ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 23

ಎಲ್ಲಾ ಕಡೆಗೂ ಸುವಾರ್ತೆ

ಎಲ್ಲಾ ಕಡೆಗೂ ಸುವಾರ್ತೆ

ದೇಶ ವಿದೇಶಗಳಲ್ಲಿ ಸುವಾರ್ತೆ ಸಾರಲಿಕ್ಕಾಗಿ ಪೌಲನು ಭೂಮಾರ್ಗ ಹಾಗೂ ಜಲಮಾರ್ಗವಾಗಿ ಪ್ರಯಾಣ ಕೈಗೊಳ್ಳುತ್ತಾನೆ

ಪೌಲನು ಯೇಸುವಿನ ಹಿಂಬಾಲಕನಾದ ಬಳಿಕ ದೇವರ ರಾಜ್ಯದ ಕುರಿತು ಬಹಳ ಹುರುಪಿನಿಂದ ಸಾರತೊಡಗಿದನು. ಇದರಿಂದಾಗಿ, ಹಿಂದೊಮ್ಮೆ ಯೇಸುವಿನ ಶಿಷ್ಯರನ್ನು ವಿರೋಧಿಸುತ್ತಿದ್ದ ಪೌಲನೇ ಈಗ ಸ್ವತಃ ತೀವ್ರ ವಿರೋಧಕ್ಕೆ ಗುರಿಯಾಗಬೇಕಾಯಿತು. ಆದರೂ, ಅವನ ಸಾರುವ ಹುಮ್ಮಸ್ಸು ಕಡಿಮೆಯಾಗಲಿಲ್ಲ. ಮಾನವರಿಗಾಗಿ ಆದಿಯಲ್ಲಿ ದೇವರು ಉದ್ದೇಶಿಸಿದ ವಿಷಯಗಳನ್ನೆಲ್ಲಾ ದೇವರ ರಾಜ್ಯವು ಈಡೇರಿಸುವುದೆಂಬ ಸುವಾರ್ತೆಯನ್ನು ದೇಶವಿದೇಶಗಳಲ್ಲಿ ಸಾರಲಿಕ್ಕಾಗಿ ಅವನು ಹಲವಾರು ಸಲ ‘ಸುವಾರ್ತಾ ಪ್ರಯಾಣ’ ಕೈಗೊಂಡನು.

ಮೊದಲ ಸುವಾರ್ತಾ ಪ್ರಯಾಣದ ಸಂದರ್ಭದಲ್ಲಿ ಅವನು ಲುಸ್ತ್ರ ಪಟ್ಟಣಕ್ಕೆ ಬಂದು ಅಲ್ಲಿ ಹುಟ್ಟು ಕುಂಟನಾಗಿದ್ದ ಒಬ್ಬನನ್ನು ಗುಣಪಡಿಸಿದನು. ಅದನ್ನು ನೋಡಿದ ಜನರೆಲ್ಲರೂ ಪೌಲ ಹಾಗೂ ಅವನ ಸಂಗಡಿಗನಾದ ಬಾರ್ನಬನನ್ನು ದೇವತೆಗಳೆಂದು ಭಾವಿಸಿ ಕೂಗಾಡುತ್ತಾ ಅವರಿಬ್ಬರಿಗೆ ಬಲಿಗಳನ್ನು ಅರ್ಪಿಸಲು ಮುಂದಾದರು. ಅವರನ್ನು ತಡೆಯಲು ಪೌಲ ಮತ್ತು ಬಾರ್ನಬರು ತುಂಬ ಪ್ರಯಾಸಪಡಬೇಕಾಯಿತು. ಮುಂದೆ ಇದೇ ಜನರು ಪೌಲನ ವಿರೋಧಿಗಳಿಂದ ಪ್ರಚೋದಿತರಾಗಿ ಅವನಿಗೆ ಕಲ್ಲೆಸೆದು ಸತ್ತನೆಂದು ಭಾವಿಸಿ ಬಿಟ್ಟು ಹೋದರು. ಆದರೆ ಪೌಲನು ಬದುಕಿ ಉಳಿದನು ಮತ್ತು ಸಕಾಲದಲ್ಲಿ ಆ ಪಟ್ಟಣಕ್ಕೆ ಹಿಂದಿರುಗಿ ಹೋಗಿ ಅಲ್ಲಿದ್ದ ಶಿಷ್ಯರನ್ನು ಪ್ರೋತ್ಸಾಹದ ಮಾತುಗಳಿಂದ ಧೈರ್ಯಪಡಿಸಿದನು.

