ಅಧ್ಯಾಯ 24
ಕಳ್ಳತನ ಮಾಡಬೇಡ
ನಿನ್ನ ಪೆನ್ನೋ ಪೆನ್ಸಿಲ್ಲೋ ಯಾವತ್ತಾದರೂ ಕಳುವಾಗಿತ್ತಾ?— ಅದನ್ನು ಯಾರೋ ಕದ್ದಿರುವುದು ಗೊತ್ತಾದಾಗ ನಿನಗೆ ಹೇಗನಿಸಿತು?— ಅದನ್ನು ಯಾರೇ ಕದ್ದಿರಲಿ ಅವನು ಕಳ್ಳ. ಕಳ್ಳತನ ಮಾಡುವವರನ್ನು ಯಾರೂ ಇಷ್ಟಪಡುವುದಿಲ್ಲ. ಒಬ್ಬನು ಕಳ್ಳನಾಗಲು ಕಾರಣವೇನು? ಹುಟ್ಟುವಾಗಲೇ ಅವನಲ್ಲಿ ಕದಿಯುವ ಗುಣ ಇರುತ್ತದಾ?—
ಕಳೆದ ಅಧ್ಯಾಯದಲ್ಲಿ ಕಲಿತಂತೆ, ನಾವು ಹುಟ್ಟುವಾಗಲೇ ಪಾಪಿಗಳಾಗಿ ಹುಟ್ಟುತ್ತೇವೆ. ಹಾಗಾಗಿ ನಾವೆಲ್ಲರೂ ಅಪರಿಪೂರ್ಣ ಮನುಷ್ಯರಾಗಿದ್ದೇವೆ. ಆದರೆ ಯಾರೂ ಕಳ್ಳನಾಗಿ ಹುಟ್ಟುವುದಿಲ್ಲ. ಕಳ್ಳನಾಗಿರುವ ಒಬ್ಬ ವ್ಯಕ್ತಿ ಒಳ್ಳೇ ಮನೆತನದಿಂದಲೇ ಬಂದವನಾಗಿರಬಹುದು. ಅವನ ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಎಲ್ಲರೂ ಪ್ರಾಮಾಣಿಕ ವ್ಯಕ್ತಿಗಳಾಗಿರಬಹುದು. ಆದರೆ ಅವನಲ್ಲಿರುವ ಅತ್ಯಾಸೆಯು ಅವನನ್ನು ಕಳ್ಳತನ ಮಾಡುವಂತೆ ಪ್ರೇರಿಸಬಹುದು. ಉದಾಹರಣೆಗೆ, ಅವನಿಗೆ ಹಣದ ಮೇಲೆ ವ್ಯಾಮೋಹ ಹುಟ್ಟಿಕೊಳ್ಳಬಹುದು ಅಥವಾ ಬಗೆಬಗೆಯ ವಸ್ತುಗಳು ಬೇಕೆಂಬ ಅತ್ಯಾಸೆ ಅವನಲ್ಲಿ ಮೂಡಬಹುದು.
