ಅಧ್ಯಾಯ 23
ಜನರೇಕೆ ಕಾಯಿಲೆ ಬೀಳುತ್ತಾರೆ?
ಹುಷಾರಿಲ್ಲದೆ ಇರುವವರನ್ನು ನೀನು ನೋಡಿದ್ದಿಯಾ?— ನಿನಗೂ ಕೆಲವೊಮ್ಮೆ ಕಾಯಿಲೆ ಬರಬಹುದು. ನೆಗಡಿನೋ ಹೊಟ್ಟೆ ನೋವೋ ಬರಬಹುದು. ಕೆಲವರಂತೂ ದೊಡ್ಡ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಎಷ್ಟೆಂದರೆ ಇನ್ನೊಬ್ಬರ ಸಹಾಯವಿಲ್ಲದೆ ಅವರಿಗೆ ನಿಂತುಕೊಳ್ಳಲೂ ಆಗುವುದಿಲ್ಲ. ಇಂಥ ಪರಿಸ್ಥಿತಿ ಸಾಮಾನ್ಯವಾಗಿ ಜನರಿಗೆ ವಯಸ್ಸಾಗುವಾಗ ಉಂಟಾಗುತ್ತದೆ.
ಎಲ್ಲರೂ ಒಂದಲ್ಲ ಒಂದು ಸಮಯ ಕಾಯಿಲೆ ಬೀಳುತ್ತಾರೆ. ಜನರು ಏಕೆ ಕಾಯಿಲೆ ಬೀಳುತ್ತಾರೆ, ಏಕೆ ಮುದುಕರಾಗುತ್ತಾರೆ ಮತ್ತು ಏಕೆ ಸಾಯುತ್ತಾರೆ ಅಂತ ನಿನಗೆ ಗೊತ್ತಾ?— ಒಂದು ದಿನ ಯೇಸುವಿನ ಬಳಿಗೆ ಒಬ್ಬ ವ್ಯಕ್ತಿಯನ್ನು ಕೆಲವರು ಹೊತ್ತುಕೊಂಡು ಬಂದರು. ಕಾಯಿಲೆಯಿಂದಾಗಿ ಆ ವ್ಯಕ್ತಿಗೆ ನಡೆದಾಡಲು ಆಗುತ್ತಿರಲಿಲ್ಲ. ಆಗ ಯೇಸು, ಜನರು ಯಾಕೆ ಕಾಯಿಲೆ ಬೀಳುತ್ತಾರೆ ಮತ್ತು ಸಾಯುತ್ತಾರೆ ಅಂತ ವಿವರಿಸಿದನು. ಅದನ್ನು ಹೇಳುತ್ತೇನೆ ಕೇಳು.
ಯೇಸು ಗಲಿಲಾಯ ಸಮುದ್ರದ ಬಳಿಯಿದ್ದ ಒಂದು ಊರಿಗೆ ಹೋಗಿದ್ದನು. ಅಲ್ಲಿ ಒಂದು ಮನೆಯಲ್ಲಿ ಉಳುಕೊಂಡಿದ್ದಾಗ ಅವನನ್ನು ನೋಡಲು ಜನರು ಗುಂಪು ಗುಂಪಾಗಿ ಬಂದರು. ತುಂಬಾ ಜನರು ಬಂದಿದ್ದರಿಂದ ಮನೆಯೊಳಗೆ ಸ್ವಲ್ಪವೂ ಜಾಗವಿರಲಿಲ್ಲ. ಬಾಗಿಲ ಹತ್ತಿರ ಹೋಗಲು ಜನರಿಗೆ ಆಗುತ್ತಿರಲಿಲ್ಲ. ಆದರೂ ಜನರು ಬರುತ್ತಲೇ ಇದ್ದರು. ಅಲ್ಲಿಗೆ ಲಕ್ವ ಹೊಡೆದಿದ್ದ ಒಬ್ಬ ರೋಗಿಯನ್ನು ಹೊತ್ತುಕೊಂಡು ಕೆಲವರು ಬಂದರು. ನಡೆಯಲಾಗದ ಕಾರಣ ಅವನನ್ನು ಒಂದು ಮಂಚದಲ್ಲಿ ಮಲಗಿಸಿ ನಾಲ್ಕು ಜನರು ಹೊತ್ತುಕೊಂಡು ಬರಬೇಕಾಯಿತು.
