ನನಗೆ ಅಷ್ಟು ನಾಚಿಕೆ ಏಕೆ?
ಅಧ್ಯಾಯ 15
ನನಗೆ ಅಷ್ಟು ನಾಚಿಕೆ ಏಕೆ?
“ನಾನೆಷ್ಟು ಸುಂದರಿಯಾಗಿದ್ದೇನೆಂದು ಪ್ರತಿಯೊಬ್ಬರೂ ನನಗೆ ಹೇಳುತ್ತಾರೆ,” ಎಂದು ಯುವ ಸ್ತ್ರೀಯೊಬ್ಬಳು ವಾರ್ತಾಪತ್ರಿಕೆಯ ಅಂಕಣಕ್ಕೆ ಬರೆದಳು. ಆದರೂ ಅವಳು ಹೇಳುತ್ತಾ ಮುಂದುವರಿದದ್ದು: “ಜನರೊಂದಿಗೆ ಮಾತಾಡುವುದು ನನಗೆ ಒಂದು ಸಮಸ್ಯೆಯಾಗಿದೆ. ಮಾತಾಡುತ್ತಿರುವಾಗ ನಾನು ಯಾರನ್ನಾದರೂ ದೃಷ್ಟಿಸಿ ನೋಡುವಲ್ಲಿ, ನನ್ನ ಮುಖವು ಕೆಂಪಾಗಿ, ನನಗೆ ಒಳಗೇ ಉಸಿರುಕಟ್ಟಿಕೊಂಡು ಮಾತನಾಡಲಾಗುವುದಿಲ್ಲ . . . ನಾನು ಯಾರೊಡನೆಯೂ ಮಾತಾಡದಿರುವುದರಿಂದ, ನಾನೆಷ್ಟು ‘ಅಹಂಕಾರಿ’ಯಾಗಿದ್ದೇನೆಂಬುದರ ಕುರಿತು ಕೆಲಸದ ಸ್ಥಳದಲ್ಲಿ ನಾನು ಅನೇಕ ಹೇಳಿಕೆಗಳನ್ನು ಕೇಳಿಸಿಕೊಂಡಿದ್ದೇನೆ. . . . ನಾನು ಅಹಂಕಾರಿಯಲ್ಲ, ನಾನು ನಾಚಿಕೆಪಡುತ್ತೇನೆ, ಅಷ್ಟೇ.”
ಒಂದು ಸಮೀಕ್ಷೆಯು ತೋರಿಸಿದ್ದೇನಂದರೆ, ಪ್ರಶ್ನಿಸಲ್ಪಟ್ಟವರಲ್ಲಿ 80 ಪ್ರತಿಶತ ಮಂದಿ ತಮ್ಮ ಜೀವಿತದ ಯಾವುದೋ ಒಂದು ಸಮಯದಲ್ಲಿ ನಾಚಿಕೆಪಡುವವರಾಗಿದ್ದರು, ಮತ್ತು 40 ಪ್ರತಿಶತ ಮಂದಿ ಪ್ರಸ್ತುತದಲ್ಲಿ ಸ್ವತಃ ನಾಚಿಕೆಪಡುವವರಾಗಿ ಪರಿಗಣಿಸಿಕೊಂಡರು. ನಿಜವಾಗಿಯೂ, ಅತ್ಯಾರಂಭದ ಸಮಯಗಳಿಂದಲೂ ನಾಚಿಕೆಸ್ವಭಾವವು ಮಾನವಕುಲಕ್ಕೆ ಸಾಮಾನ್ಯವಾದ ವಿಷಯವಾಗಿದೆ. ಇಸ್ರಾಯೇಲ್ ಜನಾಂಗದ ಮುಂದೆ ದೇವರ ಪ್ರತಿನಿಧಿಯೋಪಾದಿ ಕ್ರಿಯೆಗೈಯಲು ಮೋಶೆಯು ನಾಚಿಕೆಯಿಂದ ನಿರಾಕರಿಸಿದನು ಎಂದು ಬೈಬಲು ನಮಗೆ ಹೇಳುತ್ತದೆ. (ವಿಮೋಚನಕಾಂಡ 3:11, 13; 4:1, 10, 13) ಕ್ರೈಸ್ತ ಶಿಷ್ಯನಾದ ತಿಮೊಥೆಯನು ಸಹ ನಾಚಿಕೆಪಡುವವನಾಗಿದ್ದು, ಮಾತಾಡುವುದರಲ್ಲಿ ಹಾಗೂ ತನ್ನ ಅಧಿಕಾರವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವುದರಲ್ಲಿ ಸಂಕೋಚಪಡುವವನಾಗಿದ್ದನೆಂದು ತೋರಿಬರುತ್ತದೆ.—1 ತಿಮೊಥೆಯ 4:12; 2 ತಿಮೊಥೆಯ 1:6-8.
