ರಕ್ತದ ಬಗ್ಗೆ ದೇವರ ಯೋಚನೆ ಸರಿಯಾಗಿದೆ ಅಂತ ನಾನು ಅರ್ಥಮಾಡಿಕೊಂಡೆ
ರಕ್ತದ ಬಗ್ಗೆ ದೇವರ ಯೋಚನೆ ಸರಿಯಾಗಿದೆ ಅಂತ ನಾನು ಅರ್ಥಮಾಡಿಕೊಂಡೆ
ಒಬ್ಬ ಡಾಕ್ಟರ್ ತಮ್ಮ ಕಥೆಯನ್ನು ಹೇಳುತ್ತಾರೆ
ನಾನು ಆಸ್ಪತ್ರೆಯ ಆಡಿಟೋರಿಯಂನಲ್ಲಿ ಪೋಸ್ಟ್‌ಮಾರ್ಟಮ್ ರಿಪೋರ್ಟ್ ಬಗ್ಗೆ ಕೆಲವು ಡಾಕ್ಟರ್‌ಗಳ ಹತ್ತಿರ ಮಾತಾಡುತ್ತಿದ್ದೆ. ತೀರಿ ಹೋದ ವ್ಯಕ್ತಿಗೆ ಟ್ಯೂಮರ್ ಇತ್ತು. “ಈ ವ್ಯಕ್ತಿಗೆ ತುಂಬ ರಕ್ತ ಏರಿಸಿದ್ದರಿಂದ ಹಿಮೋಲಿಸಿಸ್ (ಕೆಂಪು ರಕ್ತ ಕಣಗಳ ನಾಶ) ಮತ್ತು ಕಿಡ್ನಿ ವೈಫಲ್ಯ ಆಯ್ತು. ಇದೇ ಆ ವ್ಯಕ್ತಿಯ ಸಾವಿಗೆ ಮುಖ್ಯ ಕಾರಣ” ಅಂತ ಹೇಳಿದೆ.
ಇದನ್ನು ಕೇಳಿಸಿಕೊಂಡ ಒಬ್ಬ ಪ್ರೊಫೆಸರ್ ಕೋಪದಿಂದ ಕಿರಿಚಾಡುತ್ತಾ “ಹಾಗಾದ್ರೆ ನಾವು ಬೇರೆ ಗ್ರೂಪಿನ ರಕ್ತ ಕೊಟ್ಟಿದ್ದೀವಿ ಅಂತ ನೀನು ಹೇಳ್ತಾ ಇದ್ದೀಯಾ?” ಅಂತ ಕೇಳಿದರು. ಅದಕ್ಕೆ “ಅಲ್ಲ ಡಾಕ್ಟರ್. ನಾನು ಅದನ್ನಲ್ಲ ಹೇಳ್ತಿರೋದು” ಅಂತ ಹೇಳಿದೆ. ಆ ವ್ಯಕ್ತಿಯ ಕಿಡ್ನಿಯ ಕೆಲವು ಫೋಟೋಗಳನ್ನು ತೋರಿಸ್ತಾ ಅವರಿಗೆ ಹೀಗಂದೆ “ಈ ವ್ಯಕ್ತಿಯ ಕಿಡ್ನಿಯಲ್ಲಿದ್ದ ತುಂಬ ಕೆಂಪು ರಕ್ತ ಕಣಗಳು ನಾಶವಾಗಿವೆ. ಇದ್ರಿಂದಾನೇ ಅವರಿಗೆ ಕಿಡ್ನಿ ವೈಫಲ್ಯ a ಆಗಿದ್ದು.” ಇಷ್ಟು ಹೇಳಿದ ಮೇಲೆ ನನಗೆ ಭಯದಿಂದ ಬಾಯೆಲ್ಲ ಒಣಗಿಹೋಯ್ತು. ಆ ಪ್ರೊಫೆಸರಿಗೆ ಹೋಲಿಸಿದರೆ ಒಬ್ಬ ಡಾಕ್ಟರಾಗಿ ನನಗಿರೋ ಅನುಭವ ತುಂಬ ಕಡಿಮೆ. ಆದರೂ ಹೇಳಬೇಕಾಗಿರುವುದನ್ನೆಲ್ಲ ಹೇಳಿಬಿಟ್ಟೆ.
ಈ ಘಟನೆಗಳೆಲ್ಲ ನಡೆಯುವಾಗ ನಾನು ಯೆಹೋವನ ಸಾಕ್ಷಿ ಆಗಿರಲಿಲ್ಲ. ನಾನು 1943ರಲ್ಲಿ ಜಪಾನಿನ ಸೆಂಡೈಯಲ್ಲಿ ಹುಟ್ಟಿದೆ. ನಮ್ಮಪ್ಪ ಒಬ್ಬ ಪಾತೋಲಜಿಸ್ಟ್ ಮತ್ತು ಸೈಕ್ಯಾಟ್ರಿಸ್ಟ್ ಆಗಿದ್ದರಿಂದ ನಾನೂ ಒಬ್ಬ ಡಾಕ್ಟರ್ ಆಗಬೇಕು ಅಂತ ತೀರ್ಮಾನ ಮಾಡಿದ್ದೆ. ಸೆಕೆಂಡ್ ಇಯರ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅಂದರೆ 1970ರಲ್ಲಿ ಮಸುಕೋಳನ್ನು ಮದುವೆಯಾದೆ.