ವಿಶ್ವದ ಮೊಟ್ಟಮೊದಲ ಕಳ್ಳ ಯಾರೆಂದು ನಿನಗೆ ಗೊತ್ತಿದೆಯಾ?— ಅವನು ಯಾರೆಂದು ಮಹಾ ಬೋಧಕನಿಗೆ ಗೊತ್ತಿತ್ತು. ಆ ಕಳ್ಳ ಒಬ್ಬ ದೇವದೂತನಾಗಿದ್ದ. ದೇವರು ಸೃಷ್ಟಿಮಾಡಿದ ಎಲ್ಲಾ ದೇವದೂತರು ಪರಿಪೂರ್ಣರಾಗಿದ್ದರಲ್ವಾ. ಹಾಗಾದರೆ ಆ ಒಬ್ಬ ದೇವದೂತ ಹೇಗೆ ಕಳ್ಳನಾದ?— ನಾವು ಅಧ್ಯಾಯ 8ರಲ್ಲಿ ಕಲಿತಂತೆ, ದೇವರಿಗೆ ಸೇರಿದ ಒಂದು ವಿಷಯಕ್ಕಾಗಿ ಅವನು ಆಸೆಪಟ್ಟ. ಅದೇನೆಂದು ನೆನಪಿದೆಯಾ?—
ದೇವರು ಸೃಷ್ಟಿಸಿದ ಮೊದಲ ಸ್ತ್ರೀಪುರುಷರು ತನ್ನನ್ನು ಆರಾಧಿಸಬೇಕೆಂದು ಆ ದೇವದೂತನು ಬಯಸಿದ. ಅವರ ಆರಾಧನೆಯನ್ನು ಪಡೆಯುವ ಹಕ್ಕು ಅವನಿಗೆ ಇರಲಿಲ್ಲ. ಏಕೆಂದರೆ ಅವರು ಸಲ್ಲಿಸುವ ಆರಾಧನೆ ದೇವರಿಗೆ ಮಾತ್ರ ಸೇರಬೇಕಾಗಿತ್ತು. ಆದರೆ ಅದನ್ನವನು ಕದ್ದುಬಿಟ್ಟ! ಆದಾಮಹವ್ವರು ತನ್ನನ್ನು ಆರಾಧಿಸುವಂತೆ ಮಾಡಿ ಆ ದೇವದೂತ ಕಳ್ಳನಾದ, ಪಿಶಾಚನಾದ ಸೈತಾನನಾದ.
ಈಗ ಹೇಳು, ಯಾವುದು ಒಬ್ಬನನ್ನು ಕಳ್ಳನನ್ನಾಗಿ ಮಾಡುತ್ತದೆ?— ತನಗೆ ಸೇರದ ಒಂದು ವಿಷಯವನ್ನು ಪಡೆಯಬೇಕೆಂಬ ಆಸೆಯೇ. ಈ ಆಸೆಯ ಸೆಳೆತ ಎಷ್ಟಿರುತ್ತೆಂದರೆ, ಒಳ್ಳೆಯವರು ಸಹ ಕೆಟ್ಟ ಕೆಲಸಗಳನ್ನು ಮಾಡಿಬಿಡುತ್ತಾರೆ. ಕಳ್ಳತನಕ್ಕೆ ಇಳಿದವರು ಕೆಲವೊಮ್ಮೆ ಬದಲಾಗುವುದೇ ಇಲ್ಲ. ಇಂಥವರಲ್ಲಿ ಒಬ್ಬನು ಯೇಸುವಿನ ಅಪೊಸ್ತಲನಾಗಿದ್ದ ಇಸ್ಕರಿಯೋತ ಯೂದ.
ವಿಮೋಚನಕಾಂಡ 20:15) ಯೂದನು ಬೆಳೆದು ದೊಡ್ಡವನಾದಾಗ ಮಹಾ ಬೋಧಕನ ಶಿಷ್ಯರಲ್ಲಿ ಒಬ್ಬನಾದನು. ಯೇಸು ಯೂದನನ್ನು ತನ್ನ 12 ಮಂದಿ ಅಪೊಸ್ತಲರಲ್ಲಿ ಒಬ್ಬನನ್ನಾಗಿ ಸಹ ಆಯ್ಕೆಮಾಡಿದನು.
