ಮುಖಪುಟ ಲೇಖನ | ಪ್ರಾರ್ಥನೆಯಿಂದ ಪ್ರಯೋಜನ ಇದೆಯಾ?
ಜನರು ಏಕೆ ಪ್ರಾರ್ಥಿಸುತ್ತಾರೆ?
“ನಾನು ಜೂಜಾಟಕ್ಕೆ ದಾಸನಾಗಿದ್ದೆ. ಅದೃಷ್ಟ ಖುಲಾಯಿಸಲಿ ಅಂತ ಪ್ರಾರ್ಥಿಸುತ್ತಿದ್ದೆ. ಆದರೆ ನನ್ನ ಪ್ರಾರ್ಥನೆ ನೆರವೇರಲೇ ಇಲ್ಲ.” —ಸ್ಯಾಮುವೆಲ್, a ಕೀನ್ಯ.
“ನಮ್ಮ ಶಾಲೆಯಲ್ಲಿ ಪ್ರಾರ್ಥನೆಯನ್ನು ಬಾಯಿಪಾಠ ಮಾಡಿಸಿದ್ದರು, ಅದೇ ಪ್ರಾರ್ಥನೆಯನ್ನು ನಾವು ಪ್ರತಿದಿನ ಹೇಳಬೇಕಿತ್ತು.”—ಥೆರೆಸಾ, ಫಿಲಿಪ್ಪೀನ್ಸ್.
“ನನಗೆ ಸಮಸ್ಯೆಗಳು ಬಂದಾಗ ನಾನು ಪ್ರಾರ್ಥನೆ ಮಾಡುತ್ತೇನೆ. ತಪ್ಪುಗಳನ್ನು ಕ್ಷಮಿಸಬೇಕೆಂದು ಮತ್ತು ಉತ್ತಮ ಕ್ರೈಸ್ತಳಾಗಬೇಕೆಂದು ಪ್ರಾರ್ಥಿಸುತ್ತೇನೆ.”—ಮ್ಯಾಗ್ಡಲೀನ್, ಘಾನ.
ಸ್ಯಾಮುವೆಲ್, ಥೆರೆಸಾ ಮತ್ತು ಮ್ಯಾಗ್ಡಲೀನ್‌ರ ಹೇಳಿಕೆಗಳನ್ನು ಗಮನಿಸುವಾಗ ಜನರು ಅನೇಕ ಕಾರಣಗಳಿಗೆ ಪ್ರಾರ್ಥಿಸುತ್ತಾರೆಂದು ತಿಳಿದುಬರುತ್ತದೆ. ಕೆಲವರು ಪ್ರಾಮುಖ್ಯವಾದ ಕಾರಣಗಳಿಗಾಗಿ ಪ್ರಾರ್ಥಿಸಿದರೆ ಇನ್ನು ಕೆಲವರು ಕ್ಷುಲ್ಲಕ ಕಾರಣಗಳಿಗಾಗಿ ಪ್ರಾರ್ಥಿಸುತ್ತಾರೆ. ಕೆಲವರ ಪ್ರಾರ್ಥನೆ ಮನಃಪೂರ್ವಕವಾಗಿರುತ್ತದೆ. ಇನ್ನು ಕೆಲವರ ಪ್ರಾರ್ಥನೆಯಲ್ಲಿ ಯಾವುದೇ ಭಾವನೆಗಳು ಇರುವುದಿಲ್ಲ. ಶಾಲೆಯಲ್ಲಿ ನಡೆಯುವ ಪರೀಕ್ಷೆಯಲ್ಲಿ ಪಾಸಾಗಬೇಕೆಂದು, ತಮ್ಮ ಅಚ್ಚುಮೆಚ್ಚಿನ ಕ್ರೀಡಾ ತಂಡ ಗೆಲ್ಲಬೇಕೆಂದು, ಕುಟುಂಬ ಜೀವನ ನಡೆಸಲು ದೇವರ ಮಾರ್ಗದರ್ಶನ ಬೇಕೆಂದು ಅಥವಾ ಇನ್ನೂ ಅನೇಕ ಕಾರಣಗಳಿಗೆ ಕೋಟ್ಯಂತರ ಜನರು ಪ್ರಾರ್ಥನೆ ಮಾಡುತ್ತಾರೆ. ಅಚ್ಚರಿಯೇನೆಂದರೆ, ಧರ್ಮದ ಬಗ್ಗೆ ಆಸಕ್ತಿ ಇಲ್ಲದವರು ಸಹ ಪ್ರಾರ್ಥಿಸುತ್ತಾರೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ.
