ಪಾಠ 13
ಜನರಿಗೆ ಸಹಾಯ ಮಾಡುವ ಮನಸ್ಸು ತಿಮೊಥೆಯನಿಗೆ ಇತ್ತು
ಜನರಿಗೆ ಸಹಾಯ ಮಾಡುವುದೆಂದರೆ ಯುವ ತಿಮೊಥೆಯನಿಗೆ ತುಂಬ ಇಷ್ಟ. ಅದಕ್ಕೆಂದೇ ಅವನು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಿದ್ದ. ಆದ್ದರಿಂದ ಅವನ ಜೀವನದಲ್ಲಿ ತುಂಬ ಸಂತೋಷ ಇತ್ತು. ಅವನ ಜೀವನದ ಬಗ್ಗೆ ಕೇಳಲು ನಿನಗೆ ಇಷ್ಟ ಇದೆಯಾ?—
ತಿಮೊಥೆಯನ ಅಮ್ಮ ಮತ್ತು ಅಜ್ಜಿ ಅವನಿಗೆ ಯೆಹೋವನ ಬಗ್ಗೆ ಕಲಿಸಿದರು
ಲುಸ್ತ್ರ ಎಂಬ ನಗರದಲ್ಲಿ ತಿಮೊಥೆಯ ಬೆಳೆದ. ಅವನ ಅಜ್ಜಿಯ ಹೆಸರು ಲೋವಿ. ಅಮ್ಮನ ಹೆಸರು ಯೂನಿಕೆ. ಇವರು ತಿಮೊಥೆಯನಿಗೆ ಚಿಕ್ಕ ವಯಸ್ಸಿನಿಂದಲೇ ಯೆಹೋವನ ಬಗ್ಗೆ ಕಲಿಸಲು ಶುರುಮಾಡಿದರು. ತಿಮೊಥೆಯ ದೊಡ್ಡವನಾಗುತ್ತಿದ್ದ ಹಾಗೇ ಬೇರೆ ಜನರು ಕೂಡ ಯೆಹೋವನ ಬಗ್ಗೆ ಕಲಿಯಬೇಕು, ಅವರಿಗೆ ಸಹಾಯ ಮಾಡಬೇಕು ಎನ್ನುವ ಆಸೆ ಹುಟ್ಟಿತು.
ತಿಮೊಥೆಯ ಬೆಳೆದು ಯುವಕನಾದ. ಆಗ ಅಪೊಸ್ತಲ ಪೌಲ ಅವನಿಗೆ ತನ್ನ ಜೊತೆ ಬೇರೆ ಬೇರೆ ಸ್ಥಳಗಳಿಗೆ ಹೋಗಿ
ಸುವಾರ್ತೆ ಸಾರಲು ಕರೆದ. ತಿಮೊಥೆಯ ಒಪ್ಪಿಕೊಂಡ. ಜನರಿಗೆ ಸಹಾಯ ಮಾಡಲು ಅವನು ಸಿದ್ಧನಿದ್ದ.ಒಮ್ಮೆ ತಿಮೊಥೆಯ ಪೌಲನ ಜೊತೆ ಗ್ರೀಸ್ ದೇಶದ ಥೆಸಲೊನೀಕ ನಗರಕ್ಕೆ ಹೋದ. ಅಲ್ಲಿಗೆ ಹೋಗಲು ಮೊದಲು ತುಂಬ ದೂರ ನಡೆದು ನಂತರ ದೋಣಿಯಲ್ಲಿ ಪ್ರಯಾಣ ಮಾಡಿದರು. ಅಲ್ಲಿ ತಲುಪಿದ ನಂತರ ಯೆಹೋವನ ಬಗ್ಗೆ ಕಲಿಯಲು ತುಂಬ ಜನರಿಗೆ ಸಹಾಯ ಮಾಡಿದರು. ಆದರೆ ಕೆಲವರಿಗೆ ಇವರ ಮೇಲೆ ಕೋಪ ಬಂತು. ಹೊಡೆಯಲು ಬಂದರು. ಹಾಗಾಗಿ ಪೌಲ ಮತ್ತು ತಿಮೊಥೆಯ ಆ ಊರನ್ನು ಬಿಟ್ಟು ಬೇರೆ ಕಡೆ ಹೋಗಿ ಸುವಾರ್ತೆ ಸಾರಬೇಕಾಗಿ ಬಂತು.
ಕೆಲವು ತಿಂಗಳ ನಂತರ ಪೌಲನು ತಿಮೊಥೆಯನಿಗೆ ಥೆಸಲೊನೀಕಕ್ಕೆ ಪುನಃ ಹೋಗಿ ಸಹೋದರರನ್ನು ನೋಡಿಕೊಂಡು ಬಾ ಅಂತ ಹೇಳಿದ. ಅಲ್ಲಿಗೆ ಹೋದರೆ ತಿಮೊಥೆಯನಿಗೆ ತೊಂದರೆ ಆಗುತ್ತಿತ್ತು. ಹಾಗಿದ್ದರೂ ಅವನು ಧೈರ್ಯಮಾಡಿ ಹೋದ! ಯಾಕೆಂದರೆ ಅವನಿಗೆ ಅಲ್ಲಿರುವ ಸಹೋದರರು ಹೇಗಿದ್ದಾರೆ ಎಂಬ ಚಿಂತೆ ಇತ್ತು. ಅವರನ್ನು ನೋಡಿಕೊಂಡು ಬಂದು ಪೌಲನಿಗೆ ‘ಅವರೆಲ್ಲ ಚೆನ್ನಾಗಿದ್ದಾರೆ’ ಎಂದು ಹೇಳಿದ.
ಪೌಲ ಮತ್ತು ತಿಮೊಥೆಯ ತುಂಬ ವರ್ಷ ಒಟ್ಟಿಗೆ ಕೆಲಸಮಾಡಿದರು. ಎಲ್ಲಾ ಸಭೆಗಳಿಗೆ ಹೋಗಿ ಸಹಾಯ ಮಾಡಲು ತಿಮೊಥೆಯನಷ್ಟು ಒಳ್ಳೇ ವ್ಯಕ್ತಿ ಬೇರೆ ಯಾರೂ ಇಲ್ಲ ಅಂತ ಪೌಲ ಒಮ್ಮೆ ಪತ್ರದಲ್ಲಿ ಬರೆದ. ತಿಮೊಥೆಯನಿಗೆ ಯೆಹೋವನ ಮೇಲೆ ಮತ್ತು ಜನರ ಮೇಲೆ ತುಂಬ ಪ್ರೀತಿ ಇತ್ತು.
ನಿನಗೆ ಕೂಡ ಜನರ ಮೇಲೆ ಪ್ರೀತಿ ಇದೆಯಾ?— ಯೆಹೋವನ ಬಗ್ಗೆ ಕಲಿಯಲು ಜನರಿಗೆ ಸಹಾಯ ಮಾಡುವ ಮನಸ್ಸು ನಿನಗಿದೆಯಾ?— ಜನರಿಗೆ ಸಹಾಯ ಮಾಡಿದರೆ ನಿನಗೆ ಜೀವನದಲ್ಲಿ ತುಂಬ ಸಂತೋಷ ಇರುತ್ತದೆ. ತಿಮೊಥೆಯನ ಹಾಗೆ!