ಕಳ್ಳತನ ತಪ್ಪೆಂದು ಯೂದನಿಗೆ ಚೆನ್ನಾಗಿ ಗೊತ್ತಿತ್ತು. ಬಾಲ್ಯದಲ್ಲೇ ಅವನು ದೇವರ ನಿಯಮಗಳಿದ್ದ ಧರ್ಮಶಾಸ್ತ್ರವನ್ನು ಕಲಿತಿದ್ದನು. “ಕದಿಯಬಾರದು” ಎಂದು ಸ್ವರ್ಗದಿಂದ ದೇವರೇ ತನ್ನ ಜನರಿಗೆ ಹೇಳಿದ ವಿಷಯ ಅವನಿಗೆ ತಿಳಿದಿತ್ತು. (ಈ ಅಪೊಸ್ತಲರು ಯಾವಾಗಲೂ ಯೇಸುವಿನೊಟ್ಟಿಗೆ ಪ್ರಯಾಣಿಸುತ್ತಿದ್ದರು. ಅವರೆಲ್ಲ ಒಟ್ಟಿಗೆ ಊಟಮಾಡುತ್ತಿದ್ದರು. ಅದರ ಖರ್ಚಿಗೆ ಬೇಕಾದ ಹಣವನ್ನೆಲ್ಲಾ ಚಿಕ್ಕ ಪೆಟ್ಟಿಗೆಯೊಂದರಲ್ಲಿ ಇಡುತ್ತಿದ್ದರು. ಆ ಪೆಟ್ಟಿಗೆಯನ್ನು ಯೇಸು ಯೂದನಿಗೆ ಕೊಟ್ಟು ಅದರ ಜಾಗ್ರತೆ ವಹಿಸುವಂತೆ ಹೇಳಿದ್ದನು. ಆದರೆ ಸಮಯಾನಂತರ ಯೂದನು ಏನು ಮಾಡಿದನು ಗೊತ್ತಾ?—
ಅವನು ಪೆಟ್ಟಿಗೆಯಿಂದ ಹಣವನ್ನು ಕದಿಯಲಾರಂಭಿಸಿದನು. ಬೇರೆಯವರು ನೋಡದೆ ಇದ್ದಾಗ ಮೆಲ್ಲಗೆ ಹಣವನ್ನು ತೆಗೆಯುತ್ತಿದ್ದನು. ಇನ್ನು ಹೆಚ್ಚು ಹಣವನ್ನು ಕದಿಯುವುದು ಹೇಗೆ ಅಂತ ನೋಡುತ್ತಿದ್ದನು. ಯಾವಾಗಲೂ ಹಣ ಹಣ ಅಂತ ಯೋಚಿಸುತ್ತಿದ್ದನು. ಈ ಕೆಟ್ಟ ಆಸೆ ಯೂದನನ್ನು ಎಲ್ಲಿಗೆ ನಡೆಸಿತು ಅಂತ ನೋಡೋಣ. ಮಹಾ ಬೋಧಕನ ಮರಣದ ಕೆಲವು ದಿನಗಳ ಮುಂಚೆ ಒಂದು ಸಂಗತಿ ನಡೆಯಿತು.
ಯೇಸುವಿನ ಆಪ್ತಮಿತ್ರ ಲಾಜರನ ಅಕ್ಕ ಮರಿಯ ಒಂದು ದಿನ ಬೆಲೆಬಾಳುವ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳು ತೋಯುವಂತೆ ಹೊಯ್ದಳು. ಅದು ಯೂದನಿಗೆ ಇಷ್ಟವಾಗಲಿಲ್ಲ. ಅವನು ಗೊಣಗಲಾರಭಿಸಿದನು. ಏಕೆ ಗೊತ್ತಾ?— ಏಕೆಂದರೆ ಆ ತೈಲವನ್ನು ಹಾಗೆ ಸುರಿದು ವ್ಯರ್ಥಮಾಡುವ ಬದಲು ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬಹುದಿತ್ತು ಎಂದು ಅವನು ಹೇಳಿದನು. ಆದರೆ ಅವನ ಮನಸ್ಸಿನಲ್ಲಿ ಹಣದ ಪೆಟ್ಟಿಗೆಯಲ್ಲಿ ಹೆಚ್ಚೆಚ್ಚು ಹಣ ತುಂಬಲಿ ಎಂಬ ಆಶೆಯಿತ್ತು. ಹೆಚ್ಚು ಹಣ ತುಂಬಿದರೆ ಹೆಚ್ಚು ಹಣ ಕದಿಯಬಹುದಿತ್ತಲ್ವಾ.—ಯೋಹಾನ 12:1-6.