ಪಾತೋಲಜಿ ಕಲಿಯೋಕೆ ಶುರುಮಾಡಿದೆ
ಮಸುಕೋ ಕೆಲಸ ಮಾಡುತ್ತಿದ್ದಳು. ಇದರಿಂದ ನನಗೆ ಓದು ಮುಂದುವರಿಸೋಕೆ ಸಹಾಯ ಆಯ್ತು. ಈ ವೈದ್ಯಕೀಯ ರಂಗ ಒಂದು ಅದ್ಭುತ ಅಂತ ಮಾನವ ಶರೀರದ ಬಗ್ಗೆ ಕಲಿತಾಗಲೇ ನನಗೆ ಗೊತ್ತಾಗಿದ್ದು. ಆದರೆ ಒಬ್ಬ ಸೃಷ್ಟಿಕರ್ತನಿದ್ದಾನೆ ಅನ್ನೋ ವಿಷಯದ ಬಗ್ಗೆ ನಾನಾಗ ಯೋಚನೆ ಮಾಡಿರಲಿಲ್ಲ. ವೈದ್ಯಕೀಯ ರಂಗದಲ್ಲಿ ಮಾಡುವ ಸಂಶೋಧನೆ ನನ್ನ ಜೀವನಕ್ಕೆ ಒಂದು ಅರ್ಥ ಕೊಡುತ್ತೆ ಅಂತ ಅಂದುಕೊಂಡಿದ್ದೆ. ಅದಕ್ಕೇ ನಾನೊಬ್ಬ ಡಾಕ್ಟರ್ ಆದಮೇಲೆ ಪಾತೋಲಜಿ ಕಲಿಯೋಕೆ ಶುರುಮಾಡಿದೆ. ಪಾತೋಲಜಿಯಲ್ಲಿ ರೋಗದ ಲಕ್ಷಣಗಳು, ಅದಕ್ಕೆ ಕಾರಣಗಳು, ಅದರಿಂದಾಗುವ ಪರಿಣಾಮಗಳ ಬಗ್ಗೆ ಕಲಿಸುತ್ತಾರೆ.
ಕ್ಯಾನ್ಸರಿಂದ ಸತ್ತುಹೋಗಿರುವವರ ಪೋಸ್ಟ್‌ಮಾರ್ಟಮ್ ಮಾಡಿದಾಗ ರಕ್ತ ಏರಿಸಿದ್ದಕ್ಕೆ ಅವರೆಲ್ಲ ಸತ್ತು ಹೋದರು ಅನ್ನೋ ಸಂಶಯ ಬರ್ತಿತ್ತು. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ ರಕ್ತಸ್ರಾವ ಆಗೋದ್ರಿಂದ ಅವರ ದೇಹದಲ್ಲಿ ರಕ್ತ ತುಂಬ ಕಡಿಮೆ ಇರುತ್ತೆ. ಅವರು ದುರ್ಬಲರಾಗಿರುತ್ತಾರೆ. ಇಂಥ ಸಮಯದಲ್ಲಿ ರೋಗಿಗೆ ಚಿಕಿತ್ಸೆ ಕೊಡೋದು ತುಂಬ ಕಷ್ಟ ಆಗಿರೋದ್ರಿಂದ ಡಾಕ್ಟರ್ಸ್ ಅವರಿಗೆ ರಕ್ತ ತೆಗೆದುಕೊಳ್ಳೋಕೆ ಹೇಳ್ತಾರೆ. ಆದ್ರೆ ರಕ್ತ ಏರಿಸೋದ್ರಿಂದಾನೇ ಕ್ಯಾನ್ಸರ್ ಹರಡೋದು ಅಂತ ನನಗನಿಸುತ್ತೆ. ಯಾಕಂದ್ರೆ ರಕ್ತ ಏರಿಸೋದ್ರಿಂದ ಕ್ಯಾನ್ಸರ್ ರೋಗಿಗಳು ತಮ್ಮ ಬಲ ಕಳೆದುಕೊಳ್ತಾರೆ. ಆ ಕ್ಯಾನ್ಸರ್ ಮತ್ತೆ ಬರುತ್ತೆ. ಆಗ ಅವರು ಬದುಕುಳಿಯುವುದು ಕಷ್ಟ ಅನ್ನೋ ವಿಷಯ ಡಾಕ್ಟರ್ಸ್‌ಗಳಿಗೆಲ್ಲ ಚೆನ್ನಾಗಿ ಗೊತ್ತು. b
ಲೇಖನದ ಆರಂಭದಲ್ಲಿ ಹೇಳಿದ ಘಟನೆ ನಡೆದಿದ್ದು 1975ರಲ್ಲಿ. ಆ ಕೇಸನ್ನು ನೋಡಿಕೊಳ್ಳುತ್ತಿದ್ದ ಪ್ರೊಫೆಸರ್ ರಕ್ತದಿಂದ ಬರುವ ರೋಗಗಳು ಯಾವುದು ಅಂತ ಕಂಡುಹಿಡಿಯುವುದರಲ್ಲಿ ಸ್ಪೆಷಲಿಸ್ಟ್ ಆಗಿದ್ದರು. ರಕ್ತ ಏರಿಸಿದ್ರಿಂದಾನೇ ಆ ವ್ಯಕ್ತಿ ಸತ್ತಿರಬಹುದು ಅಂತ ನಾನು ಹೇಳಿದ್ದಕ್ಕೆ ಅವರಿಗೆ ತುಂಬ ಕೋಪ ಬಂತು. ನಿಜ ಹೇಳಬೇಕಂದ್ರೆ ಆ ವ್ಯಕ್ತಿಯ ಸಾವಿಗೆ ಕಾರಣ ಆ ಪ್ರೊಫೆಸರೇ ಆಗಿದ್ದರು. ಆದ್ರೆ ನಾನು ಸುಮ್ಮನಿರದೆ, ಹೇಳಬೇಕಾಗಿರುವುದನ್ನೆಲ್ಲ ಹೇಳಿಬಿಟ್ಟೆ. ಸ್ವಲ್ಪ ಸಮಯ ಆದಮೇಲೆ ಅವರ ಕೋಪ ತಣ್ಣಗಾಯಿತು.
