ನಮ್ಮ ಮಕ್ಕಳಿಗೆ ಏನು ಅವಶ್ಯ
ತಾಯಿಯ ಗರ್ಭದಲ್ಲಿ ಮಗುವೊಂದು ಹೇಗೆ ರೂಪುಗೊಳ್ಳುತ್ತದೆ ಎನ್ನುವುದು ಮಾನವ ಗ್ರಹಿಕೆಗೆ ನಿಲುಕದ ವಿಷಯ. ತಂದೆಯ ಶರೀರದ ಒಂದು ಅಂಶ ಹಾಗೂ ತಾಯಿಯ ಶರೀರದ ಒಂದು ಅಂಶ ಮಿಲನಗೊಂಡು ಗರ್ಭದಲ್ಲಿ ಜೀವತಳೆಯುತ್ತದೆ. ಅದು ಪೂರ್ಣವಾಗಿ ರೂಪುಗೊಂಡು ಒಂದು ಪುಟ್ಟ ಮಗು ಈ ಪ್ರಪಂಚಕ್ಕೆ ಕಾಲಿಡುತ್ತದೆ. ಇದೊಂದು ವಿಸ್ಮಯಕಾರಿ ಪ್ರಕ್ರಿಯೆಯೇ ಸರಿ.
ಮಗುವಿನ ಜನನದ ಕ್ಷಣದಿಂದ ಹೆತ್ತವರ ಜವಾಬ್ದಾರಿ ಶುರುವಾಗುತ್ತದೆ. ಮೊದಮೊದಲು ಶಿಶುಗಳಿಗೆ ತಂದೆತಾಯಿಯ ಸಂಪೂರ್ಣ ಗಮನ ಆರೈಕೆ ಆಸರೆ ಬೇಕಾಗುತ್ತದೆ. ಅವು ಬೆಳೆಯುತ್ತಾ ಹೋದಂತೆ ಶಾರೀರಿಕ ಆರೈಕೆಗಿಂತ ಹೆಚ್ಚಿನದ್ದನ್ನು ನೀಡಬೇಕಾಗುತ್ತದೆ. ಅಂದರೆ ಮಾನಸಿಕ, ಭಾವನಾತ್ಮಕ, ನೈತಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ನೀಡಬೇಕಾಗುತ್ತದೆ.
ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ತಂದೆತಾಯಿಯ ಪ್ರೀತಿ ಅತ್ಯಗತ್ಯ. ಪ್ರೀತಿಯನ್ನು ಮಾತಿನಲ್ಲಿ ವ್ಯಕ್ತಪಡಿಸುವುದು ಎಷ್ಟು ಮುಖ್ಯವೋ ಮಾತನ್ನು ಕ್ರಿಯೆಯಲ್ಲಿ ಸಾಕಾರಗೊಳಿಸುವುದು ಅಷ್ಟೇ ಮುಖ್ಯ. ಹೌದು, ಮಕ್ಕಳಿಗೆ ಹೆತ್ತವರು ಒಳ್ಳೇ ಮಾದರಿಯನ್ನಿಡಬೇಕು. ಮಕ್ಕಳ ಜೀವನಕ್ಕೆ ದಾರಿ ದೀಪವಾಗುವ ನೀತಿಮಾರ್ಗ ಹಾಗೂ ಸೂತ್ರಗಳನ್ನು ಕಲಿಸಬೇಕು. ಇದೆಲ್ಲವನ್ನು ಎಳೆಯ ಪ್ರಾಯದಲ್ಲೇ ಬುನಾದಿಯಾಗಿ ಹಾಕಬೇಕು. ತಡಮಾಡಿದರೆ ಪರಿಸ್ಥಿತಿ ಕೈಮೀರಬಹುದು, ಅನಾಹುತ ಎದುರಿಸಬೇಕಾಗಬಹುದು.
ಮಕ್ಕಳ ತರಬೇತಿಗಾಗಿ ಅತ್ಯುತ್ತಮ ಸಲಹೆಸೂತ್ರಗಳು ಬೈಬಲಿನಲ್ಲಿವೆ. ಬೈಬಲಿನಲ್ಲಿ ಸಿಗುವ ಮಾರ್ಗದರ್ಶನೆ ಸರಿಸಾಟಿಯಿಲ್ಲದ್ದು. ಬೈಬಲಿನಿಂದ ಮಕ್ಕಳಿಗೆ ಕಲಿಸುವಾಗ ಅವರು ಅದರಲ್ಲಿರುವ ಸಲಹೆಗಳು ಮಾನವರದ್ದಲ್ಲ ಸೃಷ್ಟಿಕರ್ತ ದೇವರಿಂದ ಬಂದಿವೆ ಎಂದು ಗ್ರಹಿಸುವರು. ಆಗ ಅವರ ಮನಸ್ಸಿನಲ್ಲಿ ಆ ಅದ್ವಿತೀಯ ಸಲಹೆಗಳಿಗಾಗಿ ಗೌರವ ಮಾನ್ಯತೆ ಹೆಚ್ಚುವುದು.