ಆದರೆ ಯೇಸು ಯೂದನಿಗೆ, ಮರಿಯಳನ್ನು ತಡೆಯಬೇಡ ಆಕೆ ಒಳ್ಳೇ ಕೆಲಸವನ್ನೇ ಮಾಡುತ್ತಿದ್ದಾಳೆಂದು ಹೇಳಿದನು. ಯೇಸುವಿನ ಆ ಮಾತು ಯೂದನಿಗೆ ಇಷ್ಟವಾಗಲಿಲ್ಲ. ಅವನು ಅಲ್ಲಿಂದ ಎದ್ದು ಮುಖ್ಯ ಯಾಜಕರ ಬಳಿಗೆ ಹೋದನು. ಯೇಸುವಿನ ವೈರಿಗಳಾದ ಮುಖ್ಯ ಯಾಜಕರು ಯೇಸುವನ್ನು ಬಂಧಿಸಲು ತುಂಬಾ ದಿನಗಳಿಂದ ಹೊಂಚು ಹಾಕುತ್ತಿದ್ದರು. ಆದರೆ ಜನರಿಗೆ ಗೊತ್ತಾಗದ ಹಾಗೆ ರಾತ್ರಿಯಲ್ಲೇ ಅವನನ್ನು ಬಂಧಿಸಬೇಕೆಂದು ಕಾಯುತ್ತಿದ್ದರು.
ಹೀಗಿರುವಾಗ ಯೂದನು ಆ ಯಾಜಕರ ಬಳಿ ಹೋಗಿ, ‘ನೀವು ನನಗೆ ಹಣ ಕೊಟ್ಟರೆ, ಯೇಸುವನ್ನು ಬಂಧಿಸಲು ಉಪಾಯ ಹೇಳಿಕೊಡ್ತೀನಿ. ನೀವು ನನಗೆಷ್ಟು ಹಣ ಕೊಡುವಿರಿ?’ ಎಂದು ಕೇಳಿದನು.
‘ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡುತ್ತೇವೆ’ ಅಂತ ಯಾಜಕರು ಉತ್ತರಿಸಿದರು.—ಯೂದನು ಅವರು ಕೊಟ್ಟ ಹಣವನ್ನು ತಗೊಂಡ. ಕೇವಲ ಮೂವತ್ತು ಬೆಳ್ಳಿ ನಾಣ್ಯಗಳಿಗಾಗಿ ಅವನು ಮಹಾ ಬೋಧಕನನ್ನು ಅವರಿಗೆ ಮಾರಿಬಿಟ್ಟಂತಾಯಿತು. ಛೇ! ಇಂಥ ನೀಚ ಕೆಲಸ ಮಾಡಲು ಅವನಿಗೆ ಮನಸ್ಸಾದರೂ ಹೇಗೆ ಬಂತೋ? ಅವನು ಮಾಡಿದ್ದು ನೀಚ ಕೆಲಸ ಅಲ್ವಾ?— ಹೌದು, ಕಳ್ಳತನ ಒಬ್ಬನಿಂದ ಎಂಥ ನೀಚ ಕೆಲಸವನ್ನು ಬೇಕಾದರೂ ಮಾಡಿಸುತ್ತದೆ. ಹಣದ ಮೇಲಿನ ವ್ಯಾಮೋಹ, ಜನರ ಹಾಗೂ ದೇವರ ಮೇಲಿನ ಪ್ರೀತಿಯನ್ನು ಕಡೆಗಣಿಸಿ ಬಿಡುವಂತೆ ಮಾಡುತ್ತದೆ.
‘ಇಲ್ಲಪ್ಪ, ನಾನು ಮಾತ್ರ ಎಲ್ಲಕ್ಕಿಂತಲೂ ಹೆಚ್ಚಾಗಿ ಯೆಹೋವ ದೇವರನ್ನೇ ಪ್ರೀತಿಸುತ್ತೇನೆ’ ಅಂತ ನೀನು ಹೇಳಬಹುದು. ಅಂಥ ಅನಿಸಿಕೆ ಇರುವುದು ತುಂಬಾ ಒಳ್ಳೇದು. ಯೂದನನ್ನು ತನ್ನ ಅಪೊಸ್ತಲನನ್ನಾಗಿ ಯೇಸು ಆರಿಸಿಕೊಂಡಾಗ ಅಂಥ ಅನಿಸಿಕೆ ಯೂದನಿಗೂ ಇದ್ದಿರಬಹುದು. ಅವನಿಗೆ ಮಾತ್ರವಲ್ಲ, ಕದಿಯುವ ಚಟಕ್ಕೆ ಬಲಿಬಿದ್ದ ಪ್ರತಿಯೊಬ್ಬರಿಗೂ ಮೊದಲು ಅಂಥದ್ದೇ ಅನಿಸಿಕೆ ಇದ್ದಿರಬಹುದು. ಅಂಥ ಕೆಲವು ಜನರ ಕುರಿತು ನಾವೀಗ ನೋಡೋಣ.
