ಅಧ್ಯಾಯ 15
ದಯೆ ತೋರಿಸುವ ಕುರಿತು ಒಂದು ಪಾಠ
ಒಬ್ಬ ವ್ಯಕ್ತಿಯ ಕುರಿತು ತಿಳಿಯುವ ಮುಂಚೆನೇ ಅವನ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಹೊಂದಿರುವುದು ಸರಿನಾ?— ಸರಿಯಲ್ಲ. ಒಬ್ಬನು ಬೇರೆ ದೇಶದವನು, ಬೇರೆ ಭಾಷೆಯವನು ಅಂತ ಅವನನ್ನು ಇಷ್ಟಪಡದೆ ಇರುವುದನ್ನು ಪೂರ್ವಗ್ರಹ ಎಂದು ಕರೆಯುತ್ತಾರೆ.
ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳದೆಯೇ ಅವನು ಕೆಟ್ಟವನು ಎಂದು ಪೂರ್ವಗ್ರಹ ಹೊಂದಿ ಅವನೊಟ್ಟಿಗೆ ಕೀಳಾಗಿ ನಡೆದುಕೊಳ್ಳುವುದು ಸರಿನಾ?— ಇಲ್ಲ. ಅದು ಮಾನವೀಯತೆ ಅಲ್ಲ. ಆದುದರಿಂದ, ಒಬ್ಬ ವ್ಯಕ್ತಿ ನಮಗಿಂತ ಭಿನ್ನನಾಗಿದ್ದಾನೆ ಎಂಬ ಒಂದೇ ಕಾರಣಕ್ಕಾಗಿ ನಾವು ಆ ವ್ಯಕ್ತಿಯೊಂದಿಗೆ ಕೆಟ್ಟದ್ದಾಗಿ ನಡೆದುಕೊಳ್ಳಬಾರದು.
ಬೇರೆ ಭಾಷೆ ಮಾತಾಡುವ ಅಥವಾ ಬೇರೆ ಊರಿನಿಂದ ಬಂದಿರುವ ಯಾರಾದರೂ ನಿನಗೆ ಗೊತ್ತಾ?— ಅವರ ಭಾಷೆ, ಅವರ ಬಟ್ಟೆಬರೆ, ಬಣ್ಣ ನಮಗಿಂತ ಭಿನ್ನವಾಗಿರಬಹುದು. ತುಂಬಾ ಕಾಯಿಲೆಯಿರುವವರು ಅಥವಾ ಕೈಕಾಲು ಇಲ್ಲದವರು ಸಹ ನಮಗಿಂತ ಭಿನ್ನರಾಗಿ ಕಾಣುತ್ತಾರೆ. ಆ ರೀತಿ ಭಿನ್ನರಾಗಿ ಕಾಣುವ ಜನರೊಂದಿಗೆ ನೀನು ಪ್ರೀತಿ ದಯೆಯಿಂದ ನಡೆದುಕೊಳ್ಳುತ್ತಿಯಾ?—
ಮಹಾ ಬೋಧಕನಾದ ಯೇಸು ಕ್ರಿಸ್ತನ ಮಾತನ್ನು ಕೇಳಿ ಅದರಂತೆ ನಡೆದುಕೊಂಡರೆ ಖಂಡಿತವಾಗಿ ನಾವು ಎಲ್ಲಾ ರೀತಿಯ ಜನರಿಗೆ ದಯೆ ತೋರಿಸಬಹುದು. ಜನರು ಯಾವುದೇ ದೇಶದವರಾಗಿರಲಿ, ಯಾವುದೇ ಭಾಷೆ ಮಾತಾಡುತ್ತಿರಲಿ ನಾವು ಭೇದಭಾವ ತೋರಿಸದೆ ದಯೆ ತೋರಿಸಬೇಕು. ಆದರೆ ಎಲ್ಲರೂ ಹೀಗೆ ಮಾಡುವುದಿಲ್ಲ. ಜನರು ದಯೆ ತೋರಿಸಲಿ ತೋರಿಸದಿರಲಿ ನಾವು ತೋರಿಸಬೇಕೆಂದು ಯೇಸು ನಮಗೆ ಒಂದು ಪಾಠ ಹೇಳಿದ್ದಾನೆ. ಅದೇನೆಂದು ನೋಡೋಣ.