ರೋಗ ಇಲ್ಲ, ಮರಣ ಇಲ್ಲ
ಇದೆಲ್ಲ ಆಗಿ ಸ್ವಲ್ಪ ಸಮಯ ಆದ್ಮೇಲೆ ಒಬ್ಬ ವಯಸ್ಸಾಗಿರೋ ಸ್ತ್ರೀ ನನ್ನ ಹೆಂಡತಿಯನ್ನು ಭೇಟಿ ಮಾಡಿದರು. ಅವರು ಒಬ್ಬ ಯೆಹೋವನ ಸಾಕ್ಷಿಯಾಗಿದ್ದರು. ಅವರು ಮಾತಾಡುವಾಗ “ಯೆಹೋವ” ಅನ್ನೋ ಪದವನ್ನು ಉಪಯೋಗಿಸಿದ್ರು. ಹಂಗಂದ್ರೆ ಏನಂತ ನನ್ನ ಹೆಂಡತಿ ಅವರ ಹತ್ತಿರ ಕೇಳಿದಳು. ಆಗ ಅವರು “ಯೆಹೋವ ಅನ್ನೋದು ಸತ್ಯ ದೇವರ ಹೆಸರು” ಅಂತ ಹೇಳಿದರು. ಮಸುಕೋ ಚಿಕ್ಕಂದಿನಿಂದಲೇ ಬೈಬಲನ್ನು ಓದುತ್ತಿದ್ದಳು. ಆದರೆ ಅವಳ ಬೈಬಲಿನಲ್ಲಿ ದೇವರ ಹೆಸರ ಬದಲಿಗೆ “ಕರ್ತ” ಅನ್ನೋ ಪದ ಇತ್ತು. ದೇವರಿಗೂ ಒಂದು ಹೆಸರಿದೆ ಅನ್ನೋ ವಿಷಯ ಈಗ ಅವಳಿಗೆ ಗೊತ್ತಾಯ್ತು.
ಮಸುಕೋ ಕೂಡಲೇ ಬೈಬಲ್ ಕಲಿಯೋಕೆ ಶುರುಮಾಡುತ್ತಾಳೆ. ನಾನು ಒಂದಿನ ಮಧ್ಯರಾತ್ರಿ ಸುಮಾರು 1 ಗಂಟೆಗೆ ಆಸ್ಪತ್ರೆಯಿಂದ ಮನೆಗೆ ಬಂದಾಗ ಅವಳು ತುಂಬ ಖುಷಿಯಿಂದ ನನ್ನ ಹತ್ರ ಬಂದು “ಕಾಯಿಲೆ, ಮರಣ ಇದು ಯಾವುದು ಇರಲ್ಲ ಅಂತ ಬೈಬಲ್ ಹೇಳುತ್ತೆ ಕಣ್ರೀ” ಅಂತ ಹೇಳಿದಳು. ಆಗ ನಾನು ಅವಳ ಹತ್ತಿರ “ಹೌದಾ! ಇದೆಲ್ಲ ನಿಜನಾ” ಅಂತ ಕೇಳಿದೆ. ಅದಕ್ಕೆ ಅವಳು “ಹೊಸ ಲೋಕ ತುಂಬ ಬೇಗ ಬರಲಿದೆ. ಅದಕ್ಕೆ ನೀವು ಸಮಯವನ್ನು ವೇಸ್ಟ್ ಮಾಡೋದು ಬೇಡ ಅನ್ಸುತ್ತೆ ಕಣ್ರೀ” ಅಂತ ಹೇಳಿದಳು. ಕೆಲಸನೇ ಬಿಟ್ಟುಬಿಡೋಕೆ ಅವಳು ಹೇಳ್ತಿದಾಳೆ ಅಂತ ಅಂದುಕೊಂಡೆ. ಅದಕ್ಕೆ ನನಗೆ ತುಂಬ ಕೋಪ ಬಂತು. ಇದರಿಂದ ನಮ್ಮ ಮದುವೆ ಜೀವನದಲ್ಲಿ ಬಿರುಕು ಬೀಳೋಕೆ ಶುರುವಾಯ್ತು.
ಆದ್ರೆ ನನ್ನ ಹೆಂಡ್ತಿ ಬೈಬಲ್ ಬಗ್ಗೆ ಹೇಳೋ ಮುಂಚೆ ಪ್ರಾರ್ಥನೆ ಮಾಡ್ತಿದ್ದಳು, ಚೆನ್ನಾಗಿ ಯೋಚನೆ ಮಾಡ್ತಿದ್ದಳು. ಆಮೇಲೆ ನನ್ನ ಹತ್ತಿರ ಮಾತಾಡುತ್ತಿದ್ದಳು. ಹೀಗೆ ಒಂದು ಸಲ ಅವಳು ಪ್ರಸಂಗಿ 2: 22, 23ನ್ನು ತೋರಿಸಿದಳು. ಅದು ನನಗೆ ತುಂಬ ಇಷ್ಟ ಆಯ್ತು. ಅಲ್ಲಿ ಹೀಗಿದೆ: “ಒಬ್ಬ ಮನುಷ್ಯ ಭೂಮಿ ಮೇಲೆ ತನ್ನ ಆಸೆಯನ್ನ ಈಡೇರಿಸೋಕೆ ಬೆವರು ಸುರಿಸಿ ಎಷ್ಟೇ ದುಡಿದ್ರೂ ಅದ್ರಿಂದ ಅವನಿಗೆ ನಿಜವಾಗ್ಲೂ ಏನು ಸಿಗುತ್ತೆ? ಜೀವಮಾನ ಎಲ್ಲಾ ಅವನಿಗೆ ತನ್ನ ಕೆಲಸದಿಂದ ಸಿಗೋದು ನೋವು, ಕಿರಿಕಿರಿ ಅಷ್ಟೇ. ರಾತ್ರಿಯಲ್ಲೂ ಅವನ ಮನಸ್ಸಿಗೆ ನೆಮ್ಮದಿ ಇರಲ್ಲ. ಹಾಗಾಗಿ ಇದೂ ವ್ಯರ್ಥ.” ನನಗೂ ಈ ವಚನ ಹೇಳಿರುವ ತರಾನೇ ಅನಿಸುತ್ತಿತ್ತು. ನಾನು ಹಗಲು-ರಾತ್ರಿ ದುಡಿಯುತ್ತಿದ್ದೆ. ಆದ್ರೆ ನಾನು ನಿಜವಾಗಲೂ ಖುಷಿಯಾಗಿ ಇರಲಿಲ್ಲ.
