ಪಾಠ 5
“ಮ್ಯಾಜಿಕ್, ಮಾಟಮಂತ್ರ ಮತ್ತು ವಾಮಾಚಾರದ ಬಗ್ಗೆ ಇರೋ ಸತ್ಯ”
1. ಮ್ಯಾಜಿಕ್, ಮಾಟಮಂತ್ರ ಮತ್ತು ವಾಮಾಚಾರವನ್ನ ಎಷ್ಟು ಜನ ನಂಬ್ತಾರೆ?
“ಆಫ್ರಿಕಾದ ಜನ್ರು ಮ್ಯಾಜಿಕ್ನ್ನ ನಂಬ್ತಾರಾ ಅನ್ನೋ ಪ್ರಶ್ನೆಯನ್ನ ಕೇಳೋ ಅಗತ್ಯ ಇಲ್ಲ. ಯಾಕಂದ್ರೆ ಅಲ್ಲಿರೋ ಎಲ್ಲಾ ರೀತಿಯ ಜನ್ರು ಅದನ್ನ ನಂಬ್ತಾರೆ” ಅಂತ ಆಫ್ರಿಕನ್ ಟ್ರೆಡಿಷನಲ್ ರಿಲೀಜಿಯನ್ ಅನ್ನೋ ಪುಸ್ತಕ ಹೇಳುತ್ತೆ. ಅಲ್ಲಿ ಜಾಸ್ತಿ ಓದಿದವರು ಮತ್ತು ಓದದೇ ಇರೋರು ಮ್ಯಾಜಿಕ್ನ್ನ ನಂಬ್ತಾರೆ. ಚರ್ಚಿನ ಮುಖಂಡರು ಮತ್ತು ಮುಸ್ಲಿಮ್ ನಾಯಕರು ಕೂಡ ಇದನ್ನ ನಂಬ್ತಾರೆ.
2. ಮಾಟಮಂತ್ರ ಮಾಡೋ ಶಕ್ತಿ ಎಲ್ಲಿಂದ ಬರುತ್ತೆ ಅಂತ ಹೆಚ್ಚಿನ ಜನ್ರು ನಂಬ್ತಾರೆ?
2 ಆಫ್ರಿಕಾದಲ್ಲಿ ಹೆಚ್ಚು ಜನ ಒಂದು ನಿಗೂಢ ಶಕ್ತಿ ಇದೆ ಅಂತ ನಂಬ್ತಾರೆ. ದೇವರು ಅದನ್ನ ನಿಯಂತ್ರಿಸ್ತಿದ್ದಾನೆ ಅಂತ ಅವರು ನೆನಸ್ತಾರೆ. ಅಷ್ಟೇ ಅಲ್ಲ, ಇನ್ನೂ ಕೆಲವರು, ಸತ್ತವರ ಆತ್ಮಗಳು ಆ ಶಕ್ತಿಯನ್ನ ಬಳಸಬಹುದು. ಮನುಷ್ಯರು ಕೂಡ ಈ ಶಕ್ತಿಯನ್ನ ಒಳ್ಳೇದು ಅಥವಾ ಕೆಟ್ಟದ್ದು ಮಾಡೋಕೆ ಉಪಯೋಗಿಸ್ತಾರೆ ಅಂತ ನಂಬ್ತಾರೆ.
3. ಬೇರೆಯವರಿಗೆ ಹಾನಿ ಮಾಡೋಕೆ ಮ್ಯಾಜಿಕ್ನ್ನ ಬಳಸೋದರ ಬಗ್ಗೆ ಜನ ಏನಂತ ನಂಬ್ತಾರೆ?
3 ಶತ್ರುಗಳಿಗೆ ಹಾನಿ ಮಾಡೋಕೆ ಮ್ಯಾಜಿಕ್ನ್ನ ಬಳಸ್ತಾರೆ ಅಂತ ಜನ ನಂಬ್ತಾರೆ. ಉದಾಹರಣೆಗೆ, ಮ್ಯಾಜಿಕ್ ಮಾಡಿ ಬಾವಲಿಗಳನ್ನ, ಪಕ್ಷಿಗಳನ್ನ, ಕೀಟಗಳನ್ನ ಮತ್ತು ಬೇರೆ ಪ್ರಾಣಿಗಳನ್ನ ಜನ್ರ ಮೇಲೆ ದಾಳಿ ಮಾಡೋಕೆ ಕಳಿಸಬಹುದು ಅಂತ ಅವರು ನಂಬ್ತಾರೆ. ಅಷ್ಟೇ ಅಲ್ಲ ಇಂಥ ಮಾಟಮಂತ್ರದಿಂದನೇ ಜಗಳ, ಬಂಜೆತನ, ಆರೋಗ್ಯ ಸಮಸ್ಯೆ, ಸಾವು ಕೂಡ ಬರೋ ತರ ಮಾಡಬಹುದು ಅಂತ ನೆನಸ್ತಾರೆ.
