ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪ್ರಸನ್ನತೆಯ ಕಾಲ”

“ಪ್ರಸನ್ನತೆಯ ಕಾಲ”

ಅಧ್ಯಾಯ ಹತ್ತು

“ಪ್ರಸನ್ನತೆಯ ಕಾಲ”

ಯೆಶಾಯ 49:​1-26

1, 2. (ಎ) ಯೆಶಾಯನು ಯಾವ ಆಶೀರ್ವಾದವನ್ನು ಪಡೆದನು? (ಬಿ) ಯೆಶಾಯ 49ನೆಯ ಅಧ್ಯಾಯದ ಪ್ರಥಮಾರ್ಧ ಭಾಗದಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನ ಮಾತುಗಳಲ್ಲಿ ಯಾರೆಲ್ಲ ಸೇರಿದ್ದಾರೆ?

ಮಾನವರಲ್ಲಿ ನಂಬಿಗಸ್ತರೆಲ್ಲರೂ ದೀರ್ಘಕಾಲದಿಂದ ದೇವರ ಒಪ್ಪಿಗೆಯನ್ನೂ ಸಂರಕ್ಷಣೆಯನ್ನೂ ಪಡೆದಿದ್ದಾರೆ. ಆದರೆ ಯೆಹೋವನು ಇಂತಹ ಪ್ರಸನ್ನತೆಯನ್ನು ಸಿಕ್ಕಾಬಟ್ಟೆ ಕೊಡುವುದಿಲ್ಲ. ಇಂತಹ ಅನುಪಮ ಆಶೀರ್ವಾದಕ್ಕೆ ಒಬ್ಬ ವ್ಯಕ್ತಿಯು ಅರ್ಹನಾಗಬೇಕು. ಮತ್ತು ಈ ರೀತಿಯಲ್ಲಿ ಅರ್ಹನಾಗಿದ್ದ ಒಬ್ಬ ವ್ಯಕ್ತಿ ಯೆಶಾಯನಾಗಿದ್ದನು. ಅವನಿಗೆ ದೇವರ ಅನುಗ್ರಹವಿತ್ತು ಮತ್ತು ದೇವರು ತನ್ನ ಚಿತ್ತವನ್ನು ಇತರರಿಗೆ ತಿಳಿಸಲು ಅವನನ್ನು ತನ್ನ ಸಾಧನವಾಗಿ ಉಪಯೋಗಿಸಿದನು. ಯೆಶಾಯನ ಪ್ರವಾದನೆಯ 49ನೆಯ ಅಧ್ಯಾಯದ ಪ್ರಥಮಾರ್ಧ ಭಾಗದಲ್ಲಿ ಇದರ ಒಂದು ಉದಾಹರಣೆ ದಾಖಲಿಸಲ್ಪಟ್ಟಿದೆ.

2 ಈ ಮಾತುಗಳನ್ನು ಅಬ್ರಹಾಮನ ಸಂತಾನಕ್ಕೆ ಪ್ರವಾದನಾರೂಪವಾಗಿ ಸಂಬೋಧಿಸಲಾಗಿದೆ. ಆರಂಭದ ನೆರವೇರಿಕೆಯಲ್ಲಿ ಆ ಸಂತಾನವು ಅಬ್ರಹಾಮನಿಂದ ಬಂದಿದ್ದ ಇಸ್ರಾಯೇಲ್‌ ಜನಾಂಗವಾಗಿದೆ. ಆದರೂ ಹೆಚ್ಚಿನ ಮಾತುಗಳು ದೀರ್ಘಕಾಲದಿಂದ ನಿರೀಕ್ಷಿಸಲಾಗಿದ್ದ ಅಬ್ರಹಾಮನ ಸಂತಾನವಾದ ವಾಗ್ದತ್ತ ಮೆಸ್ಸೀಯನಿಗೆ ಸ್ಪಷ್ಟವಾಗಿ ಅನ್ವಯವಾಗುತ್ತವೆ. ಆ ಪ್ರೇರಿತ ಮಾತುಗಳು ಅಬ್ರಹಾಮನ ಆತ್ಮಿಕ ಸಂತಾನದ ಮತ್ತು ‘ದೇವರ ಇಸ್ರಾಯೇಲಿನ’ ಭಾಗವಾಗಿರುವ ಮೆಸ್ಸೀಯನ ಆತ್ಮಿಕ ಸಹೋದರರಿಗೂ ಅನ್ವಯವಾಗುತ್ತವೆ. (ಗಲಾತ್ಯ 3:​7, 16, 29; 6:16) ಯೆಶಾಯನ ಪ್ರವಾದನೆಯ ಈ ಭಾಗವು ಪ್ರತ್ಯೇಕವಾಗಿ, ಯೆಹೋವನ ಮತ್ತು ಆತನ ಪ್ರಿಯ ಕುಮಾರನಾದ ಯೇಸು ಕ್ರಿಸ್ತನ ಮಧ್ಯೆ ಇರುವ ವಿಶೇಷ ಸಂಬಂಧವನ್ನು ವರ್ಣಿಸುತ್ತದೆ.​—⁠ಯೆಶಾಯ 49:⁠26.

ಯೆಹೋವನಿಂದ ನೇಮಿಸಲ್ಪಟ್ಟು, ಸಂರಕ್ಷಿಸಲ್ಪಟ್ಟವನು

3, 4. (ಎ) ಮೆಸ್ಸೀಯನಿಗೆ ಯಾವ ಬೆಂಬಲವಿದೆ? (ಬಿ) ಮೆಸ್ಸೀಯನು ಯಾರೊಂದಿಗೆ ಮಾತಾಡುತ್ತಾನೆ?

3 ಮೆಸ್ಸೀಯನಿಗೆ ದೇವರ ಪ್ರಸನ್ನತೆ ಅಥವಾ ಒಪ್ಪಿಗೆಯಿದೆ. ಅವನಿಗೆ ಕೊಟ್ಟಿರುವ ನೇಮಿತ ಕಾರ್ಯವನ್ನು ಪೂರೈಸಲು ಯೆಹೋವನು ಅವನಿಗೆ ಅಧಿಕಾರವನ್ನೂ ಅರ್ಹತೆಗಳನ್ನೂ ಕೊಡುತ್ತಾನೆ. ಆದಕಾರಣ ಯೋಗ್ಯವಾಗಿಯೇ ಆ ಭಾವೀ ಮೆಸ್ಸೀಯನು ಹೇಳುವುದು: “ದ್ವೀಪನಿವಾಸಿಗಳೇ, ನನ್ನ ಕಡೆಗೆ ಕಿವಿಗೊಡಿರಿ. ದೂರದ ಜನಾಂಗಗಳೇ, ಆಲಿಸಿರಿ! ನಾನು ಗರ್ಭದಲ್ಲಿದ್ದಾಗಲೇ ಯೆಹೋವನು ನನ್ನನ್ನು ಕರೆದನು, ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.”​—ಯೆಶಾಯ 49:⁠1.

4 ಇಲ್ಲಿ ಮೆಸ್ಸೀಯನು ತನ್ನ ಮಾತುಗಳನ್ನು “ದೂರದ” ಜನರಿಗೆ ಸಂಬೋಧಿಸುತ್ತಾನೆ. ಮೆಸ್ಸೀಯನು ಬರುವನೆಂಬ ವಾಗ್ದಾನವು ಯೆಹೂದ್ಯರಿಗೆ ಕೊಡಲ್ಪಟ್ಟದ್ದು ನಿಜವಾದರೂ, ಅವನ ಶುಶ್ರೂಷೆಯು ಎಲ್ಲ ಜನಾಂಗಗಳನ್ನು ಆಶೀರ್ವದಿಸಲಿಕ್ಕಾಗಿತ್ತು. (ಮತ್ತಾಯ 25:​31-33) ‘ದ್ವೀಪಗಳು’ ಮತ್ತು “ಜನಾಂಗಗಳು” ಯೆಹೋವನ ಸಂಗಡ ಒಡಂಬಡಿಕೆಯಲ್ಲಿ ಇಲ್ಲದಿರುವುದಾದರೂ, ಇಸ್ರಾಯೇಲಿನ ಮೆಸ್ಸೀಯನಿಗೆ ಅವು ಕಿವಿಗೊಡಬೇಕು. ಏಕೆಂದರೆ ಇಡೀ ಮಾನವಕುಲಕ್ಕೆ ರಕ್ಷಣೆಯನ್ನು ನೀಡಲು ಅವನನ್ನು ಕಳುಹಿಸಲಾಗಿದೆ.

5. ಮನುಷ್ಯನಾಗಿ ಹುಟ್ಟುವ ಮೊದಲೇ ಮೆಸ್ಸೀಯನಿಗೆ ಹೇಗೆ ಹೆಸರಿಡಲಾಯಿತು?

5 ಮೆಸ್ಸೀಯನು ಮನುಷ್ಯನಾಗಿ ಹುಟ್ಟುವ ಮೊದಲೇ ಯೆಹೋವನು ಅವನನ್ನು ಹೆಸರಿಸುವನೆಂದು ಪ್ರವಾದನೆಯು ಹೇಳುತ್ತದೆ. (ಮತ್ತಾಯ 1:21; ಲೂಕ 1:31) ಅವನ ಜನನಕ್ಕೆ ಬಹು ಪೂರ್ವದಲ್ಲಿಯೇ ಯೇಸುವಿಗೆ, “ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು” ಎಂಬ ಹೆಸರುಗಳನ್ನು ಕೊಡಲಾಗಿದೆ. (ಯೆಶಾಯ 9:⁠6) ಇಮ್ಮಾನುವೇಲ್‌ ಎಂಬುದು ಬಹುಶಃ ಯೆಶಾಯನ ಪುತ್ರನೊಬ್ಬನ ಹೆಸರಾಗಿದ್ದು, ಇದು ಮೆಸ್ಸೀಯನ ಪ್ರವಾದನ ಹೆಸರಾಗಿಯೂ ಪರಿಣಮಿಸುತ್ತದೆ. (ಯೆಶಾಯ 7:14; ಮತ್ತಾಯ 1:​21-23) ಮೆಸ್ಸೀಯನು ಯಾವ ಹೆಸರಿನಿಂದ ಪ್ರಸಿದ್ಧನಾಗಲಿದ್ದನೊ ಆ ಯೇಸು ಎಂಬ ಹೆಸರು ಸಹ ಅವನ ಹುಟ್ಟಿಗಿಂತ ಮೊದಲೇ ಮುಂತಿಳಿಸಲ್ಪಟ್ಟಿತ್ತು. (ಲೂಕ 1:​30, 31) ಈ ಹೆಸರು, “ಯೆಹೋವನು ರಕ್ಷಣೆ” ಎಂಬ ಅರ್ಥವಿರುವ ಹೀಬ್ರು ಪದದಿಂದ ಬಂದಿದೆ. ಹೀಗೆ, ಯೇಸು ಸ್ವನೇಮಿತ ಕ್ರಿಸ್ತನಲ್ಲವೆಂಬುದು ವ್ಯಕ್ತ.