ಎಂದಿನಂತೆ ನನ್ನ ಹೆಂಡ್ತಿ ಜುಲೈ 1975ರ ಭಾನುವಾರ ರಾಜ್ಯ ಸಭಾಗೃಹಕ್ಕೆ ಹೋದಳು. ತಕ್ಷಣ ನಾನೂ ಅಲ್ಲಿಗೆ ಹೋಗಬೇಕು ಅಂತ ತೀರ್ಮಾನ ಮಾಡಿದೆ. ರಾಜ್ಯ ಸಭಾಗೃಹದಲ್ಲಿ ನನ್ನನ್ನು ನೋಡಿದಾಗ ಮಸುಕೋಗೆ ತುಂಬ ಆಶ್ಚರ್ಯ ಆಯ್ತು. ಅಲ್ಲಿರೋ ಸಾಕ್ಷಿಗಳೆಲ್ಲ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡರು. ಅವತ್ತಿಂದ ಪ್ರತಿ ಭಾನುವಾರದ ಕೂಟವನ್ನು ನಾನು ಮಿಸ್ ಮಾಡಿದ್ದೇ ಇಲ್ಲ. ಒಂದು ತಿಂಗಳಾದ ಮೇಲೆ ಒಬ್ಬ ಬ್ರದರ್ ನನ್ನ ಜೊತೆ ಬೈಬಲ್ ಸ್ಟಡಿ ಶುರು ಮಾಡಿದರು. ನನ್ನ ಹೆಂಡತಿ ಹೀಗೆ ಮೂರು ತಿಂಗಳು ಬೈಬಲ್ ಕಲಿತ ಮೇಲೆ ದೀಕ್ಷಾಸ್ನಾನ ತಗೊಂಡಳು.
ರಕ್ತದ ಬಗ್ಗೆ ಬೈಬಲ್ ಹೇಳೋದನ್ನ ಒಪ್ಪಿಕೊಂಡೆ
“ರಕ್ತದಿಂದ ದೂರ ಇರಿ” ಅಂತ ಬೈಬಲ್ ಹೇಳುತ್ತೆ ಎಂದು ನಾನು ಕಲಿತುಕೊಂಡೆ. (ಅಪೊಸ್ತಲರ ಕಾರ್ಯ 15:28, 29; ಆದಿಕಾಂಡ 9:4) ರಕ್ತ ಏರಿಸೋ ವಿಷಯದಲ್ಲಿ ಅಷ್ಟು ಒಳ್ಳೆ ಅಭಿಪ್ರಾಯ ನನಗಿರಲಿಲ್ಲ. ಅದಕ್ಕೆ ಬೈಬಲ್ ಹೇಳೋದನ್ನು ಒಪ್ಪಿಕೊಳ್ಳೋಕೆ ತುಂಬ ಸುಲಭ ಆಯ್ತು. c ನಮ್ಮನ್ನು ಸೃಷ್ಟಿ ಮಾಡಿರುವ ಸೃಷ್ಟಿಕರ್ತನೇ ಇದನ್ನ ಹೇಳಿರೋದಾದ್ರೆ ಅದು ಸರಿಯಾಗಿಯೇ ಇರುತ್ತೆ ಅಂತ ಗೊತ್ತಾಯ್ತು.
ಕಾಯಿಲೆ ಮತ್ತು ಮರಣಕ್ಕೆ ಕಾರಣ ಆದಾಮ ಮಾಡಿರುವ ಪಾಪ ಅಂತ ಕಲಿತೆ. (ರೋಮನ್ನರಿಗೆ 5:12) ಆ ಸಮಯದಲ್ಲಿ ನಾನು ಆರ್ಟರಿಸ್ಕ್ಲೆರೋಸಿಸ್ ಅಂದರೆ ಅಪಧಮನಿ ಕಾಠಿಣ್ಯದ ಬಗ್ಗೆ ಅಧ್ಯಯನ ಮಾಡುತ್ತಿದ್ದೆ. ನಮಗೆ ವಯಸ್ಸಾಗುತ್ತಾ ಹೋದ ಹಾಗೆ ಅಪಧಮನಿಗಳು ಗಟ್ಟಿಯಾಗುತ್ತಾ ಸಂಕುಚಿತಗೊಳ್ಳುತ್ತೆ. ಇದರಿಂದ ಹೃದಯಕ್ಕೆ, ಮೆದುಳಿಗೆ, ಕಿಡ್ನಿಗೆ ಸಂಬಂಧಪಟ್ಟ ದೊಡ್ಡದೊಡ್ಡ ಕಾಯಿಲೆಗಳು ಬರುತ್ತೆ. ಇಂಥ ಕಾಯಿಲೆಗಳಿಗೆಲ್ಲ ಮುಖ್ಯ ಕಾರಣ ಅಪರಿಪೂರ್ಣತೆ ಅಂತ ಗೊತ್ತಾದಾಗ ಇದರ ಬಗ್ಗೆ ಸಂಶೋಧನೆ ಮಾಡುವ ಆಸಕ್ತಿ ಕಮ್ಮಿಯಾಯಿತು. ಕಾಯಿಲೆ ಮತ್ತು ಮರಣವನ್ನು ತೆಗೆದು ಹಾಕೋಕೆ ಯೆಹೋವನಿಗೆ ಮಾತ್ರ ಸಾಧ್ಯ.
