ದೇವರನ್ನು ಅಸಂತೋಷಪಡಿಸುವ ನಂಬಿಕೆಗಳು ಮತ್ತು ಪದ್ಧತಿಗಳು
ಪಾಠ 11
ದೇವರನ್ನು ಅಸಂತೋಷಪಡಿಸುವ ನಂಬಿಕೆಗಳು ಮತ್ತು ಪದ್ಧತಿಗಳು
ಯಾವ ವಿಧದ ನಂಬಿಕೆಗಳು ಮತ್ತು ಪದ್ಧತಿಗಳು ತಪ್ಪಾಗಿವೆ? (1)
ದೇವರು ತ್ರಯೈಕ್ಯನೆಂದು ಕ್ರೈಸ್ತರು ನಂಬಬೇಕೊ? (2)
ಸತ್ಯ ಕ್ರೈಸ್ತರು ಕ್ರಿಸ್ಮಸ್, ಈಸ್ಟರ್, ಅಥವಾ ಜನ್ಮದಿನಗಳನ್ನು ಏಕೆ ಆಚರಿಸುವುದಿಲ್ಲ? (3, 4)
ಸತ್ತವರು ಜೀವಿತರನ್ನು ಹಾನಿಪಡಿಸಬಲ್ಲರೊ? (5) ಯೇಸು ಒಂದು ಶಿಲುಬೆಯ ಮೇಲೆ ಸತ್ತನೊ? (6) ದೇವರನ್ನು ಮೆಚ್ಚಿಸುವುದು ಎಷ್ಟು ಪ್ರಾಮುಖ್ಯವಾಗಿದೆ? (7)
1. ಎಲ್ಲ ನಂಬಿಕೆಗಳು ಹಾಗೂ ಪದ್ಧತಿಗಳು ಕೆಟ್ಟವುಗಳಾಗಿರುವುದಿಲ್ಲ. ಆದರೆ ಅವು ಸುಳ್ಳು ಧರ್ಮದಿಂದ ಬರುವುದಾದರೆ ಅಥವಾ ಬೈಬಲ್ ಬೋಧನೆಗಳಿಗೆ ವಿರುದ್ಧವಾಗಿದ್ದರೆ, ದೇವರು ಅವುಗಳನ್ನು ಸಮ್ಮತಿಸುವುದಿಲ್ಲ.—ಮತ್ತಾಯ 15:6.
2. ತ್ರಯೈಕ್ಯ: ಯೆಹೋವನು ತ್ರಯೈಕ್ಯ—ಒಬ್ಬ ದೇವರಲ್ಲಿ ಮೂರು ವ್ಯಕ್ತಿಗಳು—ಆಗಿದ್ದಾನೊ? ಇಲ್ಲ! ತಂದೆಯಾದ ಯೆಹೋವನು, “ಏಕೈಕ ಸತ್ಯ ದೇವರು.” (ಯೋಹಾನ 17:3, NW; ಮಾರ್ಕ 12:29) ಯೇಸು ಆತನ ಜ್ಯೇಷ್ಠಪುತ್ರನು, ಮತ್ತು ಅವನು ದೇವರಿಗೆ ಅಧೀನನಾಗಿದ್ದಾನೆ. (1 ಕೊರಿಂಥ 11:3) ತಂದೆಯು ಪುತ್ರನಿಗಿಂತ ದೊಡ್ಡವನಾಗಿದ್ದಾನೆ. (ಯೋಹಾನ 14:28) ಪವಿತ್ರಾತ್ಮವು ಒಬ್ಬ ವ್ಯಕ್ತಿಯಲ್ಲ, ದೇವರ ಸಕ್ರಿಯ ಶಕ್ತಿಯಾಗಿದೆ.—ಆದಿಕಾಂಡ 1:2; ಅ. ಕೃತ್ಯಗಳು 2:18.