ಅವರಲ್ಲಿ ಆಕಾನ ಎಂಬವನು ಒಬ್ಬ. ಇವನು ದೇವರ ಸೇವಕನಾಗಿದ್ದನು. ಮಹಾ ಬೋಧಕನು ಭೂಮಿಯಲ್ಲಿ ಹುಟ್ಟುವ ಎಷ್ಟೋ ವರ್ಷಗಳ ಹಿಂದೆ ಇವನು ಜೀವಿಸಿದ್ದನು. ಒಮ್ಮೆ ಆಕಾನನಿಗೆ ಸುಂದರವಾದ ನಿಲುವಂಗಿ, ಬಂಗಾರದ ಗಟ್ಟಿ ಮತ್ತು ಬೆಳ್ಳಿಯ ಮೇಲೆ ಕಣ್ಣು ಬಿತ್ತು. ಅವು ಆಕಾನನಿಗೆ ಸೇರಿದ್ದಾಗಿರಲಿಲ್ಲ. ಅವು ಯೆಹೋವನಿಗೆ ಸೇರಿದ್ದಾಗಿದ್ದವು ಮತ್ತು ಅವುಗಳನ್ನು ದೇವಜನರ ಶತ್ರುಗಳಿಂದ ವಶಪಡಿಸಿಕೊಳ್ಳಲಾಗಿತ್ತು ಎಂದು ಬೈಬಲು ಯೆಹೋಶುವ 6:19; 7:11, 20-22.
ತಿಳಿಸುತ್ತದೆ. ಆದರೆ ಆಕಾನನಿಗೆ ಅವುಗಳನ್ನು ನೋಡಿ ಎಷ್ಟು ಆಸೆ ಆಯಿತೆಂದರೆ, ಅವನ್ನು ಕದ್ದುಬಿಟ್ಟ.—ಇನ್ನೊಂದು ಉದಾಹರಣೆ ಹೇಳುತ್ತೇನೆ ಕೇಳು. ಬಹಳ ಕಾಲದ ಹಿಂದೆ, ಯೆಹೋವನು ದಾವೀದ ಎಂಬ ವ್ಯಕ್ತಿಯನ್ನು ಇಸ್ರಾಯೇಲ್ಯರ ರಾಜನಾಗುವಂತೆ ಆರಿಸಿದ್ದನು. ಒಂದು ದಿನ ದಾವೀದನು ಬತ್ಷೆಬೆ ಎಂಬ ಚೆಲುವೆಯ ರೂಪ ನೋಡಿ ಮೋಹಗೊಂಡನು. ನೋಡುತ್ತಾ ನೋಡುತ್ತಾ ಅವಳನ್ನು ಮನೆಗೆ ಕರೆಸಿಕೊಂಡು ಹೆಂಡತಿಯನ್ನಾಗಿ ಮಾಡಿಕೊಳ್ಳುವ ದುರಾಲೋಚನೆ ಅವನಲ್ಲಿ ಹುಟ್ಟಿತು. ಆದರೆ ಅವಳು ಊರೀಯ ಎಂಬವನ ಹೆಂಡತಿಯಾಗಿದ್ದಳು. ಆ ದುರಾಲೋಚನೆ ಬಂದ ಕೂಡಲೇ ದಾವೀದನು ಏನು ಮಾಡಬೇಕಿತ್ತು ಗೊತ್ತಾ?—
ಬತ್ಷೆಬೆಯ ಕುರಿತು ಯೋಚಿಸುವುದನ್ನು ದಾವೀದನು ನಿಲ್ಲಿಸಬೇಕಿತ್ತು. ಆದರೆ ಅವನು ಹಾಗೆ ಮಾಡದೇ ಅವಳನ್ನು ತನ್ನ ಮನೆಗೆ ಕರೆಸಿಕೊಂಡನು. ಅಷ್ಟೇ ಅಲ್ಲ, ಅವಳ ಗಂಡ ಊರೀಯನನ್ನು ಕೊಲ್ಲಿಸಿದನು. ಈ ರೀತಿಯ ಕೆಟ್ಟ ಕೆಲಸಗಳನ್ನು ದಾವೀದನು 2 ಸಮುವೇಲ 11:2-27.
