ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 77

ಬಾವಿಗೆ ಬಂದ ಸ್ತ್ರೀ

ಬಾವಿಗೆ ಬಂದ ಸ್ತ್ರೀ

ಪಸ್ಕಹಬ್ಬದ ನಂತರ ಯೇಸು ಮತ್ತು ಅವನ ಶಿಷ್ಯರು ಸಮಾರ್ಯದ ದಾರಿಯಲ್ಲಿ ಗಲಿಲಾಯಕ್ಕೆ ವಾಪಸ್ಸು ಹೋಗುತ್ತಿದ್ದರು. ಯೇಸು ಸಿಖರ್‌ ಎಂಬ ಊರಿನ ಯಾಕೋಬನ ಬಾವಿಯ ಹತ್ತಿರ ವಿಶ್ರಾಂತಿ ತೆಗೆದುಕೊಳ್ಳಲು ಕೂತನು. ಅವನ ಶಿಷ್ಯರು ಆಹಾರವನ್ನು ತೆಗೆದುಕೊಂಡು ಬರಲು ಪಟ್ಟಣಕ್ಕೆ ಹೋದರು.

ಆಗ ಒಬ್ಬ ಸ್ತ್ರೀ ನೀರನ್ನು ಸೇದಲು ಆ ಬಾವಿಯ ಹತ್ತಿರ ಬಂದಳು. ಆಗ ಯೇಸು ಅವಳಿಗೆ ‘ಕುಡಿಯಲು ನನಗೆ ಸ್ವಲ್ಪ ನೀರು ಕೊಡಮ್ಮಾ’ ಎಂದು ಕೇಳಿದನು. ಆಗ ಸ್ತ್ರೀ ‘ನೀನು ನನ್ನ ಹತ್ತಿರ ಯಾಕೆ ಮಾತಾಡುತ್ತಿದ್ದೀಯಾ? ನಾನು ಸಮಾರ್ಯದವಳು. ಯೆಹೂದ್ಯರು ಸಮಾರ್ಯದವರ ಹತ್ತಿರ ಮಾತಾಡುವುದಿಲ್ಲವಲ್ಲಾ?’ ಅಂದಳು. ಅದಕ್ಕೆ ಯೇಸು, ‘ನಾನು ಯಾರು ಅಂತ ನಿನಗೆ ಗೊತ್ತಿದ್ದರೆ ನೀನೇ ನನ್ನ ಹತ್ತಿರ ನೀರು ಕೇಳುತ್ತಿದ್ದೆ. ಆಗ ನಾನು ನಿನಗೆ ಜೀವ ಕೊಡುವ ನೀರನ್ನು ಕೊಡುತ್ತಿದ್ದೆ’ ಅಂದನು. ಅದಕ್ಕೆ ಅವಳು ‘ನೀನು ಹೇಳಿದ್ದು ನನಗೆ ಅರ್ಥ ಆಗಲಿಲ್ಲ. ಅಲ್ಲದೇ ನಿನ್ನ ಹತ್ತಿರ ನೀರು ಸೇದಲು ಬಿಂದಿಗೆ ಸಹ ಇಲ್ಲ’ ಅಂದಳು. ಆಗ ಯೇಸು ‘ನಾನು ಕೊಡುವ ನೀರನ್ನು ಕುಡಿಯುವವರಿಗೆ ಯಾವತ್ತೂ ಬಾಯಾರಿಕೆ ಆಗುವುದಿಲ್ಲ’ ಅಂದನು. ಅದಕ್ಕೆ ಆ ಸ್ತ್ರೀ ‘ಸ್ವಾಮಿ, ದಯವಿಟ್ಟು ಆ ನೀರನ್ನು ನನಗೆ ಕೊಡು’ ಅಂದಳು.

