ಪಾಠ 43
ಮದ್ಯಪಾನದ ಬಗ್ಗೆ ಬೈಬಲ್ ಏನು ಹೇಳುತ್ತೆ?
ಮದ್ಯಪಾನದ ಬಗ್ಗೆ ಬೇರೆ ಬೇರೆ ಊರುಗಳಲ್ಲಿರೋ ಜನರಿಗೆ ಬೇರೆ ಬೇರೆ ಅನಿಸಿಕೆಗಳಿವೆ. ಕೆಲವರು ಕುಡಿಯೋದೇ ಇಲ್ಲ. ಕೆಲವರು ಅಪರೂಪಕ್ಕೊಮ್ಮೆ ತಮ್ಮ ಸ್ನೇಹಿತರ ಜೊತೆ ಕುಡಿಯುತ್ತಾರೆ. ಇನ್ನೂ ಕೆಲವರಿಗೆ ಕುಡಿಕತನದ ಚಟ ಇರುತ್ತೆ. ಆದರೆ ಬೈಬಲ್ ಮದ್ಯಪಾನದ ಬಗ್ಗೆ ಏನು ಹೇಳುತ್ತೆ?
1. ಮದ್ಯಪಾನ ಮಾಡೋದು ತಪ್ಪಾ?
ಕುಡಿಯೋದು ತಪ್ಪು ಅಂತ ಬೈಬಲ್ ಹೇಳಲ್ಲ. ಬದಲಿಗೆ ದೇವರು ಮನುಷ್ಯರಿಗೆ ಕೊಟ್ಟಿರೋ ಒಳ್ಳೇ ವಿಷ್ಯಗಳಲ್ಲಿ “ಮನುಷ್ಯರ ಹೃದಯಗಳನ್ನ ಸಂತೋಷಪಡಿಸೋ ದ್ರಾಕ್ಷಾಮದ್ಯ” ಕೂಡ ಸೇರಿದೆ ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 104:14, 15) ಬೈಬಲಿನಲ್ಲಿ ತಿಳಿಸಲಾಗಿರುವ ಕೆಲವು ನಂಬಿಗಸ್ತ ಜನರು ಮದ್ಯಪಾನ ಮಾಡುತ್ತಿದ್ದರು.—1 ತಿಮೊತಿ 5:23.
2. ಮದ್ಯಪಾನ ಮಾಡೋರಿಗೆ ಬೈಬಲ್ ಯಾವ ಸಲಹೆ ಕೊಡುತ್ತೆ?
ಅತಿಯಾಗಿ ಕುಡಿಯೋದನ್ನ ಮತ್ತು ಅಮಲೇರುವಷ್ಟು (ನಿಯಂತ್ರಣ ಕಳೆದುಕೊಳ್ಳುವಷ್ಟು) ಕುಡಿಯೋದನ್ನ ಯೆಹೋವನು ಖಂಡಿಸುತ್ತಾನೆ. (ಗಲಾತ್ಯ 5:21) “ಕಂಠಪೂರ್ತಿ ದ್ರಾಕ್ಷಾಮದ್ಯ ಕುಡಿಯುವವ್ರ ಜೊತೆ ಸೇರಬೇಡ” ಅಂತ ಆತನ ವಾಕ್ಯವಾದ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 23:20) ಹಾಗಾಗಿ, ನೀವು ಒಬ್ಬರೇ ಇರಲಿ ಅಥವಾ ಬೇರೆಯವರ ಜೊತೆ ಇರಲಿ ನಿಮಗೆ ಸರಿಯಾಗಿ ಯೋಚನೆ ಮಾಡೋಕೆ ಆಗದಷ್ಟು ಯಾವತ್ತೂ ಕುಡಿಯಬಾರದು. ನಮ್ಮ ಮಾತು, ನಡವಳಿಕೆಯನ್ನ ನಿಯಂತ್ರಣದಲ್ಲಿ ಇಡೋಕೆ ಆಗದಷ್ಟು ಕುಡಿಯಬಾರದು. ಅಷ್ಟೇ ಅಲ್ಲ ನಮ್ಮ ಶರೀರಕ್ಕೆ ಹಾನಿಯಾಗುವಷ್ಟರ ಮಟ್ಟಿಗೆ ಕುಡಿಯಬಾರದು. ಕುಡಿಯೋದನ್ನ ನಿಮ್ಮ ಕೈಯಲ್ಲಿ ನಿಯಂತ್ರಿಸೋಕೆ ಆಗಲ್ಲ ಅಂತ ಅನಿಸೋದಾದ್ರೆ ಕುಡಿಯೋದನ್ನೇ ಬಿಟ್ಟುಬಿಡಿ.