ನಾಚಿಕೆಸ್ವಭಾವದ ಅರ್ಥ
ಜನರ ಮಧ್ಯೆ—ಅಪರಿಚಿತರು, ಅಧಿಕಾರದಲ್ಲಿರುವವರು, ವಿರುದ್ಧ ಲಿಂಗಜಾತಿಯ ವ್ಯಕ್ತಿಗಳು, ಅಥವಾ ನಿಮ್ಮ ಸಮಾನಸ್ಥರ ನಡುವೆಯೂ—ಅಹಿತಕರವಾದ ಅನಿಸಿಕೆಯಾಗುವುದೇ ನಾಚಿಕೆಸ್ವಭಾವವಾಗಿದೆ. ಅದಕ್ಕೆ ಆಹುತಿಯಾದವರನ್ನು ವಿವಿಧ ರೀತಿಗಳಲ್ಲಿ ಬಾಧಿಸುವಂತಹ ವಿಪರೀತ ಸ್ವಸಂಕೋಚತೆ ಅದಾಗಿದೆ. ಕೆಲವರು ಪೇಚಾಟಕ್ಕೊಳಗಾಗುತ್ತಾರೆ; ಕಣ್ಣುತಗ್ಗಿಸಿ, ಎದೆತುಡಿತದೊಂದಿಗೆ, ಅವರು ತಮ್ಮನ್ನು ಮಾತಾಡಲು ಅಶಕ್ತವಾದ ಸ್ಥಿತಿಯಲ್ಲಿ ಕಂಡುಕೊಳ್ಳುತ್ತಾರೆ. ಇತರರು ತಮ್ಮ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡು, ಸತತವಾಗಿ ವಟಗುಟ್ಟಲಾರಂಭಿಸುತ್ತಾರೆ. ಆದರೂ ಇನ್ನಿತರರು ಮಾತಾಡುವುದನ್ನು ಹಾಗೂ ತಮ್ಮ ಅಭಿಪ್ರಾಯಗಳು ಅಥವಾ ಆದ್ಯತೆಗಳನ್ನು ವ್ಯಕ್ತಪಡಿಸುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಾರೆ.
ಮೀಕ 6:8) ವಿವೇಕವುಳ್ಳವರಾಗಿಯೂ ನಿಗರ್ವಿಗಳಾಗಿಯೂ ಕಂಡುಬರುವುದರಲ್ಲಿ, ದರ್ಪದಿಂದ ನಡೆಯದಿರುವುದರಲ್ಲಿ ಹಾಗೂ ವಿಪರೀತ ಆಕ್ರಮಣಶೀಲರಾಗಿರದಿರುವುದರಲ್ಲಿ ಇನ್ನೂ ಹೆಚ್ಚಿನ ಪ್ರಯೋಜನವಿದೆ. ನಾಚಿಕೆಪಡುವ ವ್ಯಕ್ತಿಯೊಬ್ಬನು ಅನೇಕವೇಳೆ ಒಬ್ಬ ಒಳ್ಳೆಯ ಕೇಳುಗನಾಗಿ ಲಕ್ಷಿಸಲ್ಪಡುತ್ತಾನೆ. ಆದರೆ ನಾಚಿಕೆಸ್ವಭಾವವು ನಮ್ಮ ಪೂರ್ಣ ಸಂಭಾವ್ಯತೆಯನ್ನು ಗ್ರಹಿಸಿಕೊಳ್ಳುವುದರಿಂದ ನಮ್ಮನ್ನು ನಿರ್ಬಂಧಿಸಿ, ಅಡ್ಡಿಯನ್ನುಂಟುಮಾಡಿ, ನಮ್ಮ ಸಂಬಂಧಗಳು, ಕೆಲಸ, ಮತ್ತು ಭಾವನೆಗಳನ್ನು ಹಾನಿಕರವಾಗಿ ಬಾಧಿಸುವಾಗ, ಅದರ ಕುರಿತಾಗಿ ಕಾರ್ಯನಡಿಸುವ ಸಮಯವು ಆಗಲೇ ಆಗಿದೆ!
ಆದರೂ, ವಾಸ್ತವವಾಗಿ, ಸ್ವಲ್ಪ ಮಟ್ಟಿಗಿನ ನಾಚಿಕೆಸ್ವಭಾವವನ್ನು ಹೊಂದಿರುವುದರಲ್ಲಿ ಸಕಾರಾತ್ಮಕವಾದ ಅಂಶಗಳೂ ಇವೆ. ಅದು ವಿನಯಶೀಲತೆ ಹಾಗೂ ದೈನ್ಯಭಾವಕ್ಕೆ ಸಮಾನ ಲಕ್ಷಣವುಳ್ಳದ್ದಾಗಿದೆ, ಮತ್ತು ದೇವರು ನಿರೀಕ್ಷಿಸುವಂತಹ ಹಾಗೂ ಪ್ರಶಂಸಿಸುವಂತಹ ವಿಷಯಗಳಲ್ಲಿ ಒಂದು, ‘ಆತನೊಂದಿಗೆ ನಡೆದುಕೊಳ್ಳುವುದರಲ್ಲಿ ವಿನಯಶೀಲ’ರಾಗಿರುವುದಾಗಿದೆ. (ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು ಒಂದು ಒಳ್ಳೆಯ ಆರಂಭವಾಗಿದೆ. (ಜ್ಞಾನೋಕ್ತಿ 1:5) ನಾಚಿಕೆಸ್ವಭಾವವು ನೀವೇನಾಗಿದ್ದೀರಿ ಎಂಬುದನ್ನು ವರ್ಣಿಸುವುದಿಲ್ಲ; ಅದು ನಿಮ್ಮ ವರ್ತನೆಯನ್ನು, ಸನ್ನಿವೇಶಗಳಿಗೆ ನೀವು ತೋರಿಸುವ ಪ್ರತಿಕ್ರಿಯೆಯನ್ನು, ಇತರರಿಂದ ಪಡೆದ ಅನುಭವಗಳ ಮೂಲಕ ನೀವು ಕಲಿತಿರುವ ಹಾಗೂ ಬಲಪಡಿಸಿಕೊಂಡಿರುವ ವಿಧಾನವನ್ನು ವರ್ಣಿಸುತ್ತದೆ. ಇತರರು ನಿಮ್ಮನ್ನು ಇಷ್ಟಪಡುವುದಿಲ್ಲವಾದುದರಿಂದ, ಅವರು ನಿಮ್ಮ ಕುರಿತಾಗಿ ನಕಾರಾತ್ಮಕವಾದ ತೀರ್ಪುಗಳನ್ನು ಮಾಡುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಿ. ಇತರರು ನಿಮಗಿಂತಲೂ ಹೆಚ್ಚು ಉತ್ತಮರು ಅಥವಾ ಹೆಚ್ಚು ಸಹಜ ಸ್ವಭಾವದವರು ಎಂದು ನೀವು ಭಾವಿಸುತ್ತೀರಿ. ನೀವು ಬೇರೆ ಜನರಿಗೆ ಸಹಾನುಭೂತಿ ತೋರಿಸಲು ಪ್ರಯತ್ನಿಸುವುದಾದರೆ, ಅದರಿಂದ ನಿಮಗೇ ಕೆಡುಕಾಗುತ್ತದೆಂದು ನೀವು ಭಾವಿಸುತ್ತೀರಿ. ವಿಷಯಗಳು ಹೆಚ್ಚು ವಿಪರೀತವಾಗಿ ಪರಿಣಮಿಸುವುದನ್ನು ನೀವು ನಿರೀಕ್ಷಿಸುತ್ತೀರಿ, ಮತ್ತು ಅವು ಅನೇಕವೇಳೆ ಹಾಗೆಯೇ ಆಗುತ್ತವೆ, ಏಕೆಂದರೆ ನೀವು ಉದ್ವೇಗಗೊಂಡು, ನೀವು ನಂಬುವ ವಿಷಯಗಳಿಗನುಸಾರ ಕ್ರಿಯೆಗೈಯುತ್ತೀರಿ.
ನಾಚಿಕೆಸ್ವಭಾವವು ನಿಮ್ಮ ಜೀವಿತವನ್ನು ಬಾಧಿಸುವ ವಿಧ
ಹಿಂಜರಿಯುವುದರ ಮೂಲಕ, ಮಾತಾಡದಿರುವ ಮೂಲಕ, ಅಥವಾ ಇತರರ ಕಡೆಗೆ ನೀವು ಗಮನವನ್ನು ಹರಿಸದಿರುವಷ್ಟರ ಮಟ್ಟಿಗೆ ಸ್ವಹಿತಾಸಕ್ತಿಯಿಂದ ಪೂರ್ವಾಕ್ರಮಿಸಲ್ಪಟ್ಟಿರುವ ಮೂಲಕ, ನೀವು ಅಹಂಕಾರಿಗಳೂ, ಸ್ನೇಹಪರರಲ್ಲದವರೂ, ಬೇಸರಹಿಡಿಸುವವರೂ ಉಪೇಕ್ಷೆ ತೋರಿಸುವವರೂ ಅಥವಾ ಅಜ್ಞಾನಿಗಳೂ ಆಗಿದ್ದೀರೆಂಬ ಅಭಿಪ್ರಾಯವನ್ನು ಇತರರ ಮನಸ್ಸಿನಲ್ಲಿ ಮೂಡಿಸಬಹುದು. ನಿಮ್ಮ ಆಲೋಚನೆಗಳು ಸ್ವತಃ ನಿಮ್ಮ ಕುರಿತಾಗಿಯೇ ಇರುವಾಗ, ನಡೆಯುತ್ತಿರುವ ಚರ್ಚೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟಕರವಾಗಿರುತ್ತದೆ. ಆದುದರಿಂದ ನೀವು ಪಡೆದುಕೊಳ್ಳುತ್ತಿರುವ ಸಮಾಚಾರಕ್ಕೆ ನೀವು ಕಡಿಮೆ ಗಮನವನ್ನು ಕೊಡುತ್ತೀರಿ. ಆಗ ನೀವು ಅತ್ಯಧಿಕವಾಗಿ ಭಯಪಡುವ ವಿಷಯವು ಸಂಭವಿಸುತ್ತದೆ—ನೀವು ಮೂರ್ಖರಾಗಿ ಕಂಡುಬರುತ್ತೀರಿ.
