ದೇವರ ರಾಜ್ಯವು ಏನು?
ಪಾಠ 6
ದೇವರ ರಾಜ್ಯವು ಏನು?
ದೇವರ ರಾಜ್ಯವು ಎಲ್ಲಿ ನೆಲಸಿರುತ್ತದೆ? (1)
ಅದರ ರಾಜನು ಯಾರು? (2)
ರಾಜನೊಂದಿಗೆ ಆಳುವುದರಲ್ಲಿ ಇತರರು ಭಾಗವಹಿಸುತ್ತಾರೊ? ಹಾಗಿರುವಲ್ಲಿ, ಎಷ್ಟು ಮಂದಿ? (3)
ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಾ ಇದ್ದೇವೆಂಬುದನ್ನು ಯಾವುದು ತೋರಿಸುತ್ತದೆ? (4)
ಭವಿಷ್ಯತ್ತಿನಲ್ಲಿ ದೇವರ ರಾಜ್ಯವು ಮಾನವಕುಲಕ್ಕಾಗಿ ಏನು ಮಾಡುವುದು? (5-7)
1. ಯೇಸು ಭೂಮಿಯ ಮೇಲಿದ್ದಾಗ, ದೇವರ ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಅವನು ತನ್ನ ಹಿಂಬಾಲಕರಿಗೆ ಕಲಿಸಿದನು. ಒಂದು ರಾಜ್ಯವು ಒಬ್ಬ ರಾಜನ ನಾಯಕತ್ವದಲ್ಲಿ ನಡೆಸಲ್ಪಡುವ ಒಂದು ಸರಕಾರವಾಗಿದೆ. ದೇವರ ರಾಜ್ಯವು ವಿಶೇಷವಾದೊಂದು ಸರಕಾರವಾಗಿದೆ. ಅದು ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದೆ ಮತ್ತು ಈ ಭೂಮಿಯ ಮೇಲೆ ಆಳಿಕೆ ನಡೆಸುವುದು. ಅದು ದೇವರ ಹೆಸರನ್ನು ಪವಿತ್ರೀಕರಿಸುವುದು ಅಥವಾ ಪರಿಶುದ್ಧ ಮಾಡುವುದು. ಅದು ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರಿರುವ ಪ್ರಕಾರ ಭೂಮಿಯ ಮೇಲೆ ನೆರವೇರುವಂತೆ ಮಾಡುವುದು.—ಮತ್ತಾಯ 6:9, 10.
2. ಯೇಸು ತನ್ನ ರಾಜ್ಯದ ರಾಜನಾಗುವನೆಂದು ದೇವರು ವಾಗ್ದಾನಿಸಿದನು. (ಲೂಕ 1:30-33) ಯೇಸು ಭೂಮಿಯ ಮೇಲಿದ್ದಾಗ, ತಾನೊಬ್ಬ ದಯಾಪರ, ನ್ಯಾಯವಂತ, ಹಾಗೂ ಪರಿಪೂರ್ಣ ಅರಸನಾಗಿರುವೆನೆಂಬುದನ್ನು ರುಜುಪಡಿಸಿದನು. ಅವನು ಸ್ವರ್ಗಕ್ಕೆ ಹಿಂದಿರುಗಿದಾಗ, ಕೂಡಲೆ ದೇವರ ರಾಜ್ಯದ ರಾಜನಾಗಿ ಪಟ್ಟಾಭಿಷೇಕಿಸಲ್ಪಡಲಿಲ್ಲ. (ಇಬ್ರಿಯ 10:12, 13) 1914ರಲ್ಲಿ, ಯೆಹೋವನು ಯೇಸುವಿಗೆ ತಾನು ವಾಗ್ದಾನಿಸಿದ್ದ ಅಧಿಕಾರವನ್ನು ಕೊಟ್ಟನು. ಅಂದಿನಿಂದ, ಯೇಸು ಸ್ವರ್ಗದಲ್ಲಿ ಯೆಹೋವನ ನೇಮಿತ ರಾಜನಾಗಿ ಆಳಿಕೆ ನಡೆಸಿದ್ದಾನೆ.—ದಾನಿಯೇಲ 7:13, 14.