ಇಷ್ಟೊಂದು ಕಷ್ಟಪಟ್ಟು ಆ ರೋಗಿಯನ್ನು ಯೇಸುವಿನ ಬಳಿ ಯಾಕೆ ಹೊತ್ತುಕೊಂಡು ಬಂದರು ಗೊತ್ತಾ?— ಏಕೆಂದರೆ ಯೇಸು ಆ ರೋಗಿಯನ್ನು ವಾಸಿಮಾಡಬಲ್ಲನು ಎಂಬ ಭರವಸೆ ಅವರಿಗಿತ್ತು. ಅವನನ್ನು ವಾಸಿಮಾಡುವ ಶಕ್ತಿ ಯೇಸುವಿಗಿದೆ ಎಂದು ಅವರು ನಂಬಿದ್ದರು. ಆದರೆ ಜನರಿಂದ ಕಿಕ್ಕಿರಿದಿದ್ದ ಮನೆಯೊಳಗೆ ಆ ರೋಗಿಯನ್ನು ಅವರು ಹೇಗೆ ಹೊತ್ತುಕೊಂಡು ಹೋದರು ಗೊತ್ತಾ?—
ಅದನ್ನು ಈ ಚಿತ್ರ ತೋರಿಸುತ್ತದೆ. ಅವರು ಅವನನ್ನು ಮಂಚದ ಸಮೇತ ಮನೆಯ ಮೇಲ್ಛಾವಣಿಗೆ ಹೊತ್ತುಕೊಂಡು ಹೋದರು. ಆ ಛಾವಣಿ ಸಮತಟ್ಟಾಗಿತ್ತು. ಅವರು ಛಾವಣಿಯ ಸ್ವಲ್ಪ
ಭಾಗವನ್ನು ಕಿತ್ತು ಒಂದು ದೊಡ್ಡ ರಂಧ್ರ ಮಾಡಿದರು. ಆಮೇಲೆ ಅದರ ಮೂಲಕ ಅವನನ್ನು ಮಂಚದ ಸಮೇತ ಕೆಳಗೆ ಇಳಿಸಿದರು. ಅಬ್ಬಾ! ಎಂಥ ನಂಬಿಕೆ!ಇದನ್ನೆಲ್ಲ ನೋಡಿ ಆ ಮನೆಯಲ್ಲಿ ನೆರೆದಿದ್ದ ಜನರೆಲ್ಲಾ ಆಶ್ಚರ್ಯಪಟ್ಟರು. ಅವರ ಕಣ್ಮುಂದೆನೇ ಆ ರೋಗಿಯನ್ನು ಮಂಚ ಸಮೇತ ಅಲ್ಲಿ ಇಳಿಸಲಾಗಿತ್ತು. ಅವರು ಮಾಡಿದ ಕೆಲಸವನ್ನು ಕಂಡು ಯೇಸುವಿಗೆ ಕೋಪ ಬಂತಾ?— ಖಂಡಿತ ಇಲ್ಲ. ಅವನು ಆ ಜನರ ನಂಬಿಕೆಯನ್ನು ನೋಡಿ ಸಂತೋಷಪಟ್ಟನು. ಲಕ್ವ ಹೊಡೆದಿದ್ದ ಆ ರೋಗಿಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
ಯೇಸು ಹಾಗೆ ಹೇಳಿದ್ದು ಅಲ್ಲಿದ್ದ ಕೆಲವರಿಗೆ ಇಷ್ಟವಾಗಲಿಲ್ಲ. ಪಾಪಗಳನ್ನು ಕ್ಷಮಿಸಲು ಅವನಿಂದ ಸಾಧ್ಯವೆಂದು ಅವರು ನಂಬಲಿಲ್ಲ. ಆದರೆ ತನಗೆ ಪಾಪಗಳನ್ನು ಕ್ಷಮಿಸಲು ಸಾಧ್ಯವಿದೆ ಎಂದು ತೋರಿಸುವ ಸಲುವಾಗಿ ಯೇಸು ಆ ರೋಗಿಗೆ, “ನೀನೆದ್ದು ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು” ಎಂದು ಹೇಳಿದನು.
