ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು ಮೆಚ್ಚಿಸುವ ಕುಟುಂಬ ಜೀವನ

ದೇವರನ್ನು ಮೆಚ್ಚಿಸುವ ಕುಟುಂಬ ಜೀವನ

ಪಾಠ 8

ದೇವರನ್ನು ಮೆಚ್ಚಿಸುವ ಕುಟುಂಬ ಜೀವನ

ಕುಟುಂಬದಲ್ಲಿ ಗಂಡನ ಸ್ಥಾನವು ಏನು? (1)

ಒಬ್ಬ ಗಂಡನು ತನ್ನ ಹೆಂಡತಿಯನ್ನು ಹೇಗೆ ಉಪಚರಿಸಬೇಕು? (2)

ಒಬ್ಬ ತಂದೆಗಿರುವ ಜವಾಬ್ದಾರಿಗಳಾವುವು? (3)

ಕುಟುಂಬದಲ್ಲಿ ಹೆಂಡತಿಯ ಪಾತ್ರವೇನು? (4)

ದೇವರು ಹೆತ್ತವರಿಂದ ಹಾಗೂ ಮಕ್ಕಳಿಂದ ಏನನ್ನು ಅಪೇಕ್ಷಿಸುತ್ತಾನೆ? (5)

ಪ್ರತ್ಯೇಕವಾಸ ಹಾಗೂ ವಿವಾಹ ವಿಚ್ಛೇದನದ ಕುರಿತಾದ ಬೈಬಲಿನ ವೀಕ್ಷಣೆಯು ಏನು? (6, 7)

1. ಗಂಡನೊಬ್ಬನು ತನ್ನ ಕುಟುಂಬದ ತಲೆಯಾಗಿದ್ದಾನೆಂದು ಬೈಬಲು ಹೇಳುತ್ತದೆ. (1 ಕೊರಿಂಥ 11:3) ಒಬ್ಬ ಗಂಡನಿಗೆ ಒಬ್ಬಳೇ ಹೆಂಡತಿಯಿರಬೇಕು. ಅವರು ಕಾನೂನಿಗನುಸಾರ ಯೋಗ್ಯವಾಗಿ ವಿವಾಹವಾಗಿರಬೇಕು.—1 ತಿಮೊಥೆಯ 3:2; ತೀತ 3:1.

2. ಗಂಡನೊಬ್ಬನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನು ಪ್ರೀತಿಸಬೇಕು. ಯೇಸು ತನ್ನ ಹಿಂಬಾಲಕರನ್ನು ಉಪಚರಿಸುವ ರೀತಿಯಲ್ಲಿ ಅವನು ಆಕೆಯನ್ನು ಉಪಚರಿಸಬೇಕು. (ಎಫೆಸ 5:25, 28, 29) ಅವನೆಂದೂ ತನ್ನ ಹೆಂಡತಿಯನ್ನು ಹೊಡೆಯಬಾರದು ಅಥವಾ ಯಾವುದೇ ವಿಧದಲ್ಲಿ ಆಕೆಯನ್ನು ದುರುಪಚರಿಸಬಾರದು. ಬದಲಿಗೆ, ಅವನು ಆಕೆಗೆ ಮಾನಮರ್ಯಾದೆಯನ್ನು ತೋರಿಸಬೇಕು.—ಕೊಲೊಸ್ಸೆ 3:19; 1 ಪೇತ್ರ 3:7.

3. ತನ್ನ ಕುಟುಂಬದ ಆರೈಕೆಗಾಗಿ ತಂದೆಯೊಬ್ಬನು ಕಷ್ಟಪಟ್ಟು ಕೆಲಸಮಾಡಬೇಕು. ತನ್ನ ಹೆಂಡತಿ ಹಾಗೂ ಮಕ್ಕಳಿಗಾಗಿ ಅವನು ಆಹಾರ, ಉಡುಗೆ ತೊಡುಗೆ ಹಾಗೂ ಮನೆಯೊದಗಿಸಬೇಕು. ತಂದೆಯೊಬ್ಬನು ತನ್ನ ಕುಟುಂಬದ ಆತ್ಮಿಕ ಅಗತ್ಯಗಳಿಗಾಗಿಯೂ ಒದಗಿಸಬೇಕು. (1 ತಿಮೊಥೆಯ 5:8) ದೇವರು ಮತ್ತು ಆತನ ಉದ್ದೇಶಗಳ ಕುರಿತು ಕಲಿಯುವಂತೆ ತನ್ನ ಕುಟುಂಬಕ್ಕೆ ಸಹಾಯ ಮಾಡುವುದರಲ್ಲಿ, ಅವನು ನಾಯಕತ್ವವನ್ನು ವಹಿಸುತ್ತಾನೆ.—ಧರ್ಮೋಪದೇಶಕಾಂಡ 6:4-9; ಎಫೆಸ 6:4.

