ಅಧ್ಯಾಯ 66
ದುಷ್ಟ ರಾಣಿ-ಈಜಬೇಲ್
ಅರಸ ಯಾರೊಬ್ಬಾಮನು ಸತ್ತ ಮೇಲೆ ಉತ್ತರದ ಹತ್ತು-ಕುಲಗಳ ಇಸ್ರಾಯೇಲ್ ರಾಜ್ಯವನ್ನಾಳಿದ ಪ್ರತಿಯೊಬ್ಬ ಅರಸನು ಕೆಟ್ಟವನಾಗಿರುತ್ತಾನೆ. ಎಲ್ಲರಿಗಿಂತ ಹೆಚ್ಚು ಕೆಟ್ಟ ಅರಸನೆಂದರೆ ಅಹಾಬನು. ಏಕೆಂದು ನಿಮಗೆ ತಿಳಿದಿದೆಯೇ? ಅವನ ದುಷ್ಟ ಪತ್ನಿ ಈಜೆಬೆಲ್ ರಾಣಿಯೇ ಇದಕ್ಕೆ ಮುಖ್ಯ ಕಾರಣವಾಗಿದ್ದಳು.
ಈಜೆಬೆಲಳು ಇಸ್ರಾಯೇಲ್ಯ ಸ್ತ್ರೀಯಲ್ಲ. ಚೀದೋನಿನ ಅರಸನ ಮಗಳು. ಅವಳು ಸುಳ್ಳು ದೇವರಾದ ಬಾಳನನ್ನು ಆರಾಧಿಸುತ್ತಾಳೆ. ಅಹಾಬ ಮತ್ತು ಅನೇಕ ಇಸ್ರಾಯೇಲ್ಯರು ಸಹ ಬಾಳನನ್ನು ಆರಾಧಿಸುವಂತೆ ಅವಳು ಮಾಡುತ್ತಾಳೆ. ಈಜೆಬೆಲ್ ಯೆಹೋವನನ್ನು ದ್ವೇಷಿಸುತ್ತಾಳೆ. ಮಾತ್ರವಲ್ಲ ಆತನ ಅನೇಕ ಪ್ರವಾದಿಗಳನ್ನು ಕೊಲ್ಲುತ್ತಾಳೆ. ಕೆಲವರು ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಲಿಕ್ಕಾಗಿ ಗುಹೆಗಳಲ್ಲಿ ಅಡಗಿಕೊಳ್ಳಬೇಕಾಗುತ್ತದೆ. ಈಜೆಬೆಲಳು ತಾನು ಬಯಸಿದ್ದನ್ನು ಪಡೆಯಲಿಕ್ಕಾಗಿ ಒಬ್ಬ ವ್ಯಕ್ತಿಯನ್ನು ಕೊಲ್ಲಲು ಸಹ ಹೇಸುವುದಿಲ್ಲ.
ಒಂದು ದಿನ ಅರಸ ಅಹಾಬನು ಗಂಟುಮುಖ ಮಾಡಿಕೊಂಡು ಬಹು ಬೇಸರದಿಂದ ಇರುತ್ತಾನೆ. ಈಜೆಬೆಲಳು ಇದನ್ನು ನೋಡಿ, ‘ಇಂದೇಕೆ ಚಿಂತೆಯಲ್ಲಿದ್ದೀರಿ?’ ಎಂದು ಕೇಳುತ್ತಾಳೆ.
‘ನಾಬೋತನ ದಾಕ್ಷೇತೋಟವನ್ನು ನಾನು ಕೊಂಡುಕೊಳ್ಳಲು ಬಯಸಿದೆ. ಆದರೆ ಅವನು ಕೊಡುವುದಿಲ್ಲವೆಂದು ಹೇಳಿಬಿಟ್ಟ. ಅದಕ್ಕೆ ನನಗೆ ತುಂಬಾ ಬೇಸರವಾಗಿದೆ’ ಎಂದು ಅಹಾಬನು ಉತ್ತರಿಸುತ್ತಾನೆ.