ಸಾರಾಂಶಿಸಿ ಹೇಳುವುದಾದರೆ, ನಾಚಿಕೆಸ್ವಭಾವವೆಂಬ ಸೆರೆಮನೆಯ ಗೋಡೆಗಳ ಹಿಂದೆ ನೀವು ನಿಮ್ಮನ್ನು ಬಂಧಿಸಿ ಬೀಗಹಾಕಿಕೊಂಡು, ಅದರ ಕೀಲಿ ಕೈಯನ್ನು ಎಸೆದುಬಿಟ್ಟಿದ್ದೀರಿ. ಅವಕಾಶಗಳು
ನಿಮ್ಮ ಕೈಬಿಟ್ಟುಹೋಗುವಂತೆ ನೀವು ಅನುಮತಿಸಿದ್ದೀರಿ. ನೀವು ನಿಜವಾಗಿಯೂ ಅಪೇಕ್ಷಿಸದ ವಿಷಯಗಳನ್ನು ಅಥವಾ ಸನ್ನಿವೇಶಗಳನ್ನು ನೀವು ಸ್ವೀಕರಿಸುತ್ತೀರಿ—ಇದೆಲ್ಲವೂ ನೀವು ಮಾತಾಡಲು ಮತ್ತು ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಕೊಳ್ಳಲು ಭಯಗೊಂಡಿರುವುದರಿಂದಲೇ ಆಗಿದೆ. ಜನರನ್ನು ಸಂಧಿಸುವ, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಅಥವಾ ನಿಮ್ಮ ಜೀವಿತವನ್ನು ಉತ್ತಮಗೊಳಿಸಸಾಧ್ಯವಿರುವ ವಿಷಯಗಳಲ್ಲಿ ನೀವು ಆನಂದವನ್ನು ಪಡೆದುಕೊಳ್ಳುವುದಿಲ್ಲ. ಆದರೆ ಇತರರೂ ಆ ಆನಂದವನ್ನು ಪಡೆದುಕೊಳ್ಳುವುದಿಲ್ಲ. ನಿಮ್ಮ ನೈಜ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಅವರಿಗೆ ಅವಕಾಶವೇ ಸಿಗುವುದಿಲ್ಲ.ನಾಚಿಕೆಸ್ವಭಾವವನ್ನು ಜಯಿಸುವುದು
ಸಮಯ ಮತ್ತು ಪ್ರಯತ್ನದಿಂದ, ವರ್ತನೆಯನ್ನು ಬದಲಾಯಿಸಸಾಧ್ಯವಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಇನ್ನೊಬ್ಬ ವ್ಯಕ್ತಿಯು ನಿಮ್ಮ ಯೋಗ್ಯತೆಗೆ ಬೆಲೆಕೊಡುತ್ತಿದ್ದಾನೋ ಇಲ್ಲವೋ ಎಂಬುದರ ಕುರಿತಾಗಿ ಚಿಂತಿಸುವುದನ್ನು ನಿಲ್ಲಿಸಿ. ಅವನು ತನ್ನ ಕುರಿತು ಹಾಗೂ ತಾನು ಹೇಳುವ ಹಾಗೂ ಮಾಡುವ ವಿಷಯಗಳ ಕುರಿತು ಆಲೋಚಿಸುವುದರಲ್ಲಿ ತುಂಬ ಕಾರ್ಯಮಗ್ನನಾಗಿರಬಹುದು. ಮತ್ತು ಆ ವ್ಯಕ್ತಿಯು ನಿಮ್ಮ ಕಡೆಗೆ ಹುಡುಗಾಟದಿಂದ ತಮಾಷೆಮಾಡುವುದಾದರೆ, ಅವನಿಗೆ ಸಮಸ್ಯೆಯಿದೆ ಎಂಬುದನ್ನು ಅರ್ಥಮಾಡಿಕೊಳ್ಳಿರಿ. “ನೆರೆಯವನನ್ನು ಹೀನೈಸುವವನು ಬುದ್ಧಿಹೀನನು.” (ಜ್ಞಾನೋಕ್ತಿ 11:12) ಸ್ನೇಹಿತರೋಪಾದಿ ಇರಲು ಯೋಗ್ಯರಾಗಿರುವವರು, ಹೊರಗಿನ ತೋರಿಕೆಗಳಿಂದಲ್ಲ, ಬದಲಾಗಿ ನೀವು ಯಾವ ರೀತಿಯ ವ್ಯಕ್ತಿಯಾಗಿದ್ದೀರೊ ಅದರಿಂದ ನಿಮ್ಮನ್ನು ಅಳೆಯುವರು.
ಹಾಗೂ, ಸಕಾರಾತ್ಮಕವಾಗಿ ಆಲೋಚಿಸಲು ಪ್ರಯತ್ನಿಸಿರಿ. ಯಾರೊಬ್ಬರೂ ಪರಿಪೂರ್ಣರಲ್ಲ; ನಮ್ಮೆಲ್ಲರಲ್ಲಿಯೂ ನಮ್ಮ ಸ್ಥೈರ್ಯಗಳು ಹಾಗೂ ನಮ್ಮ ಬಲಹೀನತೆಗಳು ಇವೆ. ವಿಷಯಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡಸಾಧ್ಯವಿದೆ, ಬೇರೆ ಬೇರೆ ಇಷ್ಟಾನಿಷ್ಟಗಳಿರುತ್ತವೆ ಎಂಬುದನ್ನು ಜ್ಞಾಪಕದಲ್ಲಿಡಿ. ಭಿನ್ನಾಭಿಪ್ರಾಯವು, ಒಬ್ಬ ವ್ಯಕ್ತಿಯೋಪಾದಿ ನಿಮ್ಮನ್ನು ಅಲ್ಲಗಳೆಯುವುದನ್ನು ಅರ್ಥೈಸುವುದಿಲ್ಲ.
ಇತರರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ತಾಳಲು ಸಹ ಕಲಿಯಿರಿ. ಈ ಹಿಂದೆ
ನಾಚಿಕೆಪಟ್ಟುಕೊಳ್ಳುತ್ತಿದ್ದ ಯುವ ಪುರುಷನೊಬ್ಬನು ಹೇಳುವುದು: “ನನ್ನ ಕುರಿತಾಗಿ ನಾನು ಎರಡು ವಿಷಯಗಳನ್ನು ಕಂಡುಹಿಡಿದೆ . . . ಮೊದಲನೆಯದಾಗಿ, ನಾನು ಬಹಳ ಸ್ವವಿಚಾರಾಸಕ್ತನಾಗಿದ್ದೆ. ನಾನು ಹೇಳಿದ ವಿಷಯದ ಬಗ್ಗೆ ಜನರು ಏನೆಂದು ಭಾವಿಸಿದರು ಎಂಬುದರ ಕುರಿತು ಚಿಂತಿಸುತ್ತಾ, ನನ್ನ ವಿಷಯವಾಗಿ ನಾನು ಬಹಳವಾಗಿ ಆಲೋಚಿಸುತ್ತಿದ್ದೆ. ಎರಡನೆಯದಾಗಿ, ಇತರರ ಮೇಲೆ ಭರವಸೆಯಿಡದೆ, ಅವರು ನನ್ನನ್ನು ಕಡೆಗಣಿಸಲಿದ್ದಾರೆಂದು ಭಾವಿಸುತ್ತಾ, ನಾನು ಅವರ ಮೇಲೆ ಕೆಟ್ಟ ಆರೋಪಗಳನ್ನು ಹೊರಿಸುತ್ತಿದ್ದೆ.”ಆ ಯುವ ಪುರುಷನು ಯೆಹೋವನ ಸಾಕ್ಷಿಗಳ ಕೂಟವೊಂದಕ್ಕೆ ಹಾಜರಾದನು. “ನನಗೆ ನಿಜವಾಗಿಯೂ ಸಹಾಯ ಮಾಡಿದ ಭಾಷಣವೊಂದನ್ನು ನಾನು ಅಲ್ಲಿ ಕೇಳಿಸಿಕೊಂಡೆ” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. ‘ಪ್ರೀತಿಯು ಅನಿರ್ಬಂಧಿತವಾದದ್ದಾಗಿದೆ; ನಿಮ್ಮಲ್ಲಿ ಪ್ರೀತಿಯಿರುವುದಾದರೆ ನೀವು ಜನರ ಏಳಿಗೆಯ ಕುರಿತು ಆಲೋಚಿಸುತ್ತೀರಿ, ಅವರಿಗೆ ಕೆಟ್ಟದ್ದಾಗುವುದನ್ನಲ್ಲ ಎಂದು ಭಾಷಣಕರ್ತರು ಸೂಚಿಸಿದರು. ಆದುದರಿಂದ ಜನರ ಮೇಲೆ ಕೆಟ್ಟ ಆರೋಪಗಳನ್ನು ಹೊರಿಸುವುದನ್ನು ನಿಲ್ಲಿಸಲು ನಾನು ಕಲಿತುಕೊಂಡೆ. ನಾನು ನನ್ನಷ್ಟಕ್ಕೇ ಹೇಳಿಕೊಂಡದ್ದು: “ಅವರು ಅರ್ಥಮಾಡಿಕೊಳ್ಳುವವರೂ, ಅವರು ದಯಾಪರರೂ, ಅವರು ಪರಿಗಣನೆ ತೋರಿಸುವವರೂ ಆಗಲಿದ್ದಾರೆ.” ನಾನು ಜನರ ಮೇಲೆ ಭರವಸೆಯಿಡಲಾರಂಭಿಸಿದೆ. ಕೆಲವರು ನನ್ನ ಕುರಿತು ತಪ್ಪಾಗಿ ತೀರ್ಮಾನಿಸಬಹುದೆಂದು ನಾನು ಗ್ರಹಿಸಿದೆನಾದರೂ, ಈಗ ನಾನು ಅದು ಅವರ ಸಮಸ್ಯೆಯಾಗಿತ್ತೆಂದು ಭಾವಿಸಿದೆ.’
ಲೂಕ 6:37, 38ರಲ್ಲಿನ ಯೇಸುವಿನ ಸಲಹೆಯ ಸತ್ಯಾರ್ಥವನ್ನು ಅವನು ಕಲಿತುಕೊಂಡನು: “ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವದಿಲ್ಲ; ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವದಿಲ್ಲ. . . . .ಕೊಡಿರಿ, ಆಗ ನಿಮಗೂ ಕೊಡುವರು; . . . ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.”