3. ನಾವು ಬೇರೆಯವರ ತೀರ್ಮಾನಗಳನ್ನ ಹೇಗೆ ಗೌರವಿಸಬಹುದು?
ಕುಡಿಯಬೇಕಾ ಬೇಡ್ವಾ ಅನ್ನೋದು ಅವರವರ ಇಷ್ಟ. ಹಾಗಾಗಿ ಮಿತವಾಗಿ ಕುಡಿಯುವವರ ಬಗ್ಗೆ ತಪ್ಪಾಗಿ ನೆನಸಬಾರದು. ಅಷ್ಟೇ ಅಲ್ಲ, ಕುಡಿಯದೇ ಇರೋರಿಗೆ, ‘ನೀವು ಕುಡಿಯಲೇ ಬೇಕು’ ಅಂತ ಒತ್ತಾಯ ಕೂಡ ಮಾಡಬಾರದು. (ರೋಮನ್ನರಿಗೆ 14:10) ನಾವು ಕುಡಿಯೋದರಿಂದ ಬೇರೆಯವರಿಗೆ ತೊಂದರೆ ಆಗುತ್ತಿದ್ದರೆ ಕುಡಿಯೋದನ್ನ ಬಿಟ್ಟುಬಿಡೋದೇ ಒಳ್ಳೇದು. (ರೋಮನ್ನರಿಗೆ 14:21 ಓದಿ.) ‘ನಮಗೆ ಪ್ರಯೋಜನ ಆಗುತ್ತಾ ಅಂತ ಅಲ್ಲ, ಬೇರೆಯವ್ರಿಗೂ ಪ್ರಯೋಜನ ಆಗುತ್ತಾ ಅಂತ ನಾವು ಯೋಚಿಸಬೇಕು.’—1 ಕೊರಿಂಥ 10:23, 24 ಓದಿ.
ಹೆಚ್ಚನ್ನ ತಿಳಿಯೋಣ
ಕುಡಿಯಬೇಕಾ ಕುಡಿಯಬಾರದಾ ಅಥವಾ ಕುಡಿಯೋದಾದ್ರೆ ಎಷ್ಟು ಕುಡಿಯಬೇಕು ಅನ್ನೋ ವಿಷಯದಲ್ಲಿ ಬೈಬಲ್ ಏನು ಹೇಳುತ್ತೆ ಅಂತ ನೋಡಿ. ಅಷ್ಟೇ ಅಲ್ಲ, ಕುಡಿಕತನದ ಸಮಸ್ಯೆ ಇದ್ದರೆ ಅದನ್ನ ಬಿಟ್ಟು ಬಿಡಲು ಏನು ಮಾಡಬಹುದು ಅಂತ ನೋಡೋಣ.
4. ಕುಡಿಯಬೇಕಾ ಬೇಡ್ವಾ ಅನ್ನೋ ತೀರ್ಮಾನವನ್ನ ತಗೊಳ್ಳಿ
ಕುಡಿಯೋದರ ಬಗ್ಗೆ ಯೇಸುವಿನ ಅನಿಸಿಕೆ ಏನಾಗಿತ್ತು? ಉತ್ತರ ತಿಳಿದುಕೊಳ್ಳೋಕೆ ಯೇಸು ಮಾಡಿದ ಮೊದಲ ಅದ್ಭುತದ ಬಗ್ಗೆ ನೋಡಿ. ಯೋಹಾನ 2:1-11 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
-
ಮದ್ಯದ ಬಗ್ಗೆ ಮತ್ತು ಅದನ್ನ ಕುಡಿಯೋದರ ಬಗ್ಗೆ ಯೇಸುವಿಗೆ ಯಾವ ರೀತಿಯ ಅನಿಸಿಕೆ ಇತ್ತು ಅಂತ ಈ ಅದ್ಭುತದಿಂದ ಗೊತ್ತಾಗುತ್ತೆ?
