ಅಧ್ಯಾಯ 40
ದೇವರ ಹೃದಯವನ್ನು ಸಂತೋಷಪಡಿಸು
ದೇವರನ್ನು ಸಂತೋಷಪಡಿಸಲು ನಾವೇನು ಮಾಡಬಹುದು? ನಾವು ಏನನ್ನಾದರೂ ಕೊಟ್ಟರೆ ಆತನಿಗೆ ಸಂತೋಷವಾಗ್ತದಾ?— ಯೆಹೋವನು ಏನು ಹೇಳುತ್ತಾನೆಂದು ಗಮನಿಸು: “ಕಾಡಿನಲ್ಲಿರುವ ಸರ್ವಮೃಗಗಳೂ . . . ನನ್ನವೇ.” “ಬೆಳ್ಳಿಯೆಲ್ಲಾ ನನ್ನದು, ಬಂಗಾರವೆಲ್ಲಾ ನನ್ನದು.” (ಕೀರ್ತನೆ 24:1; 50:10; ಹಗ್ಗಾಯ 2:8) ಎಲ್ಲವೂ ದೇವರದ್ದಾಗಿರುವುದಾದರೂ ನಾವು ಒಂದು ವಿಷಯವನ್ನು ಆತನಿಗೆ ಕೊಡಬಹುದು. ಅದೇನಂತ ಗೊತ್ತಾ?—
ನಾವು ಆತನ ಸೇವೆಯನ್ನು ಮಾಡುವೆವೋ ಇಲ್ಲವೋ ಅನ್ನೋದನ್ನ ನಾವೇ ಆಯ್ಕೆಮಾಡುವಂತೆ ಯೆಹೋವನು ಬಿಟ್ಟಿದ್ದಾನೆ. ತನ್ನ ಸೇವೆಮಾಡಬೇಕು ಅಂತ ನಮ್ಮನ್ನು ಆತನು ಬಲವಂತ ಮಾಡುವುದಿಲ್ಲ. ಆಯ್ಕೆ ಮಾಡುವ ಸಾಮರ್ಥ್ಯವನ್ನು ನಮಗೆ ಕೊಟ್ಟಿದ್ದಾನೆ. ದೇವರೇಕೆ ನಮ್ಮನ್ನು ಈ ರೀತಿಯಲ್ಲಿ ಉಂಟುಮಾಡಿದ್ದಾನೆಂದು ನೋಡೋಣ.
ರೋಬಾಟ್ ಅಂದರೆ ಏನಂತ ಗೊತ್ತಾ? ಅದು ಮಾನವ ನಿರ್ಮಿಸಿದ ಯಂತ್ರವಾಗಿದ್ದು ಏನು ಕೆಲಸಮಾಡಬೇಕಂತ ಮೊದಲೇ ಅದರಲ್ಲಿ ಪ್ರೋಗ್ರ್ಯಾಮ್ ಮಾಡಲಾಗಿರುತ್ತದೆ. ಮತ್ತದು ಆ ಕೆಲಸವನ್ನು ಮಾತ್ರ ಮಾಡುತ್ತದೆ. ತನ್ನಿಷ್ಟ ಬಂದಂತೆ ಕೆಲಸಮಾಡುವ ಆಯ್ಕೆಯನ್ನು ರೋಬಾಟ್ ಮಾಡಲಾರದು. ಯೆಹೋವನು ನಮ್ಮನ್ನು ಕೂಡ ರೋಬಾಟ್ಗಳಂತೆ ಉಂಟುಮಾಡಬಹುದಿತ್ತು. ಆಗ ಆತನ ಇಷ್ಟದಂತೆ ನಾವೆಲ್ಲರೂ ಇರುತ್ತಿದ್ದೇವು. ಆದರೆ ದೇವರು ನಮ್ಮನ್ನು ಹಾಗೆ ಉಂಟುಮಾಡಲಿಲ್ಲ. ಏಕೆ ಗೊತ್ತಾ?— ನೀನು ನೋಡಿರಬಹುದು ಕೆಲವು ಆಟಿಕೆಗಳು ರೋಬಾಟ್ನಂತಿರುತ್ತವೆ. ಒಂದು ಬಟನ್ ಒತ್ತಿದರೆ ಸಾಕು ಆಟಿಕೆಯನ್ನು ಹೇಗೆ ಪ್ರೋಗ್ರ್ಯಾಮ್ ಮಾಡಿರುತ್ತಾರೋ
