ಅಧ್ಯಾಯ 102
ಯೇಸು ಜೀವದಿಂದಿದ್ದಾನೆ
ಈ ಚಿತ್ರದಲ್ಲಿರುವ ಸ್ತ್ರೀ ಮತ್ತು ಇಬ್ಬರು ಪುರುಷರು ಯಾರೆಂದು ನಿಮಗೆ ಗೊತ್ತೇ? ಈ ಸ್ತ್ರೀ ಯೇಸುವಿನ ಶಿಷ್ಯೆಯಾಗಿದ್ದಾಳೆ. ಅವಳ ಹೆಸರು ಮಗ್ದಲದ ಮರಿಯ. ಬಿಳಿ ವಸ್ತ್ರ ತೊಟ್ಟಿರುವ ಈ ಪುರುಷರು ದೇವದೂತರು. ಮರಿಯಳು ನೋಡುತ್ತಿರುವ ಈ ಚಿಕ್ಕ ಕೋಣೆ ಯೇಸು ಸತ್ತ ಮೇಲೆ ಅವನ ದೇಹವನ್ನು ಇಟ್ಟಿದ್ದ ಸ್ಥಳ. ಅದನ್ನು ಸಮಾಧಿ ಎಂದು ಕರೆಯುತ್ತಾರೆ. ಆದರೆ ಈಗ ಆಶ್ಚರ್ಯವೇನೆಂದರೆ ಯೇಸುವಿನ ದೇಹ ಅಲ್ಲಿ ಇಲ್ಲ! ಅದನ್ನು ಯಾರು ತೆಗೆದುಕೊಂಡುಹೋದರು? ನಾವು ನೋಡೋಣ.
ಯೇಸು ಸತ್ತ ನಂತರ ಯಾಜಕರು ಪಿಲಾತನ ಬಳಿಗೆ ಹೋಗಿ, ‘ಯೇಸು ಬದುಕಿದ್ದಾಗ ತಾನು ಮೂರು ದಿನದ ಮೇಲೆ ಏಳುತ್ತೇನೆ ಎಂದು ಹೇಳಿದ್ದನು. ಆದಕಾರಣ ಸಮಾಧಿಯನ್ನು ಭದ್ರಮಾಡಿ ಕಾಯುವದಕ್ಕೆ ಅಪ್ಪಣೆಕೊಡು. ಆಗ ಅವನ ಶಿಷ್ಯರು ಬಂದು ಅವನ ದೇಹವನ್ನು ಕದ್ದುಕೊಂಡು ಹೋಗಿ, ಸತ್ತವನು ಬದುಕಿ ಬಂದಿದ್ದಾನೆಂದು ಹೇಳುವುದಕ್ಕಾಗದು’ ಎಂದು ಹೇಳುತ್ತಾರೆ. ಅದಕ್ಕೆ ಪಿಲಾತನು ಸಮಾಧಿಯನ್ನು ಕಾಯಲು ಸೈನಿಕರನ್ನು ಏರ್ಪಾಡುಮಾಡುವಂತೆ ಯಾಜಕರಿಗೆ ಒಪ್ಪಿಗೆಕೊಡುತ್ತಾನೆ.
ಆದರೆ ಯೇಸು ಸತ್ತ ಮೂರನೆಯ ದಿನ ಬೆಳಗ್ಗೆ ಯೆಹೋವನ ಒಬ್ಬ ದೂತನು ಥಟ್ಟನೆ ಬಂದು ಸಮಾಧಿಯ ಬಾಗಿಲಲ್ಲಿದ್ದ ಕಲ್ಲನ್ನು ದೂರ ಉರುಳಿಸುತ್ತಾನೆ. ಸೈನಿಕರು ಎಷ್ಟು ಹೆದರುತ್ತಾರೆಂದರೆ ಅವರಿಗೆ ಚಲಿಸಲಾಗುವುದಿಲ್ಲ. ಕೊನೆಗೆ, ಅವರು ಸಮಾಧಿಯೊಳಗೆ ನೋಡಿದರೆ ಯೇಸುವಿನ ದೇಹ ಅಲ್ಲಿಲ್ಲ! ಕೆಲವು ಸೈನಿಕರು ಪಟ್ಟಣಕ್ಕೆ ಹೋಗಿ ಯಾಜಕರಿಗೆ ನಡೆದದ್ದನ್ನು ತಿಳಿಸುತ್ತಾರೆ. ಆ ಕೆಟ್ಟ ಯಾಜಕರು ಏನು ಮಾಡುತ್ತಾರೆಂದು ನಿಮಗೆ ಗೊತ್ತೋ? ಅವರು ಆ ಸೈನಿಕರಿಗೆ ಹಣಕೊಟ್ಟು ಸುಳ್ಳು ಹೇಳಿಸುತ್ತಾರೆ. ‘ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿರುವಾಗ ದೇಹವನ್ನು ಕದ್ದುಕೊಂಡು ಹೋದರು ಎಂದು ಹೇಳಿರಿ’ ಎಂದು ಯಾಜಕರು ಸೈನಿಕರಿಗೆ ಹೇಳುತ್ತಾರೆ.