-
ಮದ್ಯಪಾನ ಮಾಡೋದನ್ನ ಯೇಸು ಖಂಡಿಸಲಿಲ್ಲ. ಹಾಗಾಗಿ ಬೇರೆಯವರು ಕುಡಿಯೋದನ್ನ ನೋಡುವಾಗ ಒಬ್ಬ ಕ್ರೈಸ್ತನು ಏನಂತ ನೆನಸಬಾರದು?
ಕುಡಿಯೋದು ತಪ್ಪು ಅಂತ ಬೈಬಲ್ ಹೇಳಲ್ಲ. ಹಾಗಂತ ಯಾವಾಗ್ಲೂ ಕುಡಿಯಬಹುದು ಅಂತಲ್ಲ. ಜ್ಞಾನೋಕ್ತಿ 22:3 ಓದಿ, ನಂತರ ಕೆಳಗಿನ ಸನ್ನಿವೇಶಗಳಲ್ಲಿ ಕುಡಿಯೋದು ಸರಿನಾ ಅಂತ ಚರ್ಚಿಸಿ:
-
ಗಾಡಿ ಓಡಿಸುವ ಮುಂಚೆ ಅಥವಾ ಕೆಲಸ ಮಾಡುವಾಗ.
-
ನೀವು ಗರ್ಭಿಣಿಯಾಗಿರುವಾಗ.
-
ಡಾಕ್ಟರ್ ನಿಮಗೆ ಕುಡಿಯಲೇಬಾರದು ಅಂತ ಹೇಳಿರುವಾಗ.
-
ಮಿತಿಮೀರಿ ಕುಡಿಯುವ ಅಭ್ಯಾಸ ಇದ್ದರೆ.
-
ನೀವಿರುವ ಸ್ಥಳದಲ್ಲಿ ಕುಡಿಯಬಾರದು ಅನ್ನೋ ಕಾನೂನಿದ್ರೆ.
-
ಕುಡಿಯೋ ಚಟವನ್ನ ತುಂಬ ಪ್ರಯತ್ನದಿಂದ ಬಿಟ್ಟುಬಿಟ್ಟ ಒಬ್ಬ ವ್ಯಕ್ತಿ ನಿಮ್ಮ ಜೊತೆ ಇದ್ದರೆ.
ಮದುವೆ ಸಮಾರಂಭಗಳಲ್ಲಿ ಮತ್ತು ಪಾರ್ಟಿಗಳಲ್ಲಿ ಮದ್ಯವನ್ನ ಕೊಡಬಹುದಾ? ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಈ ವಿಡಿಯೋ ನೋಡಿ.
ರೋಮನ್ನರಿಗೆ 13:13 ಮತ್ತು 1 ಕೊರಿಂಥ 10:31, 32 ಓದಿ. ಪ್ರತಿಯೊಂದು ವಚನವನ್ನ ಓದಿದ ಮೇಲೆ ಈ ಪ್ರಶ್ನೆಯನ್ನ ಚರ್ಚಿಸಿ:
-
ಯೆಹೋವ ದೇವರಿಗೆ ಇಷ್ಟವಾಗುವ ತೀರ್ಮಾನಗಳನ್ನ ತೆಗೆದುಕೊಳ್ಳಲು ಈ ತತ್ವ ನಮಗೆ ಹೇಗೆ ಸಹಾಯ ಮಾಡುತ್ತೆ?
5. ಎಷ್ಟು ಕುಡಿಯಬೇಕು ಅಂತ ನೀವೇ ನಿರ್ಧಾರ ಮಾಡಿ
ನೀವು ಮದ್ಯಪಾನ ಮಾಡಲು ಬಯಸೋದಾದ್ರೆ ಈ ವಿಷಯವನ್ನ ಮನಸ್ಸಿನಲ್ಲಿಡಿ: ಯೆಹೋವ ದೇವರು ಮದ್ಯಪಾನವನ್ನ ಖಂಡಿಸೋದಿಲ್ಲ, ಆದರೆ ಅತಿಯಾಗಿ ಕುಡಿಯೋದನ್ನ ಖಂಡಿಸುತ್ತಾನೆ, ಯಾಕೆ? ಹೋಶೇಯ 4:11, 18 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಒಬ್ಬ ವ್ಯಕ್ತಿ ಅತಿಯಾಗಿ ಕುಡಿಯೋದ್ರಿಂದ ಏನಾಗುತ್ತೆ?