ನಾನು ಬೈಬಲ್ ಸ್ಟಡಿ ಶುರುಮಾಡಿ ಏಳು ತಿಂಗಳಾದ ಮೇಲೆ ಅಂದರೆ ಮಾರ್ಚ್ 1976ರಲ್ಲಿ ಯೂನಿವರ್ಸಿಟಿಯ ಆಸ್ಪತ್ರೆಯಲ್ಲಿ ಸಂಶೋಧನೆ ಮಾಡುವುದನ್ನು ನಿಲ್ಲಿಸಿಬಿಟ್ಟೆ. ಅದಕ್ಕೇ ಒಬ್ಬ ಡಾಕ್ಟರಾಗಿ ಕೆಲಸ ಮಾಡುವುದನ್ನ ಮುಂದುವರಿಸೋಕೆ ಆಗುತ್ತಾ ಅನ್ನೋ ಹೆದರಿಕೆ ಇತ್ತು. ಆದರೆ ಬೇರೆ ಆಸ್ಪತ್ರೆಯಲ್ಲಿ ಕೆಲಸ ಸಿಕ್ತು. ಆಮೇಲೆ ನಾನು 1976 ಮೇ ತಿಂಗಳಿನಲ್ಲಿ ದೀಕ್ಷಾಸ್ನಾನ ತಗೊಂಡೆ. ಅದಾದ್ಮೇಲೆ ಒಬ್ಬ ಪೂರ್ಣ ಸಮಯ ಶುಶ್ರೂಷಕನಾಗಿ ಅಥವಾ ಪಯನೀಯರಾಗಿ ಸೇವೆ ಮಾಡಬೇಕು ಅಂದುಕೊಂಡೆ. ಅದಕ್ಕೆ ಜುಲೈ 1977ರಲ್ಲಿ ಪಯನೀಯರಾದೆ.
ದೇವರ ನಿಯಮವನ್ನು ಪಾಲಿಸಿದಾಗ ಬಂದ ಸವಾಲು
ನವೆಂಬರ್ 1979ರಲ್ಲಿ ನಾನು ಮತ್ತು ಮಸುಕೋ ಪ್ರಚಾರಕರ ಅಗತ್ಯ ಇದ್ದ ಚಿಬಾ ಪ್ರಿಫೆಕ್ಚರ್ ಅನ್ನೋ ಸಭೆಗೆ ಹೋದ್ವಿ. ಅಲ್ಲಿರೋ ಒಂದು ಆಸ್ಪತ್ರೆಯಲ್ಲಿ ಪಾರ್ಟ್ ಟೈಮಾಗಿ ಕೆಲಸ ಸಿಕ್ತು. ಮೊದಲನೇ ದಿನ ಕೆಲಸಕ್ಕೆ ಹೋದಾಗ ಕೆಲವು ಸರ್ಜನ್‌ಗಳು ನನ್ನ ಸುತ್ತ ನಿಂತು “ನೀವೊಬ್ಬ ಯೆಹೋವನ ಸಾಕ್ಷಿ ತಾನೇ, ಆದ್ರೆ ಒಬ್ಬ ರೋಗಿಗೆ ರಕ್ತ ಕೊಡಲೇಬೇಕಾದ ಪರಿಸ್ಥಿತಿ ಬಂದರೆ ನೀವೇನು ಮಾಡ್ತೀರಾ?” ಅಂತ ಆಗಾಗ ಕೇಳುತ್ತಿದ್ದರು.
ರಕ್ತದ ಬಗ್ಗೆ ದೇವರು ಇಟ್ಟಿರುವ ನಿಯಮವನ್ನು ಪಾಲಿಸ್ತೀನಿ ಅಂತ ಗೌರವದಿಂದ ವಿವರಿಸಿದೆ. ಜೊತೆಗೆ ರಕ್ತ ಕೊಡದೇ ಬೇರೆಬೇರೆ ವಿಧಾನದಲ್ಲಿ ಚಿಕಿತ್ಸೆ ಮಾಡೋಕೆ ನನ್ನಿಂದಾದಷ್ಟು ಪ್ರಯತ್ನ ಮಾಡ್ತೀನಿ, ಆ ರೋಗಿಯನ್ನು ಉಳಿಸಿಕೊಳ್ಳೋಕೆ ನೋಡ್ತೀನಿ ಅಂತ ಹೇಳಿದೆ. ಈ ತರ ಸುಮಾರು ಒಂದು ತಾಸು ಚರ್ಚೆ ಮಾಡಿದ ಮೇಲೆ ಚೀಫ್ ಸರ್ಜನ್: “ನೀವು ಹೇಳುವುದು ನನಗೆ ಅರ್ಥ ಆಗ್ತಿದೆ. ಒಂದುವೇಳೆ ಒಬ್ಬ ವ್ಯಕ್ತಿ ತುಂಬ ರಕ್ತ ಕಳೆದುಕೊಂಡು ಬಂದಿರುವುದಾದರೆ ನೀವು ತಲೆಕೆಡಿಸಿಕೊಳ್ಳಬೇಡಿ, ಅದನ್ನು ನಾವು ನೋಡಿಕೊಳ್ತೀವಿ” ಅಂತ ಹೇಳಿದರು. ನಿಜ ಹೇಳಬೇಕಂದ್ರೆ ಈ ಚೀಫ್ ಸರ್ಜನ್ ತುಂಬ ಗಡಸು ಮನುಷ್ಯ. ಆದರೆ ಅವರ ಹತ್ತಿರ ಮಾತಾಡಿದ ಮೇಲೆ ನಾವಿಬ್ಬರೂ ಒಳ್ಳೆ ಫ್ರೆಂಡ್ಸ್ ಆದ್ವಿ. ಅವರು ನನ್ನ ನಂಬಿಕೆಯನ್ನು ಯಾವಾಗಲೂ ಗೌರವಿಸುತ್ತಿದ್ದರು.
