ಪಾಠ 85
ಯೇಸು ಸಬ್ಬತ್ದಿನದಂದು ವಾಸಿ ಮಾಡಿದನು
ಫರಿಸಾಯರು ಯೇಸುವನ್ನು ತುಂಬಾ ದ್ವೇಷಿಸುತ್ತಿದ್ದರು. ಅವನನ್ನು ಬಂಧಿಸಲು ಏನಾದರೂ ಕಾರಣ ಸಿಗುತ್ತಾ ಅಂತ ಕಾಯುತ್ತಿದ್ದರು. ಅವರು ಜನರಿಗೆ ಸಬ್ಬತ್ ದಿನದಲ್ಲಿ ಕಾಯಿಲೆ ಬಿದ್ದವರನ್ನು ವಾಸಿ ಮಾಡಬಾರದು ಎಂದು ಹೇಳಿದ್ದರು. ಏಕೆಂದರೆ ಅದು ವಿಶ್ರಾಂತಿಯ ದಿನವಾಗಿತ್ತು. ಒಮ್ಮೆ ಸಬ್ಬತ್ ದಿನದಂದು ಯೇಸು ದಾರಿ ಬದಿಯಲ್ಲಿ ಒಬ್ಬ ಕುರುಡ ಭಿಕ್ಷೆ ಬೇಡುತ್ತಿರುವುದನ್ನು ನೋಡಿದನು. ಅವನು ತನ್ನ ಶಿಷ್ಯರಿಗೆ ‘ದೇವರ ಶಕ್ತಿಯಿಂದ ಇವನಿಗೆ ಏನಾಗುವುದೆಂದು ನೋಡಿ’ ಅಂದನು. ಯೇಸು ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿ ಅದನ್ನು ಆ ಕುರುಡನ ಕಣ್ಣಿಗೆ ಹಚ್ಚಿದನು. ಆಮೇಲೆ ಯೇಸು ಆ ಕುರುಡನಿಗೆ ‘ಹೋಗಿ ಸಿಲೋವ ಕೊಳದಲ್ಲಿ ನಿನ್ನ ಕಣ್ಣನ್ನು ತೊಳೆದುಕೊ’ ಅಂದನು. ಅವನು ಯೇಸು ಹೇಳಿದಂತೆ ಮಾಡಿದನು. ಆಶ್ಚರ್ಯ ಏನೆಂದರೆ ತನ್ನ ಜೀವನದಲ್ಲಿ ಮೊದಲ ಬಾರಿ ಅವನಿಗೆ ದೃಷ್ಟಿ ಬಂತು.
ಇದನ್ನು ಕಂಡ ಜನರಿಗೆ ಆಶ್ಚರ್ಯವೋ ಆಶ್ಚರ್ಯ. ಅವರು ‘ದಾರಿ ಬದಿಯಲ್ಲಿ ಕೂತು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವಾ ಅಥವಾ ಅವನಂತೆಯೇ ಕಾಣುವ ಬೇರೆ ವ್ಯಕ್ತಿನಾ?’ ಎಂದರು. ಆಗ ಆ ಮನುಷ್ಯನು ‘ಆ ಹುಟ್ಟು ಕುರುಡ ನಾನೇ’ ಅಂದನು. ಅದಕ್ಕೆ ಜನರು ‘ನಿನಗೆ ಹೇಗೆ ಕಣ್ಣು ಬಂತು?’ ಎಂದು ಕೇಳಿದರು. ಅವನು ನಡೆದದ್ದೆಲ್ಲವನ್ನು ಹೇಳಿದನು. ಆಗ ಜನರು ಅವನನ್ನು ಫರಿಸಾಯರ ಹತ್ತಿರ ಕರೆದುಕೊಂಡು ಹೋದನು.
ಆಗ ಆ ಮನುಷ್ಯನು ಫರಿಸಾಯರಿಗೆ ‘ಯೇಸು ಕೆಸರನ್ನು ಮಾಡಿ ನನ್ನ ಕಣ್ಣಿಗೆ ಹಚ್ಚಿ ತೊಳೆದುಕೊಳ್ಳುವಂತೆ ಹೇಳಿದನು. ನಾನು ಹಾಗೇ ಮಾಡಿದಾಗ ನನಗೆ ಕಣ್ಣು ಕಾಣಿಸಿತು’ ಅಂದನು. ಅದಕ್ಕೆ ಫರಿಸಾಯರು ‘ಯೇಸು ಸಬ್ಬತ್ತಿನಲ್ಲಿ ವಾಸಿ ಮಾಡಿದ್ದರಿಂದ ದೇವರ ಶಕ್ತಿಯಿಂದ ಅವನು ವಾಸಿಮಾಡಿಲ್ಲ’ ಅಂದರು. ಆದರೆ ಇನ್ನು ಕೆಲವರು ‘ಅವನಿಗೆ ದೇವರಿಂದ ಶಕ್ತಿ ಸಿಕ್ಕಿಲ್ಲ ಅಂದಿದ್ದರೆ ಅವನು ವಾಸಿಮಾಡಲು ಸಾಧ್ಯನೇ ಆಗುತ್ತಿರಲಿಲ್ಲ’ ಅಂದರು.