“ಪ್ರೀತಿಯನ್ನು ಸಕ್ರಿಯ ರೀತಿಯಲ್ಲಿ—ಇತರರ ಕಡೆಗೆ ನನ್ನನ್ನು ವಿಶಾಲಗೊಳಿಸಿಕೊಳ್ಳುವಂತೆ—ತೋರಿಸಲಾರಂಭಿಸುವ ಅಗತ್ಯವನ್ನೂ ನಾನು ಕಲಿತುಕೊಂಡೆ” ಎಂದು ಅವನು ವಿವರಿಸಿದನು. “ಮೊದಲಾಗಿ ನಾನದನ್ನು ಎಳೆಯರ ಮೇಲೆ ಪ್ರಯೋಗಿಸಿದೆ. ತದನಂತರ ನಾನು ಇತರರನ್ನು ಅವರ ಮನೆಗಳಲ್ಲಿ ಭೇಟಿಮಾಡಲಾರಂಭಿಸಿದೆ. ಇತರರ ಆವಶ್ಯಕತೆಗಳ ಕಡೆಗೆ ಸಂವೇದನಾತ್ಮಕವಾಗಿರುವುದನ್ನು, ಅವರಿಗೆ ಸಹಾಯ ಮಾಡುವ ಪರಿಭಾಷೆಯಲ್ಲಿ ಆಲೋಚಿಸುವುದನ್ನು ನಾನು ಕಲಿತುಕೊಂಡೆ.” ಹೀಗೆಆರಂಭವನ್ನು ಮಾಡುವುದು
ಆದುದರಿಂದ ಮೈತ್ರಿಭಾವದವರಾಗಿರಲು—ನಮಸ್ಕಾರ ಎಂದು ಹೇಳಲು ಹಾಗೂ ಸಂಭಾಷಣೆಯೊಂದನ್ನು ಆರಂಭಿಸಲು—ಕಲಿಯಿರಿ. ಅದು ಹವಾಮಾನದ ಬಗೆಗಿನ ಒಂದು ಹೇಳಿಕೆಯಷ್ಟೇ ಸರಳವಾದದ್ದಾಗಿರಸಾಧ್ಯವಿದೆ. ನೆನಪಿನಲ್ಲಿಡಿರಿ: ನಿಮಗೆ ಕೇವಲ 50 ಪ್ರತಿಶತ ಜವಾಬ್ದಾರಿಯಿದೆ. ಮಿಕ್ಕ ಜವಾಬ್ದಾರಿಯು ಬೇರೊಬ್ಬ ವ್ಯಕ್ತಿಗೆ ಸೇರಿದ್ದಾಗಿದೆ. ನೀವು ಮಾತಿನಲ್ಲಿ ತಪ್ಪುಗೈದರೆ, ನಿಮ್ಮನ್ನು ಖಂಡಿಸಲಾಗುತ್ತದೆ ಎಂದು ಭಾವಿಸಬೇಡಿರಿ. ಇತರರು ನಗುವುದಾದರೆ, ಅವರೊಂದಿಗೆ ನಗಲು ಪ್ರಯತ್ನಿಸಿರಿ. “ಅದನ್ನು ಸ್ಪಷ್ಟವಾಗಿ ಹೇಳಲಾಗಲಿಲ್ಲ” ಎಂದು ಹೇಳುವುದು, ಬಿಗುಪು ಸಡಿಲಿಸಿ, ಸಂಭಾಷಣೆಯನ್ನು ಮುಂದುವರಿಸಲು ನಿಮಗೆ ಸಹಾಯ ಮಾಡುವುದು.
ಸಭ್ಯವಾಗಿ ಉಡುಪು ಧರಿಸಿರಿ, ಆದರೆ ನಿಮ್ಮ ವಸ್ತ್ರಗಳು ಸ್ವಚ್ಛವಾದವುಗಳೂ ಇಸ್ತ್ರಿಮಾಡಲ್ಪಟ್ಟವುಗಳೂ ಆಗಿವೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ಮಟ್ಟಿಗೆ ನೀವು ಚೆನ್ನಾಗಿ ಕಾಣುತ್ತಿದ್ದೀರೆಂಬ ಅನಿಸಿಕೆಯು, ಈ ವಿಷಯದಲ್ಲಿನ ದಿಗಿಲನ್ನು ಕಡಿಮೆಗೊಳಿಸಿ, ನಡೆಯುತ್ತಿರುವ ಸಂಭಾಷಣೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ನಿಮ್ಮನ್ನು ಶಕ್ತರನ್ನಾಗಿ ಮಾಡುವುದು. ನೆಟ್ಟಗೆ ನಿಲ್ಲಿ—ಆದರೂ ಆರಾಮವಾಗಿರಿ. ಸಂತೋಷಭರಿತವಾದ ಹಾಗೂ ನಸುನಗುವ
ತೋರಿಕೆಯುಳ್ಳವರಾಗಿರಿ. ಸ್ನೇಹಪರವಾದ ದೃಷ್ಟಿ ಸಂಪರ್ಕವನ್ನು ಇಟ್ಟುಕೊಳ್ಳಿರಿ ಮತ್ತು ತಲೆಯಾಡಿಸುವ ಮೂಲಕ ಅಥವಾ ಶಾಬ್ದಿಕವಾಗಿ ಬೇರೊಬ್ಬ ವ್ಯಕ್ತಿಯು ಹೇಳುವ ವಿಷಯವನ್ನು ಅಂಗೀಕರಿಸಿರಿ.ಬೇರೆಯವರ ಎದುರಿನಲ್ಲಿ ಒಂದು ಭಾಷಣಕೊಡುವುದು ಅಥವಾ ಒಂದು ಉದ್ಯೋಗ ಸಂದರ್ಶನದಂತಹ ಕಠಿನವಾದ ಸನ್ನಿವೇಶವನ್ನು ಎದುರಿಸುವಾಗ, ಸಾಧ್ಯವಾದಷ್ಟು ಸಿದ್ಧರಾಗಿ ಬನ್ನಿರಿ. ನೀವು ಹೇಳಲಿರುವ ವಿಷಯವನ್ನು ಮುಂದಾಗಿಯೇ ಅಭ್ಯಾಸಿಸಿರಿ. ಭಾಷಣ ಸಮಸ್ಯೆಗಳನ್ನು ಸಹ, ಅಭ್ಯಾಸದಿಂದ ಜಯಿಸಸಾಧ್ಯವಿದೆ ಅಥವಾ ಕಡಿಮೆಗೊಳಿಸಸಾಧ್ಯವಿದೆ. ಇನ್ನಿತರ ಯಾವುದೇ ಹೊಸ ಕೌಶಲಗಳನ್ನು ಗಳಿಸಿಕೊಳ್ಳುವುದಕ್ಕೆ ಸಮಯವು ತಗಲುವಂತೆಯೇ, ಇದಕ್ಕೆ ಸಮಯವು ತಗಲುತ್ತದೆ. ಆದರೆ ನೀವು ಸಕಾರಾತ್ಮಕವಾದ ಫಲಿತಾಂಶಗಳನ್ನು ನೋಡಿದಾಗ, ಅದರಲ್ಲಿ ಯಶಸ್ವಿಯಾಗಲು ಇನ್ನೂ ಹೆಚ್ಚು ಉತ್ತೇಜಿಸಲ್ಪಡುವಿರಿ.
