆ. ಯಾಕೆ?
ನೈಸರ್ಗಿಕ ವಿಪತ್ತಿನ ಕಹಿಯುಂಡ ಕೆಲವರ ಮನಸ್ಸಲ್ಲಿ ಏಳುವ ಪ್ರಶ್ನೆ: “ಇದೆಲ್ಲ ನಡೆಯೋ ಹಾಗೆ ದೇವರು ಯಾಕೆ ಬಿಡ್ತಾನೆ? ದೇವರು ನಿರ್ದಯಿನಾ? ಕ್ರೂರಿನಾ?”
ಕೆಲವರಿಗೆ ಬೈಬಲ್ ಓದುವಾಗ ಇದೇ ರೀತಿ ಅನಿಸುತ್ತದೆ. ನೋಹ ಅನ್ನೋ ದೇವಭಕ್ತ ಬದುಕಿದ್ದ ಕಾಲದಲ್ಲಿ ಜಲಪ್ರಳಯ ಎಲ್ಲರನ್ನೂ ಬಡುಕೊಂಡು ಹೋಗಿತ್ತು. ಇಂಥ ವೃತ್ತಾಂತಗಳನ್ನು ಓದುವಾಗ ‘ದೇವರಿಗೆ ಪ್ರೀತಿ ಇರೋದಾದರೆ ಯಾಕೆ ಈ ರೀತಿ ಮಾಡಿದ? ದೇವರು ಕ್ರೂರಿ ತಾನೇ?’ ಅನ್ನೋ ಯೋಚನೆ ಬರುತ್ತದೆ.
ನಿಮಗೆ ಯಾವತ್ತಾದರೂ ಇಂಥ ಪ್ರಶ್ನೆಗಳು ಬಂದಿದೆಯಾ? ಅಥವಾ ದೇವರು ಕ್ರೂರಿಯಾಗಿರಬಹುದಾ ಅಂತ ಯಾರಾದರೂ ಕೇಳಿದಾಗ ನಿಮಗೆ ಉತ್ತರ ಕೊಡಲು ಕಷ್ಟವಾಗಿದೆಯಾ? ಈ ಎರಡು ಸನ್ನಿವೇಶಗಳಲ್ಲೂ ಸಹಾಯಕ್ಕೆ ಬರುವ ಮತ್ತೊಂದು ಪ್ರಶ್ನೆಯನ್ನು ನಾವೀಗ ನೋಡೋಣ.
ನಾವ್ಯಾಕೆ ಕ್ರೂರತನವನ್ನು ದ್ವೇಷಿಸುತ್ತೇವೆ?
ಒಂದೇ ಮಾತಿನಲ್ಲಿ ಹೇಳೋದಾದರೆ ನಮಗೆ ಸರಿ ಯಾವುದು ತಪ್ಪು ಯಾವುದು ಅನ್ನೋ ಅರಿವಿದೆ. ಹಾಗಾಗಿ ಕ್ರೂರತನ ನಮಗೆ ಇಷ್ಟವಾಗಲ್ಲ. ದೇವರು ನಮ್ಮನ್ನು ಪ್ರಾಣಿಗಳಿಗಿಂತ ಭಿನ್ನವಾಗಿ ಸೃಷ್ಟಿಸಿದ್ದಾನೆ. ನಮ್ಮನ್ನು “ತನ್ನ ಸ್ವರೂಪದಲ್ಲಿ” ನಿರ್ಮಿಸಿದ್ದಾನೆ. (ಆದಿಕಾಂಡ 1:27) ಅಂದರೆ ದೇವರ ಗುಣಗಳು, ದೇವರು ಇಟ್ಟಿರುವ ನೈತಿಕ ಮಟ್ಟಗಳು, ಆತನ ದೃಷ್ಟಿಯಲ್ಲಿ ಸರಿ ಯಾವುದು ತಪ್ಪು ಯಾವುದು ಇವನ್ನೆಲ್ಲ ಗ್ರಹಿಸಿ ಅನುಕರಿಸುವ ಸಾಮರ್ಥ್ಯವನ್ನು ನಮಗೆ ಕೊಟ್ಟಿದ್ದಾನೆ. ಆದ್ದರಿಂದಲೇ ನಾವು ಕ್ರೂರತನವನ್ನು ಇಷ್ಟಪಡೋದಿಲ್ಲ. ಹಾಗಾದರೆ ದೇವರು ಕೂಡ ಕ್ರೂರತನವನ್ನು ಇಷ್ಟಪಡೋದಿಲ್ಲ ಎಂದಾಯಿತಲ್ಲವೆ?