ಯೇಸು ಹಾಗೆ ಹೇಳಿದಾಕ್ಷಣ ಆ ಮನುಷ್ಯನು ಗುಣಮುಖನಾದನು. ಅವನ ರೋಗ ಸಂಪೂರ್ಣ ವಾಸಿಯಾಯಿತು. ಎದ್ದು ನಿಲ್ಲಲು ನಡೆದಾಡಲು ಈಗ ಅವನಿಗೆ ಯಾರ ಸಹಾಯ ಬೇಕಾಗಿರಲಿಲ್ಲ. ಈ ಅದ್ಭುತವನ್ನು ನೋಡಿ ಜನರು ತುಂಬಾ ಬೆರಗಾದರು. ಅವರು ಇಂಥ ಅದ್ಭುತವನ್ನು ಹಿಂದೆಂದೂ ನೋಡಿರಲಿಲ್ಲ. ಜನರ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನೂ ಹೊಂದಿರುವ ಮಹಾ ಬೋಧಕನನ್ನು ಕಳುಹಿಸಿ ಕೊಟ್ಟದ್ದಕ್ಕಾಗಿ ಅವರು ಯೆಹೋವನನ್ನು ಸ್ತುತಿಸಿದರು. —ಈ ಅದ್ಭುತದಿಂದ ನಾವೇನನ್ನು ಕಲಿಯುತ್ತೇವೆ?— ಯೇಸುವಿಗೆ ಜನರ ಪಾಪಗಳನ್ನು ಕ್ಷಮಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿಯಿದೆ ಎಂದು ಇದರಿಂದ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ನಾವು ಈ ಅದ್ಭುತದಿಂದ ಇನ್ನೂಂದು ಪ್ರಾಮುಖ್ಯ ವಿಷಯನ್ನು ಕಲಿಯುತ್ತೇವೆ. ಅದೇನಂದರೆ ಜನರ ಕಾಯಿಲೆಗೆ ಪಾಪವೇ ಕಾರಣ.
ನಮ್ಮೆಲ್ಲರಿಗೂ ಕಾಯಿಲೆಗಳು ಬರುವುದರಿಂದ ನಾವೆಲ್ಲರೂ ಪಾಪಿಗಳು ಎಂದರ್ಥನಾ?— ಹೌದು. ನಾವು ಹುಟ್ಟಿನಿಂದಲೇ ಪಾಪಿಗಳು ಎಂದು ಬೈಬಲ್ ಹೇಳುತ್ತದೆ. ಹುಟ್ಟಿನಿಂದಲೇ ಪಾಪಿಗಳು ಅಂದರೆ ಏನು ಗೊತ್ತಾ?— ನಾವು ಅಪರಿಪೂರ್ಣರಾಗಿ ಹುಟ್ಟುತ್ತೇವೆ ಎಂದರ್ಥ. ನಮಗೆ ತಪ್ಪು ಮಾಡಲು ಇಷ್ಟವಿಲ್ಲದಿದ್ದರೂ ಕೆಲವೊಮ್ಮೆ ತಪ್ಪು ಮಾಡಿಬಿಡುತ್ತೇವೆ. ನಮ್ಮಲ್ಲಿ ಪಾಪ ಹೇಗೆ ಬಂತು ಎಂದು ನಿನಗೆ ಗೊತ್ತಾ?—
ಮೊದಲ ಮನುಷ್ಯನಾದ ಆದಾಮನು ದೇವರಿಗೆ ಅವಿಧೇಯನಾಗಿದ್ದೇ ನಮ್ಮಲ್ಲಿ ಪಾಪ ಬರಲು ಕಾರಣವಾಗಿದೆ. ಅವನು ದೇವರ ನಿಯಮವನ್ನು ಉಲ್ಲಂಘಿಸಿದಾಗ ಪಾಪಮಾಡಿದನು. ಆ ಪಾಪವನ್ನು ನಮಗೂ ದಾಟಿಸಿದನು. ಅದು ಹೇಗೆ ಅಂತ ಗೊತ್ತಾ? ಅದನ್ನು ಅರ್ಥಮಾಡಿಕೊಳ್ಳಲು ನಾನೊಂದು ಉದಾಹರಣೆ ಹೇಳುತ್ತೀನಿ.
