ಅಧ್ಯಾಯ 80
ದೇವಜನರು ಬಾಬೆಲನ್ನು ಬಿಟ್ಟುಬರುತ್ತಾರೆ
ಮೇದ್ಯರು ಮತ್ತು ಪಾರಸಿಯರು ಬಾಬೆಲನ್ನು ಸೆರೆಹಿಡಿದು ಈಗ ಸುಮಾರು ಎರಡು ವರ್ಷಗಳು ದಾಟಿವೆ. ಈಗ ಏನು ಸಂಭವಿಸುತ್ತಿದೆಯೆಂದು ನೋಡಿರಿ! ಹೌದು, ಇಸ್ರಾಯೇಲ್ಯರು ಬಾಬೆಲನ್ನು ಬಿಟ್ಟುಬರುತ್ತಿದ್ದಾರೆ. ಅವರು ಬಿಡುಗಡೆ ಹೊಂದಿದ್ದು ಹೇಗೆ? ಅವರನ್ನು ಹೋಗಲು ಅನುಮತಿಸಿದವರು ಯಾರು?
ಪಾರಸಿಯ ಅರಸನಾದ ಕೋರೆಷನು ಅನುಮತಿಸಿದನು. ಕೋರೆಷನು ಹುಟ್ಟುವುದಕ್ಕೆ ಬಹಳ ಮುಂಚೆಯೇ, ಅವನ ಕುರಿತು ತನ್ನ ಪ್ರವಾದಿ ಯೆಶಾಯನು ಹೀಗೆ ಬರೆಯುವಂತೆ ಯೆಹೋವನು ಹೇಳಿದನು: ‘ನೀನೇನು ಮಾಡುವಂತೆ ನಾನು ಬಯಸುತ್ತೇನೋ ಅದನ್ನೇ ನೀನು ಮಾಡುವಿ. ಪಟ್ಟಣವನ್ನು ವಶಪಡಿಸಿಕೊಳ್ಳಲು ನಿನಗಾಗಿ ದ್ವಾರಗಳು ತೆರೆದಿರುತ್ತವೆ.’ ಅಂತೆಯೇ, ಬಾಬೆಲನ್ನು ಸೆರೆಹಿಡಿದು ವಶಪಡಿಸಿಕೊಳ್ಳುವುದರಲ್ಲಿ ಕೋರೆಷನೇ ನಾಯಕತ್ವ ವಹಿಸಿದನು. ತೆರೆದಿಡಲ್ಪಟ್ಟಿದ್ದ ದ್ವಾರಗಳ ಮೂಲಕ ಮೇದ್ಯರು ಮತ್ತು ಪಾರಸಿಯರು ರಾತ್ರಿಯಲ್ಲಿ ಪಟ್ಟಣವನ್ನು ಪ್ರವೇಶಿಸಿದರು.
ಯೆರೂಸಲೇಮ್ ಮತ್ತು ಅದರ ಆಲಯವು ಪುನಃ ಕಟ್ಟಲ್ಪಡುವಂತೆ ಕೋರೆಷನು ಆಜ್ಞೆಯನ್ನು ಕೊಡುವನೆಂದು ಸಹ ಯೆಹೋವನ ಪ್ರವಾದಿ ಯೆಶಾಯನು ಹೇಳಿದ್ದನು. ಅದೇ ರೀತಿ ಕೋರೆಷನು ಆಜ್ಞೆಯನ್ನು ಕೊಟ್ಟನೋ? ಹೌದು, ಕೊಟ್ಟನು. ಕೋರೆಷನು ಇಸ್ರಾಯೇಲ್ಯರಿಗೆ ಹೀಗೆ ಹೇಳುತ್ತಾನೆ: ‘ನೀವು ಯೆರೂಸಲೇಮಿಗೆ ಹೋಗಿ ನಿಮ್ಮ ದೇವರಾದ ಯೆಹೋವನ ಆಲಯವನ್ನು ಕಟ್ಟಿರಿ.’ ಈ ಇಸ್ರಾಯೇಲ್ಯರು ಅದನ್ನೇ ಮಾಡಲು ಹೋಗುತ್ತಿದ್ದಾರೆ ನೋಡಿ.