ಒಬ್ಬ ಯೆಹೂದಿ ವ್ಯಕ್ತಿ ಇದ್ದನು. ಅವನಿಗೆ ಬೇರೆ ದೇಶದ ಜನರ ಬಗ್ಗೆ ಪೂರ್ವಗ್ರಹ ಇತ್ತು. ಅವನು ಒಮ್ಮೆ ಯೇಸುವಿನ ಬಳಿಗೆ ಬಂದು, ‘ನಾನು ಸದಾಕಾಲ ಬದುಕಬೇಕಾದರೆ ಏನು ಮಾಡಬೇಕು?’ ಅಂತ ಕೇಳಿದನು. ಆ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಅಂತ ಯೇಸುವಿಗೆ ಅರ್ಥವಾಯಿತು. ತನ್ನ ಸ್ವಂತ ದೇಶದ ಜನರಿಗೆ ಮಾತ್ರ ಪ್ರೀತಿ ದಯೆ ತೋರಿಸಿದರೆ ಸಾಕು ಎಂದು ಯೇಸು ಉತ್ತರಿಸಬೇಕೆಂದು ಅವನು ಬಯಸಿದನು. ಆದರೆ ಯೇಸು ಅವನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಬದಲಿಗೆ ‘ದೇವರ ನಿಯಮ ನಾವೇನು ಮಾಡುವಂತೆ ಹೇಳುತ್ತದೆ?’ ಎಂದು ತಿರುಗಿ ಪ್ರಶ್ನೆ ಕೇಳಿದನು.
ಆಗ ಆ ಮನುಷ್ಯನು, ‘ನಿನ್ನ ದೇವರಾಗಿರುವ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದ ಪ್ರೀತಿಸಬೇಕು ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂದು ಉತ್ತರಿಸಿದನು. ಅದಕ್ಕೆ ಯೇಸು, ‘ನೀನು ಸರಿಯಾಗಿಯೇ ಉತ್ತರಕೊಟ್ಟೆ. ಇದನ್ನೇ ಮಾಡುತ್ತಾ ಇರು, ಆಗ ನೀನು ಸದಾಕಾಲ ಬದುಕುವಿ’ ಎಂದು ಹೇಳಿದನು.
ಯೇಸುವಿನ ಆ ಉತ್ತರದಿಂದ ಅವನಿಗೆ ಸಮಾಧಾನ ಆಗಲಿಲ್ಲ. ಯಾಕೆಂದರೆ ತನಗಿಂತ ಭಿನ್ನರಾಗಿದ್ದ ಜನರಿಗೆ ಪ್ರೀತಿ ದಯೆ ತೋರಿಸಲು ಅವನು ಇಷ್ಟಪಡುತ್ತಿರಲಿಲ್ಲ. ಹಾಗಾಗಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಾ, “ನಿಜವಾಗಿಯೂ ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಮತ್ತೆ ಕೇಳಿದನು. “ನಿನ್ನ ಸ್ನೇಹಿತರೇ ನಿನ್ನ ನೆರೆಯವರು” ಅಥವಾ “ನಿನ್ನ ಜಾತಿಯ, ನಿನ್ನ ಭಾಷೆಯ ಜನರೇ ನಿನ್ನ ಸ್ನೇಹಿತರು” ಅಂತ ಯೇಸು ಹೇಳಬೇಕೆಂದು ಅವನು ಬಯಸಿರಬೇಕು. ಆದರೆ ಯೇಸು ಈ ಪ್ರಶ್ನೆಗೆ ಉತ್ತರವಾಗಿ ಒಂದು ಕಥೆ ಹೇಳಿದನು. ಅದು ಒಬ್ಬ ಯೆಹೂದ್ಯ ಹಾಗೂ ಸಮಾರ್ಯದವನ ಕಥೆಯಾಗಿತ್ತು. ಆ ಕಥೆ ಹೇಳ್ತೀನಿ ಚಿನ್ನು ಕೇಳು.