6. ಮೆಸ್ಸೀಯನ ಬಾಯಿ ಯಾವ ವಿಧದಲ್ಲಿ ಹದವಾದ ಖಡ್ಗವಾಗಿದೆ, ಮತ್ತು ಅದು ಮರೆಮಾಡಲ್ಪಡುವುದು ಅಥವಾ ಮುಚ್ಚಿಡಲ್ಪಡುವುದು ಹೇಗೆ?

6 ಮೆಸ್ಸೀಯನ ಪ್ರವಾದನ ಮಾತುಗಳು ಮುಂದುವರಿಯುತ್ತವೆ: “ನನ್ನ ಬಾಯನ್ನು ಹದವಾದ ಖಡ್ಗವನ್ನಾಗಿ ಮಾಡಿ ತನ್ನ ಕೈಯ ನೆರಳಿನಲ್ಲಿ ನನ್ನನ್ನು ಹುದುಗಿಸಿದ್ದಾನೆ; ನನ್ನನ್ನು ಚೂಪಾದ [“ಮೆರುಗುಪಡೆದ,” NW] ಬಾಣವನ್ನಾಗಿ ರೂಪಿಸಿ ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.” (ಯೆಶಾಯ 49:2) ಯೆಹೋವನ ಮೆಸ್ಸೀಯನಿಗೆ ತನ್ನ ಭೂಶುಶ್ರೂಷೆಯನ್ನು ಮಾಡುವ ಸಮಯವು ಸಾ.ಶ. 29ರಲ್ಲಿ ಬರುವಾಗ, ಯೇಸುವಿನ ಮಾತುಗಳೂ ಕ್ರಿಯೆಗಳೂ ಚೂಪಾದ, ಮೆರುಗು ಕೊಟ್ಟಿರುವ ಆಯುಧಗಳಾಗಿ, ಅವನ ಕೇಳುಗರ ಹೃದಯಗಳನ್ನು ತೂರಿಹೋಗಲು ಶಕ್ತವಾಗುತ್ತವೆ ಎಂಬುದು ನಿಶ್ಚಯ. (ಲೂಕ 4:​31, 32) ಅವನ ಮಾತುಗಳೂ ಕಾರ್ಯಗಳೂ ಯೆಹೋವನ ಮಹಾ ಶತ್ರುವಾದ ಸೈತಾನನನ್ನೂ ಅವನ ಪ್ರತಿನಿಧಿಗಳನ್ನೂ ಕೋಪಕ್ಕೆಬ್ಬಿಸುತ್ತವೆ. ಯೇಸುವಿನ ಜನನದ ಸಮಯದಿಂದ ಹಿಡಿದು ಸೈತಾನನು ಅವನ ಜೀವವನ್ನು ತೆಗೆಯಲು ಪ್ರಯತ್ನಿಸಿದರೂ, ಯೇಸು ಯೆಹೋವನ ಸ್ವಂತ ಬತ್ತಳಿಕೆಯಲ್ಲಿ ಮುಚ್ಚಿಟ್ಟ ಬಾಣದಂತಿದ್ದಾನೆ. * ಅವನು ತನ್ನ ತಂದೆಯ ಸಂರಕ್ಷಣಾ ಸಾಮರ್ಥ್ಯದಲ್ಲಿ ಭರವಸವಿಡಬಲ್ಲನು. (ಕೀರ್ತನೆ 91:1; ಲೂಕ 1:35) ನೇಮಿತ ಸಮಯದಲ್ಲಿ ಯೇಸು ಮಾನವಕುಲದ ಪರವಾಗಿ ತನ್ನ ಜೀವವನ್ನು ಕೊಡುತ್ತಾನೆ. ಆದರೆ ಅವನು ಬಲಾಢ್ಯನಾದ ಸ್ವರ್ಗೀಯ ಯುದ್ಧವೀರನಾಗಿ ಯುದ್ಧಕ್ಕಿಳಿಯುವ ಸಮಯವು ಬರಲಿದೆ. ಆಗ ಅವನು ಭಿನ್ನವಾದ ಅರ್ಥದಲ್ಲಿ, ಬಾಯಿಯಿಂದ ಹದವಾದ ಖಡ್ಗವನ್ನು ಹೊರಡಿಸುವವನಾಗಿ ಬರುವನು. ಆದರೆ ಈ ಬಾರಿ, ಆ ಹದವಾದ ಖಡ್ಗವು ಯೆಹೋವನ ವೈರಿಗಳ ವಿರುದ್ಧ ನ್ಯಾಯತೀರಿಸಿ ಅದನ್ನು ಜಾರಿಗೆ ತರಲು ಯೇಸುವಿಗಿರುವ ಅಧಿಕಾರವನ್ನು ಪ್ರತಿನಿಧಿಸುವುದು.​—⁠ಪ್ರಕಟನೆ 1:⁠16.

ದೇವರ ಸೇವಕನ ಪ್ರಯಾಸಗಳು ವ್ಯರ್ಥವಲ್ಲ

7. ಯೆಶಾಯ 49:3ರ ಯೆಹೋವನ ಮಾತುಗಳನ್ನು ಯಾರಿಗೆ ಅನ್ವಯಿಸಲಾಗುತ್ತದೆ, ಮತ್ತು ಏಕೆ?

7 ಈಗ ಯೆಹೋವನು ಈ ಪ್ರವಾದನ ಮಾತುಗಳನ್ನು ಹೇಳುತ್ತಾನೆ: “ನೀನು ನನ್ನ ಸೇವಕನೂ ನಾನು ಪ್ರಭಾವಹೊಂದಬೇಕಾದ [“ನನ್ನ ಸೌಂದರ್ಯವನ್ನು ಯಾರಲ್ಲಿ ತೋರಿಸುವೆನೊ ಅಂತಹ,” NW] ಇಸ್ರಾಯೇಲೂ ಆಗಿದ್ದೀ.” (ಯೆಶಾಯ 49:3) ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ತನ್ನ ಸೇವಕನೆಂದು ಹೇಳುತ್ತಾನೆ. (ಯೆಶಾಯ 41:⁠8) ಆದರೆ ಯೇಸು ದೇವರ ಸರ್ವೋತ್ಕೃಷ್ಟ ಸೇವಕನು. (ಅ. ಕೃತ್ಯಗಳು 3:13) ದೇವರ ಸೃಷ್ಟಿಜೀವಿಗಳಲ್ಲಿ ಇನ್ನಾವನೂ ಯೆಹೋವನ “ಸೌಂದರ್ಯ”ವನ್ನು ಯೇಸುವಿಗಿಂತ ಉತ್ತಮವಾಗಿ ಪ್ರತಿಬಿಂಬಿಸಲಾರನು. ಆದುದರಿಂದ, ನಾಮಮಾತ್ರಕ್ಕೆ ಇಸ್ರಾಯೇಲಿಗೆ ಸಂಬೋಧಿಸಿರುವುದಾದರೂ, ಈ ಮಾತುಗಳು ನಿಜವಾಗಿಯೂ ಯೇಸುವಿಗೆ ಅನ್ವಯಿಸುತ್ತವೆ.​—⁠ಯೋಹಾನ 14:9; ಕೊಲೊಸ್ಸೆ 1:⁠15.

8. ಮೆಸ್ಸೀಯನ ಸ್ವಂತ ಜನರು ಅವನ ವಿಷಯದಲ್ಲಿ ಯಾವ ಪ್ರತಿವರ್ತನೆ ತೋರಿಸುತ್ತಾರೆ, ಆದರೆ ತನ್ನ ಯಶಸ್ಸನ್ನು ನಿರ್ಣಯಿಸಲು ಮೆಸ್ಸೀಯನು ಯಾರ ಕಡೆಗೆ ನೋಡುತ್ತಾನೆ?

8 ಆದರೆ ಯೇಸುವನ್ನು ಅವನ ಸ್ವಂತ ಜನರಲ್ಲಿ ಹೆಚ್ಚಿನವರು ಉಪೇಕ್ಷಿಸಿ ತಿರಸ್ಕರಿಸಿದರೆಂಬುದು ನಿಜವಲ್ಲವೋ? ಹೌದು. ಒಟ್ಟಿನಲ್ಲಿ ಇಸ್ರಾಯೇಲ್‌ ಜನಾಂಗವು ಯೇಸುವನ್ನು ದೇವರ ಅಭಿಷಿಕ್ತ ಸೇವಕನಾಗಿ ಅಂಗೀಕರಿಸುವುದಿಲ್ಲ. (ಯೋಹಾನ 1:11) ಯೇಸು ಭೂಮಿಯಲ್ಲಿದ್ದಾಗ ಮಾಡಿದ ವಿಷಯಗಳೆಲ್ಲ ಅವನ ಸಮಕಾಲೀನರಿಗೆ ಕೊಂಚ ಬೆಲೆಯದ್ದೂ ಕ್ಷುಲ್ಲಕವೂ ಆಗಿ ಕಂಡಿರಬಹುದು. ಮೆಸ್ಸೀಯನು ತನ್ನ ಶುಶ್ರೂಷಾ ವೈಫಲ್ಯವನ್ನು ಮುಂದಿನ ಮಾತುಗಳಲ್ಲಿ ಸೂಚಿಸುತ್ತಾನೆ: “ನನ್ನ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ವ್ರಯಮಾಡಿದ್ದು ಹಾಳೇ, ಬರಿ ಗಾಳಿಯೇ.” (ಯೆಶಾಯ 49:4ಎ) ಮೆಸ್ಸೀಯನು ನಿರುತ್ತೇಜಿತನಾಗಿ ಹೀಗೆ ಮಾತಾಡಲಿಲ್ಲ. ಅವನು ಮುಂದೆ ಏನು ಹೇಳುತ್ತಾನೊ ಅದನ್ನು ಪರಿಗಣಿಸಿರಿ: “ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ, ನನಗೆ ಲಾಭವು ನನ್ನ ದೇವರಿಂದಲೇ ಆಗುವದು.” (ಯೆಶಾಯ 49:4ಬಿ) ಮೆಸ್ಸೀಯನ ಯಶಸ್ಸನ್ನು ನಿರ್ಣಯಿಸುವವನು ಮನುಷ್ಯನಲ್ಲ, ಬದಲಾಗಿ ದೇವರೇ.

9, 10. (ಎ) ಯೆಹೋವನಿಂದ ಮೆಸ್ಸೀಯನಿಗೆ ಯಾವ ನೇಮಕವು ದೊರೆಯುತ್ತದೆ, ಮತ್ತು ಅವನಿಗೆ ಸಿಕ್ಕಿದಂಥ ಪ್ರತಿಫಲಗಳಾವುವು? (ಬಿ) ಇಂದು ಕ್ರೈಸ್ತರಿಗೆ ಮೆಸ್ಸೀಯನ ಅನುಭವಗಳಿಂದ ಹೇಗೆ ಪ್ರೋತ್ಸಾಹ ದೊರೆಯಸಾಧ್ಯವಿದೆ?

