ಅಧ್ಯಾಯ ಏಳು
ಮನೆಯಲ್ಲಿ ಪ್ರತಿಭಟಕನೊಬ್ಬನಿದ್ದಾನೊ?
1, 2. (ಎ) ಯೆಹೂದಿ ಧಾರ್ಮಿಕ ನಾಯಕರ ಅಪನಂಬಿಗಸ್ತಿಕೆಯನ್ನು ಎತ್ತಿತೋರಿಸಲು ಯೇಸುವು ಯಾವ ದೃಷ್ಟಾಂತವನ್ನು ಕೊಟ್ಟನು? (ಬಿ) ಯೇಸುವಿನ ದೃಷ್ಟಾಂತದಿಂದ ನಾವು ತರುಣರ ಕುರಿತು ಯಾವ ವಿಷಯವನ್ನು ಕಲಿಯಬಲ್ಲೆವು?
ತನ್ನ ಮರಣಕ್ಕೆ ಕೆಲವು ದಿನಗಳಿಗೆ ಮುಂಚಿತವಾಗಿ ಯೇಸುವು, ಯೆಹೂದಿ ಧಾರ್ಮಿಕ ನಾಯಕರ ಒಂದು ಗುಂಪಿಗೆ ವಿಚಾರ ಶಕ್ತಿಯನ್ನು ಪ್ರಚೋದಿಸುವ ಪ್ರಶ್ನೆಯೊಂದನ್ನು ಕೇಳಿದನು. ಅವನು ಹೇಳಿದ್ದು: “ನೀವೇನು ಯೋಚಿಸುತ್ತೀರಿ? ಒಬ್ಬ ಪುರುಷನಿಗೆ ಇಬ್ಬರು ಮಕ್ಕಳಿದ್ದರು. ಮೊದಲನೆಯವನ ಬಳಿಗೆ ಅವನು ಹೋಗಿ ‘ಮಗನೇ ಇಂದು ಹೋಗಿ ದ್ರಾಕ್ಷೆತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು. ಉತ್ತರವಾಗಿ ಇವನು, ‘ಹೋಗುತ್ತೇನೆ ಸ್ವಾಮಿ’ ಎಂದು ಹೇಳಿದರೂ ಹೊರಗೆ ಹೋಗಲಿಲ್ಲ. ಎರಡನೆಯವನನ್ನು ಸಮೀಪಿಸಿ ಅವನು ಹಾಗೆಯೇ ಹೇಳಿದನು. ಉತ್ತರವಾಗಿ ಇವನು ‘ನಾನು ಹೋಗುವುದಿಲ್ಲ’ ಎಂದನು. ಆ ಬಳಿಕ ಅವನು ವಿಷಾದಿಸಿ ಹೊರಗೆ ಹೋದನು. ಆ ಇಬ್ಬರಲ್ಲಿ ಯಾರು [ತನ್ನ] ತಂದೆಯ ಚಿತ್ತವನ್ನು ಮಾಡಿದನು?” ಯೆಹೂದಿ ನಾಯಕರು ಉತ್ತರಿಸಿದ್ದು: “ಕೊನೆಯವನು.”—ಮತ್ತಾಯ 21:28-31, NW.
2 ಯೇಸುವು ಯೆಹೂದಿ ನಾಯಕರ ಅಪನಂಬಿಗಸ್ತಿಕೆಯನ್ನು ಇಲ್ಲಿ ಎತ್ತಿತೋರಿಸುತ್ತಿದ್ದನು. ಅವರು ಆ ಮೊದಲನೆಯ ಮಗನಂತಿದ್ದರು; ಅವರು ದೇವರ ಚಿತ್ತವನ್ನು ಮಾಡಲು ವಚನ ಕೊಟ್ಟರೂ ಆ ಬಳಿಕ ತಮ್ಮ ವಚನಕ್ಕೆ ತಪ್ಪಿದರು. ಆದರೆ ಯೇಸುವಿನ ದೃಷ್ಟಾಂತವು ಕುಟುಂಬ ಜೀವನದ ಕುರಿತ ಉತ್ತಮ ಗ್ರಹಿಕೆಯ ಮೇಲೆ ಆಧಾರಿಸಿತ್ತೆಂದು ಅನೇಕ ಹೆತ್ತವರು ಗುರುತಿಸುವರು. ಅವನು ಎಷ್ಟೋ ಉತ್ತಮವಾಗಿ ತೋರಿಸಿದಂತೆ, ಅನೇಕ ವೇಳೆ, ಎಳೆಯರು ಏನು ಯೋಚಿಸುತ್ತಾರೆಂದು ತಿಳಿಯುವುದು ಅಥವಾ ಅವರು ಏನು ಮಾಡುವರೆಂದು ಮುಂತಿಳಿಸುವುದು ಕಷ್ಟಕರ. ಒಬ್ಬ ಯುವ ವ್ಯಕ್ತಿಯು ತನ್ನ ತಾರುಣ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣನಾಗಿ, ಆ ಬಳಿಕ ಒಬ್ಬ ಜವಾಬ್ದಾರಿಯುತ, ಸುಸನ್ಮಾನಿತ ವಯಸ್ಕನಾಗಿ ಬೆಳೆಯಬಹುದು. ನಾವು ಹದಿಹರೆಯದವರ ಪ್ರತಿಭಟನೆಯನ್ನು ಚರ್ಚಿಸುವಾಗ ಇದು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ವಿಷಯವಾಗಿದೆ.
ಪ್ರತಿಭಟಕನೆಂದರೇನು?
3. ಹೆತ್ತವರು ತಮ್ಮ ಮಗನು ಪ್ರತಿಭಟಕನಾಗಿದ್ದಾನೆ ಎಂಬ ಹೆಸರು ಪಟ್ಟಿಯನ್ನು ತ್ವರಿತವಾಗಿ ಏಕೆ ಹಚ್ಚಬಾರದು?
3 ಆಗಿಂದಾಗ್ಗೆ, ತಮ್ಮ ಹೆತ್ತವರ ವಿರುದ್ಧ ನೇರವಾಗಿ ಪ್ರತಿಭಟಿಸುವ ಹದಿಹರೆಯದವರ ಕುರಿತು ನೀವು ಕೇಳಬಹುದು. ಯಾವುದರಲ್ಲಿ ಒಬ್ಬ ಹದಿಪ್ರಾಯದವನನ್ನು ನಿಯಂತ್ರಿಸುವುದು ಅಸಾಧ್ಯವೆಂಬಂತೆ ಕಾಣುತ್ತದೆಯೊ ಅಂತಹ ಒಂದು ಕುಟುಂಬದ ಪರಿಚಯ ನಿಮಗೆ ಸ್ವತಃ ಇರಲೂಬಹುದು. ಆದರೂ, ಒಬ್ಬ ಮಗನು ನಿಜವಾಗಿಯೂ ಪ್ರತಿಭಟಕನೊ ಎಂದು ತಿಳಿಯುವುದು ಯಾವಾಗಲೂ ಸುಲಭವಲ್ಲ. ಅದಲ್ಲದೆ, ಕೆಲವು ಮಕ್ಕಳು ಪ್ರತಿಭಟಿಸುವಾಗ ಇತರರು—ಅದೇ ಮನೆವಾರ್ತೆಯವರಾದರೂ—ಏಕೆ ಪ್ರತಿಭಟಿಸುವುದಿಲ್ಲವೆಂದು ಅರ್ಥೈಸಿಕೊಳ್ಳುವುದು ಕಷ್ಟಕರವಾಗಿರಬಲ್ಲದು. ತಮ್ಮ ಮಕ್ಕಳಲ್ಲಿ ಒಬ್ಬನು ಮುಚ್ಚುಮರೆಯಿಲ್ಲದ ಪ್ರತಿಭಟಕನಾಗಿ ಬೆಳೆಯುತ್ತಿರಬಹುದೆಂದು ಹೆತ್ತವರು ಸಂಶಯಿಸುವುದಾದರೆ, ಅವರೇನು ಮಾಡಬೇಕು? ಇದಕ್ಕೆ ಉತ್ತರಕೊಡಲು, ನಾವು ಮೊದಲಾಗಿ ಒಬ್ಬ ಪ್ರತಿಭಟಕನೆಂದರೇನು ಎಂಬ ವಿಷಯದಲ್ಲಿ ಮಾತನಾಡಬೇಕು.