ಏಕೆ ಮಾಡಿದನು?— ಏಕೆಂದರೆ ಬೇರೊಬ್ಬನ ಪತ್ನಿಯನ್ನು ಅವನು ಮನಸ್ಸಿನಲ್ಲೇ ಆಶಿಸುತ್ತಾ ಇದ್ದನು.—ದಾವೀದನು ತನ್ನ ತಪ್ಪನ್ನು ಒಪ್ಪಿಕೊಂಡು ಪಶ್ಚಾತ್ತಾಪಪಟ್ಟ ಕಾರಣ ಯೆಹೋವನು ಅವನಿಗೆ ಮರಣಶಿಕ್ಷೆಯನ್ನು ಕೊಡಲಿಲ್ಲ. ಆದರೆ ಅವನು ತುಂಬಾ ತೊಂದರೆಗಳನ್ನು ಅನುಭವಿಸಬೇಕಾಯಿತು. ಅವನ ಸ್ವಂತ ಮಗನಾದ ಅಬ್ಷಾಲೋಮನೇ ಅವನಿಂದ ಸಿಂಹಾಸನವನ್ನು ಕಿತ್ತುಕೊಂಡು ರಾಜನಾಗಲು ಆಶೆಪಟ್ಟನು. ಹಾಗಾಗಿ ರಾಜ ದಾವೀದನನ್ನು ಭೇಟಿಯಾಗಲು ಯಾರೇ ಬರಲಿ ಅವರನ್ನು ಅಬ್ಷಾಲೋಮನು ಓಡಿಹೋಗಿ ಅಪ್ಪಿಕೊಂಡು ಮುದ್ದಿಡುತ್ತಿದ್ದನು. ಈ ರೀತಿಯಲ್ಲಿ ಅವನು ‘ಇಸ್ರಾಯೇಲ್ಯರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿಕೊಳ್ಳುತ್ತಾ [ಅಂದರೆ ಕದಿಯುತ್ತಾ] ಇದ್ದನು’ ಎಂದು ಬೈಬಲು ತಿಳಿಸುತ್ತದೆ. ಹೀಗೆ ದಾವೀದನಿಗೆ ಬದಲಾಗಿ ತನ್ನನ್ನು ಅರಸನನ್ನಾಗಿ ಮಾಡುವಂತೆ ಅವನು ಆ ಜನರ ಮನವೊಲಿಸಿದನು.—2 ಸಮುವೇಲ 15:1-12.
