ಮುಖಪುಟ ಲೇಖನ | ಪ್ರಾರ್ಥನೆಯಿಂದ ಪ್ರಯೋಜನ ಇದೆಯಾ?
ನಮ್ಮ ಪ್ರಾರ್ಥನೆಗಳನ್ನು ಯಾರಾದರೂ ಕೇಳಿಸಿಕೊಳ್ಳುತ್ತಾರಾ?
‘ನಮ್ಮ ಪ್ರಾರ್ಥನೆಗಳನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ, ಅದರಿಂದ ಸಮಯ ವ್ಯರ್ಥವಾಗುತ್ತದೆ ಅಷ್ಟೇ’ ಎನ್ನುವುದು ಕೆಲವರ ಅಭಿಪ್ರಾಯ. ಇನ್ನು ಕೆಲವರು ಪ್ರಾರ್ಥಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ನಾಸ್ತಿಕನೊಬ್ಬ ದೇವರು ಹೇಗಿರಬಹುದೆಂದು ಕಲ್ಪನೆ ಮಾಡಿಕೊಂಡು “ದೇವರೇ ಪಿಸುದನಿಯಲ್ಲಾದರೂ ಮಾತಾಡು” ಎಂದು ಪ್ರಾರ್ಥಿಸಿದನು. ಆದರೆ ಹಾಗೆ ಪ್ರಾರ್ಥಿಸಿದರೂ ದೇವರು ಏನೂ ಮಾತಾಡಲೇ ಇಲ್ಲ ಎಂದು ನಂತರ ಅವನು ಹೇಳಿದನು.
ಆದರೆ ಬೈಬಲ್, ನಮ್ಮ ಪ್ರಾರ್ಥನೆಗಳನ್ನು ಕೇಳುವಂಥ ದೇವರೊಬ್ಬನಿದ್ದಾನೆ ಎಂದು ಹೇಳುತ್ತದೆ. ತುಂಬ ಹಿಂದೆ ಜನರಿಗೆ ಹೇಳಿದ ಈ ಮಾತನ್ನು ಬೈಬಲ್ ದಾಖಲಿಸಿದೆ. ಅದೇನೆಂದರೆ: “ನೀವು ಕೂಗಿಕೊಂಡ ಶಬ್ದವನ್ನು ಆತನು [ದೇವರು] ಕೇಳಿ ನಿಮಗೆ ಕೃಪೆ ತೋರಿಸೇ ತೋರಿಸುವನು; ಕೇಳಿದ ಕೂಡಲೆ ನಿಮಗೆ ಸದುತ್ತರವನ್ನು ದಯಪಾಲಿಸುವನು.” (ಯೆಶಾಯ 30:19) ಬೈಬಲಿನ ಇನ್ನೊಂದು ವಚನ ಹೀಗೆ ಹೇಳುತ್ತದೆ: “ಯಥಾರ್ಥವಂತರ ಪ್ರಾರ್ಥನೆಯು ಆತನಿಗೆ ಮೆಚ್ಚಿಗೆ.”—ಜ್ಞಾನೋಕ್ತಿ 15:8, ಪವಿತ್ರ ಗ್ರಂಥ ಭಾಷಾಂತರ.
‘ಯೇಸು ಪ್ರಾರ್ಥಿಸಿದಾಗ, ಆ ಪ್ರಾರ್ಥನೆಯನ್ನು ದೇವರು ಆಲಿಸಿದನು.’ —ಇಬ್ರಿಯ 5:7
ಕೆಲವರ ಪ್ರಾರ್ಥನೆಗಳನ್ನು ದೇವರು ಕೇಳಿಸಿಕೊಂಡ ಉದಾಹರಣೆಗಳೂ ಬೈಬಲಿನಲ್ಲಿವೆ. ಉದಾಹರಣೆಗೆ, ಯೇಸು ‘ಕಾಪಾಡಲು ಶಕ್ತನಾಗಿರುವಾತನಿಗೆ ಬಿನ್ನಹಗಳನ್ನು ಸಲ್ಲಿಸಿದಾಗ ಅವನ ಪ್ರಾರ್ಥನೆಯನ್ನು ದೇವರು ಆಲಿಸಿದನು.’ (ಇಬ್ರಿಯ 5:7) ಇನ್ನಿತರ ಉದಾಹರಣೆಗಳು ದಾನಿಯೇಲ 9:21 ಮತ್ತು 2 ಪೂರ್ವಕಾಲವೃತ್ತಾಂತ 7:1 ರಲ್ಲಿವೆ.