3. ಸ್ವರ್ಗಕ್ಕೆ ಹೋಗುವಂತೆ ಯೆಹೋವನು ಭೂಮಿಯಿಂದ ಕೆಲವು ನಂಬಿಗಸ್ತ ಪುರುಷರನ್ನೂ ಸ್ತ್ರೀಯರನ್ನೂ ಆರಿಸಿದ್ದಾನೆ. ಅವರು ಯೇಸುವಿನೊಂದಿಗೆ ಮಾನವಕುಲದ ಮೇಲೆ ರಾಜರಂತೆ, ನ್ಯಾಯಧೀಶರಂತೆ ಹಾಗೂ ಯಾಜಕರಂತೆ ಆಳುವರು. (ಲೂಕ 22:28-30; ಪ್ರಕಟನೆ 5:9, 10) ತನ್ನ ರಾಜ್ಯದಲ್ಲಿನ ಈ ಸಹರಾಜರನ್ನು ಯೇಸು “ಚಿಕ್ಕ ಹಿಂಡು” ಎಂಬುದಾಗಿ ಕರೆದನು. ಅವರ ಸಂಖ್ಯೆಯು 1,44,000 ಆಗಿದೆ.—ಲೂಕ 12:32; ಪ್ರಕಟನೆ 14:1-3.
4. ಯೇಸು ರಾಜನಾದ ಕೂಡಲೆ, ಅವನು ಸೈತಾನನನ್ನು ಮತ್ತು ಅವನ ದುಷ್ಟ ದೂತರನ್ನು ಸ್ವರ್ಗದ ಹೊರಗೆ, ಭೂಮಿಯ ಪರಿಸರಕ್ಕೆ ದೊಬ್ಬಿಬಿಟ್ಟನು. ಆದುದರಿಂದಲೇ 1914ರಿಂದ ಇಲ್ಲಿ ಭೂಮಿಯ ಮೇಲೆ ವಿಷಯಗಳು ಇಷ್ಟೊಂದು ಕೆಟ್ಟದಾಗಿ ಪರಿಣಮಿಸಿವೆ. (ಪ್ರಕಟನೆ 12:9, 12) ಯುದ್ಧಗಳು, ಬರಗಾಲಗಳು, ಅಂಟು ರೋಗಗಳು, ಹೆಚ್ಚುತ್ತಿರುವ ನಿಯಮರಾಹಿತ್ಯ—ಇವೆಲ್ಲವು ಯೇಸು ಆಳುತ್ತಿದ್ದಾನೆ ಮತ್ತು ಈ ವ್ಯವಸ್ಥೆಯು ಅದರ ಕಡೇ ದಿವಸಗಳಲ್ಲಿದೆ ಎಂಬುದನ್ನು ಸೂಚಿಸುವ ಒಂದು “ಸೂಚನೆ”ಯ ಭಾಗವಾಗಿವೆ.—ಮತ್ತಾಯ 24:3, 7, 8, 12; ಲೂಕ 21:10, 11; 2 ತಿಮೊಥೆಯ 3:1-5.
5. ಬೇಗನೆ ಯೇಸು, ಒಬ್ಬ ಕುರುಬನು ಕುರಿಗಳನ್ನೂ ಆಡುಗಳನ್ನೂ ಬೇರ್ಪಡಿಸುವಂತೆ ಜನರನ್ನು ಬೇರ್ಪಡಿಸುತ್ತಾ, ಅವರಿಗೆ ನ್ಯಾಯತೀರ್ಪು ಮಾಡುವನು. “ಕುರಿಗಳು,” ತಮ್ಮನ್ನು ಅವನ ನಿಷ್ಠಾವಂತ ಪ್ರಜೆಗಳೋಪಾದಿ ರುಜುಪಡಿಸಿಕೊಂಡಿರುವ ಜನರಾಗಿದ್ದಾರೆ. ಅವರು ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವರು. “ಆಡುಗಳು,” ದೇವರ ರಾಜ್ಯವನ್ನು ತಿರಸ್ಕರಿಸಿರುವ ಜನರಾಗಿದ್ದಾರೆ. (ಮತ್ತಾಯ 25:31-34, 46) ಹತ್ತಿರದ ಭವಿಷ್ಯತ್ತಿನಲ್ಲಿ, ಯೇಸು ಆಡುಸದೃಶರೆಲ್ಲರನ್ನು ನಾಶಪಡಿಸುವನು. (2 ಥೆಸಲೊನೀಕ 1:6-9) ನೀವು ಯೇಸುವಿನ ‘ಕುರಿಗಳಲ್ಲಿ’ ಒಬ್ಬರಾಗಿರಲು ಬಯಸುವುದಾದರೆ, ನೀವು ರಾಜ್ಯದ ಸಂದೇಶಕ್ಕೆ ಕಿವಿಗೊಡಬೇಕು ಮತ್ತು ನೀವು ಕಲಿಯುವ ವಿಷಯಕ್ಕನುಸಾರ ಕ್ರಿಯೆಗೈಯಬೇಕು.—ಮತ್ತಾಯ 24:14.