9 ಯೇಸು ಪ್ರಧಾನವಾಗಿ ದೇವರ ಒಪ್ಪಿಗೆ ಅಥವಾ ಪ್ರಸನ್ನತೆಯಲ್ಲಿ ಆಸಕ್ತನಾಗಿದ್ದಾನೆ. ಪ್ರವಾದನೆಯಲ್ಲಿ ಮೆಸ್ಸೀಯನು ಹೇಳುವುದು: “ಆಹಾ, ನಾನು ಯೆಹೋವನ ದೃಷ್ಟಿಯಲ್ಲಿ ಮಾನ್ಯನು, ನನ್ನ ದೇವರೇ ನನಗೆ ಬಲವು. ಯಾಕೋಬನ್ನು ತನಗೆ ಸೇರಿಸಿಕೊಳ್ಳಬೇಕೆಂತಲೂ ಇಸ್ರಾಯೇಲು ತನ್ನ ಕಡೆಗೆ ಕೂಡಿಬರಬೇಕೆಂತಲೂ ಆತನು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನಲ್ಲವೆ.” (ಯೆಶಾಯ 49:⁠5) ಮೆಸ್ಸೀಯನ ಬರೋಣದ ಕಾರಣವು, ಇಸ್ರಾಯೇಲ್ಯರ ಹೃದಯಗಳನ್ನು ಅವರ ಸ್ವರ್ಗೀಯ ತಂದೆಯ ಕಡೆಗೆ ತಿರುಗಿಸುವುದೇ ಆಗಿದೆ. ಹೆಚ್ಚಿನವರು ಅನುಕೂಲಕರವಾಗಿ ಪ್ರತಿವರ್ತಿಸದಿದ್ದರೂ ಕೆಲವರು ದೇವರ ಕಡೆಗೆ ತಿರುಗುತ್ತಾರೆ. ಆದರೂ, ಅವನಿಗೆ ದೊರೆಯುವ ನಿಜ ವೇತನ ಯೆಹೋವ ದೇವರ ಕೈಯಲ್ಲಿದೆ. ಅವನ ಯಶಸ್ಸು ಅಳೆಯಲ್ಪಡುವುದು ಮಾನವ ಮಟ್ಟಗಳ ಪ್ರಕಾರವಲ್ಲ, ಯೆಹೋವನ ಸ್ವಂತ ಮಟ್ಟಗಳ ಪ್ರಕಾರವೇ.

10 ಇಂದು, ಯೇಸುವಿನ ಹಿಂಬಾಲಕರಿಗೆ ತಾವು ಪ್ರಯಾಸಪಡುತ್ತಿರುವುದು ವ್ಯರ್ಥ ಎಂದು ಅನೇಕಬಾರಿ ಅನಿಸುತ್ತಿರಬಹುದು. ಕೆಲವು ಸ್ಥಳಗಳಲ್ಲಿ, ಅವರು ಮಾಡಿರುವ ಕೆಲಸ ಮತ್ತು ಪ್ರಯತ್ನದ ಮೊತ್ತಕ್ಕೆ ಹೋಲಿಸುವಾಗ ಅವರ ಶುಶ್ರೂಷೆಗೆ ಸಿಕ್ಕಿರುವ ಪ್ರತಿಫಲವು ಅಲ್ಪವಾಗಿ ಕಂಡುಬರಬಹುದು. ಹೀಗಿದ್ದರೂ, ಯೇಸುವಿನ ಮಾದರಿಯಿಂದ ಪ್ರೋತ್ಸಾಹಿಸಲ್ಪಟ್ಟವರಾಗಿ ಅವರು ತಾಳಿಕೊಳ್ಳುತ್ತಾರೆ. ಅಪೊಸ್ತಲ ಪೌಲನ ಮಾತುಗಳಿಂದಲೂ ಅವರಿಗೆ ಬಲ ದೊರೆಯುತ್ತದೆ. ಅವನು ಬರೆದುದು: “ಆದದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.”⁠—⁠1 ಕೊರಿಂಥ 15:⁠58.

‘ಅನ್ಯಜನಾಂಗಗಳಿಗೆ ಬೆಳಕು’

11, 12. ಮೆಸ್ಸೀಯನು ‘ಅನ್ಯಜನಾಂಗಗಳಿಗೆ ಬೆಳಕು’ ಆಗಿರುವುದು ಹೇಗೆ?

11 ಯೆಶಾಯನ ಪ್ರವಾದನೆಯಲ್ಲಿ ಯೆಹೋವನು ಮೆಸ್ಸೀಯನಿಗೆ, ದೇವರ ಸೇವಕನಾಗಿರುವುದು “ಅಲ್ಪಕಾರ್ಯ” ಆಗಿರುವುದಿಲ್ಲವೆಂದು ನೆನಪು ಹುಟ್ಟಿಸುತ್ತಾನೆ. “ಯಾಕೋಬಿನ ಕುಲಗಳನ್ನು ಉನ್ನತಪಡಿಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ” ಯೇಸುವಿನ ಕೆಲಸವಾಗಿದೆ. ಯೆಹೋವನು ಇನ್ನೂ ಹೇಳುವುದು: “ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.” (ಯೆಶಾಯ 49:6) ಯೇಸುವಿನ ಭೂಶುಶ್ರೂಷೆಯು ಇಸ್ರಾಯೇಲಿಗೆ ಮಾತ್ರ ಸೀಮಿತವಾಗಿರುವಾಗ, ಅವನು “ಲೋಕದ ಕಟ್ಟಕಡೆಯ ವರೆಗೆ” ಇರುವ ಜನರಿಗೆ ಜ್ಞಾನೋದಯವನ್ನು ಉಂಟುಮಾಡುವುದು ಹೇಗೆ?

12 ಯೇಸು ಈ ಭೂಮಿಯನ್ನು ಬಿಟ್ಟುಹೋದಾಗ, ದೇವರ ‘ಅನ್ಯಜನಾಂಗಗಳಿಗೆ ಬೆಳಕು’ ಆರಿಹೋಗಲಿಲ್ಲವೆಂದು ಬೈಬಲ್‌ ದಾಖಲೆಯು ತೋರಿಸುತ್ತದೆ. ಯೇಸುವಿನ ಮರಣಾನಂತರ ಸುಮಾರು 15 ವರ್ಷಗಳಲ್ಲಿ, ಮಿಷನೆರಿಗಳಾಗಿದ್ದ ಪೌಲ ಮತ್ತು ಬಾರ್ನಬರು ಯೆಶಾಯನ ಪ್ರವಾದನೆಯ 49:6ನ್ನು ಉಲ್ಲೇಖಿಸಿ, ಯೇಸುವಿನ ಶಿಷ್ಯರಿಗೆ ಅಂದರೆ ಅವನ ಆತ್ಮಿಕ ಸಹೋದರರಿಗೆ ಅದನ್ನು ಅನ್ವಯಿಸಿದರು. ಅವರು ಹೇಳಿದ್ದು: “ಹಾಗೆಯೇ ಕರ್ತನು [“ಯೆಹೋವನು,” NW] ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಹೇಗಂದರೆ​—⁠ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ.” (ಅ. ಕೃತ್ಯಗಳು 13:47) ಅಪೊಸ್ತಲ ಪೌಲನು ತನ್ನ ಸಾವಿಗೆ ಮೊದಲು, ರಕ್ಷಣೆಯ ಸುವಾರ್ತೆಯು ಯೆಹೂದ್ಯರಿಗೆ ಮಾತ್ರವಲ್ಲ, “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಲ್ಪಡುವಂತೆ ಮಾಡಿದನು. (ಕೊಲೊಸ್ಸೆ 1:6, 23) ಇಂದು, ಕ್ರಿಸ್ತನ ಅಭಿಷಿಕ್ತ ಸಹೋದರರಲ್ಲಿ ಉಳಿದಿರುವವರು ಈ ಕೆಲಸವನ್ನು ಮುಂದುವರಿಸುತ್ತಿದ್ದಾರೆ. ಅವರು ಲಕ್ಷಾಂತರ ಮಂದಿಯಿಂದ ಕೂಡಿರುವ “ಮಹಾ ಸಮೂಹ”ದಿಂದ ಬೆಂಬಲವನ್ನು ಪಡೆಯುತ್ತ, ಲೋಕವ್ಯಾಪಕವಾಗಿ 230ಕ್ಕೂ ಹೆಚ್ಚು ದೇಶಗಳಲ್ಲಿ ‘ಅನ್ಯಜನಾಂಗಗಳಿಗೆ ಬೆಳಕಾಗಿ’ ಸೇವೆಮಾಡುತ್ತಿದ್ದಾರೆ.​—⁠ಪ್ರಕಟನೆ 7:⁠9.

13, 14. (ಎ) ಮೆಸ್ಸೀಯನೂ ಅವನ ಹಿಂಬಾಲಕರೂ ಸಾರುವ ಕಾರ್ಯಕ್ಕೆ ಯಾವ ಪ್ರತಿಕ್ರಿಯೆಯನ್ನು ಎದುರಿಸಿದ್ದಾರೆ? (ಬಿ) ಪರಿಸ್ಥಿತಿಗಳಲ್ಲಿ ಯಾವ ಬದಲಾವಣೆ ಸಂಭವಿಸಿದೆ?

13 ಯೆಹೋವನು ತನ್ನ ಸೇವಕನಾದ ಮೆಸ್ಸೀಯನಿಗೆ, ಮೆಸ್ಸೀಯನ ಅಭಿಷಿಕ್ತ ಸಹೋದರರಿಗೆ ಮತ್ತು ಅವರೊಂದಿಗೆ ಸುವಾರ್ತೆಯನ್ನು ಸಾರುವ ಕಾರ್ಯವನ್ನು ಮುಂದುವರಿಸುವ ಮಹಾ ಸಮೂಹದವರೆಲ್ಲರಿಗೆ ಒಂದು ಬಲವಾಗಿ ಪರಿಣಮಿಸಿರುವುದು ನಿಶ್ಚಯ. ಯೇಸುವಿನಂತೆ ಅವನ ಶಿಷ್ಯರೂ ಧಿಕ್ಕಾರ ಮತ್ತು ವಿರೋಧವನ್ನು ಸಹಿಸಿರುವುದು ನಿಜ. (ಯೋಹಾನ 15:20) ಆದರೆ ತಕ್ಕ ಸಮಯದಲ್ಲಿ, ತನ್ನ ನಿಷ್ಠಾವಂತ ಸೇವಕರನ್ನು ರಕ್ಷಿಸಲು ಮತ್ತು ಅವರಿಗೆ ಪ್ರತಿಫಲವನ್ನು ಕೊಡಲು ಯೆಹೋವನು ಯಾವಾಗಲೂ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತಾನೆ. “ಮನಃಪೂರ್ವಕವಾಗಿ ತಿರಸ್ಕರಿಸಲ್ಪಟ್ಟವನೂ ಅನ್ಯಜನಾಂಗಕ್ಕೆ ಅಸಹ್ಯನೂ” ಆಗಿರುವ ಮೆಸ್ಸೀಯನ ಕುರಿತು ಯೆಹೋವನು ವಾಗ್ದಾನಿಸುವುದು: “ಯೆಹೋವನ ಪ್ರಾಮಾಣಿಕತೆಯನ್ನೂ ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನನ್ನು ಪರಿಗ್ರಹಿಸಿರುವದನ್ನೂ ಅರಸರು ನೋಡಿ ಎದ್ದು ನಿಲ್ಲುವರು, ಅಧಿಪತಿಗಳು ಅಡ್ಡಬೀಳುವರು.”​—ಯೆಶಾಯ 49:⁠7.

