ಅಧ್ಯಾಯ 38
ಹನ್ನೆರಡು ಗೂಢಚಾರರು
ಈ ಮನುಷ್ಯರು ಹೊತ್ತುಕೊಂಡಿರುವ ಹಣ್ಣುಗಳನ್ನು ನೋಡಿರಿ. ಆ ದ್ರಾಕ್ಷೆ ಗೊಂಚಲು ಎಷ್ಟು ದೊಡ್ಡದಿದೆ ಅಲ್ಲವೇ? ಅದನ್ನು ಇಬ್ಬರು ಉದ್ದವಾದ ಕೋಲಿನ ಮೇಲೆ ಹೊತ್ತುಕೊಳ್ಳಬೇಕಾಗಿದೆ. ಅಂಜೂರ ಮತ್ತು ದಾಳಿಂಬೆ ಹಣ್ಣುಗಳನ್ನೂ ನೋಡಿರಿ. ಈ ಸುಂದರವಾದ ಹಣ್ಣುಗಳನ್ನು ಅವರು ಎಲ್ಲಿಂದ ತಂದರು? ಕಾನಾನ್ ದೇಶದಿಂದ! ನಿಮಗೆ ನೆನಪಿದೆಯೇ, ಈ ಕಾನಾನ್ ದೇಶದಲ್ಲೇ ಹಿಂದೊಮ್ಮೆ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರು ವಾಸಿಸಿದ್ದರು. ಆದರೆ ಕಾನಾನ್ನಲ್ಲಿ ಬರಗಾಲ ಬಂದಿದ್ದ ಕಾರಣ ಯಾಕೋಬನು ತನ್ನ ಕುಟುಂಬದೊಂದಿಗೆ ಐಗುಪ್ತಕ್ಕೆ ಹೋದನು. ಈಗ ಸುಮಾರು 216 ವರ್ಷಗಳ ಅನಂತರ ಮೋಶೆಯು ಇಸ್ರಾಯೇಲ್ಯರನ್ನು ಮತ್ತೆ ಕಾನಾನಿಗೆ ಕರೆದೊಯ್ಯುತ್ತಿದ್ದಾನೆ. ಈಗ ಅವರು ಅರಣ್ಯದಲ್ಲಿರುವ ಕಾದೇಶ್ ಎಂಬ ಸ್ಥಳಕ್ಕೆ ಬಂದಿರುತ್ತಾರೆ.
ಕಾನಾನ್ ದೇಶದಲ್ಲಿ ವಾಸಿಸುವ ಜನರು ತುಂಬಾ ಕೆಟ್ಟವರು. ಆದುದರಿಂದ ಮೋಶೆಯು ಆ ದೇಶವನ್ನು ಸಂಚರಿಸಿ ನೋಡಲು 12 ಮಂದಿ ಗೂಢಚಾರರನ್ನು ಕಳುಹಿಸುತ್ತಾನೆ. ಅವರಿಗೆ, ‘ಅಲ್ಲಿ ಎಷ್ಟು ಜನರು ವಾಸಿಸುತ್ತಾರೆ, ಅವರೆಷ್ಟು ಬಲಿಷ್ಠರು, ಭೂಮಿಯು ಬೆಳೆ ಬೆಳೆಸಲು ಒಳ್ಳೇದಿದೆಯೋ ಎಂಬುದನ್ನೆಲ್ಲಾ ತಿಳುಕೊಂಡು ಬನ್ನಿರಿ. ಮಾತ್ರವಲ್ಲ, ಹಣ್ಣುಗಳಲ್ಲಿ ಕೆಲವನ್ನು ತೆಗೆದುಕೊಂಡು ಬರಲು ಮರೆಯಬೇಡಿರಿ’ ಎಂದು ಹೇಳಿ ಕಳುಹಿಸುತ್ತಾನೆ.
ಅಂತೆಯೇ ಆ ಗೂಢಚಾರರು ಕಾದೇಶನ್ನು ಸಂಚರಿಸಿ ನೋಡಿ ಹಿಂದಿರುಗಿ ಬಂದು, ‘ಅದು ನಿಜವಾಗಿಯೂ ಉತ್ತಮ ದೇಶ’ ಎಂದು ಮೋಶೆಗೆ ವರದಿಸುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಅಲ್ಲಿನ ಕೆಲವು ಹಣ್ಣುಗಳನ್ನು ತೋರಿಸುತ್ತಾರೆ. ಆದರೆ ಗೂಢಚಾರರಲ್ಲಿ ಹತ್ತು ಮಂದಿ ಹೇಳುವುದು: ‘ಅಲ್ಲಿರುವ ಉದ್ದುದ್ದ ಜನರಾದರೋ ತುಂಬ ಬಲಿಷ್ಠರು. ನಾವೇನಾದರೂ ಆ ದೇಶವನ್ನು ವಶಮಾಡಿಕೊಳ್ಳಲು ಪ್ರಯತ್ನಿಸಿದರೆ ನಮ್ಮನ್ನು ಜೀವಸಹಿತ ಬಿಡುವುದಿಲ್ಲ.’
