ದೇವರ ಸೇವಕರು ಶುದ್ಧರಾಗಿರಬೇಕು
ಪಾಠ 9
ದೇವರ ಸೇವಕರು ಶುದ್ಧರಾಗಿರಬೇಕು
ನಾವು ಪ್ರತಿಯೊಂದು ವಿಧದಲ್ಲಿ ಏಕೆ ಶುದ್ಧರಾಗಿರಬೇಕು? (1)
ಆತ್ಮಿಕವಾಗಿ ಶುದ್ಧರಾಗಿರುವುದು (2)
ನೈತಿಕವಾಗಿ ಶುದ್ಧರಾಗಿರುವುದು (3) ಮಾನಸಿಕವಾಗಿ ಶುದ್ಧರಾಗಿರುವುದು (4) ಶಾರೀರಿಕವಾಗಿ ಶುದ್ಧರಾಗಿರುವುದು ಏನನ್ನು ಅರ್ಥೈಸುತ್ತದೆ? (5)
ಯಾವ ವಿಧಗಳ ಅಶುದ್ಧ ಮಾತುಕತೆಯನ್ನು ನಾವು ತೊರೆಯಬೇಕು? (6)
1. ಯೆಹೋವ ದೇವರು ಶುದ್ಧನೂ ಪವಿತ್ರನೂ ಆಗಿದ್ದಾನೆ. ತನ್ನ ಆರಾಧಕರು ಆತ್ಮಿಕವಾಗಿ, ನೈತಿಕವಾಗಿ, ಮಾನಸಿಕವಾಗಿ, ಮತ್ತು ಶಾರೀರಿಕವಾಗಿ ಶುದ್ಧರಾಗಿ ಉಳಿಯುವಂತೆ ಆತನು ನಿರೀಕ್ಷಿಸುತ್ತಾನೆ. (1 ಪೇತ್ರ 1:16) ದೇವರ ದೃಷ್ಟಿಯಲ್ಲಿ ಶುದ್ಧರಾಗಿ ಉಳಿಯಲು ನಿಜವಾದ ಪ್ರಯತ್ನದ ಅಗತ್ಯವಿದೆ. ನಾವು ಅಶುದ್ಧವಾದ ಒಂದು ಲೋಕದಲ್ಲಿ ಜೀವಿಸುತ್ತೇವೆ. ತಪ್ಪನ್ನು ಮಾಡುವ ನಮ್ಮ ಸ್ವಂತ ಪ್ರವೃತ್ತಿಗಳ ವಿರುದ್ಧವೂ ನಮಗೊಂದು ಹೋರಾಟವಿದೆ. ಆದರೆ ನಾವು ಬಿಟ್ಟುಕೊಡಬಾರದು.
2. ಆತ್ಮಿಕ ಶುದ್ಧತೆ: ನಾವು ಯೆಹೋವನಿಗೆ ಸೇವೆ ಸಲ್ಲಿಸಲು ಬಯಸುವುದಾದರೆ, ಸುಳ್ಳು ಧರ್ಮದ ಯಾವುದೇ ಬೋಧನೆಗಳಿಗೆ ಅಥವಾ ಪದ್ಧತಿಗಳಿಗೆ ನಾವು ಅಂಟಿಕೊಂಡಿರಲು ಸಾಧ್ಯವಿಲ್ಲ. ನಾವು ಸುಳ್ಳು ಧರ್ಮದಿಂದ ಹೊರಬರಬೇಕು ಮತ್ತು ಅದನ್ನು ಯಾವ ವಿಧದಲ್ಲೂ ಬೆಂಬಲಿಸಬಾರದು. (2 ಕೊರಿಂಥ 6:14-18; ಪ್ರಕಟನೆ 18:4) ಒಮ್ಮೆ ನಾವು ದೇವರ ಕುರಿತಾದ ಸತ್ಯವನ್ನು ಕಲಿತ ಬಳಿಕ, ಅಸತ್ಯವನ್ನು ಕಲಿಸುವ ಜನರಿಂದ ತಪ್ಪು ದಾರಿಗೆ ಎಳೆಯಲ್ಪಡದಂತೆ ನಾವು ಜಾಗರೂಕರಾಗಿರಬೇಕು.—2 ಯೋಹಾನ 10, 11.
3. ನೈತಿಕ ಶುದ್ಧತೆ: ತನ್ನ ಆರಾಧಕರು ಎಲ್ಲ ಸಮಯಗಳಲ್ಲಿ ಸತ್ಯ ಕ್ರೈಸ್ತರೋಪಾದಿ ವರ್ತಿಸುವಂತೆ ಯೆಹೋವನು ಬಯಸುತ್ತಾನೆ. (1 ಪೇತ್ರ 2:12) ಆತನು ನಾವು ಮಾಡುವ ಎಲ್ಲವನ್ನು—ಗುಪ್ತವಾಗಿ ಮಾಡುವ ವಿಷಯಗಳನ್ನೂ—ನೋಡುತ್ತಾನೆ. (ಇಬ್ರಿಯ 4:13) ನಾವು ಲೈಂಗಿಕ ಅನೈತಿಕತೆ ಹಾಗೂ ಈ ಲೋಕದ ಇತರ ಅಶುದ್ಧ ಆಚರಣೆಗಳನ್ನು ತೊರೆಯಬೇಕು.—1 ಕೊರಿಂಥ 6:9-11.