ಮಿತಿಮೀರಿ ಕುಡಿಯದಿರೋಕೆ ಏನು ಮಾಡಬೇಕು? ನಾವು ವಿನಮ್ರರಾಗಿರಬೇಕು ಅಂದರೆ ನಮ್ಮ ಇತಿಮಿತಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಎಷ್ಟು ಕುಡಿಯಬೇಕು, ಯಾವಾಗ ನಿಲ್ಲಿಸಬೇಕು ಅನ್ನೋ ತಿಳುವಳಿಕೆ ನಮಗಿರಬೇಕು. ಜ್ಞಾನೋಕ್ತಿ 11:2 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಎಷ್ಟು ಕುಡಿಯಬೇಕು ಅನ್ನೋ ವಿಷಯದಲ್ಲಿ ಒಂದು ನಿರ್ದಿಷ್ಟ ಮಿತಿಯನ್ನ ಇಡೋದು ಒಳ್ಳೇದು ಯಾಕೆ?
6. ಮಿತಿಮೀರಿ ಕುಡಿಯುವ ಅಭ್ಯಾಸವನ್ನ ಬಿಡಬಹುದು
ಮಿತಿಮೀರಿ ಕುಡಿಯೋದ್ರಿಂದ ಹೊರಬರೋಕೆ ಒಬ್ಬ ವ್ಯಕ್ತಿಗೆ ಯಾವುದು ಸಹಾಯ ಮಾಡಿತು ಅಂತ ತಿಳಿಯಲು ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.
-
ಕುಡಿದ ಮೇಲೆ ದಿಮಿಟ್ರಿ ಹೇಗಿರುತ್ತಿದ್ದರು?
-
ಕುಡಿಯೋದನ್ನ ನಿಲ್ಲಿಸೋದಕ್ಕೆ ಅವರಿಗೆ ಸುಲಭವಾಗಿತ್ತಾ?
-
ಕೊನೆಗೂ ಈ ಕೆಟ್ಟ ಚಟದಿಂದ ಹೊರಬರಲು ಅವರಿಗೆ ಯಾವುದು ಸಹಾಯ ಮಾಡಿತು?
1 ಕೊರಿಂಥ 6:10, 11 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
-
ಕುಡಿಕತನ ಎಷ್ಟು ದೊಡ್ಡ ತಪ್ಪು?
-
ಅತಿಯಾಗಿ ಕುಡಿಯುತ್ತಿದ್ದ ವ್ಯಕ್ತಿ ಕೂಡ ಬದಲಾಗೋಕೆ ಸಾಧ್ಯ ಅಂತ ಈ ವಚನ ಹೇಗೆ ತೋರಿಸಿಕೊಡುತ್ತೆ?
ಮತ್ತಾಯ 5:30 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಯೆಹೋವ ದೇವರನ್ನ ಖುಷಿಪಡಿಸಬೇಕಾದ್ರೆ ನಾವು ತ್ಯಾಗಗಳನ್ನ ಮಾಡ್ಲೇಬೇಕು. ಇದನ್ನ ಅರ್ಥಮಾಡಿಸಲಿಕ್ಕಾಗಿ ಯೇಸು ‘ಕೈಯನ್ನ ಕತ್ತರಿಸಿಬಿಡು’ ಅನ್ನೋ ಉದಾಹರಣೆಯನ್ನ ಹೇಳಿದನು. ಕುಡಿಕತನದ ಸಮಸ್ಯೆಯಿದ್ರೆ ಅದ್ರಿಂದ ಹೊರಬರೋಕೆ ನೀವು ಯಾವ ತ್ಯಾಗಗಳನ್ನ ಮಾಡಬೇಕಾಗುತ್ತೆ? a
1 ಕೊರಿಂಥ 15:33 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಅತಿಯಾಗಿ ಕುಡಿಯುವವರ ಸಹವಾಸ ಮಾಡೋದ್ರಿಂದ ಯಾವೆಲ್ಲಾ ತೊಂದರೆಗಳಿವೆ?