14 ಮುಂತಿಳಿಸಲ್ಪಟ್ಟಿದ್ದ ಈ ಪರಿಸ್ಥಿತಿಗಳ ಬದಲಾವಣೆಯ ಕುರಿತು ಫಿಲಿಪ್ಪಿಯ ಕ್ರೈಸ್ತರಿಗೆ ಅಪೊಸ್ತಲ ಪೌಲನು ಸಮಯಾನಂತರ ಬರೆದನು. ಅವನು ಯೇಸುವನ್ನು, ಯಾತನಾಸ್ತಂಭದ ಮೇಲೆ ಹೀನೈಸಲ್ಪಟ್ಟರೂ ಆ ಬಳಿಕ ದೇವರಿಂದ ಉನ್ನತಕ್ಕೇರಿಸಲ್ಪಟ್ಟವನು ಎಂದು ವರ್ಣಿಸಿದನು. ಯೆಹೋವನು ತನ್ನ ಸೇವಕನನ್ನು, “ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.” ಹೀಗೆ ಎಲ್ಲರೂ “ಯೇಸುವಿನ ಹೆಸರಿನಲ್ಲಿ ಅಡ್ಡ”ಬೀಳುವರು. (ಫಿಲಿಪ್ಪಿ 2:​8-11) ಕ್ರಿಸ್ತನ ನಂಬಿಗಸ್ತ ಹಿಂಬಾಲಕರೂ ಹಿಂಸಿಸಲ್ಪಡುವರೆಂದು ಎಚ್ಚರಿಕೆಯನ್ನು ಕೊಡಲಾಗಿದೆ. ಆದರೆ ಮೆಸ್ಸೀಯನಂತೆ ಅವರಿಗೂ ಯೆಹೋವನ ಪ್ರಸನ್ನತೆಯನ್ನು ಪಡೆಯುವ ಖಾತ್ರಿಯಿದೆ.​—⁠ಮತ್ತಾಯ 5:​10-12; 24:​9-13; ಮಾರ್ಕ 10:​29, 30.

“ಪ್ರಸನ್ನತೆಯ ಕಾಲ”

15. ಯೆಶಾಯನ ಪ್ರವಾದನೆಯು ಯಾವ ವಿಶೇಷ “ಕಾಲ”ದ ಕುರಿತು ತಿಳಿಸುತ್ತದೆ, ಮತ್ತು ಇದರ ಸೂಚಿತಾರ್ಥವೇನು?

15 ಯೆಶಾಯನ ಪ್ರವಾದನೆಯು ಅತಿ ಮಹತ್ವದ ಹೇಳಿಕೆಯೊಂದಿಗೆ ಮುಂದುವರಿಯುತ್ತದೆ. ಯೆಹೋವನು ಮೆಸ್ಸೀಯನಿಗೆ, “ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ, ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ; ನಾನು ನಿನ್ನನ್ನು ಕಾಪಾಡುತ್ತಾ [ನನ್ನ] ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ” ನೇಮಿಸಿದ್ದೇನೆ ಎಂದು ಹೇಳುತ್ತಾನೆ. (ಯೆಶಾಯ 49:8ಎ) ಇಂತಹದ್ದೇ ಪ್ರವಾದನೆಯೊಂದು ಕೀರ್ತನೆ 69:​13-18ರಲ್ಲಿ ದಾಖಲಿಸಲ್ಪಟ್ಟಿದೆ. ಅಲ್ಲಿ ಕೀರ್ತನೆಗಾರನು ‘ಪ್ರಸನ್ನತೆಯ ಸಕಾಲದ’ ಕುರಿತು ಸೂಚಿಸುತ್ತಾನೆ. ಯೆಹೋವನ ಪ್ರಸನ್ನತೆ ಮತ್ತು ಸಂರಕ್ಷಣೆಯು ಒಂದು ವಿಶೇಷ ರೀತಿಯಲ್ಲಿ ಮತ್ತು ಒಂದು ನಿರ್ದಿಷ್ಟ ಹಾಗೂ ತಾತ್ಕಾಲಿಕ ಸಮಯದ ವರೆಗೆ ಮಾತ್ರ ದೊರೆಯುತ್ತದೆಂದು ಈ ಮಾತುಗಳು ಸೂಚಿಸುತ್ತವೆ.

16. ಪುರಾತನ ಇಸ್ರಾಯೇಲಿಗೆ ಯೆಹೋವನ ಪ್ರಸನ್ನತೆಯ ಕಾಲ ಯಾವುದಾಗಿತ್ತು?

16 ಆ ಪ್ರಸನ್ನತೆಯ ಕಾಲವು ಯಾವಾಗ ಆಗಿತ್ತು? ಪ್ರಥಮ ಸನ್ನಿವೇಶದಲ್ಲಿ ಈ ಮಾತುಗಳು ಪುನಸ್ಸ್ಥಾಪನೆಯ ಪ್ರವಾದನೆಯ ಭಾಗವಾಗಿದ್ದು, ಯೆಹೂದ್ಯರು ಸೆರೆವಾಸದಿಂದ ಹಿಂದೆ ಬರುವುದನ್ನು ಮುಂತಿಳಿಸಿದವು. ಇಸ್ರಾಯೇಲ್‌ ಜನಾಂಗವು “ದೇಶವನ್ನು ಜೀರ್ಣೋದ್ಧಾರ” ಮಾಡಿ, “ಹಾಳಾಗಿದ್ದ ಸ್ವಾಸ್ತ್ಯ”ಗಳನ್ನು ವಶಮಾಡಿಕೊಂಡಾಗ, ಅವರು ಪ್ರಸನ್ನತೆಯ ಕಾಲವನ್ನು ಅನುಭವಿಸಲು ಶಕ್ತರಾದರು. (ಯೆಶಾಯ 49:​8, 9) ಅಂದಿನಿಂದ ಅವರು ಬಾಬೆಲಿನಲ್ಲಿ “ಬಂದಿ”ಗಳಾಗಿರಲಿಲ್ಲ. ಅವರು ಸ್ವದೇಶಕ್ಕೆ ಹಿಂದಿರುಗುವಾಗ ಅವರಿಗೆ “ಹಸಿವೆ ಬಾಯಾರಿಕೆಗಳು” ಆಗದಂತೆ ಅಥವಾ “ಝಳವೂ ಬಿಸಿಲೂ” ಬಡಿಯದಂತೆ ಯೆಹೋವನು ಖಚಿತಪಡಿಸಿಕೊಂಡನು. ಚದರಿದ್ದ ಇಸ್ರಾಯೇಲ್ಯರು, “ದೂರದಿಂದ . . . ಬಡಗಲಿಂದ ಮತ್ತು ಪಡವಲಿಂದ” ತಮ್ಮ ಸ್ವದೇಶಕ್ಕೆ ಹಿಂದಿರುಗಿದರು. (ಯೆಶಾಯ 49:​10-12) ಆರಂಭದಲ್ಲಿ ಈ ರೀತಿಯ ನಾಟಕೀಯ ನೆರವೇರಿಕೆ ನಡೆದದ್ದು ನಿಜವಾದರೂ, ಈ ಪ್ರವಾದನೆಗೆ ವಿಸ್ತಾರವಾದ ಅನ್ವಯಗಳೂ ಇವೆಯೆಂದು ಬೈಬಲು ತೋರಿಸುತ್ತದೆ.

17, 18. ಯೆಹೋವನು ಪ್ರಥಮ ಶತಮಾನದಲ್ಲಿ ಯಾವ ಪ್ರಸನ್ನತೆಯ ಕಾಲವನ್ನು ನೇಮಿಸಿದನು?

17 ಒಂದನೆಯದಾಗಿ, ಯೇಸುವಿನ ಜನನದ ಸಮಯದಲ್ಲಿ, ದೇವದೂತರು ಜನರಿಗೆ ಶಾಂತಿ ಮತ್ತು ದೇವರ ಪ್ರಸನ್ನತೆ ಅಥವಾ ಅನುಗ್ರಹವನ್ನು ಪ್ರಕಟಿಸಿದರು. (ಲೂಕ 2:​13, 14, NW) ಈ ಪ್ರಸನ್ನತೆಯು ಸಾಮಾನ್ಯವಾಗಿ ಎಲ್ಲ ಜನರಿಗಲ್ಲ, ಬದಲಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟವರಿಗೆ ಮಾತ್ರ ನೀಡಲ್ಪಟ್ಟಿತು. ಸಮಯಾನಂತರ, ಯೇಸು ಯೆಶಾಯ 61:​1, 2ರ ಪ್ರವಾದನೆಯನ್ನು ಬಹಿರಂಗವಾಗಿ ಓದಿ, “ಕರ್ತನು [“ಯೆಹೋವನು,” NW] ನೇಮಿಸಿದ ಶುಭವರುಷ”ವನ್ನು ಪ್ರಚುರಪಡಿಸುವವನಾದ ತನಗೆ ಅದನ್ನು ಅನ್ವಯಿಸಿಕೊಂಡನು. (ಲೂಕ 4:​17-21) ಕ್ರಿಸ್ತನು ಒಬ್ಬ ಮನುಷ್ಯನಾಗಿದ್ದಾಗ ಯೆಹೋವನಿಂದ ವಿಶೇಷ ಸಂರಕ್ಷಣೆಯನ್ನು ಪಡೆದನೆಂದು ಅಪೊಸ್ತಲ ಪೌಲನು ಕ್ರಿಸ್ತನ ಕುರಿತು ಹೇಳಿದನು. (ಇಬ್ರಿಯ 5:​7-9) ಆದಕಾರಣ, ಈ ಪ್ರಸನ್ನತೆಯ ಕಾಲವು ಯೇಸು ಮನುಷ್ಯನಾಗಿ ಜೀವಿಸಿದಾಗ ಅವನಿಗೆ ದೊರಕಿದ ದೇವರ ಅನುಗ್ರಹಕ್ಕೆ ಅನ್ವಯಿಸುತ್ತದೆ.

