ಅಧ್ಯಾಯ 16
ಯಾವುದು ಪ್ರಾಮುಖ್ಯ?
ಒಂದು ದಿನ ಒಬ್ಬ ಮನುಷ್ಯ ಯೇಸುವಿನ ಹತ್ತಿರ ಬಂದನು. ಯೇಸು ವಿವೇಕಿ ಅಂತ ಅವನಿಗೆ ಗೊತ್ತಿತ್ತು. ಅವನು ಯೇಸುವಿಗೆ, ‘ಬೋಧಕನೇ, ನನ್ನ ಅಣ್ಣನ ಬಳಿ ತುಂಬಾ ಆಸ್ತಿಯಿದೆ. ಅದನ್ನು ಪಾಲುಮಾಡಿ ಕೊಡುವಂತೆ ಅವನಿಗೆ ಹೇಳು’ ಅಂದನು. ತನ್ನ ಅಣ್ಣನ ಹತ್ತಿರ ಇರುವ ಆಸ್ತಿಯಲ್ಲಿ ಸ್ವಲ್ಪ ತನಗೂ ಬರಬೇಕೆಂದು ಆ ಮನುಷ್ಯನು ಬಯಸಿದನು.
ನೀನು ಯೇಸುವಾಗಿದ್ದರೆ ಆ ಮನುಷ್ಯನಿಗೆ ಏನು ಹೇಳುತ್ತಿದ್ದೆ?— ಆ ಮನುಷ್ಯನಿಗೆ ಒಂದು ಸಮಸ್ಯೆಯಿದೆ ಎಂದು ಯೇಸುವಿಗೆ ಗೊತ್ತಾಯಿತು. ತನ್ನ ಅಣ್ಣನಿಂದ ಆಸ್ತಿಯನ್ನು ಪಡೆದುಕೊಳ್ಳುವುದು ನಿಜವಾದ ಸಮಸ್ಯೆಯಾಗಿರಲಿಲ್ಲ. ಜೀವನದಲ್ಲಿ ಯಾವುದು ತುಂಬಾ ಪ್ರಾಮುಖ್ಯ ಅಂತ ಅವನಿಗೆ ಗೊತ್ತಿಲ್ಲದೇ ಇದ್ದದ್ದೇ ಸಮಸ್ಯೆಯಾಗಿತ್ತು.
ಸರಿ, ಈಗ ಈ ವಿಷಯದ ಬಗ್ಗೆ ಸ್ವಲ್ಪ ಯೋಚಿಸೋಣ. ನಿನಗೆ ಏನು ಅನಿಸುತ್ತೆ ನಮಗೆ ಯಾವುದು ತುಂಬಾ ಪ್ರಾಮುಖ್ಯ? ಅಂದಚೆಂದದ ಆಟಿಕೆಗಳಾ ಹೊಸ-ಹೊಸ ಬಟ್ಟೆಗಳಾ?— ಯಾವುದು ಅಲ್ಲ. ಯಾಕೆಂದರೆ ಇವುಗಳಿಗಿಂತ ಹೆಚ್ಚು ಪ್ರಾಮುಖ್ಯವಾದ ಒಂದು ವಿಷಯ ಇದೆ. ಅದರ ಕುರಿತಾದ ಪಾಠವನ್ನೇ ಯೇಸು ಕಲಿಸಲು ಬಯಸಿದನು. ಯೇಸು ಅದನ್ನು ಕಥೆಯ ರೂಪದಲ್ಲಿ ಹೇಳಿದನು. ದೇವರನ್ನು ಮರೆತು ಸ್ವಂತ ವಿಷಯಗಳಲ್ಲಿಯೇ ಮುಳುಗಿ ಹೋಗಿದ್ದ ಒಬ್ಬನ ಕಥೆ ಅದಾಗಿತ್ತು. ಆ ಕಥೆ ಹೇಳಲಾ?—
ಅವನು ತುಂಬಾ ಶ್ರೀಮಂತ ಮನುಷ್ಯನಾಗಿದ್ದನು. ಅವನಿಗೆ ಅನೇಕ ಹೊಲಗದ್ದೆಗಳು ಕಣಜಗಳು ಇದ್ದವು. ಕಣಜ ಅಂದರೆ ಗೊತ್ತು ತಾನೆ? ಧಾನ್ಯಗಳನ್ನು ಶೇಖರಿಸಿಡುವ ಗೋದಾಮಿಗೆ ಕಣಜ ಅಂತ ಕರೆಯುತ್ತಾರೆ. ಒಂದು ಸಲ ಅವನ ಹೊಲಗದ್ದೆಗಳು ಒಳ್ಳೇ ಫಸಲು ಕೊಟ್ಟವು. ಆದರೆ ಅವುಗಳನ್ನು ಶೇಖರಿಸಿಡಲು ಅವನ ಕಣಜಗಳಲ್ಲಿ ಜಾಗ ಸಾಕಾಗಲಿಲ್ಲ. ಆಗ ಅವನು ಏನು ಮಾಡಿದ ಗೊತ್ತಾ? ‘ನಾನು ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ದವಸಧಾನ್ಯಗಳನ್ನು ಮತ್ತು ಎಲ್ಲ ಒಳ್ಳೆಯ ವಸ್ತುಗಳನ್ನು ತುಂಬಿಸಿಡುತ್ತೇನೆ’ ಎಂದು ಯೋಚನೆ ಮಾಡಿಕೊಂಡ.