ಕ್ರೂರತನವನ್ನು ನಾವೇ ಇಷ್ಟೊಂದು ದ್ವೇಷಿಸುವಾಗ ನಮ್ಮನ್ನು ಸೃಷ್ಟಿಸಿರೋ ದೇವರು ಇನ್ನೆಷ್ಟು ದ್ವೇಷಿಸಲ್ಲ! “ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ . . . ಉನ್ನತವಾಗಿವೆ” ಅಂತ ದೇವರೇ ಹೇಳುತ್ತಾನೆ. (ಯೆಶಾಯ 55:9) ಒಂದುವೇಳೆ, ದೇವರು ಕ್ರೂರಿ ಅನ್ನೋ ನಿರ್ಣಯಕ್ಕೆ ಬರೋದಾದರೆ ‘ದೇವರ ಮಾರ್ಗಗಳಿಗಿಂತ ನಮ್ಮ ಮಾರ್ಗಗಳೇ ಶ್ರೇಷ್ಠ’ ಅಂತ ಹೇಳಿದ ಹಾಗೇ ಅಲ್ಲವೇ? ಹಾಗಾಗಿ ಕೆಲವು ಮಾಹಿತಿಯನ್ನು ಮೊದಲು ಕಲೆಹಾಕೋಣ. ದೇವರು ಕ್ರೂರಿ ಅಲ್ಲ ಅಂತಾದರೆ ದೇವರ ಕೆಲವೊಂದು ಕೆಲಸಗಳು ಕ್ರೂರತನದಿಂದ ತುಂಬಿರೋ ಹಾಗೆ ಯಾಕೆ ಅನಿಸುತ್ತೆ ಅಂತ ನೋಡೋಣ. ಅದಕ್ಕೆ ಮುಂಚೆ ನಾವು ಯಾವುದನ್ನು “ಕ್ರೂರತನ” ಅಂತ ಕರೆಯುತ್ತೇವೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು.
ಒಬ್ಬ ವ್ಯಕ್ತಿಯನ್ನು ನಾವು ಕ್ರೂರಿ ಅನ್ನೋದಾದರೆ ಅದರರ್ಥ ಏನು? ಆ ವ್ಯಕ್ತಿಯ ಉದ್ದೇಶಗಳು ತಪ್ಪು ಅಂತ ನಾವು ತೀರ್ಮಾನಿಸಿ ಬಿಟ್ಟಿದ್ದೇವೆ ಅಂತ ತಾನೇ? ಕ್ರೂರಿಗಳು ಇನ್ನೊಬ್ಬರು ನರಳುವುದನ್ನು ನೋಡಿ ಸಂತೋಷ ಪಡುತ್ತಾರೆ. ನೋಡಿಯೂ ಸ್ಪಂದಿಸುವುದಿಲ್ಲ. ಇದಕ್ಕೊಂದು ಉದಾಹರಣೆಯನ್ನು ಗಮನಿಸೋಣ. ಮಗನಿಗೆ ನೋವು ಮಾಡುವ ಉದ್ದೇಶದಿಂದ ತಂದೆ ಶಿಕ್ಷೆ ಕೊಟ್ಟರೆ ಅದು ಕ್ರೂರತನ. ಮಗನನ್ನು ಸರಿಯಾದ ದಾರಿಯಲ್ಲಿ ನಡೆಸುವ ಉದ್ದೇಶದಿಂದ ಶಿಕ್ಷೆ ಕೊಟ್ಟರೆ ಅದು ತಂದೆಯ ಒಳ್ಳೇತನ. ಹಾಗಾದರೆ ಒಬ್ಬ ವ್ಯಕ್ತಿ ಕ್ರೂರಿ ಅಂತ ತೀರ್ಮಾನಿಸಲು ಆತನ ಕೃತ್ಯಗಳ ಹಿಂದಿರುವ ಉದ್ದೇಶವೇನೆಂದು ತಿಳಿದುಕೊಳ್ಳುವುದು ಪ್ರಾಮುಖ್ಯ. ಆದರೆ ಅನೇಕವೇಳೆ ನಾವು ಆ ಉದ್ದೇಶಗಳನ್ನು ತಪ್ಪಾಗಿ ತಿಳಿದುಕೊಳ್ಳುತ್ತೇವೆ.
ದೇವರು ಕ್ರೂರಿ ಅಂತ ಜನರು ನೆನಸಲು ಮುಖ್ಯವಾದ ಎರಡು ಕಾರಣಗಳು: ನೈಸರ್ಗಿಕ ವಿಪತ್ತುಗಳು ಮತ್ತು ಬೈಬಲ್‌ನಲ್ಲಿರುವ ಕೆಲವು ವೃತ್ತಾಂತಗಳು. ಆದರೆ ಇವು ನಿಜವಾಗಲೂ ದೇವರು ಕ್ರೂರಿ ಅಂತ ತೋರಿಸುತ್ತವಾ? (w13-KA 05/01)