ಒಬ್ಬ ಮನುಷ್ಯ ಯೆರೂಸಲೇಮ್ ಪಟ್ಟಣದಿಂದ ಯೆರಿಕೋವಿಗೆ ಹೋಗುತ್ತಿದ್ದನು. ಅವನೊಬ್ಬ ಯೆಹೂದ್ಯನಾಗಿದ್ದನು. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವನನ್ನು ಕಳ್ಳರು ಅಡ್ಡಗಟ್ಟಿ ಕೆಳಗೆ ನೂಕಿ, ಅವನ ಹಣ ಮತ್ತು ಬಟ್ಟೆಯನ್ನು ದೋಚಿಕೊಂಡರು. ಅಲ್ಲದೆ ಅವನನ್ನು ಚೆನ್ನಾಗಿ ಹೊಡೆದು ಅರೆಜೀವ ಮಾಡಿ ದಾರಿಯ ಪಕ್ಕದಲ್ಲಿ ಬಿಟ್ಟುಹೋದರು.
ಸ್ವಲ್ಪ ಸಮಯದ ಬಳಿಕ ಅದೇ ದಾರಿಯಲ್ಲಿ ಒಬ್ಬ ಯಾಜಕ ಬಂದನು. ಅವನು ಯೆರೂಸಲೇಮ್ ದೇವಾಲಯದಲ್ಲಿ ದೇವರ ಸೇವೆ ಮಾಡುತ್ತಿದ್ದ ವ್ಯಕ್ತಿಯಾಗಿದ್ದನು. ತುಂಬಾ ಗಾಯಗೊಂಡು ದಾರಿಯಲ್ಲಿ ಬಿದಿದ್ದ ಆ ಮನುಷ್ಯನನ್ನು ಅವನು ನೋಡಿದನು. ಒಂದು ವೇಳೆ ಗಾಯಗೊಂಡಿದ್ದ
ಆ ಮನುಷ್ಯನನ್ನು ನೀನು ನೋಡಿದ್ದರೆ ಏನು ಮಾಡುತ್ತಿದ್ದೆ?— ಯಾಜಕನು ಏನು ಮಾಡಿದನು ಗೊತ್ತಾ? ಗಾಯಗೊಂಡ ಆ ವ್ಯಕ್ತಿಯನ್ನು ನೋಡಿಯೂ ನೋಡದ ಹಾಗೆ ಹೊರಟು ಹೋದ. ಆ ಮನುಷ್ಯನಿಗೆ ಏನಾಗಿದೆ ಅಂತ ನೋಡುವ ಗೋಜಿಗೂ ಹೋಗಲಿಲ್ಲ. ಅತನಿಗೆ ಸಹಾಯ ಮಾಡಬೇಕೆಂದು ಆ ಯಾಜಕನಿಗೆ ಅನಿಸಲೇ ಇಲ್ಲ.ಅದೇ ದಾರಿಯಲ್ಲಿ ಇನ್ನೊಬ್ಬ ಧಾರ್ಮಿಕ ವ್ಯಕ್ತಿ ಬಂದನು. ಅವನು ಯೆರೂಸಲೇಮಿನ ದೇವಾಲಯದಲ್ಲಿ ಸೇವೆಮಾಡುತ್ತಿದ್ದ ಒಬ್ಬ ಲೇವಿಯನಾಗಿದ್ದನು. ಅವನು ನಿಂತು ಆ ಮನುಷ್ಯನಿಗೆ ಸಹಾಯ ಮಾಡಿದನಾ?— ಇಲ್ಲ. ಅವನು ಸಹ ಆ ಯಾಜಕನಂತೆಯೇ ಜಾಗ ಖಾಲಿಮಾಡಿದ.