3. ಕ್ರಿಸ್ಮಸ್ ಮತ್ತು ಈಸ್ಟರ್: ಯೇಸು ಡಿಸೆಂಬರ್ 25ರಂದು ಜನಿಸಲಿಲ್ಲ. ಅವನು ಅಕ್ಟೋಬರ್ 1ರ ಅತ್ತಿತ್ತ—ಕುರುಬರು ರಾತ್ರಿಯಲ್ಲಿ ತಮ್ಮ ಹಿಂಡುಗಳನ್ನು ಬಯಲಿನಲ್ಲಿ ಇಟ್ಟ, ವರ್ಷದ ಒಂದು ಅವಧಿಯಲ್ಲಿ—ಜನಿಸಿದನು. (ಲೂಕ 2:8-12) ಯೇಸು ತನ್ನ ಜನ್ಮವನ್ನು ಆಚರಿಸುವಂತೆ, ಕ್ರೈಸ್ತರನ್ನು ಎಂದೂ ಆಜ್ಞಾಪಿಸಲಿಲ್ಲ. ಬದಲಿಗೆ, ತನ್ನ ಮರಣವನ್ನು ಸ್ಮರಿಸಿಕೊಳ್ಳುವಂತೆ ಅಥವಾ ಜ್ಞಾಪಿಸಿಕೊಳ್ಳುವಂತೆ ಅವನು ತನ್ನ ಶಿಷ್ಯರಿಗೆ ಹೇಳಿದನು. (ಲೂಕ 22:19, 20) ಕ್ರಿಸ್ಮಸ್ ಮತ್ತು ಅದರ ಪದ್ಧತಿಗಳು ಪ್ರಾಚೀನ ಸುಳ್ಳು ಧರ್ಮಗಳಿಂದ ಬರುತ್ತವೆ. ಮೊಟ್ಟೆಗಳ ಹಾಗೂ ಮೊಲಗಳ ಬಳಕೆಯಂತಹ ಈಸ್ಟರ್ ಪದ್ಧತಿಗಳ ವಿಷಯದಲ್ಲೂ ಇದು ಸತ್ಯವಾಗಿದೆ. ಆದಿ ಕ್ರೈಸ್ತರು ಕ್ರಿಸ್ಮಸ್ ಅಥವಾ ಈಸ್ಟರ್ ಅನ್ನು ಆಚರಿಸಲಿಲ್ಲ, ಇಂದಿನ ಸತ್ಯ ಕ್ರೈಸ್ತರೂ ಆಚರಿಸುವುದಿಲ್ಲ.
4. ಜನ್ಮದಿನಗಳು: ಬೈಬಲಿನಲ್ಲಿ ತಿಳಿಸಲ್ಪಟ್ಟಂತಹ ಕೇವಲ ಎರಡು ಜನ್ಮದಿನಾಚರಣೆಗಳು ಯೆಹೋವನನ್ನು ಆರಾಧಿಸದ ವ್ಯಕ್ತಿಗಳಿಂದ ನಡೆಸಲ್ಪಟ್ಟವು. (ಆದಿಕಾಂಡ 40:20-22; ಮಾರ್ಕ 6:21, 22, 24-27) ಆದಿ ಕ್ರೈಸ್ತರು ಜನ್ಮದಿನಗಳನ್ನು ಆಚರಿಸಲಿಲ್ಲ. ಜನ್ಮದಿನಗಳನ್ನು ಆಚರಿಸುವ ಪದ್ಧತಿಯು ಪ್ರಾಚೀನ ಸುಳ್ಳು ಧರ್ಮಗಳಿಂದ ಬರುತ್ತದೆ. ಸತ್ಯ ಕ್ರೈಸ್ತರು ವರ್ಷದ ಬೇರೆ ಸಮಯಗಳಲ್ಲಿ ಕೊಡುಗೆಗಳನ್ನು ಕೊಡುತ್ತಾರೆ ಮತ್ತು ಒಟ್ಟಿಗೆ ಸುಸಮಯಗಳನ್ನು ಅನುಭವಿಸುತ್ತಾರೆ.
5. ಸತ್ತವರ ಭಯ: ಸತ್ತವರಿಗೆ ಏನನ್ನೂ ಮಾಡಲು ಅಥವಾ ಭಾವಿಸಲು ಸಾಧ್ಯವಿಲ್ಲ. ನಾವು ಅವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ, ಮತ್ತು ಅವರು ನಮಗೆ ಹಾನಿಯನ್ನುಂಟುಮಾಡಲಾರರು. (ಕೀರ್ತನೆ 146:4; ಪ್ರಸಂಗಿ 9:5, 10) ಪ್ರಾಣವು ಸಾಯುತ್ತದೆ; ಮರಣದ ನಂತರ ಅದು ಜೀವಿಸುತ್ತಾ ಮುಂದುವರಿಯುವುದಿಲ್ಲ. (ಯೆಹೆಜ್ಕೇಲ 18:4) ಆದರೆ ಕೆಲವೊಮ್ಮೆ, ದೆವ್ವಗಳೆಂದು ಕರೆಯಲ್ಪಡುವ ದುಷ್ಟ ದೂತರು, ಸತ್ತವರ ಆತ್ಮಗಳಾಗಿರುವ ನಟನೆ ಮಾಡುತ್ತಾರೆ. ಸತ್ತವರ ಭಯದೊಂದಿಗೆ ಅಥವಾ ಆರಾಧನೆಯೊಂದಿಗೆ ಸಂಬಂಧಿಸಿರುವ ಯಾವುದೇ ಪದ್ಧತಿಗಳು ತಪ್ಪಾಗಿವೆ.—ಯೆಶಾಯ 8:19.