4-6. (ಎ) ಪ್ರತಿಭಟಕನೆಂದರೇನು? (ಬಿ) ತಮ್ಮ ಹದಿಹರೆಯದವನು ಆಗಾಗ ಅವಿಧೇಯನಾಗುವುದಾದರೆ, ಹೆತ್ತವರು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
4 ಸರಳವಾಗಿ ಹೇಳುವುದಾದರೆ, ಒಂದು ಉಚ್ಚಮಟ್ಟದ ಅಧಿಕಾರಕ್ಕೆ ಬೇಕುಬೇಕೆಂದು ಮತ್ತು ಸುಸಂಗತವಾಗಿ ಅವಿಧೇಯನಾಗುವ ಮತ್ತು ಅದನ್ನು ಪ್ರತಿಭಟಿಸಿ, ಧಿಕ್ಕರಿಸುವ ವ್ಯಕ್ತಿಯೇ ಒಬ್ಬ ಪ್ರತಿಭಟಕನು. ‘ಮೂರ್ಖತನವು ಹುಡುಗನ ಹೃದಯದಲ್ಲಿದೆ,’ ನಿಶ್ಚಯ. (ಜ್ಞಾನೋಕ್ತಿ 22:15) ಆದಕಾರಣ, ಎಲ್ಲ ಮಕ್ಕಳು ಒಂದಲ್ಲ ಒಂದು ಸಮಯದಲ್ಲಿ, ಹೆತ್ತವರನ್ನು ಅಥವಾ ಇತರ ಅಧಿಕಾರವನ್ನು ಪ್ರತಿಭಟಿಸುತ್ತಾರೆ. ತಾರುಣ್ಯವೆಂದು ಕರೆಯಲ್ಪಡುವ ಶಾರೀರಿಕ ಹಾಗೂ ಭಾವಾತ್ಮಕ ಬೆಳೆವಣಿಗೆಯ ಸಮಯದಲ್ಲಂತೂ ಇದು ವಿಶೇಷವಾಗಿ ನಿಜವಾಗಿದೆ. ಯಾವನೇ ವ್ಯಕ್ತಿಯ ಜೀವನದಲ್ಲಿ ಒಂದು ಬದಲಾವಣೆಯು ಒತ್ತಡವನ್ನು ತರುತ್ತದೆ, ಮತ್ತು ತಾರುಣ್ಯವು ಎಲ್ಲ ಬದಲಾವಣೆಯ ಸಮಯವಾಗಿದೆ. ನಿಮ್ಮ ಹದಿಹರೆಯದ ಮಗನು ಅಥವಾ ಮಗಳು ಬಾಲ್ಯಾವಸ್ಥೆಯಿಂದ ಹೊರಬಂದು ಪ್ರಾಪ್ತವಯಸ್ಸಿನ ಮಾರ್ಗದಲ್ಲಿ ಹೋಗುತ್ತಿದ್ದಾರೆ. ಈ ಕಾರಣದಿಂದ, ತಾರುಣ್ಯದ ವರುಷಗಳಲ್ಲಿ ಕೆಲವು ಹೆತ್ತವರಿಗೂ ಮಕ್ಕಳಿಗೂ ತಮ್ಮೊಳಗೆ ಹೊಂದಿಕೊಂಡು ಹೋಗುವುದು ಕಷ್ಟಕರವಾಗುತ್ತದೆ. ಅನೇಕ ವೇಳೆ ಹದಿಹರೆಯದವರು ಆ ಪರಿವರ್ತನೆಯನ್ನು ತ್ವರಿತಗೊಳಿಸಬಯಸುವಾಗ ಹೆತ್ತವರು ಸಹಜ ಪ್ರವೃತ್ತಿಯಿಂದ ಈ ಪರಿವರ್ತನೆಗೆ ತಡೆಹಾಕಲು ಪ್ರಯತ್ನಿಸುತ್ತಾರೆ.
5 ಪ್ರತಿಭಟಕನಾಗಿರುವ ಹದಿಹರೆಯದವನು ಹೆತ್ತವರ ಮೌಲ್ಯಗಳನ್ನು ತಳ್ಳಿಹಾಕುತ್ತಾನೆ. ಆದರೆ ಅವಿಧೇಯತೆಯ ಕೆಲವೇ ಕೃತ್ಯಗಳು ಒಬ್ಬ ಪ್ರತಿಭಟಕನನ್ನು ಉಂಟುಮಾಡುವುದಿಲ್ಲವೆಂಬುದು ನೆನಪಿರಲಿ. ಮತ್ತು ಆತ್ಮಿಕ ವಿಷಯಗಳ ಕುರಿತು ಮಾತಾಡುವಾಗ, ಕೆಲವು ಮಕ್ಕಳು ಮೊದಮೊದಲು ಬೈಬಲ್ ಸತ್ಯದಲ್ಲಿ ಕೊಂಚ ಅಥವಾ ಯಾವುದೇ ಆಸಕ್ತಿಯನ್ನು ತೋರಿಸಲಿಕ್ಕಿಲ್ಲವಾದರೂ ಅವರು ಪ್ರತಿಭಟಕರು ಆಗಿರಲಿಕ್ಕಿಲ್ಲ. ಹೆತ್ತವರೋಪಾದಿ, ನಿಮ್ಮ ಮಗುವಿಗೆ ಒಂದು ಹೆಸರುಪಟ್ಟಿಯನ್ನು ಹಚ್ಚಲು ತ್ವರೆಪಡಬೇಡಿರಿ.
6 ಎಲ್ಲ ಯುವ ಜನರ ತಾರುಣ್ಯದ ವರುಷಗಳು ಹೆತ್ತವರ ವಿರುದ್ಧ ಏಳುವ ಪ್ರತಿಭಟನೆಯಿಂದ ಗುರುತಿಸಲ್ಪಡುತ್ತವೆಯೊ? ನಿಶ್ಚಯವಾಗಿಯೂ ಇಲ್ಲ. ವಾಸ್ತವವಾಗಿ, ಗಂಭೀರವಾದ ತಾರುಣ್ಯದ ಪ್ರತಿಭಟನೆಯನ್ನು ಹದಿಹರೆಯದವರಲ್ಲಿ ಕೇವಲ ಅಲ್ಪಸಂಖ್ಯಾಕರು ಪ್ರದರ್ಶಿಸುತ್ತಾರೆಂದು ಸಾಕ್ಷ್ಯವು ಸೂಚಿಸುವಂತೆ ತೋರುತ್ತದೆ. ಆದರೂ, ಹಟಮಾರಿತನದಿಂದ ಮತ್ತು ಸುಸಂಗತವಾಗಿ ಪ್ರತಿಭಟಿಸುವ ಮಗನ ವಿಷಯವೇನು? ಅಂತಹ ಪ್ರತಿಭಟನೆಯನ್ನು ಯಾವುದು ಕೆರಳಿಸೀತು?
ಪ್ರತಿಭಟನೆಗೆ ಕಾರಣಗಳು
7. ಸೈತಾನ ಸಂಬಂಧಿತ ಪರಿಸರವು ಒಬ್ಬ ಹುಡುಗನನ್ನು ಹೇಗೆ ಪ್ರತಿಭಟಕನಾಗಿ ಪ್ರಭಾವಿಸಬಲ್ಲದು?
7 ಪ್ರತಿಭಟನೆಗೆ ಒಂದು ದೊಡ್ಡ ಕಾರಣವು ಲೋಕದ ಸೈತಾನ ಸಂಬಂಧಿತವಾದ ಪರಿಸರವೇ. “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಸೈತಾನನ ಅಧಿಕಾರದಲ್ಲಿರುವ ಜಗತ್ತು, ಕ್ರೈಸ್ತರು ಹೋರಾಡಲೇಬೇಕಾದ ಹಾನಿಕರವಾದ ಒಂದು ಸಂಸ್ಕೃತಿಯನ್ನು ಬೆಳೆಸಿದೆ. (ಯೋಹಾನ 17:15) ಆ ಸಂಸ್ಕೃತಿಯಲ್ಲಿ ಹೆಚ್ಚಿನದ್ದು ಹೆಚ್ಚು ಒರಟಾದದ್ದೂ, ಹೆಚ್ಚು ಅಪಾಯಕರವೂ ಮತ್ತು ಹಿಂದಿಗಿಂತ ಈಗ ಹೆಚ್ಚು ದುಷ್ಪ್ರಭಾವಭರಿತವೂ ಆಗಿದೆ. (2 ತಿಮೊಥೆಯ 3:1-5, 13) ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡದೆ, ಎಚ್ಚರಿಸದೆ, ಮತ್ತು ಅವರನ್ನು ಸಂರಕ್ಷಿಸದೆ ಇರುವುದಾದರೆ ಎಳೆಯರು, “ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮ”ದಿಂದ ಸುಲಭವಾಗಿ ಮುಳುಗಿಸಲ್ಪಡಬಲ್ಲರು. (ಎಫೆಸ 2:2) ಇದಕ್ಕೆ ಸಮಾನಸ್ಥರಿಂದ ಬರುವ ಒತ್ತಡವು ಸಂಬಂಧಕವಾಗಿದೆ. ಬೈಬಲ್ ಹೇಳುವುದು: “ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ತದ್ರೀತಿ, ಲೋಕಾತ್ಮದಿಂದ ತುಂಬಿರುವವರೊಂದಿಗೆ ಒಡನಾಟಮಾಡುವವನು ಅದೇ ಆತ್ಮದಿಂದ ಪ್ರಭಾವಿತನಾಗುವುದು ಸಂಭವನೀಯ. ದೈವಿಕ ಮೂಲತತ್ವಗಳಿಗೆ ವಿಧೇಯತೆಯು ತೀರ ಅತ್ಯುತ್ತಮ ಜೀವನರೀತಿಯ ಅಸ್ತಿವಾರವಾಗಿದೆಯೆಂದು ಎಳೆಯರು ಗುಣಗ್ರಹಿಸಬೇಕಾದರೆ ಅವರಿಗೆ ಸತತವಾದ ಸಹಾಯವು ಅಗತ್ಯ.—ಯೆಶಾಯ 48:17, 18.
8. ಒಬ್ಬ ಹುಡುಗನನ್ನು ಯಾವ ಸಂಗತಿಗಳು ಪ್ರತಿಭಟನೆಗೆ ನಡಸಿಯಾವು?