ಹೀಗೆ ಮಾಡುವುದೇ ಸರಿ ಅಂತ ಆ ಶ್ರೀಮಂತ ಅಂದುಕೊಂಡ. ತಾನೆಷ್ಟು ಬುದ್ಧಿವಂತ ಇಷ್ಟೊಂದು ದವಸಧಾನ್ಯಗಳನ್ನು ಕೂಡಿಸಿಡುತ್ತಿದ್ದೇನಲ್ಲಾ ಅಂತ ಹಿರಿಹಿರಿ ಹಿಗ್ಗಿದ. ‘ನಾನು ಅನೇಕ ಒಳ್ಳೆಯ ವಸ್ತುಗಳನ್ನು ಸಂಗ್ರಹಿಸಿದ್ದೇನೆ. ಅವು ಅನೇಕ ವರ್ಷಗಳಿಗೆ ಸಾಕಾಗುತ್ತವೆ. ಈಗ ನಾನು ಆರಾಮಾಗಿ ಇರಬಹುದು. ನಾನು ತಿಂದು ಕುಡಿದು ಮಜಾ ಮಾಡುವೆ’ ಎಂದು ತನ್ನಷ್ಟಕ್ಕೇ ಹೇಳಿಕೊಂಡ. ಅವನ ಈ ಯೋಚನೆ ಸರಿ ಇರಲಿಲ್ಲ. ಅದರಲ್ಲಿ ತಪ್ಪಿತ್ತು. ಏನು ಗೊತ್ತಾ?— ಅವನು ತನ್ನ ಬಗ್ಗೆ ಮತ್ತು ತನ್ನ ಸುಖದ ಬಗ್ಗೆ ಮಾತ್ರ ಆಲೋಚಿಸಿದ್ದ. ದೇವರನ್ನು ಮರೆತೇ ಬಿಟ್ಟಿದ್ದ.
ಈಗ ದೇವರು ಅವನೊಂದಿಗೆ ಮಾತಾಡಿದನು. ‘ಮೂರ್ಖನೇ, ಇದೇ ರಾತ್ರಿ ನೀನು ಸಾಯಲಿದ್ದೀ. ಆಗ ನೀನು ಸಂಗ್ರಹಿಸಿಟ್ಟಿರುವ ವಸ್ತುಗಳು ಯಾರ ಪಾಲಾಗುತ್ತವೆ?’ ಅಂತ ಕೇಳಿದನು. ಶ್ರೀಮಂತ ಸತ್ತ ಮೇಲೆ ಆ ವಸ್ತುಗಳಿಂದ ಅವನಿಗೆ ಏನಾದರೂ ಪ್ರಯೋಜನ ಇದೆಯಾ?— ಇಲ್ಲ ಅಲ್ವಾ. ಅವೆಲ್ಲ ಬೇರೆಯವರ ಪಾಲಾಗುತ್ತೆ. ಅದಕ್ಕೆ ಯೇಸು, “ತನಗಾಗಿ ನಿಧಿಯನ್ನು ಕೂಡಿಸಿಟ್ಟು ದೇವರ ವಿಷಯದಲ್ಲಿ ಐಶ್ವರ್ಯವಂತನಾಗದೆ ಇರುವವನು ಆ ಮನುಷ್ಯನಂತಿದ್ದಾನೆ” ಎಂದು ಹೇಳಿ ಕಥೆ ಮುಗಿಸಿದನು.—ಲೂಕ 12:13-21.