ಬ್ರೆಡ್ ಹೇಗೆ ಮಾಡುತ್ತಾರೆಂದು ನೀನು ನೋಡಿರಬಹುದು. ಇಡ್ಲಿ ಪಾತ್ರೆಯಲ್ಲಿ ಇಡ್ಲಿಯನ್ನು ಹೇಗೆ ಬೇಯಿಸುತ್ತಾರೋ ಅದೇ ರೀತಿ ಬ್ರೆಡ್ ಮಾಡಲು ಚಿತ್ರದಲ್ಲಿ ತೋರಿಸಿರುವಂತೆ ಬಾಕ್ಸ್ ಆಕಾರದ ಒಂದು ಪಾತ್ರೆಯನ್ನು ಬಳಸುತ್ತಾರೆ. ಆ ಪಾತ್ರೆ ಕೆಳಗೆ ಬಿದ್ದು
ಒಂದು ಕಡೆಯಲ್ಲಿ ಸ್ವಲ್ಪ ಸೊಟ್ಟಗಾಗಿದೆ ಎಂದಿಟ್ಟುಕೋ. ಅದರಲ್ಲಿ ಬ್ರೆಡ್ಗಳನ್ನು ಮಾಡುವುದಾದರೆ ಆ ಬ್ರೆಡ್ಗಳು ಹೇಗಿರುತ್ತೆ ಗೊತ್ತಾ?— ಎಲ್ಲಾ ಬ್ರೆಡ್ನಲ್ಲೂ ಪಾತ್ರೆಯ ಆ ಸೊಟ್ಟಗಿನ ಗುರುತು ಕಾಣಿಸುತ್ತೆ.ಈಗ ಆದಾಮನನ್ನು ಬ್ರೆಡ್ ಮಾಡುವ ಪಾತ್ರೆಗೆ ನಾವು ಹೋಲಿಸೋಣ. ಆದಾಮನು ಪಾತ್ರೆಯಾದರೆ ನಾವೆಲ್ಲರೂ ಅದರಲ್ಲಿ ತಯಾರಾಗುವ ಬ್ರೆಡ್ಗಳು. ಆದಾಮನು ದೇವರ ನಿಯಮವನ್ನು ಮುರಿದಾಗ ಅಪರಿಪೂರ್ಣನಾದನು. ಅಂದರೆ ಬ್ರೆಡ್ ಮಾಡುವ ಪಾತ್ರೆ ಸೊಟ್ಟಗಾದಂತೆ ಆದನು. ಈಗ ಸ್ವಲ್ಪ ಯೋಚಿಸು, ಅವನಿಗೆ ಹುಟ್ಟುವ ಮಕ್ಕಳು ಹೇಗೆ ಇರಲಿದ್ದರು?— ಅವರೆಲ್ಲರೂ ಅಪರಿಪೂರ್ಣತೆಯ ಅದೇ ಸೊಟ್ಟಗಿನ ಗುರುತನ್ನು ಪಡೆಯಲಿದ್ದರು.