ಆದರೆ ಬಾಬೆಲಿನಲ್ಲಿದ್ದ ಎಲ್ಲ ಇಸ್ರಾಯೇಲ್ಯರೂ ಯೆರೂಸಲೇಮಿಗೆ ಹೋಗಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅದು ಬಹಳ ಬಹಳ ದೂರದಲ್ಲಿದೆ. ಸುಮಾರು 500 ಮೈಲುಗಳಷ್ಟು (800 ಕಿಲೋಮೀಟರ್) ದೂರ ಪ್ರಯಾಣಿಸಬೇಕಾಗುತ್ತದೆ. ಅವರಲ್ಲಿ ಅನೇಕರಿಗೆ ತುಂಬ ವಯಸ್ಸಾಗಿದೆ. ಇನ್ನು ಕೆಲವರು ತುಂಬ ಅಸ್ವಸ್ಥರಾಗಿದ್ದಾರೆ. ಆದುದರಿಂದ ಅಷ್ಟು ದೂರ ಪ್ರಯಾಣಿಸಲು ಅವರಿಗೆ ಆಗುವುದಿಲ್ಲ. ಇನ್ನೂ ಕೆಲವು ಜನರು ಹೋಗದಿರುವುದಕ್ಕೆ ಬೇರೆ ಕಾರಣಗಳಿವೆ. ಕೋರೆಷನು ಹೋಗದಿರುವ ಆ ಜನರಿಗೆ ಹೇಳುವುದು: ‘ಯೆರೂಸಲೇಮನ್ನೂ ಅದರ ಆಲಯವನ್ನೂ ಕಟ್ಟಲಿಕ್ಕಾಗಿ ಹೋಗುವ ಜನರಿಗೆ ಬೆಳ್ಳಿಬಂಗಾರವನ್ನೂ ಇತರ ಕಾಣಿಕೆಗಳನ್ನೂ ಕೊಡಿರಿ.’
ಹೀಗೆ ಯೆರೂಸಲೇಮಿಗೆ ಹೋಗುತ್ತಿರುವ ಈ ಇಸ್ರಾಯೇಲ್ಯರಿಗೆ ಉಳಿದ ಜನರು ಅನೇಕ ಕಾಣಿಕೆಗಳನ್ನು ಕೊಡುತ್ತಾರೆ. ಅದಲ್ಲದೆ, ನೆಬೂಕದ್ನೆಚ್ಚರನು ಯೆರೂಸಲೇಮನ್ನು ನಾಶಮಾಡಿದಾಗ ಯೆಹೋವನ ಆಲಯದಿಂದ ತಂದಿದ್ದ ಬೋಗುಣಿಗಳನ್ನೂ ಪಾತ್ರೆಗಳನ್ನೂ ಕೋರೆಷನು ಅವರಿಗೆ ಕೊಡುತ್ತಾನೆ. ಈ ಜನರು ತುಂಬ ವಸ್ತುಗಳನ್ನು ಕೊಂಡೊಯ್ಯಬೇಕಿದೆ.
ಸುಮಾರು ನಾಲ್ಕು ತಿಂಗಳುಗಳು ಪ್ರಯಾಣಿಸಿದ ಬಳಿಕ, ಇಸ್ರಾಯೇಲ್ಯರು ಸರಿಯಾದ ಸಮಯಕ್ಕೆ ಯೆರೂಸಲೇಮನ್ನು ಬಂದು ತಲಪುತ್ತಾರೆ. ಆ ಪಟ್ಟಣವು ನಾಶವಾಗಿ ಸರಿಯಾಗಿ 70 ವರ್ಷಗಳು ದಾಟಿರುತ್ತವೆ. ಅಷ್ಟರವರೆಗೆ ಆ ನಗರವು ನಿರ್ಜನವಾಗಿ ಪಾಳು ಬಿದ್ದಿತ್ತು. ಇಸ್ರಾಯೇಲ್ಯರು ಈಗ ತಮ್ಮ ಸ್ವದೇಶಕ್ಕೆ ಹಿಂದೆ ಬಂದಿದ್ದರೂ, ಅವರು ಕೆಲವು ಕಷ್ಟದ ಸಮಯಗಳನ್ನು ಎದುರಿಸುತ್ತಾರೆ. ನಾವಿದನ್ನು ಮುಂದೆ ಕಲಿಯುತ್ತೇವೆ.