6. ಶಿಲುಬೆ: ಯೇಸು ಒಂದು ಶಿಲುಬೆಯ ಮೇಲೆ ಸಾಯಲಿಲ್ಲ. ಅವನೊಂದು ಮರದ ಗಣಿ ಅಥವಾ ಕಂಬದ ಮೇಲೆ ಸತ್ತನು. ಅನೇಕ ಬೈಬಲ್ಗಳಲ್ಲಿ “ಶಿಲುಬೆ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಗ್ರೀಕ್ ಶಬ್ದವು, ಮರದ ಕೇವಲ ಒಂದು ತುಂಡನ್ನು ಅರ್ಥೈಸಿತು. ಶಿಲುಬೆಯ ಸಂಕೇತವು ಪ್ರಾಚೀನ ಸುಳ್ಳು ಧರ್ಮಗಳಿಂದ ಬರುತ್ತದೆ. ಶಿಲುಬೆಯು ಆದಿ ಕ್ರೈಸ್ತರಿಂದ ಬಳಸಲ್ಪಡುತ್ತಿರಲಿಲ್ಲ ಅಥವಾ ಆರಾಧಿಸಲ್ಪಡುತ್ತಿರಲಿಲ್ಲ. ಆದುದರಿಂದ, ಆರಾಧನೆಯಲ್ಲಿ ಒಂದು ಶಿಲುಬೆಯನ್ನು ಉಪಯೋಗಿಸುವುದು ಸರಿಯಾಗಿರುವುದೆಂದು ನೀವು ನೆನಸುತ್ತೀರೊ?—ಧರ್ಮೋಪದೇಶಕಾಂಡ 7:26; 1 ಕೊರಿಂಥ 10:14.
7. ಈ ನಂಬಿಕೆಗಳು ಹಾಗೂ ಪದ್ಧತಿಗಳಲ್ಲಿ ಕೆಲವನ್ನು ತ್ಯಜಿಸುವುದು ಬಹಳ ಕಷ್ಟಕರವಾಗಿರಬಹುದು. ನಿಮ್ಮ ನಂಬಿಕೆಗಳನ್ನು ಬದಲಾಯಿಸದಂತೆ ಸಂಬಂಧಿಕರು ಹಾಗೂ ಸ್ನೇಹಿತರು ನಿಮ್ಮನ್ನು ಮನಗಾಣಿಸಲು ಪ್ರಯತ್ನಿಸಬಹುದು. ಆದರೆ ಮನುಷ್ಯರನ್ನು ಮೆಚ್ಚಿಸುವುದಕ್ಕಿಂತ ದೇವರನ್ನು ಮೆಚ್ಚಿಸುವುದು ಹೆಚ್ಚು ಪ್ರಾಮುಖ್ಯವಾಗಿದೆ.—ಜ್ಞಾನೋಕ್ತಿ 29:25; ಮತ್ತಾಯ 10:36, 37.
[ಪುಟ 22ರಲ್ಲಿರುವ ಚಿತ್ರ]
ದೇವರು ತ್ರಯೈಕ್ಯನಲ್ಲ
[ಪುಟ 23ರಲ್ಲಿರುವ ಚಿತ್ರ]
ಕ್ರಿಸ್ಮಸ್ ಮತ್ತು ಈಸ್ಟರ್ ಪ್ರಾಚೀನ ಸುಳ್ಳು ಧರ್ಮಗಳಿಂದ ಬರುತ್ತವೆ
[ಪುಟ 23ರಲ್ಲಿರುವ ಚಿತ್ರ]
ಸತ್ತವರನ್ನು ಆರಾಧಿಸಲು ಅಥವಾ ಅವರಿಗೆ ಭಯಪಡಲು ಯಾವ ಕಾರಣವೂ ಇರುವುದಿಲ್ಲ