ಅದರಂತೆಯೇ ಮಾಡುತ್ತದೆ. ಅಂಥ ಆಟಿಕೆಯೊಂದಿಗೆ ನೀನು ಆಟವಾಡಿದ್ದೀಯಾ?— ಅಂಥ ಆಟಿಕೆಗಳೊಂದಿಗೆ ಆಟ ಆಡಿ ಆಡಿ ಕೆಲವು ಮಕ್ಕಳಿಗೆ ತುಂಬಾ ಬೇಜಾರಾಗಿಬಿಟ್ಟಿರುತ್ತೆ. ಯಾಕೆಂದರೆ ಬಟನ್ ಒತ್ತಿದಾಗೆಲ್ಲ ಒಂದೇ ರೀತಿಯ ಆಟ. ನಾವು ಕೂಡ ರೋಬಾಟ್ಗಳಂತೆ ಯಾಂತ್ರಿಕವಾಗಿ ವಿಧೇಯರಾಗುವುದು ದೇವರಿಗೆ ಇಷ್ಟವಿಲ್ಲ. ನಾವು ಯೆಹೋವನನ್ನು ಪ್ರೀತಿಸಿ ಆತನ ಆಜ್ಞೆಗಳಿಗೆ ಮನಃಪೂರ್ವಕವಾಗಿ ವಿಧೇಯರಾಗಿ ಆತನ ಸೇವೆಮಾಡಬೇಕೆಂದು ಆತನ ಇಷ್ಟ.ನಾವು ಮನಃಪೂರ್ವಕವಾಗಿ ವಿಧೇಯರಾಗುವಾಗ ದೇವರಿಗೆ ಹೇಗನಿಸುತ್ತದೆ?— ನೀನು ನಡಕೊಳ್ಳುವ ರೀತಿ ನಿನ್ನ ಅಪ್ಪಅಮ್ಮನಿಗೆ ಹೇಗನಿಸುತ್ತದೆ?— ಬೈಬಲ್ ಹೇಳುತ್ತದೆ, ಮಗ ವಿವೇಕದಿಂದ ನಡಕೊಳ್ಳುವಾಗ “ತಂದೆಗೆ ಸುಖ.” ಮೂರ್ಖ ಮಗನು “ತಾಯಿಗೆ ದುಃಖ” ಉಂಟುಮಾಡುತ್ತಾನೆ. (ಜ್ಞಾನೋಕ್ತಿ 10:1) ತಂದೆತಾಯಿ ಮಾತಿನಂತೆ ನೀನು ನಡೆದುಕೊಂಡಾಗ ಅವರು ಸಂತೋಷಪಡುತ್ತಾರಲ್ವಾ?— ನೀನು ಅವಿಧೇಯನಾದರೆ ಅವರಿಗೆ ಹೇಗನಿಸುತ್ತೆ?—
ಈಗ ನಮ್ಮ ತಂದೆಯಾದ ಯೆಹೋವನ ಬಗ್ಗೆ ನೋಡೋಣ. ನಾವು ಹೇಗೆ ಆತನನ್ನು ಸಂತೋಷಪಡಿಸಬಹುದು ಅಂತ ಆತನೇ ನಮಗೆ ತಿಳಿಸುತ್ತಾನೆ. ಬೈಬಲಿನಲ್ಲಿ ಜ್ಞಾನೋಕ್ತಿ 27:11 ತೆರೆಯುತ್ತೀಯಾ? ಅಲ್ಲಿ ದೇವರು ನಮಗೆ ಹೀಗೆ ಹೇಳುತ್ತಾನೆ: “ಮಗನೇ [ಅಥವಾ ಮಗಳೇ], ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” ದೂರುವುದು ಅಥವಾ ಟೀಕಿಸುವುದು ಅಂದರೇನು?— ಯಾರಾದರೂ ನಿನ್ನನ್ನು ಕೈಲಾಗದವನು, ಮಾತಿನಂತೆ ನಡೆದುಕೊಳ್ಳಲು ಅಸಮರ್ಥನು ಅಂತ ಹಾಸ್ಯಮಾಡುತ್ತಾ ಹೇಳುವುದಾದರೆ ಆ ವ್ಯಕ್ತಿ ನಿನ್ನನ್ನು ಟೀಕಿಸುತ್ತಿದ್ದಾನೆ. ಸೈತಾನನು ಯೆಹೋವನನ್ನು ಟೀಕಿಸುತ್ತಿರುವುದು ಹೇಗೆ?— ಅದನ್ನು ನೋಡೋಣ.