4. ಮಾಟಮಂತ್ರ ಮಾಡೋ ಸ್ತ್ರೀಯರ ಬಗ್ಗೆ ಅನೇಕ ಜನ್ರು ಏನು ನಂಬ್ತಾರೆ? ಈ ಹಿಂದೆ ಮಾಟಮಂತ್ರ ಮಾಡಿದ ಸ್ತ್ರೀಯರು ಏನಂತ ಒಪ್ಕೊಂಡಿದ್ದಾರೆ?
4 ಮಾಟಮಂತ್ರ ಮಾಡೋ ಸ್ತ್ರೀಯರು ಬೇರೆಯವರಿಗೆ ಹಾನಿ ಮಾಡ್ತಾರೆ ಅಂತ ಜನ ನಂಬ್ತಾರೆ. ಅಷ್ಟೇ ಅಲ್ಲ, ಅವರು ರಾತ್ರಿ ಹೊತ್ತಲ್ಲಿ ತಮ್ಮ ಶರೀರವನ್ನ ಬಿಟ್ಟು ಬೇರೆ ಮಾಟಮಂತ್ರ ಮಾಡೋ ಸ್ತ್ರೀಯರನ್ನ ನೋಡೋಕೆ ಅಥವಾ ಶತ್ರುಗಳನ್ನ ನಾಶ ಮಾಡೋಕೆ ಹೋಗ್ತಾರೆ ಅಂತ ಜನ ನಂಬ್ತಾರೆ. ಆದ್ರೆ ಹೀಗಂತ, ಈ ಹಿಂದೆ ಮಾಟಮಂತ್ರ ಮಾಡ್ತಿದ್ದ ಕೆಲವು ಜನ್ರು ಹೇಳಿದ್ದಾರೆ. ಅದನ್ನ ಬಿಟ್ರೆ ಬೇರೆ ಯಾವುದೇ ಆಧಾರ ಇಲ್ಲ. ಉದಾಹರಣೆಗೆ, ಈ ಹಿಂದೆ ಮಾಟಮಂತ್ರ ಮಾಡ್ತಿದ್ದವರ (ಹೆಚ್ಚಾಗಿ ಹದಿಪ್ರಾಯದ ಹುಡುಗಿಯರ) ಬಗ್ಗೆ ಒಂದು ಆಫ್ರಿಕಾದ ಪುಸ್ತಕ ಹೀಗೆ ಹೇಳ್ತು: “ನಾನು ಆಕ್ಸಿಡೆಂಟ್ನಿಂದ 150 ಜನ ಸಾಯೋ ತರ ಮಾಡ್ದೆ.” “ನಾನು ಐದು ಮಕ್ಕಳ ರಕ್ತವನ್ನ ಕುಡಿದು ಅವರನ್ನ ಸಾಯಿಸಿದೆ.” “ನನ್ನ ಪ್ರೀತಿಯನ್ನ ಒಪ್ಕೊಂಡಿಲ್ಲ ಅಂತ ನನ್ನ ಮೂವರು ಬಾಯ್ಫ್ರೆಂಡ್ಗಳನ್ನ ಕೊಂದುಬಿಟ್ಟೆ.”
5. ಕೆಟ್ಟದ್ರಿಂದ ಕಾಪಾಡಿಕೊಳ್ಳೋಕೆ ಯಾವೆಲ್ಲಾ ತರದ ಮ್ಯಾಜಿಕ್ನ್ನ ಮಾಡ್ತಾರೆ?
