ಸೇನಾ ಅಧಿಕಾರಿಯೊಬ್ಬನ ದೊಡ್ಡ ನಂಬಿಕೆ
ಅಧ್ಯಾಯ 36
ಸೇನಾ ಅಧಿಕಾರಿಯೊಬ್ಬನ ದೊಡ್ಡ ನಂಬಿಕೆ
ಯೇಸುವು ತನ್ನ ಪರ್ವತ ಪ್ರಸಂಗವನ್ನು ನೀಡಿದಾಗ, ಅವನ ಬಹಿರಂಗ ಶುಶ್ರೂಷೆಯ ಅರ್ಧದಷ್ಟಕ್ಕೆ ಮುಟ್ಟಿದ್ದನು. ಅದರ ಅರ್ಥವು ಭೂಮಿಯ ಮೇಲೆ ಅವನ ಕೆಲಸವನ್ನು ಪೂರೈಸಲು ಅವನಿಗೆ ಕೇವಲ ಒಂದು ವರ್ಷ ಮತ್ತು ಒಂಭತ್ತು ತಿಂಗಳುಗಳಷ್ಟಿದ್ದವು.
ತನ್ನ ಕಾರ್ಯಚಟುವಟಿಕೆಯ ಗೃಹಕೇಂದ್ರದೋಪಾದಿಯಂತಿದ್ದ ಕಪೆರ್ನೌಮ್ ನಗರವನ್ನು ಯೇಸುವು ಈಗ ಪ್ರವೇಶಿಸುತ್ತಾನೆ. ಇಲ್ಲಿ ಯೆಹೂದ್ಯರ ಹಿರಿಯರು ಯೇಸುವನ್ನು ಒಂದು ಬೇಡಿಕೆಯೊಂದಿಗೆ ಸಮೀಪಿಸುತ್ತಾರೆ. ಅನ್ಯನಾಗಿದ್ದ, ರೋಮೀಯ ಸೇನೆಯ ಅಧಿಕಾರಿಯೊಬ್ಬನಿಂದ ಅವರು ಕಳುಹಿಸಲ್ಪಟ್ಟಿದ್ದರು.
ಈ ಸೇನಾ ಅಧಿಕಾರಿಗೆ ಇಷ್ಟನಾದ ಒಬ್ಬ ಆಳು ಗಂಭೀರವಾದ ರೋಗದಿಂದ ಸಾಯುವ ಹಾಗಿದ್ದನು ಮತ್ತು ಯೇಸುವು ತನ್ನ ಆಳನ್ನು ವಾಸಿಮಾಡಬೇಕೆಂದು ಅವನು ಬಯಸಿದನು. ಯೆಹೂದ್ಯರು ಅಧಿಕಾರಿಯ ಪರವಾಗಿ ಶೃದ್ಧೆಯಿಂದ ವಿನಂತಿಸುತ್ತಾರೆ: “ನಿನ್ನಿಂದ ಇಂಥ ಉಪಕಾರ ಹೊಂದುವದಕ್ಕೆ ಅವನು ಯೋಗ್ಯನು,” ಎಂದರು ಅವರು, “ಯಾಕಂದರೆ ಅವನು ನಮ್ಮ ಜನರನ್ನು ಪ್ರೀತಿಸುವವನು, ತಾನೇ ನಮ್ಮ ಸಭಾ ಮಂದಿರವನ್ನು ನಮಗಾಗಿ ಕಟ್ಟಿಸಿದನು.”
ಏನೂ ಹಿಂಜರಿಯದೇ ಯೇಸುವು ಅವರ ಸಂಗಡ ಹೊರಡುತ್ತಾನೆ. ಆದಾಗ್ಯೂ, ಅವನು ಮನೆಗೆ ಸಮೀಪಿಸುತ್ತಿರುವಾಗಲೇ, ಸೇನಾ ಅಧಿಕಾರಿಯು ಸ್ನೇಹಿತರನ್ನು ಕಳುಹಿಸಿ ಹೇಳಿಸಿದ್ದು: “ಪ್ರಭುವೇ, ತೊಂದರೆ ತೆಗೆದುಕೊಳ್ಳಬೇಡ; ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ. ಈ ಕಾರಣದಿಂದ ನಾನು ನಿನ್ನ ಬಳಿಗೆ ಬರುವದಕ್ಕೆ ತಕ್ಕವನೆಂದು ಎಣಿಸಿಕೊಳ್ಳಲಿಲ್ಲ.”
ಇತರರಿಗೆ ಆಜ್ಞೆ ನೀಡುವ ರೂಢಿಯಲ್ಲಿದ್ದ ಈ ಅಧಿಕಾರಿಯ ಎಂಥಾ ಒಂದು ದೀನತೆಯ ವ್ಯಕ್ತಪಡಿಸುವಿಕೆ! ಆದರೆ ಪ್ರಾಯಶಃ ಅವನು, ಯೆಹೂದ್ಯೇತರರೊಡನೆ ಯೆಹೂದ್ಯನೊಬ್ಬನ ಸಾಮಾಜಿಕ ಸಂಬಂಧವನ್ನು ನಿಷೇಧಿಸುವ ಪದ್ಧತಿಯನ್ನು ಅರಿತವನಾಗಿ ಯೇಸುವಿನ ಕುರಿತು ಯೋಚಿಸುತ್ತಿದ್ದಿರಲೂ ಬಹುದು. ಪೇತ್ರನು ಕೂಡಾ ಹೇಳುವದು: “ಯೆಹೂದ್ಯರು ಅನ್ಯಜನರ ಕೂಡ ಹೊಕ್ಕುಬಳಕೆ ಮಾಡುವದರು ಯೆಹೂದ್ಯರ ಸಂಪ್ರದಾಯಕ್ಕೆ ವಿರುದ್ಧವಾಗಿದೆ.”