ತಾನು ದೇವರಿಗಿಂತ ಶ್ರೇಷ್ಠನಾಗಬೇಕು ಎಲ್ಲರೂ ತನ್ನ ಮಾತಿಗೇ ವಿಧೇಯರಾಗಬೇಕು ಅಂತ ಸೈತಾನನು ತಪ್ಪಾದ ಆಶೆ ಇಟ್ಟುಕೊಂಡಿದ್ದನೆಂದು ಅಧ್ಯಾಯ 8ರಲ್ಲಿ ಕಲಿತ್ತಿದ್ದು ನಿನಗೆ ನೆನಪಿರಬಹುದು. ಮಾನವರು ಯೆಹೋವನು ಕೊಡುವ ನಿತ್ಯಜೀವಕ್ಕಾಗಿ ಮಾತ್ರ ಆತನನ್ನು ಆರಾಧಿಸುತ್ತಾರೆಂದು ಸೈತಾನನು ದೂರುತ್ತಾನೆ. ಆದಾಮಹವ್ವರನ್ನು ಯೆಹೋವನಿಗೆ ಬೆನ್ನುಹಾಕುವಂತೆ ಮಾಡಿದ ನಂತರ ಸೈತಾನನು ದೇವರಿಗೆ ಸವಾಲೆಸೆದನು. ಸೈತಾನನ ಸವಾಲು ಹೀಗಿತ್ತು: ‘ನಿನ್ನಿಂದ ಲಾಭ ಸಿಗೋ ತನಕ ಮಾತ್ರ ಜನರು ನಿನ್ನ ಸೇವೆಮಾಡುತ್ತಾರೆ. ಒಂದೇ ಒಂದು ಚಾನ್ಸ್ ಕೊಡು. ನಿನ್ನ ಎಷ್ಟೇ ದೊಡ್ಡ ಭಕ್ತರಿರಲಿ ನಿನ್ನಿಂದ ದೂರಹೋಗುವಂತೆ ಮಾಡ್ತಿನಿ.’
ಇದೇ ಪದಗಳನ್ನು ಸೈತಾನನು ಉಪಯೋಗಿಸಿದ್ದಾಗಿ ಬೈಬಲ್ನಲ್ಲಿ ಇಲ್ಲ. ಆದರೆ ಹೀಗೆ ಸವಾಲೆಸೆದನೆಂದು ಬೈಬಲ್ನಲ್ಲಿ ಯೋಬ ಎಂಬ ಮನುಷ್ಯನ ಕುರಿತು ಓದುವಾಗ ನಮಗೆ ತಿಳಿಯುತ್ತದೆ. ಅವನು ದೇವಭಕ್ತನಾಗಿದ್ದನು. ಯೋಬನು ತನಗೆ ನಿಷ್ಠಾವಂತನಾಗಿರುತ್ತಾನಾ ಎಂಬ ವಿಚಾರ ಯೆಹೋವನಿಗೆ ಮಹತ್ವದ ಸಂಗತಿಯಾಗಿತ್ತು. ಸೈತಾನನಿಗೂ ಅದರಲ್ಲಿ ಆಸಕ್ತಿಯಿತ್ತು. ದೇವಭಕ್ತ ಯೋಬನ ಜೀವಮಾನದಲ್ಲಿ ನಡೆದ ಕೆಲವು ಘಟನೆಗಳನ್ನು ಬೈಬಲ್ನಲ್ಲಿ ಯೋಬ ಪುಸ್ತಕದ ಅಧ್ಯಾಯ 1 ಮತ್ತು 2ನ್ನು ತೆರೆದು ಓದೋಣ.