ಮಕ್ಕಳ ಮನಃಪಟಲದಲ್ಲಿ ಸರಿಯಾದ ಸೂತ್ರಗಳನ್ನು ಅಚ್ಚೊತ್ತಲು ಶ್ರಮಿಸುವಂತೆ ಬೈಬಲ್ ಹೆತ್ತವರನ್ನು ಪ್ರೋತ್ಸಾಹಿಸುತ್ತದೆ. ಆದರೆ ಮಕ್ಕಳು ಬೆಳೆದು ದೊಡ್ಡವರಾಗುತ್ತಾ ಹೋದಂತೆ ಕೆಲವೊಂದು ವಿಷಯಗಳ ಬಗ್ಗೆ ಅವರೊಂದಿಗೆ ಮಾತಾಡುವುದು ಹೆತ್ತವರಿಗೆ ಕಷ್ಟವಾಗಬಹುದು. ಇದನ್ನು ಮನಸ್ಸಿನಲ್ಲಿಟ್ಟೇ ಮಹಾ ಬೋಧಕನಿಂದ ಕಲಿಯೋಣ ಎಂಬ ಈ ಪುಸ್ತಕವನ್ನು ಹೊರತರಲಾಗಿದೆ. ನೀವು ಮತ್ತು ನಿಮ್ಮ ಮಕ್ಕಳು ಜೊತೆಗೂಡಿ ಆಧ್ಯಾತ್ಮಿಕ ವಿಷಯಗಳನ್ನು ಓದಲು ಈ ಪುಸ್ತಕ ಸಂದರ್ಭ ಒದಗಿಸುತ್ತದೆ.
ಅಷ್ಟೇ ಅಲ್ಲ, ಇದು ಮಕ್ಕಳ ಹಾಗೂ ಪಾಲಕರ ನಡುವೆ ಮುಕ್ತ ಸಂಭಾಷಣೆಗೆ ದಾರಿ ಮಾಡಿಕೊಡುತ್ತದೆ.ಮಕ್ಕಳು ತಮ್ಮ ಅಭಿಪ್ರಾಯ ಅನಿಸಿಕೆ ತಿಳಿಸುವಂತೆ ಸಹ ಈ ಪುಸ್ತಕ ಅವಕಾಶ ಮಾಡಿಕೊಡುತ್ತದೆ. ಅದಕ್ಕಾಗಿ ಅಧ್ಯಾಯದಲ್ಲಿ ಅಲ್ಲಲ್ಲಿ ಪ್ರಶ್ನೆಗಳನ್ನು ಕೊಡಲಾಗಿದೆ. ಅಂಥ ಪ್ರಶ್ನೆಗಳ ಕೊನೆಯಲ್ಲಿ ಒಂದು ಚಿಕ್ಕ ಅಡ್ಡಗೆರೆ (—) ಕಾಣುವಿರಿ. ಅಲ್ಲಿ ತುಸು ನಿಲ್ಲಿಸಿ ಆ ಪ್ರಶ್ನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ಏಕೆಂದರೆ ಮಕ್ಕಳು ಸುಮ್ಮನೆ ಕೂತು ಕೇಳುತ್ತಿದ್ದರೆ ಬೇಗನೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಈ ಪ್ರಶ್ನೆಗಳನ್ನು ಬಳಸುವಾಗ ಆಸಕ್ತಿಯಿಂದ ಭಾಗವಹಿಸುತ್ತಾರೆ.
ಪ್ರಶ್ನೆ ಕೇಳುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ಮಕ್ಕಳ ಮನಸ್ಸಿನಲ್ಲಿ ಏನಿದೆ ಅಂತ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ಎಲ್ಲಾ ಪ್ರಶ್ನೆಗಳಿಗೆ ಮಕ್ಕಳು ಸರಿಯಾದ ಉತ್ತರ ಕೊಡಲಿಕ್ಕಿಲ್ಲ. ಆದರೆ ಪ್ರಶ್ನೆಯ ನಂತರ ಇರುವ ಉತ್ತರವನ್ನು ಓದುವಾಗ, ಆಲೋಚಿಸಿ ಸರಿಯಾದ ಉತ್ತರ ಕೊಡುವುದು ಹೇಗೆಂದು ಅವರು ಕಲಿತುಕೊಳ್ಳುತ್ತಾರೆ.