ಈ ಮಧ್ಯೆ, ಯೇಸುವಿನ ಶಿಷ್ಯರಾಗಿದ್ದ ಕೆಲವು ಸ್ತ್ರೀಯರು ಸಮಾಧಿಯ ಹತ್ತಿರ ಬರುತ್ತಾರೆ. ಅದು ಖಾಲಿಯಿರುವುದನ್ನು ಕಂಡಾಗ ಅವರಿಗೆಷ್ಟು ಆಶ್ಚರ್ಯವಾಗುತ್ತದೆ! ಆಗ, ಬೆಳ್ಳಗೆ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ದೇವದೂತರು ಥಟ್ಟನೆ ಅವರಿಗೆ ಕಾಣಿಸಿಕೊಳ್ಳುತ್ತಾರೆ. ‘ಯೇಸುವಿಗಾಗಿ ಇಲ್ಲಿ ಯಾಕೆ ಹುಡುಕುತ್ತೀರಿ? ಅವನು ಎಬ್ಬಿಸಲ್ಪಟ್ಟಿದ್ದಾನೆ. ಬೇಗ ಹೋಗಿ ಇತರ ಶಿಷ್ಯರಿಗೆ ತಿಳಿಸಿರಿ’ ಎಂದು ಆ ದೇವದೂತರು ಹೇಳುತ್ತಾರೆ. ಅಬ್ಬಾ, ಕೂಡಲೇ ಆ ಸ್ತ್ರೀಯರು ಎಷ್ಟು ವೇಗವಾಗಿ ಓಡುತ್ತಾರೆ ಗೊತ್ತಾ? ಆದರೆ ದಾರಿಯಲ್ಲಿ ಒಬ್ಬ ಮನುಷ್ಯನು ಅವರನ್ನು ತಡೆಯುತ್ತಾನೆ. ಅವನು ಯಾರು ಗೊತ್ತೇ? ಯೇಸು! ‘ಹೋಗಿ ನನ್ನ ಶಿಷ್ಯರಿಗೆ ಹೇಳಿರಿ’ ಎನ್ನುತ್ತಾನೆ ಅವನು.
ಯೇಸು ಜೀವದಿಂದಿದ್ದಾನೆ, ತಾವು ಆತನನ್ನು ನೋಡಿದೆವೆಂದು ಆ ಸ್ತ್ರೀಯರು ಶಿಷ್ಯರಿಗೆ ಹೇಳಿದಾಗ ಅವರಿಗೆ ಅದನ್ನು ನಂಬಲಿಕ್ಕೇ ಆಗುವುದಿಲ್ಲ. ಪೇತ್ರಯೋಹಾನರು ತಾವೇ ಕಣ್ಣಾರೆ ನೋಡಬೇಕೆಂದು ಸಮಾಧಿಯ ಹತ್ತಿರ ಓಡುತ್ತಾರೆ. ಆದರೆ ಸಮಾಧಿ ಖಾಲಿ ಇದೆ! ಪೇತ್ರಯೋಹಾನರು ಅಲ್ಲಿಂದ ಹೊರಟುಹೋದಾಗ, ಮಗ್ದಲದ ಮರಿಯಳು ಅಲ್ಲೇ ಉಳಿಯುತ್ತಾಳೆ. ಅವಳು ಸಮಾಧಿಯೊಳಿಗೆ ಇಣುಕಿ ನೋಡಿ ಇಬ್ಬರು ದೇವದೂತರನ್ನು ಕಾಣುವುದು ಆಗಲೇ.
ಯೇಸುವಿನ ದೇಹ ಏನಾಯಿತು? ಅದು ಮಾಯವಾಗಿ ಹೋಗುವಂತೆ ದೇವರು ಮಾಡಿದನು. ಅವನು ಸತ್ತಾಗ ಇದ್ದ ಮಾಂಸಿಕ ದೇಹದಲ್ಲೇ ಯೇಸು ಜೀವಿತನಾಗಿ ಎದ್ದೇಳುವಂತೆ ದೇವರು ಮಾಡಲಿಲ್ಲ. ಪರಲೋಕದಲ್ಲಿ ದೇವದೂತರಿಗೆ ಇರುವಂತಹ ಒಂದು ಹೊಸ ಆತ್ಮ ದೇಹವನ್ನು ದೇವರು ಯೇಸುವಿಗೆ ಕೊಟ್ಟನು. ಆದರೆ ತಾನು ಜೀವಿತನಾಗಿದ್ದೇನೆಂದು ತನ್ನ ಶಿಷ್ಯರಿಗೆ ತೋರಿಸಲಿಕ್ಕಾಗಿ, ಅವರು ಕಾಣುವಂಥ ಒಂದು ದೇಹವನ್ನು ಯೇಸು ತೆಗೆದುಕೊಳ್ಳಬಲ್ಲನು. ಇದರ ಕುರಿತು ಮುಂದೆ ನಾವು ಕಲಿಯಲಿದ್ದೇವೆ.