ಅಪರಿಪೂರ್ಣತೆಯನ್ನು ಪಡೆದುಕೊಂಡು ಹುಟ್ಟುವ ಹೆಚ್ಚಿನ ಮಕ್ಕಳು ಅಂಗವಿಕಲರಾಗಿ ಜನಿಸುವುದಿಲ್ಲ. ಅಂದರೆ ಕೈಯೋ ಕಾಲೋ ಇಲ್ಲದೆ ಹುಟ್ಟುವುದಿಲ್ಲ. ಅದರೂ ಅವರಲ್ಲಿರುವ ಅಪರಿಪೂರ್ಣತೆಯ ಪರಿಣಾಮ ಎಷ್ಟಿರುತ್ತೆಂದರೆ ಅವರಿಗೆ ಕಾಯಿಲೆ ಬರುತ್ತದೆ, ಸಮಯ ದಾಟಿದಂತೆ ಮೃತಪಡುತ್ತಾರೆ.
ಕೆಲವರು ಆಗಿಂದಾಗ್ಗೆ ಕಾಯಿಲೆ ಬೀಳುತ್ತಾರೆ. ಯಾಕಿರಬಹುದು? ಅವರಲ್ಲಿ ಇತರರಿಗಿಂತ ಹೆಚ್ಚು ಪಾಪ ಇದೆ ಅಂತನಾ?— ಹಾಗಲ್ಲ. ಎಲ್ಲರಲ್ಲೂ ಪಾಪವು ಒಂದೇ ರೀತಿಯಲ್ಲಿ ಇರುತ್ತದೆ, ಹೆಚ್ಚು ಕಡಿಮೆ ಅಂತ ಇರೊಲ್ಲ. ನಾವೆಲ್ಲರೂ ಹುಟ್ಟಿನಿಂದ ಅಪರಿಪೂರ್ಣರೇ. ಆದುದರಿಂದ ಎಲ್ಲರೂ ಕಾಯಿಲೆ ಬೀಳುವುದು ಸಹಜ. ದೇವರ ಎಲ್ಲಾ ನಿಯಮಗಳಿಗೆ ವಿಧೇಯರಾಗಲು ಪ್ರಯತ್ನಿಸುವವರಿಗೂ ಕೆಟ್ಟದ್ದನ್ನು ಮಾಡದೇ ಇರುವಂಥ ಜನರಿಗೂ ಕಾಯಿಲೆಗಳು ತಪ್ಪಿದ್ದಲ್ಲ.
ಹಾಗಿರುವಾಗ ಕೆಲವರು ಆಗಿಂದಾಗ್ಗೆ ಕಾಯಿಲೆ ಬೀಳುವುದೇಕೆ?— ಅದಕ್ಕೆ ಕಾರಣಗಳು ಅನೇಕ. ಅವರಿಗೆ ಸಾಕಷ್ಟು ಆಹಾರ ದೊರೆಯದೇ ಇರಬಹುದು. ಅಥವಾ ಅವರು ಆರೋಗ್ಯಕರ ಆಹಾರ ತಿನ್ನದೇ ಬರೀ ಕೇಕ್ ಅಥವಾ ಚಾಕೊಲೇಟ್ಗಳನ್ನು ತಿನ್ನುತ್ತಿರಬಹುದು. ಮತ್ತೊಂದು ಕಾರಣ ರಾತ್ರಿ ತುಂಬಾ ತಡವಾಗಿ ಮಲಗಿ ಸಾಕಷ್ಟು ನಿದ್ರೆ ಪಡೆಯದೇ ಇದ್ದಿರಬಹುದು. ಅಥವಾ ಚಳಿಗಾಲದಲ್ಲಿ ಹೊರಗೆ ಹೋಗುವಾಗ ಸ್ವೆಟರ್ ಧರಿಸದೇ ಇದ್ದಿರಬಹುದು. ಕೆಲವರ ದೇಹ ತುಂಬಾ ದುರ್ಬಲವಾಗಿರುತ್ತದೆ. ಅಂಥವರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಕಾಯಿಲೆ ಬೀಳುತ್ತಿರುತ್ತಾರೆ.
