ಬೈಬಲ್ ಕೊಡುವ ಉತ್ತರ
ನಾವೇಕೆ ಪ್ರಾರ್ಥಿಸಬೇಕು?
ನಮಗಿರುವ ಚಿಂತೆಗಳ ಕುರಿತು ಯಾವುದೇ ಹಿಂಜರಿಕೆ ಇಲ್ಲದೆ ಯೆಹೋವ ದೇವರೊಂದಿಗೆ ಪ್ರತಿದಿನ ಮಾತಾಡಬೇಕೆಂದು ಸ್ವತಃ ಆತನೇ ಬಯಸುತ್ತಾನೆ. (ಲೂಕ 18:1-7) ನಮ್ಮ ಬಗ್ಗೆ ಆತನಿಗೆ ಆಸಕ್ತಿ ಇರುವುದರಿಂದ ನಮ್ಮ ಮಾತಿಗೆ ಕಿವಿಗೊಡುತ್ತಾನೆ. ನಮ್ಮನ್ನು ಪ್ರಾರ್ಥಿಸುವಂತೆ ದೇವರೇ ಆಮಂತ್ರಿಸುವಾಗ ನಾವೇಕೆ ಪ್ರಾರ್ಥಿಸಬಾರದು?—ಫಿಲಿಪ್ಪಿ 4:6 ಓದಿ.
ಪ್ರಾರ್ಥನೆಯ ಮೂಲಕ ನಾವು ಸಹಾಯ ಕೇಳಬಲ್ಲೆವು ನಿಜ, ಆದರೆ ಅದಕ್ಕಿಂತ ಮುಖ್ಯವಾಗಿ ಸರ್ವಶಕ್ತ ಯೆಹೋವ ದೇವರಿಗೆ ಹತ್ತಿರವಾಗುತ್ತೇವೆ. (ಕೀರ್ತನೆ 8:3, 4) ನಮ್ಮ ಭಾವನೆಗಳನ್ನು ಯೆಹೋವನ ಹತ್ತಿರ ಪ್ರಾರ್ಥನೆಯಲ್ಲಿ ಕ್ರಮವಾಗಿ ತೋಡಿಕೊಳ್ಳುವಾಗ ನಾವಾತನಿಗೆ ಆಪ್ತ ಸ್ನೇಹಿತರಾಗುತ್ತೇವೆ.—ಯಾಕೋಬ 4:8 ಓದಿ.
ಹೇಗೆ ಪ್ರಾರ್ಥಿಸಬೇಕು?
ನಮ್ಮ ಪ್ರಾರ್ಥನೆ ಆಡಂಬರದ ಮಾತುಗಳಿಂದ ಇರಬೇಕೆಂದು ಅಥವಾ ಪ್ರಾರ್ಥನೆಯನ್ನು ಬಾಯಿಪಾಠ ಮಾಡಿ ಅದನ್ನೇ ಪುನಃ ಪುನಃ ಹೇಳಬೇಕೆಂದು ದೇವರು ಬಯಸುವುದಿಲ್ಲ. ಮೊಣಕಾಲೂರಿ, ಬೋರಲು ಬಿದ್ದು ಅಥವಾ ಇನ್ನಿತರ ನಿರ್ದಿಷ್ಟ ದೇಹಭಂಗಿಯಲ್ಲೇ ಪ್ರಾರ್ಥನೆ ಮಾಡಬೇಕು ಎನ್ನುವ ಷರತ್ತು ಕೂಡ ಇಲ್ಲ. ನಾವು ಹೃದಯದಾಳದಿಂದ ಪ್ರಾರ್ಥಿಸಬೇಕೆಂದಷ್ಟೇ ಯೆಹೋವ ದೇವರು ಬಯಸುತ್ತಾನೆ. (ಮತ್ತಾಯ 6:7) ಉದಾಹರಣೆಗೆ, ಪ್ರಾಚೀನ ಇಸ್ರೇಲಿನ ಹನ್ನ ಎಂಬ ಸ್ತ್ರೀ ಪ್ರಾರ್ಥನೆಯಲ್ಲಿ ತನ್ನನ್ನು ಚಿಂತೆಗೀಡು ಮಾಡಿದ್ದ ಕುಟುಂಬ ಸಮಸ್ಯೆಯ ಬಗ್ಗೆ ತಿಳಿಸಿದಳು. ಆ ಸಮಸ್ಯೆಗೆ ಪರಿಹಾರ ಸಿಕ್ಕಿದಾಗ ದೇವರಿಗೆ ಪ್ರಾರ್ಥನೆಯಲ್ಲಿ ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಿದಳು.—1 ಸಮುವೇಲ 1:10, 12, 13, 26, 27; 2:1 ಓದಿ.
ನಮ್ಮ ಚಿಂತೆಗಳನ್ನು ನೇರವಾಗಿ ಸೃಷ್ಟಿಕರ್ತನ ಹತ್ತಿರಾನೇ ಹೇಳಿಕೊಳ್ಳಬಹುದು. ನಮಗಾಗಿ ಆತನು ಏನೆಲ್ಲ ಮಾಡಿದ್ದಾನೋ ಅದಕ್ಕಾಗಿ ನಾವಾತನನ್ನು ಸ್ತುತಿಸಬಹುದು, ಕೃತಜ್ಞತೆ ಕೂಡ ಹೇಳಬಹುದು. ಎಂತಹ ಅದ್ಭುತ ಅವಕಾಶ! ಆದ್ದರಿಂದ ಪ್ರಾರ್ಥಿಸುವ ಈ ಅವಕಾಶವನ್ನು ನಾವೆಂದಿಗೂ ಕಡೆಗಣಿಸದಿರೋಣ.—ಕೀರ್ತನೆ 145:14-16 ಓದಿ. (w14-E 07/01)