18 ಆದರೆ ಈ ಪ್ರವಾದನೆಗೆ ಇನ್ನೊಂದು ಅನ್ವಯವೂ ಇದೆ. ಪ್ರಸನ್ನತೆಯ ಕಾಲದ ಕುರಿತಾದ ಯೆಶಾಯನ ಮಾತುಗಳನ್ನು ಉಲ್ಲೇಖಿಸಿದ ಬಳಿಕ ಪೌಲನು ಹೇಳಿದ್ದು: “ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ.” (2 ಕೊರಿಂಥ 6:2) ಪೌಲನು ಈ ಮಾತುಗಳನ್ನು ಬರೆದಾಗ ಯೇಸು ತೀರಿಹೋಗಿ 22 ವರುಷಗಳಾಗಿದ್ದವು. ಆದುದರಿಂದ, ಸಾ.ಶ. 33ರ ಪಂಚಾಶತ್ತಮದಲ್ಲಿ ಕ್ರೈಸ್ತ ಸಭೆಯು ಹುಟ್ಟಿದಾಗ ಯೆಹೋವನು, ಈ ಸುಪ್ರಸನ್ನತೆಯ ವರುಷವನ್ನು ಅದು ಕ್ರಿಸ್ತನ ಅಭಿಷಿಕ್ತ ಹಿಂಬಾಲಕರನ್ನೂ ಆವರಿಸುವಂತೆ ವಿಸ್ತರಿಸಿದನೆಂಬುದು ವ್ಯಕ್ತ.

19. ಯೆಹೋವನ ಪ್ರಸನ್ನತೆಯ ಕಾಲದಿಂದ ಕ್ರೈಸ್ತರು ಇಂದು ಹೇಗೆ ಪ್ರಯೋಜನ ಪಡೆಯಬಲ್ಲರು?

19 ಹಾಗಾದರೆ, ದೇವರ ಸ್ವರ್ಗೀಯ ರಾಜ್ಯಕ್ಕೆ ಬಾಧ್ಯಸ್ಥರಾಗಿ ಅಭಿಷೇಕಿಸಲ್ಪಡದಂಥ ಯೇಸುವಿನ ಇಂದಿನ ಹಿಂಬಾಲಕರ ವಿಷಯವೇನು? ಭೂನಿರೀಕ್ಷೆಯಿರುವ ಜನರೂ ಈ ಶುಭಕಾಲದಿಂದ ಪ್ರಯೋಜನ ಪಡೆಯಬಲ್ಲರೊ? ಹೌದು. “ಮಹಾ ಸಂಕಟದಿಂದ” ಹೊರಬಂದು, ಭೂಪರದೈಸಿನಲ್ಲಿ ಜೀವನವನ್ನು ಆನಂದಿಸಲಿರುವ ಮಹಾ ಸಮೂಹದವರಿಗೆ ಯೆಹೋವನು ಕೊಡುವ ಪ್ರಸನ್ನತೆಯ ಕಾಲವು ಇದಾಗಿದೆಯೆಂದು ಬೈಬಲಿನ ಪ್ರಕಟನೆ ಪುಸ್ತಕವು ತೋರಿಸುತ್ತದೆ. (ಪ್ರಕಟನೆ 7:​13-17, NW) ಆದಕಾರಣ, ಎಲ್ಲ ಕ್ರೈಸ್ತರು ಯೆಹೋವನು ಅಪರಿಪೂರ್ಣ ಮಾನವರಿಗೆ ತನ್ನ ಪ್ರಸನ್ನತೆಯನ್ನು ತೋರಿಸುವ ಈ ಸೀಮಿತ ಸಮಯದ ಪ್ರಯೋಜನವನ್ನು ತೆಗೆದುಕೊಳ್ಳಸಾಧ್ಯವಿದೆ.

20. ಯೆಹೋವನ ಅಪಾತ್ರ ಕೃಪೆಯ ಉದ್ದೇಶದ ಗುರಿಯನ್ನು ತಪ್ಪುವುದರಿಂದ ಕ್ರೈಸ್ತರು ಯಾವ ವಿಧದಲ್ಲಿ ದೂರವಿರಬಲ್ಲರು?

20 ಅಪೊಸ್ತಲ ಪೌಲನು ಯೆಹೋವನ ಶುಭಕಾಲದ ಪ್ರಕಟನೆಗೆ ಮೊದಲು ಒಂದು ಎಚ್ಚರಿಕೆಯನ್ನು ಕೊಡುತ್ತಾನೆ. “ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ,” ಎಂದು ಅವನು ಕ್ರೈಸ್ತರನ್ನು ಕೇಳಿಕೊಳ್ಳುತ್ತಾನೆ. (2 ಕೊರಿಂಥ 6:1) ಈ ಕಾರಣದಿಂದ, ಕ್ರೈಸ್ತರು ದೇವರನ್ನು ಮೆಚ್ಚಿಸಿ ಆತನ ಚಿತ್ತವನ್ನು ಮಾಡಲು ಪ್ರತಿಯೊಂದು ಸಂದರ್ಭವನ್ನೂ ಉಪಯೋಗಿಸುತ್ತಾರೆ. (ಎಫೆಸ 5:​15, 16) ಪೌಲನು ಕೊಡುವ ಈ ಬುದ್ಧಿವಾದವನ್ನು ಅನುಸರಿಸುವುದು ಅವರ ಪ್ರಯೋಜನಾರ್ಥವಾಗಿದೆ: “ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.”​—⁠ಇಬ್ರಿಯ 3:12, 13.

21. ಯೆಶಾಯ 49ನೆಯ ಅಧ್ಯಾಯದ ಪ್ರಥಮ ಭಾಗವು ಯಾವ ಹರ್ಷಕರವಾದ ಹೇಳಿಕೆಯಿಂದ ಅಂತ್ಯಗೊಳ್ಳುತ್ತದೆ?

21 ಯೆಹೋವನ ಮತ್ತು ಆತನ ಮೆಸ್ಸೀಯನ ಮಧ್ಯೆ ನಡೆದ ಪ್ರವಾದನ ಮಾತುಗಳು ಮುಗಿಯುವಾಗ, ಯೆಶಾಯನು ಹರ್ಷಕರವಾದ ಹೇಳಿಕೆಯೊಂದನ್ನು ತಿಳಿಸುತ್ತಾನೆ: “ಆಕಾಶವೇ, ಹರ್ಷಧ್ವನಿಗೈ! ಭೂಮಿಯೇ, ಉಲ್ಲಾಸಗೊಳ್ಳು! ಪರ್ವತಗಳೇ, ಕೋಲಾಹಲಮಾಡಿರಿ! ಯೆಹೋವನು ತನ್ನ ಪ್ರಜೆಯನ್ನು ಸಂತೈಸಿ ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸುತ್ತಿದ್ದಾನೆ.” (ಯೆಶಾಯ 49:13) ಪುರಾತನ ಕಾಲದ ಇಸ್ರಾಯೇಲ್ಯರಿಗೆ, ಯೆಹೋವನ ಮಹಾ ಸೇವಕನಾದ ಯೇಸು ಕ್ರಿಸ್ತನಿಗೆ ಹಾಗೂ ಯೆಹೋವನ ಅಭಿಷಿಕ್ತ ಸೇವಕರಿಗೆ ಮತ್ತು ಇಂದು ಅವರ ಸಂಗಡಿಗರಾಗಿರುವ ‘ಬೇರೆ ಕುರಿಗಳಿಗೆ’ ಎಷ್ಟು ಸೊಗಸಾದ ಸಾಂತ್ವನದ ಮಾತುಗಳಿವು!​—⁠ಯೋಹಾನ 10:16.

ಯೆಹೋವನು ತನ್ನ ಜನರನ್ನು ಮರೆಯುವುದಿಲ್ಲ

22. ತನ್ನ ಜನರನ್ನು ಎಂದಿಗೂ ಮರೆಯೆನೆಂಬುದನ್ನು ಯೆಹೋವನು ಹೇಗೆ ಒತ್ತಿಹೇಳುತ್ತಾನೆ?

22 ಈಗ ಯೆಶಾಯನು ಯೆಹೋವನ ಅಧಿಕೃತ ಪ್ರಕಟನೆಗಳನ್ನು ವರದಿಸುತ್ತ ಮುಂದುವರಿಯುತ್ತಾನೆ. ದೇಶಭ್ರಷ್ಟರಾಗಿದ್ದ ಇಸ್ರಾಯೇಲ್ಯರು ಬೇಸತ್ತು ನಿರಾಶರಾಗುವರೆಂದು ಅವನು ಮುಂತಿಳಿಸುತ್ತಾನೆ. ಯೆಶಾಯನು ಹೇಳುವುದು: “ಚೀಯೋನ್‌ ನಗರಿಯಾದರೋ​—⁠ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು [“ಯೆಹೋವನು,” NW] ನನ್ನನ್ನು ಮರೆತಿದ್ದಾನಲ್ಲಾ ಅಂದುಕೊಂಡಳು.” (ಯೆಶಾಯ 49:14) ಇದು ನಿಜವೊ? ಯೆಹೋವನು ತನ್ನ ಜನರನ್ನು ತ್ಯಜಿಸಿ ಮರೆತುಬಿಟ್ಟಿದ್ದಾನೊ? ಯೆಹೋವನ ವದನಕನಾಗಿ ಯೆಶಾಯನು ಮುಂದುವರಿಸುವುದು: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ.” (ಯೆಶಾಯ 49:15) ಯೆಹೋವನಿಂದ ಎಂತಹ ಪ್ರೀತಿಪೂರ್ಣವಾದ ಪ್ರತಿವರ್ತನೆಯಿದು! ದೇವರು ತನ್ನ ಜನರ ಮೇಲಿಡುವ ಪ್ರೀತಿಯು, ಒಬ್ಬ ತಾಯಿ ತನ್ನ ಮಗುವಿನ ಮೇಲಿಡುವ ಪ್ರೀತಿಗಿಂತ ಅಧಿಕವಾಗಿದೆ. ಆತನು ತನ್ನ ನಿಷ್ಠಾವಂತರ ಕುರಿತು ಸದಾ ಯೋಚಿಸುತ್ತಿರುತ್ತಾನೆ. ತನ್ನ ಕೈಗಳಲ್ಲಿ ಅವರ ಹೆಸರುಗಳು ಕೆತ್ತಲ್ಪಟ್ಟಿವೆಯೊ ಎಂಬಂತೆ ಆತನು ಅವರನ್ನು ಜ್ಞಾಪಿಸಿಕೊಳ್ಳುತ್ತಾನೆ: “ಇಗೋ, ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿದ್ದೇನೆ; ನಿನ್ನ ಪೌಳಿಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.”​—ಯೆಶಾಯ 49:⁠16.