ಆದರೆ, ರೋಗರುಜಿನ ಅಥವಾ ಕಾಯಿಲೆಗಳೇ ಇಲ್ಲದಂಥ ಒಂದು ಸಮಯ ಎಂದಾದರೂ ಬರುತ್ತದಾ? ಪಾಪದಿಂದ ಯಾವಾಗ ನಮಗೆ ಬಿಡುಗಡೆ ಸಿಗುತ್ತದೆ?— ಲಕ್ವ ಹೊಡೆದಿದ್ದ ರೋಗಿಗೆ ಯೇಸು ಏನು ಮಾಡಿದನೆಂದು ಗೊತ್ತು ತಾನೆ?— ಹೌದು, ಯೇಸು ಅವನ ಪಾಪಗಳನ್ನು ಕ್ಷಮಿಸಿ ಅವನ ರೋಗವನ್ನು ವಾಸಿಮಾಡಿದನು. ಹೀಗೆ, ಒಳ್ಳೇ ಜನರಿಗಾಗಿ ತಾನು ಮುಂದೆ ಏನು ಮಾಡಲಿದ್ದೇನೆಂದು ತೋರಿಸಿಕೊಟ್ಟನು.
ನಾವು ತಪ್ಪು ಮಾಡದಿರುವುದಾದರೆ ಮತ್ತು ಕೆಟ್ಟದ್ದನ್ನು ದ್ವೇಷಿಸುತ್ತೇವೆಂದು ನಮ್ಮ ನಡೆನುಡಿಯಲ್ಲಿ ತೋರಿಸುವುದಾದರೆ ಯೇಸು ನಮ್ಮನ್ನೂ ವಾಸಿಮಾಡುವನು. ಭವಿಷ್ಯತ್ತಿನಲ್ಲಿ ನಮ್ಮಲ್ಲಿರುವ ಅಪರಿಪೂರ್ಣತೆಯನ್ನೂ ತೆಗೆದುಹಾಕುವನು. ದೇವರ ರಾಜ್ಯದ ರಾಜನಾಗಿ ಅವನಿದನ್ನು ಮಾಡುವನು. ಒಮ್ಮಗೇ ನಮ್ಮಿಂದ ಪಾಪವನ್ನು ತೆಗೆಯಲಾಗುವುದಿಲ್ಲ. ನಿಧಾನವಾಗಿ ಹಂತ ಹಂತವಾಗಿ ತೆಗೆಯಲಾಗುವುದು. ನಮ್ಮಲ್ಲಿರುವ ಪಾಪವನ್ನು ಸಂಪೂರ್ಣವಾಗಿ ತೆಗೆದಾಗ ನಾವು ಇನ್ನೆಂದೂ ಕಾಯಿಲೆ ಬೀಳುವುದಿಲ್ಲ. ಆಗ ನಮ್ಮೆಲ್ಲರಿಗೂ ಪೂರ್ಣ ಆರೋಗ್ಯ ಇರುವುದು. ಅದು ಭವ್ಯವಾದ ಆಶೀರ್ವಾದವೇ ಸರಿ!
ಮನುಷ್ಯರ ಮೇಲೆ ಪಾಪವು ಬೀರುತ್ತಿರುವ ಪರಿಣಾಮದ ಕುರಿತು ಹೆಚ್ಚನ್ನು ತಿಳಿಯಲು ಯೋಬ 14:4; ಕೀರ್ತನೆ 51:5; ರೋಮನ್ನರಿಗೆ 3:23; 5:12 ಮತ್ತು 6:23 ಓದೋಣ.