ಕೊನೆಗೆ ಒಬ್ಬ ಸಮಾರ್ಯದವನು ಆ ದಾರಿಯಲ್ಲಿ ಬಂದನು. ಅಗೋ! ರಸ್ತೆಯ ಆ ತಿರುವಿನಲ್ಲಿ ಅವನು ಬರುತ್ತಿರುವುದು ನಿನಗೆ ಚಿತ್ರದಲ್ಲಿ ಕಾಣಿಸುತ್ತಿದೆಯಾ?— ತುಂಬಾ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಆ ಯೆಹೂದ್ಯನನ್ನು ಅವನೂ ನೋಡಿದನು. ಈಗ ಒಂದು ವಿಷಯ ಹೇಳ್ತೀನಿ ಕೇಳು. ಸಮಾರ್ಯದವರಿಗೂ ಯೆಹೂದ್ಯರಿಗೂ ಒಬ್ಬರನ್ನೊಬ್ಬರು ಕಂಡರೆ ಆಗುತ್ತಿರಲಿಲ್ಲ. ಯೋಹಾನ 4:9) ಹೀಗಿರುವಾಗ, ಈ ಸಮಾರ್ಯದವನು ಆ ಯೆಹೂದ್ಯನಿಗೆ ಸಹಾಯ ಮಾಡಿರಬಹುದಾ? ಅಥವಾ ‘ನಾನೇಕೆ ಈ ಯೆಹೂದ್ಯನಿಗೆ ಸಹಾಯಮಾಡಬೇಕು? ನಾನು ಇದೇ ಪರಿಸ್ಥಿತಿಯಲ್ಲಿ ಇರುತ್ತಿದ್ದರೆ ಇವನೇನೂ ನನಗೆ ಸಹಾಯಮಾಡುತ್ತಿದ್ದನಾ?’ ಅಂತ ಅವನು ನೆನಸಿದನಾ?
(ಅವನು ಹಾಗೆ ಯೋಚಿಸಲಿಲ್ಲ. ದಾರಿಯ ಪಕ್ಕದಲ್ಲಿ ಬಿದ್ದಿದ್ದ ಆ ಮನುಷ್ಯನನ್ನು ನೋಡಿದಾಗ ಸಮಾರ್ಯದವನಿಗೆ ಮರುಕ ಉಂಟಾಯಿತು. ಅಯ್ಯೋ ಪಾಪ ಅಂತ ಅನಿಸಿತು. ಅವನನ್ನು ಅಲ್ಲೇ ಬಿಟ್ಟರೆ ಸತ್ತು ಹೋಗುತ್ತಾನೆಂದು ನೆನಸಿ ತನ್ನ ಕತ್ತೆಯಿಂದ ಇಳಿದು ಅವನಿಗೆ ಆರೈಕೆ ಮಾಡಿದನು. ಗಾಯಗಳಿಗೆ ಎಣ್ಣೆ ದ್ರಾಕ್ಷಾರಸವನ್ನು ಹಚ್ಚಿದನು. ಅದು ಗಾಯವನ್ನು ಬೇಗನೆ ವಾಸಿ ಮಾಡುತ್ತದೆ. ಅವನ್ನು ಹಚ್ಚಿದ ಮೇಲೆ ಗಾಯಗಳಿಗೆ ಬಟ್ಟೆ ಸುತ್ತಿದನು.