5 ಕೆಟ್ಟದ್ರಿಂದ ಕಾಪಾಡೋಕೆ ಮ್ಯಾಜಿಕ್ನ್ನ ಬಳಸ್ತಾರೆ ಅಂತ ಜನ ನಂಬ್ತಾರೆ. ಉದಾಹರಣೆಗೆ, ಮ್ಯಾಜಿಕ್ ಮಾಡೋರು ಉಂಗುರಗಳನ್ನ ಅಥವಾ ಬ್ರೇಸ್ಲೆಟ್ಗಳನ್ನ ಹಾಕೊಳ್ತಾರೆ. ಅಷ್ಟೇ ಅಲ್ಲ, ಕೆಲವು ಔಷಧಿಗಳನ್ನ ಕುಡಿತಾರೆ ಅಥವಾ ಅದನ್ನ ತಮ್ಮ ದೇಹಕ್ಕೆ ಹಚ್ಕೊಳ್ತಾರೆ. ತಮ್ಮನ್ನ ತಾವು ಕಾಪಾಡ್ಕೊಳ್ಳೋಕೆ ಕೆಲವು ವಸ್ತುಗಳನ್ನ ತಮ್ಮ ಮನೆಯಲ್ಲಿ ಇಟ್ಕೊಳ್ತಾರೆ. ಅವರು ಕುರಾನ್ ಅಥವಾ ಬೈಬಲಿನಲ್ಲಿರೋ ಮಾತುಗಳನ್ನ ತಾಯಿತದಲ್ಲಿ ಹಾಕೊಳ್ತಾರೆ.
ಸುಳ್ಳು ಮತ್ತು ವಂಚನೆ
6. ಸೈತಾನ ಮತ್ತು ಅವನ ದೂತರು ಹಿಂದೆ ಏನೆಲ್ಲಾ ಮಾಡಿದ್ರು ಮತ್ತು ಅವರಿಗೆ ಎಷ್ಟು ಶಕ್ತಿ ಇದೆ?
6 ಸೈತಾನ ಮತ್ತು ಅವನ ದೂತರು ನಮಗೆ ಶತ್ರುಗಳು ಅನ್ನೋದು ನೂರಕ್ಕೆ ನೂರು ಸತ್ಯ. ಅಷ್ಟೇ ಅಲ್ಲ, ಅವರು ನಮ್ಮನ್ನ ಕೈಗೊಂಬೆ ತರ ಆಡಿಸ್ತಾರೆ. ಈ ತರ ಅವರು ಹಿಂದೆ ಕೂಡ ತುಂಬ ಜನ್ರನ್ನ ಮತ್ತು ಪ್ರಾಣಿಗಳನ್ನ ತಮ್ಮ ಹಿಡಿತದಲ್ಲಿ ಇಡ್ಕೊಂಡಿದ್ರು. (ಮತ್ತಾಯ 12:43-45) ಸೈತಾನ ಮತ್ತು ಅವನ ದೂತರಿಗೆ ಹೆಚ್ಚು ಶಕ್ತಿಯಿದೆ ಅನ್ನೋದು ನಿಜ. ಆದ್ರೆ ಅವರು ನಮಗೆ ಏನ್ ಬೇಕಾದ್ರೂ ಮಾಡಬಹುದು ಅಂತ ಇದ್ರ ಅರ್ಥ ಅಲ್ಲ.
7. ನಾವು ಏನನ್ನ ನಂಬಬೇಕು ಅನ್ನೋದು ಸೈತಾನನ ಉದ್ದೇಶ ಮತ್ತು ಅದಕ್ಕೊಂದು ಉದಾಹರಣೆ ಕೊಡಿ?
