ಬೈಬಲ್ ಕೊಡುವ ಉತ್ತರ
ಈ ಲೋಕವನ್ನು ನಿಜವಾಗಿಯೂ ಯಾರು ಆಳುತ್ತಿದ್ದಾರೆ?
ದೇವರೇ ಈ ಲೋಕವನ್ನು ಆಳುತ್ತಿದ್ದಾನೆಂದು ಅನೇಕರು ನಂಬುತ್ತಾರೆ. ಒಂದುವೇಳೆ ಅದು ನಿಜವಾಗಿದ್ದರೆ, ಈ ಲೋಕದಲ್ಲಿ ಇಷ್ಟೊಂದು ಕಷ್ಟಸಂಕಟಗಳು ಇರುತ್ತಿದ್ದವಾ? (ಧರ್ಮೋಪದೇಶಕಾಂಡ 32:4, 5) ಈ ಲೋಕವು ಒಬ್ಬ ಕೆಡುಕನ ವಶದಲ್ಲಿದೆ ಎಂದು ಬೈಬಲ್ ಹೇಳುತ್ತದೆ.—1 ಯೋಹಾನ 5:19 ಓದಿ.
ಮಾನವಕುಲ ಒಬ್ಬ ಕೆಡುಕನ ವಶಕ್ಕೆ ಬಂದದ್ದಾದರೂ ಹೇಗೆ? ಮಾನವ ಇತಿಹಾಸದ ಆರಂಭದಲ್ಲಿ, ಒಬ್ಬ ದೇವದೂತನು ದೇವರ ವಿರುದ್ಧ ದಂಗೆ ಎದ್ದನು. ಅಷ್ಟು ಮಾತ್ರವಲ್ಲದೆ, ಮೊದಲ ಮಾನವ ದಂಪತಿ ಕೂಡ ದೇವರ ವಿರುದ್ಧ ದಂಗೆ ಏಳುವಂತೆ ಮಾಡಿದನು. (ಆದಿಕಾಂಡ 3:1-6) ಈ ಮೊದಲ ಮಾನವರು ದಂಗೆಕೋರ ದೇವದೂತನಿಗೆ ವಿಧೇಯರಾದರು. ಹೀಗೆ ಅವರು ಆ ದಂಗೆಕೋರನನ್ನೇ ತಮ್ಮ ಅಧಿಕಾರಿಯನ್ನಾಗಿ ಆರಿಸಿಕೊಂಡರು. ಆದರೆ ಸರ್ವಶಕ್ತ ದೇವರೇ ನಿಜವಾದ ಹಕ್ಕುಳ್ಳ ಅಧಿಕಾರಿ. ಹಾಗಿದ್ದರೂ ಜನರು ತನ್ನ ಮೇಲಿನ ಪ್ರೀತಿಯಿಂದ ತನ್ನ ಆಳ್ವಿಕೆಯನ್ನು ಆರಿಸಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. (ಧರ್ಮೋಪದೇಶಕಾಂಡ 6:6; 30:16, 19) ಆದರೆ ಮೊದಲ ದಂಪತಿ ಮಾಡಿದ ಅದೇ ತಪ್ಪನ್ನು ಇಂದಿನ ಜನರೂ ಮಾಡುವಂತೆ ದಂಗೆಕೋರ ಸೈತಾನನು ಹೆಚ್ಚಿನವರನ್ನು ಪ್ರೇರೇಪಿಸಿದ್ದಾನೆ.—ಪ್ರಕಟನೆ 12:9 ಓದಿ.
ಮಾನವರ ಸಮಸ್ಯೆಗಳನ್ನು ಯಾರು ಸರಿಪಡಿಸುತ್ತಾರೆ?
ಸೈತಾನನ ಈ ಆಳ್ವಿಕೆ ಹೀಗೆಯೇ ಮುಂದುವರಿಯಲು ದೇವರು ಬಿಡುತ್ತಾನಾ? ಖಂಡಿತವಾಗಿಯೂ ಇಲ್ಲ. ಸೈತಾನನು ಸೃಷ್ಟಿಸಿರುವ ಕೆಟ್ಟ ವಿಷಯಗಳನ್ನು ದೇವರು ಯೇಸುವಿನ ಮೂಲಕ ಸರ್ವನಾಶ ಮಾಡುತ್ತಾನೆ.—1 ಯೋಹಾನ 3:8 ಓದಿ.
ದೇವರಿಂದ ಶಕ್ತಿ, ಅಧಿಕಾರವನ್ನು ಪಡೆದ ಯೇಸು ಸೈತಾನನನ್ನು ನಿರ್ನಾಮ ಮಾಡುತ್ತಾನೆ. (ರೋಮನ್ನರಿಗೆ 16:20) ಅದಾದನಂತರ ಸ್ವತಃ ದೇವರೇ ಮಾನವರನ್ನು ಆಳುತ್ತಾನೆ. ಮಾನವರು ಶಾಂತಿ ಮತ್ತು ಸಂತೋಷದಿಂದಿರಬೇಕೆಂಬ ತನ್ನ ಉದ್ದೇಶವನ್ನು ಆಗ ನೆರವೇರಿಸುತ್ತಾನೆ.—ಪ್ರಕಟನೆ 21:3-5 ಓದಿ. (w14-E 05/01)