‘ಚಿಂತಿಸಬೇಡಿ, ನಾನು ನಿಮಗೆ ಅದನ್ನು ಕೊಡಿಸುತ್ತೇನೆ’ ಎಂದು ಹೇಳುತ್ತಾಳೆ ಈಜೆಬೆಲ್.
ಬಳಿಕ ಈಜೆಬೆಲಳು ನಾಬೋತನು ವಾಸಿಸುವ ನಗರದ ಪ್ರಧಾನ ಪುರುಷರಿಗೆ ಪತ್ರಗಳನ್ನು ಬರೆದು, ‘ಕೆಲವು ದುಷ್ಟ ಜನರನ್ನು ಕರೇಕಳುಹಿಸಿ ನಾಬೋತನು ದೇವರನ್ನೂ ಅರಸನನ್ನೂ ಶಪಿಸಿದನೆಂದು ಸಾಕ್ಷಿಹೇಳಿಸಿರಿ. ಅನಂತರ ಅವನನ್ನು ನಗರದ ಹೊರಗೆ ಒಯ್ದು ಕಲ್ಲೆಸೆದು ಕೊಲ್ಲಿರಿ’ ಎಂದು ತಿಳಿಸುತ್ತಾಳೆ.
ನಾಬೋತನು ಸತ್ತನೆಂದು ಈಜೆಬೆಲಳು ಕೇಳಿದ ಕೂಡಲೆ ಅವಳು ಅಹಾಬನಿಗೆ, ‘ಹೋಗಿ ಅವನ ದ್ರಾಕ್ಷೆತೋಟವನ್ನು ತೆಗೆದುಕೊ’ ಎಂದು ಹೇಳುತ್ತಾಳೆ. ಅಂಥ ಭೀಕರ ಕೃತ್ಯವನ್ನು ಮಾಡಿದ್ದಕ್ಕಾಗಿ ಈಜೆಬೆಲಳಿಗೆ ಶಿಕ್ಷೆಯಾಗಲೇಬೇಕೆಂದು ನೀವು ಒಪ್ಪುವುದಿಲ್ಲವೇ?
ಹೌದು, ತಕ್ಕಕಾಲದಲ್ಲಿ ಅವಳನ್ನು ಶಿಕ್ಷಿಸಲು ಯೆಹೋವನು ಯೇಹು ಎಂಬ ಮನುಷ್ಯನನ್ನು ಕಳುಹಿಸುತ್ತಾನೆ. ಈಜೆಬೆಲಳು ಯೇಹು ಬರುತ್ತಾನೆಂಬ ಸುದ್ದಿಯನ್ನು ಕೇಳಿ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಸುಂದರಿಯಾಗಿ ಕಾಣುವಂತೆ ತನ್ನನ್ನು ಅಲಂಕರಿಸಿಕೊಳ್ಳುತ್ತಾಳೆ. ಆದರೆ ಯೇಹು ಬಂದು ಕಿಟಿಕಿಯ ಬಳಿ ಈಜೆಬೆಲಳು ನಿಂತಿರುವುದನ್ನು ಕಂಡು ಅರಮನೆಯ ಸೇವಕರಿಗೆ ‘ಅವಳನ್ನು ಕೆಳಗೆ ದೊಬ್ಬಿರಿ!’ ಎಂದು ಕೂಗಿ ಹೇಳುತ್ತಾನೆ. ನೀವು ಚಿತ್ರದಲ್ಲಿ ನೋಡುವ ಪ್ರಕಾರ, ಸೇವಕರು ಅವನ ಮಾತಿಗೆ ವಿಧೇಯರಾಗಿ ಅವಳನ್ನು ಕೆಳಗೆ ದೊಬ್ಬುತ್ತಾರೆ. ಆಕೆ ಸತ್ತುಹೋಗುತ್ತಾಳೆ. ದುಷ್ಟ ರಾಣಿ ಈಜೆಬೆಲಳ ಅಂತ್ಯವು ಇದೇ.