8 ಪ್ರತಿಭಟನೆಗೆ ಇನ್ನೊಂದು ಕಾರಣವು, ಮನೆಯಲ್ಲಿರುವ ವಾತಾವರಣವಾಗಿರಬಹುದು. ಉದಾಹರಣೆಗಾಗಿ, ಹೆತ್ತವರಲ್ಲಿ ಒಬ್ಬರು ಮದ್ಯವ್ಯಸನಿಯಾಗಿಯೊ, ಅಮಲೌಷಧವನ್ನು ದುರುಪಯೋಗಿಸಿಯೊ, ಇನ್ನೊಬ್ಬ ಹೆತ್ತವರ ಕಡೆಗೆ ಹಿಂಸಾಚಾರಿಯೊ ಆಗಿರುವಲ್ಲಿ, ಹದಿಹರೆಯದವನ ಜೀವನದೃಷ್ಟಿಯು ವಕ್ರವಾಗಿರಬಲ್ಲದು. ಸಾಪೇಕ್ಷವಾಗಿ ಪ್ರಶಾಂತವಾದ ಮನೆಗಳಲ್ಲಿಯೂ, ತನ್ನ ಹೆತ್ತವರಿಗೆ ತನ್ನಲ್ಲಿ ಅಭಿರುಚಿಯಿಲ್ಲವೆಂದು ಒಂದು ಮಗುವಿಗನಿಸುವಲ್ಲಿ, ಪ್ರತಿಭಟನೆಯು ಎದ್ದುಬಂದೀತು. ಆದರೂ, ಹದಿಹರೆಯದ ಪ್ರತಿಭಟನೆ ಯಾವಾಗಲೂ ಬಾಹ್ಯ ಪ್ರಭಾವಗಳಿಂದಲೇ ಉಂಟಾಗುವುದಿಲ್ಲ. ಕೆಲವು ಮಕ್ಕಳು, ದೈವಿಕ ಮೂಲತತ್ವಗಳನ್ನು ಅನ್ವಯಿಸುವ ಮತ್ತು ತಮ್ಮ ಸುತ್ತಲಿನ ಜಗತ್ತಿನಿಂದ ತಮಗೆ ಅಧಿಕಾಂಶ ಆಶ್ರಯಕೊಡುವ ಹೆತ್ತವರಿರುವಾಗಲೂ, ಪಿತೃ ಮೌಲ್ಯಗಳಿಗೆ ಬೆನ್ನುಹಾಕುತ್ತಾರೆ. ಏಕೆ? ಪ್ರಾಯಶಃ ನಮ್ಮ ಸಮಸ್ಯೆಗಳ ಇನ್ನೊಂದು ಮೂಲವಾದ ಮಾನವ ಅಪರಿಪೂರ್ಣತೆಯ ಕಾರಣವೇ. ಪೌಲನು ಹೇಳಿದ್ದು: “ಒಬ್ಬ ಮನುಷ್ಯ [ಆದಾಮ]ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಆದಾಮನು ಒಬ್ಬ ಸ್ವಾರ್ಥಪರನಾದ ಪ್ರತಿಭಟಕನಾಗಿದ್ದನು ಮತ್ತು ತನ್ನ ಸಂತತಿಯವರಿಗೆಲ್ಲ ಅವನು ಒಂದು ಕೆಟ್ಟ ಆಸ್ತಿಯನ್ನು ಬಿಟ್ಟುಹೋದನು. ಕೆಲವು ಯುವ ಜನರು, ತಮ್ಮ ಪೂರ್ವಜನು ಮಾಡಿದಂತೆಯೆ, ಪ್ರತಿಭಟಿಸಲು ಆಯ್ದುಕೊಳ್ಳುತ್ತಾರೆ.
ಸ್ವಚ್ಛಂದಾವಕಾಶ ಕೊಟ್ಟ ಏಲಿ ಮತ್ತು ನಿರ್ಬಂಧಿಸಿದ ರೆಹಬ್ಬಾಮ
9. ಹುಡುಗನ ಬೆಳೆಸುವಿಕೆಯಲ್ಲಿ ಯಾವ ವೈಪರೀತ್ಯಗಳು ಅವನನ್ನು ಪ್ರತಿಭಟಿಸುವಂತೆ ಉದ್ರೇಕಿಸಬಹುದು?
9 ಹದಿಹರೆಯದ ಪ್ರತಿಭಟನೆಗೆ ನಡೆಸಿರುವ ಇನ್ನೊಂದು ವಿಷಯವು ಹೆತ್ತವರ ಕಡೆಯಿಂದ ಮಕ್ಕಳ ಬೆಳೆಯಿಸುವಿಕೆಯ ವಿಷಯದಲ್ಲಿರುವ ಅಸಮತೆಯ ವೀಕ್ಷಣವೇ. (ಕೊಲೊಸ್ಸೆ 3:21) ಕೆಲವು ಶುದ್ಧಾಂತಃಕರಣವಿರುವ ಹೆತ್ತವರು ತಮ್ಮ ಮಕ್ಕಳನ್ನು ಕಠಿನವಾಗಿ ನಿರ್ಬಂಧಿಸಿ ಶಿಸ್ತಿಗೊಳಪಡಿಸುತ್ತಾರೆ. ಇತರರು ತಮ್ಮ ಅನನುಭವಿ ತರುಣನನ್ನು ಸಂರಕ್ಷಿಸುವ ಮಾರ್ಗದರ್ಶನೆಯನ್ನು ಕೊಡದೆ, ಸ್ವಚ್ಛಂದಾವಕಾಶವನ್ನು ಕೊಡುತ್ತಾರೆ. ಈ ಎರಡು ವೈಪರೀತ್ಯಗಳ ಮಧ್ಯೆ ಸಮತೆಯನ್ನು ಅವಲಂಬಿಸುವುದು ಸದಾ ಸುಲಭವಲ್ಲ. ಮತ್ತು ವಿವಿಧ ಮಕ್ಕಳಿಗೆ ವಿವಿಧ ಆವಶ್ಯಕತೆಗಳಿವೆ. ಒಬ್ಬನಿಗೆ ಇನ್ನೊಬ್ಬನಿಗಿಂತ ಹೆಚ್ಚಿನ ಮೇಲ್ವಿಚಾರಣೆ ಬೇಕಾದೀತು. ಆದರೂ, ನಿರ್ಬಂಧಿಸುವಿಕೆಯಲ್ಲಾಗಲಿ ಸ್ವಚ್ಛಂದಾವಕಾಶದಲ್ಲಿಯಾಗಲಿ ವಿಪರೀತವಾಗಿರುವುದರಲ್ಲಿರುವ ಅಪಾಯಗಳನ್ನು ತೋರಿಸಲು ಎರಡು ಬೈಬಲ್ ಉದಾಹರಣೆಗಳು ಸಹಾಯ ಮಾಡುವುವು.
10. ಏಲಿಯು ನಂಬಿಗಸ್ತ ಮಹಾಯಾಜಕನಾಗಿದ್ದಿರಬಹುದಾದರೂ ಏಕೆ ಒಬ್ಬ ನ್ಯೂನ ಹೆತ್ತವನಾಗಿದ್ದನು?
10 ಪುರಾತನ ಕಾಲದ ಇಸ್ರಾಯೇಲಿನ ಮಹಾ ಯಾಜಕ ಏಲಿಯು ಒಬ್ಬ ತಂದೆಯಾಗಿದ್ದನು. ದೇವರ ಧರ್ಮಶಾಸ್ತ್ರದಲ್ಲಿ ನಿಸ್ಸಂಶಯವಾಗಿ ನಿಷ್ಣಾತನಾಗಿದ್ದ ಅವನು 40 ವರ್ಷಕಾಲ ಸೇವೆಮಾಡಿದನು. ಏಲಿಯು ತನ್ನ ನಿಯತ ಕ್ರಮದ ಯಾಜಕ ಕರ್ತವ್ಯಗಳನ್ನು ತೀರ ನಂಬಿಗಸ್ತಿಕೆಯಿಂದ ನೆರವೇರಿಸಿರುವುದು ಸಂಭವನೀಯ ಮತ್ತು ತನ್ನ ಪುತ್ರರಾದ ಹೊಫ್ನಿ ಮತ್ತು ಫೀನೆಹಾಸರಿಗೆ ದೇವರ ಧರ್ಮಶಾಸ್ತ್ರವನ್ನು ಪೂರ್ತಿಯಾಗಿ ಕಲಿಸಿರಲೂಬಹುದು. ಆದರೂ, ಏಲಿಯು ತನ್ನ ಪುತ್ರರು ತೀರ ಮನಬಂದಂತೆ ವರ್ತಿಸುವಂತೆ ಬಿಡುತ್ತಿದ್ದನು. ಹೊಫ್ನಿ ಮತ್ತು ಫೀನೆಹಾಸರು ಪೌರೋಹಿತ್ಯ ನಡೆಸುವ ಯಾಜಕರಾಗಿ ಸೇವೆಸಲ್ಲಿಸುತ್ತಿದ್ದರೂ, ಅವರು ತಮ್ಮ ರುಚಿಗಳನ್ನು ಮತ್ತು ಅನೈತಿಕಾಪೇಕ್ಷೆಗಳನ್ನು ತೃಪ್ತಿಪಡಿಸಿಕೊಳ್ಳಲು ಮಾತ್ರ ಆಸಕ್ತರಾಗಿದ್ದ “ಬಹುದುಷ್ಟರಾಗಿದ್ದರು.” ಆದರೂ, ಅವರು ಪವಿತ್ರ ಸ್ಥಳದಲ್ಲಿ ನಾಚಿಕೆಗೇಡಿ ವರ್ತನೆಗಳನ್ನು ನಡೆಸಿದಾಗಲೂ ಏಲಿಗೆ ಅವರನ್ನು ಅವರ ಸ್ಥಾನದಿಂದ ತೆಗೆದುಬಿಡಲು ಧೈರ್ಯವಿರಲಿಲ್ಲ. ಅವನು ಅವರಿಗೆ ಕೇವಲ ಶಕ್ತಿಹೀನವಾದ ಗದರಿಕೆಯನ್ನು ಕೊಟ್ಟನು. ತನ್ನ ಸ್ವಚ್ಛಂದಾವಕಾಶದ ಮೂಲಕ ಏಲಿಯು ತನ್ನ ಪುತ್ರರನ್ನು ದೇವರಿಗಿಂತಲೂ ಹೆಚ್ಚಾಗಿ ಗೌರವಿಸಿದನು. ಅದರ ಪರಿಣಾಮವಾಗಿ, ಅವನ ಪುತ್ರರು ಯೆಹೋವನ ಶುದ್ಧಾರಾಧನೆಯ ವಿರುದ್ಧ ಪ್ರತಿಭಟನೆ ಮಾಡಿದರು ಮತ್ತು ಏಲಿಯ ಇಡೀ ಮನೆಯು ಆಪತ್ತನ್ನು ಅನುಭವಿಸಿತು.—1 ಸಮುವೇಲ 2:12-17, 22-25, 29; 3:13, 14; 4:11-22.
