ಏಳನೆಯ ದಿನದಲ್ಲಿ ಇನ್ನಷ್ಟು ಬೋಧನೆ
ಅಧ್ಯಾಯ 68
ಏಳನೆಯ ದಿನದಲ್ಲಿ ಇನ್ನಷ್ಟು ಬೋಧನೆ
ಪರ್ಣಶಾಲೆಗಳ ಜಾತ್ರೆಯ ಕೊನೆಯ ದಿನವಾದ ಏಳನೆಯ ದಿನವು ಇನ್ನೂ ನಡೆಯುತ್ತಾ ಇತ್ತು. ಯೇಸುವು “ಕಾಣಿಕೆಯ ಪೆಟ್ಟಿಗೆಗಳಿರುವ ಅಂಗಳ” ವೆಂದು ಕರೆಯಲ್ಪಡುವ ದೇವಾಲಯದ ವಿಭಾಗದಲ್ಲಿ ಕಲಿಸುತ್ತಾ ಇದ್ದನು. ಇದು ಪ್ರಾಯಶಃ ಸ್ತ್ರೀಯರ ಪ್ರಾಂಗಾಣವೆಂದು ಕರೆಯಲ್ಪಡುವ ಸ್ಥಳದಲ್ಲಿದ್ದು, ಜನರು ಕಾಣಿಕೆಗಳನ್ನು ಹಾಕಲು ಕೆಲವು ಪೆಟ್ಟಿಗೆಗಳು ಇಲ್ಲಿದ್ದವು.
ಜಾತ್ರೆಯ ಪ್ರತಿ ದಿನ ರಾತ್ರಿ, ದೇವಾಲಯದ ಈ ಪ್ರದೇಶವನ್ನು ವಿಶೇಷವಾದ ಬೆಳಕಿನಿಂದ ಪ್ರದರ್ಶಿಸಲಾಗುತ್ತಿತ್ತು. ಅಲ್ಲಿ ಬೃಹತ್ಗಾತ್ರದ ನಾಲ್ಕು ದೀಪಸ್ತಂಭಗಳು ಇದ್ದವು, ಪ್ರತಿಯೊಂದರಲ್ಲಿ ಎಣ್ಣೆತುಂಬಿದ ನಾಲ್ಕು ದೊಡ್ಡ ಪಾತ್ರೆಗಳಿದ್ದವು. ಎಣ್ಣೆಯಿಂದ ತುಂಬಿಸಲಾಗುತ್ತಿತ್ತು. 16 ಪಾತ್ರೆಗಳಲ್ಲಿ ಉರಿಯುವ ಈ ದೀಪಗಳು, ರಾತ್ರಿ ಕಾಲದಲ್ಲಿ ಬಹುದೂರದ ತನಕ ಸುತ್ತಲೂ ಪ್ರಕಾಶ ಬೀರಲು ಶಕವ್ತಾಗಿದ್ದವು. ಯೇಸುವು ಈಗ ಏನು ಹೇಳುತ್ತಾನೋ, ಅದು ಅವನನ್ನು ಆಲಿಸುವವರಿಗೆ ಈ ಪ್ರದರ್ಶನದ ನೆನಪನ್ನು ತರುತ್ತದೆ. “ನಾನೇ ಲೋಕಕ್ಕೆ ಬೆಳಕು,” ಯೇಸುವು ಘೋಷಿಸುವದು. “ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು.”
ಫರಿಸಾಯರು ಪ್ರತಿರೋಧಿಸುತ್ತಾರೆ: “ನಿನ್ನ ವಿಷಯವಾಗಿ ನೀನೇ ಸಾಕ್ಷಿಹೇಳಿಕೊಳ್ಳುತ್ತೀ; ನಿನ್ನ ಸಾಕ್ಷಿ ನಿಜವಾಗಿರದು.”
ಅದಕ್ಕುತ್ತರವಾಗಿ ಯೇಸುವು ಹೇಳುವದು: “ನಾನು ಎಲ್ಲಿಂದ ಬಂದವನಾಗಿಯೂ ಎಲ್ಲಿಗೆ ಹೋಗುವವನಾಗಿಯೂ ಇದ್ದೇನೆಂಬದು ನನಗೆ ಗೊತ್ತಿರುವದರಿಂದ ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೂ ನಿಜವಾಗಿರುವದು.” ಅವನು ಕೂಡಿಸುವದು: “ನನ್ನನ್ನು ಕುರಿತು ನಾನು ಸಾಕ್ಷಿ ಹೇಳುವವನಾಗಿದ್ದೇನೆ, ಅದಲ್ಲದೆ ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿ ಹೇಳುತ್ತಾನೆ.”
“ನಿನ್ನ ತಂದೆ ಎಲ್ಲಿದ್ದಾನೆ?” ಫರಿಸಾಯರು ತಿಳಿಯಲು ಬಯಸಿದರು.