ಅಧ್ಯಾಯ 1ರಲ್ಲಿ ಗಮನಿಸುವುದಾದರೆ, ಒಂದು ದಿನ ದೇವದೂತರು ಯೆಹೋವನ ಸನ್ನಿಧಿಯಲ್ಲಿ ಹಾಜರಾದಾಗ ಸೈತಾನನೂ ಅಲ್ಲಿ ಬರುತ್ತಾನೆ. “ಎಲ್ಲಿಂದ ಬಂದಿ” ಅಂತ ಯೆಹೋವನು ಸೈತಾನನನ್ನು ಕೇಳುತ್ತಾನೆ. ಭೂಲೋಕವನ್ನು ಸುತ್ತಾಡಿ ಬಂದೆನೆಂದು ಸೈತಾನನು ಉತ್ತರಿಸುತ್ತಾನೆ. ಆಗ ಯೆಹೋವನು, ‘ಯೋಬನನ್ನು ಗಮನಿಸಿದ್ದೀಯಾ, ಅವನು ನನ್ನಲ್ಲಿ ಭಕ್ತಿಯುಳ್ಳವನಾಗಿದ್ದಾನೆ. ಅವನಲ್ಲಿ ಕೆಟ್ಟದ್ದೇನೂ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾನೆ.—ಯೋಬ 1:6-8.
ಅದನ್ನು ಅಲ್ಲಗಳೆಯುತ್ತಾ ಸೈತಾನನು, ‘ನೀನು ಯೋಬನನ್ನು ಚೆನ್ನಾಗಿಟ್ಟಿದ್ದಿ. ಅದಕ್ಕೆ ನಿನ್ನನ್ನು ಆರಾಧಿಸುತ್ತಾನೆ. ಅವನ ಮೇಲಿಟ್ಟಿರುವ ಆಶೀರ್ವಾದ ಹಿಂತೆಗೆ. ಅವನಿಗೆ ಯಾವ ಸಂರಕ್ಷಣೆಯನ್ನು ಕೊಡಬೇಡ. ಆಗ ನೋಡು, ನಿನ್ನ ಮುಖದೆದುರಿಗೇ ನಿನ್ನನ್ನು ಶಪಿಸುವನು’ ಎಂದು ಕೊಂಕು ನುಡಿದನು. ಅದಕ್ಕೆ ಯೆಹೋವನು, ‘ಸೈತಾನನೇ, ಯೋಬನ ವಿಷಯದಲ್ಲಿ ನಿನಗೆ ಇಷ್ಟ ಬಂದಂತೆ ಮಾಡು. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ’ ಅಂತ ಹೇಳುತ್ತಾನೆ.—ಸೈತಾನ ಏನು ಮಾಡಿದ ಗೊತ್ತಾ?— ಯೋಬನ ಎಲ್ಲಾ ಆಸ್ತಿಗಳನ್ನು ಒಂದೊಂದಾಗಿ ಸರ್ವನಾಶಮಾಡುತ್ತಾನೆ. ಮೊದಲು ಯೋಬನ ಎತ್ತು ಕತ್ತೆಗಳನ್ನು ಕಳವು ಮಾಡಿಸಿ ಅವುಗಳನ್ನು ಮೇಯಿಸುತ್ತಿದ್ದ ಆಳುಗಳನ್ನು ಕೊಲ್ಲಿಸುತ್ತಾನೆ. ನಂತರ ಸಿಡಿಲು ಬಡಿಯುವಂತೆ ಮಾಡುತ್ತಾನೆ. ಅದು ಯೋಬನ ಕುರಿಗಳನ್ನೂ ಕುರುಬರನ್ನೂ ದಹಿಸಿಬಿಡುತ್ತದೆ. ಆಮೇಲೆ ಒಂಟೆಗಳನ್ನು ಕಳವು ಮಾಡಿಸಿ ಅವುಗಳನ್ನು ನೋಡಿಕೊಳ್ಳುತ್ತಿದ್ದ ಆಳುಗಳನ್ನು