ಯೇಸುವಿನ ಮೊದಲ ಅದ್ಭುತ
ಅಧ್ಯಾಯ 15
ಯೇಸುವಿನ ಮೊದಲ ಅದ್ಭುತ
ಅಂದ್ರೆಯ, ಪೇತ್ರ, ಯೋಹಾನ, ಫಿಲಿಪ್ಪ, ನತಾನಯೇಲ ಮತ್ತು ಪ್ರಾಯಶಃ ಯಾಕೋಬರು ಯೇಸುವಿನ ಮೊದಲ ಶಿಷ್ಯರಾಗಿ ಕೇವಲ ಒಂದೋ ಯಾ ಎರಡೋ ದಿವಸಗಳು ಮಾತ್ರ ಕಳೆದಿದ್ದವು. ಈಗ ಅವರೆಲ್ಲರೂ ಮೂಲತಃ ಎಲ್ಲಿನವರಾಗಿದ್ದರೋ ಆ ತಮ್ಮ ಊರಾದ ಗಲಿಲಾಯ ಪ್ರಾಂತ್ಯಕ್ಕೆ ಹೋಗುತ್ತಾ ಇದ್ದರು. ಅವರು ಹೋಗಲಿದ್ದ ಸ್ಥಳ ಕಾನಾ, ನತಾನಯೇಲನ ಹುಟ್ಟೂರು, ಯೇಸು ತಾನೇ ಬೆಳೆದು ದೊಡ್ಡವನಾಗಿದ್ದ ನಜರೇತಿನಿಂದ ಅನತಿ ದೂರದ ಬೆಟ್ಟ ಪ್ರದೇಶದಲ್ಲಿ ಅದು ನೆಲೆಸಿತ್ತು. ಕಾನಾದಲ್ಲಿನ ಒಂದು ಮದುವೆ ಊಟಕ್ಕೆ ಅವರನ್ನು ಆಮಂತ್ರಿಸಲಾಗಿತ್ತು.
ಯೇಸುವಿನ ತಾಯಿಯೂ ಕೂಡಾ ಆ ಮದುವೆಗೆ ಬಂದಿದ್ದಳು. ಮದುವೇ ಕುಟುಂಬದ ಸ್ನೇಹಿತೆಯೋಪಾದಿ ಮರಿಯಳು ಅನೇಕ ಅತಿಥಿಗಳನ್ನು ಉಪಚರಿಸುವ ಕೆಲಸದಲ್ಲಿ ಸೇರಿಕೊಂಡಿದ್ದಳು ಎಂಬಂತೆ ತೋರುತ್ತದೆ. ಆದುದರಿಂದ ಅಲ್ಲಿ ಒಂದು ಸಂಗತಿ ಕಡಿಮೆಯಾದುದನ್ನು ಕೂಡಲೇ ಗಮನಿಸಿದಳು, ಮತ್ತು ಅದನ್ನು ಆಕೆಯು ಯೇಸುವಿಗೆ ವರದಿ ಮಾಡುತ್ತಾಳೆ: “ಅವರಲ್ಲಿ ದ್ರಾಕ್ಷಾರಸವಿಲ್ಲ.”
ದ್ರಾಕ್ಷಾರಸವು ಮುಗಿದುಹೋದ ವಿಷಯದಲ್ಲಿ ಯೇಸುವು ಕಾರ್ಯಥಃ ಏನಾದರೂ ಮಾಡಬೇಕೆಂದು ಸೂಚಿಸಿದಾಗ, ಯೇಸು ಮೊದಲು ಮನಸ್ಸಿಲ್ಲದವನಾಗಿದ್ದನು. “ನನ್ನ ಗೊಡವೆ ನಿನಗೇಕೆ?” ಎಂದವನು ಕೇಳುತ್ತಾನೆ. ದೇವರ ನೇಮಿತ ಅರಸನೋಪಾದಿ, ಅವನ ಚಟುವಟಿಕೆಗಳು ಕುಟುಂಬದವರಿಂದ ಅಥವಾ ಮಿತ್ರರುಗಳಿಂದ ಮಾರ್ಗದರ್ಶಿಸಲ್ಪಡಲಿಕ್ಕಿರಲಿಲ್ಲ. ಆದುದರಿಂದ ಮರಿಯಳು, ವಿವೇಕತನದಿಂದ ವಿಷಯವನ್ನು ತನ್ನ ಮಗನ ಕೈಯಲ್ಲಿ ಬಿಟ್ಟು ಉಪಚರಿಸುವವರಿಗೆ ಹೀಗೆ ಹೇಳಿ ಅಲ್ಲಿಂದ ತೆರಳುತ್ತಾಳೆ: “ಆತನು ಏನೋ ನಿಮಗೆ ಹೇಳುವನೋ ಅದನ್ನು ಮಾಡಿರಿ.”