ಆ ಶ್ರೀಮಂತ ಮನುಷ್ಯನಂತಿರಲು ನೀನು ಇಷ್ಟಪಡುತ್ತೀಯಾ?— ಇಲ್ಲ ಅಲ್ವಾ. ಅವನ ಜೀವನದ ಮುಖ್ಯ ಉದ್ದೇಶ ಪ್ರಪಂಚದಲ್ಲಿರುವ ವಸ್ತುಗಳನ್ನು ಸಂಪಾದಿಸುವುದೇ ಆಗಿತ್ತು. ಅವನು ಇದ್ದದ್ದರಲ್ಲಿ
ತೃಪ್ತಿ ಪಡಲಿಲ್ಲ. ಹೆಚ್ಚೆಚ್ಚು ಬೇಕೆಂದು ಆಸೆಪಟ್ಟನು. ಅದು ತಪ್ಪಾಗಿತ್ತು. ಅವನು ಪ್ರಪಂಚದ ವಿಷಯಗಳನ್ನು ಗಳಿಸುತ್ತಾ ಐಶ್ವರ್ಯವಂತನಾದ ಆದರೆ ‘ದೇವರ ವಿಷಯದಲ್ಲಿ ಐಶ್ವರ್ಯವಂತನಾಗಲಿಲ್ಲ.’ಇಂದು ಕೂಡ ಅನೇಕರು ಆ ಶ್ರೀಮಂತ ಮನುಷ್ಯನಂತೆ ಇದ್ದಾರೆ. ಅವರು ಯಾವಾಗಲೂ ಹೆಚ್ಚೆಚ್ಚು ಬೇಕೆಂದು ಬಯಸುತ್ತಾರೆ. ಆದರೆ ಇಂಥ ಆಸೆಗಳು ದೊಡ್ಡ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ, ನಿನ್ನ ಹತ್ತಿರ ಆಟಿಕೆಗಳಿವೆ ತಾನೆ?— ಏನೇನಿದೆ?— ಸರಿ ಚಿನ್ನಾ, ಆದರೆ ನಿನ್ನ ಸ್ನೇಹಿತರ ಹತ್ತಿರ ಇರುವ ಚೆಂಡೋ ಗೊಂಬೆಯೋ ಅಥವಾ ಬೇರಾವುದೇ ಆಟದ ಸಾಮಾನು ನಿನ್ನ ಹತ್ತಿರ ಇಲ್ಲ ಅಂತ ಇಟ್ಟುಕೋ. ಆಗ ಏನು ಮಾಡುತ್ತಿಯಾ? ನಿನಗೂ ಅಂಥದ್ದೇ ಆಟಿಕೆ ತಂದು ಕೊಡುವಂತೆ ನಿನ್ನ ತಂದೆತಾಯಿ ಮುಂದೆ ಹಠ ಮಾಡುತ್ತಿಯಾ? ಹಾಗೆ ಹಠ ಮಾಡುವುದು ಸರಿನಾ?—
ಆ ಆಟಿಕೆ ಬೇಕೇಬೇಕು ಅಂತ ನಿನಗೆ ಅನಿಸಬಹುದು. ಅದನ್ನು ಹಠ ಮಾಡಿ ತರಿಸುತ್ತಿಯಾ ಅಂಥ ಇಟ್ಟುಕೋ. ಆದರೆ ಅದು ಸ್ವಲ್ಪ ದಿನಗಳಾದ ಮೇಲೆ ಏನಾಗುತ್ತೆ?— ಹಳೇದಾಗುತ್ತೆ ಅಲ್ವಾ. ಅಥವಾ ಆಟ ಆಡುವಾಗ ಅದು ಮುರಿದು ಹೋಗಬಹುದು. ಮುರಿದು ಹೋದ ಹಳೇದಾದ ಆಟಿಕೆಯಲ್ಲಿ ಆಡಲು ನಿನಗೆ ಇಷ್ಟ ಆಗುತ್ತಾ? ಇಲ್ಲ ಅಲ್ವಾ. ಆಟಿಕೆಗಳಿಗಿಂತ ಹೆಚ್ಚು ಅಮೂಲ್ಯವಾಗಿರುವ ಏನೋ ಒಂದು ನಿನ್ನ ಬಳಿ ಇದೆ. ಅದೇನು ಗೊತ್ತಾ?—
ನಿನ್ನ ಜೀವ. ಅದು ತುಂಬ ಪ್ರಾಮುಖ್ಯ. ಜೀವ ಇಲ್ಲದಿದ್ದರೆ ನೀನು ಏನೂ ಮಾಡಲಿಕ್ಕೆ ಸಾಧ್ಯವಿಲ್ಲ. ನೀನು ಸದಾ ಜೀವಂತವಾಗಿ ಇರಬೇಕಾದರೆ ದೇವರಿಗೆ ಇಷ್ಟವಾಗುವ ಕೆಲಸವನ್ನು ಮಾಡುತ್ತಾ ಇರಬೇಕು. ಆ ಮೂರ್ಖ ಶ್ರೀಮಂತನ ಹಾಗೆ ದೇವರನ್ನು ಮರೆಯಬಾರದು.