ನನ್ನ ನಂಬಿಕೆಗೆ ಬಂದ ಪರೀಕ್ಷೆ
ನಾವು ಚಿಬಾದಲ್ಲಿದ್ದಾಗ ಜಪಾನಿನಲ್ಲಿರೋ ಎಬಿನಾ ಅನ್ನೋ ಪಟ್ಟಣದಲ್ಲಿ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದ ನಿರ್ಮಾಣ ಕೆಲಸ ನಡೆಯುತ್ತಿತ್ತು. ಅದನ್ನ ಬೆತೆಲ್ ಅಂತ ಕರೀತಿದ್ರು. ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಯಂಸೇವಕರಿಗೆ ಮೆಡಿಕಲ್ ಚೆಕಪ್ ಮಾಡೋಕೆ ನಾನು ಮತ್ತು ನನ್ನ ಹೆಂಡ್ತಿ ವಾರದಲ್ಲಿ ಒಂದಿನ ಅಲ್ಲಿಗೆ ಹೋಗಿ ಬರ್ತಿದ್ವಿ. ಕೆಲವು ತಿಂಗಳಾದ ಮೇಲೆ ಎಬಿನಾ ಬೆತೆಲಿನಲ್ಲಿ ಫುಲ್ ಟೈಮಾಗಿ ಸೇವೆ ಮಾಡೋಕೆ ನಮಗೆ ಅವಕಾಶ ಸಿಕ್ತು. ಮಾರ್ಚ್ 1981ರಲ್ಲಿ ಎಲ್ಲ ಸ್ವಯಂಸೇವಕರಿದ್ದ ಅಂದ್ರೆ 500 ಸ್ವಯಂಸೇವಕರು ಉಳ್ಕೊಂಡಿದ್ದ ಕಟ್ಟಡದಲ್ಲಿ ನಾವೂ ಇದ್ವಿ. ಬೆಳಗ್ಗೆ ನಿರ್ಮಾಣ ಸೈಟಲ್ಲಿದ್ದ ಟಾಯ್ಲೆಟ್‌ಗಳನ್ನು ಕ್ಲೀನ್ ಮಾಡ್ತಿದ್ವಿ. ಮಧ್ಯಾಹ್ನ ಮೆಡಿಕಲ್ ಚೆಕಪ್‌ಗಳನ್ನು ಮಾಡ್ತಿದ್ವಿ.
ನನ್ನ ಪೇಶಂಟ್‌ಗಳಲ್ಲಿ ಒಬ್ಬರ ಹೆಸರು ಇಲ್ಮಾ ಇಸ್ಲೋಬ್. ಇವರು 1949ರಲ್ಲಿ ಆಸ್ಟ್ರೇಲಿಯದಿಂದ ಜಪಾನಿಗೆ ಮಿಷನರಿಯಾಗಿ ಬಂದಿದ್ರು. ಇವರಿಗೆ ಬ್ಲಡ್ ಕ್ಯಾನ್ಸರ್ ಇತ್ತು. ಅವರ ಡಾಕ್ಟರ್ ‘ನೀವಿನ್ನು ಕೆಲವು ತಿಂಗಳಷ್ಟೇ ಬದುಕೋದು’ ಅಂತ ಹೇಳಿದರು. ಆದರೆ ರಕ್ತ ತಗೊಂಡು ಆಯಸ್ಸನ್ನು ಜಾಸ್ತಿ ಮಾಡ್ಕೊಬೇಕು ಅಂತ ಇಲ್ಮಾ ಆಸೆಪಡಲಿಲ್ಲ. ಬದಲಿಗೆ ಇನ್ನುಳಿದಿರೋ ಸಮಯವನ್ನ ಬೆತೆಲಿನಲ್ಲಿ ಕಳೆಯಬೇಕು ಅಂತ ತೀರ್ಮಾನ ಮಾಡಿದ್ರು. ಕೆಂಪು ರಕ್ತ ಕಣಗಳನ್ನು ಉತ್ಪತ್ತಿ ಮಾಡೋ ಎರಿತ್ರೋಪೊಯೆಟಿನ್ ಮಾತ್ರೆಗಳು ಆಗ ಸಿಕ್ತಿರಲಿಲ್ಲ. ಅದಕ್ಕೆ ಕೆಲವೊಮ್ಮೆ ಅವರ ಹೀಮೊಗ್ಲೋಬಿನ್ 3 ಅಥವಾ 4 ಗ್ರಾಂ ಇರ್ತಿತ್ತು. (ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ 12ರಿಂದ 15 ಗ್ರಾಂ ಹೀಮೊಗ್ಲೋಬಿನ್ ಇರಬೇಕು.) ನನ್ನಿಂದ ಆಗೋ ಸಹಾಯವನ್ನ ನಾನು ಮಾಡಿದೆ. ಇಲ್ಮಾ ಸುಮಾರು 7 ವರ್ಷ ಆದಮೇಲೆ ಅಂದರೆ ಜನವರಿ 1988ರಲ್ಲಿ ತೀರಿಕೊಂಡರು. ಸಾಯೋ ತನಕ ತಮ್ಮ ನಂಬಿಕೆಯನ್ನು ಕಾಪಾಡಿಕೊಂಡರು.
ಇಷ್ಟು ವರ್ಷಗಳಲ್ಲಿ ಜಪಾನ್ ಬ್ರಾಂಚಿನಲ್ಲಿ ಕೆಲಸ ಮಾಡುತ್ತಿದ್ದ ಎಷ್ಟೋ ಸಹೋದರರಿಗೆ ಆಪರೇಷನಿನ ಆಗತ್ಯ ಬಂದಿತ್ತು. ನಮಗೆ ಹತ್ತಿರದಲ್ಲಿದ್ದ ಆಸ್ಪತ್ರೆಯಲ್ಲಿರೋ ಡಾಕ್ಟರ್‌ಗಳು ರಕ್ತ ಇಲ್ಲದೆ ಆಪರೇಷನ್ ಮಾಡೋಕೆ ರೆಡಿ ಇದ್ದರು. ಅದಕ್ಕೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದ್ರು ಸಾಕಾಗಲ್ಲ. ಕೆಲವೊಮ್ಮೆ ಆಪರೇಷನ್ ನಡಿಯೋ ವಿಧಾನವನ್ನು ನೋಡೋಕೂ ಆಪರೇಷನ್ ಥಿಯೇಟರಿಗೆ ನನ್ನನ್ನು ಕರೆದುಕೊಳ್ಳುತ್ತಿದ್ದರು. ಇನ್ನು ಕೆಲವೊಮ್ಮೆ ಆಪರೇಷನ್ ನಡೆಯುವಾಗ ಸಹಾಯಮಾಡೋ ಅವಕಾಶನೂ ಸಿಕ್ಕಿದೆ. ಯೆಹೋವನ ಸಾಕ್ಷಿಗಳಾಗಿ ನಮ್ಮ ನಂಬಿಕೆಯನ್ನು ಎತ್ತಿ ಹಿಡಿಯುವಾಗ, ಅದಕ್ಕೆ ಬೆಂಬಲ ಕೊಡೋಕೆ, ಗೌರವ ಕೊಡೋಕೆ ಡಾಕ್ಟರ್ಸ್ ಶ್ರಮ ಹಾಕ್ತಾರೆ. ಇದನ್ನು ನೋಡುವಾಗ ತುಂಬ ಖುಷಿ ಆಗುತ್ತೆ. ಡಾಕ್ಟರ್ಸ್ ಜೊತೆ ಕೆಲಸ ಮಾಡಿದಾಗ ನನ್ನ ನಂಬಿಕೆ ಬಗ್ಗೆ ಅವರ ಹತ್ತಿರ ಹೇಳೋಕೆ ತುಂಬ ಅವಕಾಶಗಳು ಸಿಕ್ಕಿವೆ. ಆ ತರ ನಾನು ಸಿಹಿಸುದ್ದಿ ಸಾರಿದ್ರಿಂದ ಒಬ್ಬ ಡಾಕ್ಟರ್ ಇತ್ತೀಚಿಗೆ ಸತ್ಯ ಕಲಿತು ದೀಕ್ಷಾಸ್ನಾನನೂ ತಗೊಂಡರು.