11. ಏಲಿಯ ತಪ್ಪಾದ ಮಾದರಿಯಿಂದ ಹೆತ್ತವರು ಏನನ್ನು ಕಲಿಯಬಲ್ಲರು?
11 ಈ ಘಟನೆಗಳು ನಡೆದಾಗ ಏಲಿಯ ಮಕ್ಕಳು ಆಗಲೇ ವಯಸ್ಕರಾಗಿದ್ದರು, ಆದರೆ ಈ ಇತಿಹಾಸವು ಶಿಸ್ತನ್ನು ಕೊಡದಿರುವುದರ ಅಪಾಯವನ್ನು ಒತ್ತಿಹೇಳುತ್ತದೆ. (ಹೋಲಿಸಿ ಜ್ಞಾನೋಕ್ತಿ 29:21.) ಕೆಲವು ಹೆತ್ತವರು ಸ್ವಚ್ಛಂದಾವಕಾಶವನ್ನು ಪ್ರೀತಿಯೆಂದು ತಪ್ಪಾಗಿ ಗ್ರಹಿಸಿ, ಸ್ಪಷ್ಟವಾದ ಮತ್ತು ಸುಸಂಗತವಾದ ಹಾಗೂ ನ್ಯಾಯಸಮ್ಮತವಾದ ನಿಯಮಗಳನ್ನು ಇಡಲು ನಿರ್ಲಕ್ಷಿಸಬಹುದು. ದಿವ್ಯ ನಿಯಮಗಳು ಉಲ್ಲಂಘಿಸಲ್ಪಟ್ಟಾಗಲೂ ಪ್ರೀತಿಯ ಶಿಸ್ತನ್ನು ಅನ್ವಯಿಸಲು ಅವರು ತಪ್ಪುತ್ತಾರೆ. ಇಂತಹ ಸ್ವಚ್ಛಂದಾವಕಾಶದ ಕಾರಣ, ಅವರ ಮಕ್ಕಳು ಹೆತ್ತವರ ಅಥವಾ ಇನ್ನಾವುದೇ ವಿಧದ ಅಧಿಕಾರಕ್ಕೆ ಗಮನ ಕೊಡದವರಾಗಿ ಪರಿಣಮಿಸಬಹುದು.—ಹೋಲಿಸಿ ಪ್ರಸಂಗಿ 8:11.
12. ಅಧಿಕಾರ ನಿರ್ವಹಣೆಯಲ್ಲಿ ರೆಹಬ್ಬಾಮನು ಯಾವ ತಪ್ಪನ್ನು ಮಾಡಿದನು?
12 ರೆಹಬ್ಬಾಮನು ಅಧಿಕಾರವನ್ನು ನಿರ್ವಹಿಸುವುದರಲ್ಲಿ ಇನ್ನೊಂದು ವೈಪರೀತ್ಯವನ್ನು ದೃಷ್ಟಾಂತಿಸುತ್ತಾನೆ. ಅವನು ಸಂಯುಕ್ತ ಇಸ್ರಾಯೇಲ್ ರಾಜ್ಯದ ಕೊನೆಯ ಅರಸನಾಗಿದ್ದನು, ಆದರೆ ಅವನು ಒಬ್ಬ ಒಳ್ಳೆಯ ಅರಸನಾಗಿರಲಿಲ್ಲ. ಅವನ ತಂದೆಯಾದ ಸೊಲೊಮೋನನು ಹಾಕಿದ್ದ ಹೊರೆಗಳಿಂದಾಗಿ ಯಾವುದರ ಜನರು ಅಸಂತೃಪ್ತರಾಗಿದ್ದರೊ ಆ ದೇಶವನ್ನು ಅವನು ಬಾಧ್ಯತೆಯಾಗಿ ಪಡೆದಿದ್ದನು. ರೆಹಬ್ಬಾಮನು ಗ್ರಹಣಶಕ್ತಿಯನ್ನು ತೋರಿಸಿದನೊ? ಇಲ್ಲ. ದಬ್ಬಾಳಿಕೆಯ ಕ್ರಮಗಳಲ್ಲಿ ಕೆಲವನ್ನು ತೊಲಗಿಸುವಂತೆ ಒಂದು ಪ್ರತಿನಿಧಿ ಮಂಡಲಿಯು ಕೇಳಿಕೊಂಡಾಗ, ಅವನು ತನ್ನ ವಯಸ್ಸಾದ ಸಲಹೆಗಾರರ ಪಕ್ವತೆಯ ಬುದ್ಧಿವಾದವನ್ನು ಕೇಳಲು ತಪ್ಪಿ, ಜನರ ನೊಗವು ಇನ್ನೂ ಹೆಚ್ಚು ಭಾರವಾಗಿ ಮಾಡಲ್ಪಡುವಂತೆ ಆಜ್ಞಾಪಿಸಿದನು. ಅವನ ದುರಹಂಕಾರವು ಉತ್ತರದ ಹತ್ತು ಕುಲಗಳಿಂದ ಪ್ರತಿಭಟನೆಯನ್ನು ಉದ್ರೇಕಿಸಲಾಗಿ, ರಾಜ್ಯವು ಎರಡಾಗಿ ಒಡೆಯಿತು.—1 ಅರಸುಗಳು 12:1-21; 2 ಪೂರ್ವಕಾಲವೃತ್ತಾಂತ 10:19.
13. ರೆಹಬ್ಬಾಮನ ತಪ್ಪಿನಿಂದ ಹೆತ್ತವರು ಹೇಗೆ ದೂರವಿರಬಲ್ಲರು?
13 ರೆಹಬ್ಬಾಮನ ಕುರಿತ ಬೈಬಲ್ ವೃತ್ತಾಂತದಿಂದ ಹೆತ್ತವರು ಕೆಲವು ಪ್ರಾಮುಖ್ಯ ಪಾಠಗಳನ್ನು ಕಲಿಯಬಲ್ಲರು. ಅವರು ಪ್ರಾರ್ಥನೆಯಲ್ಲಿ ‘ಯೆಹೋವನನ್ನು ಆಶ್ರಯಿಸುವುದು’ ಮತ್ತು ಬೈಬಲ್ ಮೂಲತತ್ವಗಳ ಬೆಳಕಿನಲ್ಲಿ ಮಕ್ಕಳನ್ನು ಬೆಳೆಸುವ ತಮ್ಮ ವಿಧಾನಗಳನ್ನು ಪರೀಕ್ಷಿಸುವುದು ಅಗತ್ಯ. (ಕೀರ್ತನೆ 105:4) “ಬರಿಯ ದಬ್ಬಾಳಿಕೆಯು ವಿವೇಕಿಯನ್ನು ಹುಚ್ಚನಾಗಿ ವರ್ತಿಸುವಂತೆ ಮಾಡೀತು,” ಎನ್ನುತ್ತದೆ ಪ್ರಸಂಗಿ 7:7 (NW). ಸುವಿಚಾರಿತ ಮೇರೆಗಳು ತರುಣರನ್ನು ಹಾನಿಯಿಂದ ಸಂರಕ್ಷಿಸುತ್ತಿರುವಾಗ ಅವರಿಗೆ ಬೆಳೆಯಲು ಸ್ಥಳವನ್ನೂ ಕೊಡುತ್ತದೆ. ಆದರೆ ನ್ಯಾಯಸಮ್ಮತವಾಗುವಷ್ಟು ಮಟ್ಟಿಗಿನ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದನ್ನು ತಡೆಯುವಷ್ಟು ಕಟ್ಟುನಿಟ್ಟಾದ ಮತ್ತು ಅದುಮಿಡುವ ವಾತಾವರಣದಲ್ಲಿ ಮಕ್ಕಳು ಜೀವಿಸಬಾರದು. ಹೆತ್ತವರು ನ್ಯಾಯವಾದ ಸ್ವಾತಂತ್ರ್ಯ ಮತ್ತು ಸ್ಪಷ್ಟವಾಗಿ ಗುರುತಿಸಿರುವ ಸ್ಥಿರವಾದ ಮೇರೆಗಳ ಮಧ್ಯೆ ಸಮತೆಗಾಗಿ ಪ್ರಯತ್ನಿಸುವಾಗ, ಹೆಚ್ಚಿನ ಹದಿಹರೆಯದವರು ಪ್ರತಿಭಟಿಸಲು ಕಡಮೆ ಪ್ರವೃತ್ತಿಯುಳ್ಳವರಾಗುವರು.
ಮೂಲಭೂತ ಅಗತ್ಯಗಳನ್ನು ಪೂರೈಸುವುದು ದಂಗೆಯನ್ನು ತಡೆಗಟ್ಟಬಲ್ಲದು
14, 15. ತಮ್ಮ ಮಗುವಿನ ಬೆಳವಣಿಗೆಯನ್ನು ಹೆತ್ತವರು ಹೇಗೆ ವೀಕ್ಷಿಸಬೇಕು?
14 ತಮ್ಮ ಎಳೆಯನು ಶೈಶವದಿಂದ ಪ್ರಾಪ್ತವಯಸ್ಸಿಗೆ ಶಾರೀರಿಕವಾಗಿ ಬೆಳೆಯುವುದನ್ನು ನೋಡಿ ಹೆತ್ತವರು ಉಲ್ಲಾಸಿಸುತ್ತಾರಾದರೂ, ತರುಣಾವಸ್ಥೆಯಲ್ಲಿರುವ ತಮ್ಮ ಮಗನು ಅವಲಂಬನೆಯಿಂದ ಯೋಗ್ಯ ರೀತಿಯ ಸ್ವಾವಲಂಬನೆಗೆ ಚಲಿಸತೊಡಗುವಾಗ ಹೆತ್ತವರು ಕ್ಷೋಭೆಗೊಳ್ಳಬಹುದು. ಈ ಪರಿವರ್ತನೆಯ ಅವಧಿಯಲ್ಲಿ, ನಿಮ್ಮ ಹದಿಹರೆಯದವನು ಕೆಲವೊಮ್ಮೆ ತುಸು ಹಟಮಾರಿಯೂ ಅಸಹಕಾರಕನೂ ಆಗಿರುವಲ್ಲಿ ಆಶ್ಚರ್ಯಪಡಬೇಡಿರಿ. ಕ್ರೈಸ್ತ ಹೆತ್ತವರ ಗುರಿಯು ಒಬ್ಬ ಪಕ್ವತೆಯ, ಸ್ಥಿರ ಮನಸ್ಸಿನ ಮತ್ತು ಜವಾಬ್ದಾರಿಯುತ ಕ್ರೈಸ್ತನನ್ನು ಬೆಳೆಸುವುದಾಗಿರಬೇಕೆಂಬುದನ್ನು ಮನಸ್ಸಿನಲ್ಲಿಡಿರಿ.—ಹೋಲಿಸಿ 1 ಕೊರಿಂಥ 13:11; ಎಫೆಸ 4:13, 14.