ಆ ಶ್ರೀಮಂತನಂತೆ ಮೂರ್ಖ ಕೆಲಸಗಳನ್ನು ಮಾಡೋದು ಬರೀ ಮಕ್ಕಳು ಮಾತ್ರ ಅಲ್ಲ.
ದೊಡ್ಡವರೂ ಮಾಡುತ್ತಾರೆ. ಜನರ ಹತ್ತಿರ ಆಹಾರ, ಬಟ್ಟೆ, ಮನೆ ಇರಬಹುದು. ಆದರೆ ಕೆಲವರಿಗೆ ಅಷ್ಟರಲ್ಲೇ ತೃಪ್ತಿಯಿರುವುದಿಲ್ಲ. ಇನ್ನೂ ಬೇಕು ಇನ್ನೂ ಬೇಕು ಅಂತ ಆಸೆಪಡುತ್ತಾರೆ. ಹೊಸಹೊಸ ಬಟ್ಟೆ, ದೊಡ್ಡದೊಡ್ಡ ಮನೆಗಳು ಬೇಕು ಅಂಥ ಹಾತೊರೆಯುತ್ತಾರೆ. ಇದೆಲ್ಲ ತಗೋಬೇಕಾದರೆ ತುಂಬಾ ಹಣ ಬೇಕೇ ಬೇಕು. ಅದಕ್ಕೆ ಅವರು ಹಗಲು ರಾತ್ರಿ ದುಡಿದು ದುಡಿದು ಸಂಪಾದನೆ ಮಾಡುತ್ತಾರೆ. ಆದರೆ ಹೆಚ್ಚೆಚ್ಚು ಹಣ ಕೈಸೇರಿದಷ್ಟು ತುಂಬಾ ತುಂಬಾ ವಸ್ತುಗಳನ್ನು ಕೊಂಡುಕೊಳ್ಳಲು ಆಸೆ ಪಡುತ್ತಾರೆ.ಹೀಗೆ ಕೆಲವರು ಹಣ ಸಂಪಾದನೆ ಮಾಡುವುದರಲ್ಲಿ ಎಷ್ಟು ಮುಳುಗಿಹೋಗಿದ್ದಾರೆ ಅಂದರೆ ತಮ್ಮ ಮನೆಯವರ ಜೊತೆಯಿರಲು, ಅವರೊಟ್ಟಿಗೆ ಕುಳಿತು ಊಟಮಾಡಲು, ಓದಲು ಮುಂತಾದವುಗಳಿಗೆ ಅವರಿಗೆ ಸಮಯವೇ ಸಿಗುವುದಿಲ್ಲ. ಇಂಥವರಿಗೆ ದೇವರ ಆರಾಧನೆಗೆ, ದೇವರ ಸೇವೆ ಮಾಡಲಿಕ್ಕೆ ಪುರುಸೊತ್ತು ಸಿಗುವುದೇ ಇಲ್ಲ. ಯೋಚಿಸು, ಹಣ ಅವರ ಜೀವ ಕಾಪಾಡುತ್ತಾ?— ಸಾಧ್ಯನೇ ಇಲ್ಲ. ಮತ್ತೆ ಅವರು ಸಂಪಾದನೆ ಮಾಡಿಟ್ಟ ಹಣ? ಸತ್ತ ಮೇಲೆ ಅವರು ಅದನ್ನು ಉಪಯೋಗಿಸಕ್ಕೆ ಸಾಧ್ಯನಾ?— ಅದು ಕೂಡ ಸಾಧ್ಯವಿಲ್ಲ. ಏಕೆಂದರೆ ಸತ್ತವರಿಗೆ ಏನೂ ಮಾಡಲಿಕ್ಕೆ ಆಗೋದಿಲ್ಲ.—ಪ್ರಸಂಗಿ 9:5, 10.