ಯೆಹೋವನ ಸಾಕ್ಷಿಗಳಿಗೆ ರಕ್ತ ಕೊಡದೆ ಚಿಕಿತ್ಸೆ ಮಾಡೋಕೆ ಶ್ರಮ ಹಾಕ್ತಿರೋ ಡಾಕ್ಟರ್‌ಗಳು ವೈದ್ಯಕೀಯ ರಂಗಕ್ಕೆ ಹೊಸ ತಿರುವನ್ನು ಕೊಟ್ಟಿದ್ದಾರೆ. ಯೆಹೋವನ ಸಾಕ್ಷಿಗಳಿಗೆ ರಕ್ತ ಏರಿಸದೆ ಆಪರೇಷನ್ ಮಾಡೋಕೆ ಡಾಕ್ಟರ್‌ಗಳು ಕಲಿತಾಗ ಬೇರೆಯವರಿಗೂ ತುಂಬ ಪ್ರಯೋಜನ ಆಗಿದೆ. ಅಷ್ಟೇ ಅಲ್ಲ ರಕ್ತ ಏರಿಸದೆ ಆಪರೇಷನ್ ಮಾಡಿದಾಗ ರೋಗಿಗಳು ಬೇಗ ವಾಸಿಯಾಗ್ತಾರೆ ಅಂತ ಸಂಶೋಧನೆಗಳು ತೋರಿಸಿದೆ.
ಮಹಾ ವೈದ್ಯನಿಂದ ಕಲಿತಾ ಇದ್ದೀನಿ
ವೈದ್ಯಕೀಯ ರಂಗದಲ್ಲಿ ಆಗೋ ಹೊಸಹೊಸ ಬದಲಾವಣೆಗಳ ಮೇಲೆ ನಾನು ಯಾವಾಗಲೂ ನಿಗಾ ಇಟ್ಟಿರುತ್ತೀನಿ. ಇದರ ಜೊತೆಗೆ ಮಹಾ ವೈದ್ಯನಾಗಿರೋ ಯೆಹೋವನಿಂದಲೂ ಕಲಿಯೋದನ್ನು ಮುಂದುವರಿಸ್ತಿದ್ದೀನಿ. ಯೆಹೋವ ದೇವರು ನಮ್ಮನ್ನು ಮೇಲೆಮೇಲೆ ಅಲ್ಲ ಒಬ್ಬ ವ್ಯಕ್ತಿಯಾಗಿ ನೋಡುತ್ತಾರೆ. (1 ಸಮುವೇಲ 16:7) ಒಬ್ಬ ಡಾಕ್ಟರಾಗಿ ಕಾಯಿಲೆ ಬಗ್ಗೆ ಅಷ್ಟೇ ಅಲ್ಲ, ಯೆಹೋವನ ತರ ಆ ವ್ಯಕ್ತಿಯನ್ನು ನೋಡೋಕೆ ಪ್ರಯತ್ನಿಸ್ತೀನಿ. ಹೀಗೆ ಮಾಡುವುದರಿಂದ ಒಳ್ಳೇ ಚಿಕಿತ್ಸೆ ಕೊಡೋಕೆ ಆಗ್ತಿದೆ.
ನಾನು ಈಗಲೂ ಬೆತೆಲಿನಲ್ಲಿ ಸೇವೆ ಮಾಡ್ತಾ ಇದ್ದೀನಿ. ಬೇರೆಯವರಿಗೆ ಯೆಹೋವನ ಬಗ್ಗೆ ಕಲಿಸುವಾಗ, ರಕ್ತದ ನಿಯಮದ ಬಗ್ಗೆ ಹೇಳುವಾಗ ಈಗಲೂ ತುಂಬ ಖುಷಿ ಆಗುತ್ತೆ. ಮಹಾ ವೈದ್ಯನಾಗಿರೋ ಯೆಹೋವ ದೇವರು ಆದಷ್ಟು ಬೇಗ ಈ ರೋಗ ಮರಣವನ್ನ ತೆಗೆದುಹಾಕಲಿ ಅನ್ನೋದೇ ನನ್ನ ಪ್ರಾರ್ಥನೆ.—ಯಾಸುಷಿ ಐಸಾವ ಹೇಳಿದ ಪ್ರಕಾರ.
