ಪಾಠ 92
ಮೀನು ಹಿಡಿಯುವವರಿಗೆ ಯೇಸು ಕಾಣಿಸಿಕೊಂಡನು
ಯೇಸು ಅಪೊಸ್ತಲರಿಗೆ ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ ಪೇತ್ರ ಗಲಿಲಾಯದ ಸಮುದ್ರಕ್ಕೆ ಮೀನು ಹಿಡಿಯಲು ಹೋದನು. ಅವನ ಜೊತೆ ತೋಮ, ಯಾಕೋಬ, ಯೋಹಾನ ಮತ್ತು ಇತರ ಶಿಷ್ಯರೂ ಹೋದರು. ರಾತ್ರಿಯಿಡೀ ಬಲೆ ಬೀಸಿದರೂ ಅವರಿಗೆ ಒಂದೇ ಒಂದು ಮೀನು ಸಿಗಲಿಲ್ಲ.
ಮಾರನೇ ದಿನ ಮುಂಜಾನೆ ದಡದಲ್ಲಿ ಯಾರೋ ಒಬ್ಬ ವ್ಯಕ್ತಿ ನಿಂತಿರುವುದನ್ನು ಅವರು ಕಂಡರು. ಆ ವ್ಯಕ್ತಿ ಅವರಿಗೆ ‘ನಿಮಗೆ ಮೀನು ಸಿಕ್ಕಿತಾ?’ ಎಂದು ಕೇಳಿದನು. ಆಗ ಅವರು ‘ಇಲ್ಲ!’ ಅಂದರು. ಆಗ ಅವನು “ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿ” ಅಂದನು. ಅವರು ಹಾಗೆ ಮಾಡಿದಾಗ ಬಲೆ ತುಂಬ ಮೀನು ಸಿಕ್ಕಿತು! ಎಷ್ಟೆಂದರೆ ಬಲೆಯನ್ನು ಮೇಲೆ ಎಳೆಯಲು ಆಗಲೇ ಇಲ್ಲ. ಯೋಹಾನನಿಗೆ ಆ ದಡದಲ್ಲಿ ನಿಂತ ವ್ಯಕ್ತಿ ಯೇಸುವೇ ಎಂದು ಗೊತ್ತಾಯಿತು. ಆಗ ಅವನು “ಅದು ಕರ್ತನೇ” ಎಂದನು. ಪೇತ್ರ ತಕ್ಷಣ ನೀರಿಗೆ ಹಾರಿ ದಡಕ್ಕೆ ಈಜುತ್ತಾ ಹೋದನು. ಇತರ ಶಿಷ್ಯರು ದೋಣಿಯನ್ನು ದಡಕ್ಕೆ ನಡೆಸುತ್ತಾ ಅವನನ್ನು ಹಿಂಬಾಲಿಸಿದರು.
ಅವರು ದಡಕ್ಕೆ ಬಂದಾಗ ಕೆಂಡದ ಮೇಲೆ ರೊಟ್ಟಿ ಮತ್ತು ಮೀನು ಸುಡುತ್ತಿರುವುದನ್ನು ಕಂಡರು. ತಿನ್ನಲು ಇನ್ನೂ ಸ್ವಲ್ಪ ಮೀನನ್ನು ತರುವಂತೆ ಯೇಸು ಅವರಿಗೆ ಹೇಳಿದನು. ಆಮೇಲೆ ಅವನು “ಬನ್ನಿರಿ, ಉಪಹಾರವನ್ನು ಸೇವಿಸಿರಿ” ಅಂದನು.
ಅವರು ಉಪಹಾರವನ್ನು ಸೇವಿಸಿದ ನಂತರ ಯೇಸು ಪೇತ್ರನಿಗೆ ‘ಮೀನು ಹಿಡಿಯುವುದಕ್ಕಿಂತ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ?’ ಅಂದನು. ಅದಕ್ಕೆ ಪೇತ್ರ ‘ಹೌದು ಕರ್ತನೇ, ಇದು ನಿನಗೆ ಚೆನ್ನಾಗಿ ಗೊತ್ತು’ ಅಂದನು. ಆಗ ಯೇಸು ‘ಹಾಗಾದರೆ ನನ್ನ ಕುರಿಮರಿಗಳನ್ನು ಮೇಯಿಸು’ ಎಂದನು. ಮತ್ತೊಮ್ಮೆ ಯೇಸು ‘ಪೇತ್ರನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?’ ಎಂದನು. ಅದಕ್ಕೆ ಪೇತ್ರ ‘ನಾನು ಪ್ರೀತಿಸುತ್ತೇನೆಂದು ನಿನಗೇ ಗೊತ್ತು’ ಅಂದನು. ಆಗ ಯೇಸು “ನನ್ನ ಚಿಕ್ಕ ಕುರಿಗಳನ್ನು ಪಾಲಿಸು” ಅಂದನು. ಯೇಸು ಮೂರನೇ ಸಾರಿ ಕೇಳಿದಾಗ ಪೇತ್ರನಿಗೆ ತುಂಬಾ ದುಃಖವಾಯಿತು. ಅವನು ‘ಕರ್ತನೇ, ನಿನಗೆ ಎಲ್ಲಾ ಗೊತ್ತು. ನಿನ್ನನ್ನು ನಾನು ಪ್ರೀತಿಸುತ್ತೇನೆ ಅಂತ ನಿನಗೆ ಚೆನ್ನಾಗಿ ಗೊತ್ತು’ ಅಂದನು. ಅದಕ್ಕೆ ಯೇಸು “ನನ್ನ ಚಿಕ್ಕ ಕುರಿಗಳನ್ನು ಮೇಯಿಸು” ಅಂದನು. ಆಮೇಲೆ ಪೇತ್ರನಿಗೆ “ನನ್ನನ್ನು ಹಿಂಬಾಲಿಸುತ್ತಾ ಇರು” ಅಂದನು.
“ಆಗ ಅವನು [ಯೇಸು] ಅವರಿಗೆ, ‘ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು’ ಎಂದು ಹೇಳಿದನು. ಆ ಕೂಡಲೆ ಅವರು ಬಲೆಗಳನ್ನು ಬಿಟ್ಟು ಅವನನ್ನು ಹಿಂಬಾಲಿಸಿದರು.”—ಮತ್ತಾಯ 4:19, 20