“ನೀವು ನನ್ನನ್ನೂ ತಿಳಿದಿಲ್ಲ, ನನ್ನ ತಂದೆಯನ್ನೂ ತಿಳಿದಿಲ್ಲ,” ಎಂದುತ್ತರಿಸುತ್ತಾನೆ ಯೇಸು. “ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ತಿಳಿದಿರುವಿರಿ.” ಫರಿಸಾಯರು ಯೇಸುವನ್ನು ಹಿಡಿಯಲು ಇನ್ನೂ ಪ್ರಯತ್ನಿಸುತ್ತಿದ್ದರೂ, ಯಾರೂ ಅವನ ಮೇಲೆ ಕೈ ಹಾಕಲಿಲ್ಲ.
“ನಾನು ಹೋಗುತ್ತೇನೆ,” ಎಂದು ಯೇಸು ಪುನಃ ಹೇಳಿದನು. “ನಾನು ಹೋಗುವಲಿಗ್ಲೆ ನೀವು ಬರಲಾರಿರಿ.”
ಆಗ ಯೆಹೂದ್ಯರು ಆಶ್ಚರ್ಯಪಡಲು ಆರಂಭಿಸಿದರು: “ನಾನು ಹೋಗುವಲಿಗ್ಲೆ ನೀವು ಬರಲಾರಿರೆಂದು ಹೇಳುತ್ತಾನಲ್ಲಾ? ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿದ್ದಾನೋ?”
“ನೀವು ಕೆಳಗಿನವರು,” ಯೇಸು ವಿವರಿಸುತ್ತಾನೆ. “ನಾನು ಮೇಲಿನವನು. ನೀವು ಈ ಲೋಕದವರು, ನಾನು ಈ ಲೋಕದವನಲ್ಲ.” ನಂತರ ಅವನು ಕೂಡಿಸಿದ್ದು: “ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ.”
ವಾಸ್ತವದಲ್ಲಿ, ಯೇಸುವು ಅವನ ಮಾನವ-ಪೂರ್ವದ ಅಸ್ತಿತ್ವ ಮತ್ತು ಅವನು ವಾಗ್ದಾನಿತ ಮೆಸ್ಸೀಯ ಇಲ್ಲವೇ ಕ್ರಿಸ್ತನಾಗಿದ್ದಾನೆ ಎಂಬುದಕ್ಕೆ ಸೂಚಿಸುತ್ತಿದ್ದನು. ಆದಾಗ್ಯೂ, ಅವರು ನಿಸ್ಸಂದೇಹವಾಗಿ ಜರೆಯುವ ರೀತಿಯಲ್ಲಿ, ಕೇಳುವದು: “ನೀನು ಯಾರು?”
ಅವರ ತಿರಸ್ಕಾರದೆದುರಲ್ಲಿ ಯೇಸು ಉತ್ತರಿಸುವದು: “ನಾನು ನಿಮ್ಮೊಡನೆ ಮಾತಾಡುವದಾದರೂ ಏತಕ್ಕೆ?” ಆದರೂ ಅವನು ಹೇಳುವದನ್ನು ಮುಂದುವರಿಸಿದ್ದು: “ಆದರೆ ನನ್ನನ್ನು ಕಳುಹಿಸಿಕೊಟ್ಟಾತನು ಸತ್ಯವಂತನು; ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ.” ಯೇಸು ಮುಂದುವರಿಸಿದ್ದು: “ನೀವು ಮನುಷ್ಯ ಕುಮಾರನು ಎತ್ತರದಲ್ಲಿಟ್ಟಾಗ ಇವನೇ ಆತನೆಂದೂ, ತನ್ನಷ್ಟಕ್ಕೆ ತಾನೇ ಏನೂ ಮಾಡದೆ ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದನೆಂದೂ ನನ್ನ ವಿಷಯವಾಗಿ ನಿಮಗೆ ತಿಳಿಯುವದು. ನನ್ನನ್ನು ಕಳುಹಿಸಿ ಕೊಟ್ಟಾತನು ನನ್ನ ಸಂಗಡ ಇದ್ದಾನೆ, ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವದರಿಂದ ಆತನು ನನ್ನನ್ನು ಒಂಟಿಗನಾಗಿ ಬಿಡಲಿಲ್ಲ.”
ಯೇಸುವು ಈ ಮಾತುಗಳನ್ನಾಡುವಾಗ ಅನೇಕರು ಆತನಲ್ಲಿ ನಂಬಿಕೆಯಿಟ್ಟರು. ಆಗ ಅವರಿಗೆ ಅವನಂದದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು.”
“ನಾವು ಅಬ್ರಹಾಮನ ಸಂತಾನದವರು,” ವಿರೋಧಿಗಳು ಮಧ್ಯೆ ರಾಗವೆಳೆದರು, “ನಾವು ಯಾರಿಗೂ ಎಂದೂ ದಾಸರಾಗಿಲ್ಲ; ನಿಮಗೆ ಬಿಡುಗಡೆಯಾಗುವದು ಎಂದು ನೀನು ಹೇಳುವದು ಹೇಗೆ?”