[ಪಾದಟಿಪ್ಪಣಿ]
a ಗರ್ಭ ಧರಿಸಿದವರಿಗೆ, ಅಂಗಾಂಗಗಳ ಕಸಿಮಾಡಿದವರಿಗೆ ಅಥವಾ ಈ ಹಿಂದೆ ಯಾವತ್ತಾದರೂ ರಕ್ತ ತಗೊಂಡವರಿಗೆ ಮುಂದೆ ಗಂಭೀರ ಪರಿಣಾಮಗಳು ಆಗಬಹುದು. ಯಾಕಂದ್ರೆ ಅವರು ಈಗಾಗಲೇ ರಕ್ತ ಏರಿಸಿದ್ರಿಂದ ಅವರ ಕೆಂಪು ರಕ್ತ ಕಣಗಳು ಮುಂದೆ ನಾಶವಾಗೋ ಸಾಧ್ಯತೆ ಇದೆ. ಇಂಥ ಸಮಯದಲ್ಲಿ ರಕ್ತ ಏರಿಸೋದಕ್ಕಿಂತ ಮುಂಚೆ ಮಾಡೋ ಬ್ಲಡ್ ಟೆಸ್ಟ್‌ಗಳಲ್ಲಿ ರಕ್ತ ತೆಗೆದುಕೊಳ್ಳುವುದರಿಂದ ಅಪಾಯ ಆಗುತ್ತೆ ಅನ್ನೋದ್ರ ಬಗ್ಗೆ ಯಾವ ಸೂಚನೆನೂ ಸಿಗಲ್ಲ ಅಂತ ಮಾಡರ್ನ್ ಬ್ಲಡ್ ಬ್ಯಾಂಕಿಂಗ್ ಆಂಡ್ ಟ್ರಾನ್ಸ್‌ಫ್ಯೂಷನ್ ಪ್ರಾಕ್ಟೀಸಸ್ ಅನ್ನೋ ಪುಸ್ತಕವನ್ನು ಬರೆದ ಡಾಕ್ಟರ್ ಡೆನ್ನಿಸ್ ಎಂ. ಹಾರ್ಮನಿಂಗ್ ಹೇಳಿದರು. ಡೇಲಿಸ್ ನೋಟ್ಸ್ ಆನ್ ಬ್ಲಡ್ ಅನ್ನೋ ಪುಸ್ತಕದಲ್ಲಿ ಒಬ್ಬ ವ್ಯಕ್ತಿಯ ದೇಹದಲ್ಲಿ ಹೊಂದಿಕೆಯಲ್ಲದ ಒಂದು ಚೂರು ರಕ್ತವನ್ನಾದ್ರೂ ಏರಿಸಿದರೆ ಅದು ಅವನ ದೇಹದಲ್ಲಿರುವ ಕೆಂಪು ರಕ್ತ ಕಣಗಳನ್ನು ನಾಶಮಾಡುವ ಸಾಧ್ಯತೆ ಇದೆ ಅಂತಿದೆ. ಸಾಮಾನ್ಯವಾಗಿ ಕಿಡ್ನಿ ವೈಫಲ್ಯ ಆದಾಗ ರಕ್ತದಲ್ಲಿರುವ ಅಶುದ್ಧತೆಯನ್ನು ಅದು ಶುದ್ಧ ಮಾಡಲ್ಲ. ಹೀಗೆ ಆ ವ್ಯಕ್ತಿಯ ಆರೋಗ್ಯ ಹಾಳಾಗುತ್ತೆ.
b ಆಗಸ್ಟ್ 1988ರ ಜರ್ನಲ್ ಆಫ್ ಕ್ಲಿನಿಕಲ್ ಆನ್ಕಾಲಜಿ ಅನ್ನೋ ಪತ್ರಿಕೆಯಲ್ಲಿ ಹೀಗಿತ್ತು, “ಆಪರೇಷನ್ ಸಮಯದಲ್ಲಿ ರಕ್ತವನ್ನು ಸ್ವೀಕರಿಸಿದವರಿಗಿಂತ ರಕ್ತವನ್ನು ಸ್ವೀಕರಿಸದೆ ಚಿಕಿತ್ಸೆ ತಗೊಂಡು ವಾಸಿಯಾದವರೇ ಜಾಸ್ತಿ.”
c ರಕ್ತದ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳ್ಕೊಳ್ಳೋಕೆ ಇಷ್ಟಪಡುವುದಾದರೆ ಯೆಹೋವನ ಸಾಕ್ಷಿಗಳು ಪ್ರಕಾಶಿಸಿದ ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಅನ್ನೋ ಕಿರುಹೊತ್ತಗೆಯನ್ನು ನೋಡಿ.
[ಬ್ಲರ್ಬ್]
“ರಕ್ತದ ಬಗ್ಗೆ ದೇವರು ಇಟ್ಟಿರುವ ನಿಯಮವನ್ನು ನಾನು ಪಾಲಿಸ್ತೀನಿ ಅಂತ ಗೌರವದಿಂದ ವಿವರಿಸಿದೆ. ಜೊತೆಗೆ ರಕ್ತ ಕೊಡದೇ ಬೇರೆಬೇರೆ ವಿಧಾನದಲ್ಲಿ ಚಿಕಿತ್ಸೆ ಮಾಡೋಕೆ ನನ್ನಿಂದಾದಷ್ಟು ಪ್ರಯತ್ನ ಮಾಡ್ತೀನಿ, ಆ ರೋಗಿಯನ್ನು ಉಳಿಸಿಕೊಳ್ಳೋಕೆ ನೋಡ್ತೀನಿ ಅಂತ ಹೇಳಿದೆ.”
[ಬ್ಲರ್ಬ್]
“ಯೆಹೋವನ ಸಾಕ್ಷಿಗಳಿಗೆ ರಕ್ತ ಏರಿಸದೆ ಆಪರೇಷನ್ ಮಾಡೋಕೆ ಡಾಕ್ಟರ್‌ಗಳು ಕಲಿತಾಗ ಬೇರೆಯವರಿಗೂ ತುಂಬ ಪ್ರಯೋಜನ ಆಗಿದೆ.”
[ಚಿತ್ರ]
ಮೇಲೆ: ಭಾಷಣ ಕೊಡ್ತಾ ಇದ್ದೀನಿ
ಬಲಗಡೆ: ನನ್ನ ಹೆಂಡತಿ ಮಸುಕೋ ಜೊತೆ