ಕೊಲ್ಲಿಸುತ್ತಾನೆ. ಕೊನೆಯದಾಗಿ, ದೊಡ್ಡ ಬಿರುಗಾಳಿ ಬೀಸುವಂತೆ ಮಾಡುತ್ತಾನೆ. ಅದು ಯೋಬನ ಹತ್ತು ಮಕ್ಕಳಿದ್ದ ಮನೆಯನ್ನು ಧ್ವಂಸ ಮಾಡುತ್ತದೆ. ಹೀಗೆ ಯೋಬನ ಮಕ್ಕಳೆಲ್ಲರೂ ಸತ್ತುಹೋಗುತ್ತಾರೆ. ಒಂದರ ಹಿಂದೆ ಒಂದು ದುರಂತ ಬಂದಪ್ಪಳಿಸಿದರೂ ಯೋಬನು ಮಾತ್ರ ಯೆಹೋವನನ್ನು ನಿಷ್ಠೆಯಿಂದ ಆರಾಧಿಸುವುದನ್ನು ಬಿಡಲಿಲ್ಲ.—ಯೋಬ 1:13-22.
ಇನ್ನೊಂದು ದಿನ ಸೈತಾನನು ಯೆಹೋವನ ಸನ್ನಿಧಿಗೆ ಬರುತ್ತಾನೆ. ಯೋಬನು ಬಿಡದೇ ನಿಷ್ಠೆ ತೋರಿಸುತ್ತಿರುವ ಬಗ್ಗೆ ಯೆಹೋವನು ಮತ್ತೆ ಮೆಚ್ಚಿಗೆ ವ್ಯಕ್ತಪಡಿಸುತ್ತಾನೆ. ಆಗ ಸೈತಾನ ‘ಅವನ ಮೈಮೇಲೆ ಕೈಹಾಕಿ ಹಾನಿಮಾಡಲು ನನಗೆ ಅನುಮತಿ ಕೊಟ್ಟುನೋಡು. ಆಗ ನಿನ್ನ ಮುಖದೆದುರಿಗೇ ನಿನ್ನನ್ನು ಶಪಿಸೇ ಶಪಿಸುವನು’ ಎಂದು ಸವಾಲ್ ಹಾಕುತ್ತಾನೆ. ಯೆಹೋವನು ಅದನ್ನು ಅನುಮತಿಸುತ್ತಾನೆ. ಆದರೆ ಯೋಬನ ಪ್ರಾಣ ತೆಗೆಯದಂತೆ ಎಚ್ಚರಿಸುತ್ತಾನೆ.
ಯೋಬನ ನಿಷ್ಠೆ ನೋಡಿ ಯೆಹೋವನಿಗೆ ಹೇಗನಿಸಿತು?— ಯೆಹೋವನಿಗೆ ಅಮಿತಾನಂದವಾಯಿತು. ಏಕೆಂದರೆ ಸದಾ ದೂರುತ್ತಿದ್ದ ಸೈತಾನನಿಗೆ ಯೆಹೋವನು ‘ಯೋಬನನ್ನು ನೋಡು! ಅವನು ನನ್ನನ್ನು ಮನಸ್ಸಾರೆ ಆರಾಧಿಸಲು ಬಯಸುತ್ತಾ ’ ಎಂದು ತಕ್ಕ ಉತ್ತರ ಕೊಡಸಾಧ್ಯವಾಯಿತು. ಯೋಬನಂತೆ ನಿಷ್ಠಾವಂತನಾಗಿರಲು ಇಷ್ಟಪಡುತ್ತಿಯಾ? ನಿನ್ನ ಮಾದರಿಯನ್ನು ನೋಡಿ ಸೈತಾನ ಸುಳ್ಳುಗಾರನೆಂದು ಯೆಹೋವನು ಹೇಳಸಾಧ್ಯವಾ?— ಯೆಹೋವನ ಎಷ್ಟೇ ದೊಡ್ಡ ಭಕ್ತರನ್ನು ಸಹ ಆತನಿಂದ ದೂರ ಹೋಗುವಂತೆ ಮಾಡಬಲ್ಲೆನೆಂದು ಎಸೆದ ಸೈತಾನನ ಸವಾಲಿಗೆ ಉತ್ತರ ನೀಡುವುದು ನಿಜಕ್ಕೂ ಒಂದು ಸೌಭಾಗ್ಯ. ಯೇಸು ಸಹ ಇದನ್ನು ಸೌಭಾಗ್ಯವೆಂದು ಭಾವಿಸಿದನು.