4. ಒಬ್ಬ ಹೆಂಡತಿ ತನ್ನ ಗಂಡನಿಗೆ ಒಳ್ಳೆಯ ಸಹಾಯಕಳಾಗಿರಬೇಕು. (ಆದಿಕಾಂಡ 2:18) ತಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ಹಾಗೂ ತರಬೇತಿ ನೀಡುವುದರಲ್ಲಿ ಆಕೆ ತನ್ನ ಗಂಡನಿಗೆ ನೆರವನ್ನೀಯಬೇಕು. (ಜ್ಞಾನೋಕ್ತಿ 1:8) ಪ್ರೀತಿಪೂರ್ವಕವಾಗಿ ತನ್ನ ಕುಟುಂಬದ ಆರೈಕೆ ಮಾಡುವಂತೆ ಯೆಹೋವನು ಹೆಂಡತಿಯೊಬ್ಬಳಿಂದ ಅಪೇಕ್ಷಿಸುತ್ತಾನೆ. (ಜ್ಞಾನೋಕ್ತಿ 31:10, 15, 26, 27; ತೀತ 2:4, 5) ತನ್ನ ಗಂಡನಿಗಾಗಿ ಆಕೆಯಲ್ಲಿ ಆಳವಾದ ಗೌರವವಿರಬೇಕು.—ಎಫೆಸ 5:22, 23, 33.

5. ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗಬೇಕೆಂದು ದೇವರು ಅಪೇಕ್ಷಿಸುತ್ತಾನೆ. (ಎಫೆಸ 6:1-3) ಹೆತ್ತವರು ತಮ್ಮ ಮಕ್ಕಳಿಗೆ ಉಪದೇಶ ನೀಡಿ, ತಿದ್ದುವುದನ್ನು ಆತನು ನಿರೀಕ್ಷಿಸುತ್ತಾನೆ. ಅವರ ಆತ್ಮಿಕ ಹಾಗೂ ಭಾವನಾತ್ಮಕ ಅಗತ್ಯಗಳಿಗಾಗಿ ಕಾಳಜಿ ವಹಿಸುತ್ತಾ, ಹೆತ್ತವರು ತಮ್ಮ ಮಕ್ಕಳೊಂದಿಗೆ ಸಮಯವನ್ನು ವ್ಯಯಿಸುವ ಮತ್ತು ಅವರೊಂದಿಗೆ ಬೈಬಲನ್ನು ಅಭ್ಯಸಿಸುವ ಅಗತ್ಯವಿದೆ. (ಧರ್ಮೋಪದೇಶಕಾಂಡ 11:18, 19; ಜ್ಞಾನೋಕ್ತಿ 22:6, 15) ಹೆತ್ತವರು ತಮ್ಮ ಮಕ್ಕಳನ್ನು ಕಠಿನವಾದ ಅಥವಾ ಕ್ರೂರವಾದ ವಿಧದಲ್ಲಿ ಎಂದೂ ಶಿಕ್ಷಿಸಬಾರದು.—ಕೊಲೊಸ್ಸೆ 3:21.