ಹಾಗಾದರೆ ನಾವು ಹಣ ಸಂಪಾದನೆ ಮಾಡಲೇಬಾರದು ಅಂತ ಇದರ ಅರ್ಥನಾ? ನಿನಗೇನು ಅನಿಸುತ್ತೆ?— ಇಲ್ಲ. ದುಡ್ಡು ಇದ್ದರೆ ನಾವು ಊಟಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಬಹುದು. ಬಟ್ಟೆ ಖರೀದಿಸಬಹುದು. ಹಣ ನಮಗೆ ಸಂರಕ್ಷಣೆ ನೀಡುತ್ತದೆ ಅಂತ ಬೈಬಲ್ ಕೂಡ ಹೇಳುತ್ತದೆ. (ಪ್ರಸಂಗಿ 7:12) ಆದರೆ ಹಣದ ವ್ಯಾಮೋಹ ತಪ್ಪು. ಹಣ ಹಣ ಅಂತ ಅದರ ಹಿಂದೆನೇ ಹೋದರೆ ದೊಡ್ಡ ದೊಡ್ಡ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಅಷ್ಟೇ ಅಲ್ಲ, ತನಗೋಸ್ಕರ ಸಂಪತ್ತು ಕೂಡಿಸಿಟ್ಟು ದೇವರ ವಿಷಯದಲ್ಲಿ ಐಶ್ವರ್ಯವಂತನಾಗದೇ ಇದ್ದ ಆ ಮೂರ್ಖ ಶ್ರೀಮಂತ ಮನುಷ್ಯನಂತೆ ನಾವಾಗಿ ಬಿಡುತ್ತೇವೆ.
ಅದ್ಸರಿ, ದೇವರ ವಿಷಯದಲ್ಲಿ ಐಶ್ವರ್ಯವಂತರಾಗಿ ಇರುವುದು ಅಂದರೆ ಏನು?— ಅಂದರೆ ದೇವರ ಆರಾಧನೆ, ಆತನ ಸೇವೆಯನ್ನು ನಮ್ಮ ಜೀವನದಲ್ಲಿ ಪ್ರಥಮವಾಗಿ ಇಡುವುದು ಅಂತ ಅರ್ಥ. ಎಷ್ಟೋ ಜನರು ದೇವರನ್ನು ನಂಬುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ದೇವರನ್ನು ನಂಬಿದರೆ ಸಾಕು ಬೇರೇನೂ ಮಾಡಬೇಕಾಗಿಲ್ಲ ಅಂತ ನೆನಸುತ್ತಾರೆ. ಅಂಥವರು ದೇವರ ವಿಷಯದಲ್ಲಿ ಐಶ್ವರ್ಯವಂತರಾಗಿ ಇದ್ದಾರಾ?— ಖಂಡಿತ ಇಲ್ಲ. ದೇವರನ್ನು ಮರೆತ ಆ ಶ್ರೀಮಂತನಂತೆ ಇದ್ದಾರೆ.
ಯೇಸು ತನ್ನ ತಂದೆಯಾದ ಯೆಹೋವ ದೇವರನ್ನು ಯಾವತ್ತೂ ಮರೆಯಲಿಲ್ಲ. ಅವನೆಂದೂ ಕೈತುಂಬ ಹಣ ಸಂಪಾದನೆ ಮಾಡಲು ಹೋಗಲಿಲ್ಲ. ಅಷ್ಟೇ ಅಲ್ಲ, ಅವನ ಹತ್ತಿರ ಹೆಚ್ಚು ವಸ್ತುಗಳೂ ಇರಲಿಲ್ಲ. ಯಾಕೆ ಗೊತ್ತಾ? ಯಾಕೆಂದರೆ ಜೀವನದಲ್ಲಿ ಯಾವುದು ಪ್ರಾಮುಖ್ಯ ಅಂತ ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಅದೇನು ಎಂದು ನಿನಗೆ ಗೊತ್ತಾ?— ದೇವರ ವಿಷಯದಲ್ಲಿ ಐಶ್ವರ್ಯವಂತರಾಗಿ ಇರುವುದೇ.