7 ವಂಚನೆಗೆ ಹೆಸರುವಾಸಿನೇ ಸೈತಾನ. ತನಗೆ ತುಂಬ ಶಕ್ತಿಯಿದೆ ಅಂತ ಎಲ್ಲರು ನೆನಸಬೇಕು ಅನ್ನೋದೇ ಅವನ ಗುರಿ. ಉದಾಹರಣೆಗೆ: ಆಫ್ರಿಕಾ ದೇಶದಲ್ಲಿ ಒಂದು ಯುದ್ಧ ನಡೆಯುತ್ತಿರುವಾಗ ತಮ್ಮ ಎದುರಾಳಿಯನ್ನ ಎದುರಿಸೋಕೆ ಸೈನಿಕರು ಒಂದು ತಂತ್ರೋಪಾಯ ಮಾಡಿದ್ರು. ಗುಂಡುಗಳನ್ನ ಮತ್ತು ಬಾಂಬುಗಳನ್ನ ಹಾರಿಸೋ ಯಂತ್ರಗಳು ತಮ್ಮ ಹತ್ತಿರ ಇದೆ ಅಂತ ತೋರಿಸೋಕೆ ಯುದ್ಧ ಮಾಡೋ ಮುಂಚೆನೇ ಒಂದು ಆಡಿಯೋ ರೆಕಾರ್ಡಿಂಗ್ನ್ನ ಹಾಕಿದ್ರು. ಇವರ ಹತ್ತಿರ ತುಂಬ ಆಯುಧಗಳಿವೆ ಅಂತ ಎದುರಾಳಿ ನಂಬಿ ಓಡಿಹೋಗಬೇಕು ಅನ್ನೋದೇ ಸೈನಿಕರ ಗುರಿ ಆಗಿತ್ತು. ಇದೇ ತರ, ಸೈತಾನ ಮಾಡ್ತಾನೆ. ಯೆಹೋವನಿಗಿಂತ ತನಗೆ ಜಾಸ್ತಿ ಶಕ್ತಿಯಿದೆ ಅಂತ ಎಲ್ಲರು ನಂಬಬೇಕು ಅನ್ನೋದು ಸೈತಾನನ ಉದ್ದೇಶ. ಈ ತರ ಹೆದರಿಸಿ, ಜನ್ರು ಯೆಹೋವನ ಇಷ್ಟ ಅಲ್ಲ, ತನ್ನ ಇಷ್ಟನೇ ಮಾಡಬೇಕು ಅಂತ ಕುತಂತ್ರ ಮಾಡ್ತಾನೆ. ಜನ್ರನ್ನ ಮೋಸ ಮಾಡೋಕೆ ಸೈತಾನ ಬಳಸೋ ಮೂರು ಸುಳ್ಳುಗಳನ್ನ ಈಗ ನೋಡೋಣ.
8. ಸೈತಾನ ಹೇಳೋ ಮೊದಲನೇ ಸುಳ್ಳು ಯಾವುದು?
8 ಸೈತಾನ ಹೇಳೋ ಮೊದಲನೇ ಸುಳ್ಳು ಯಾವುದಂದ್ರೆ: ಏನಾದ್ರೂ ಕೆಟ್ಟದಾದ್ರೆ ಅದಕ್ಕೊಂದು ಕಾರಣ ಇದ್ದೇ ಇರುತ್ತೆ ಅಂತ. ಯಾರಿಂದನೂ ಏನಾದ್ರೂ ಕೆಟ್ಟದಾದ್ರೆ ಅದು ಮಾಟಮಂತ್ರದಿಂದನೇ ಆಗುತ್ತೆ ಅಂತ ಜನ್ರನ್ನ ನಂಬಿಸ್ತಾನೆ. ಉದಾಹರಣೆಗೆ, ಒಂದು ಮಗು ಮಲೇರಿಯದಿಂದ ಸತ್ತು ಹೋದ್ರೆ ಅವನ ತಾಯಿ ಮಲೇರಿಯಾ ಬರೋದು ಸೊಳ್ಳೆಯಿಂದಾನೇ ಅಂತ ನಂಬ್ತಾಳೆ. ಆದರೆ ಅದ್ರ ಜೊತೆಗೆ, ಆ ಸೊಳ್ಳೆಯನ್ನ ಕಳಿಸಿರೋದು ಮಾಟಮಂತ್ರದಿಂದನೇ ಅಂತನೂ ನಂಬ್ತಾಳೆ.
9. ಎಲ್ಲಾ ಸಮಸ್ಯೆಗಳಿಗೆ ಕಾರಣ ಸೈತಾನನಲ್ಲ ಅಂತ ಬೈಬಲ್ ಹೇಗೆ ಹೇಳುತ್ತೆ?