6. ಒಟ್ಟಿಗೆ ಹೊಂದಿಕೊಂಡು ಹೋಗುವುದರಲ್ಲಿ ವಿವಾಹ ಸಂಗಾತಿಗಳಿಗೆ ಸಮಸ್ಯೆಗಳಿರುವಾಗ, ಬೈಬಲಿನ ಸಲಹೆಯನ್ನು ಅನ್ವಯಿಸಿಕೊಳ್ಳಲು ಅವರು ಪ್ರಯತ್ನಿಸಬೇಕು. ಪ್ರೀತಿಯನ್ನು ತೋರಿಸುವಂತೆ ಮತ್ತು ಕ್ಷಮಿಸುವವರಾಗಿರುವಂತೆ ಬೈಬಲು ನಮ್ಮನ್ನು ಪ್ರೇರಿಸುತ್ತದೆ. (ಕೊಲೊಸ್ಸೆ 3:12-14) ಚಿಕ್ಕಪುಟ್ಟ ಸಮಸ್ಯೆಗಳನ್ನು ಬಗೆಹರಿಸುವ ಒಂದು ವಿಧದೋಪಾದಿ ದೇವರ ವಾಕ್ಯವು ಪ್ರತ್ಯೇಕವಾಸವನ್ನು ಉತ್ತೇಜಿಸುವುದಿಲ್ಲ. ಆದರೆ ಹೆಂಡತಿಯೊಬ್ಬಳು ತನ್ನ ಗಂಡನನ್ನು—(1) ಅವನು ತನ್ನ ಕುಟುಂಬವನ್ನು ಬೆಂಬಲಿಸಲು ಮೊಂಡುತನದಿಂದ ನಿರಾಕರಿಸುವುದಾದರೆ, (2) ಆಕೆಯ ಆರೋಗ್ಯ ಹಾಗೂ ಜೀವವು ಗಂಡಾಂತರದಲ್ಲಿರುವಷ್ಟು ಅವನು ಹಿಂಸಾತ್ಮಕನಾಗಿರುವುದಾದರೆ, ಅಥವಾ (3) ಅವನ ವಿಪರೀತ ವಿರೋಧವು ಯೆಹೋವನನ್ನು ಆರಾಧಿಸುವುದನ್ನು ಆಕೆಗೆ ಅಸಾಧ್ಯಮಾಡುವುದಾದರೆ—ಬಿಟ್ಟುಬಿಡಲು ಆರಿಸಿಕೊಳ್ಳಬಹುದು.—1 ಕೊರಿಂಥ 7:12, 13.

7. ವಿವಾಹ ಸಂಗಾತಿಗಳು ಒಬ್ಬರಿಗೊಬ್ಬರು ನಂಬಿಗಸ್ತರಾಗಿರಬೇಕು. ವ್ಯಭಿಚಾರವು ದೇವರ ವಿರುದ್ಧ ಹಾಗೂ ಒಬ್ಬನ ಸಂಗಾತಿಯ ವಿರುದ್ಧವಾದ ಪಾಪವಾಗಿದೆ. (ಇಬ್ರಿಯ 13:4) ಪುನರ್ವಿವಾಹಕ್ಕೆ ಅನುಮತಿ ನೀಡುತ್ತಾ, ವಿವಾಹ ವಿಚ್ಛೇದನಕ್ಕಾಗಿರುವ ಏಕೈಕ ಶಾಸ್ತ್ರೀಯ ಆಧಾರವು, ವಿವಾಹದ ಹೊರಗಿನ ಲೈಂಗಿಕ ಸಂಬಂಧಗಳೇ. (ಮತ್ತಾಯ 19:6-9; ರೋಮಾಪುರ 7:2, 3) ಶಾಸ್ತ್ರೀಯ ಆಧಾರಗಳಿಲ್ಲದೆ ಜನರು ವಿವಾಹ ವಿಚ್ಛೇದನಗೊಂಡು ಬೇರೆ ಯಾರನ್ನೊ ವಿವಾಹವಾಗುವಾಗ, ಯೆಹೋವನು ಅದನ್ನು ದ್ವೇಷಿಸುತ್ತಾನೆ.—ಮಲಾಕಿಯ 2:14-16.

[ಪುಟ 17ರಲ್ಲಿರುವ ಚಿತ್ರ]

ಹೆತ್ತವರು ತಮ್ಮ ಮಕ್ಕಳಿಗೆ ಉಪದೇಶ ನೀಡಿ, ಅವರನ್ನು ತಿದ್ದುವುದನ್ನು ದೇವರು ನಿರೀಕ್ಷಿಸುತ್ತಾನೆ

[ಪುಟ 17ರಲ್ಲಿರುವ ಚಿತ್ರ]

ಒಬ್ಬ ಪ್ರೀತಿಸುವ ತಂದೆಯು ತನ್ನ ಕುಟುಂಬಕ್ಕಾಗಿ ಭೌತಿಕವಾಗಿ ಹಾಗೂ ಆತ್ಮಿಕವಾಗಿ ಒದಗಿಸುತ್ತಾನೆ