ಹಾಗಾದರೆ, ಯಾಕೆ ಕೆಲವರ ಪ್ರಾರ್ಥನೆಗಳಿಗೆ ಉತ್ತರ ಸಿಗುವುದಿಲ್ಲ? ಯಾಕೆಂದರೆ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುವವನು ಯೆಹೋವ a ದೇವರು ಮಾತ್ರ. ನಾವು ಆತನಿಗೇ ಪ್ರಾರ್ಥಿಸಬೇಕು. ಜೊತೆಗೆ, “ನಾವು ಆತನ ಚಿತ್ತಕ್ಕನುಸಾರ” ಅಂದರೆ ಆತನಿಗೆ ಒಪ್ಪಿಗೆಯಾಗುವಂಥ ರೀತಿಯಲ್ಲಿ ಪ್ರಾರ್ಥಿಸಬೇಕು. ಆಗ “ಆತನು ನಮಗೆ ಕಿವಿಗೊಡುತ್ತಾನೆ.” (1 ಯೋಹಾನ 5:14) ಹಾಗಾಗಿ, ನಮ್ಮ ಪ್ರಾರ್ಥನೆಗಳನ್ನು ಯೆಹೋವ ದೇವರು ಕೇಳಬೇಕೆಂದರೆ ಆತನ ಬಗ್ಗೆ ಮತ್ತು ಆತನ ಚಿತ್ತವೇನಾಗಿದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕು.
‘ಪ್ರಾರ್ಥನೆ ಕೇವಲ ಧಾರ್ಮಿಕ ಚಟುವಟಿಕೆಯಲ್ಲ, ನಮ್ಮ ಪ್ರಾರ್ಥನೆಗಳನ್ನು ದೇವರು ಕೇಳಿಸಿಕೊಳ್ಳುತ್ತಾನೆ ಮತ್ತು ಉತ್ತರ ಕೊಡುತ್ತಾನೆ’ ಎಂದು ಅನೇಕರು ನಂಬುತ್ತಾರೆ. ಕೀನ್ಯದಲ್ಲಿರುವ ಐಸಾಕ್ ಎಂಬ ವ್ಯಕ್ತಿ ಹೇಳುವುದು: “ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕ್ಕಾಗಿ ನಾನು ಪ್ರಾರ್ಥಿಸಿದೆ. ಸ್ವಲ್ಪ ಸಮಯದಲ್ಲೇ ಒಬ್ಬರು ನನ್ನನ್ನು ಭೇಟಿಮಾಡಿ ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೇವೆಂದು ಹೇಳಿದರು.” ಫಿಲಿಪ್ಪೀನ್ಸ್‌ನಲ್ಲಿರುವ ಹಿಲ್ಡಾ ಎಂಬಾಕೆ ಸಿಗರೇಟ್ ಸೇದುವುದನ್ನು ನಿಲ್ಲಿಸಬೇಕೆಂದು ಪ್ರಯತ್ನಿಸುತ್ತಿದ್ದಳು. ಆದರೆ ಅವಳ ಪ್ರಯತ್ನಗಳೆಲ್ಲಾ ಮಣ್ಣುಪಾಲಾಗುತ್ತಿದ್ದವು. ನಂತರ ಆಕೆಯ ಪತಿ “ಈ ವಿಷಯದಲ್ಲಿ ಸಹಾಯ ಬೇಕೆಂದು ದೇವರಿಗೆ ಪ್ರಾರ್ಥಿಸು” ಎಂದು ಸಲಹೆ ಕೊಟ್ಟನು. ಅವಳು ಆ ಸಲಹೆಯನ್ನು ಪಾಲಿಸಿದಾಗ ಸಿಕ್ಕ ಫಲಿತಾಂಶವೇನೆಂದು ಹೀಗೆ ಹೇಳುತ್ತಾಳೆ: “ದೇವರು ನನಗೆ ಸಹಾಯ ಮಾಡಿದ ವಿಧ ನೋಡಿದರೆ ನನಗೇ ಆಶ್ಚರ್ಯವಾಗುತ್ತದೆ. ಸಿಗರೇಟ್ ಸೇದಲು ಮನಸ್ಸು ಬರದೇ ಇರುವ ಥರ ಆಗೋಯ್ತು. ಹೀಗೆ ಆ ಚಟವನ್ನು ಬಿಡಲು ನನಗೆ ಸಾಧ್ಯವಾಯಿತು.”
ನೀವು ಬೇಡಿಕೊಳ್ಳುವ ವಿಷಯಗಳು ದೇವರ ಚಿತ್ತಕ್ಕನುಸಾರ ಇರುವುದಾದರೆ ಆತನು ನಿಮಗೂ ಸಹಾಯ ಮಾಡುತ್ತಾನೆ. (w15-E 10/01)
a ಬೈಬಲಿನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.