9 ಸೈತಾನನು ಕೆಲವು ಸಮಸ್ಯೆಗಳನ್ನ ತರ್ತಾನೆ ನಿಜ. ಹಾಗಂತ ಪ್ರತಿಯೊಂದು ಸಮಸ್ಯೆಗೂ ಅವನೇ ಕಾರಣ ಅಂತಲ್ಲ. ಬೈಬಲ್ ಹೀಗೆ ಹೇಳುತ್ತೆ: “ವೇಗದ ಓಟಗಾರ ಯಾವಾಗ್ಲೂ ಗೆಲ್ಲಲ್ಲ, ಶೂರರಿಗೆ ಯಾವಾಗ್ಲೂ ಜಯ ಸಿಗಲ್ಲ, ವಿವೇಕಿಗಳಿಗೆ ಆಹಾರ ಯಾವಾಗ್ಲೂ ಸಿಗಲ್ಲ, ಬುದ್ಧಿವಂತರ ಹತ್ರ ಸಿರಿಸಂಪತ್ತು ಯಾವಾಗಲೂ ಇರಲ್ಲ, ಜ್ಞಾನಿಗಳಿಗೆ ಯಶಸ್ಸು ಯಾವಾಗ್ಲೂ ಸಿಗಲ್ಲ. ಯಾಕಂದ್ರೆ ನೆನಸದ ಸಮಯದಲ್ಲಿ ಅನಿರೀಕ್ಷಿತ ಘಟನೆಗಳು ಎಲ್ರ ಜೀವನದಲ್ಲೂ ನಡಿಯುತ್ತೆ.” (ಪ್ರಸಂಗಿ 9:11) ನೆನಸಿ, ಒಂದು ಓಟದಲ್ಲಿ ಒಬ್ಬ ವ್ಯಕ್ತಿ ಬೇರೆಯವರಿಗಿಂತ ತುಂಬ ವೇಗವಾಗಿ ಓಡಬಹುದು. ಆದರೆ ಅವನೇ ಗೆಲ್ತಾನೆ ಅಂತ ಹೇಳೋಕಾಗಲ್ಲ. ಯಾಕಂದ್ರೆ, “ಅನಿರೀಕ್ಷಿತ ಘಟನೆಗಳಿಂದ” ಅವನು ಸೋತು ಹೋಗಬಹುದು. ಉದಾಹರಣೆಗೆ, ಅವನು ಓಡುವಾಗ ಕಾಲು ಹಿಡ್ಕೊಂಡು ಬಿಡಬಹುದು, ಎಡವಿ ಬೀಳಬಹುದು, ಇಲ್ಲಾಂದ್ರೆ ಕಾಲಿಗೆ ಗಾಯ ಮಾಡ್ಕೊಬಹುದು. ಹಾಗಂತ ಇದು ಸೈತಾನನಿಂದಾನೋ ಅಥವಾ ಮಾಟಮಂತ್ರದಿಂದಾನೋ ಆಯ್ತು ಅಂತಲ್ಲ. ಇದು ಯಾರಿಗೆ ಬೇಕಾದ್ರೂ ಆಗಬಹುದು.
10. ಮಾಟಮಂತ್ರ ಮಾಡೋ ಸ್ತ್ರೀಯರ ಬಗ್ಗೆ ಸೈತಾನ ಯಾವ ಸುಳ್ಳು ಹೇಳಿದ್ದಾನೆ? ಅದು ಸುಳ್ಳು ಅಂತ ನಮಗೆ ಹೇಗೆ ಗೊತ್ತು?
10 ಸೈತಾನ ಹೇಳಿರೋ ಎರಡನೇ ಸುಳ್ಳು ಯಾವುದೆಂದ್ರೆ: ಮಾಟಮಂತ್ರ ಮಾಡೋ ಸ್ತ್ರೀಯರು ರಾತ್ರಿಯಲ್ಲಿ ತಮ್ಮ ದೇಹವನ್ನ ಬಿಟ್ಟು ಆತ್ಮಗಳಾಗಿ ತಿರಗಾಡ್ತಾರೆ. ಆಗ ಬೇರೆ ಮಾಟಮಂತ್ರ ಮಾಡೋ ಸ್ತ್ರೀಯರನ್ನ ನೋಡೋಕೆ ಅಥವಾ ತಮ್ಮ ಶತ್ರುಗಳ ಜೀವ ತೆಗೆಯೋಕೆ ಹೋಗ್ತಾರೆ. ಹಾಗಾದ್ರೆ ನಿಮಗೆ ಒಂದು ಪ್ರಶ್ನೆ: ಈ ಮಾಟಮಂತ್ರ ಮಾಡೋ ಸ್ತ್ರೀಯರು ತಮ್ಮ ದೇಹ ಬಿಟ್ಟು ಹೇಗೆ ತಿರಗಾಡೋಕೆ ಸಾಧ್ಯ? ನಾವು ಈಗಾಗಲೇ ಕಲಿತಿರೋ ಹಾಗೇ, ಆತ್ಮ ಅನ್ನೋದು ನಮ್ಮ ಜೀವವನ್ನ ಅಥವಾ ದೇಹವನ್ನ ಸೂಚಿಸುತ್ತೆ. ನಾವು ಸತ್ತಾಗ ಆತ್ಮ ನಮ್ಮ ದೇಹ ಬಿಟ್ಟು ಹೋಗಲ್ಲ. ಹಾಗಾದ್ರೆ ಮಾಟಮಂತ್ರ ಮಾಡೋ ಸ್ತ್ರೀಯರ ಬಗ್ಗೆ ಸೈತಾನ ಹಬ್ಬಿಸಿರೋದು ಶುದ್ಧ ಸುಳ್ಳು.