ಒಳ್ಳೇದು, ಒಂದೊಂದರಲ್ಲಿ ಸುಮಾರು ನಲ್ವತ್ತು ಲೀಟರ್ಗಳಿಗಿಂತಲೂ ಹೆಚ್ಚು ನೀರು ಹಿಡಿಯುವ ಕಲ್ಲಿನ ಆರು ದೊಡ್ಡ ಜಾಡಿಗಳು ಅಲ್ಲಿದ್ದವು. ಯೇಸು ಆ ಪರಿಚಾರಕರಿಗೆ ಅಂದದ್ದು: “ಆ ಬಾನೆಗಳಲ್ಲಿ ನೀರು ತುಂಬಿಸಿರಿ.” ಕೆಲಸದವರು ಅದನ್ನು ಕಂಠದ ತನಕ ಪೂರ್ಣ ತುಂಬಿಸಿದರು. ಅನಂತರ ಯೇಸು ಅಂದದ್ದು: “ಈಗ ಅದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ.”
ಆ ಉತ್ಕೃಷ್ಟತರದ ದ್ರಾಕ್ಷಾರಸದಿಂದ ಪಾರುಪತ್ಯಗಾರನು ಪ್ರಭಾವಿತನಾಗುತ್ತಾನೆ, ಅದು ಅದ್ಭುತವಾಗಿ ಉತ್ಪಾದಿಸಲ್ಪಟ್ಟಿತ್ತೆಂಬುದು ಅವನಿಗೆ ತಿಳಿದಿರಲಿಲ್ಲ. ಮದುಮಗನನ್ನು ಕರೆದು, ಅವನು ಹೇಳುವದು: “ಎಲ್ಲರೂ ಹಿರಿದಿನ ದ್ರಾಕ್ಷಾರಸವನ್ನು ಮೊದಲು ಕೊಟ್ಟು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನು ಹಿರಿದಿನ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿದ್ದೀ.”
ಇದು ಯೇಸುವಿನ ಮೊದಲ ಅದ್ಭುತವಾಗಿತ್ತು ಮತ್ತು ಇದನ್ನು ಅವನ ಹೊಸ ಶಿಷ್ಯರು ಕಂಡಾಗ ಅವರ ನಂಬಿಕೆಯು ಬಲಗೊಂಡಿತು. ಇದಾದ ಮೇಲೆ, ಆತನ ತಾಯಿಯೂ ಮಲ-ತಮ್ಮಂದಿರೂ ಜೊತೆಯಾಗಿ ಗಲಿಲಾಯ ಸಮುದ್ರದ ಸಮೀಪದ ಕಪೆರ್ನೌಮ್ ಎಂಬ ಶಹರಕ್ಕೆ ಪ್ರಯಾಣ ಬೆಳೆಸಿದರು. ಯೋಹಾನ 2:1-12.
▪ ಯೇಸುವಿನ ಶುಶ್ರೂಷೆಯ ಯಾವ ಸಮಯಾವಧಿಯಲ್ಲಿ ಕಾನಾದ ಮದುವೆಯು ಜರುಗಿತು?
▪ ತನ್ನ ತಾಯಿಯ ಸಲಹೆಗೆ ಯೇಸುವು ಯಾಕೆ ಆಕ್ಷೇಪಿಸಿದನು?
▪ ಯಾವ ಅದ್ಭುತವನ್ನು ಯೇಸುವು ನಡಿಸಿದನು ಮತ್ತು ಇತರರ ಮೇಲೆ ಇದು ಯಾವ ಪ್ರಭಾವ ಹಾಕಿತು?