ಸಂಪ್ರದಾಯವನ್ನು ಮೀರುವುದರಿಂದಾಗುವ ಪರಿಣಾಮಗಳಿಂದ ಯೇಸುವು ಬಾಧೆ ಪಡಬಾರದೆಂದು ಪ್ರಾಯಶಃ ಬಯಸಿ, ಅವನ ಮಿತ್ರರು ಯೇಸುವಿಗೆ ಈ ರೀತಿ ಬೇಡಿಕೊಳ್ಳುವಂತೆ ಅಧಿಕಾರಿಯು ಹೇಳಿದನು: “ಆದರೆ ನೀನು ಒಂದು ಮಾತು ಹೇಳು, ನನ್ನ ಆಳಿಗೆ ಗುಣವಾಗುವದು. ನಾನು ಸಹ ಮತ್ತೊಬ್ಬನ ಕೈಕೆಳಗಿರುವವನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ಹೋಗು ಅಂದರೆ ಹೋಗುತ್ತಾನೆ, ಮತ್ತೊಬ್ಬನಿಗೆ ಬಾ ಎಂದು ಹೇಳಿದರೆ ಬರುತ್ತಾನೆ; ನನ್ನ ಆಳಿಗೆ ಇಂಥಿಂಥದನ್ನು ಮಾಡು ಎಂದು ಹೇಳಿದರೆ ಮಾಡುತ್ತಾನೆ.”
ಹೌದು, ಯೇಸುವು ಇದನ್ನು ಕೇಳಿದಾಗ ಆಶ್ಚರ್ಯ ಪಡುತ್ತಾನೆ. ಅವನನ್ನುವದು: “ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” ಸೇನಾಧಿಪತಿಯ ಆಳನ್ನು ಗುಣಪಡಿಸಿದ ಮೇಲೆ, ಯೇಸುವು ಆ ಸಂದರ್ಭವನ್ನುಪಯೋಗಿಸಿ, ನಂಬಿಕೆಹೀನರಾದ ಯೆಹೂದ್ಯರು ನಿರಾಕರಿಸಿದಂಥ ಆಶೀರ್ವಾದಗಳು ನಂಬಿಕೆಯಿಡುವ ಯೆಹೂದ್ಯೇತರರಿಗೆ ದೊರೆಯುವ ವಿಧವನ್ನು ವಿವರಿಸುತ್ತಾನೆ.
ಯೇಸು ಹೇಳಿದ್ದು: “ಮೂಡಣ ಪಡುವಣ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ್, ಇಸಾಕ್, ಯಾಕೋಬ್ ಎಂಬವರ ಸಂಗಡ ಊಟಕ್ಕೆ ಕೂಡ್ರುವರು; ಆದರೆ ಆ ರಾಜ್ಯದ ಬಾಧ್ಯಸ್ಥರು ಹೊರಗೆ ಕತ್ತಲೆಗೆ ಹಾಕಲ್ಪಡುವರು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.”
“ಹೊರಗೆ ಕತ್ತಲೆಗೆ ಹಾಕಲ್ಪಡುವ . . . ರಾಜ್ಯದ ಬಾಧ್ಯಸ್ಥರು” ಕ್ರಿಸ್ತನೊಂದಿಗೆ ಅಧಿಪತಿಗಳಾಗಿರಲು ಅವರಿಗೆ ಪ್ರಥಮವಾಗಿ ಅವಕಾಶವನ್ನೊದಗಿಸಿದಾಗ ಸ್ವೀಕರಿಸದೇ ಇದ್ದ ಮಾಂಸಿಕ ಯೆಹೂದ್ಯರಾಗಿರುತ್ತಾರೆ. ಅಬ್ರಹಾಮ್, ಇಸಾಕ್ ಮತ್ತು ಯಾಕೋಬ್ ದೇವರ ರಾಜ್ಯ ಏರ್ಪಾಡನ್ನು ಪ್ರತಿನಿಧಿಸುತ್ತಾರೆ. ಆದಕಾರಣ ಸ್ವರ್ಗೀಯ ಮೇಜಿನ ಮೇಲೆ, ಅಂದರೆ “ಪರಲೋಕ ರಾಜ್ಯದಲ್ಲಿ” ಊಟಕ್ಕೆ ಕೂಡ್ರಲು ಅನ್ಯಜನಗಳು ಸುಸ್ವಾಗತಿಸಲ್ಪಡುವದನ್ನು ಯೇಸುವು ವರ್ಣಿಸುತ್ತಾನೆ. ಲೂಕ 7:1-10; ಮತ್ತಾಯ 8:5-13; ಆ.ಕೃತ್ಯಗಳು 10:28.
▪ ಅನ್ಯ ಸೇನಾ ಅಧಿಕಾರಿಯ ಪರವಾಗಿ ಯೆಹೂದ್ಯರು ಯಾಕೆ ವಿನಂತಿಸಿದರು?
▪ ತನ್ನ ಮನೆಗೆ ಪ್ರವೇಶಿಸಲು ಅಮಂತ್ರಣವನ್ನು ಅಧಿಕಾರಿಯು ನೀಡದೇ ಇದ್ದ ಕಾರಣವನ್ನು ಯಾವದು ವಿವರಿಸಬಹುದು?
▪ ಯೇಸುವಿನ ಸಮಾಪ್ತಿಯ ಹೇಳಿಕೆಗಳ ಅರ್ಥವೇನು?