ಫರಿಸಾಯರು ಆ ವ್ಯಕ್ತಿಯ ಹೆತ್ತವರನ್ನು ಕರೆದು ‘ನಿಮ್ಮ ಮಗನಿಗೆ ಹೇಗೆ ಕಣ್ಣು ಬಂತು?’ ಎಂದು ಕೇಳಿದರು. ಆಗ ಅವರು ಭಯಪಟ್ಟರು. ಯಾಕೆಂದರೆ ಯಾರು ಯೇಸುವಿನಲ್ಲಿ ನಂಬಿಕೆ ಇಡುತ್ತಾರೋ ಅಂಥವರನ್ನು ಸಭಾಮಂದಿರದಿಂದ ಹೊರಗೆ ಹಾಕಲಾಗುವುದು ಎಂದು ಫರಿಸಾಯರು ಹೇಳಿದ್ದರು. ಆದ್ದರಿಂದ ಅವರು ‘ನಮಗೆ ಅದರ ಬಗ್ಗೆ ಗೊತ್ತಿಲ್ಲ. ನೀವು ನಮ್ಮ ಮಗನನ್ನೇ ಕೇಳಿ’ ಅಂದರು. ಆಗ ಫರಿಸಾಯರು ಅವನ ಹತ್ತಿರ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಕೊನೆಗೆ ಅವನು ‘ನನಗೆ ಗೊತ್ತಿರುವುದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಮತ್ತೆ ಮತ್ತೆ ನೀವು ಅದರ ಬಗ್ಗೆ ಯಾಕೆ ಕೇಳುತ್ತಿದ್ದೀರಿ?’ ಅಂದನು. ಆಗ ಫರಿಸಾಯರು ಕೋಪಗೊಂಡು ಅವನನ್ನು ಹೊರಗೆ ದೊಬ್ಬಿದರು.
ಆಮೇಲೆ ಯೇಸು ತಾನು ಗುಣ ಪಡಿಸಿದ ವ್ಯಕ್ತಿಯ ಹತ್ತಿರ ಹೋಗಿ ‘ನಿನಗೆ ಮೆಸ್ಸೀಯನ ಮೇಲೆ ನಂಬಿಕೆ ಇದೆಯಾ?’ ಎಂದು ಕೇಳಿದನು. ಅದಕ್ಕೆ ಅವನು ‘ಅವನು ಯಾರು ಅಂತ ಗೊತ್ತಾದರೆ ಖಂಡಿತ ನಂಬಿಕೆ ಇಡುತ್ತೇನೆ’ ಅಂದನು. ಆಗ ಯೇಸು ಅವನಿಗೆ ‘ನಾನೇ ಮೆಸ್ಸೀಯ’ ಅಂದನು. ಯೇಸು ಎಷ್ಟು ದಯಾಭರಿತ ವ್ಯಕ್ತಿ ಅಂತ ಗಮನಿಸಲು ಆಯಿತಾ? ಯೇಸು ಆ ವ್ಯಕ್ತಿಯನ್ನು ವಾಸಿ ಮಾಡಿದ್ದಷ್ಟೇ ಅಲ್ಲ ತನ್ನಲ್ಲಿ ನಂಬಿಕೆ ಇಡುವಂತೆ ಅವನಿಗೆ ಸಹಾಯ ಮಾಡಿದನು.
“ನೀವು ಶಾಸ್ತ್ರಗ್ರಂಥವನ್ನಾಗಲಿ ದೇವರ ಶಕ್ತಿಯನ್ನಾಗಲಿ ತಿಳಿಯದಿರುವುದರಿಂದಲೇ ತಪ್ಪರ್ಥಮಾಡಿಕೊಂಡಿದ್ದೀರಿ.”—ಮತ್ತಾಯ 22:29