15 ಅದು ಕಷ್ಟವಾಗಿರಬಹುದಾದರೂ, ತಮ್ಮ ತರುಣನಿಂದ ಹೆಚ್ಚಿನ ಸ್ವಾತಂತ್ರ್ಯದ ಯಾವುದೇ ಬಿನ್ನಹಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಅಭ್ಯಾಸವನ್ನು ಹೆತ್ತವರು ಮುರಿಯುವುದು ಅಗತ್ಯ. ಒಂದು ಹಿತಕರವಾದ ವಿಧದಲ್ಲಿ, ಒಂದು ಮಗು ಪ್ರತ್ಯೇಕ ಲಕ್ಷಣದ ವ್ಯಕ್ತಿಯಾಗಿ ಬೆಳೆಯುವುದು ಆವಶ್ಯಕ. ವಾಸ್ತವವಾಗಿ, ಸಾಪೇಕ್ಷವಾಗಿ ಎಳೆಯ ವಯಸ್ಸಿನಲ್ಲಿ, ಕೆಲವು ಹದಿಹರೆಯದವರು ತೀರ ಬೆಳೆದಿರುವ ಹೊರನೋಟವನ್ನು ವಿಕಸಿಸಲು ಆರಂಭಿಸುತ್ತಾರೆ. ಉದಾಹರಣೆಗಾಗಿ, ಎಳೆಯ ಅರಸ ಯೋಷೀಯನ ಕುರಿತು ಬೈಬಲು ಹೇಳುವುದು: “ಅವನು ಇನ್ನೂ [ಸುಮಾರು 15 ವರ್ಷ ವಯಸ್ಸಿನ] ಯೌವನಸ್ಥ [“ಹುಡುಗ,” NW]ನಾಗಿರುವಾಗಲೇ ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು.” ಈ ಪ್ರಮುಖ ಹದಿಹರೆಯದವನು ಸ್ಪಷ್ಟವಾಗಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದನು.—2 ಪೂರ್ವಕಾಲವೃತ್ತಾಂತ 34:1-3.
16. ಮಕ್ಕಳಿಗೆ ಹೆಚ್ಚಾದ ಜವಾಬ್ದಾರಿಗಳು ಕೊಡಲ್ಪಡುವಾಗ ಅವರು ಯಾವುದನ್ನು ಗ್ರಹಿಸಿಕೊಳ್ಳಬೇಕು?
16 ಆದರೂ, ಸ್ವಾತಂತ್ರ್ಯವು ಅದರೊಂದಿಗೆ ಉತ್ತರವಾದಿತ್ವವನ್ನು ತರುತ್ತದೆ. ಆದಕಾರಣ, ನಿಮ್ಮ ಎದ್ದುಬರುವ ಪ್ರಾಪ್ತವಯಸ್ಕನು ತನ್ನ ನಿರ್ಣಯಗಳ ಮತ್ತು ವರ್ತನೆಗಳ ಫಲಗಳನ್ನು ಅನುಭವಿಸುವಂತೆ ಬಿಡಿರಿ. “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು,” ಎಂಬ ಮೂಲತತ್ವವು ಹದಿಹರೆಯದವರಿಗೂ ಪ್ರಾಪ್ತವಯಸ್ಕರಿಗೂ ಅನ್ವಯಿಸುತ್ತದೆ. (ಗಲಾತ್ಯ 6:7) ಮಕ್ಕಳನ್ನು ಸದಾ ಮರೆಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ, ನಿಮ್ಮ ಮಗನು ಪೂರ್ತಿಯಾಗಿ ಅನಂಗೀಕೃತವಾದ ಒಂದು ವಿಷಯವನ್ನು ಮಾಡಬಯಸುವುದಾದರೆ ಆಗೇನು? ಹೊಣೆಗಾರರಾದ ಹೆತ್ತವರೋಪಾದಿ, ನೀವು “ಇಲ್ಲ” ಎಂದು ಹೇಳಲೇಬೇಕು. ಮತ್ತು ಇದಕ್ಕೆ ಕಾರಣಗಳನ್ನು ನೀವು ವಿವರಿಸಬಹುದಾದರೂ, ಯಾವುದೂ ನಿಮ್ಮ ಇಲ್ಲವನ್ನು ಹೌದು ಎಂಬುದಕ್ಕೆ ಬದಲಾಯಿಸಬಾರದು. (ಹೋಲಿಸಿ ಮತ್ತಾಯ 5:37.) ಆದರೂ, “ಇಲ್ಲ” ಎಂಬುದನ್ನು ಶಾಂತವಾದ ಮತ್ತು ಯುಕ್ತವಾದ ರೀತಿಯಲ್ಲಿ ಹೇಳಲು ಪ್ರಯತ್ನಿಸಿರಿ, ಏಕೆಂದರೆ “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು.”—ಜ್ಞಾನೋಕ್ತಿ 15:1.
17. ಒಬ್ಬ ಹೆತ್ತವರು ತೃಪ್ತಿಪಡಿಸಬೇಕಾದ, ಹದಿಹರೆಯದವನೊಬ್ಬನ ಆವಶ್ಯಕತೆಗಳಲ್ಲಿ ಕೆಲವು ಯಾವುವು?
17 ಯುವ ಜನರಿಗೆ, ಅವರು ನಿರ್ಬಂಧಗಳನ್ನೂ ನಿಯಮಗಳನ್ನೂ ಯಾವಾಗಲೂ ಸಿದ್ಧಮನಸ್ಸಿನಿಂದ ಒಪ್ಪದಿದ್ದರೂ, ಸುಸಂಗತವಾದ ಶಿಸ್ತಿನ ಭದ್ರತೆಯು ಅಗತ್ಯ. ನಿಯಮಗಳು, ಹೆತ್ತವರಿಗೆ ಒಂದು ಸಮಯದಲ್ಲಿ ಹೇಗನಿಸುತ್ತದೊ ಅದರ ಮೇಲೆ ಹೊಂದಿಕೊಂಡು, ಪದೇ ಪದೇ ಬದಲಾವಣೆ ಹೊಂದುವಲ್ಲಿ ಅದು ನಿರಾಶದಾಯಕವಾಗಿದೆ. ಅಲ್ಲದೆ, ಹದಿಹರೆಯದವರು ಸಂಕೋಚ ಭಾವ, ಲಜ್ಜೆ ಅಥವಾ ಆತ್ಮ ವಿಶ್ವಾಸದ ಕೊರತೆಯನ್ನು ನಿಭಾಯಿಸುವುದರಲ್ಲಿ ಅವರಿಗೆ ಅಗತ್ಯವಿರುವ ಹಾಗೆ ಪ್ರೋತ್ಸಾಹ ಮತ್ತು ಸಹಾಯವನ್ನು ಪಡೆಯುವಲ್ಲಿ, ಅವರು ಹೆಚ್ಚು ಸ್ಥಿರತೆಯುಳ್ಳವರಾಗಿ ಬೆಳೆಯುವುದು ಸಂಭವನೀಯ. ತಾವು ಸಂಪಾದಿಸಿರುವ ವಿಶ್ವಾಸಪಾತ್ರತೆಯನ್ನು ಪಡೆಯುವಾಗ ಹದಿಹರೆಯದವರು ಸಹ ಅದನ್ನು ಗಣ್ಯಮಾಡುತ್ತಾರೆ.—ಹೋಲಿಸಿ ಯೆಶಾಯ 35:3, 4; ಲೂಕ 16:10; 19:17.
18. ಹದಿಹರೆಯದವರ ಕುರಿತಾದ ಕೆಲವು ಪ್ರೋತ್ಸಾಹದಾಯಕ ಸತ್ಯತೆಗಳಲ್ಲಿ ಕೆಲವು ಯಾವುವು?