ದೇವರು ಕೊಡಸಾಧ್ಯವಿರುವ ಸಹಾಯವನ್ನೂ ಅಲಕ್ಷಿಸಬಾರದು. ಪುರಾತನ ಇಸ್ರಾಯೇಲ್ ಜನಾಂಗದ ಮೊದಲ ಅರಸನಾಗಿದ್ದ ಸೌಲನು, ಆರಂಭದಲ್ಲಿ ವಿಪರೀತ ನಾಚಿಕೆಸ್ವಭಾವದವನಾಗಿದ್ದನು. (1 ಸಮುವೇಲ, 9 ಮತ್ತು 10ನೆಯ ಅಧ್ಯಾಯಗಳು) ಆದರೆ ಕ್ರಿಯೆಗೈಯಲಿಕ್ಕಾಗಿ ಸಮಯವು ಬಂದಾಗ, “ದೇವರಾತ್ಮವು ಸೌಲನ ಮೇಲೆ ಕಾರ್ಯನಡಿಸಲಾರಂಭಿಸಿತು” (NW) ಮತ್ತು ಅವನು ಜನರನ್ನು ವಿಜಯಕ್ಕೆ ನಡಿಸಿದನು!—1 ಸಮುವೇಲ, 11ನೆಯ ಅಧ್ಯಾಯ.
ಇಂದು ಕ್ರೈಸ್ತ ಯುವ ಜನರಿಗೆ, ದೇವರ ಕುರಿತಾಗಿ ಹಾಗೂ ಆತನ ವಾಗ್ದತ್ತ ನೀತಿಯ ನೂತನ ಲೋಕದ ಕುರಿತಾಗಿ ಇತರರು ಕಲಿಯುವಂತೆ ಸಹಾಯ ಮಾಡುವ ಜವಾಬ್ದಾರಿಯಿದೆ. (ಮತ್ತಾಯ 24:14) ಈ ಸುವಾರ್ತೆಯನ್ನು ಕೊಂಡೊಯ್ಯುವುದು ಹಾಗೂ ವಿಶ್ವದಲ್ಲಿನ ಅತ್ಯುನ್ನತ ಅಧಿಕಾರಿಯನ್ನು ಪ್ರತಿನಿಧಿಸುವುದು, ಖಂಡಿತವಾಗಿಯೂ ಆತ್ಮವಿಶ್ವಾಸವನ್ನು ಪ್ರೇರಿಸಿ, ಒಬ್ಬನು ತನ್ನ ಸ್ವಂತ ವಿಷಯಗಳ ಮೇಲೆ ಕೇಂದ್ರೀಕರಿಸದಿರುವಂತೆ ಸಹಾಯ ಮಾಡುತ್ತದೆ. ಹಾಗಾದರೆ, ನೀವು ನಂಬಿಗಸ್ತಿಕೆಯಿಂದ ದೇವರ ಸೇವೆಮಾಡುವುದಾದರೆ, ಆತನು ನಿಮ್ಮನ್ನು ಆಶೀರ್ವದಿಸುವನು ಮತ್ತು ನಿಮ್ಮ ನಾಚಿಕೆಸ್ವಭಾವವನ್ನು ಜಯಿಸುವಂತೆ ನಿಮಗೆ ಸಹಾಯ ಮಾಡುವನೆಂದು ನಿಶ್ಚಿತರಾಗಿರಸಾಧ್ಯವಿದೆ.
ಚರ್ಚೆಗಾಗಿ ಪ್ರಶ್ನೆಗಳು
◻ ನಾಚಿಕೆಸ್ವಭಾವ ಎಂದರೇನು, ಮತ್ತು ನಾಚಿಕೆಪಡುವ ಒಬ್ಬ ವ್ಯಕ್ತಿಯು ಇತರರ ಸಮಕ್ಷಮದಲ್ಲಿ ಹೇಗೆ ವರ್ತಿಸುತ್ತಾನೆ? ಇದು ಸ್ವಲ್ಪ ಮಟ್ಟಿಗೆ ನಿಮ್ಮ ವಿಷಯದಲ್ಲಿಯೂ ಸತ್ಯವಾಗಿದೆಯೊ?
◻ ನಾಚಿಕೆಪಡುವ ಒಬ್ಬ ವ್ಯಕ್ತಿಯು, ಜನರ ಮಧ್ಯೆಯಿರುವಾಗ ವಿಶ್ವಾಸವನ್ನು ಏಕೆ ಕಳೆದುಕೊಳ್ಳುತ್ತಾನೆ?