ಈ ಪುಸ್ತಕದ ಇನ್ನೊಂದು ವೈಶಿಷ್ಟ್ಯ ಇದರಲ್ಲಿರುವ 230ಕ್ಕೂ ಮೇಲ್ಪಟ್ಟ ಚಿತ್ರಗಳು. ಹೆಚ್ಚುಕಡಿಮೆ ಎಲ್ಲಾ ಚಿತ್ರಗಳ ಜೊತೆಗೆ ಪ್ರಶ್ನೆಗಳಿರುವುದನ್ನು ನೀವು ಕಾಣುವಿರಿ. ಮಕ್ಕಳು ಆ ಚಿತ್ರಗಳನ್ನು ನೋಡಿ, ಓದಿದ ವಿಷಯಗಳನ್ನು ನೆನಪುಮಾಡಿಕೊಂಡು ಉತ್ತರ ನೀಡಬೇಕೆಂಬ ಉದ್ದೇಶದಿಂದ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಹಾಗಾಗಿ ಅಧ್ಯಾಯ ಮುಗಿದ ಮೇಲೆ ಚಿತ್ರಗಳ ಕುರಿತು ಮಕ್ಕಳ ಅಭಿಪ್ರಾಯ ಕೇಳಿ. ಕಲಿತ ವಿಷಯಗಳನ್ನು ಮನಸ್ಸಿನಲ್ಲಿ ಹಚ್ಚ ಹಸಿರಾಗಿಟ್ಟುಕೊಳ್ಳಲು ಈ ಚಿತ್ರಗಳು ತುಂಬಾ ಸಹಾಯಕಾರಿ.
ಮಕ್ಕಳು ಓದಲು ಕಲಿತಾಗ ಅಧ್ಯಾಯಗಳನ್ನು ಜೋರಾಗಿ ಓದಿ ತಿಳಿಸುವಂತೆ ಪ್ರೋತ್ಸಾಹಿಸಿರಿ. ಸಮಯ ಸಿಕ್ಕಾಗೆಲ್ಲಾ ಸ್ವತಃ ಓದಿಕೊಳ್ಳುವಂತೆಯೂ ಪ್ರೋತ್ಸಾಹಿಸಿರಿ. ಎಷ್ಟು ಬಾರಿ ಓದುತ್ತಾರೋ ಅಷ್ಟು ಆಳವಾಗಿ ಅದರ ಸಲಹೆಗಳು ಮಕ್ಕಳ ಎಳೆಯ ಹೃದಮನಗಳ ಮೇಲೆ ಛಾಪು ಮೂಡಿಸುವುದು. ಆದರೆ ನಿಮ್ಮ ಹಾಗೂ ಮಕ್ಕಳ ನಡುವೆ ಪ್ರೀತಿ ಬಾಂಧವ್ಯ ಆಪ್ತವಾಗಿ ಬೆಸೆಯಬೇಕಾದರೆ ಜೊತೆಗೂಡಿ ಓದಿರಿ. ಆ ರೂಢಿಯನ್ನು ತಪ್ಪಿಸಬೇಡಿ.
ಒಂದು ಕಾಲದಲ್ಲಿ, ಲೈಂಗಿಕತೆ ಮಾಟಮಂತ್ರಗಳಂಥ ಆಚಾರ ವಿಚಾರಗಳು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ದಾಳಿಯಿಡುವುದನ್ನು ಯಾರೊಬ್ಬರೂ ಊಹಿಸಿರಲಾರರು. ಆದರೆ ಇಂದು ಅವು ಸರ್ವಸಾಮಾನ್ಯವಾಗಿವೆ. ಅಂಥ ವಿಷಯಗಳ ಕುರಿತು ಮಕ್ಕಳೊಂದಿಗೆ ನೇರವಾಗಿ ಹಾಗೂ ಗೌರವಯುತವಾಗಿ ಚರ್ಚಿಸಿ ಅವರಿಗೆ ರಕ್ಷಣೆ ಒದಗಿಸಲು ಈ ಪುಸ್ತಕ ಸಹಾಯಮಾಡುತ್ತದೆ. ನಿಮ್ಮ ಮಕ್ಕಳು ಮಾರ್ಗದರ್ಶನೆಗಾಗಿ ಸಕಲ ವಿವೇಕದ ಮೂಲನಾಗಿರುವ ಯೆಹೋವನ ಮೊರೆಹೋಗುವುದು ತುಂಬಾ ಪ್ರಾಮುಖ್ಯ. ಆ ರೀತಿಯಲ್ಲಿ ನೀವು ಅವರನ್ನು ತರಬೇತಿಗೊಳಿಸಬೇಕು. ಮಹಾ ಬೋಧಕನಾದ ಯೇಸು ಸಹ ಯಾವಾಗಲೂ ಯೆಹೋವ ದೇವರೆಡೆಗೆ ಜನರ ಗಮನ ಸೆಳೆಯುತ್ತಿದ್ದನು. ಯೆಹೋವನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಜೀವನ ನಡೆಸಲು ಈ ಪುಸ್ತಕ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಹಾಯ ಮಾಡುವುದು. ಹೀಗೆ ನೀವು ನಿತ್ಯ ನಿರಂತರಕ್ಕೂ ಆಶೀರ್ವದಿಸಲ್ಪಡುವಿರಿ. ಅದುವೇ ನಮ್ಮ ಆಶಯ.