ಕೆಲವರು ಹೀಗೆ ಕೇಳಬಹುದು: “ಕುಡಿಯೋದು ತಪ್ಪಾ?”
-
ನೀವೇನು ಹೇಳುತ್ತೀರಾ?
ನಾವೇನು ಕಲಿತ್ವಿ
ಯೆಹೋವ ದೇವರು ನಮ್ಮ ಆನಂದಕ್ಕಾಗಿ ಮದ್ಯವನ್ನ ಕೊಟ್ಟಿದ್ದಾನೆ, ಆದರೆ ಅತಿಯಾಗಿ ಕುಡಿಯೋದನ್ನ ಮತ್ತು ಅಮಲೇರುವಷ್ಟು ಕುಡಿಯೋದನ್ನ ಆತನು ಖಂಡಿಸುತ್ತಾನೆ.
ನೆನಪಿದೆಯಾ
-
ಮದ್ಯದ ಬಗ್ಗೆ ಬೈಬಲ್ ಏನು ಹೇಳುತ್ತೆ?
-
ಅತಿಯಾಗಿ ಕುಡಿಯೋದ್ರಲ್ಲಿ ಯಾವೆಲ್ಲಾ ಅಪಾಯಗಳಿವೆ?
-
ಕುಡಿಯುವ ವಿಷಯದಲ್ಲಿ ಬೇರೆಯವರು ಮಾಡುವ ತೀರ್ಮಾನಗಳನ್ನ ನಾವು ಹೇಗೆ ಗೌರವಿಸಬಹುದು?
ಇದನ್ನೂ ನೋಡಿ
ಕುಡಿಯುವ ವಿಷಯದಲ್ಲಿ ಯುವಜನರು ಹೇಗೆ ಸರಿಯಾದ ತೀರ್ಮಾನವನ್ನ ಮಾಡಬಹುದು?
ಕುಡಿಕತನದಿಂದ ಹೊರಬರಲು ಏನೆಲ್ಲಾ ಮಾಡಬಹುದು ಅಂತ ನೋಡಿ.
“ಎಚ್ಚರ! ನೀವು ಮಿತಿಮೀರಿ ಕುಡಿಯೋ ಸಾಧ್ಯತೆ ಇದೆ” (ಕಾವಲಿನಬುರುಜು ಲೇಖನ)
ಮದ್ಯಪಾನಕ್ಕೆ ಸಂಬಂಧಪಟ್ಟ ಒಂದು ಪದ್ಧತಿ (ಟೋಸ್ಟಿಂಗ್) ಸರಿನಾ ತಪ್ಪಾ ಅಂತ ನೋಡಿ.
ಅತಿಯಾಗಿ ಕುಡಿಯುವ ಚಟವಿದ್ದ ಒಬ್ಬ ವ್ಯಕ್ತಿ ಅದನ್ನ ಹೇಗೆ ಬಿಟ್ಟು ಬಿಟ್ಟ ಅಂತ ತಿಳಿಯಲು “ನಾನು ಕಂಠಪೂರ್ತಿ ಕುಡಿತಿದ್ದೆ” ಲೇಖನ ನೋಡಿ.
a ಕುಡಿಕತನದ ಚಟ ಇರೋರಿಗೆ ಅದರಿಂದ ಹೊರಬರಲು ಕೆಲವೊಮ್ಮೆ ಡಾಕ್ಟರ್ ಸಹಾಯ ಬೇಕಾಗುತ್ತೆ. ಆ ಚಟದಿಂದ ಹೊರಬರಬೇಕಾದ್ರೆ ಕುಡಿಯೋದನ್ನೇ ಬಿಟ್ಟುಬಿಡಬೇಕು ಅಂತ ತುಂಬ ಡಾಕ್ಟರ್‌ಗಳು ಹೇಳುತ್ತಾರೆ.