ಆಕಾನ, ದಾವೀದ ಮತ್ತು ಅಬ್ಷಾಲೋಮರು ಆಶೆಪಟ್ಟಂತೆ ನೀನು ಸಹ ಯಾವುದಾದರೂ ವಸ್ತುವಿಗಾಗಿ ತುಂಬಾ ಆಸೆಪಟ್ಟಿದ್ದೀಯಾ?— ನೀನು ಆಸೆಪಟ್ಟ ಆ ವಸ್ತು ಬೇರೆಯವರಿಗೆ ಸೇರಿದ್ದಾಗಿರುವಲ್ಲಿ, ಅವರ ಅನುಮತಿಯಿಲ್ಲದೆ ಅದನ್ನು ತೆಗೆದುಕೊಳ್ಳುವುದು ಕಳ್ಳತನವಾಗಿದೆ. ವಿಶ್ವದ ಮೊಟ್ಟಮೊದಲ ಕಳ್ಳ ಸೈತಾನನು ಏನನ್ನು ಆಸೆಪಟ್ಟ ಅಂತ ನಿನಗೆ ನೆನಪಿದೆಯಾ?— ನಿಜ, ಜನರು ದೇವರನ್ನಲ್ಲ ತನ್ನನ್ನು ಆರಾಧಿಸಬೇಕೆಂದು ಆಸೆಪಟ್ಟ. ತನ್ನ ಮಾತಿಗೆ ವಿಧೇಯರಾಗುವಂತೆ ಆದಾಮ ಹವ್ವರನ್ನು ಪ್ರೇರಿಸುವ ಮೂಲಕ ದೇವರಿಗೆ ಸೇರಬೇಕಾಗಿದ್ದ ಆರಾಧನೆಯನ್ನು ಕದ್ದ.
ಒಂದು ವಸ್ತುವನ್ನು ಯಾರು ಉಪಯೋಗಿಸಬೇಕು ಅಂತ ಹೇಳುವ ಹಕ್ಕು ಯಾರಿಗೆ ಇರುತ್ತದೆ? ಅದು ಯಾರಿಗೆ ಸೇರಿದ್ದೋ ಅವರಿಗೆ ಅಲ್ವಾ. ಒಂದುವೇಳೆ ನೀನು ಆಡಲಿಕ್ಕಾಗಿ ಬೇರೆ ಮಕ್ಕಳ ಮನೆಗೆ ಹೋಗಿದ್ದಿಯಾ ಅಂತ ಇಟ್ಟುಕೋ. ಅವರ ಮನೆಯಿಂದ ಏನಾದರೂ ವಸ್ತುವನ್ನು ಗೊತ್ತಿಲ್ಲದೆ ಎತ್ತಿಕೊಂಡು ಬರುವುದು ಸರಿಯಾ?— ಇಲ್ಲ. ಅವರ ತಂದೆ ತಾಯಿ ಅನುಮತಿ ಕೊಟ್ಟರೆ ಮಾತ್ರ ತಕ್ಕೊಂಡು ಬರಬಹುದು. ಅವರನ್ನು ಕೇಳದೆ ತರುವುದು ಕಳ್ಳತನವಾಗಿದೆ.
ಕದಿಯುವ ಮನಸ್ಸು ನಿನಗೆ ಏಕೆ ಬರಬಹುದು?— ನಿನ್ನದ್ದಲ್ಲದ ಒಂದು ವಸ್ತುವನ್ನು ನೀನು ಆಸೆಪಡುವುದರಿಂದ. ಒಂದುವೇಳೆ ನೀನು ಮನುಷ್ಯರ ಕಣ್ತಪ್ಪಿಸಿ ಕದಿಯಬಹುದು. ಆದರೆ ಯಾರು ಅದನ್ನು ನೋಡಿರುತ್ತಾರೆ?— ಯೆಹೋವ ದೇವರು. ಕಳ್ಳತನವನ್ನು ದೇವರು ದ್ವೇಷಿಸುತ್ತಾನೆ ಎಂದು ನಾವೆಂದಿಗೂ ಮರೆಯಬಾರದು. ನಿನಗೆ ದೇವರ ಮೇಲೆ ಪ್ರೀತಿಯಿದ್ದರೆ ಅದೇ ರೀತಿ ನೆರೆಯವರ ಮೇಲೆ ಪ್ರೀತಿಯಿದ್ದರೆ ನೀನು ಎಂದೂ ಕಳ್ಳತನ ಮಾಡುವುದಿಲ್ಲ.
ಕದಿಯುವುದು ತಪ್ಪೆಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದೆ. ಮಾರ್ಕ 10:17-19; ರೋಮನ್ನರಿಗೆ 13:9 ಮತ್ತು ಎಫೆಸ 4:28 ಓದಿ ನೋಡೋಣ.