ಮೋಶೆಯ ಧರ್ಮಶಾಸ್ತ್ರದಲ್ಲಿರುವ ಕೆಲವು ವಿಷಯಗಳನ್ನು ಯೆಹೂದ್ಯರಲ್ಲದ ವಿಶ್ವಾಸಿಗಳು ತಪ್ಪದೇ ಪಾಲಿಸಬೇಕು ಎಂಬುದು ಕೆಲವು ಯೆಹೂದಿ ಕ್ರೈಸ್ತರ ತರ್ಕವಾಗಿತ್ತು. ಈ ಸಮಸ್ಯೆಯ ಕುರಿತು ಅಪೊಸ್ತಲರಿಗೂ ಹಿರೀಪುರುಷರಿಗೂ ತಿಳಿಸಲಿಕ್ಕಾಗಿ ಪೌಲನು ಯೆರೂಸಲೇಮಿಗೆ ಹೋದನು. ಅಪೊಸ್ತಲರು ಮತ್ತು ಹಿರೀಪುರುಷರು ಒಟ್ಟುಗೂಡಿ ಶಾಸ್ತ್ರವಚನಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ ದೇವರ ಪವಿತ್ರಾತ್ಮದ ಸಹಾಯದಿಂದ ಒಂದು ತೀರ್ಮಾನ ತೆಗೆದುಕೊಂಡರು. ಅನಂತರ ಸಭೆಗಳಿಗೆ ಪತ್ರ ಬರೆದು ಕುತ್ತಿಗೆ ಹಿಸುಕಿ ಕೊಂದದ್ದನ್ನು ಹಾಗೂ ರಕ್ತವನ್ನು ತಿನ್ನುವುದರಿಂದ, ವಿಗ್ರಹರಾಧನೆಯಿಂದ, ಹಾದರದಿಂದ ಸಭೆಯವರು ದೂರವಿರಬೇಕೆಂದು ನಿರ್ದೇಶನ ನೀಡಿದರು. ಅಂಥ ನಿಯಮಗಳು ‘ಆವಶ್ಯಕ ವಿಷಯಗಳಾಗಿದ್ದು’ ಅವುಗಳನ್ನು ಪಾಲಿಸುವಾಗ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸುವ ಅಗತ್ಯ ಇಲ್ಲವೆಂದು ತಿಳಿಸಿ ಅವರು ಸಮಸ್ಯೆಯನ್ನು ಇತ್ಯರ್ಥಗೊಳಿಸಿದರು.—ಅಪೊಸ್ತಲರ ಕಾರ್ಯಗಳು 15:28, 29.

ಪೌಲನು ಎರಡನೇ ಬಾರಿ ಸುವಾರ್ತಾ ಪ್ರಯಾಣ ಕೈಗೊಂಡಾಗ ಬೆರೋಯ ಪಟ್ಟಣಕ್ಕೆ ಭೇಟಿ ನೀಡಿ ಅಲ್ಲಿ ಸುವಾರ್ತೆ ಸಾರಿದನು. ಆ ಪಟ್ಟಣವು ಈಗಿನ ಗ್ರೀಸ್‌ ದೇಶದಲ್ಲಿದೆ. ಬೆರೋಯ ಪಟ್ಟಣದಲ್ಲಿ ಜೀವಿಸುತ್ತಿದ್ದ ಯೆಹೂದ್ಯರು ಪೌಲನ ಮಾತುಗಳನ್ನು ಅತ್ಯಾಸಕ್ತಿಯಿಂದ ಸ್ವೀಕರಿಸಿ ಅವನು ಹೇಳಿದ ವಿಷಯವು ಸರಿಯೋ ಎಂದು ದಿನವೂ ಶಾಸ್ತ್ರಗ್ರಂಥದಲ್ಲಿ ಪರಿಶೀಲಿಸಿ ನೋಡಿದರು. ಅಲ್ಲಿಯೂ ವಿರೋಧ ಉಂಟಾದ ಕಾರಣ ಅವನು ಆ ಊರನ್ನು ಬಿಟ್ಟು ಅಥೆನ್ಸ್‌ ಪಟ್ಟಣಕ್ಕೆ ಹೋಗಬೇಕಾಯಿತು. ಆ ಪಟ್ಟಣದ ಮೇಧಾವಿ ಜನರಿಗೆ ಪೌಲನು ಪ್ರಬಲವಾದ ಭಾಷಣ ನೀಡಿದನು. ಜಾಣ್ಮೆ, ವಿವೇಚನೆಯನ್ನು ಉಪಯೋಗಿಸಿ ಮನಮುಟ್ಟುವಂಥ ರೀತಿಯಲ್ಲಿ ಹೇಗೆ ಮಾತಾಡಬೇಕೆಂಬುದಕ್ಕೆ ಅವನು ನೀಡಿದ ಭಾಷಣವು ಒಂದು ಉತ್ತಮ ಉದಾಹರಣೆಯಾಗಿದೆ.