ಇದನ್ನು ಕೇಳಿದಾಗ ಇಸ್ರಾಯೇಲ್ಯರು ಭಯಭೀತರಾಗುತ್ತಾರೆ. ‘ಅಯ್ಯೋ, ನಾವು ಐಗುಪ್ತ ದೇಶದಲ್ಲೇ ಸಾಯಬಾರದಿತ್ತಾ? ಈ ಅರಣ್ಯದಲ್ಲಾದರೂ ಸತ್ತರೆ ಎಷ್ಟೋ ಮೇಲಾಗಿರುತ್ತದಲ್ಲಾ. ನಾವಂತೂ ಯುದ್ಧದಲ್ಲಿ ಸತ್ತೇ ಹೋಗುವೆವು. ನಮ್ಮ ಹೆಂಡತಿ-ಮಕ್ಕಳು ಸೆರೆಹಿಡಿಯಲ್ಪಡುವರು. ಆದುದರಿಂದಲೇ ನಾವು ಮೋಶೆಗೆ ಬದಲಾಗಿ ಒಬ್ಬ ಹೊಸ ನಾಯಕನನ್ನು ಆರಿಸಿಕೊಂಡು ಐಗುಪ್ತ ದೇಶಕ್ಕೆ ಹಿಂದಿರುಗಿ ಹೋಗೋಣ!’ ಎಂದು ಅವರು ಹೇಳುತ್ತಾರೆ.
ಆದರೆ ಆ ಗೂಢಚಾರರಲ್ಲಿ ಇಬ್ಬರು ಯೆಹೋವನಲ್ಲಿ ಭರವಸೆಯಿಡುತ್ತಾರೆ ಮತ್ತು ಜನರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ಅವರ ಹೆಸರು ಯೆಹೋಶುವ ಮತ್ತು ಕಾಲೇಬ್. ಅವರನ್ನುವುದು: ‘ಭಯಪಡಬೇಡಿರಿ. ಯೆಹೋವನು ನಮ್ಮೊಂದಿಗಿದ್ದಾನೆ. ನಾವು ದೇಶವನ್ನು ಸುಲಭವಾಗಿ ವಶಪಡಿಸಿಕೊಳ್ಳುವೆವು.’ ಆದರೆ ಅವರ ಮಾತನ್ನು ಜನರು ಕೇಳುವುದಿಲ್ಲ. ಅವರು ಯೆಹೋಶುವ ಮತ್ತು ಕಾಲೇಬರನ್ನು ಕೊಲ್ಲಲು ಸಹ ಬಯಸುತ್ತಾರೆ.
ಇದರಿಂದ ಯೆಹೋವನು ಬಹಳ ಕೋಪಗೊಳ್ಳುತ್ತಾನೆ. ಅವನು ಮೋಶೆಗೆ ಹೇಳುವುದು: ‘ಜನರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕೆ ಮೇಲ್ಪಟ್ಟವರೆಲ್ಲರೂ ಕಾನಾನ್ ದೇಶವನ್ನು ಸೇರುವುದಿಲ್ಲ. ನಾನು ಐಗುಪ್ತದಲ್ಲಿ ಮತ್ತು ಅರಣ್ಯದಲ್ಲಿ ನಡೆಸಿದ ಅದ್ಭುತಗಳನ್ನು ಅವರು ನೋಡಿಯೂ ನನ್ನಲ್ಲಿ ಭರವಸೆಯಿಟ್ಟಿಲ್ಲವಲ್ಲಾ. ಆದುದರಿಂದ ಅವರಲ್ಲಿ ಪ್ರತಿಯೊಬ್ಬನು ಸಾಯುವ ತನಕ 40 ವರ್ಷ ಅರಣ್ಯದಲ್ಲೇ ಅಲೆದಾಡುವರು. ಯೆಹೋಶುವ ಮತ್ತು ಕಾಲೇಬ್ ಮಾತ್ರ ಕಾನಾನ್ ದೇಶಕ್ಕೆ ಹೋಗುವರು.’