ಆ ನಂತರ ಅವನನ್ನು ನಿಧಾನವಾಗಿ ಎತ್ತಿ ತನ್ನ ಕತ್ತೆಯ ಮೇಲೆ ಮಲಗಿಸಿದನು. ಅವನಿಗೆ ನೋವಾಗದಂತೆ ಕತ್ತೆಯನ್ನು ನಿಧಾನವಾಗಿ ಹೊಡಿಸಿಕೊಂಡು ಹೋಗಿ ಒಂದು ವಸತಿಗೃಹವನ್ನು ಅಂದರೆ ಚಿಕ್ಕ ಹೋಟೆಲನ್ನು ತಲಪಿದನು. ಅಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ತಗೊಂಡು ಅವನ ಆರೈಕೆಯನ್ನು ಚೆನ್ನಾಗಿ ಮಾಡಿದನು.
ಈ ಕಥೆಯನ್ನು ಹೇಳಿ ಮುಗಿಸಿದ ಮೇಲೆ ಯೇಸು, ‘ಈ ಮೂವರಲ್ಲಿ ಯಾರು ಒಳ್ಳೆಯ ನೆರೆಯವನು ಎಂದು ನಿನಗೆ ಅನಿಸುತ್ತದೆ?’ ಅಂತ ತನಗೆ ಪ್ರಶ್ನೆ ಹಾಕಿದ ಆ ಮನುಷ್ಯನನ್ನು ಕೇಳಿದನು. ಯಾಜಕನಾ, ಲೇವಿಯನಾ ಅಥವಾ ಸಮಾರ್ಯದವನಾ? ಮಗು, ನೀನು ಏನು ಹೇಳುತ್ತೀ?—
ಅದಕ್ಕೆ ಆ ಮನುಷ್ಯನು, ‘ಕತ್ತೆಯಿಂದ ಇಳಿದು, ಗಾಯಗೊಂಡಿದ್ದ ಮನುಷ್ಯನಿಗೆ ಆರೈಕೆ ಮಾಡಿದವನೇ ಒಳ್ಳೆಯ ನೆರೆಯವನು’ ಎಂದು ಉತ್ತರಿಸಿದನು. ಆಗ ಯೇಸು ಅವನಿಗೆ, ‘ನೀನು ಸರಿಯಾಗಿ ಹೇಳಿದೆ. ಹೋಗಿ ಅದರಂತೆಯೇ ಮಾಡು’ ಎಂದು ಹೇಳಿದನು.—ಲೂಕ 10:25-37.
ಕಥೆ ತುಂಬಾ ಚೆನ್ನಾಗಿತ್ತು ಅಲ್ವಾ? ಯಾರು ನಮ್ಮ ನೆರೆಯವರು ಅಂತ ಈ ಕಥೆ ಸ್ಪಷ್ಟವಾಗಿ ತೋರಿಸುತ್ತದೆ. ನೆರೆಯವರು ಅಂದರೆ ಕೇವಲ ನಮ್ಮ ಆಪ್ತ ಸ್ನೇಹಿತರು ಅಲ್ಲ. ನಮ್ಮ ದೇಶ, ರಾಜ್ಯದವರು ಅಥವಾ ನಮ್ಮ ಭಾಷೆ ಮಾತಾಡುವವರು ಮಾತ್ರವೇ ಅಲ್ಲ. ಜನರು ಯಾವುದೇ ದೇಶದವರಾಗಿರಲಿ, ನೋಡಲು ಹೇಗೇ ಇರಲಿ, ಯಾವುದೇ ಭಾಷೆ ಮಾತಾಡುತ್ತಿರಲಿ ಅವರೆಲ್ಲರೊಂದಿಗೆ ನಾವು ಪ್ರೀತಿ ದಯೆಯಿಂದ ನಡೆದುಕೊಳ್ಳಬೇಕು ಎಂದು ಯೇಸು ಕಲಿಸಿದನು.