23. ಯೆಹೋವನು ತಮ್ಮನ್ನು ಮರೆಯನೆಂಬ ಭರವಸೆಯಿಂದಿರಲು ಪೌಲನು ಕ್ರೈಸ್ತರನ್ನು ಹೇಗೆ ಪ್ರೋತ್ಸಾಹಿಸಿದನು?

23 ಗಲಾತ್ಯದವರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಕ್ರೈಸ್ತರಿಗೆ, “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು” ಎಂದು ಬುದ್ಧಿ ಹೇಳಿದನು. (ಗಲಾತ್ಯ 6:⁠9) ಇಬ್ರಿಯರಿಗೆ ಅವನು, “ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂಬ ಪ್ರೋತ್ಸಾಹಕರ ಮಾತುಗಳನ್ನು ಬರೆದನು. (ಇಬ್ರಿಯ 6:10) ಯೆಹೋವನು ತನ್ನ ಜನರನ್ನು ಮರೆತಿದ್ದಾನೆಂದು ನಾವೆಂದೂ ಎಣಿಸಬಾರದು. ಪುರಾತನ ಕಾಲದ ಚೀಯೋನಿನಂತೆ, ಕ್ರೈಸ್ತರಿಗೆ ಹರ್ಷಿಸಲು ಮತ್ತು ತಾಳ್ಮೆಯಿಂದ ಯೆಹೋವನಿಗಾಗಿ ಕಾಯುತ್ತಿರಲು ಉತ್ತಮವಾದ ಕಾರಣವಿದೆ. ಆತನು ತನ್ನ ಒಡಂಬಡಿಕೆಯ ಷರತ್ತುಗಳಿಗೆ ಮತ್ತು ವಾಗ್ದಾನಗಳಿಗೆ ದೃಢವಾಗಿ ಅಂಟಿಕೊಂಡಿರುತ್ತಾನೆ.

24. ಚೀಯೋನು ಹೇಗೆ ಪುನಸ್ಸ್ಥಾಪಿಸಲ್ಪಡುವುದು, ಮತ್ತು ಅದು ಯಾವ ಪ್ರಶ್ನೆಗಳನ್ನು ಕೇಳುವುದು?

24 ಯೆಹೋವನು ಯೆಶಾಯನ ಮೂಲಕ ಇನ್ನೂ ಹೆಚ್ಚಿನ ಸಾಂತ್ವನವನ್ನು ನೀಡುತ್ತಾನೆ. ಚೀಯೋನನ್ನು “ಕೆಡವಿ ಹಾಳುಮಾಡಿದವರು,” ಅಂದರೆ ಬಾಬೆಲಿನವರಾಗಲಿ ಧರ್ಮಭ್ರಷ್ಟ ಯೆಹೂದ್ಯರಾಗಿರಲಿ, ಇನ್ನು ಮುಂದೆ ಅವರಿಗೆ ಅಪಾಯಕಾರಿಗಳಾಗಿರುವುದಿಲ್ಲ. ಚೀಯೋನಿನ “ಮಕ್ಕಳು” ಅಂದರೆ ದೇಶಭ್ರಷ್ಟ ಯೆಹೂದ್ಯರಲ್ಲಿ ಯೆಹೋವನಿಗೆ ನಿಷ್ಠರಾಗಿ ಉಳಿದಿರುವವರು “ತ್ವರೆಪಟ್ಟು ಬರುತ್ತಿದ್ದಾರೆ.” ಇವರೆಲ್ಲರೂ “ಕೂಡಿಕೊಂಡು” ಇರುವರು. ಯೆರೂಸಲೇಮಿಗೆ ಧಾವಿಸಿ ಬಂದಿದ್ದ ಈ ಯೆಹೂದ್ಯರು ತಮ್ಮ ರಾಜಧಾನಿಗೆ ಅಲಂಕಾರವಾಗಿ, ಒಬ್ಬ “ವಧು” “ಆಭರಣ” ಧರಿಸಿದಂತೆ ಇರುವರು. (ಯೆಶಾಯ 49:​17, 18) ಚೀಯೋನಿನ ಪ್ರದೇಶಗಳು “ಹಾಳು” ಬಿದ್ದಿವೆ. ಅಷ್ಟೊಂದು ಜನ ನಿವಾಸಿಗಳು ಫಕ್ಕನೆ ಬಂದು ವಾಸಿಸತೊಡಗುವಾಗ ಮತ್ತು ಅಲ್ಲಿ ಸ್ಥಳದ ಕೊರತೆ ಕಂಡುಬರುವಾಗ, ಆ ನಗರಕ್ಕೆ ಆಗುವ ಆಶ್ಚರ್ಯವನ್ನು ತುಸು ಊಹಿಸಿಕೊಳ್ಳಿರಿ. (ಯೆಶಾಯ 49:​19, 20ನ್ನು ಓದಿ.) ಈ ಮಕ್ಕಳೆಲ್ಲರೂ ಎಲ್ಲಿಂದ ಬಂದರೆಂದು ಆ ನಗರವು ಕೇಳುವುದು ಸ್ವಾಭಾವಿಕ: “ಆಗ ನೀನು ನಿನ್ನ ಮನದೊಳಗೆ​—⁠ನನಗೋಸ್ಕರ ಇವರನ್ನು ಯಾರು ಹೆತ್ತರು? ನಾನೋ ಮಕ್ಕಳನ್ನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು; ಇವರನ್ನು ಸಾಕಿದವರು ಯಾರು? ಆಹಾ, ನಾನು ಒಂಟಿಯಾಗಿ ಉಳಿದಿದ್ದೆನಲ್ಲಾ! ಇವರೆಲ್ಲಿದ್ದರು? ಅಂದುಕೊಳ್ಳುವಿ.” (ಯೆಶಾಯ 49:21) ಈ ಹಿಂದೆ ಬಂಜೆಯಾಗಿದ್ದ ಚೀಯೋನಿಗೆ ಈಗ ಎಷ್ಟು ಸಂತೋಷದ ಪರಿಸ್ಥಿತಿ!

25. ಆಧುನಿಕ ಕಾಲದಲ್ಲಿ ಆತ್ಮಿಕ ಇಸ್ರಾಯೇಲು ಯಾವ ಪುನಸ್ಸ್ಥಾಪನೆಯನ್ನು ಅನುಭವಿಸಿತು?

25 ಈ ಮಾತುಗಳಿಗೆ ಆಧುನಿಕ ನೆರವೇರಿಕೆಯೊಂದಿದೆ. ಒಂದನೆಯ ಲೋಕ ಯುದ್ಧದ ಕಷ್ಟಕರ ವರುಷಗಳಲ್ಲಿ, ಆತ್ಮಿಕ ಇಸ್ರಾಯೇಲು ಸ್ವಲ್ಪ ಕಾಲಾವಧಿಯ ವರೆಗೆ ನಿರ್ಗತಿ ಮತ್ತು ಬಂಧನವನ್ನು ಅನುಭವಿಸಿತು. ಆದರೆ ಅದು ಪುನಸ್ಸ್ಥಾಪಿಸಲ್ಪಟ್ಟು ಆತ್ಮಿಕ ಪರದೈಸಿನ ಸ್ಥಿತಿಗತಿಗೆ ಬಂದು ತಲಪಿತು. (ಯೆಶಾಯ 35:​1-10) ಯೆಶಾಯನು ವರ್ಣಿಸಿದಂತೆ, ಒಂದು ಕಾಲದಲ್ಲಿ ಹಾಳುಬಿದ್ದಿದ್ದ ನಗರವು ಈಗ ಯೆಹೋವನ ಹರ್ಷಭರಿತ ಕ್ರಿಯಾಶೀಲ ಆರಾಧಕರಿಂದ ತುಂಬಿಕೊಂಡು ಸಂತೋಷಪಟ್ಟಿತು.

‘ಜನಾಂಗಗಳಿಗೆ ಧ್ವಜ’

26. ಯೆಹೋವನು ತನ್ನ ವಿಮೋಚಿತ ಜನರಿಗೆ ಯಾವ ನಿರ್ದೇಶನವನ್ನು ಒದಗಿಸುತ್ತಾನೆ?

26 ಯೆಹೋವನು ಈಗ ಒಂದು ಪ್ರವಾದನ ವಿಧದಲ್ಲಿ, ಯೆಶಾಯನನ್ನು ತನ್ನ ಜನರು ಬಾಬೆಲಿನಿಂದ ಬಿಡುಗಡೆಹೊಂದುವ ಸಮಯಕ್ಕೆ ಕೊಂಡೊಯ್ಯುತ್ತಾನೆ. ಅವರಿಗೆ ಏನಾದರೂ ದೈವಿಕ ಮಾರ್ಗದರ್ಶನ ದೊರಕೀತೆ? ಯೆಹೋವನು ಉತ್ತರ ಕೊಡುವುದು: “ಇಗೋ, ನಾನು ಜನಾಂಗಗಳಿಗೆ ಕೈಸನ್ನೆಮಾಡಿ ದೇಶಾಂತರಗಳವರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಎದೆಗಪ್ಪಿಕೊಂಡು ಬರುವರು, ನಿನ್ನ ಕುಮಾರ್ತೆಯರನ್ನು ಹೆಗಲ ಮೇಲೆ ಕರತರುವರು.” (ಯೆಶಾಯ 49:22) ಪ್ರಥಮ ನೆರವೇರಿಕೆಯಲ್ಲಿ, ಹಿಂದಿನ ಸರಕಾರ ಮತ್ತು ಯೆಹೋವನ ಆಲಯವಿದ್ದ ಯೆರೂಸಲೇಮು, ಯೆಹೋವನ “ಧ್ವಜ”ವಾಗುತ್ತದೆ. “ರಾಜರು” ಮತ್ತು “ರಾಣಿ”ಗಳಂಥ ಇತರ ಜನಾಂಗಗಳ ಪ್ರಮುಖರೂ ಬಲಾಢ್ಯರೂ ಆದ ಜನರು, ಇಸ್ರಾಯೇಲ್ಯರು ಸ್ವದೇಶಕ್ಕೆ ಹಿಂದಿರುಗುವಾಗ ಅವರಿಗೆ ಸಹಾಯಮಾಡುತ್ತಾರೆ. (ಯೆಶಾಯ 49:23ಎ) ಪಾರಸಿಯ ಅರಸರಾದ ಕೋರೆಷ ಮತ್ತು ಅರ್ತಷಸ್ತ ಲಾಂಜೀಮನಸ್‌ ಮತ್ತು ಅವರ ಕುಟುಂಬಗಳು ಇವರಿಗೆ ಸಹಾಯಕರಾಗಿ ಪರಿಣಮಿಸಿದರು. (ಎಜ್ರ 5:13; 7:​11-26) ಮತ್ತು ಯೆಶಾಯನ ಮಾತುಗಳಿಗೆ ಇನ್ನೊಂದು ಅನ್ವಯವೂ ಇದೆ.