◻ ನಾಚಿಕೆಸ್ವಭಾವವು ವ್ಯಕ್ತಿಯೊಬ್ಬನಿಗೆ ಕೊರತೆಯನ್ನು ಅನುಭವಿಸುವಂತೆ ಹೇಗೆ ಮಾಡಸಾಧ್ಯವಿದೆ?
◻ ನಾಚಿಕೆಸ್ವಭಾವವನ್ನು ಜಯಿಸುವ ಕೆಲವು ಮಾರ್ಗಗಳು ಯಾವುವು? ಈ ಸಲಹೆಗಳಲ್ಲಿ ಯಾವುವಾದರೂ ನಿಮ್ಮ ವಿಷಯದಲ್ಲಿ ಕಾರ್ಯನಡಿಸಿವೆಯೊ?
[ಪುಟ 232 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಾಚಿಕೆಪಡುವ ವ್ಯಕ್ತಿಯು ಸ್ನೇಹಗಳನ್ನೂ ಅವಕಾಶಗಳನ್ನೂ ಕಳೆದುಕೊಳ್ಳುತ್ತಾನೆ
[ಪುಟ 235 ರಲ್ಲಿರುವ ಚೌಕ]
ಇದರಿಂದಾಗಿ ನೀವು ನಾಚಿಕೆ ಸ್ವಭಾವವನ್ನು ಜಯಿಸಬಲ್ಲಿರಿ
ಬದಲಾಗಲು ಬಯಸುವುದು ಮತ್ತು ನಿಜವಾಗಿಯೂ ಬದಲಾಗುವುದು ಸಾಧ್ಯವಿದೆಯೆಂದು ನಂಬುವುದು
ನಕಾರಾತ್ಮಕವಾದ ಆಲೋಚನೆಗಳನ್ನು ಸಕಾರಾತ್ಮಕವಾದ ಕ್ರಿಯೆಯಿಂದ ಸ್ಥಾನಪಲ್ಲಟಮಾಡುವುದು
ನಿಮಗಾಗಿ ವಾಸ್ತವಿಕವೂ ಅರ್ಥಭರಿತವೂ ಆಗಿರುವ ಗುರಿಗಳನ್ನು ಇಟ್ಟುಕೊಳ್ಳುವುದು
ಹಾಯಾಗಿರುವ ಹಾಗೂ ವ್ಯಾಕುಲತೆಯನ್ನು ನಿಭಾಯಿಸುವ ವಿಧವನ್ನು ತಿಳಿದುಕೊಳ್ಳುವುದು
ಒಂದು ಸನ್ನಿವೇಶವನ್ನು ಮುಂದಾಗಿಯೇ ಪೂರ್ವಾಭಿನಯಿಸುವುದು
ಪ್ರಗತಿಪರವಾಗಿ ಯಶಸ್ವಿದಾಯಕವಾದ ಅನುಭವಗಳಿಂದ ವಿಶ್ವಾಸವನ್ನು ಪಡೆದುಕೊಳ್ಳುವುದು
ಭಿನ್ನಾಭಿಪ್ರಾಯಗಳು ಅಸ್ತಿತ್ವದಲ್ಲಿರುತ್ತವೆ ಮತ್ತು ಇತರರೂ ತಪ್ಪುಮಾಡುತ್ತಾರೆಂಬುದನ್ನು ಜ್ಞಾಪಕದಲ್ಲಿಡುವುದು
ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಹೊಸ ಕೌಶಲಗಳನ್ನು ಕಲಿತುಕೊಳ್ಳಲು ಅಭ್ಯಾಸಿಸುವುದು
ಇತರರಿಗೆ ಪ್ರೀತಿಯನ್ನು ತೋರಿಸಲು ಹಾಗೂ ಸಹಾಯ ಮಾಡಲು ಎಟುಕಿಸಿಕೊಳ್ಳುವುದು
ಸುಸಂಸ್ಕೃತವಾಗಿ ಉಡುಪು ಧರಿಸುವುದು ಮತ್ತು ವಿಶ್ವಾಸದಿಂದ ವರ್ತಿಸುವುದು
ದೇವರು ಕೊಡುವಂತಹ ಸಹಾಯದ ಮೇಲೆ ಆತುಕೊಳ್ಳುವುದು
ಕ್ರೈಸ್ತ ಕೂಟಗಳಲ್ಲಿ ಹಾಗೂ ಇತರರೊಂದಿಗೆ ನಿಮ್ಮ ನಂಬಿಕೆಯನ್ನು ಹಂಚಿಕೊಳ್ಳುವುದರಲ್ಲಿ ಒಳಗೂಡಿರುವವರಾಗಿರುವುದು
[ಪುಟ 234 ರಲ್ಲಿರುವ ಚಿತ್ರಗಳು]
ಇತರರು ತನ್ನ ಕುರಿತು ಕೀಳಾಗಿ ಭಾವಿಸುತ್ತಾರೆಂದು, ನಾಚಿಕೆಪಡುವ ವ್ಯಕ್ತಿಯು ಊಹಿಸಿಕೊಳ್ಳುತ್ತಾನೆ
[ಪುಟ 234 ರಲ್ಲಿರುವ ಚಿತ್ರಗಳು]
ಮೈತ್ರಿಭಾವದವರಾಗಿರಲು—ನಸುನಗಲು, ಇತರರಿಗೆ ಅಭಿವಂದಿಸಲು, ಮತ್ತು ಒಂದು ಸಂಭಾಷಣೆಯನ್ನು ನಡೆಸಲು ಕಲಿಯಿರಿ