ಪೌಲನು ತನ್ನ ಮೂರನೆಯ ಸುವಾರ್ತಾ ಪ್ರಯಾಣದ ನಂತರ ಯೆರೂಸಲೇಮಿಗೆ ಹೋದನು. ಅಲ್ಲಿ ದೇವಾಲಯಕ್ಕೆ ಹೋದಾಗ ಕೆಲವು ಯೆಹೂದ್ಯರು ಅವನ ವಿರುದ್ಧ ದೊಂಬಿಯೆಬ್ಬಿಸಿ ಅವನನ್ನು ಕೊಲ್ಲಲು ಹವಣಿಸಿದರು. ಆದರೆ, ರೋಮನ್‌ ಸೈನಿಕರು ಮಧ್ಯೆ ಪ್ರವೇಶಿಸಿ ಪೌಲನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದರು. ಒಬ್ಬ ರೋಮನ್‌ ಪ್ರಜೆಯಾಗಿದ್ದ ಪೌಲನಿಗೆ ತದನಂತರ ರೋಮ್‌ನ ರಾಜ್ಯಪಾಲ ಫೆಲಿಕ್ಸನ ಮುಂದೆ ವಾದ ಮಂಡಿಸುವ ಸಂದರ್ಭ ಒದಗಿಬಂತು. ಪೌಲನ ವಿರುದ್ಧ ತಾವು ಹೊರಿಸಿದ್ದ ಯಾವ ಆರೋಪಗಳಿಗೂ ಯೆಹೂದ್ಯರಿಂದ ಸಾಕ್ಷ್ಯ ಒದಗಿಸಲಾಗಲಿಲ್ಲ. ಅನಂತರ ರೋಮಿನ ಇನ್ನೊಬ್ಬ ರಾಜ್ಯಪಾಲನಾದ ಫೆಸ್ತನು ಪೌಲನನ್ನು ಯೆಹೂದ್ಯರ ವಶಕ್ಕೆ ಒಪ್ಪಿಸಬೇಕೆಂದಿದ್ದನು. ಆಗ ಪೌಲನು “ನಾನು ಕೈಸರನಿಗೆ ಮನವಿಮಾಡಿಕೊಳ್ಳುತ್ತೇನೆ!” ಅಂದನು. ಅದಕ್ಕೆ ಫೆಸ್ತನು, “ನೀನು ಕೈಸರನ ಬಳಿಗೇ ಹೋಗುವಿ” ಎಂದು ಉತ್ತರಿಸಿದನು.—ಅಪೊಸ್ತಲರ ಕಾರ್ಯಗಳು 25:11, 12.

ಪೌಲನನ್ನು ನಂತರ ವಿಚಾರಣೆಗಾಗಿ ಹಡಗಿನ ಮೂಲಕ ಇಟಲಿಗೆ ಕರೆದೊಯ್ಯಲಾಯಿತು. ಸಮುದ್ರದಲ್ಲಿ ಹಡಗೊಡೆತ ಉಂಟಾದ್ದರಿಂದ ಅವನು ಮಿಲೇತ ದ್ವೀಪದಲ್ಲಿ ಚಳಿಗಾಲವನ್ನು ಕಳೆಯಬೇಕಾಯಿತು. ಕೊನೆಗೆ ರೋಮ್‌ಗೆ ಬಂದಾಗ ಎರಡು ವರ್ಷಗಳ ವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಿದನು. ಅಲ್ಲಿ ಅವನನ್ನು ಸೈನಿಕರ ಕಾವಲಿನಲ್ಲಿ ಇಡಲಾಗಿತ್ತಾದರೂ ಹುರುಪಿನ ಅಪೊಸ್ತಲನಾದ ಅವನು ತನ್ನನ್ನು ಭೇಟಿಯಾದವರೆಲ್ಲರಿಗೂ ದೇವರ ರಾಜ್ಯದ ಸಂದೇಶವನ್ನು ಸಾರಿದನು.

ಅಪೊಸ್ತಲರ ಕಾರ್ಯಗಳು 11:22–28:31 ರ ಮೇಲೆ ಆಧಾರಿತವಾಗಿದೆ.