11. ಮಾಟಮಂತ್ರ ಮಾಡೋ ಸ್ತ್ರೀಯರು ತಮ್ಮ ದೇಹ ಬಿಟ್ಟು ಹೋಗಲ್ಲ ಅಂತ ನಮಗೆ ಹೇಗೆ ಗೊತ್ತು? ನೀವು ಅದನ್ನ ನಂಬ್ತೀರಾ?
11 ಆತ್ಮ ದೇಹವನ್ನ ಬಿಟ್ಟು ಹೊರಗೆ ಹೋಗಿ ಒಳ್ಳೇದು ಮಾಡಲ್ಲಾ ಅಥವಾ ಕೆಟ್ಟದ್ದು ಮಾಡಲ್ಲಾ. ಹಾಗಾಗಿ, ಮಾಟಮಂತ್ರ ಮಾಡೋ ಸ್ತ್ರೀಯರು ತಮ್ಮ ದೇಹವನ್ನ ಬಿಟ್ಟು ತಿರಗಾಡಲ್ಲ ಅಂತ ನಾವು ಹೇಳಬಹುದು. ಹಾಗಾಗಿ ಅವರು ‘ನಾವು ಈ ತರ ಮಾಡ್ತಿವಿ, ಆ ತರ ಮಾಡ್ತಿವಿ’ ಅಂತ ಹೇಳಿದ್ರೂ ಅವರ ಕೈಯಲ್ಲಿ ಏನೂ ಮಾಡೋಕಾಗಲ್ಲ.
12. ಜನ್ರು ತಾವು ಮಾಡ್ದೆ ಇರೋದನ್ನ ಮಾಡಿದ್ದೀವಿ ಅಂತ ನಂಬಿಸೋಕೆ ಸೈತಾನ ಏನು ಮಾಡ್ತಾನೆ?
12 ಮಾಟಮಂತ್ರ ಮಾಡೋ ಸ್ತ್ರೀಯರು ‘ನಾವು ನಿಜವಾಗ್ಲೂ ಆ ತರ ಮಾಡಿದ್ದೀವಿ, ಆ ತರ ಮಾಡಿದ್ದೀವಿ’ ಅಂತ ಹೇಳ್ತಾರೆ. ಹಾಗಾದ್ರೆ ಆ ವಿಷಯದ ಬಗ್ಗೆ ಏನು? ಜನ್ರು ಮಾಡ್ದೆ ಇರೋದನ್ನ ಮಾಡಿದ್ದೀವಿ ಅಂತ ನಂಬಿಸೋದೇ ಸೈತಾನನ ಕೆಲಸ. ಅವನು ಜನ್ರಿಗೆ ಮೋಡಿ ಮಾಡಿ, ನಾವು ಏನೇನೋ ನೋಡಿದ್ವಿ, ಕೇಳಿಸ್ಕೊಂಡ್ವಿ ಅಥವಾ ಮಾಡಿದ್ವಿ ಅಂತ ನೆನಸೋ ತರ ಮಾಡ್ತಾನೆ. ಈ ತರ ಸೈತಾನ ಜನ್ರನ್ನ ಯೆಹೋವನಿಂದ ದೂರ ಮಾಡ್ತಾನೆ. ಅಷ್ಟೇ ಅಲ್ಲ, ಬೈಬಲ್ ತಪ್ಪು ಅಂತ ಜನ್ರು ನೆನಸೋ ತರನೂ ಮಾಡ್ತಾನೆ.
13. (ಎ) ತಮ್ಮನ್ನ ಕಾಪಾಡ್ಕೊಳ್ಳೋಕೆ ಮಾಡೋ ಮಾಟಮಂತ್ರ ಸರಿನಾ? (ಬಿ) ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?