27. (ಎ) ದೊಡ್ಡ ನೆರವೇರಿಕೆಯಲ್ಲಿ ಜನರು ಯಾವ “ಧ್ವಜ”ಕ್ಕೆ ಹಿಂಡುಹಿಂಡಾಗಿ ಹೋಗುವರು? (ಬಿ) ಎಲ್ಲ ಜನಾಂಗಗಳು ಮೆಸ್ಸೀಯನ ಪ್ರಭುತ್ವಕ್ಕೆ ಅಡ್ಡಬೀಳುವಂತೆ ಒತ್ತಾಯಿಸಲ್ಪಡುವಾಗ ಪರಿಣಾಮವು ಏನಾಗುವುದು?

27ಯೆಶಾಯ 11:10ನೆಯ ವಚನವು ‘ಜನಾಂಗಗಳಿಗೆ ಧ್ವಜಪ್ರಾಯ’ನಾಗಿರುವವನ ಕುರಿತು ತಿಳಿಸುತ್ತದೆ. ಅಪೊಸ್ತಲ ಪೌಲನು ಈ ಮಾತುಗಳನ್ನು ಕ್ರಿಸ್ತ ಯೇಸುವಿಗೆ ಅನ್ವಯಿಸುತ್ತಾನೆ. (ರೋಮಾಪುರ 15:​8-12) ಆದಕಾರಣ ಮಹಾ ನೆರವೇರಿಕೆಯಲ್ಲಿ, ಯೇಸು ಮತ್ತು ಅವನ ಆತ್ಮಾಭಿಷಿಕ್ತ ಜೊತೆಪ್ರಭುಗಳು, ಜನರು ಕೂಡಿಕೊಳ್ಳುವ ಯೆಹೋವನ “ಧ್ವಜ” ಆಗಿರುವರು. (ಪ್ರಕಟನೆ 14:1) ತಕ್ಕ ಸಮಯದಲ್ಲಿ ಭೂಮಿಯ ಸಕಲ ಜನರು, ಇಂದಿನ ಆಳುವ ವರ್ಗದ ಸಮೇತ ಮೆಸ್ಸೀಯನ ಪ್ರಭುತ್ವಕ್ಕೆ ಅಡ್ಡಬೀಳಲೇಬೇಕು. (ಕೀರ್ತನೆ 2:​10, 11; ದಾನಿಯೇಲ 2:44) ಇದರ ಪರಿಣಾಮವೇನು? ಯೆಹೋವನು ಹೇಳುವುದು: “ನಾನೇ ಯೆಹೋವನು. ನನ್ನನ್ನು ನಿರೀಕ್ಷಿಸಿಕೊಂಡವರು ಆಶಾಭಂಗಪಡರು ಎಂದು ನಿನಗೆ ಗೊತ್ತಾಗುವದು.”​—ಯೆಶಾಯ 49:23ಬಿ.

“ಈಗ ನಮ್ಮ ವಿಮೋಚನೆಯು ಹತ್ತಿರವಾಯಿತು”

28. (ಎ) ತನ್ನ ಜನರಿಗೆ ಆಗುವ ಬಿಡುಗಡೆಯ ವಿಷಯದಲ್ಲಿ ಯೆಹೋವನು ಯಾವ ಮಾತುಗಳಿಂದ ಅವರಿಗೆ ಪುನಃ ಆಶ್ವಾಸನೆಯನ್ನು ಕೊಡುತ್ತಾನೆ? (ಬಿ) ತನ್ನ ಜನರ ಕುರಿತು ಯಾವ ವಚನಬದ್ಧತೆ ಯೆಹೋವನಿಗೆ ಇನ್ನೂ ಇದೆ?

28 ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ಕೆಲವರು, ‘ಇಸ್ರಾಯೇಲಿಗೆ ಬಿಡುಗಡೆಯಾಗುತ್ತದೆಂಬುದು ನಿಜವಾಗಿ ಸಾಧ್ಯವಿರುವ ವಿಷಯವೊ?’ ಎಂದು ಕುತೂಹಲಪಡಬಹುದು. ಯೆಹೋವನು ಈ ಪ್ರಶ್ನೆಯನ್ನು ಹೀಗೆ ಕೇಳುತ್ತ ಉತ್ತರಿಸುತ್ತಾನೆ: “ಶೂರನಿಂದ ಕೊಳ್ಳೆಯನ್ನು ಕಸುಕೊಳ್ಳಬಹುದೇ? ಭೀಕರನಿಗೆ ಸೆರೆಯಾದವರನ್ನು ಬಿಡಿಸಲಾದೀತೇ [ಎಂದುಕೊಳ್ಳುತ್ತೀಯಾ]?” (ಯೆಶಾಯ 49:24) ಇದಕ್ಕೆ ಉತ್ತರ ಹೌದು ಎಂದಾಗಿದೆ. ಯೆಹೋವನು ಅವರಿಗೆ ಭರವಸೆ ಕೊಡುವುದು: “ಶೂರನ ಸೆರೆಯವರೂ ಅಪಹರಿಸಲ್ಪಡುವರು, ಭೀಕರನ ಕೊಳ್ಳೆಯೂ ತೆಗೆಯಲ್ಪಡುವದು.” (ಯೆಶಾಯ 49:25ಎ) ಎಷ್ಟು ಸಾಂತ್ವನದಾಯಕ ಭರವಸೆ! ಅಲ್ಲದೆ, ತನ್ನ ಜನರ ಕಡೆಗೆ ಯೆಹೋವನು ತೋರಿಸುವ ಪ್ರಸನ್ನತೆಯು, ಅವರನ್ನು ತಾನು ರಕ್ಷಿಸುವೆನೆಂಬ ದೃಢವಾದ ಬದ್ಧತೆಯೊಂದಿಗೆ ಕೊಡಲ್ಪಡುತ್ತದೆ. ಆತನು ಖಡಾಖಂಡಿತವಾಗಿ ಹೀಗೆನ್ನುತ್ತಾನೆ: “ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ಉದ್ಧರಿಸುವೆನು.” (ಯೆಶಾಯ 49:25ಬಿ) ಆ ವಚನಬದ್ಧತೆ ಇನ್ನೂ ಜಾರಿಯಲ್ಲಿದೆ. ಜೆಕರ್ಯ 2:8ರಲ್ಲಿ ಬರೆದಿರುವಂತೆ, “ನಿಮ್ಮನ್ನು ತಾಕುವವನು ಯೆಹೋವನ ಕಣ್ಣು ಗುಡ್ಡನ್ನು ತಾಕುವವನಾಗಿದ್ದಾನೆ.” ನಾವೀಗ ಪ್ರಸನ್ನತೆಯ ಸಮಯಾವಧಿಯನ್ನು ಅನುಭವಿಸುತ್ತಿರುವುದು ನಿಜ. ಈ ಸಮಯದಲ್ಲಿ ಭೂಮ್ಯಾದ್ಯಂತ ಇರುವ ಜನರಿಗೆ ಆತ್ಮಿಕ ಚೀಯೋನಿಗೆ ಹಿಂಡುಹಿಂಡಾಗಿ ಬರುವ ಸದವಕಾಶವಿರುವುದೂ ನಿಜ. ಆದರೆ, ಈ ಪ್ರಸನ್ನತೆಯ ಕಾಲ ಕೊನೆಗೊಳ್ಳಲಿದೆ.

29. ಯೆಹೋವನಿಗೆ ವಿಧೇಯರಾಗಲು ನಿರಾಕರಿಸುವವರಿಗೆ ಮುಂದೆ ಯಾವ ಭಯಂಕರ ಪ್ರತೀಕ್ಷೆ ಕಾದಿದೆ?

29 ಯೆಹೋವನಿಗೆ ವಿಧೇಯರಾಗುವುದಿಲ್ಲವೆಂದು ಹಟ ಹಿಡಿಯುವವರಿಗೆ ಮತ್ತು ಆತನ ಆರಾಧಕರನ್ನು ಹಿಂಸಿಸುವವರಿಗೆ ಏನಾಗುವುದು? ಆತನು ಹೇಳುವುದು: “ನಿನ್ನ ಹಿಂಸಕರು ಸ್ವಮಾಂಸವನ್ನು ತಿನ್ನುವಂತೆ ಮಾಡುವೆನು; ದ್ರಾಕ್ಷಾರಸವನ್ನು ಕುಡಿಯುವ ಹಾಗೆ ಅವರು ಸ್ವಂತ ರಕ್ತವನ್ನು ಕುಡಿದು ಅಮಲೇರುವರು.” (ಯೆಶಾಯ 49:26ಎ) ಭಯಂಕರವಾದ ಒಂದು ಪ್ರತೀಕ್ಷೆ! ಇಂತಹ ಹಟಮಾರಿ ವಿರೋಧಿಗಳಿಗೆ ದೀರ್ಘಾವಧಿಯ ಭವಿಷ್ಯವಿಲ್ಲ. ಅವರು ನಾಶಗೊಳ್ಳುವರು. ಹೀಗೆ, ತನ್ನ ಜನರನ್ನು ರಕ್ಷಿಸುವ ಮತ್ತು ಶತ್ರುಗಳನ್ನು ನಾಶಮಾಡುವ ಈ ಎರಡೂ ಕಾರ್ಯಗಳಲ್ಲಿ ಯೆಹೋವನು ರಕ್ಷಕನಾಗಿ ಕಂಡುಬರುವನು. “ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನರಜನ್ಮದವರೆಲ್ಲರಿಗೂ ಗೊತ್ತಾಗುವದು.”​—ಯೆಶಾಯ 49:⁠26ಬಿ.

30. ಯೆಹೋವನು ತನ್ನ ಜನರ ಪರವಾಗಿ ಯಾವ ರಕ್ಷಣಾ ಕಾರ್ಯಗಳನ್ನು ಮಾಡಿದ್ದಾನೆ, ಮತ್ತು ಇನ್ನೂ ಏನನ್ನು ಮಾಡಲಿದ್ದಾನೆ?