18 ಶಾಂತಿ, ಸ್ಥಿರತೆ ಮತ್ತು ಪ್ರೀತಿಯು ಮನೆವಾರ್ತೆಯಲ್ಲಿ ಅಸ್ತಿತ್ವದಲ್ಲಿರುವಾಗ, ಮಕ್ಕಳು ಸಾಮಾನ್ಯವಾಗಿ ಏಳಿಗೆ ಹೊಂದುತ್ತಾರೆಂದು ತಿಳಿಯುವುದು ಹೆತ್ತವರಿಗೆ ನೆಮ್ಮದಿಯನ್ನು ತರಬಲ್ಲದು. (ಎಫೆಸ 4:31, 32; ಯಾಕೋಬ 3:17, 18) ಅನೇಕ ಎಳೆಯರು, ಒಂದು ಕೆಟ್ಟ ಗೃಹಪರಿಸರದಿಂದಲೂ ಬಂದಿದ್ದಾರೆ. ಅವರು ಮದ್ಯರೋಗಾವಸ್ಥೆ, ಹಿಂಸಾಚಾರ ಅಥವಾ ಇತರ ಹಾನಿಕರ ಪ್ರಭಾವದಿಂದ ಗುರುತಿಸಲ್ಪಟ್ಟ ಕುಟುಂಬಗಳಿಂದ ಬಂದಿದ್ದರೂ, ಒಳ್ಳೆಯ ವಯಸ್ಕರಾಗಿ ಬೆಳೆದಿದ್ದಾರೆ. ಆದಕಾರಣ, ನಿಮ್ಮ ಹದಿಹರೆಯದವರಿಗೆ ತಾವು ಪ್ರೀತಿ, ಮಮತೆ ಮತ್ತು ಗಮನವನ್ನು ಪಡೆಯುತ್ತೇವೆಂದು ತಿಳಿದು, ಭದ್ರರಾಗಿದ್ದೇವೆಂದು ಅವರಿಗನಿಸುವ ಒಂದು ಮನೆಯನ್ನು ನೀವು ಒದಗಿಸುವಲ್ಲಿ—ಆ ಬೆಂಬಲವು ಶಾಸ್ತ್ರೀಯ ಮೂಲತತ್ವಗಳಿಗೆ ಹೊಂದಿಕೆಯಲ್ಲಿ ನ್ಯಾಯಸಮ್ಮತವಾದ ನಿರ್ಬಂಧಗಳಿಂದ ಮತ್ತು ಶಿಸ್ತಿನಿಂದ ಜೊತೆಗೂಡಿದ್ದರೂ—ನೀವು ಅಭಿಮಾನಪಡುವ ಪ್ರಾಪ್ತವಯಸ್ಕರಾಗಿ ಅವರು ಬೆಳೆಯುವುದು ತೀರ ಸಂಭವನೀಯ.—ಹೋಲಿಸಿ ಜ್ಞಾನೋಕ್ತಿ 27:11.
ಮಕ್ಕಳು ತೊಡಕುಗಳಲ್ಲಿ ಸಿಕ್ಕಿಬೀಳುವಾಗ
19. ಹೆತ್ತವರು ಒಬ್ಬ ಹುಡುಗನನ್ನು ಅವನು ಹೋಗಬೇಕಾದ ಮಾರ್ಗದಲ್ಲಿ ತರಬೇತುಗೊಳಿಸಬೇಕಾದರೂ, ಆ ಹುಡುಗನ ಮೇಲೆ ಯಾವ ಜವಾಬ್ದಾರಿಯಿರುತ್ತದೆ?
19 ಒಳ್ಳೆಯ ಪಾಲನೆಯು ನಿಶ್ಚಯವಾಗಿಯೂ ಮುಖ್ಯವಾಗಿದೆ. ಜ್ಞಾನೋಕ್ತಿ 22:6 ಹೇಳುತ್ತದೆ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” ಆದರೂ, ಒಳ್ಳೆಯ ಹೆತ್ತವರಿರುವುದಾದರೂ ಗಂಭೀರವಾದ ಸಮಸ್ಯೆಗಳಿರುವ ಮಕ್ಕಳ ವಿಷಯವೇನು? ಇದು ಸಾಧ್ಯವೊ? ಹೌದು. ಜ್ಞಾನೋಕ್ತಿಯ ಮಾತುಗಳನ್ನು, ಯಾವ ವಚನಗಳು ಹೆತ್ತವರಿಗೆ ‘ಕಿವಿಗೊಟ್ಟು,’ ವಿಧೇಯನಾಗುವ ಮಗುವಿನ ಜವಾಬ್ದಾರಿಯನ್ನು ಒತ್ತಿಹೇಳುತ್ತವೆಯೊ ಆ ಇತರ ವಚನಗಳ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬೇಕು. (ಜ್ಞಾನೋಕ್ತಿ 1:8) ಕುಟುಂಬ ಸಾಮರಸ್ಯವಿರಬೇಕಾದರೆ, ಶಾಸ್ತ್ರೀಯ ಮೂಲತತ್ವಗಳನ್ನು ಅನ್ವಯಿಸುವುದರಲ್ಲಿ ಹೆತ್ತವರೂ ಮಗನೂ ಸಹಕರಿಸಬೇಕು. ಹೆತ್ತವರೂ ಮಕ್ಕಳೂ ಕೂಡಿ ಕೆಲಸ ಮಾಡದಿದ್ದರೆ, ತೊಂದರೆಗಳು ಬರುವುವು.
20. ಅವಿಚಾರದ ಕಾರಣ ಮಕ್ಕಳು ತಪ್ಪುಮಾಡುವಾಗ, ಹೆತ್ತವರು ತೆಗೆದುಕೊಳ್ಳುವ ವಿವೇಕದ ಒಂದು ಹಾದಿಯು ಯಾವುದಾಗಿರಬಹುದು?
20 ಹದಿಹರೆಯದ ಒಬ್ಬನು ತಪ್ಪುಮಾಡಿ ತೊಡಕಿನಲ್ಲಿ ಸಿಕ್ಕಿಬೀಳುವಾಗ ಹೆತ್ತವರು ಹೇಗೆ ಪ್ರತಿಕ್ರಿಯಿಸಬೇಕು? ಆಗ ವಿಶೇಷವಾಗಿ ಎಳೆಯನಿಗೆ ಸಹಾಯವು ಅಗತ್ಯವಿದೆ. ತಾವು ಅನನುಭವಿಯಾದ ಯುವಕನೊಂದಿಗೆ ವ್ಯವಹರಿಸುತ್ತಿದ್ದೇವೆಂದು ಹೆತ್ತವರು ಜ್ಞಾಪಿಸಿಕೊಳ್ಳುವಲ್ಲಿ, ವಿಪರೀತವಾಗಿ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಅವರು ಹೆಚ್ಚು ಸುಲಭವಾಗಿ ತಡೆಯುವರು. ಸಭೆಯಲ್ಲಿನ ಪಕ್ವತೆಯ ವ್ಯಕ್ತಿಗಳಿಗೆ ಪೌಲನು ಸಲಹೆ ನೀಡಿದ್ದು: “ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ.” (ಗಲಾತ್ಯ 6:1) ಅವಿಚಾರಿಯಾಗಿರುವುದರಿಂದ ಒಂದು ತಪ್ಪುಮಾಡುವ ಒಬ್ಬ ಯುವ ವ್ಯಕ್ತಿಯೊಂದಿಗೆ ವ್ಯವಹರಿಸುವಾಗ ಹೆತ್ತವರು ಇದೇ ಕಾರ್ಯವಿಧಾನವನ್ನು ಅನುಸರಿಸಬಲ್ಲರು. ಅವನ ನಡತೆಯು ಏಕೆ ತಪ್ಪಾಗಿತ್ತು ಮತ್ತು ಆ ತಪ್ಪನ್ನು ಆವರ್ತಿಸಿ ಮಾಡುವುದನ್ನು ಅವನು ಹೇಗೆ ತಪ್ಪಿಸಬಲ್ಲನು ಎಂಬುದನ್ನು ಸ್ಪಷ್ಟವಾಗಿ ವಿವರಿಸುವಾಗ ಹೆತ್ತವರು, ಕೆಟ್ಟದ್ದು ಯೌವನವಲ್ಲ, ತಪ್ಪಾದ ನಡತೆಯೇ ಎಂದು ಸ್ಪಷ್ಟಗೊಳಿಸಬೇಕು.—ಹೋಲಿಸಿ ಯೂದ 22, 23.
21. ತಮ್ಮ ಮಕ್ಕಳು ಒಂದು ಗುರುತರವಾದ ಪಾಪವನ್ನು ಮಾಡುವುದಾದರೆ, ಕ್ರೈಸ್ತ ಸಭೆಯ ಮಾದರಿಯನ್ನು ಅನುಸರಿಸುತ್ತಾ, ಹೆತ್ತವರು ಹೇಗೆ ಪ್ರತಿಕ್ರಿಯಿಸಬೇಕು?
21 ಆದರೆ ಆ ಎಳೆಯನ ಅಪರಾಧವು ಅತಿ ಗುರುತರವಾಗಿದ್ದರೆ ಆಗೇನು? ಆ ವಿದ್ಯಮಾನದಲ್ಲಿ ಆ ಮಗನಿಗೆ ವಿಶೇಷವಾದ ಸಹಾಯ ಮತ್ತು ಕೌಶಲದ ನಿರ್ದೇಶನ ಅಗತ್ಯ. ಸಭಾ ಸದಸ್ಯನೊಬ್ಬನು ಗುರುತರವಾದ ಪಾಪವನ್ನು ಮಾಡುವಾಗ, ಅವನು ಪಶ್ಚಾತ್ತಾಪಪಡುವಂತೆಯೂ ಸಹಾಯಕ್ಕಾಗಿ ಹಿರಿಯರನ್ನು ಸಮೀಪಿಸುವಂತೆಯೂ ಪ್ರೋತ್ಸಾಹಿಸಲ್ಪಡುತ್ತಾನೆ. (ಯಾಕೋಬ 5:14-16) ಒಮ್ಮೆ ಅವನು ಪಶ್ಚಾತ್ತಾಪಪಟ್ಟರೆ, ಅವನನ್ನು ಆತ್ಮಿಕ ರೀತಿಯಲ್ಲಿ ಪುನಃಸ್ಥಾಪಿಸಲಿಕ್ಕಾಗಿ ಹಿರಿಯರು ಅವನೊಂದಿಗೆ ಕೆಲಸಮಾಡುತ್ತಾರೆ. ತಪ್ಪುಮಾಡುವ ಹದಿಹರೆಯದವನಿಗೆ ಕುಟುಂಬದಲ್ಲಿ ಸಹಾಯ ಮಾಡುವ ಜವಾಬ್ದಾರಿ ಹೆತ್ತವರ ಮೇಲಿದೆ; ಆದರೂ ಅವರು ಆ ವಿಷಯವನ್ನು ಹಿರಿಯರೊಂದಿಗೆ ಚರ್ಚಿಸುವ ಅಗತ್ಯವಿರಬಹುದು. ತಮ್ಮ ಮಕ್ಕಳಲ್ಲಿ ಒಬ್ಬರು ಮಾಡಿರುವ ಯಾವುದೇ ಘೋರವಾದ ಪಾಪಗಳನ್ನು ಅವರು ನಿಶ್ಚಯವಾಗಿಯೂ ಹಿರಿಯರ ಮಂಡಲಿಯಿಂದ ಬಚ್ಚಿಡಲು ಪ್ರಯತ್ನಿಸಬಾರದು.