ಯೆಹೋವ ದೇವರು ಸಹ ಎಲ್ಲ ಜನರಿಗೆ ಪ್ರೀತಿ ದಯೆ ತೋರಿಸುತ್ತಾನೆ. ಆತನು ಯಾರಿಗೂ ಭೇದಭಾವ ಮಾಡುವುದಿಲ್ಲ. ಪೂರ್ವಗ್ರಹವನ್ನು ಇಟ್ಟುಕೊಳ್ಳುವುದಿಲ್ಲ. ‘ಸ್ವರ್ಗದಲ್ಲಿರುವ ನಿಮ್ಮ ತಂದೆಯು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ಒಳ್ಳೆಯವರ ಮೇಲೆಯೂ ಕೆಟ್ಟವರ ಮೇಲೆಯೂ ಮಳೆಸುರಿಸುತ್ತಾನೆ’ ಎಂದು ಯೇಸು ಹೇಳಿದನು. ನಾವು ಕೂಡ ದೇವರಂತೆ ಎಲ್ಲಾ ಜನರಿಗೂ ದಯೆ ತೋರಿಸಬೇಕು.—ಮತ್ತಾಯ 5:44-48.
ಈಗ ಹೇಳು ಪುಟಾಣಿ, ಯಾರಿಗಾದರೂ ಗಾಯವಾಗಿದ್ದರೆ ನೀನೇನು ಮಾಡುತ್ತೀ?— ಆದರೆ ಆ ವ್ಯಕ್ತಿ ಬೇರೆ ದೇಶದವನಾಗಿದ್ದರೆ? ಆಗಲೂ ಸಹಾಯ ಮಾಡುತ್ತೀಯಾ? ಏನೇ ಆಗಿರಲಿ ಆ ವ್ಯಕ್ತಿ ನಿನ್ನ ನೆರೆಯವನು. ನೀನು ಅವನಿಗೆ ಸಹಾಯಮಾಡಲೇ ಬೇಕು. ಒಂದುವೇಳೆ ಸಹಾಯ ಮಾಡಲು ನಿನ್ನ ಕೈಯಲ್ಲಿ ಆಗಲ್ಲ ಅಂತ ನಿನಗೆ ಅನಿಸಿದರೆ ದೊಡ್ಡವರನ್ನು ಸಹಾಯಕ್ಕೆ ಕರಿ. ಉದಾಹರಣೆಗೆ, ಪೋಲಿಸ್ ಅಥವಾ ಟೀಚರನ್ನು ಸಹಾಯ ಮಾಡಲು ಕೇಳು. ಹೀಗೆ ಮತ್ತೊಬ್ಬರಿಗೆ ಸಹಾಯ ಮಾಡುವಾಗ ಆ ಸಮಾರ್ಯದವನಂತೆ ನೀನೂ ದಯೆ ತೋರಿಸುತ್ತಿ.
ನಾವು ಇನ್ನೊಬ್ಬರಿಗೆ ದಯೆ ತೋರಿಸಬೇಕು ಅಂತ ಮಹಾ ಬೋಧಕನು ಬಯಸುತ್ತಾನೆ. ಕಷ್ಟದಲ್ಲಿರುವವರು ಯಾರೇ ಆಗಿರಲಿ ನಾವು ಅವರಿಗೆ ಸಹಾಯ ಮಾಡಬೇಕು ಎಂದು ಅವನು ಅಪೇಕ್ಷಿಸುತ್ತಾನೆ. ಅದಕ್ಕೇ ದಯಾಳುವಾಗಿದ್ದ ಸಮಾರ್ಯದವನ ಕಥೆಯನ್ನು ಯೇಸು ನಮಗೆ ಹೇಳಿದನು.
ಜನರ ಜಾತಿ ದೇಶ ಯಾವುದೇ ಆಗಿರಲಿ ನಾವು ಅವರಿಗೆ ದಯೆ ತೋರಿಸಬೇಕು ಎಂಬ ಈ ಪಾಠದ ಬಗ್ಗೆ ಜ್ಞಾನೋಕ್ತಿ 19:22; ಅಪೊಸ್ತಲರ ಕಾರ್ಯಗಳು 10:34, 35 ಮತ್ತು 17:26 ಓದಿ ನೋಡೋಣ.