ಒಂದು ನಿರ್ಣಾಯಾತ್ಮಕ ದಿನದ ಆರಂಭ
ಅಧ್ಯಾಯ 105
ಒಂದು ನಿರ್ಣಾಯಾತ್ಮಕ ದಿನದ ಆರಂಭ
ಯೇಸುವು ಸೋಮವಾರ ಸಾಯಂಕಾಲ ಯೆರೂಸಲೇಮನ್ನು ಬಿಟ್ಟು ಎಣ್ಣೇಮರಗಳ ಪೂರ್ವ ಇಳಿಜಾರಿನಲ್ಲಿರುವ ಬೇಥಾನ್ಯಕ್ಕೆ ಹಿಂತೆರಳುತ್ತಾನೆ. ಯೆರೂಸಲೇಮಿನ ಅವನ ಎರಡು ದಿನಗಳ ಶುಶ್ರೂಷೆಯು ಮುಗಿಯುತ್ತದೆ. ಅವನ ಗೆಳೆಯನಾದ ಲಾಜರನೊಂದಿಗೆ ಯೇಸುವು ಆ ರಾತ್ರಿಯನ್ನು ಪುನಃ ಕಳೆದನು ಎಂಬುದರಲ್ಲಿ ಸಂದೇಹವಿಲ್ಲ. ಶುಕ್ರವಾರ ಯೆರಿಕೋವಿನಿಂದ ಬಂದಂದಿನಿಂದ ಅವನು ಬೇಥಾನ್ಯದಲ್ಲಿ ಕಳೆಯುವದು ಇದು ನಾಲ್ಕನೆಯ ರಾತ್ರಿ.
ಈಗ, ನೈಸಾನ್ 11ರ ಮಂಗಳವಾರ ಬಹಳ ಬೆಳಿಗ್ಗೆಯೇ, ಅವನೂ ಶಿಷ್ಯರೂ ಪುನಃ ಮಾರ್ಗದಲ್ಲಿದ್ದಾರೆ. ಯೇಸುವಿನ ಶುಶ್ರೂಷೆಯಲ್ಲಿ ಇದೊಂದು ನಿರ್ಣಾಯಾತ್ಮಕ ದಿನವಾಗಲಿಕ್ಕಿತ್ತು, ಇಷ್ಟರ ತನಕದ ಅತಿ ಹೆಚ್ಚು ಕಾರ್ಯಮಗ್ನ ದಿನವದಾಗಿತ್ತು. ಅವನು ದೇವಾಲಯದಲ್ಲಿ ಹಾಜರಾಗುವ ಕಡೆಯ ದಿನವಾಗಿತ್ತು. ಮತ್ತು ಅವನ ವಿಚಾರಣೆ ಮತ್ತು ವಧೆಯ ಮೊದಲು ಅವನ ಬಹಿರಂಗ ಶುಶ್ರೂಷೆಯ ಕಡೆಯ ದಿನವದಾಗಿತ್ತು.
ಯೇಸುವೂ, ಅವನ ಶಿಷ್ಯರೂ ಯೆರೂಸಲೇಮಿಗೆ ನಡಿಸುವ ಎಣ್ಣೇಮರಗಳ ಮಾರ್ಗವಾಗಿ ಹೋಗುತ್ತಿದ್ದರು. ಬೇಥಾನ್ಯದಿಂದ ದಾರಿಯಲ್ಲಿ ಪೇತ್ರನು ಮುಂಚಿನ ದಿನ ಬೆಳಿಗ್ಗೆ ಯೇಸುವು ಶಪಿಸಿದ ಮರವನ್ನು ನೋಡುತ್ತಾನೆ. “ಗುರುವೇ, ಇಗೋ!” ಅವನು ಉದ್ಗರಿಸುವದು, “ನೀನು ಶಾಪಕೊಟ್ಟ ಅಂಜೂರದ ಮರವು ಒಣಗಿಹೋಗಿದೆ.”