22. ತಮ್ಮ ಮಗನು ಒಂದು ಗುರುತರವಾದ ದೋಷವನ್ನು ಮಾಡುವಲ್ಲಿ, ಯೆಹೋವನ ಅನುಕರಣೆಯಲ್ಲಿ ಹೆತ್ತವರು ಯಾವ ಮನೋಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವರು?
22 ಒಬ್ಬನ ಸ್ವಂತ ಮಕ್ಕಳನ್ನು ಒಳಗೊಳ್ಳುವ ಗುರುತರವಾದ ಸಮಸ್ಯೆಯೊಂದು ತೀರ ಸಂಕಟಕರವಾಗಿದೆ. ಭಾವಾತ್ಮಕವಾಗಿ ಕ್ಷೋಭೆಗೊಂಡಿರುವ ಹೆತ್ತವರಿಗೆ ತಮ್ಮ ಹಟಮಾರಿಯಾದ ಸಂತಾನವನ್ನು ಕೋಪದಿಂದ ಬೆದರಿಸಬೇಕೆಂದು ಅನಿಸಬಹುದು; ಆದರೆ ಇದು ಅವನನ್ನು ಕೇವಲ ರೇಗಿಸೀತು. ಅವನು ಈ ವಿಷಮಾವಸ್ಥೆಯ ಸಮಯದಲ್ಲಿ ಹೇಗೆ ಉಪಚರಿಸಲ್ಪಡುತ್ತಾನೊ ಅದರ ಮೇಲೆ ಈ ಯುವ ವ್ಯಕ್ತಿಯ ಭವಿಷ್ಯತ್ತು ಹೊಂದಿಕೊಳ್ಳಬಹುದೆಂಬುದನ್ನು ಮನಸ್ಸಿನಲ್ಲಿಡಿರಿ. ಯೆಹೋವನು ತನ್ನ ಜನರು ಸರಿಯಾದುದರಿಂದ ದಾರಿತಪ್ಪಿದಾಗ—ಅವರು ಕೇವಲ ಪಶ್ಚಾತ್ತಾಪ ಪಡುವುದಾದರೆ—ಆತನು ಅವರನ್ನು ಕ್ಷಮಿಸಲು ಸಿದ್ಧನಿದ್ದನು ಎಂಬುದನ್ನೂ ಜ್ಞಾಪಕದಲ್ಲಿಡಿರಿ. ಆತನ ಪ್ರೀತಿಯ ಮಾತುಗಳಿಗೆ ಕಿವಿಗೊಡಿರಿ: “ಬನ್ನಿರಿ, ವಾದಿಸುವ ಎಂದು ಯೆಹೋವನು ಅನ್ನುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು; ಕಿರುಮಂಜಿಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.” (ಯೆಶಾಯ 1:18) ಹೆತ್ತವರಿಗೆ ಎಷ್ಟು ಉತ್ತಮವಾದ ಒಂದು ಮಾದರಿ!
23. ತಮ್ಮ ಮಕ್ಕಳಲ್ಲಿ ಒಬ್ಬನ ಗುರುತರವಾದ ಪಾಪದ ಎದುರಿನಲ್ಲಿ, ಹೆತ್ತವರು ಹೇಗೆ ವರ್ತಿಸಬೇಕು, ಮತ್ತು ಅವರು ಏನನ್ನು ವರ್ಜಿಸಬೇಕು?
23 ಆದಕಾರಣ, ಹಟಮಾರಿಯು ತನ್ನ ಮಾರ್ಗವನ್ನು ಬದಲಾಯಿಸುವಂತೆ ಅವನನ್ನು ಪ್ರೋತ್ಸಾಹಿಸಿರಿ. ಅನುಭವಿಗಳಾದ ಹೆತ್ತವರಿಂದಲೂ ಸಭಾ ಹಿರಿಯರಿಂದಲೂ ಸ್ವಸ್ಥವಾದ ಬುದ್ಧಿವಾದವನ್ನು ಹುಡುಕಿರಿ. (ಜ್ಞಾನೋಕ್ತಿ 11:14) ಹಠಾತ್ತಾದ ಪ್ರವೃತ್ತಿಯಿಂದ ವರ್ತಿಸಿ, ನಿಮ್ಮ ಮಗನು ನಿಮ್ಮಲ್ಲಿಗೆ ಹಿಂದೆ ಬರಲು ಕಷ್ಟಕರವಾಗುವಂತೆ ಮಾಡುವ ವಿಷಯಗಳನ್ನು ಹೇಳಬೇಡಿರಿ ಅಥವಾ ಮಾಡಬೇಡಿರಿ. ಅನಿಯಂತ್ರಿತ ಕೋಪ ಮತ್ತು ಕಾಠಿಣ್ಯವನ್ನು ವಿಸರ್ಜಿಸಿರಿ. (ಕೊಲೊಸ್ಸೆ 3:8) ಬೇಗನೇ ಬಿಟ್ಟುಕೊಡಬೇಡಿರಿ. (1 ಕೊರಿಂಥ 13:4, 7) ಕೆಟ್ಟತನವನ್ನು ದ್ವೇಷಿಸುವಾಗ, ನಿಮ್ಮ ಮಗನ ಕಡೆಗೆ ನಿರ್ದಯರೂ ವೈಮನಸ್ಯವುಳ್ಳವರೂ ಆಗುವುದನ್ನು ತಪ್ಪಿಸಿರಿ. ಹೆಚ್ಚು ಪ್ರಾಮುಖ್ಯವಾಗಿ, ಹೆತ್ತವರು ಉತ್ತಮವಾದೊಂದು ಮಾದರಿಯನ್ನಿಡಲು ಮತ್ತು ದೇವರಲ್ಲಿ ತಮ್ಮ ನಂಬಿಕೆಯನ್ನು ಬಲವಾಗಿಡಲು ಪ್ರಯತ್ನಿಸಬೇಕು.
ಪಟ್ಟುಹಿಡಿದ ಪ್ರತಿಭಟಕನನ್ನು ನಿರ್ವಹಿಸುವುದು
24. ಕೆಲವು ಬಾರಿ ಯಾವ ದುಃಖಕರ ಪರಿಸ್ಥಿತಿಯು ಕ್ರೈಸ್ತ ಕುಟುಂಬದಲ್ಲಿ ಏಳುತ್ತದೆ, ಮತ್ತು ಒಬ್ಬ ಹೆತ್ತವರು ಹೇಗೆ ಪ್ರತಿಕ್ರಿಯಿಸಬೇಕು?
24 ಕೆಲವು ವಿದ್ಯಮಾನಗಳಲ್ಲಿ, ಒಬ್ಬ ಎಳೆಯನು ಪ್ರತಿಭಟಿಸಲು ಖಂಡಿತವಾದ ನಿರ್ಣಯವನ್ನು ಮಾಡಿ ಕ್ರೈಸ್ತ ಮೌಲ್ಯಗಳನ್ನು ಪೂರ್ತಿಯಾಗಿ ತಳ್ಳಿಬಿಟ್ಟಿದ್ದಾನೆಂದು ಸ್ಪಷ್ಟವಾಗುತ್ತದೆ. ಆಗ ಉಳಿದವರ ಕುಟುಂಬ ಜೀವನವನ್ನು ಕಾಪಾಡುವ ಮತ್ತು ಪುನಃ ಕಟ್ಟುವ ವಿಷಯಕ್ಕೆ ಕೇಂದ್ರೀಕರಿಸುವುದನ್ನು ಬದಲಾಯಿಸಬೇಕು. ನಿಮ್ಮ ಶಕ್ತಿಯನ್ನೆಲ್ಲ ಪ್ರತಿಭಟಕನ ಕಡೆಗೆ ನಿರ್ದೇಶಿಸಿ, ಬೇರೆ ಮಕ್ಕಳನ್ನು ಅಲಕ್ಷಿಸದಂತೆ ಜಾಗರೂಕತೆ ವಹಿಸಿರಿ. ಕುಟುಂಬದ ಉಳಿದವರಿಂದ ಈ ತೊಡಕನ್ನು ಬಚ್ಚಿಡುವ ಬದಲಿಗೆ, ಈ ವಿಷಯವನ್ನು ಅವರೊಂದಿಗೆ ತಕ್ಕಮಟ್ಟಿಗೆ ಮತ್ತು ಪುನರಾಶ್ವಾಸನೀಯ ರೀತಿಯಲ್ಲಿ ಚರ್ಚಿಸಿರಿ.—ಹೋಲಿಸಿ ಜ್ಞಾನೋಕ್ತಿ 20:18.