6. ಈಗ ಭೂಮಿಯು, ಅನೇಕ ದೇಶಗಳಾಗಿ ವಿಂಗಡಿಸಲ್ಪಟ್ಟಿದೆ. ಪ್ರತಿಯೊಂದಕ್ಕೆ ತನ್ನದೇ ಆದ ಸರಕಾರವಿದೆ. ಈ ರಾಷ್ಟ್ರಗಳು ಆಗಿಂದಾಗ್ಗೆ ಪರಸ್ಪರ ಹೋರಾಡುತ್ತವೆ. ಆದರೆ ದೇವರ ರಾಜ್ಯವು ಎಲ್ಲ ಮಾನವ ಸರಕಾರಗಳನ್ನು ಸ್ಥಾನಪಲ್ಲಟಗೊಳಿಸುವುದು. ಅದು ಇಡೀ ಭೂಮಿಯ ಮೇಲೆ ಏಕೈಕ ಸರಕಾರವಾಗಿ ಆಳುವುದು. (ದಾನಿಯೇಲ 2:44) ಆಗ ಯುದ್ಧ, ಅಪರಾಧ, ಮತ್ತು ಹಿಂಸಾಕೃತ್ಯವು ಇನ್ನಿರದು. ಸಕಲ ಜನರು ಶಾಂತಿ ಮತ್ತು ಐಕ್ಯದಲ್ಲಿ ಒಟ್ಟಿಗೆ ಜೀವಿಸುವರು.—ಮೀಕ 4:3, 4.
7. ಯೇಸುವಿನ ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ, ನಂಬಿಗಸ್ತ ಮಾನವರು ಪರಿಪೂರ್ಣರಾಗುವರು, ಮತ್ತು ಇಡೀ ಭೂಮಿಯು ಒಂದು ಪ್ರಮೋದವನವಾಗುವುದು. ಸಾವಿರ ವರ್ಷಗಳ ಕೊನೆಯಷ್ಟರಲ್ಲಿ, ತಾನು ಮಾಡುವಂತೆ ದೇವರು ಕೇಳಿಕೊಂಡ ಎಲ್ಲವನ್ನು ಯೇಸು ಮಾಡಿರುವನು. ಅನಂತರ ಅವನು ರಾಜ್ಯವನ್ನು ಪುನಃ ತನ್ನ ತಂದೆಗೆ ಒಪ್ಪಿಸಿಬಿಡುವನು. (1 ಕೊರಿಂಥ 15:24) ದೇವರ ರಾಜ್ಯವು ಏನು ಮಾಡುವುದು ಎಂಬುದರ ಕುರಿತು ನಿಮ್ಮ ಸ್ನೇಹಿತರಿಗೆ ಹಾಗೂ ಪ್ರಿಯರಿಗೆ ಏಕೆ ಹೇಳಬಾರದು?
[ಪುಟ 13ರಲ್ಲಿರುವ ಚಿತ್ರ]
ಯೇಸುವಿನ ಆಳಿಕೆಯಲ್ಲಿ, ದ್ವೇಷ ಅಥವಾ ಪೂರ್ವಾಗ್ರಹವು ಇನ್ನಿರದು