ನೀವು ಪ್ರಾರ್ಥನೆ ಮಾಡುತ್ತೀರಾ? ಮಾಡುವುದಾದರೆ ಯಾವುದಕ್ಕಾಗಿ ಪ್ರಾರ್ಥನೆ ಮಾಡುತ್ತೀರಾ? ನಿಮಗೆ ಪ್ರಾರ್ಥನೆ ಮಾಡುವ ರೂಢಿ ಇದ್ದರೂ ಇಲ್ಲದಿದ್ದರೂ ಈ ಮುಂದಿನ ಪ್ರಶ್ನೆಗಳು ಬಹುಶಃ ನಿಮ್ಮ ಮನಸ್ಸಿಗೆ ಬಂದಿರುತ್ತವೆ: ‘ಪ್ರಾರ್ಥನೆ ಮಾಡುವುದರಿಂದ ಏನಾದರೂ ಪ್ರಯೋಜನವಿದೆಯಾ? ನಮ್ಮ ಪ್ರಾರ್ಥನೆಗಳನ್ನು ಯಾರಾದರೂ ಕೇಳಿಸಿಕೊಳ್ತಾರಾ?’ ಒಬ್ಬ ಬರಹಗಾರನು ಹೀಗೆ ಹೇಳುತ್ತಾನೆ: “ಪ್ರಾರ್ಥನೆ ಒಂದು ರೀತಿಯ ಮಾನಸಿಕ ಚಿಕಿತ್ಸೆಯಾಗಿದೆ.” ಕೆಲವು ವೈದ್ಯಕೀಯ ಅಧಿಕಾರಿಗಳು ಸಹ ಇದನ್ನೇ ಹೇಳುತ್ತಾರೆ. ಅವರು ಪ್ರಾರ್ಥನೆಗಳನ್ನು “ಬದಲಿ ಚಿಕಿತ್ಸೆ” ಎಂದು ಕರೆಯುತ್ತಾರೆ. ನಿಮ್ಮ ಅಭಿಪ್ರಾಯವೇನು? ಜನರು ಮಾಡುವ ಪ್ರಾರ್ಥನೆ ವ್ಯರ್ಥನಾ ಅಥವಾ ಅದು ಮಾನಸಿಕ ನೆಮ್ಮದಿಯನ್ನು ಕೊಡುವಂಥ ಚಿಕಿತ್ಸೆ ಮಾತ್ರನಾ?
ಬೈಬಲ್, ಪ್ರಾರ್ಥನೆಯನ್ನು ಚಿಕಿತ್ಸೆ ಎಂದಲ್ಲ ಬದಲಿಗೆ ಅದಕ್ಕಿಂತ ಹೆಚ್ಚಿನದ್ದಾಗಿದೆ ಎಂದು ರುಜುಪಡಿಸುತ್ತದೆ. ಸರಿಯಾದ ವಿಧದಲ್ಲಿ, ಸರಿಯಾದ ವಿಷಯಗಳಿಗಾಗಿ ಪ್ರಾರ್ಥಿಸಿದರೆ ಅಂಥ ಪ್ರಾರ್ಥನೆಗಳನ್ನು ನಿಜವಾಗಿಯೂ ಕೇಳಿಸಿಕೊಳ್ಳುವಂಥವನು ಒಬ್ಬನಿದ್ದಾನೆ ಎಂದು ಅದು ತಿಳಿಸುತ್ತದೆ. ಇದು ನಿಜಾನಾ? ಇದಕ್ಕಿರುವ ಆಧಾರಗಳನ್ನು ನೋಡೋಣ ಬನ್ನಿ. (w15-E 10/01)
a ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.