ಆದರೆ ಯೇಸುವು ಮರವನ್ನು ಕೊಂದದ್ದು ಏಕೆ? ಯಾಕೆಂದು ಅವನು ಸೂಚಿಸುತ್ತಾ ಅನ್ನುವುದು: “ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯ ಪಡದೆ ನಂಬಿದರೆ ನಾನು ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ. ಇದು ಮಾತ್ರವಲ್ಲದೆ ಈ ಬೆಟ್ಟಕ್ಕೆ [ಅವರು ನಿಂತಿರುವ ಎಣ್ಣೇಮರಗಳ ಗುಡ್ಡಕ್ಕೆ] —ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು ಹೇಳಿದರೆ ಅದೂ ಆಗುವದು. ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ.”
ಮರವು ಒಣಗಿಹೋಗುವಂತೆ ಮಾಡುವದರ ಮೂಲಕ, ದೇವರಲ್ಲಿ ಅವರಿಗೆ ನಂಬಿಕೆ ಇರಬೇಕಾದ ಆವಶ್ಯಕತೆಯ ಪ್ರತ್ಯಕ್ಷ ನಿದರ್ಶನವೊಂದನ್ನು ಯೇಸುವು ತನ್ನ ಶಿಷ್ಯರಿಗೆ ಒದಗಿಸುತ್ತಾನೆ. ಅವನು ಹೇಳಿದಂತೆ ಹೀಗಿದೆ: “ಆದಕಾರಣ ನೀವು ಪ್ರಾರ್ಥನೆ ಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದು.” ವಿಶೇಷವಾಗಿ ಬಲುಬೇಗನೆ ಬರಲಿರುವ ಭಯಂಕರ ಪರೀಕ್ಷೆಗಳ ಎದುರಿನಲ್ಲಿ, ಎಂಥಾ ಪ್ರಾಮುಖ್ಯವಾದ ಪಾಠವನ್ನು ಅವರು ಕಲಿಯಲಿಕ್ಕಿತ್ತು! ಆದರೂ, ಅಂಜೂರದ ಮರದ ಒಣಗಿಹೋಗುವಿಕೆ ಮತ್ತು ನಂಬಿಕೆಯ ಗುಣಮಟ್ಟದ ನಡುವೆ ಇನ್ನೊಂದು ಸಂಬಂಧವಿತ್ತು.
ಈ ಅಂಜೂರ ಮರದಂತೆ, ಇಸ್ರಾಯೇಲ್ ಜನಾಂಗಕ್ಕೆ ಒಂದು ಮೋಸಕರ ಹೊರ ತೋರಿಕೆ ಇತ್ತು. ದೇವರೊಂದಿಗೆ ಜನಾಂಗವು ಒಂದು ಒಡಂಬಡಿಕೆಯ ಸಂಬಂಧದಲ್ಲಿ ಇದ್ದಿತ್ತಾದರೂ ಮತ್ತು ಹೊರಗಿನಿಂದ ಅವನ ನಿಯಮಗಳನ್ನು ಪಾಲಿಸುತ್ತದೆಂದು ತೋರುತ್ತಿದ್ದರೂ, ಅದರಲ್ಲಿ ನಂಬಿಕೆ ಇದ್ದಿರಲಿಲ್ಲ, ಒಳ್ಳೆಯ ಫಲವಿಲ್ಲದ್ದಾಗಿತ್ತು ಎಂದು ರುಜುವಾಯಿತು. ನಂಬಿಕೆಯ ಕೊರತೆಯ ಕಾರಣ, ದೇವರ ಸ್ವಂತ ಮಗನನ್ನೂ ಕೂಡ ಅದು ನಿರಾಕರಿಸುವ ಹಂತದಲ್ಲಿತ್ತು! ಆದಕಾರಣ, ಫಲಕೊಡದ ಅಂಜೂರದ ಮರವು ಒಣಗಿ ಹೋಗುವಂತೆ ಮಾಡುವದರ ಮೂಲಕ, ಈ ಫಲವಿಲ್ಲದ, ನಂಬಿಕೆಯಿಲ್ಲದ ಮರದ ಅಂತ್ಯ ಫಲಿತಾಂಶವೇನು ಎಂದು ಯೇಸುವು ನಿಖರವಾಗಿ ಪ್ರದರ್ಶಿಸಿ ತೋರಿಸಿದನು.