13 ಮೂರನೇ ಸುಳ್ಳು ಏನೆಂದ್ರೆ, ತಮ್ಮನ್ನ ತಾವು ಕಾಪಾಡ್ಕೊಳ್ಳೋಕೂ ಮಾಟಮಂತ್ರ ಮಾಡಬಹುದು ಅಂತ ಸೈತಾನ ಜನ್ರನ್ನ ನಂಬಿಸ್ತಾನೆ. ಮಾಟಮಂತ್ರದಲ್ಲೂ ಒಳ್ಳೇದಿದೆ ಕೆಟ್ಟದು ಇದೆ ಅಂತ ಬೈಬಲ್ ಹೇಳಲ್ಲ. ಬದಲಿಗೆ ಅದು ಎಲ್ಲಾ ತರದ ಮಾಟಮಂತ್ರವನ್ನ ಖಂಡಿಸುತ್ತೆ. ಇದ್ರ ಬಗ್ಗೆ ಇಸ್ರಾಯೇಲ್ಯರಿಗೆ ಯೆಹೋವನು ಏನು ಹೇಳಿದನು ಅಂತ ಗಮನಿಸಿ:
-
“ಮಾಟಮಂತ್ರ ಮಾಡಬಾರದು.”—ಯಾಜಕಕಾಂಡ 19:26.
-
“ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳೋರನ್ನ, ಭವಿಷ್ಯ ಹೇಳೋರನ್ನ ಅವರು ಯಾರೇ ಆಗಿರಲಿ ಸಾಯಿಸ್ಲೇಬೇಕು.”—ಯಾಜಕಕಾಂಡ 20:27.
-
“ಮಾಟಮಂತ್ರ ಮಾಡೋರು, ಶಾಸ್ತ್ರ ಹೇಳೋರು, ಮಂತ್ರವಾದಿಗಳು, ವಶೀಕರಣ ಮಾಡೋರು, ಭವಿಷ್ಯ ಹೇಳೋರು, . . ಯಾರೂ ನಿಮ್ಮಲ್ಲಿ ಇರಬಾರದು.”—ಧರ್ಮೋಪದೇಶಕಾಂಡ 18:10-14.
14. ಮಾಟಮಂತ್ರದ ಬಗ್ಗೆ ಯೆಹೋವನು ಯಾಕೆ ಈ ನಿಯಮಗಳನ್ನ ಕೊಟ್ಟಿದ್ದಾನೆ?
14 ತನ್ನ ಜನ್ರು ಮಾಟಮಂತ್ರ ಮಾಡಬಾರದು ಅನ್ನೋದು ಯೆಹೋವನ ಇಷ್ಟ ಅಂತ ಈ ನಿಯಮಗಳಿಂದ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಯೆಹೋವನು ತನ್ನ ಜನ್ರನ್ನ ಪ್ರೀತಿಸುತ್ತಾನೆ ಮತ್ತು ಅವರು ಮಾಟಮಂತ್ರಗಳಿಗೆ, ಮೂಢ ನಂಬಿಕೆಗಳಿಗೆ ದಾಸರಾಗಬಾರದು ಅಂತ ಆತನು ಬಯಸುತ್ತಾನೆ. ಹಾಗೂ ಕೆಟ್ಟ ದೇವದೂತರ ಕೈಗೊಂಬೆಗಳಾಗಬಾರದು ಅಂತನೇ ಯೆಹೋವನು ಈ ನಿಯಮಗಳನ್ನ ಕೊಟ್ಟಿದ್ದಾನೆ.
15. ಸೈತಾನನಿಗಿಂತ ಯೆಹೋವನೇ ಶಕ್ತಿಶಾಲಿ ಅಂತ ಬೈಬಲ್ನಿಂದ ಹೇಗೆ ಗೊತ್ತಾಗುತ್ತೆ?