ಸೈತಾನನು ಎಷ್ಟೇ ಪ್ರಯತ್ನಿಸಿದರೂ ಪ್ರಚೋದಿಸಿದರೂ ಮಹಾ ಬೋಧಕನು ಎಂದೂ ಯಾವ ತಪ್ಪನ್ನು ಮಾಡಲಿಲ್ಲ. ಅವನ ಈ ಮಾದರಿಯಿಂದ ಯೆಹೋವನ ಮನಸ್ಸು ಎಷ್ಟು ಹಿಗ್ಗಿರಬೇಕೆಂದು ಸ್ವಲ್ಪ ಊಹಿಸು! ಯೆಹೋವನು ಯೇಸುವನ್ನು ತೋರಿಸಿ, ‘ನನ್ನ ಮಗ ನನ್ನ ಮೇಲೆ ಎಷ್ಟು ಪ್ರೀತಿಯಿಟ್ಟಿದ್ದಾನೆ ನೋಡು. ನನ್ನೆಡೆಗೆ ಸಂಪೂರ್ಣ ನಿಷ್ಠೆಯನ್ನು ತೋರಿಸಿದ್ದಾನೆ’ ಅಂತ ಸೈತಾನನಿಗೆ ಪ್ರತ್ಯುತ್ತರ ಕೊಡಸಾಧ್ಯವಿತ್ತು. ತಂದೆಯ ಹೃದಯವನ್ನು ಸಂತೋಷಪಡಿಸಿದರಲ್ಲಿ ಯೇಸು ಪಟ್ಟ ಆನಂದವನ್ನು ಕಲ್ಪಿಸಿಕೋ. ತನ್ನ ಮುಂದಿದ್ದ ಆನಂದದ ಕಾರಣದಿಂದಲೇ ಯೇಸು ಮರಣ ಹೊಂದುವ ವರೆಗೆ ತಾಳಿಕೊಂಡನು.—ಇಬ್ರಿಯ 12:2.
ಪುಟ್ಟೂ, ಮಹಾ ಬೋಧಕನಂತೆ ನೀನುನೂ ಯೆಹೋವನನ್ನು ಸಂತೋಷಪಡಿಸಲು ಬಯಸುತ್ತೀಯಾ?— ಹಾಗಾದರೆ ಯೆಹೋವನನ್ನು ಸಂತೋಷಪಡಿಸಲು ಏನು ಮಾಡಬೇಕೆಂದು ಕಲಿತು ಅದನ್ನು ಮಾಡುತ್ತಾ ಇರು.
ಯೆಹೋವನ ಹೃದಯನ್ನು ಸಂತೋಷಪಡಿಸಲು ಯೇಸು ಏನು ಮಾಡಿದನು ಮತ್ತು ನಾವೇನು ಮಾಡಬೇಕೆಂದು ತಿಳಿದುಕೊಳ್ಳಲು ಜ್ಞಾನೋಕ್ತಿ 23:22-25; ಯೋಹಾನ 5:30; 6:38; 8:28 ಮತ್ತು 2 ಯೋಹಾನ 4 ಓದಿ ನೋಡೋಣ.