ನಾವು ಹೇಗೆ ದೇವರ ವಿಷಯದಲ್ಲಿ ಐಶ್ವರ್ಯವಂತರಾಗಬಹುದು?— ದೇವರು ಮೆಚ್ಚುವಂಥ ಕೆಲಸಗಳನ್ನು ಮಾಡುವ ಮೂಲಕ. ಒಮ್ಮೆ ಯೇಸು, ‘ನಾನು ದೇವರಿಗೆ ಮೆಚ್ಚಿಕೆಯಾಗಿರುವುದನ್ನೇ ಯೋಹಾನ 8:29) ದೇವರು ಹೇಳುವ ಕೆಲಸಗಳನ್ನು ನಾವು ಮಾಡುವಾಗ ಅದು ಆತನಿಗೆ ಇಷ್ಟವಾಗುತ್ತದೆ. ಹಾಗಾದರೆ ದೇವರಿಗೆ ಇಷ್ಟ ಆಗುವ ಯಾವ ಕೆಲಸಗಳನ್ನು ನೀನು ಮಾಡಬೇಕು?— ಬೈಬಲನ್ನು ದಿನಾಲು ಓದಬೇಕು, ಕ್ರೈಸ್ತ ಕೂಟಗಳಿಗೆ ಹೋಗಬೇಕು, ಪ್ರಾರ್ಥನೆ ಮಾಡಬೇಕು ಮತ್ತು ದೇವರ ಬಗ್ಗೆ ಕಲಿತುಕೊಳ್ಳುವಂತೆ ಬೇರೆಯವರಿಗೆ ಸಹಾಯ ಮಾಡಬೇಕು. ಇವೆಲ್ಲವೂ ನಮ್ಮ ಜೀವನದಲ್ಲಿ ಪ್ರಾಮುಖ್ಯ ವಿಷಯಗಳಾಗಿರಬೇಕು.
ಯಾವಾಗಲೂ ಮಾಡುತ್ತೇನೆ’ ಎಂದು ಹೇಳಿದನು. (ಯೇಸು ದೇವರ ವಿಷಯದಲ್ಲಿ ಐಶ್ವರ್ಯವಂತನಾಗಿ ಇದ್ದ ಕಾರಣ ಯೆಹೋವನು ಅವನ ಅಗತ್ಯಗಳನ್ನು ಪೂರೈಸಿದನು. ಅಲ್ಲದೆ, ಸದಾಕಾಲ ಜೀವಿಸುವಂತೆ ಅಮರತ್ವವನ್ನೂ ಕೊಟ್ಟನು. ನಾವು ಸಹ ಯೇಸುವಿನಂತೆ ದೇವರ ವಿಷಯದಲ್ಲಿ ಐಶ್ವರ್ಯವಂತರಾಗಿ ಇರುವುದಾದರೆ, ಯೆಹೋವನು ನಮ್ಮನ್ನೂ ಪ್ರೀತಿಸಿ ಪೋಷಿಸುತ್ತಾನೆ. ಆದುದರಿಂದ, ದೇವರನ್ನು ಮರೆತ ಆ ಶ್ರೀಮಂತನಂತೆ ಇರದೆ ಯೇಸುವಿನಂತೆ ಇರೋಣ.
ನಮ್ಮ ಜೀವನದಲ್ಲಿ ಭೌತಿಕ ವಸ್ತುಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕೆಂದು ತೋರಿಸುವಂಥ ಕೆಲವು ಬೈಬಲ್ ವಚನಗಳು ಇಲ್ಲಿವೆ: ಜ್ಞಾನೋಕ್ತಿ 23:4; 28:20; 1 ತಿಮೊಥೆಯ 6:6-10 ಮತ್ತು ಇಬ್ರಿಯ 13:5.