ಕೊಂಚ ಸಮಯದ ನಂತರ, ಯೇಸುವೂ ಅವನ ಶಿಷ್ಯರೂ ಯೆರೂಸಲೇಮನ್ನು ಪ್ರವೇಶಿಸುತ್ತಾರೆ ಮತ್ತು ವಾಡಿಕೆಯ ಪ್ರಕಾರ, ಅವರು ದೇವಾಲಯಕ್ಕೆ ಹೋದಾಗ, ಅಲ್ಲಿ ಯೇಸುವು ಉಪದೇಶಿಸಲಾರಂಭಿಸುತ್ತಾನೆ. ಮಹಾಯಾಜಕರೂ, ಪ್ರಜೆಯ ಹಿರೀ ಪುರುಷರೂ, ಹಿಂದಿನ ದಿನ ಯೇಸುವು ಚಿನಿವಾರರ ವಿರುದ್ಧ ಕೈಗೊಂಡ ಕೃತ್ಯವನ್ನು ನಿಸ್ಸಂದೇಹವಾಗಿ ತಮ್ಮ ಮನಸ್ಸಿನಲ್ಲಿಟ್ಟುಕೊಂಡಿದ್ದು, ಅವನನ್ನು ವಿವಾದಕ್ಕೆಳೆಯುವದು: “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರ ನಿನಗೆ ಯಾರು ಕೊಟ್ಟರು?”
ಅದಕ್ಕುತ್ತರವಾಗಿ ಯೇಸುವು ಹೇಳುವದು: “ನಾನು ಸಹ ನಿಮ್ಮನ್ನು ಒಂದು ಮಾತು ಕೇಳುತ್ತೇನೆ; ಅದನ್ನು ನೀವು ನನಗೆ ಹೇಳಿದರೆ ನಾನೂ ಯಾವ ಅಧಿಕಾರದಿಂದ ಇವನ್ನು ಮಾಡುತ್ತೇನೆಂಬದನ್ನು ನಿಮಗೆ ಹೇಳುತ್ತೇನೆ. ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂತು? ಪರಲೋಕದಿಂದಲೋ? ಮನುಷ್ಯರಿಂದಲೋ?”
ಯಾಜಕರೂ, ಪ್ರಜೆಯ ಹಿರೀ ಪುರುಷರೂ ಇದಕ್ಕೆ ಉತ್ತರ ಹೇಗೆ ನೀಡುವದು ಎಂದು ತಮ್ಮತಮ್ಮೊಳಗೆ ಮಾತಾಡಿಕೊಳ್ಳಲು ಆರಂಭಿಸಿದರು. “ಪರಲೋಕದಿಂದ ಬಂತೆಂದು ನಾವು ಹೇಳಿದರೆ ಹಾಗಾದರೆ ನೀವು ಯಾಕೆ ನಂಬಲಿಲ್ಲ ಎಂದು ನಮಗೆ ಹೇಳಾನು; ಮನುಷ್ಯರಿಂದ ಬಂತೆಂದು ಹೇಳಿದರೆ ನಮಗೆ ಜನರ ಭಯವದೆ; ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸಿದ್ದಾರಲ್ಲಾ.”
ಏನು ಉತ್ತರಿಸುವದು ಎಂದು ಮುಖಂಡರಿಗೆ ತಿಳಿಯಲಿಲ್ಲ. ಆದುದರಿಂದ ಅವರು ಯೇಸುವಿಗೆ ಹೇಳುವದು: “ನಾವರಿಯೆವು.”
ಯೇಸುವು, ಪ್ರತಿಯಾಗಿ ಉತ್ತರಿಸುವದು: “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವದಿಲ್ಲ.” ಮತ್ತಾಯ 21:19-27; ಮಾರ್ಕ 11:19-33; ಲೂಕ 20:1-8.
▪ ನೈಸಾನ್ 11, ಮಂಗಳವಾರದ ವೈಶಿಷ್ಟತೆಯೇನು?
▪ ಅಂಜೂರದ ಮರವನ್ನು ಒಣಗಿಹೋಗುವಂತೆ ಮಾಡುವದರ ಮೂಲಕ ಯೇಸುವು ಯಾವ ಪಾಠಗಳನ್ನು ಒದಗಿಸಿದನು?
▪ ಯೇಸುವು ಅವೆಲ್ಲಾ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಾನೆ ಎಂದು ಕೇಳಿದವರಿಗೆ ಅವನು ಹೇಗೆ ಉತ್ತರಿಸುತ್ತಾನೆ?