ಯೆಹೂದ್ಯರು ಅನೇಕ ಬಾರಿ ಪರದೇಶದವರ ಅಧಿಕಾರಕ್ಕೆ ಒಳಪಟ್ಟಿದ್ದರೂ ಕೂಡಾ, ಅವರು ಯಾವನೇ ದಬ್ಬಾಳಿಕೆಗಾರನನ್ನು ತಮ್ಮ ಒಡೆಯನು ಎಂದು ಅಂಗೀಕರಿಸತ್ತಿರಲಿಲ್ಲ. ದಾಸರು ಎಂದು ಕರೆಯಲ್ಪಡುವದನ್ನು ಅವರು ನಿರಾಕರಿಸಿದ್ದರು. ಆದರೆ ಯೇಸುವು ಅವರು ಖಂಡಿತವಾಗಿಯೂ ದಾಸರು ಎಂದು ತೋರಿಸುತ್ತಾನೆ. ಯಾವ ವಿಧದಲ್ಲಿ? “ನಿಮಗೆ ನಿಜನಿಜವಾಗಿ ಹೇಳುತ್ತೇನೆ,” ಯೇಸುವು ಹೇಳುವದು, “ಪಾಪ ಮಾಡುವವರೆಲ್ಲರೂ ಪಾಪಕ್ಕೆ ದಾಸರು.”
ಪಾಪಕ್ಕೆ ಅವರು ದಾಸರಾಗಿದ್ದಾರೆಂದು ಒಪ್ಪಲು ಅವರು ನಿರಾಕರಿಸುವದು ಅವರನ್ನು ಬಹಳ ಅಪಾಯಕರ ಸ್ಥಾನದಲ್ಲಿ ಇಡುತ್ತದೆ. “ದಾಸನು ಮನೆಯಲ್ಲಿ ಶಾಶ್ವತವಾಗಿ ಇರುವದಿಲ್ಲ,” ಯೇಸುವು ವಿವರಿಸುತ್ತಾನೆ. “ಮಗನು ಶಾಶ್ವತವಾಗಿ ಇರುವನು.” ದಾಸನಿಗೆ ಬಾಧ್ಯತೆಯ ಹಕ್ಕುಗಳು ಇಲ್ಲದಿರುವದರಿಂದ, ಯಾವುದೇ ಸಮಯದಲ್ಲಿ ಅವನನ್ನು ಮನೆಯಿಂದ ವಜಾಮಾಡುವ ಅಪಾಯ ಅಲ್ಲಿರಬಹುದು. ವಾಸ್ತವವಾಗಿ ಹುಟ್ಟಿದ ಯಾ ದತ್ತ ತೆಗೆದು ಕೊಂಡ ಮಗನು ಮಾತ್ರ ಮನೆಯಲ್ಲಿ “ಶಾಶ್ವತ”ವಾಗಿ, ಅಂದರೆ ಅವನು ಜೀವಿಸಿರುವ ತನಕ, ಇರುವನು.
“ಆದದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ,” ಯೇಸುವು ಮುಂದರಿಸಿದ್ದು, “ನಿಜವಾಗಿ ನಿಮಗೆ ಬಿಡುಗಡೆಯಾಗುವದು.” ಈ ರೀತಿಯಲ್ಲಿ, ಮಗನಾದ ಯೇಸು ಕ್ರಿಸ್ತನ ಕುರಿತಾದ ಸತ್ಯವು ತಾನೇ ಜನರನ್ನು ಬಿಡುಗಡೆ ಮಾಡುವ ಸತ್ಯವಾಗಿರುತ್ತದೆ. ಅವನ ಪರಿಪೂರ್ಣ ಮಾನವ ಜೀವದ ಯಜ್ಞಾರ್ಪಣೆಯ ಮೂಲಕ ಮಾತ್ರವೇ ಮರಣಕರ ಪಾಪದಿಂದ ಯಾವನೇ ಬಿಡುಗಡೆ ಹೊಂದಸಾಧ್ಯವಿದೆ. ಯೋಹಾನ 8:12-36.
▪ ಏಳನೆಯ ದಿನದಲ್ಲಿ ಯೇಸುವು ಎಲ್ಲಿ ಬೋಧಿಸಿದನು? ರಾತ್ರಿ ಸಮಯದಲ್ಲಿ ಅಲ್ಲಿ ಏನು ನಡೆಯುತ್ತದೆ, ಮತ್ತು ಯೇಸುವಿನ ಕಲಿಸುವಿಕೆಗೆ ಇದು ಹೇಗೆ ಸಂಬಂಧಿಸಿರುತ್ತದೆ?
▪ ಅವನ ಮೂಲದ ಕುರಿತು ಯೇಸುವು ಏನು ಹೇಳಿದನು, ಮತ್ತು ಇದು ಅವನ ಗುರುತಿಸುವಿಕೆಯ ಕುರಿತು ಏನನ್ನು ಪ್ರಕಟಿಸುತ್ತದೆ?
▪ ಯಾವ ರೀತಿಯಲ್ಲಿ ಯೆಹೂದ್ಯರು ದಾಸರಾಗಿದ್ದರು, ಆದರೆ ಯಾವ ಸತ್ಯವು ಅವರನ್ನು ಬಿಡುಗಡೆ ಮಾಡಲಿರುವದು?