15 ಸೈತಾನ ಮತ್ತು ಅವನ ದೂತರಿಗೆ ಏನು ಮಾಡೋಕಾಗುತ್ತೆ ಏನು ಮಾಡೋಕಾಗಲ್ಲ ಅಂತ ಬೈಬಲ್ ಪ್ರತಿಯೊಂದು ವಿವರಣೆ ಕೊಡಲ್ಲ. ಆದ್ರೆ ಅವನಿಗಿಂತ ಯೆಹೋವ ತುಂಬಾ ಶಕ್ತಿಶಾಲಿ ಅಂತ ಅದು ಹೇಳುತ್ತೆ. ಹೇಗೆ? ಯೆಹೋವ ದೇವರು ಸೈತಾನನ ಸ್ವರ್ಗದಿಂದ ಭೂಮಿಗೆ ತಳ್ಳಿಬಿಟ್ರು. (ಪ್ರಕಟನೆ 12:9) ಸೈತಾನ ಯೋಬನನ್ನ ಪರೀಕ್ಷಿಸಬಹುದಾ ಅಂತ ಯೆಹೋವನ ಹತ್ತಿರ ಅನುಮತಿ ಕೇಳಿದ. ಅಷ್ಟೇ ಅಲ್ಲ, ಅವನ ಜೀವ ಮಾತ್ರ ತೆಗಿಬಾರದು ಅಂತ ಯೆಹೋವನು ಹೇಳಿದ್ದ ಮಾತನ್ನ ಸೈತಾನ ಕೇಳಿದ.—ಯೋಬ 2:4-6.
16. ನಮ್ಮನ್ನ ಯಾರು ಕಾಪಾಡ್ತಾರೆ?
16 ಜ್ಞಾನೋಕ್ತಿ 18:10 ಹೀಗೆ ಹೇಳುತ್ತೆ: “ಯೆಹೋವನ ಹೆಸ್ರು ಬಲವಾದ ಕೋಟೆ. ನೀತಿವಂತ ಅದ್ರೊಳಗೆ ಓಡಿಹೋಗಿ ರಕ್ಷಣೆ ಪಡೀತಾನೆ.” ಅದ್ರ ಅರ್ಥ ಯೆಹೋವನೊಬ್ಬನೇ ನಮ್ಮನ್ನ ರಕ್ಷಿಸೋಕೆ ಸಾಧ್ಯ. ದೇವಸೇವಕರು ಸೈತಾನ ಮತ್ತು ಅವನ ದೂತರಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳೋಕೆ ತಾಯಿತಗಳನ್ನ ಅಥವಾ ಯಾವುದೇ ಔಷಧಿಗಳನ್ನ ತಗೊಳಲ್ಲ. ಮಂತ್ರವಾದಿಗಳಿಗೂ ಅವರು ಹೆದರಲ್ಲ. ಬದಲಿಗೆ ಅವರು ಈ ಮಾತನ್ನ ನಂಬ್ತಾರೆ: “ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವರಿಗೆ ಸಹಾಯ ಮಾಡೋಕೆ ಯೆಹೋವ ಭೂಮಿಯಲ್ಲಿ ಎಲ್ಲ ಕಡೆ ನೋಡ್ತಾ ಇದ್ದಾನೆ.”—2 ಪೂರ್ವಕಾಲವೃತ್ತಾಂತ 16:9.
17. ಯಾಕೋಬ 4:7 ಯಾವ ಭರವಸೆಯನ್ನ ಕೊಡುತ್ತೆ? ಆದ್ರೆ ನಾವೇನು ಮಾಡಬೇಕು?
17 ಯಾಕೋಬ 4:7ರಲ್ಲಿರೋ ಮಾತಿನ ಮೇಲೆ ನೀವೂ ಭರವಸೆ ಇಡಬಹುದು. ಅದು ಹೀಗೆ ಹೇಳುತ್ತೆ: “ಹಾಗಾಗಿ ದೇವರ ಮಾತನ್ನ ಕೇಳಿ. ಸೈತಾನನನ್ನ ವಿರೋಧಿಸಿ. ಆಗ ಅವನು ನಿಮ್ಮನ್ನ ಬಿಟ್ಟು ಓಡಿಹೋಗ್ತಾನೆ.” ನೀವು ಸತ್ಯದೇವರಾಗಿರುವ ಯೆಹೋವನನ್ನ ಆರಾಧಿಸ್ತಾ ಆತನ ಮಾತನ್ನ ಕೇಳೋದಾದ್ರೆ ಆತನು ಖಂಡಿತ ನಿಮ್ಮನ್ನ ಕಾಪಾಡೇ ಕಾಪಾಡ್ತಾನೆ ಅದ್ರಲ್ಲಿ ಅನುಮಾನನೇ ಇಲ್ಲ.