ಯೇಸು ಅವಳಿಗೆ ‘ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ’ ಅಂದನು. ಅದಕ್ಕವಳು ‘ನನಗೆ ಗಂಡನಿಲ್ಲ’ ಅಂದಳು. ಆಗ ಯೇಸು ‘ನೀನು ಹೇಳಿದ್ದು ನಿಜಾನೇ. ನೀನು ಐದು ಸಾರಿ ಮದುವೆಯಾಗಿದ್ದೀಯ. ಆದರೆ ಈಗ ನೀನು ಮದುವೆಯಾಗದೆ ಒಬ್ಬನ ಜೊತೆ ಇದ್ದೀಯ’ ಅಂದನು. ಅದಕ್ಕೆ ಆ ಸ್ತ್ರೀ ‘ನೀವೊಬ್ಬ ಪ್ರವಾದಿ ಅಂತ ನನಗನಿಸುತ್ತೆ. ಸ್ವಾಮಿ, ನಾವು ದೇವರನ್ನು ಈ ಬೆಟ್ಟದಲ್ಲಿ ಆರಾಧಿಸಬಹುದು ಅಂತ ನನ್ನ ಜನರು ನಂಬುತ್ತಾರೆ. ಆದರೆ ಯೆಹೂದ್ಯರು, ದೇವರನ್ನು ಯೆರೂಸಲೇಮಿನಲ್ಲೇ ಆರಾಧಿಸಬೇಕು ಅಂತ ಹೇಳುತ್ತಾರೆ. ಮೆಸ್ಸೀಯನು ಬಂದಾಗ ಅವನು ದೇವರನ್ನು ಹೇಗೆ ಆರಾಧಿಸಬೇಕು ಎಂದು ನಮಗೆ ಹೇಳಿಕೊಡುವನು ಎಂದು ನಾನು ನಂಬಿದ್ದೇನೆ’ ಅಂದಳು. ಆಗ ಯೇಸು ಯಾರಿಗೂ ಹೇಳದ ಒಂದು ವಿಷಯವನ್ನು ಅವಳಿಗೆ ಹೇಳಿದನು. ಏನು ಹೇಳಿದನು ಗೊತ್ತಾ? ‘ನಾನೇ ಮೆಸ್ಸೀಯ’ ಅಂತ ಹೇಳಿದನು.

ತಕ್ಷಣ ಆ ಸ್ತ್ರೀ ಪಟ್ಟಣಕ್ಕೆ ಓಡಿ ಹೋಗಿ ಸಮಾರ್ಯದವರಿಗೆ ‘ನನಗೆ ಮೆಸ್ಸೀಯ ಸಿಕ್ಕಿದನು! ಅವನಿಗೆ ನನ್ನ ಬಗ್ಗೆ ಎಲ್ಲಾ ಗೊತ್ತು. ನೀವು ಕೂಡ ಬಂದು ಅವನನ್ನು ನೋಡಿ’ ಅಂದಳು. ಅನೇಕರು ಅವಳ ಜೊತೆ ಬಾವಿಯ ಹತ್ತಿರ ಬಂದು ಯೇಸುವಿನ ಬೋಧನೆಯನ್ನು ಕೇಳಿಸಿಕೊಂಡರು.

ಸಮಾರ್ಯದವರು ಯೇಸುವನ್ನು ತಮ್ಮ ಪಟ್ಟಣಕ್ಕೆ ಬರುವಂತೆ ಕೇಳಿಕೊಂಡರು. ಯೇಸು ಎರಡು ದಿನ ಇದ್ದು ಅವರಿಗೆ ಬೋಧಿಸಿದನು, ಅನೇಕರು ಅವನಲ್ಲಿ ನಂಬಿಕೆ ಇಟ್ಟರು. ಆಗ ಆ ಜನರು ಸಮಾರ್ಯದ ಸ್ತ್ರೀಗೆ ‘ಇವನ ಮಾತುಗಳನ್ನು ಕೇಳಿದ ನಂತರ ಲೋಕವನ್ನು ರಕ್ಷಿಸುವವನು ಇವನೇ ಎಂದು ನಮಗೆ ಗೊತ್ತಾಯಿತು’ ಅಂದರು.

“ಬಾಯಾರುತ್ತಿರುವ ಪ್ರತಿಯೊಬ್ಬನು ಬರಲಿ! ಇಷ್ಟವುಳ್ಳ ಪ್ರತಿಯೊಬ್ಬನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.”—ಪ್ರಕಟನೆ 22:17