25. (ಎ) ಒಬ್ಬ ಹುಡುಗನು ಪಟ್ಟುಹಿಡಿದ ಪ್ರತಿಭಟಕನಾಗುವುದಾದರೆ, ಕ್ರೈಸ್ತ ಸಭೆಯ ಮಾದರಿಯನ್ನು ಅನುಸರಿಸುತ್ತ ಹೆತ್ತವರು ಹೇಗೆ ಮುಂದುವರಿಯಬೇಕಾದೀತು? (ಬಿ) ತಮ್ಮ ಮಕ್ಕಳಲ್ಲಿ ಒಬ್ಬನು ಪ್ರತಿಭಟಿಸುವಲ್ಲಿ ಹೆತ್ತವರು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
25 ಸಭೆಯಲ್ಲಿ ಸುಧಾರಿಸಸಾಧ್ಯವಿಲ್ಲದ ರೀತಿಯಲ್ಲಿ ಪ್ರತಿಭಟಕನಾಗುವ ಒಬ್ಬನ ಕುರಿತು ಅಪೊಸ್ತಲ ಯೋಹಾನನು, “ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ, ಅವನಿಗೆ ಶುಭವಾಗಲಿ ಎಂದು ಹೇಳಬೇಡಿರಿ,” ಎಂದು ಹೇಳಿದನು. (2 ಯೋಹಾನ 10) ತಮ್ಮ ಸ್ವಂತ ಮಗನು ಶಾಸನಬದ್ಧ ವಯಸ್ಸಿನವನಾಗಿರುವಲ್ಲಿ ಮತ್ತು ಪೂರ್ತಿ ಪ್ರತಿಭಟಕನಾಗುವಲ್ಲಿ, ಹೆತ್ತವರು ಅವನ ಕಡೆಗೆ ಅದೇ ರೀತಿಯ ನಿಲುವನ್ನು ತೆಗೆದುಕೊಳ್ಳುವುದು ಅವಶ್ಯವೆಂದು ಎಣಿಸಾರು. ಇಂತಹ ಕ್ರಮವು ಕಷ್ಟಕರವೂ ವಿಯೋಗ ಯಾತನೆಯದ್ದೂ ಆಗಿರಬಹುದಾದರೂ, ಕುಟುಂಬದಲ್ಲಿ ಉಳಿದಿರುವವರನ್ನು ಕಾಪಾಡಲು ಇದು ಕೆಲವು ಬಾರಿ ಅತ್ಯಾವಶ್ಯಕವಾಗಿದೆ. ನಿಮ್ಮ ಮನೆವಾರ್ತೆಗೆ ನಿಮ್ಮ ಸಂರಕ್ಷಣೆ ಮತ್ತು ಮುಂದುವರಿಯುವ ಮೇಲ್ವಿಚಾರಣೆ ಅಗತ್ಯ. ಆದಕಾರಣ, ನಡತೆಯ ಸಂಬಂಧದಲ್ಲಿ, ಸ್ಪಷ್ಟವಾಗಿ ನಿರೂಪಿಸಲ್ಪಟ್ಟ, ಆದರೂ ನ್ಯಾಯಸಮ್ಮತವಾದ ಮೇರೆಗಳನ್ನು ಇಟ್ಟುಕೊಳ್ಳುತ್ತ ಹೋಗಿರಿ. ಬೇರೆ ಮಕ್ಕಳೊಂದಿಗೆ ಸಂವಾದ ಮಾಡಿರಿ. ಅವರು ಶಾಲೆಯಲ್ಲಿ ಮತ್ತು ಸಭೆಯಲ್ಲಿ ಹೇಗೆ ಪ್ರಗತಿಹೊಂದುತ್ತಿದ್ದಾರೆಂಬುದರಲ್ಲಿ ಆಸಕ್ತರಾಗಿರಿ. ಅಲ್ಲದೆ, ಆ ಪ್ರತಿಭಟಕ ಮಗನ ವರ್ತನೆಗಳನ್ನು ನೀವು ಒಪ್ಪುವುದಿಲ್ಲವಾದರೂ ನೀವು ಅವನನ್ನು ದ್ವೇಷಿಸುವುದಿಲ್ಲವೆಂದು ಅವರಿಗೆ ತಿಳಿದಿರಲಿ. ಮಗನ ಬದಲಾಗಿ, ಕೆಟ್ಟ ಕ್ರಿಯೆಯನ್ನು ಖಂಡಿಸಿರಿ. ಯಾಕೋಬನ ಇಬ್ಬರು ಪುತ್ರರು ತಮ್ಮ ಕ್ರೂರ ಕೃತ್ಯದ ಕಾರಣ ಕುಟುಂಬಕ್ಕೆ ಸಮಾಜ ಬಹಿಷ್ಕಾರವನ್ನು ತಂದಾಗ, ಯಾಕೋಬನು ಪುತ್ರರನ್ನು ಶಪಿಸದೆ, ಅವರ ಹಿಂಸಾತ್ಮಕ ಕೋಪವನ್ನು ಶಪಿಸಿದನು.—ಆದಿಕಾಂಡ 34:1-31; 49:5-7.
26. ತಮ್ಮ ಮಕ್ಕಳಲ್ಲಿ ಒಬ್ಬನು ಪ್ರತಿಭಟಿಸುವಲ್ಲಿ, ಶುದ್ಧಾಂತಃಕರಣದ ಹೆತ್ತವರು ಯಾವುದರಿಂದ ಸಾಂತ್ವನವನ್ನು ಪಡೆದುಕೊಳ್ಳಬಲ್ಲರು?
26 ನಿಮ್ಮ ಕುಟುಂಬದಲ್ಲಿ ಏನು ಸಂಭವಿಸಿದೆಯೊ ಅದಕ್ಕೆ ನೀವೇ ಹೊಣೆಗಾರರೆಂದು ನೀವು ಅಭಿಪ್ರಯಿಸಬಹುದು. ಆದರೆ ನೀವು ಪ್ರಾರ್ಥನಾಪೂರ್ವಕವಾಗಿ, ನಿಮ್ಮ ಸಾಮರ್ಥ್ಯದ ಪ್ರಕಾರ ಯೆಹೋವನ ಸಲಹೆಯನ್ನು ಅನುಸರಿಸುತ್ತ ನಿಮಗೆ ಸಾಧ್ಯವಿದ್ದುದನ್ನೆಲ್ಲ ಮಾಡಿದ್ದರೆ, ಅನ್ಯಾಯವಾಗಿ ನಿಮ್ಮನ್ನು ಟೀಕಿಸಿಕೊಳ್ಳುವ ಅವಶ್ಯವಿರುವುದಿಲ್ಲ. ಯಾವನೂ ಒಬ್ಬ ಪರಿಪೂರ್ಣ ಹೆತ್ತವರಾಗಸಾಧ್ಯವಿಲ್ಲವೆಂಬ, ಆದರೆ ನೀವು ಒಬ್ಬ ಒಳ್ಳೆಯ ಹೆತ್ತವರಾಗಲು ಶುದ್ಧಾಂತಃಕರಣದಿಂದ ಪ್ರಯತ್ನಿಸಿದ್ದೀರೆಂಬ ನಿಜತ್ವದಿಂದ ಸಾಂತ್ವನವನ್ನು ತೆಗೆದುಕೊಳ್ಳಿರಿ. (ಹೋಲಿಸಿ ಅ. ಕೃತ್ಯಗಳು 20:26.) ಕುಟುಂಬದಲ್ಲಿ ಒಬ್ಬ ಪಕ್ಕಾ ಪ್ರತಿಭಟಕನಿರುವುದು ಮನೋವೇದಕವಾದ ಸಂಗತಿ, ಆದರೆ ಇದು ನಿಮಗೆ ಸಂಭವಿಸುವುದಾದರೆ, ದೇವರು ಗ್ರಹಿಕೆಯುಳ್ಳವನೆಂದೂ ಆತನು ತನ್ನ ದೃಢನಿಷ್ಠೆಯುಳ್ಳ ಸೇವಕರನ್ನು ಎಂದಿಗೂ ತ್ಯಜಿಸನೆಂದೂ ಭರವಸೆಯಿಂದಿರ್ರಿ. (ಕೀರ್ತನೆ 27:10) ಆದುದರಿಂದ ನಿಮ್ಮ ಮನೆಯು ಬಾಕಿ ಉಳಿದಿರುವ ಮಕ್ಕಳಿಗೆ ಒಂದು ಸುಭದ್ರವಾದ, ಆತ್ಮಿಕ ಆಶ್ರಯ ಸ್ಥಾನವಾಗುವಂತೆ ಮಾಡಲು ದೃಢನಿಶ್ಚಯ ಮಾಡಿಕೊಳ್ಳಿರಿ.
27. ದುಂದುಗಾರ ಮಗನ ದೃಷ್ಟಾಂತವನ್ನು ನೆನಪಿಸಿಕೊಳ್ಳುತ್ತ, ಒಬ್ಬ ಪ್ರತಿಭಟಕ ಪುತ್ರನ ಹೆತ್ತವರು ಯಾವುದನ್ನು ಸದಾ ನಿರೀಕ್ಷಿಸಬಲ್ಲರು?
27 ಅದಲ್ಲದೆ, ನೀವು ಎಂದಿಗೂ ನಿರೀಕ್ಷೆಯನ್ನು ತ್ಯಜಿಸಬಾರದು. ನಿಮ್ಮ ಯೋಗ್ಯ ತರಬೇತಿನ ಆರಂಭದ ಪ್ರಯತ್ನಗಳು ಹೇಗೊ ಕ್ರಮೇಣ ಆ ದಾರಿ ತಪ್ಪುತ್ತಿರುವ ಮಗನ ಹೃದಯವನ್ನು ಪ್ರಭಾವಿಸಿ ಅವನನ್ನು ಸ್ವಸ್ಥ ಮನಸ್ಸಿಗೆ ತಂದಾವು. (ಪ್ರಸಂಗಿ 11:6) ಅನೇಕ ಕ್ರೈಸ್ತ ಕುಟುಂಬಗಳಿಗೆ ನಿಮ್ಮ ಹಾಗಿನ ಅದೇ ಅನುಭವವಾಗಿದೆ, ಮತ್ತು ತಮ್ಮ ಹಟಮಾರಿಗಳಾದ ಮಕ್ಕಳು, ಅಧಿಕಾಂಶ ಯೇಸುವಿನ ದುಂದುಗಾರ ಮಗನ ದೃಷ್ಟಾಂತದಲ್ಲಿನ ತಂದೆಯು ಕಂಡಂತೆ, ಹಿಂದಿರುಗುವುದನ್ನು ಕೆಲವರು ಕಂಡಿದ್ದಾರೆ. (ಲೂಕ 15:11-32) ಅದೇ ಸಂಗತಿ ನಿಮಗೆ ಸಂಭವಿಸಬಹುದು.