30 ಆ ಮಾತುಗಳು ಪ್ರಥಮ ಬಾರಿ, ಬಾಬೆಲಿನ ಬಂಧನದಿಂದ ತನ್ನ ಜನರನ್ನು ಬಿಡುಗಡೆ ಮಾಡಲು ಯೆಹೋವನು ಕೋರೆಷನನ್ನು ಉಪಯೋಗಿಸಿದಾಗ ಅನ್ವಯಿಸಿದವು. ತನ್ನ ಜನರನ್ನು 1919ರಲ್ಲಿ ಆತ್ಮಿಕ ದಾಸತ್ವದಿಂದ ಬಿಡಿಸಲು ಯೆಹೋವನು ತನ್ನ ಸಿಂಹಾಸನಾರೂಢನಾದ ಪುತ್ರ ಯೇಸು ಕ್ರಿಸ್ತನನ್ನು ಉಪಯೋಗಿಸಿದಾಗ, ಆ ಮಾತುಗಳು ಅಷ್ಟೇ ಬಲವಾಗಿ ಅನ್ವಯಿಸಿದವು. ಆದಕಾರಣ, ಬೈಬಲು ಯೆಹೋವನನ್ನೂ ಯೇಸುವನ್ನೂ ರಕ್ಷಕರೆಂದು ಕರೆಯುತ್ತದೆ. (ತೀತ 2:​11-13; 3:​4-6) ಯೆಹೋವನು ನಮ್ಮ ರಕ್ಷಕನು ಮತ್ತು ಮೆಸ್ಸೀಯನಾದ ಯೇಸು ಆತನ “ಮುಖ್ಯ ಕಾರ್ಯಭಾರಿ.” (ಅ. ಕೃತ್ಯಗಳು 5:​31, NW) ಯೇಸು ಕ್ರಿಸ್ತನ ಮೂಲಕ ದೇವರು ಮಾಡಿರುವ ರಕ್ಷಣಾ ಕಾರ್ಯಗಳು ಆಶ್ಚರ್ಯಕರವಾದವುಗಳು ಎಂಬುದಂತೂ ನಿಶ್ಚಯ. ಸುವಾರ್ತೆಯ ಮೂಲಕ ಯೆಹೋವನು ಯೋಗ್ಯ ಹೃದಯದ ವ್ಯಕ್ತಿಗಳನ್ನು ಸುಳ್ಳು ಧರ್ಮದ ಬಂಧನದಿಂದ ಬಿಡಿಸುತ್ತಾನೆ. ಪ್ರಾಯಶ್ಚಿತ್ತ ಯಜ್ಞದ ಮುಖೇನ ಆತನು ಪಾಪ ಮತ್ತು ಮರಣದ ಬಂಧನದಿಂದ ಅವರನ್ನು ಬಿಡಿಸುತ್ತಾನೆ. 1919ರಲ್ಲಿ ಆತನು ಯೇಸುವಿನ ಸಹೋದರರನ್ನು ಆತ್ಮಿಕ ಬಂಧನದಿಂದ ಬಿಡುಗಡೆ ಮಾಡಿದನು. ಮತ್ತು ಧಾವಿಸಿ ಬರುತ್ತಿರುವ ಅರ್ಮಗೆದ್ದೋನ್‌ ಯುದ್ಧದಲ್ಲಿ, ಆತನು ಪಾಪಿಗಳ ಮೇಲೆ ಬರಲಿರುವ ನಾಶನದಿಂದ ನಂಬಿಗಸ್ತರ ಮಹಾ ಸಮೂಹವೊಂದನ್ನು ಬಿಡುಗಡೆಮಾಡುವನು.

31. ದೇವರ ಪ್ರಸನ್ನತೆಯನ್ನು ಪಡೆದವರಾದ ಕ್ರೈಸ್ತರು ಹೇಗೆ ಪ್ರತಿವರ್ತಿಸಬೇಕು?

31 ಹಾಗಾದರೆ ದೇವರ ಪ್ರಸನ್ನತೆಯನ್ನು ಪಡೆಯುವ ಜನರಾಗಿರುವುದು ಎಂತಹ ಒಂದು ಸುಯೋಗ! ನಾವೆಲ್ಲರೂ ಈ ಸ್ವೀಕಾರಯೋಗ್ಯ ಕಾಲವನ್ನು ವಿವೇಕದಿಂದ ಉಪಯೋಗಿಸೋಣ. ಮತ್ತು ನಾವು ಸಮಯದ ತುರ್ತಿಗೆ ಅನುಗುಣವಾಗಿ, ಪೌಲನು ರೋಮಾಪುರದವರಿಗೆ ಬರೆದ ಈ ಮಾತುಗಳಿಗೆ ಕಿವಿಗೊಡುತ್ತಾ ಕಾರ್ಯ ನಡೆಸೋಣ: “ಈಗಿನ ಕಾಲವು ನಿದ್ದೆಯಿಂದ ಎಚ್ಚರವಾಗತಕ್ಕ ಕಾಲವೆಂದು ಅರಿತು ಇದನ್ನೆಲ್ಲಾ ಮಾಡಿರಿ. ನಾವು ಕ್ರಿಸ್ತನನ್ನು ಮೊದಲು ನಂಬಿದ ಕಾಲದಲ್ಲಿ ಇದ್ದದ್ದಕ್ಕಿಂತ ಈಗ ನಮ್ಮ ವಿಮೋಚನೆಯು ಹತ್ತಿರವಾಯಿತು. ಇರುಳು ಬಹಳ ಮಟ್ಟಿಗೆ ಕಳೆಯಿತು; ಹಗಲು ಸಮೀಪವಾಯಿತು. ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು ಬೆಳಕಿಗೆ ಅನುಗುಣವಾದ ಆಯುಧಗಳನ್ನು ಧರಿಸಿಕೊಳ್ಳೋಣ. ದುಂದೌತಣ ಕುಡಿಕತನಗಳಲ್ಲಿಯಾಗಲಿ ಕಾಮವಿಲಾಸ ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳ ಹೊಟ್ಟೇಕಿಚ್ಚುಗಳಲ್ಲಿಯಾಗಲಿ ಕಾಲಕಳೆಯದೆ ಹಗಲು ಹೊತ್ತಿಗೆ ತಕ್ಕಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ. ದೇಹದ ಆಶೆಗಳನ್ನು ಪೂರೈಸುವದಕ್ಕಾಗಿ ಚಿಂತಿಸದೆ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.”​—⁠ರೋಮಾಪುರ 13:​11-14.

32. ಯೆಹೋವನ ಜನರಿಗೆ ಯಾವ ಆಶ್ವಾಸನೆಗಳಿವೆ?

32 ಯೆಹೋವನು ತನ್ನ ಸಲಹೆಗೆ ಕಿವಿಗೊಡುವವರ ಮೇಲೆ ಅನುಗ್ರಹವನ್ನು ತೋರಿಸುತ್ತ ಮುಂದುವರಿಯುವನು. ಸುವಾರ್ತೆಯನ್ನು ಸಾರುವುದನ್ನು ಮುಂದುವರಿಸಲು ಅವರಿಗೆ ಬೇಕಾಗುವ ಶಕ್ತಿಸಾಮರ್ಥ್ಯಗಳನ್ನು ಆತನು ಅವರಿಗೆ ಒದಗಿಸುವನು. (2 ಕೊರಿಂಥ 4:⁠7) ಯೆಹೋವನು ತನ್ನ ಸೇವಕರನ್ನು, ಆತನು ಅವರ ನಾಯಕನಾದ ಯೇಸುವನ್ನು ಹೇಗೆ ಉಪಯೋಗಿಸಿದನೋ ಹಾಗೆಯೇ ಉಪಯೋಗಿಸುವನು. ಅವರು ದೀನರ ಹೃದಯಗಳನ್ನು ಸುವಾರ್ತೆಯ ಸಂದೇಶದಿಂದ ತಲಪುವಂತೆ ಆತನು ಅವರ ಬಾಯಿಗಳನ್ನು “ಹದವಾದ ಖಡ್ಗವನ್ನಾಗಿ” ಮಾಡುವನು. (ಮತ್ತಾಯ 28:​19, 20) ಆತನು ತನ್ನ ಜನರನ್ನು “ಕೈಯ ನೆರಳಿನಲ್ಲಿ” ಸಂರಕ್ಷಿಸುವನು. “ಮೆರುಗುಪಡೆದ ಬಾಣ”ದಂತೆ ಅವರು ಆತನ “ಬತ್ತಳಿಕೆ”ಯಲ್ಲಿ ಅಡಗಿಸಲ್ಪಡುವರು. ಯೆಹೋವನು ತನ್ನ ಜನರನ್ನು ತೊರೆಯುವುದಿಲ್ಲ ಎಂಬುದಂತೂ ನಿಶ್ಚಯ!​—⁠ಕೀರ್ತನೆ 94:14; ಯೆಶಾಯ 49:​2, 15.

[ಪಾದಟಿಪ್ಪಣಿ]

^ ಪ್ಯಾರ. 6 “ಯೇಸುವನ್ನು ದೇವರ ಮಗನೆಂದೂ ತನ್ನ ತಲೆಯನ್ನು ಜಜ್ಜಲಿರುವ (ಆದಿ 3:15) ಪ್ರವಾದಿತ ವ್ಯಕ್ತಿಯೆಂದೂ ಗುರುತಿಸಿದ ಸೈತಾನನು, ಅವನನ್ನು ಹತಿಸಲು ತನಗೆ ಸಾಧ್ಯವಿರುವುದನ್ನೆಲ್ಲ ಮಾಡಿದನು. ಆದರೆ ಮರಿಯಳಲ್ಲಿ ಯೇಸುವಿನ ಗರ್ಭಧಾರಣೆಯನ್ನು ಪ್ರಕಟಿಸುತ್ತ ಗಬ್ರಿಯೇಲ ದೇವದೂತನು ಅವಳಿಗೆ ಹೇಳಿದ್ದು: ‘ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು.’ (ಲೂಕ 1:35) ಯೆಹೋವನು ತನ್ನ ಪುತ್ರನನ್ನು ಕಾಪಾಡಿದನು. ಶಿಶುವಾಗಿದ್ದಾಗ ಯೇಸುವನ್ನು ಹತಿಸುವುದಕ್ಕಾಗಿ ಮಾಡಿದ ಪ್ರಯತ್ನಗಳು ವಿಫಲವಾದವು.”​—⁠ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತವಾದ, ಶಾಸ್ತ್ರಗಳ ಕುರಿತ ಒಳನೋಟ (ಇಂಗ್ಲಿಷ್‌), ಸಂಪುಟ 2, ಪುಟ 868.

[ಅಧ್ಯಯನ ಪ್ರಶ್ನೆಗಳು]

[ಪುಟ 139ರಲ್ಲಿರುವ ಚಿತ್ರ]

ಮೆಸ್ಸೀಯನು ಯೆಹೋವನ ಬತ್ತಳಿಕೆಯಲ್ಲಿ “ಮೆರುಗುಪಡೆದ ಬಾಣ”ದಂತಿದ್ದಾನೆ

[ಪುಟ 141ರಲ್ಲಿರುವ ಚಿತ್ರ]

ಮೆಸ್ಸೀಯನು ‘ಅನ್ಯಜನಾಂಗಗಳಿಗೆ ಬೆಳಕು’ ಆಗಿದ್ದಾನೆ

[ಪುಟ 147ರಲ್ಲಿರುವ ಚಿತ್ರ]

ದೇವರು ತನ್ನ ಜನರ ಮೇಲಿಡುವ ಪ್ರೀತಿಯು, ಒಬ್ಬ ತಾಯಿ ತನ್ನ ಮಗುವಿನ ಮೇಲಿಡುವ ಪ್ರೀತಿಗಿಂತ ಅಧಿಕವಾಗಿದೆ