4. ಮಾನಸಿಕ ಶುದ್ಧತೆ: ನಮ್ಮ ಮನಸ್ಸುಗಳನ್ನು ನಾವು ಶುದ್ಧ, ನಿರ್ಮಲವಾದ ಆಲೋಚನೆಗಳಿಂದ ತುಂಬಿಸುವುದಾದರೆ, ನಮ್ಮ ನಡತೆಯೂ ಶುದ್ಧವಾಗಿರುವುದು. (ಫಿಲಿಪ್ಪಿ 4:8) ಆದರೆ ನಾವು ಅಶುದ್ಧ ವಿಷಯಗಳ ಮೇಲೆ ಕೇಂದ್ರೀಕರಿಸುವುದಾದರೆ, ಅದು ದುಷ್ಟ ಕೃತ್ಯಗಳಲ್ಲಿ ಪರಿಣಮಿಸುವುದು. (ಮತ್ತಾಯ 15:18-20) ನಮ್ಮ ಮನಸ್ಸುಗಳನ್ನು ಮಲಿನಗೊಳಿಸಬಲ್ಲ ಮನೋರಂಜನೆಯ ಬಗೆಗಳನ್ನು ನಾವು ತೊರೆಯಬೇಕು. ದೇವರ ವಾಕ್ಯವನ್ನು ಅಭ್ಯಸಿಸುವ ಮೂಲಕ, ನಮ್ಮ ಮನಸ್ಸುಗಳನ್ನು ನಾವು ಶುದ್ಧವಾದ ಆಲೋಚನೆಗಳಿಂದ ತುಂಬಿಸಸಾಧ್ಯವಿದೆ.
5. ಶಾರೀರಿಕ ಶುದ್ಧತೆ: ಕ್ರೈಸ್ತರು ದೇವರನ್ನು ಪ್ರತಿನಿಧಿಸುವ ಕಾರಣ, ಅವರು ತಮ್ಮ ದೇಹಗಳನ್ನು ಮತ್ತು ಉಡುಗೆ ತೊಡುಗೆಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಪಾಯಿಖಾನೆಯ ಉಪಯೋಗದ ನಂತರ ನಮ್ಮ ಕೈಗಳನ್ನು ನಾವು ತೊಳೆದುಕೊಳ್ಳಬೇಕು, ಮತ್ತು ಊಟಗಳನ್ನು ಮಾಡುವ ಮೊದಲು ಅಥವಾ ಆಹಾರವನ್ನು ಮುಟ್ಟುವ ಮೊದಲು ನಾವು ಅವುಗಳನ್ನು ತೊಳೆದುಕೊಳ್ಳಬೇಕು. ಹೊಲಸನ್ನು ತೊಲಗಿಸುವ ಸರಿಯಾದ ವ್ಯವಸ್ಥೆ ನಿಮಗಿರದಿದ್ದಲ್ಲಿ, ಪಾಯಿಖಾನೆಯ ಕಸವನ್ನು ಹೂಳಿಡಬೇಕು. (ಧರ್ಮೋಪದೇಶಕಾಂಡ 23:12, 13) ಶಾರೀರಿಕವಾಗಿ ಶುದ್ಧರಾಗಿರುವುದು ಒಳ್ಳೆಯ ಆರೋಗ್ಯಕ್ಕೆ ನೆರವನ್ನು ನೀಡುತ್ತದೆ. ಕ್ರೈಸ್ತನೊಬ್ಬನ ಮನೆಯು ಒಳಗೂ ಹೊರಗೂ ನೀಟಾಗಿಯೂ ಶುದ್ಧವಾಗಿಯೂ ಇರಬೇಕು. ಸಮಾಜದಲ್ಲಿ ಅದು ಒಂದು ಒಳ್ಳೆಯ ಉದಾಹರಣೆಯಂತೆ ಎದ್ದುಕಾಣಬೇಕು.
6. ಶುದ್ಧವಾದ ಮಾತುಕತೆ: ದೇವರ ಸೇವಕರು ಯಾವಾಗಲೂ ಸತ್ಯವನ್ನಾಡಬೇಕು. ಸುಳ್ಳುಗಾರರು ದೇವರ ರಾಜ್ಯವನ್ನು ಪ್ರವೇಶಿಸರು. (ಎಫೆಸ 4:25; ಪ್ರಕಟನೆ 21:8) ಕ್ರೈಸ್ತರು ಕೆಟ್ಟ ಭಾಷೆಯನ್ನು ಬಳಸುವುದಿಲ್ಲ. ಕೀಳ್ಮಟ್ಟದ ತಮಾಷೆ ಅಥವಾ ಅಶುದ್ಧವಾದ ಕಥೆಗಳಿಗೆ ಅವರು ಕಿವಿಗೊಡುವುದಿಲ್ಲ ಅಥವಾ ಹೇಳುವುದಿಲ್ಲ. ತಮ್ಮ ಶುದ್ಧವಾದ ಮಾತುಕತೆಯ ಕಾರಣದಿಂದ, ಅವರು ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಮತ್ತು ನೆರೆಹೊರೆಯಲ್ಲಿ ಭಿನ್ನರಾಗಿ ಎದ್ದುಕಾಣುತ್ತಾರೆ.—ಎಫೆಸ 4:29, 31; 5:3.
[ಪುಟ 18, 19ರಲ್ಲಿರುವ ಚಿತ್ರ]
ದೇವರ ಸೇವಕರು ಎಲ್ಲ ವಿಷಯಗಳಲ್ಲಿ ಶುದ್ಧರಾಗಿರಬೇಕು